ನಮ್ಮ ಗಣಪನಿಗೇನು ಕಮ್ಮಿ ?

ನಮ್ಮ ಗಣಪನಿಗೇನು ಕಮ್ಮಿ ?

ನಮ್ಮ ಗಣಪನಿಗೇನು ಕಮ್ಮಿ ? ಅಂತ ಕೇಳಿಕೊಂಡು ಹೋದರೆ ಕಾಣುವುದೆಲ್ಲ ಸ್ವಲ್ಪ ಹೆಚ್ಚೆ ಅನ್ನಬೇಕು.. ಎಲ್ಲರಿಗು ಗೊತ್ತಿರುವ ಹಾಗೆ ಹಸಿವೆ ಸ್ವಲ್ಪ ಜಾಸ್ತಿಯೆ ಇರುವ ಕಾರಣ, ಹೊಟ್ಟೆಯ ಗಾತ್ರವೂ ಜಾಸ್ತಿಯೆ. ಅದರ ಸಲುವಾಗಿಯೆ ಏನೊ, ಕೈಯಲ್ಲಿ ಹಿಡಿದ ಕಡುಬಿನ ಗಾತ್ರವೂ ಹಿರಿದೆ. ಇನ್ನು ಮೂಗಿನ ಕುರಿತು ಮಾತಾಡುವಂತೆಯೆ ಇಲ್ಲ - ಸೊಂಡಿಲಿನುದ್ದ ಗಾತ್ರಕ್ಕೆ ಸ್ಪರ್ಧೆ ನೀಡುವವರಾದರು ಯಾರು ? ಇನ್ನು ಕಿವಿಯೊ ಮೊರದಗಲದ ಗಜಕರ್ಣ. ಒಂದು ರೀತಿ ತಲೆಯ ಎರಡು ಪಕ್ಕಕ್ಕು ತಗುಲಿಸಿದ ಬೀಸಣಿಗೆಯ ಹಾಗೆ. ಮುಖವೇನು ಕಡಿಮೆಯಿಲ್ಲ - ಬಾಲನ ಮುಂಡದ ಮೇಲೆ ಕೂರಿಸಿದ ಆನೆಯ ರುಂಡದವನಲ್ಲವೆ ? ಭೌತಿಕವಾಗಿ ಮಾತ್ರವಲ್ಲದೆ ಬೌದ್ಧಿಕವಾಗಿಯೂ ಜಾಸ್ತಿಯೆ ಬುದ್ದಿವಂತನಾಗಿದ್ದು ಸಿದ್ದಿ ಬುದ್ಧಿಯರನ್ನೆ ಕರವಶ ಮಾಡಿಕೊಂಡಿರುವ ಮೇಧಾವಿ. ಅದಕ್ಕೆ ಇರಬೇಕು ಗಣೇಶನನ್ನಿಟ್ಟು ಪೂಜಿಸುವ ಭಕ್ತರೆಲ್ಲರಿಗು ಆದಷ್ಟು ದೊಡ್ಡ ಗಣಪತಿ ವಿಗ್ರಹವನ್ನೆ ತಂದು ಪೂಜಿಸುವ ಆಸೆ. 

ಆದರೆ ಆ ದೊಡ್ಡತನದಲ್ಲೆ ಒಂದು ಮಹತ್ತರ ಸತ್ಯವನ್ನು ತೋರಿಸುವ ಹುನ್ನಾರ ಗಣಪನದಂತೆ - ದೊಡ್ಡ ಕಿವಿ ಒಳ್ಳೆಯ ಶೋತೃವಾಗಿ ಆಲಿಸುವ ಗುಣದ ಸಂಕೇತವಾದಂತೆ, ಉದರವು ತಪ್ಪುಒಪ್ಪುಗಳೆಲ್ಲವನ್ನು ಆಪೋಷಿಸಿಕೊಂಡು ಸಲಹುವ ಉದಾರ ಬುದ್ಧಿಯ ಸಂಕೇತ.  ಹೀಗೆ ಎಲ್ಲಾ ದೊಡ್ಡದರ ನಡುವೆ ಕಣ್ಣು ಮಾತ್ರ ಸೂಕ್ಷ್ಮದೃಷ್ಟಿಯ ವಕ್ತಾರನಂತೆ ಕಿರಿದು - ತಾನೆಷ್ಟೆ ದೊಡ್ಡವನಿದ್ದರು ವಿನಯದಲ್ಲಿ ಎನಗಿಂತ ಕಿರಿಯರಿಲ್ಲವೆನ್ನುವುದರ ಸಂಕೇತದಲ್ಲಿ. 

ಅಂತಹ ಗಣೇಶ, ತಾಯಿ ಗೌರಿಯೊಂದಿಗೆ ಕಾಲಿಕ್ಕುತ್ತಿರುವ ಭಾದ್ರಪದ ಶುಕ್ಲದ ಚೌತಿಯ ಈ ಹೊತ್ತಿನಲ್ಲಿ ಎಲ್ಲರಿಗು ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಈ ಕವನದ ಮೂಲಕ ಅವರನ್ನು ಭುವಿಗೆ ಸ್ವಾಗತಿಸೋಣ :-)

ನಮ್ಮ ಗಣಪನಿಗೇನು ಕಮ್ಮಿ ?
ಹಿರಿಯುದರದಂತೆಲ್ಲಾ ಸ್ವಾಮಿ
ಉದಾರ ಸಿದ್ಧಿ ಬುದ್ಧಿ ಕ್ಷಮತೆ
ದಯಪಾಲಿಸೆ ಕಡಿಮೆ ಮಾತೆ ? ||

ಅಲೆ ಕರ್ಣಗಳೇ ಮೊರದಗಲ
ಜಗಕೆಲ್ಲ ತೆರೆದಿಟ್ಟಾ ಬಾಗಿಲ
ಚದುರಿ ಬಂದರೇನು ಮೊರೆ
ಡಿಕ್ಕಿ ಹೊಡೆದು ಉರುಳಿ ಸೆರೆ ||

ಕೇಳಿದ್ದೆಲ್ಲ ಕಾರ್ಯ ಕಾರಣ ಸೂಕ್ತ
ಶೋಧಿಸಬೇಕಲ್ಲಾ ಅನಿಯಮಿತ
ವಿಶಾಲ ನೊಸಲದರೊಳಗಿನ ಚಿತ್ತ
ಸರ್ವದಾ ಸಿದ್ದ ವಿಧಿ ಪೂರೈಸುತ್ತ ||

ಸೊಂಡಿಲಿನುದ್ದ ತಲುಪೆ ಪ್ರಬುದ್ಧ
ಎಟುಕದಿದ್ದ ಎಟುಕಿಸೊ ಸಮೃದ್ಧ
ಬಾಚಿಕೊಳುವ ಕರಬಾಹು ಸಲ್ಲ
ಚಾಚಿ ಕೊಳ್ಳುವ ಮೂಗುದ್ದ ಬಲ ||

ಇನ್ನು ಉದರ ತುಂಬ ಸಂವೇದನೆ 
ತುಂಬಿಸೆಲ್ಲ ಜನರ ಮನೋವೇದನೆ
ಸಲಹಿ ತೂಗಿ ಅರಗಿಸಿ ನಗುವಾತ
ಪರಿಹರಿಸುತೆಲ್ಲ ಜನರ ಮನಾಘಾತ ||

--------------------------------- 
ನಾಗೇಶ ಮೈಸೂರು, 
----------------------------------

Comments

Submitted by Ananth d Tue, 09/15/2015 - 23:31

ನಿಮ್ಮ ಬರಹ ಲಘುಬಗೆಯಿಂದ ಕೂಡಿದೆ. ನಮ್ಮ ನೆಂಟರಿಷ್ಟರಿಗೆಲ್ಲಾ ನಿಮ್ಮ ಬರಹದ ಮೂಲಕವೇ ಶುಭಾಶಯ ಹೇಳಿದ್ದೇನೆ.
ಧೀರ್ಘ,ಇಳಿ,ಏತ್ವಾಗಳ ಕಡೆ ಗಮನ ಕೊಡಿ. ಉದಾಹರಣೆಗೆ ನಿಮ್ಮ ಬರಹದ ರೀ ಎಡಿಟಿಂಗ್ ಈ ಕೆಳಕಂಡಂತೆ ಇದೆ.
(ನಮ್ಮ ಗಣಪನಿಗೇನು ಕಮ್ಮಿ ? ಅಂತ ಕೇಳಿಕೊಂಡು ಹೋದರೆ ಕಾಣುವುದೆಲ್ಲ ಸ್ವಲ್ಪ ಹೆಚ್ಚೇ ಅನ್ನಬೇಕು.. ಎಲ್ಲರಿಗೂ ಗೊತ್ತಿರುವ ಹಾಗೆ ಹಸಿವೆ ಸ್ವಲ್ಪ ಜಾಸ್ತಿಯೇ ಇರುವ ಕಾರಣ, ಹೊಟ್ಟೆಯ ಗಾತ್ರವೂ ಜಾಸ್ತಿಯೆ. ಅದರ ಸಲುವಾಗಿಯೊ ಏನೊ, ಕೈಯಲ್ಲಿ ಹಿಡಿದ ಕಡುಬಿನ ಗಾತ್ರವೂ ಹಿರಿದೆ. ಇನ್ನು ಮೂಗಿನ ಕುರಿತು ಮಾತಾಡುವಂತೆಯೆ ಇಲ್ಲ - ಸೊಂಡಿಲಿನುದ್ದ ಗಾತ್ರಕ್ಕೆ ಸ್ಪರ್ಧೆ ನೀಡುವವರಾದರೂ ಯಾರು ? ಇನ್ನು ಕಿವಿಯೋ ಮೊರದಗಲದ ಗಜಕರ್ಣ. ಒಂದು ರೀತಿ ತಲೆಯ ಎರಡು ಪಕ್ಕಕ್ಕು ತಗುಲಿಸಿದ ಬೀಸಣಿಗೆಯ ಹಾಗೆ. ಮುಖವೇನೂ ಕಡಿಮೆಯಿಲ್ಲ - ಬಾಲನ ಮುಂಡದ ಮೇಲೆ ಕೂರಿಸಿದ ಆನೆಯ ರುಂಡದವನಲ್ಲವೆ ? ಭೌತಿಕವಾಗಿ ಮಾತ್ರವಲ್ಲದೆ ಬೌದ್ಧಿಕವಾಗಿಯೂ ಜಾಸ್ತಿಯೇ ಬುದ್ದಿವಂತನಾಗಿದ್ದು ಸಿದ್ದಿ ಬುದ್ಧಿಯರನ್ನೆ ಕರವಶ ಮಾಡಿಕೊಂಡಿರುವ ಮೇಧಾವಿ. ಅದಕ್ಕೇ ಇರಬೇಕು ಗಣೇಶನನ್ನಿಟ್ಟು ಪೂಜಿಸುವ ಭಕ್ತರೆಲ್ಲರಿಗೂ ಆದಷ್ಟು ದೊಡ್ಡ ಗಣಪತಿ ವಿಗ್ರಹವನ್ನೇ ತಂದು ಪೂಜಿಸುವ ಆಸೆ.
ಆದರೆ ಆ ದೊಡ್ಡತನದಲ್ಲೆ ಒಂದು ಮಹತ್ತರ ಸತ್ಯವನ್ನು ತೋರಿಸುವ ಹುನ್ನಾರ ಗಣಪನದಂತೆ - ದೊಡ್ಡ ಕಿವಿ ಒಳ್ಳೆಯ ಶ್ರೋತೃವಾಗಿ ಆಲಿಸುವ ಗುಣದ ಸಂಕೇತವಾದಂತೆ, ಉದರವು ತಪ್ಪುಒಪ್ಪುಗಳೆಲ್ಲವನ್ನು ಆಪೋಷಿಸಿಕೊಂಡು ಸಲಹುವ ಉದಾರ ಬುದ್ಧಿಯ ಸಂಕೇತ. ಹೀಗೆ ಎಲ್ಲಾ ದೊಡ್ಡದರ ನಡುವೆ ಕಣ್ಣು ಮಾತ್ರ ಸೂಕ್ಷ್ಮದೃಷ್ಟಿಯ ವಕ್ತಾರನಂತೆ ಕಿರಿದು - ತಾನೆಷ್ಟೆ ದೊಡ್ಡವನಿದ್ದರೂ ವಿನಯದಲ್ಲಿ ಎನಗಿಂತ ಕಿರಿಯರಿಲ್ಲವೆನ್ನುವುದರ ಸಂಕೇತದಲ್ಲಿ.) ಕ್ಷಮೆಯಿರಲಿ.

Submitted by nageshamysore Wed, 09/16/2015 - 02:13

In reply to by Ananth d

ನಮಸ್ಕಾರ ಅನಂತರವರೆ, ನಿಮಗೂ ಸಹ ಮತ್ತೊಮ್ಮೆ ಹಬ್ಬದ ಹಾರ್ದಿಕ ಶುಭಾಶಯಗಳು :-)

ದೀರ್ಘಾಕ್ಷರ, ಒತ್ತಕ್ಷರಗಳ ಈ ಲೋಪದ ಬಗೆ ನನಗೆ ಅರಿವೇ ಆಗಿರಲಿಲ್ಲ. ನಿಮ್ಮ ತಿದ್ದಿದ ಆವೃತ್ತಿ ನೋಡಿದಾಗ 'ಹೌದಲ್ಲಾ..!' ಅನಿಸಿತು. ತಿದ್ದಿದ್ದಕ್ಕೆ ಅನಂತ ಧನ್ಯವಾದಗಳು - ಸಂಪದದಲ್ಲಿ ತಿದ್ದುಪಡಿ ಮಾಡಲಾಗದಿದ್ದರು, ನನ್ನ ಬ್ಲಾಗಿನಲ್ಲಿ ತಿದ್ದಿದ್ದೇನೆ. ಮುಂದೆಯೂ ಪ್ರಜ್ಞಾಪೂರ್ವಕವಾಗಿ ಈ ಕುರಿತು ಗಮನ ನೀಡುತ್ತೇನೆ. ಆದರೆ, ಅಭ್ಯಾಸಬಲ ನೆಟ್ಟಗಾಗಲಿಕ್ಕೆ ಸ್ವಲ್ಪ ಸಮಯ ಹಿಡಿಯುವುದೆಂದು ಕಾಣುತ್ತದೆ... :-)

ನಿಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು !

Submitted by ravindra n angadi Thu, 09/17/2015 - 17:07

ನಮಸ್ಕಾರಗಳು ಸರ್,
ಗಣಪತಿಯನ್ನು ಸವಿಸ್ತಾರವಾಗಿ ವಿವರಿಸಿದ್ದೀರಿ.
ಗಣೇಶ ಚತುರ್ಥಿಯ ಹಾರ್ದಿಕ ಶುಭಾಷಯಗಳು.

Submitted by nageshamysore Thu, 09/17/2015 - 18:22

In reply to by ravindra n angadi

ರವೀಂದ್ರರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮಗು ಗಣೇಶನ ಹಬ್ಬದ ಹಾರ್ದಿಕ ಶುಭಾಶಯಗಳು. ಅಂದಹಾಗೆ ವಾಕಿಂಗ್ ಹೋದರೆ ಹುಷಾರಾಗಿರಿ - ಚೌತಿ ಚಂದ್ರ ಹೊಂಚು ಹಾಕಿ ಕಾಯುತ್ತಿರುತ್ತಾನೆ, ಕಣ್ಣಿಗೆ ಬಿದ್ದುಬಿಟ್ಟಾನು ! :-)

Submitted by nageshamysore Sat, 09/19/2015 - 04:06

In reply to by kavinagaraj

ಕವಿ ನಮಸ್ಕಾರ ಮತ್ತು ಧನ್ಯವಾದಗಳು. ಗಣೇಶನ ಲೆಕ್ಕದಲ್ಲಿ ತಡವೆಲ್ಲಿ ಬಂತು? ಹೇಗೂ ತಿಂಗಳಾನುಗಟ್ಟಲೆ ಕೂರಿಸಿ ಪೂಜಿಸುವ ಸ್ಪೆಷಲ್ ದೇವರಲ್ಲವೆ :-)