ಯಾರು ಗುರು ?
'ಯಾಕೊ ಕಿಟ್ಟಿ ಕಾಲೇಜಿಗೆ ಹೋಗಿಲ್ಲ..?'
' ಇಲ್ಲಣ್ಣ ಇಲ್ಲೆ ಮನೇಲೆ ಓದ್ಕೋತಿನಿ..'
'ಯಾಕೋ..?'
'ಅದು ತುಂಬಾ ಬೋರಗುತ್ತಣ್ಣ... ಅಲ್ಲಿ ಹೇಳಿಕೊಡೊದೆಲ್ಲ ಕಂಪ್ಯೂಟರಿನಲ್ಲಿರೋದನ್ನೆ.. ಮನೆಲಿ ನಾವೆ ಓದ್ಕೋಬೋದು..'
' ಅಟೆಂಡೆನ್ಸ್ ಹಾಳಾಗಲ್ವೇನೊ? ಪರೀಕ್ಷೆ ಬೇರೆ ಹತ್ತಿರ ಬರ್ತಾ ಇದೆ?'
'ಇಲ್ಲಣ್ಣ.. ಸಾರ್ ಹೇಳಿಬಿಟ್ಟಿದ್ದಾರೆ, ಎಲ್ಲರಿಗು ಮಿನಿಮುಮ್ ಅಟೆಂಡೆನ್ಸ್ ಕೊಡ್ತೀವಿ.. ಕ್ಲಾಸಲ್ಲಿ ಇಂಟ್ರೆಸ್ಟ್ ಇರದಿದ್ರೆ ಬಂದು ಡಿಸ್ಟರ್ಬ್ ಮಾಡಬೇಡಿ ಅಂತ..'
' ಸರಿ.. ಚಾಟು ಗೇಮು ಗೀಮುಂತ ಟೈಮ್ ವೇಸ್ಟ್ ಮಾಡದೆ ಓದಿಕೊ..'
'ಆಯ್ತಣ್ಣ..'
' ಹಂಗೆ ಆಮೇಲೆ ನಂಗೆ ಪವರ್ ಪಾಯಿಂಟ್ ಸ್ಲೈಡ್ ಮಾಡೋದು ಹೇಳಿಕೊಡು.. ಆಫೀಸಿನ ಕೆಲಸ ಇದೆ..'
' ಸರಿಯಣ್ಣ..' (ಕಿಸಕ್ಕೆಂದಿದ್ದು ಕಿಟ್ಟಿ ನಕ್ಕಿದ್ದೊ ಗಾಳಿ ಸದ್ದೊ ಗೊತ್ತಾಗಲಿಲ್ಲ)
**********
ಈಗಿನ ಕಾಲಧರ್ಮದಲ್ಲಿ ಯಾರು ಗುರು, ಯಾರು ಶಿಷ್ಯ ಎನ್ನುವ ವ್ಯತ್ಯಾಸವೆ ಅಳಿಸಿಹೋಗುತ್ತಿರುವಂತಿದೆ. ಬೇಕಾದ್ದು, ಬೇಡದ್ದು ಎಲ್ಲವು ಕಂಪ್ಯೂಟರಿನ ಪರದೆಯ ಹಿಂದೆಯೊ, ಮೊಬೈಲಿನ ಮೂಲಕ ಬೆರಳ ತುದಿಯಲ್ಲೊ ಸುಲಭವಾಗಿ ಸಿಗುವಾಗ ಕಲಿಯಬೇಕಾದ್ದೇನು, ಉರು ಹೊಡೆಯಬೇಕಾದ್ದೇನು ಎನ್ನುವ ಅಸಡ್ಡೆಯ, ಉಢಾಫೆಯ ಭಾವನೆ ಹೊಂದಿರುವವರು ಕಡಿಮೆಯಿಲ್ಲ. ಗುರುಗಳಾದರೂ ಅದನ್ನೆ ಮಾಡಿಯಾರು ಎಂದೆತ್ತಿ ಆಡುವ ಬುದ್ದಿವಂತರು ಉಂಟು.
ಆದರೆ ಗುರು ಕಲಿಸುವುದು ಅದನ್ನೆ ? ಅದಕ್ಕಾಗಿಯೆ ನಾವು ಶಾಲೆಗೆ ಹೋಗಿ ಕೂತು ಓದು ಬರಹ ಕಲಿತಿದ್ದು ? ಇಂತಹ ಬೇಕಾದ್ದೆಲ್ಲ ದಕ್ಕುವ ಜಗದಲ್ಲಿ ನಿಜವಾಗಿ ಯಾರು ಗುರು ? ಯಾರು ಶಿಷ್ಯ ? ಎಂಬೆಲ್ಲ ಜಿಜ್ಞಾಸೆಗಳು ಕಾಡುವುದು ಉಂಟು. ಇದೆಲ್ಲ ತರದ ಇನ್ನು ಅನೇಕ ಅನುಮಾನ ಸಂಶಯಗಳಿದ್ದರೆ ಅದಕ್ಕೆ ಮುಖ್ಯ ಕಾರಣ - ಪುಸ್ತಕದ ಬದನೆಕಾಯಿ ಕಲಿತರೆ ಅದೆ ವಿದ್ಯೆ ಎನ್ನುವ ಅಸಮರ್ಪಕ ತಿಳುವಳಿಕೆ.
ನಿಜವಾಗಿ ಕಲಿಸುವವನು ಬದುಕಲು ಕಲಿಸುತ್ತಾನೆ.. ಕಲಿಯುವುದು ಹೇಗೆಂದು ಕಲಿಸುತ್ತಾನೆ.. ಏನು ಕಲಿಯಬೇಕೆಂದಿರುವ ಗೊಂದಲವನ್ನು ಹೇಗೆ ಪರಿಹರಿಸಬಹುದೆಂದು ಕಲಿಸುತ್ತಾನೆ.. ಕಲಿತಿದ್ದು ಹೇಗೆ ಬದುಕಿಗೆ ಅಳವಡಿಸಿಕೊಳ್ಳಬೇಕೆಂದು ಕಲಿಸುತ್ತಾನೆ. ಅಪಕ್ವತೆಯಿಂದ ಪಕ್ವತೆಯತ್ತ ನಡೆಯುವುದನ್ನು, ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಮುನ್ನಡೆಯುವುದನ್ನು, ಸಹನೆಯಿಂದ, ತಾಳ್ಮೆಯಿಂದ ಸಮಾಜ ಜೀವಿಯಾಗಿ ಬಾಳುವುದನ್ನು ಕಲಿಸುತ್ತಾನೆ. ಆದರೆ ಇವಕ್ಕೆಲ್ಲ ಯಾರು ಅಂಕ ಕೊಡುವುದಿಲ್ಲ, ಶ್ರೇಣಿ ನೀಡುವುದಿಲ್ಲ. ಇಂತದ್ದನ್ನೆಲ್ಲ ಕಂಪ್ಯೂಟರು ನೋಡಿ ಕಲಿಯಲಾಗದು.
ಎಲ್ಲರೂ ಇಂತದ್ದನೆ ಕಲಿಸುವ ಗುರುಗಳೆ ಎಂದು ಹೇಳಲಾಗದಿದ್ದರು, ಅಂತಹ ಮಹನೀಯ ಪ್ರಾತಃಸ್ಮರಣೀಯರು ಆದರ್ಶವಾದಿಗಳು, ಶಿಕ್ಷಕ ವೃತ್ತಿಯಲ್ಲೆ ಹೆಚ್ಚು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರೆಲ್ಲರನ್ನು ಗೌರವಿಸುವ ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರಿಗೊಂದು ನಮನ ಸಲ್ಲಿಸುತ್ತ, ಈ ಪುಟ್ಟದೊಂದು 'ಗುರು-ಕವನ ಕಾಣಿಕೆ' ಸಲ್ಲಿಸುತ್ತಿದ್ದೇನೆ.
ಈ ಜಗದಲಿ ನವಯುಗದಲಿ
ಯಾರು ಗುರು? ಯಾರು ಗುರು ?
ನಿನಗೇನಾದರು ಗೊತ್ತಾ ಗುರು ?
ಮತ್ತಾರು ಬಿಡು, ಕಂಪ್ಯೂಟರು! ||
ಗುರುಗಳಾಗ ಹೊರಟವರು
ಹೊಕ್ಕದನೆ ತಯಾರಾಗುವರು
ಅದರೊಳಗೆ ಹುಡುಕಾಡುವರು
ಪ್ರಶ್ನೋತ್ತರಕೆಲ್ಲಕು ಅದೆ ತವರು ||
ಗುರುವನೊಲ್ಲೆಯೆಂದ ಜನರು
ಗುಹೆಯದನೆ ಜಾಲಾಡಿ ಬಹರು
ನಮಗೆ ನಾವೆ ಕಲಿಸುವವರು
ಅಲ್ಲಿಂದಲೆ ಬಂತೇನೊ ಪೊಗರು ||
ಬೇಕು ಬೇಡ ಎಲ್ಲದರ ಮೊತ್ತ
ಕಲಿವ ಪರಿ ವಿವೇಚನಾರಹಿತ
ಕಲಿವಲ್ಲ ಕಷ್ಟ ಇತ್ತಲ್ಲವೆ ಸದಾ
ಮಾರ್ಗದರ್ಶಿ ಮಾತ್ರ ತೆರೆವ ಕದ ||
ಗುರುವಿರಬೇಕು ಕಲಿಸಲಲ್ಲ
ಕಲಿವುದೇನು ತಿಳಿಸಲು ಬಲ
ಎಡಬಲ ಗುಣ ಚಾರಿತ್ರ್ಯ ನಡೆ
ನುಡಿಗಡಿಪಾಯ ಸರಿತಪ್ಪ ಜಾಡೆ ||
ಕಲಿಸಲಿಂತು ಕಂಪ್ಯೂಟರು ಜ್ಞಾನ
ಸರಿ ಬಳಸಲೆಂತು ಗುರು ಧ್ಯಾನ
ಬೆರೆತಾಗ ಹದ ಸರಿ ಸೂಕ್ತ ಪದ
ತಟ್ಟಿಸುವುದು ಹೆಬ್ಬಾಗಿಲ ಸೀದಾ ||
ಕೇಳದಿರು ಯಾರು ಗುರು ?
ಕಲಿಸರು ಕಲಿಯಲರಿಸುವರು
ಒಳಿತು ಕೆಡಕು ವಿವೇಚನಾ ಶಕ್ತಿ
ಈಜಿ ಬದುಕ ನಿಭಾಯಿಸೊ ಯುಕ್ತಿ ||
Comments
ಉ: ಯಾರು ಗುರು ?
ಗುರುತರವಾದ ವಿಚಾರ - ಧನ್ಯವಾದಗಳು, ನಾಗೇಶರೇ.
ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗ ತೋರುವನೆ ಗುರುವು |
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವೆ ದೇವರೂಪಿಯೋ ಮೂಢ ||
In reply to ಉ: ಯಾರು ಗುರು ? by kavinagaraj
ಉ: ಯಾರು ಗುರು ?
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಾನು ಯಾರಿಗೆ ಯಾರು ಗುರು ಎಂದು ಪುಟಗಟ್ಟಲೆ ಕೇಳಿದರೆ, ನೀವು ಯಾರು ಗುರುವೆನ್ನುವುದನ್ನು ನಾಲ್ಕೇ ಸಾಲುಗಳ ಪದ್ಯ ಹೇಳಿಬಿಟ್ಟಿರಿ :-)