ಇಂದಿನ ಸಮಾರಂಭಗಳು

ಇಂದಿನ ಸಮಾರಂಭಗಳು

    ಸಾಹಿತ್ಯಕ್ಕೆ ಸಂಬಂಧಪಟ್ಟದ್ದಾಗಲೀ ಯಾ ಇನ್ನಾವುದೇ ಸಮಾರಂಭಗಳು, ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗಗಳು.  ನಮ್ಮ ಸಂಸ್ಕೃತಿ, ಕಲೆಗಳನ್ನು ಉಳಿಸಿಕೊಳ್ಳುವ ಹಾಗೂ ಬೆಳೆಸಿಕೊಳ್ಳುವ ಸಾಮಾಜಿಕ ಚರ್ಯೆ.  ಆದರೆ, ಇತ್ತೀಚಿನ ಸಮಾರಂಭಗಳಲ್ಲಿ ಯಾಂತ್ರಿಕತೆಯೇ ಮೇಲುಗೈ ಹೊಂದಿ, ನಮ್ಮ ಭಾರತೀಯ ಸಂಸ್ಕೃತಿಗೆ  ಮಾರಕವಾಗುತ್ತಿದೆಯೇನೋ ಎಂಬ ಅನುಮಾನ ಮೂಡಿದೆ, ನನಗೆ. ಇದಕ್ಕೆ, ನನಗನ್ನಿಸುವ  ಮಟ್ಟಿಗೆ, ಮೂಲ ಕಾರಣ, ದೂರದರ್ಶನ.  ಈ ಟಿ.ವಿ.ಯಲ್ಲಿ ಬಿತ್ತರಗೊಳ್ಳುವ ರಿಯಾಲಿಟಿ ಶೋ, ಅಸೀಮ ಅನಂತ ಧಾರಾ ಧಾರಾವಾಹಿಗಳ ಹೊಡೆತಕ್ಕೆ ನಮ್ಮ ಅಭಿರುಚಿಗಳೇ ದಿಕ್ಕು ಪಾಲಾಗಿ ಹೋಗಿವೆ.  ಈ ಕಾರಣಗಳಿಗಾಗಿಯೇ, ಸಭಿಕ, ಸಭಾಧ್ಯಕ್ಷ, ಅತಿಥಿ ಹಾಗೂ  ಕಾರ್ಯಕ್ರಮದ ಮುಖ್ಯ ಹೂರಣಗಳ ನಡುವೆ ಸಂಪರ್ಕವೇ ಇಲ್ಲದೆ ಯಾಂತ್ರಿಕವಾಗಿ ಸಮಾರಂಭಗಳು ನಡೆಸಲ್ಪಡುತ್ತವೆ.  ಇಂಥ ಯಾಂತ್ರಿಕ  ಸಮಾರಂಭಗಳ ಅಸಂಬದ್ಧತೆಗಳ ಬಗ್ಗೆ ನನ್ನ ಒಂದೆರಡು ಮಾತು.
    ನೀವು ಯಾವುದೇ ಸಮಾರಂಭಕ್ಕೆ ಅತಿಥಿಯಾಗಿ ಹೋಗುವ ಮುನ್ನ ಆ ಸಭೆ ರಾಜಕೀಯದ್ದೋ ರಾಜಕೀಯೇತರವೋ ಎನ್ನುವುದನ್ನು ನೋಡಿ ಹೋಗಿ. ರಾಜಕೀಯದ್ದಾದಲ್ಲಿ ಅದರಲ್ಲಿ `ಸಮಯ' ಕ್ಕೆ ಕನಿಷ್ಠ ಪ್ರಾಧಾನ್ಯ. ಬೆಳಿಗ್ಗೆ 10ಕ್ಕೆ ನಿಗದಿಯಾದ ಕಾರ್ಯಕ್ರಮ  ಮಧ್ಯಾಹ್ನ 2ಕ್ಕೆ ಪ್ರಾರಂಭವಾದ್ರೆ ನಿಮ್ಮ ಪುಣ್ಯ. "ಮಾನ್ಯ ------------ ರು,  ಇನ್ನೇನು ಐದು ನಿಮಿಷಗಳಲ್ಲಿ ಬರಲಿದ್ದಾರೆ.  ದಯಮಾಡಿ ಸಹಕರಿಸಿ" ಎಂಬ ಸಂಘಟಕರ ಕೂಗು ಪ್ರತಿ ಐದು ನಿಮಿಷಕ್ಕೊಮ್ಮೆ ಮೊಳಗುತ್ತಿರುತ್ತದೆ.  ಹೀಗೆ 3 – 4 ತಾಸಾದ ನಂತರ, ಆ ರಾಜಕಾರಣಿ ಬಂದಾನು. ಇಲ್ಲದಿದ್ದರೆ, ತನ್ನ `ಮೇಘ (!) ಸಂದೇಶ'ವನ್ನು ಕೊಟ್ಟಿರುತ್ತಾನೆ‍_ ಜನರ  `ಜ್ಞಾನವರ್ಧನೆ' ಗೆಂದು.  ಅವನ ಅನುಪಸ್ಥಿತಿಯಲ್ಲಿ ಯಾವನೋ ಮರಿಪುಡಾರಿ 1-2 ಘಂಟೆಗಳ ಆ `ಚಿಕ್ಕ ಸಂದೇಶ'ವನ್ನು  ಸಭೆಗೆ ತಿಳಿಸುತ್ತಾನೆ.  ಇನ್ನೂ ಕೆಲವೊಮ್ಮೆ ರಾಜಕಾರಣಿಯ ಅಣತಿಯ ಮೇರೆಗೆ, ಸಮಾರಂಭ ಪ್ರಾರಂಭವಾಗಿರುತ್ತದೆ.  ಪ್ರಾರ್ಥನೆಯೋ ಅತಿಥಿ ಭಾಷಣವೋ ಸಾಗುತ್ತಿರುತ್ತದೆ.  ಆಗ ಅವನ ಆಗಮನವಾಗುತ್ತದೆ. ತಕ್ಷಣ ಸಂಘಟನಾ ಕಾರ್ಯದರ್ಶಿ, ಪ್ರಾರ್ಥನೆ  ಮಾಡುತ್ತಿದ್ದವರಿಂದ ಯಾ ಅತಿಥಿಯಿಂದ, ಮೈಕ್ ಕಸಿದುಕೊಂಡು, ರಾಜಕಾರಣಿಯ ಉಧೋಕಾರ ಶುರು ಹಚ್ಚುತ್ತಾನೆ! ಅವಮಾನ ಎಂದೆಣಿಸಿದಿರೋ, ಕೆಟ್ಟಿರಿ. ಅವರ `ಅಭಿಮಾನ ಬಳಗ'ದ  ಧರ್ಮದೇಟಿಗೆ ತುತ್ತಾಗಬೇಕಾದೀತು, ಏನೂ ಅನ್ನಿಸಲಿಲ್ಲವೇ, ನೀವೂ ರಾಜಕಾರಣಿಯಾಗಲು ತಯಾರಿದ್ದೀರೆಂದೇ ಅರ್ಥ.

    ಇನ್ನು ರಾಜಕೀಯೇತರ ಸಮಾರಂಭಗಳಲ್ಲಿ ಅತಿಥಿಯಾಗುವುದು ಸುಲಭ ಎಂದೆಣಿಸಿದರೋ, ತಪ್ಪು ಸ್ವಾಮಿ ತಪ್ಪು. ಇಲ್ಲಿಯೂ ನೀವು ನೋಡಬೇಕಾಗಿರುವುದು, ಸಭಾ ಕಾರ್ಯಕ್ರಮದ ನಂತರದ ಸಾಂಸ್ಕೃತಿಕ  ಕಾರ್ಯಕ್ರಮವೇನು ಎಂಬುದನ್ನು. ಅತಿಥಿ ಭಾಷಣದ ನಂತರ, ಯಾವುದೋ ಪ್ರಸಿದ್ಧ ಗಾಯಕ ಯಾ, ನಟ ಯಾ, ರಾಕ್‍ಸ್ಟಾರ್‍ನ ಕಾರ್ಯಕ್ರಮವಿದ್ದಲ್ಲಿ, ನಿಮ್ಮ ಭಾಷಣಕ್ಕೆ 1- 2 ನಿಮಿಷಗಳು ದಕ್ಕುವುದೂ ಕಷ್ಟ. ಭಾಷಣಕ್ಕೆ ತಯಾರಾಗುತ್ತಿದ್ದಂತೆ, ಹಿಂದಿನ ಸಾಲಿನಿಂದ ಬರತೊಡಗುತ್ತವೆ_ ಮಾತಿನ ಕೂರಂಬುಗಳು_ `ಸಾಕು ನಿಲ್ಲಸಲೇ ಮಗನ, ನಮಗೆ ಬೇಕಿರೋದು ಸ್ಟಾರ್‍ನ ಗಾನಾ, ನಿನ್ನ ಬಜಾನಾ ಅಲ್ಲ' . ಇದು  ಬೇಕೇ?
    ಭಾಷಣಕಾರ, ಸಭಿಕರಲ್ಲೂ ವರ್ಗೀಕರಣ ಉಂಟು. ಅಲ್ಲಿಯೂ  ನಾವು ಬಹಳ ಎಚ್ಚರ ವಹಿಸಬೇಕಾಗುತ್ತೆ. ಕೆಲವು ಭಾಷಣಕಾರರಿಗೆ  ಮೈಕ್ ಸಿಕ್ಕರೆ ಬಿಡೋದೇ ಇಲ್ಲ.  ರಾಜಕಾರಣಿಗಳಿಗೆ ಕುರ್ಚಿ ವ್ಯಾಮೋಹ ಇದ್ದಂತೆ ಇವರಿಗೆ ಮೈಕ್ ವ್ಯಾಮೋಹ. ಇಂಥವರೊಂದಿಗೆ `ಚೀಟಿ'  ವ್ಯವಹಾರ (ಭಾಷಣ ಕೊನೆಗೊಳಿಸಲು ಸಾಫ್ಟ್ ಆಗಿ ಹೇಳುವ ರೀತಿ) ಪ್ರಯೋಜನವಿಲ್ಲ, ಪಿಸಿಕಲ್ ಆಗಿ ಕಿತ್ಕೊಂಡಿರೋ, ದೈಹಿಕ ದೌರ್ಜನ್ಯವೆಂದು ಮರುದಿವಸ ಪತ್ರಿಕಾಗೋಷ್ಠಿ ಕರೆಯುತ್ತಾರೆ!
    ಶತಶತಮಾನಗಳಿಂದ ಸಿಕ್ಕ ಏಕೈಕ ಅವಕಾಶವೋ ಎಂಬಂತೆ ಮಾತನಾಡುವ‌ ಇವರ‌ ಭಾಷಣದ‌ ಒಂದೇ ಏಟಿಗೆ  ತತ್ತರಿಸಿದ ಸಭಿಕರು  ಜೀವಂತ ಉಳಿದಾರೆಯೇ ಅನ್ನುವುದೂ ಅವರಿಗೆ ಬೇಕಿರುವುದಿಲ್ಲ. ಬಹಳಷ್ಟು  ರಾಜಕಾರಣಿಗಳು ಈ ವರ್ಗದ ಪ್ರಮುಖ ಬಹು ಸಂಖ್ಯಾತರು, ಇವರಿಗೆ ಮಾತನಾಡಲು  ವಿಷಯವೇ ಬೇಡ. ಆದರೂ 1–2  ಘಂಟೆಗಳಷ್ಟು ಅದರ‌ ಬಗ್ಗೆ ಕೊರೆಯುತ್ತಾರೆ.  ಯಾವುದೇ ವಿಷಯವಿರಲಿ ಅದನ್ನು ಪ್ರಸ್ತುತ ರಾಜಕೀಯಕ್ಕೆ ತಂದು, ತಮ್ಮ ಕೆಟ್ಟ ಮುಖದ ಒಳ್ಳೆಯ ಪರಿಚಯ ಮಾಡಿಕೊಡುತ್ತಾರೆ !
    ಇನ್ನು ಕೆಲವು ಕೇಸುಗಳು ಉಲ್ಟಾ. ಇಲ್ಲಿ ಭಾಷಣಕಾರರ ಮೇಲೆ ಸಭಿಕರ ಸವಾರಿ. ಸಾಹಿತಿ, ವಿಜ್ಞಾನಿ, ಯಾ ಸಾಮಾಜಿಕ ಸಂಘಟನೆಯಾತ ತಮ್ಮ ದತ್ತ ವಿಷಯದ ಬಗ್ಗೆ ವಿಷಯ  ಜ್ಞಾನದ ವಾಙ್ಮಯವನ್ನು ತೋರುತ್ತಿದ್ದಾಗ, ಸಭಿಕರು  ಅದಕ್ಕೆ ಸರಿಯಾಗಿ ಸ್ಪಂದಿಸುವುದಿರಲಿ, ದಿವ್ಯ ನಿರ್ಲಕ್ಷದಿಂದ, ತಮ್ಮಲ್ಲೇ ಪ್ರಸ್ತುತ ರಾಜಕೀಯದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದರೆ, ಉತ್ತಮ ವಾಗ್ಮಿಗೆ ಇದಕ್ಕಿಂತ‌ ಬೇರೆ ಅಪಮಾನ ಬೇಕೇ? ಕೆಲ ಕಿಡಿಗೇಡಿ ಸಭಿಕರು ಅಂಥವರ ಭಾಷಣಕ್ಕೆ ನಿರಂತರ ತಡೆಯೊಡ್ಡುವುದೂ ಉಂಟು. ಅದಕ್ಕೇ ಹಿಂದೆ ಒಬ್ಬ ಕವಿ ಅಲವತ್ತು ಕೊಂಡಿದ್ದು `ಅರಸಿಕೇಷು ಕವಿತ್ವ ನಿವೇದನಂ, ಶಿರಸಿ ಮಾ ಲಿಖ, ಮಾ ಲಿಖ!' ಹಾಗಾಗಿ ನೀವು ಅತಿಥಿಗಳಾಗಲು ಒಪ್ಪಿಕೊಳ್ಳುವ ಮುಂಚೆ, ಏನೇನು ಎಚ್ಚರ ವಹಿಸಬೇಕೆಂದು ತಿಳಿಯಿತೇ?
    ಇನ್ನು ಸಮಾರಂಭಗಳ ನಡಾವಳಿ. ರಣಾಂಗಣವೇನೋ ಎನ್ನುವಂತೆ, ಇಲ್ಲಿ ಸಂಸ್ಕೃತಿ- ಸಾಹಿತ್ಯದ್ದ‌ಷ್ಟೇ ಅಲ್ಲ, ಭಾಷೆಯ ಕೊಲೆಯೂ ನಡೆಯುತ್ತದೆ.  ಎಂ.ಸಿ., ಅರ್ಥಾತ್, ನಿರೂಪಕ ಎಂಬುವವನ ಮೇಲೆ ಇಡೀ ಸಮಾರಂಭದ ಭಾರ!  ಅವನ ಭಾಷಾ ಸಂವಹನದ ಪರಿಮಿತಿ ಸಮಾರಂಭದ ಸುಸೂತ್ರತೆಯನ್ನು ಕಾಯ್ದುಕೊಳ್ಳುತ್ತದೆ.  ಸಾಕಷ್ಟು ಸರ್ತಿ, ಈ ನಿರೂಪಕರು, `ಅ' ಕಾರ `ಹ' ಕಾರ ಸಮೀಕರಣ, ಭಾಷಾ ಪ್ರಯೋಗ ಇತ್ಯಾದಿ ಎಲ್ಲ ಮಾದರಿಯ  ಅತ್ಯಾಚಾರ ಎಸಗಿ ಕನ್ನಡವನ್ನು ಕೊಲೆಗೈಯುತ್ತಾರೆ.  ತಮ್ಮ ಹೆಸರಿಗೆ ತಕ್ಕಂತೆ (Master of Ceremony) ಆಗುವುದುಂಟು, `Ceremony' ಪದವನ್ನು ನಾವು `ತಿಥಿ'  ಅನ್ನುವುದಕ್ಕೂ ಬಳಸುವುದುಂಟು! ಹಾಗಾಗಿ ಆತ `ತಿಥಿಕರ್ತ' -ಕನ್ನಡ ಭಾಷೆಯದ್ದು ಮತ್ತು ನಮ್ಮ ಸಂಸ್ಕೃತಿಯದ್ದು!  ಇಂಥವರಿಂದ ಹಾಸ್ಯದ ಹೆಸರಲ್ಲಿ ಅಪಹಾಸ್ಯವಾಗುವುದೇ ಜಾಸ್ತಿ.
    ಕೆಲ ಸಮಾರಂಭಗಳಲ್ಲಿ ಸಭಿಕರಿಗಿಂತ ಜಾಸ್ತಿ, `ಅತಿಥಿ'ಗಳೆಂದು ಕರೆಯಿಸಿಕೊಳ್ಳುವ ಭಾಷಣಕಾರರು ಇರುತ್ತಾರೆ. ಅದಕ್ಕೇ ಇರಬೇಕು, ಇತ್ತೀಚೆಗೆ, ಇವರುಗಳ `ಭಾರ' ತಾಳಲಾರದೇ, ವೇದಿಕೆ ಕುಸಿಯುವುದು ಸಾಮಾನ್ಯ ಆಗಿ ಬಿಟ್ಟಿದೆ! (ಇದೇನು ಮಹಾ, ಬಿಡಿ ನಮ್ಮ ಘನ ಇಂಜಿನೀಯರ್‍ಗಳು ಕಟ್ಟಿದ ಸೇತುವೆಗಳೇ, ಕಟ್ಟಿ ಮುಗಿದ 1 – 2 ದಿನಗಳಲ್ಲೇ ಬೀಳುವಾಗ, ಈ ವೇದಿಕೆಗಳು ಬೀಳೋದ್ರಲ್ಲಿ ವಿಶೇಷವೇನಿದೆ?!) ಇಂಥ ಕಾಳಿಂಗ  ಸರ್ಪದುದ್ದನೆಯ ಪಟ್ಟಿಯ ಅತಿಥಿಗಳ ಸಮಾರಂಭಗಳಲ್ಲಿ ಸ್ವಾಗತ ಭಾಷಣವೇ ಸಮಾರಂಭದ 50% ತೆಗೆದುಕೊಂಡು ಬಿಡುತ್ತೆ. ಕೆಲ ಛಲದಂಕ ಮಲ್ಲ ಭಾಷಣಕಾರರು, ವಿಷಯ ರಾಹಿತ್ಯವಿದ್ದರೂ, ಮೇಜು ಕುಟ್ಟಿ ಕುಟ್ಟಿ, ಮಲಗಿದ್ದ ಸಭಿಕರನ್ನೆಬ್ಬಿಸುತ್ತ ತಮ್ಮ ಓತಪ್ರೋತ ವಾಗ್ಝರಿಯಿಂದ, ತಮ್ಮ ಭಂಡ ವಿಚಾರಗಳ ಮಂಡನೆ ಮಾಡುತ್ತಾರೆ.  ಅಂಥ ಒಂದೆರಡು  ಭಾಷಣಕಾರರಿದ್ದರಂತೂ  ಮುಗೀತು‍‍ ‍_ ಸಭೆಯ ಲಯವೇ ತಪ್ಪಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊಟಕಾಗುವುದೂ ಉಂಟು! ನಿರೂಪಕ ಬಲಶಾಲಿಯಿದ್ದಾಗ, ಭಾಷಣಕಾರರ ಮೈಕ್ ಕಸಿದು, ಉಳಿದ ಕಾರ್ಯಕ್ರಮಗಳಿಗೆ ಸಮಯ `ಹೊಂದಿಸು'ವುದೂ ಉಂಟು.  ಒಟ್ಟಾರೆ, ಈ ಸಭೆ ಸಮಾರಂಭಗಳು ಮುಖ್ಯ ವಿಷಯವನ್ನು ನೇಪಥ್ಯಕ್ಕೆ ಸರಿಸಿ, ನಿರೂಪಕ ಹಾಗೂ ಭಾಷಣಕಾರರ ನಡುವಿನ ಪರೋಕ್ಷ ಬಲಪ್ರದರ್ಶನದ ಅಖಾಡಾಗಳಾಗಿ ಬಿಟ್ಟಿವೆ.  ಟಿ.ವಿಯಲ್ಲಿನ ಕೆಲ ಸಂದರ್ಶನಗಳನ್ನಿಲ್ಲಿ ಉದಾಹರಿಸಬಹುದು.  ಅಲ್ಲಿಯೂ ಸಂದರ್ಶಕ, ತನ್ನ ಜ್ಞಾನ ಪ್ರದರ್ಶನ ಮಾಡುತ್ತಿರುತ್ತಾನೆಯೇ ಹೊರತಾಗಿ, ಸಂದರ್ಶಿತನ ಮಾತುಗಳಿಗೆ ಅವಕಾಶವನ್ನೇ ಕೊಡದೇ `ಸಂದರ್ಶನ'ಕ್ಕೆ ಅರ್ಥವೇ ಇಲ್ಲದಂತೆ ಮಾಡುತ್ತಾನೆ! ಇದಿ ನ್ಯಾಯಮಾ ಶ್ರೀ ರಾಮಚಂದ್ರ ?!
    ಒಮ್ಮೆ ಸಮಾರಂಭವೊಂದರಲ್ಲಿ ನನ್ನನ್ನೂ ಮುಖ್ಯ ಅತಿಥಿಯನ್ನಾಗಿ ಮಾಡಿದ್ದರು.  ಸ್ವಾಗತ ಭಾಷಣದಲ್ಲಿ ನನ್ನ ಹೆಸರನ್ನೇ ತಪ್ಪು ತಪ್ಪಾಗಿ  ಹೇಳಿದರು.  ಸೂಕ್ಷ್ಮವಾಗಿ  ಹೇಳಿ, ಸ್ವಾಗತ ಭಾಷಣ ಕರ್ತನನ್ನು ತಿದ್ದಿದೆ.  ನನ್ನ ಪರಿಚಯದಲ್ಲಿ ನನ್ನ qualification ಗೂ  ಗಂಡಾಂತರ ಬಂತು, ಸಾಯಲಿ, ನನ್ನ ಉದ್ಯೋಗಕ್ಕೂ ಧಕ್ಕೆ ಬರಬೇಕೇ? ಬಂದ ಸಿಟ್ಟನ್ನೆಲ್ಲ ನುಂಗಿ, ನಮ್ರನಾಗಿ, ಸ್ವಾಗತ ಕರ್ತನೆಡೆ ತಿರುಗಿ ನುಡಿದೆ_ "ಅಯ್ಯಾ ತಪ್ಪು ತಪ್ಪಾಗಿ ಹೇಳಬೇಡ, ನಿಜವಾಗಿ ನನ್ನ ---" ಅಷ್ಟನ್ನುತ್ತಿದ್ದಂತೆಯೇ, ನನ್ನ ಮಾತನ್ನು ಆತ, ಅರ್ಜುನನಂತೆ, ಅರ್ಧದಲ್ಲಿಯೇ ತುಂಡರಿಸಿ "ಸ್ವಲ್ಪ ಸುಮ್ನಿರ್ತಿರಾ? ಜನ ಬಂದಿರೋದು ನಿಮ್ಮ ಮೂತಿ ನೋಡಲಿಕ್ಕಲ್ಲ. ನಂತರದ ಐಟಂ  ಡ್ಯಾನ್ಸ್ ಕಾಂಪಿಟಿಷನ್‍ಗೆ ತಿಳೀತಾ? ಏನೋ ಸಭೆಯ ಸಂಪ್ರದಾಯಕ್ಕೇ ಅಂತ ಅತಿಥಿಗಳನ್ನು ಕರೆದ್ರೆ ---" ಅಂದ! ನನ್ನ ಅದೃಷ್ಟ ಚೆನ್ನಾಗಿತ್ತು, ಆತ ಬಯ್ಯುವಾಗ ಮೈಕ್ ಮುಚ್ಚಿದ್ದ. ಸಂಘಟಕರು, ಕಾರ್ಯವಾಸೀ ಕತ್ತೆ ಕಾಲು ಕಟ್ಟಿ, ಅತಿಥಿಗಳನ್ನು ಕರೆ ತಂದಿರ್ತಾರೆ, ನಿರೂಪಕರಿಗೇನು ಮುಲಾಜು ಹೇಳಿ?!
    ಸಭಿಕರಿಗೇನು ಬೇಕು ಎನ್ನುವ ನಾಡಿಮಿಡಿತವನ್ನು ನಿರೂಪಕರು ಈಗ ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿಯೇ ಈಗ `ವಂದನಾರ್ಪಣೆ' ಕಾರ್ಯಕ್ರಮ, ಸಮಾರಂಭದ ಕೊನೆಯಲ್ಲಿರುವುದಿಲ್ಲ.  ಸಾಂಸ್ಕೃತಿಕ  ಕಾರ್ಯಕ್ರಮ ಯಾ ಭೋಜನ ಕಾರ್ಯಕ್ರಮದ ಮುನ್ನವೇ ವಂದನಾರ್ಪಣೆಯನ್ನು ಮುಗಿಸಿ ಬಿಡುತ್ತಾರೆ. ಇಲ್ಲವಾದಲ್ಲಿ ವಂದನಾರ್ಪಣೆ ಕಾರ್ಯಕ್ರಮಕ್ಕೆ ಸಭಿಕರು ಪೂರಾ ಖಾಲಿಯಾಗಿ, ಮಾಡುವಾತನಿಗೂ ಬೇಜಾರು, ಉಳಿದವರಿಗೂ ಬೋರು!
    ಭಾಷಾ ಅಧ್ಯಯನ ಮಾಡುವವರು, ಕ್ಲೀಷಾಲಂಕಾರಕ್ಕೆ ಉದಾಹರಣೆ  ಬೇಕಿದ್ದಲ್ಲಿ ಸಮಾರಂಭವೊಂದಕ್ಕೆ ಹೋದರೆ ಸಾಕು. ಅವರಿಗೆ ಸಾಕು ಬೇಕಿನಿಸುವಷ್ಟು ಸಿಕ್ಕಾವು. ಸ್ವಾಗತಕರ್ತ ಮುಖ್ಯ ಅತಿಥಿಯನ್ನು ಪರಿಚಯಿಸುವಾಗ, ಅವರ ಬಗ್ಗೆ ಏನೆಲ್ಲಾ ಹೇಳಿ (ಅತಿಥಿಗಳಿಗೆ, ಆ ಪರಿಚಯ ತಮ್ಮದೋ ಅಥವಾ ಬೇರೆಯವರದ್ದೋ ಎಂದು ಗೊಂದಲ ಮೂಡಿಸಿ), "ಮಾನ್ಯರು ಎಷ್ಟೆ busy ಇದ್ದರೂ, ನಮ್ಮ ಕರೆಗೆ ಓಗೊಟ್ಟು, ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಇಲ್ಲಿಗೆ ಬಂದಿರುತ್ತಾರೆ" ಎಂದೇ ಹೇಳುವಾತ. ಅತಿಥಿಯಾಗಿ  ಬಂದಾತನಿಗೆ  ಕೆಲಸದ ಮೇಲೆ ನಿಷ್ಠೆ ಇಲ್ಲ ಅಂತ ಪರೋಕ್ಷವಾಗಿ ಹೇಳುವುದಾ ಇದು?  ಇನ್ನು ಪತ್ರಿಕಾ ವರದಿಗಳೂ ಇದಕ್ಕೆ ಭಿನ್ನವೇನಿಲ್ಲ.  ಕೆಲ ಪತ್ರಿಕಾ  ವರದಿಗಳು ಪತ್ರಿಕಾ  ಗೋಷ್ಠಿಗೆ ಮುನ್ನವೇ ತಯಾರಿರುತ್ತವೆಯೆನ್ನುವುದು ಸುಳ್ಳೇನಲ್ಲ.  `ಸಭೆಗೆ ಕಳೆ ಕಟ್ಟಿತ್ತು' 'ಎಂದು ಹೇಳಲು ಮರೆಯಲಿಲ್ಲ" "ಅವರು ತರಾಟೆಗೆ ತೆಗೆದುಕೊಂಡರು --- ಇವರು ಎದಿರೇಟು ನೀಡಿದರು ---- "ಅವರ ಸಾವಿನಿಂದ ತುಂಬಲಾರದ ನಷ್ಟ" ಇಂಥ  ಕ್ಲೀಷಾಲಂಕಾರ  ಇಲ್ಲದ ಪತ್ರಿಕಾ ವರದಿಯನ್ನೊಮ್ಮೆ ತೋರಿಸಿ ನೋಡೋಣ. ಇವೆಲ್ಲ `ಪತ್ರಿಕಾ ಭಾಷೆ' ಆಗಿ ಬಿಟ್ಟಿದೆ.  ಹಾಗಾಗಿಯೇ, ಒಮ್ಮೆ ನಾನು ಅತಿಥಿಯಾಗಿದ್ದ ಸಭೆಯ ಪತ್ರಿಕಾ ವರದಿ ನನಗೇ ಹೊಸತು ಆಗಿತ್ತು!   ನಾನು ಹೇಳಿದ್ದೆಲ್ಲ  ಬಿಟ್ಟು, ತಾನು ಹೇಳಬೇಕಾಗಿದ್ದನ್ನವೆಲ್ಲ ನನ್ನ ಬಾಯಿಂದ ಉದುರಿಸಿದ್ದ,  ಆ ವರದಿಗಾರ ಮಹಾಶಯ! ನಾನು ತಾನೇ ಏನು ಮಾಡಿಯೇನು?
    ನೋಡಿ, ದಾರ ಪೋಣಿಸಿದ ಮಣಿಗಳಂತಿರದೇ, ಚೆಲ್ಲಾಪಿಲ್ಲಿಯಾದ ಮಣಿಗಳಂತೆ ಸಂಘಟಕ,  ನಿರೂಪಕ, ಅತಿಥಿ ಹಾಗೂ ಸಭಿಕರು ಒಬ್ಬೊರಿಗೊಬ್ಬರು unconnect ಆಗಿರುವುದರ ಪರಿಣಾಮವೇ ಈ ಯಾಂತ್ರಿಕ ಸಭೆ-ಸಮಾರಂಭಗಳು.

Comments

Submitted by Nagaraj Bhadra Fri, 09/04/2015 - 23:13

ಸಂತೋಷ ಸರ್ ಅವರಿಗೆ ನಮಸ್ಕಾರಗಳು. ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.ಇಂದಿನ ಜನರಿಗೆ ತಕ್ಕಂತೆ ಸಮಾರಂಭಗಳು ಬದಲಾಗಿದೆ.

Submitted by nageshamysore Sat, 09/05/2015 - 01:45

ನಮಸ್ಕಾರ ಶಾಸ್ತ್ರಿಗಳೆ.. ಅಭಾಗತ ಅತಿಥಿಗಳ ಪ್ರಾಣ ಸಂಕಟವನ್ನು ಬಿಚ್ಚಿಡುತ್ತಲೆ ಈ ಸಭೆಗಳ 'ಭಣಭಣಕ್ಕೆ' ಬೆಳಕು ಚೆಲ್ಲಿದ್ದೀರಾ. ಬಹುಶಃ ಸಮಾರಂಭವೂ ಟಿವಿಯಲ್ಲಿ ಬಂದರೆ (ಮುಖ್ಯ ಧಾರಾವಾಹಿಯಿಲ್ಲದ ಹೊತ್ತಿನಲ್ಲಿ) ಅಷ್ಟೊ, ಇಷ್ಟೊ ನೋಡುವವರು ಸಿಗುತ್ತಾರೆಂದು ಕಾಣುತ್ತದೆ. ನಾನೊಮ್ಮೆ ಇದರ ಇನ್ನೊಂದು ಆಯಾಮದ ಕುರಿತು ಕೇಳಿದ್ದೆ. ಪ್ರಸಿದ್ದ ಸಾಹಿತಿಯೊಬ್ಬರನ್ನು ಸಂಘವೊಂದು ಅತಿಥಿಯಾಗಲೆಂದು ಕರೆದರೆ, ಅವರು ಬರೆದ ಪುಸ್ತಕಗಳ ಕನಿಷ್ಠ ಮೊತ್ತದ ಗಂಟೊಂದನ್ನು ಖರೀದಿಸಬೇಕೆಂಬ ಇಂಗಿತ ಬಂತಂತೆ. ಅವರು ಆ ರೀತಿ ಪುಸ್ತಕ ಮಾರಬೇಕಾದ ಸ್ಥಿತಿಗೆ ಒಂದೆಡೆ ಬೇಸರವಾದರೆ, ಆ ಪರಿಸ್ಥಿತಿಯನ್ನು ಹಾಗೆ ಬಳಸಿಕೊಳ್ಳುವ ಮನಸತ್ವದ ಬಗ್ಗೆ ಖೇದವೂ ಆಯ್ತು. ಒಟ್ಟಾರೆ ಎಲ್ಲವು ವಸ್ತು ನಿಷ್ಠ ಕಾಳಜಿ, ಪ್ರೀತಿಗಳಾಗದೆ ಬರಿ ಅಲಂಕಾರಿಕವಾದಾಗ ಇದೇ ಪಾಡು.

Submitted by kavinagaraj Mon, 09/07/2015 - 07:42

ಸಮಾರಂಭಗಳು, ಸಭೆಗಳ ವಾಸ್ತವ ಚಿತ್ರಣ ತೆರೆದಿಟ್ಟಿರುವಿರಿ. ಸರ್ಕಾರೀ ಕಾರ್ಯಕ್ರಮಗಳ ಬಗೆಗೂ ತಿಳಿಸಿಬಿಟ್ಪರೆ ಪರಿಪೂರ್ಣವಾಗುತ್ತದೆ.

Submitted by santhosha shastry Tue, 09/08/2015 - 22:18

In reply to by kavinagaraj

ಕವಿವರ್ಯರಲ್ಲಿ ಧನ್ಯವಾದಗಳು. ನೀವಂದದ್ದು ನಿಜ‌. ಆದರೆ, ಲಜ್ಜೆಗೆಟ್ಟು ನಡೆಯುವ‌ ಸರ್ಕಾರೀ ಕಾರ್ಯಕ್ರಮಗಳ‌ ಬಗ್ಗೆ ಮಾತ್ನಾಡದಿರೋದೇ ಉತ್ತಮವೇನೋ? ಏನಂತೀರಿ?