ಒಂದು ಲಘು ಹರಟೆ

ಒಂದು ಲಘು ಹರಟೆ

ಸಾಮಾಜಿಕ ತಾಣಗಳು ವಿಜ್ರಂಭಿಸುತ್ತಿರುವ ಈ ಕಾಲದಲ್ಲಿ ಹರಟೆ ಒಂದು ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ. ನೆಂಟರಿಷ್ಟರನ್ನು, ಮಿತ್ರರನ್ನು ಭೇಟಿ ಮಾಡಲು ಸಮಯದ ಕೊರತೆ ಇದ್ದರೂ ಸಾಮಾಜಿಕ ತಾಣಗಳಲ್ಲಿ ಇಣುಕಿ ಮತ್ತೊಬ್ಬರ ಕೊರೆತ ಓದಲು ಬೇಕಷ್ಟು ಸಮಯ ಹೊಂದಿಸಲು ನಮಗೆ ಸಾಧ್ಯ. ಈ ಬರಹಕ್ಕೆ "ಒಂದು ಹರಟೆ" ಎನ್ನುವ ಶೀರ್ಷಿಕೆ ಕೊಟ್ಟು ಅದನ್ನು ನೀವು ಓದಬೇಕೆಂದು ಒತ್ತಾಯ ಹೆರುವ ಹೊಸ ಪರಿಪಾಠ ಮೇಲಿನ ಪೀಠಿಕೆ. ದಯಮಾಡಿ ಓದಿ.  ಅಷ್ಟೇ ಅಲ್ಲ...

ಸಂಪದದಲ್ಲಿ ಬರೆಯದೆ ಸ್ವಲ್ಪ ಸಮಯವಾಯಿತು. ಒಂದು ವರ್ಷ, ಎಂಟು ತಿಂಗಳು. ದಿನಗಳು, ಗಂಟೆಗಳಂತೆ ಉರುಳುತ್ತಿರುವ ಈ ಯುಗದಲ್ಲಿ ಒಂದು ವರ್ಷ ಎಂಟು ತಿಂಗಳು ದೊಡ್ಡದೇನಲ್ಲ. ಬರೆಯದೆ ಇರುವುದಕ್ಕೆ, ಸೋಮಾರಿತನ ಬಿಟ್ಟರೆ, ವಿಶೇಷ ಕಾರಣಗಳೇನೂ ಇಲ್ಲ.  ಬರೆಯೋದಕ್ಕೆ ಬರೋಲ್ಲ ಎನ್ನುವ ಸಾಮರ್ಥ್ಯದ ಕೊರತೆಯೂ ಇಲ್ಲ. ಇಲ್ಲೇ, ನನ್ನ ನೆಚ್ಚಿನ ಸಂಪದದಲ್ಲೇ, ನಾನು ಬರೆಯುವುದನ್ನು ಕರಗತ ಮಾಡಿ ಕೊಂಡಿದ್ದು. ನನ್ನ ಬರಹಗಳು ಸಾಕಷ್ಟು ಟೀಕೆ, ಬೇಕಾದಷ್ಟು ಹೊಗಳಿಕೆಗಳನ್ನು ಗಳಿಸುತ್ತಾ ಒಂದು ಚಿಕ್ಕ ಮಟ್ಟದ ಬರಹಗಾರನನ್ನು ನನ್ನಲ್ಲಿ ಹುಟ್ಟು ಹಾಕಲು ಸಂಪದ ಓದುಗರ ಪಾತ್ರ ದೊಡ್ಡದು. ಸಂಪದದ ಪಾತ್ರ ಮತ್ತಷ್ಟು ಹಿರಿದು. ಹಾಗಾಗಿ, ಈ ಒಂದು ಪುಟ್ಟ ಹರಟೆಯ ಉದ್ದೇಶ ಸಹ, ಸೋಮಾರಿತನ ಕೊಡವಿ ಮತ್ತೊಮ್ಮೆ ಸಂಪದದಲ್ಲಿ ಸಕ್ರಿಯನಾಗುವ ಹಂಬಲ, ಅಭಿಲಾಷೆ.

ಟ್ವಿಟ್ಟರ್, ಫೇಸ್ಬುಕ್, ವಾಟ್ಸಪ್ ಗಳ ದಾಂಧಲೆ ಅಂತರ್ಜಾಲದಲ್ಲಿ. ಬೇಡ, ಬೇಡವೆಂದರೂ ಸುದ್ದಿಗಳ ಸುಗ್ಗಿ. ಬೇಕಾದ್ದು, ಬೇಡವಾದದ್ದು ಎಲ್ಲವೂ ಹೇರಳ. ಅಂತರ್ಜಾಲದಿಂದ ಬಿಡುಗಡೆ ಹೊಂದಲು ಸಾಧ್ಯವಾಗದ ಈ ಆಧುನಿಕ ಬದುಕಿನಲ್ಲಿ ಟ್ವಿಟ್ಟರ್, ಫೇಸ್ಬುಕ್, ವಾಟ್ಸಪ್ ಗಳನ್ನು ಸಹಿಸಿ ಕೊಳ್ಳಲೇಬೇಕು. ಮೊನ್ನೆ ಫ್ರಾನ್ಸ್ ನಲ್ಲಿ ಒಬ್ಬ ರೈಲಿನ ಶೌಚಾಲಯದಲ್ಲಿ ಸೇರಿ ಕೊಂಡು ಹೊರಬರದೆ ಇದ್ದಾಗ ಎಲ್ಲರಲ್ಲೂ ಆತಂಕ ಸೃಷ್ಟಿಸಿತು. ಭಯೋತ್ಪಾದನೆಯ ಸಂಶಯ ಆವರಿಸಿತು. ಪೋಲೀಸರನ್ನು ಕರೆಸಲಾಯಿತು. ಈ ಸುದ್ದಿಗೆ ಟ್ವಿಟ್ಟರ್ ನಲ್ಲಿ ಒಬ್ಬರು ಹೀಗೆ ಪ್ರತಿಕ್ರಯಿಸಿದರು. ಫ್ರಾನ್ಸ್ನಲ್ಲಿ ಒಬ್ಬ ಶೌಚದಲ್ಲಿ ಸೇರಿಕೊಂಡು ಅಗುಳಿ ಹಾಕಿಕೊಂಡರೆ ಭಯೋತ್ಪಾದನೆ, ನಮ್ಮ ದೇಶದಲ್ಲಿ ಹೀಗೆ ನಡೆದರೆ ಅದು ಟಿಕೆಟ್ ಇಲ್ಲದೆ ಸಂಚಾರ ಮಾಡೋ ಪ್ರಯಾಣಿಕನ ವರ್ತನೆ.  ಹೇಗಿದೆ, ಒಂದೇ ತೆರನಾದ ಘಟನೆಗಳು ದೇಶದಿಂದ ದೇಶಕ್ಕೆ ವಿವಿಧ narrative ಪಡೆದುಕೊಳ್ಳುತ್ತವೆ, ಅಲ್ಲವೇ?  

ನಾಡಿನಲ್ಲಿ ಗಣೇಶ ಚತುರ್ಥಿಯ ಸಂಭ್ರಮ. ವಿಘ್ನ ವಿನಾಶಕನನ್ನು ಮನೆಯಲ್ಲೂ, ಕಛೇರಿಗಳಲ್ಲೂ, ಶಾಲೆ ಕಾಲೇಜುಗಳಲ್ಲೂ, ಬೀದಿಗಳಲ್ಲೂ ಕೂರಿಸಿ, ಭಕ್ತಿಯಿಂದ ಆರಾಧಿಸಿ,  ನಂತರ ಮ್ಲಾನವದನರಾಗಿ ವಿಸರ್ಜಿಸೋ ಸಂದರ್ಭ. ಈ ಸಂದರ್ಭಕ್ಕೆ ಸೂಕ್ತವಾಗುವಂತೆ ಸಂಯುಕ್ತ ಅರಬ್ ಗಣರಾಜ್ಯದಲ್ಲಿ ವಾಸಿಸುವ ಅಕ್ಬರ್ ಎನ್ನುವವರು ಪ್ರಧಾನಿಗಳಿಗೆ ಈ ಲೇಖನದೊಂದಿಗೆ ಲಗತ್ತಿಸಿದ ಕಲಾಕೃತಿಯೊಂದನ್ನು ಕಳಿಸಿ ಶುಭ ಕೋರಿದರು. ವಿವಿಧ ಮತೀಯರು ಒಂದಾಗಿ, ಸೌಹಾರ್ದದಿಂದ ಬದುಕುವ ನಮ್ಮ ನಾಡಿನಲ್ಲಿ ಎಲ್ಲರ ಹಬ್ಬ ಹರಿದಿನ, ಈದ್, ಕ್ರಿಸ್ಮಸ್, ಆಚರಣೆಗಳಿಗೆ ಶುಭ ಕೋರುವುದು ನಮ್ಮ ಸಂಸ್ಕಾರದ ಹೆಗ್ಗಳಿಕೆ. ಅದರಲ್ಲಿದೆ ನಮ್ಮ ಹೃದಯ ವೈಶಾಲ್ಯತೆ. ಈ ಕೃತಿಯನ್ನು ಪ್ರಧಾನಿಗಳಿಗೆ ಕಳಿಸಿ ತನ್ನ ಸಂಸ್ಕಾರವನ್ನು ಸೊಗಸಾಗಿ ಮೆರೆದ ಸೋದರ ಅಕ್ಬರ್ ಪ್ರಶಂಸಾರ್ಹರು. 

ಚಿತ್ರ ಕೃಪೆ: http://www.scooparabia.co/socialpost/6318507

  

Comments

Submitted by kavinagaraj Tue, 10/06/2015 - 20:46

ಉತ್ತಮ ಕೆಲಸ. ಅಭಿನಂದನೆಗಳು ಅಕ್ಬರರಿಗೆ, ವಿಷಯ ಹಂಚಿಕೊಂಡ ನಿಮಗೆ.