ಸಿಕ್ಕ ಒಂದು ಪತ್ರ

ಸಿಕ್ಕ ಒಂದು ಪತ್ರ

ನಾನು ಹುಟ್ಟಿದ್ದು 1974 ರಲ್ಲಿ ಅಂತೆ. ಆಗಿನದ್ದೇನು ಹೆಚ್ಚಿನ ನೆನಪಿಲ್ಲ. ನೆನಪಿನಲ್ಲಿರುವುದೆಂದರೆ ಒಂದು ಬಣ್ಣದ ತೊಟ್ಟಿಲು, ನನ್ನನ್ನು ಎತ್ತಿ ಇಡುವಾಗ ಕೇಳುತ್ತಿದ್ದ ಬಳೆಗಳ ಸದ್ದು, ಬಂದು ಹೋಗುವರೆಲ್ಲರ ಕಾಲುಗಳು. ಆಗ ನಾನು ಎಲ್ಲವನ್ನು ಬರೀ ನೋಡುತ್ತಿದ್ದೆ, ಕೆಲವೊಮ್ಮೆ ಕೇಳುತ್ತಿದ್ದೆ. 1983 ಜನವರಿ 1 ನೇ ತಾರೀಖು ಎಲ್ಲರೂ ಏನೋ ಸಂಭ್ರಮದಲ್ಲಿ ಇರಬೇಕಾದರೆ ನನಗೆ ಸ್ವಲ್ಪ ಸ್ವಲ್ಪವಾಗಿ ಈ ಜಗತ್ತಿನ ಅರಿವಾಗಿ ತೊಡಗಿತು. ಕಾಲ ವರುಷಗಳ ಲೆಕ್ಕದಲ್ಲಿ ಕಳೆಯುತ್ತಿದೆ. ಆಗಲೇ ಸಾಕಷ್ಟು ದಾರಿ ಕ್ರಮಿಸಿಬಿಟ್ಟಿದೆ. ನಾನೆಲ್ಲೋ ಮಧ್ಯದಲ್ಲಿ ಬಂದು ಸೇರಿ ಕೊಂಡಿದ್ದೇನೆ. ಇಂದು ಮತ್ತೊಂದು ಹೊಸ ವರುಷದ ಮೊದಲ ದಿನ. ಹೀಗೆ ಕೆಲವು ವಿಚಾರಗಳ ಜ್ಞಾನೋದಯವಾಯಿತು.

ಆದರೆ ನನಗೆ ನಿಂತ ನೆಲವು ಕೂಡ ಆಶ್ಚರ್ಯ ಅನಿಸುತ್ತಿತ್ತು. ಈ ಗಟ್ಟಿ ವಸ್ತು ಯಾವುದೆಂದು ಮುಟ್ಟಿ ಮುಟ್ಟಿ ನೋಡುತ್ತಿದ್ದೆ. ಈ ಅಪರಿಚಿತ ಪರಿಸರದಲ್ಲಿ ನನಗೆ ನನ್ನ ಅಪ್ಪ ಅಮ್ಮನ ಜೊತೆಯಿತ್ತು. ಹೇಗೋ ಈ ಬಿಗಿಯಾದ ಎಳೆಯಲ್ಲಿ ಸಿಕ್ಕಿ ಕೊಂಡೆನೆನಿಸಿತು. ನಾನು ಎಲ್ಲಿಂದಲೋ ಬಂದೆ ಈ ಜಗತ್ತಿಗೆ ಎಂದು ಯಾವಾಗಲೂ ಭಾಸವಾಗುತ್ತಿತ್ತು. ಆದರೆ ನನ್ನ ಮೂಲ, ದಿನ ಕಳೆದಂತೆ ಮಾಸತೊಡಗಿತು. ನೆನಸಿಕೊಳ್ಳಲು ಯತ್ನಿಸಿದಾಗ ಭ್ರಮೆ , ಕಲ್ಪನೆ ಸೇರಿ ನಿಜವಾದ ಮೂಲ ತಪ್ಪಿಯೇ ಹೋಗುತ್ತಿತ್ತು. ಕೊನೆಗೆ ಒಂದು ದಿನ ನಾನು ನನ್ನ ಭೂತ ಕಾಲ ನೆನಪಿಸಿಕೊಳ್ಳುವುದನ್ನು ನಿಲ್ಲಿಸಿಬಿಟ್ಟೆ. ಅಲ್ಲಿಂದ ಮನಸು ಸ್ವಲ್ಪ ಶಾಂತವಾಯಿತು ಆದರೆ ನನ್ನೊಳಗೇ ಒಂದು ನಿಗೂಢತೆಯನ್ನು ನನಗೆ ಸಿಗದಂತೆ ಬಚ್ಚಿಟ್ಟ ಹಾಗಾಯಿತು.

ಇದಾಗಿ ಸ್ವಲ್ಪ ವರುಷಗಳಲ್ಲಿ ಸುತ್ತ ಮುತ್ತಲಿನ ಬಗೆಗೆ ಯೋಚಿಸ ತೊಡಗಿದೆ. ಮೊದಲಿಗೆ ಇವರೆಲ್ಲಾ ಏಕೆ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮೂಡುತಿತ್ತು. ಏನೋ ಆಗಬೇಕಾಗಿದೆ ಯಾರೋ ಮುನ್ನೆಡೆಸುತ್ತಿದ್ದಾರೆ ಎಂದು ನಂಬಿಕೊಂಡೆ, ಬೇರಲ್ಲೂ ಹೋಗಲು ಆಯ್ಕೆಯೂ ಇರಲಿಲ್ಲ. ನಂತರ ಸಾವಿರ ಸಾವಿರ ಮುಖಗಳು ಕಾಣ ತೊಡಗಿದವು. ಅಚ್ಚರಿಯೇನಂದರೆ ಎಲ್ಲಾ ಮುಖದಲ್ಲೂ ಕಣ್ಣು, ಕಿವಿ, ಬಾಯಿಯೇ ಇದ್ದರೂ ಎಲ್ಲವು ವಿಭಿನ್ನವಾಗಿದ್ದವು.

ಎಲ್ಲರೂ ನನ್ನ ಹಾಗೆ ಇಲ್ಲಿ ಗೊತ್ತು ಗುರಿ ಇಲ್ಲದೆ ಬಂದಿದ್ದಾರೆ ಅನಿಸಿತು. ಆದರೆ ಯಾರ ಒಳಗೂ ಅರ್ಥವಾಗುತ್ತಿರಲಿಲ್ಲ. ಎಲ್ಲರೂ ನನ್ನ ಕ್ರಿಯೆಗೆ ಸ್ಪಂದಿಸುವ ಪ್ರತಿಕ್ರಿಯೆಯಾಗಿದ್ದರಷ್ಟೆ . ನನ್ನ ಪ್ರಪಂಚದಲ್ಲಿ ನಟಿಸಲೆಂದು ರೂಪುಗೊಂಡ ಪಾತ್ರಗಳು ಎಂದೆನಿಸಿತು. ಅದಕ್ಕೆ ಒಮ್ಮೆ ತೀರ್ಮಾನಿಸಿ ಬಿಟ್ಟೆ ಎಲ್ಲರೂ ಮಿಥ್ಯ, ಯಾವುದೋ ಸತ್ಯದಂತೆ ಕಾಣುವ ಬಿಂಬವೆಂದು.

ಅಷ್ಟರಲ್ಲೇ ಈ ಹುಡುಕಾಟಕ್ಕೆ ಬಲವಾದ ಒಂದು ದಾರಿ ಸಿಕ್ಕಿತು. ಅದೇ ಎಲ್ಲರೂ ಕೈ ಮುಗಿಯುತಿದ್ದ ದೇವರು. ಅಲ್ಲಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೇವರಲ್ಲೇ ಹುಡುಕಲು ಶುರು ಮಾಡಿದೆ. ಆದರೆ ಈಗ ಉಲ್ಲೇಖಿಸಬೇಕಾದ ಬೆಳವಣಿಗೆ ಏನಾಯಿತೆಂದರೆ, ಅಕ್ಕ ಪಕ್ಕದಲ್ಲಿದ್ದ ಜನರು ಅಳಲು,ನಗಲು,ಕೋಪಿಸಿಕೊಳ್ಳಲು, ಉದ್ವೇಗ ಪಡಲು ಅಭ್ಯಾಸ ಮಾಡಿಕೊಂಡಿದ್ದರು. ನನಗೆ ಮನಸ್ಸಿನಲ್ಲಿ ಭಾವನೆಗಳೇ ಬರುತ್ತಿರಲಿಲ್ಲ. ಆದರೆ ಒಮ್ಮೆ ಅವರು ನಕ್ಕಾಗ ನಾನು ನಕ್ಕೆ. ಆಗ ನನಗೆ ಬದುಕುವುದು ಸರಾಗ ಎನಿಸುವಂತ ಅನುಭವವಾಯಿತು. ಅಲ್ಲಿಂದ ನಾನು ಈ ಸುಲಭ ದಾರಿಗಿಳಿದೆ. ಎಲ್ಲಾ ಭಾವನೆಗಳನ್ನು ನಕಲು ಮಾಡ ತೊಡಗಿದೆ. ನಾನು ಕೂಡ ಉತ್ತಮ ಪ್ರತಿ ಸ್ಪಂದನೆ ನೀಡುವ ಪ್ರತಿಕ್ರಿಯೆಯಾಗಿ ಬೆಳೆಯ ತೊಡಗಿದೆ. ಈ ಅಂಶ ನನ್ನನ್ನು ಸಮಾಜದೊಳಗೆ ಸೇರಿಸಿತು. ನನ್ನ ಭೂತ ಕಾಲವನ್ನು ಮರೆತ ಹಾಗೆ ನಾನು ವರ್ತಮಾನವನ್ನು ಮರೆತು ಎಲ್ಲರಂತೆ ಬದುಕಲು ಅನುಮೋದಿಸಿ ತೊಡಗಿದೆ.

ಆದರೆ ಅಂತರ್ಗತವಾಗಿ ನನ್ನ ಹುಡುಕಾಟ ಇನ್ನು ಮುಂದುವರಿದಿತ್ತು. ಆಗ ನಾನು ಎಲ್ಲರ ಮಾತಿನಲ್ಲಿ ಈ ಸೃಷ್ಟಿಯ ಬಗೆಗೆ ಏನಾದರೂ ಮಾಹಿತಿ ಇರಬಹುದೆಂದು ಹುಡುಕ ತೊಡಗಿದೆ. ಆದರೆ ಆ ಬಗ್ಗೆ ಏನೂ ಮಾತನಾಡುತ್ತಿರಲಿಲ್ಲ, ಅದೊಂದು ಸದಾ ಇದ್ದ ಸಾಮಾನ್ಯ ಜ್ಞಾನದಂತಿತ್ತು. ನನಗೆ ಆ ಜ್ಞಾನ ಇರದಿರಬಹುದು ಎಂದು ಎಂದೋ ಬರೆದಿಟ್ಟ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಆದರೆ ಪುನಃ ಅದು ಅಗಾಧವಾದ ವಿಚಾರಗಳನ್ನು ತೆರೆದಿಟ್ಟಿತು ಇದರಲ್ಲಿ ಯಾವುದು ಬೇಕು? ಯಾವುದು ಸತ್ಯ? ಎಂದು ಇನ್ನಷ್ಟು ಗೋಜಲಾಯಿತು. ದೇವರು ಎಂದು ನಂಬಿ ಬಹಳಷ್ಟು ಪ್ರಶ್ನೆಗಳನ್ನೇ ಮನಸಿನಿಂದ ತೆಗೆದು ಹಾಕಿದೆ.

ಇಷ್ಟೆಲ್ಲಾ ಆಗಬೇಕಾದರೆ ಹುಡುಕಾಟ ಮಂಕಾಗಿ ತೊಡಗಿತು. ನಾನು ಕೂಡ ಎಲ್ಲರಂತೆ ಬಾಳಿ ಬದುಕ ಬೇಕೆನಿಸಿತು. ಅನಿಶ್ಚಿತ ಬದುಕು ಎಂದು ಸಂಸಾರ ಮಾಡಿಕೊಂಡು ಗಟ್ಟಿಯಾಗಿ ಕುಳಿತು ಕೊಂಡೆ. ಅಪ್ಪ ಅಮ್ಮ ಹೆಂಡತಿ ಮಗು ಎಂದು ಅಂಟಿಕೊಂಡು ಬದುಕನ್ನು ಇನ್ನಷ್ಟು ಸ್ಪಷ್ಟ ಮಾಡಿಕೊಳ್ಳಲು ಯತ್ನಿಸಿದೆ. ಕೆಲವೊಮ್ಮೆ ಸಂಸಾರ,ಸಮಾಜವೇ ಸತ್ಯ ನನ್ನ ಹುಡುಕಾಟ ಮೂರ್ತವಲ್ಲದ ಮರೀಚಿಕೆ ಅನಿಸಿತು. ನನ್ನ ಜೀವನದ ಅಂತಿಮಕಾಲ ಸನ್ನಿಹಿತವಾಗಿದೆ. ಈಗಲೂ ಕೂಡ ಪರಲೋಕದ ಬಗೆಗೆ ನನ್ನ ಕುತೂಹಲ ಜೀವಂತವಾಗಿದೆ. ಮತ್ತೆ ಇಲ್ಲಿಗೆ ಬಂದಾಗ ನನ್ನ ಜೀವನ ಹೀಗೆಯೇ ಪುನಾರಾವರ್ತನೆಯಾಗಬಾರದೆಂದು ಈ ಜ್ಞಾನವನ್ನು ಇಟ್ಟುಕೊಂಡು ಸಾಯಬೇಕಾಗಿದೆ. ಆದರೆ ಹೇಗೆ? ಏನನ್ನು ಸಾಯುವಾಗ ತೆಗೆದುಕೊಂಡು ಹೋಗಲಾಗುವುದಿಲ್ಲ. ಅದಕ್ಕೆಂದೇ ಈ ಪತ್ರದಲ್ಲಿ ಬರೆದಿಟ್ಟಿರುವೆ. ಇದು ಯಾರಿಗೇ ಸಿಕ್ಕರೂ ಇದನ್ನು ನನಗೆ ತಲುಪಿಸುವ ಪ್ರಯತ್ನವನ್ನು ದಯವಿಟ್ಟು ಮಾಡಿ. ನಾನು ಎಲ್ಲಾದರೂ ಎಲ್ಲರಂತೆ ಮತ್ತೆ ಹುಟ್ಟಿರುತ್ತೇನೆ.

Rating
No votes yet

Comments