ಯಾರೋ ಕರೆದ ಹಾಗೆ... ಏನೋ ಹೇಳಿದ ಹಾಗೆ...

ಯಾರೋ ಕರೆದ ಹಾಗೆ... ಏನೋ ಹೇಳಿದ ಹಾಗೆ...

ಏನೋ ಓದುತ್ತಲೊ ಬರೆಯುತ್ತಲೊ ಅಥವಾ ಏನೂ ಮಾಡದೆ ಸುಮ್ಮನೆ ವಿಶ್ರಮಿಸುತ್ತಲೊ, ಇಲ್ಲವೆ ಯಾವುದೊ ಅಂತರಂಗದ ವಾಗ್ವಾದದಲ್ಲಿ ಪರ ವಿರೋಧಗಳ ಪಾತ್ರ ವಹಿಸುತ್ತ ಮಂಡಿಗೆ ತಿನ್ನುತ್ತಿರುವ ಹೊತ್ತೊ, ಅಥವಾ ಅದು ಬಿರು ಬಿಸಿಲಿನಲಿ ಬೆವರ ಧಾರೆಯೆರೆದು ಬಳಲಿಸುತ್ತಿರುವ ಹೊತ್ತೊ, ಮುಂಜಾವಿನ ಮೊದಲೆ ವಿನಾಕಾರಣ ಎಚ್ಚರವಾಗಿ ವಿಸ್ಮೃತಿಯ ವಿಸ್ಮಯದಲ್ಲಿ ಜಳಕಿಸುತಲೆ ತಲ್ಲೀನವಾದ ಹೊತ್ತೊ, ದಿನದೆಲ್ಲ ಜಂಜಾಟ ಮುಗಿಸಿ ಒಂದು ಕಾಫಿ ಲೋಟ ಹಿಡಿದು ಕುರ್ಚಿಗೊರಗಿದ ವಿರಾಮದ ಹೊತ್ತೊ, ದಿನದೆಲ್ಲ ಶ್ರಮದ ಲೆಕ್ಕ ಚುಕ್ತಾ ಮಾಡಲು ಶಯನೋತ್ಸವಕೆ ಅನುವಾಗುವ ಮೊದಲು ಪುಸ್ತಕೊವೊಂದನು ಹಿಡಿದಾ ಹೊತ್ತೊ..... ಒಟ್ಟಾರೆ ಯಾವುದೊ ಒಂದು ಕ್ರಿಯಾನಿರತ ಸಂಸರ್ಗದ ಹೊತ್ತಲ್ಲಿ ಏನೊ ಅರಿವಾಗದ ಏಕಾಗ್ರತೆ, ಮನ ಪದರದಲ್ಲಿ ಪ್ರಪುಲ್ಲತೆಯನ್ನೊ, ಪ್ರಶಾಂತತೆಯನ್ನೊ ಆರೋಪಿಸಿದಂತಹ ಅನುಭೂತಿ. ಆ ಭಾವದ ಅನುಭಾವವನ್ನು ಅನುಭವವೆಂದನುಭವಿಸಿ ವಿವರಿಸಲಾಗದಂತೆ, ಅನುಭವವೆ ಗಮ್ಯಕೆ ನಿಲುಕದ ಚಮತ್ಕಾರವಾದಂತೆ ಪ್ರಕ್ಷೇಪವಾದ ಸಮಯ... ಅದೊಂದು ಅರೆಗಳಿಗೆ, ಅರೆಕ್ಷಣ ಎಲ್ಲೊ ಇರುವಂತಹ , ತೇಲಿ ಹೋದಂತಹ, ಇಡಿ ಲೌಕಿಕ ಪ್ರಪಂಚದಿಂದ ಬೇರೆಯೆ ಆದಂತ ಅಲೌಕಿಕವಾದ ದಿವ್ಯ ಭಾವ....

ಆಗ ಇದ್ದಕ್ಕಿದ್ದಂತೆ ತಟ್ಟನೆ ಕಿವಿ ನಿಮಿರಿದ ಹಾಗೆ... ಕಣ್ಣಿಗೆ ಕಾಣದ ಯಾವುದೊ ಅಲೆಗಳ ಕ್ಷೀಣ ಪ್ರವಾಹವೊಂದು ಸದ್ದಿನ ರೂಪದಲ್ಲಿ ಸಾಂದ್ರವಾಗಿ ಕೇಂದ್ರಿಕೃತಗೊಳ್ಳುತಿರುವ ರೀತಿಯ ಕಲ್ಪನೆ... ಹತ್ತಿರದಲ್ಲಿ ಯಾವ ಸದ್ದೂ ಇರದ ನಿಶ್ಯಬ್ದತೆ ಸುತ್ತಲೂ ಹಾಸಿಕೊಂಡು ಬಿದ್ದಿದ್ದರೂ, ಎಲ್ಲಿಂದಲೊ ತೇಲಿ ಬಂದಂತೆ ಘಂಟಾನಾದದ ತೆಳುವಾದ ಅಲೆಯೊಂದು ಕಿವಿಯ ಹತ್ತಿರಕ್ಕೆ ಬಂದು 'ಗುಂಯ್'ಗುಟ್ಟಿದ ಹಾಗೆ.. ಅಷ್ಟಕ್ಕೆ ನಿಲ್ಲದೆ, ತೀರಾ ಮಂದ್ರ ಸ್ಥಾಯಿಯಲ್ಲಿ ಆರಂಭವಾದ ಲಹರಿ ಕ್ರಮಕ್ರಮೇಣ, ಹಂತಹಂತವಾಗಿ ಶಕ್ತಿಯನ್ನು ಶೇಖರಿಸಿಕೊಂಡಂತೆ ಗಟ್ಟಿಯಾಗುತ್ತಾ ಹೋಗುವ ಅನುರಣಿತ ದನಿ... ಕ್ಷೀಣದಿಂದ ತಾರಕಕ್ಕೇರುವ ದನಿ, ಹಾಗೆ ಮುಂದುವರೆದರೆ ಸಿಡಿಲ ಘೋಷವೆ ಆಗಿಬಿಡುವುದೋ ಏನೊ ಎನ್ನುವ ದಿಗಿಲುಟ್ಟಿಸುವ ಕಳವಳ... ಅದೇನು ನಿಜವಾದ ದನಿಯೊ, ಮನೋಭ್ರಮೆಯೊ ಹೇಳಲಾಗದ ಅತಂತ್ರ ಸ್ಥಿತಿ... ಏಕೆಂದರೆ ಆ ಕೇಳುತ್ತಿರುವ ದನಿ ಸ್ಪಷ್ಟವಾಗಿದ್ದರೂ ಅದರ ಸದ್ದಾಗಲಿ, ಶಬ್ದವಾಗಲಿ ಜಾಗೃತ ಪ್ರಪಂಚದಲ್ಲಿ ಭೌತಿಕವಾಗಿ ಅನಾವರಣಗೊಂಡಂತೆ ಕಾಣುತ್ತಿಲ್ಲ... ವಿಚಿತ್ರವೆಂದರೆ ಅಷ್ಟು ಸುಸ್ಪಷ್ಟವಾಗಿ ಕೇಳುತ್ತಿರುವ ದನಿ, ವಾಸ್ತವದಲ್ಲಿ ಪ್ರಕ್ಷೇಪಿಸಿಕೊಳ್ಳದೆ ಬರೀ ಸ್ವಾನುಭವಕ್ಕೆ ಮಾತ್ರ ದಕ್ಕುತ್ತಿದೆಯೆಂಬ ಅರಿವು ಅಂತರಂಗದದಾವುದೊ ಮೂಲೆಗೆ ವೇದ್ಯವಾಗುತ್ತಿದೆ... ಆ ಗೊಂದಲ, ಸಂಶಯಗಳ ತಾಕಲಾಟದಲ್ಲಿರುವ ಬಾಹ್ಯ ಮನಕ್ಕರಿವೆ ಬಾರದ ಹಾಗೆ, ಅದರೊಳಗೆ ಜಾರಿ ಹೋಗಿ ಕುತೂಹಲ - ಉತ್ಸಾಹದಿಂದ ಅನ್ವೇಷಣೆ ನಡೆಸಿರುವ ಒಳಮನದ ವ್ಯಾಪಾರ ಪ್ರಜ್ಞೆಗೆ ನಿಲುಕದ ಸರಕಿನಂತೆ ಕಾಣುತ್ತದೆ...

ಆದರೆ ಆ ಹೊತ್ತಿಗಾಗಲೆ ಸಂಧರ್ಭದ ಸಂಪೂರ್ಣ ಹತೋಟಿಯನ್ನು ಕೈಗೆತ್ತಿಕೊಂಡ ಒಳಮನಸಿನ ಚಟುವಟಿಕೆ ತನ್ನಾವುದೊ ಮೂಲೆಯ ನಿಷ್ಕ್ರಿಯವಾಗಿದ್ದ ಕ್ರಿಯಾಶೀಲತೆಗೆ ಕೀಲಿ ಕೊಟ್ಟಂತೆ ಮಿಂಚಿನ ಸಂಚಾರದಲ್ಲಿ ನಿರತ... ಏನೇನೊ ಹೊಸತರ, ಹೊಸತನ ಆವರಿಸಿಕೊಂಡ, ಅಪರಿಚಿತತೆಯೆಲ್ಲ ಮಾಯವಾದ ಸುಪರಿಚಿತವಾದ ಭಾವ. ಆ ಗಳಿಗೆಯಲ್ಲಿ ಬಾಹ್ಯದಲ್ಲಿ ತನು ಏನು ಮಾಡುತ್ತಿದೆಯೊ - ಓದೊ, ವಿರಾಮವೊ, ಕಾಫಿಯ ಕುಡಿತವೊ, ಮಾತಾಟವೊ - ಅದೆಲ್ಲವು ಹಿಂದೆಂದೊ ಒಮ್ಮೆ ಅದೇ ಕ್ರಮದಲ್ಲಿ, ಅದೇ ರೀತಿಯಲ್ಲಿ ನಡೆದಿದ್ದಂತೆ ಮಸುಕು ಭಾವ. ಆಗ ನಡೆದಿದ್ದೆ ಈಗ ಮತ್ತೆ ಪುನರಾವರ್ತನೆಯ ರೂಪದಲ್ಲಿ ಘಟಿಸುತ್ತಿದೆಯೆಂಬ ವಿಚಿತ್ರ ಅರಿವು... ಅದೇ ಪುಟದ, ಅದೇ ಸಾಲು ಓದಿದ್ದಂತೆ, ಅದೇ ಮಾತು ಸಾಕ್ಷಾತ್ ಅದೇ ರೀತಿಯೆ ಆಡಿದ್ದಂತೆ, ಅದೇ ಜಾಗದಲ್ಲಿ ಅದೇ ರೀತಿಯಲ್ಲಿ ಕೂತಿದ್ದಂತೆ - ಅದೆ ತಾರಸಿ, ಅದೇ ಹೆಂಚಿನ ಮನೆ, ಅದೇ ಗೋಡೆ, ಅದೇ ಹೆಣ್ಣು ಗಂಡುಗಳು - ಕೊನೆಗೆ ತೊಟ್ಟಿದ್ದ ಅದೆ ಬಟ್ಟೆಯೂ ವಿಸ್ಮಯದ ಕಡಲಲ್ಲಿ ಮುಳುಗಿಸೇಳಿಸುತ್ತಿದ್ದಂತೆ ಅನಿಸಿಕೆ, ತದ್ಭಾವ. ಆ ಕ್ಷಣದ ಆ ನಂಬಿಕೆಯ ತೀವ್ರತೆ ಎಷ್ಟೆಂದರೆ - ಅದು ಸತ್ಯವೊ, ಸುಳ್ಳೊ ಎಂಬ ಅನುಮಾನ ಕೂಡ ಕಾಡದಷ್ಟು. ಅನುಮಾನಗಳಿಗೆಡೆಯಿಲ್ಲದೆ ಅನಿರ್ವಚನೀಯತೆಯ ಪರಮ ದರ್ಶನವಾದ ಅನಿಸಿಕೆ...

ಆ ಹೊತ್ತಿನಲ್ಲೆ ಮತ್ತೊಂದು ವಿಸ್ಮಯದ ಜಾದೂವು ಸಹ ಗಮ್ಯಕ್ಕೆ ನಿಲುಕಿಯೂ ನಿಲುಕದಂತೆ ಭಾಸವಾಗುವ ಧೂರ್ತ - ಅಲ್ಲಿಯ ತನಕ ಆವರಿಸಿಕೊಂಡಿದ್ದ 'ಹಿಂದೆ ನಡೆದಿತ್ತೆಂಬ' ರೀತಿಯ ಪರಿಚಿತ ಪರಿಧಿಯನ್ನು ದಾಟಿಸಿ, ಆ 'ಹಿಂದೆ' ಯ ಬದಲಿಗೆ ಇಂದಿನ್ನು ನಡೆದಿಲ್ಲದ, ಇನ್ನೇನೇನು ನಡೆದೀತೆಂಬ ಚಿತ್ರಗಳನ್ನು ಮೂಡಿಸುವ ' ಅಪರಿಚಿತ ಬದಿ'. ಒಂದು ರೀತಿಯಲ್ಲಿ ಬಾಹ್ಯದಲ್ಲಿ, ಇಂದೇನು ನಡೆಯಲಿದೆ ಎನ್ನುವುದನ್ನು ಭವಿಷ್ಯ ಹೇಳುವ ರೀತಿಯಲ್ಲಿ ಕಟ್ಟಿಕೊಡುವ ಮಸುಕು ಮಸುಕಾದ ಅಸ್ಪಷ್ಟ ಚಿತ್ರಗಳು... ಯಾವಾಗ ಈ ಪರಿಧಿ ಭವಿಷ್ಯತ್ತಿನೆಡೆಗೆ ತನ್ನ ಕೈ ಚಾಚಿ ವಿಸ್ತಾರವಾಗಲ್ಹವಣಿಸತೊಡಗುತ್ತದೆಯೊ, ಆಗ ಅಲ್ಲಿಯವರೆಗೆ ಅಸಹಾಯಕನಂತೆ ಬಿದ್ದಿದ್ದ ಬಾಹ್ಯ ಪ್ರಜ್ಞೆಯ ವಕ್ತಾರ ಇದ್ದಕ್ಕಿದ್ದಂತೆ ಗಾಬರಿಯಿಂದ ಮೇಲೆದ್ದವನಂತೆ ಮೂಗು ತೂರಿಸತೊಡಗುತ್ತಾನೆ. ಅಂತರಾತ್ಮಕ್ಕೆ ನೇರವಾಗಿ ಏನೂ ಕಾಣದಿದ್ದರೂ ಅಡ್ಡಿಯನ್ನೊಡ್ಡುವ ಬಾಹ್ಯ ಪ್ರಜ್ಞೆಯ ಕಂಪನಗಳು ಒಳಗಿನ ಪ್ರಶಾಂತ ಕಂಪನಗಳನ್ನು ಪ್ರಕ್ಷುಬ್ದಗೊಳಿಸಿ ಅಸ್ತ್ಯವ್ಯಸ್ತಗೊಳಿಸುತ್ತಿರುವುದು ಗಮನಕ್ಕೆ ಬಂದರೂ ಅದು ಅಸಹಾಯಕ. ಅದರ ನಿಯಂತ್ರಣ ವ್ಯಕ್ತಿಗತಾತ್ಮದ ಹೊಣೆಯೆ ಹೊರತು ನಿರ್ಲಿಪ್ತ ಅಂತರಾತ್ಮದ್ದಲ್ಲ. ಹತೋಟಿಯಲಿದ್ದು ಪ್ರಶಾಂತವಾಗಿರುವ ಚಿತ್ತ ಪಟಲದಲ್ಲಿ ಅದು ಭೂತ, ಪ್ರಸ್ತುತ, ಭವಿತಗಳನ್ನು ಪ್ರಕ್ಷೇಪಿಸಬಲ್ಲುದೆ ಹೊರತು, ಜಂಜಾಟದಲ್ಲಿ ಸಿಲುಕಿ ಹೋರಾಡದು. ಬಾಹ್ಯ ಕಂಪನದ ಸತತ ವರ್ಷೋದ್ಘಾತ ಹೆಚ್ಚಿದಂತೆ ಆ ಆಂತರ್ಯ ಮತ್ತೆ ನಿಷ್ಕ್ರಿಯತೆಯೆಡೆಗೆ ಸಾಗುತ್ತಿರುವುದು ಅನುಭವಕ್ಕೆ ಬರಲಾರಂಭಿಸುತ್ತದೆ. ತಾರ್ಕಿಕವಾಗಿ ಅನಾವರಣಗೊಳ್ಳುತ್ತಿದ್ದ ಭವಿತ ಸಹ ಕೊಂಡಿಗಳಿಲ್ಲದ ಅತಾರ್ಕಿಕ ಸಂಕಲನದಂತೆ ಅನಿಸಿಬಿಡುತ್ತದೆ. ಮೊದಲ, ಮಧ್ಯದ, ಕೊನೆಯ ಯಾವ್ಯಾವುದೊ ದೃಶ್ಯಗಳೆಲ್ಲ ಮಿಶ್ರವಾಗಿ, ಕಲಸುಮೇಲೋಗರವಾಗಿ ಅಲ್ಲಿಯವರೆಗೂ ಅದನ್ನು ಪರಮಾನಂದಲಹರಿಯೆಂಬಂತೆ ಅನುಭವಿಸಿ, ಆನಂದಿಸುತ್ತಿದ್ದ ಮಸ್ತಿಷ್ಕದ ಇಂದ್ರಿಯ ಪ್ರಜ್ಞೆಗಳು 'ಇದೇನಿದು ಅಸಂಗತ' ಎನ್ನುವ ಹಾಗೆ ಎಚ್ಚರಗೊಳ್ಳತೊಡಗುತ್ತವೆ. ಆ ಎಚ್ಚರ ತುರ್ಯಾನುಭವದಲಿದ್ದ ಮನವನ್ನು ಯಾವುದೊ ಸ್ವಪ್ನ ಲೋಕದಿಂದಿಳಿಸಿ ತಟ್ಟನೆ ಜಾಗೃತಾವಸ್ಥೆಗೆ ತಂದಿರಿಸಿಬಿಡುತ್ತದೆ - ವಾಸ್ತವ ಪರಿಸರದ ಅನುಭೂತಿಗಳನ್ನೆಲ್ಲ ಮತ್ತೆ ಕ್ರೋಢಿಕರಿಸಿ. ಯಾವುದೊ ಉನ್ಮೇಷದಿಂದ ಮತ್ತೆ ಲೌಕಿಕಕಿಳಿದ ಅಲೌಕಿಕ ಅನುಭವದ ನೆರಳು ಮಾತ್ರ 'ಇದೇನು, ಕನಸೊ, ನನಸೊ?' ಎಂಬ ಅನುಮಾನದಲ್ಲೆ ಆದ ಅನುಭವವನ್ನು ಮರಳಿ ನೆನಪಿನ ಚೀಲದಿಂದೆತ್ತಿ ಅದೆ ರೀತಿಯಲ್ಲಿ ಮರಳಿ ಕಟ್ಟುವ ವಿಫಲ ಯತ್ನ ನಡೆಸಿರುತ್ತದೆ...ಎಲ್ಲವೂ ಅಯೋಮಯ, ಗೊಂದಲಮಯ...

ಯಾರೋ ಕರೆದ ಹಾಗೆ..ಏನೋ ಹೇಳಿದ ಹಾಗೆ... ನೆನಪಿನೋಲೆ ಕೊಟ್ಟು ಹೋದ ಹಾಗೆ.....

ಎಂದಾದರೂ, ನಿಮಗೂ ಹಾಗನಿಸಿದ್ದಿದೆಯೆ ?

- ನಾಗೇಶಮೈಸೂರು
 

Comments

Submitted by H A Patil Sat, 10/10/2015 - 19:47

ನಾಗೇಶ ಮೈಸೂರುರವರಿಗೆ ವಂದನೆಗಳು
’ಯಾರೋ ಕರೆದ ಹಾಗೆ ಏನೋ ಹೇಳಿದ ಹಾಗೆ ನೆನಪಿನೋಲೆ ಕೊಟ್ಟು ಹೋದ ಹಾಗೆ’ ಹೌದು ನನಗೂ ಅನೇಕ ಸಾರಿ ಅನ್ನಿಸಿದೆ ಮನದಾಳಕಿಳಿದು ಕಾಡುವ ಲೇಖನ ಮತ್ತೆ ಮೆತ್ತೆ ಓದ ಬೇಕೆನಿಸುವ ಬರಹ, ಯಾಕೋ ನಾಗೇಶ ರವರು ಗಂಭೀರ ಯೋಚನೆಯ ಮನಸ್ತಿತಿಗಿಳಿದು ಬರೆದಿದ್ದೀರಿ ಎನಿಸುತ್ತದೆ, ದನ್ಯವಾದಗಳು.

Submitted by nageshamysore Sat, 10/10/2015 - 20:38

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಮಾತು ನಿಜ - ಇದು ಪೂರ್ತಿ ಗಂಭೀರ ಸ್ಥಿತಿಯ ಚಿಂತನೆಗಿಳಿದಾಗ ಬರೆದ ಬರಹ. ಇದು ಬರೆದು ಈಗಾಗಲೆ ಒಂದು ವರ್ಷದ ಮೇಲಾಗಿತ್ತು (ಪರಿಭ್ರಮಣ ಕಾದಂಬರಿಯಲ್ಲಿ ಇಂತದ್ದೆ ಸ್ತರದ ಗಂಭೀರ ವಸ್ತು ವಿಷಯಗಳನ್ನು ಬರೆಯುತ್ತಿದ್ದ ಹೊತ್ತಲ್ಲಿ ಹೊಸೆದದ್ದು) - ಈಗ ತುಸು ತಿದ್ದಿ ಪ್ರಕಟಿಸಿದೆನಷ್ಟೆ.

Submitted by santhosha shastry Sun, 10/11/2015 - 22:48

ರಾಯರಿಗೆ ಎರಡೆರಡು ಬಾರಿ ಧನ್ಯವಾದಗಳು. ಮೊದಲನೇದು, ಬಹಳ‌ ಸೊಗಸಾಗಿ ನಮ್ಮ‌ ಮಸ್ತಿಷ್ಕದೊಳಗಣ‌ ನಮ್ಮದೇ ವಿವಿಧ‌ ಪಾತ್ರಗಳ‌ ಹೊಡೆದಾಟದ‌ ಬಗ್ಗೆ ತಿಳಿಸಿದ್ದಕ್ಕೆ. ಎರಡನೆಯದಾಗಿ, ನನಗೂ ಇಂಥ‌ ಅನುಭವಗಳು ಸಾಕಷ್ಟು ಸಾರಿ ಆಗಿದ್ದು, ಇವು ನನ್ನ‌ "ಹುಚ್ಚಿನ‌" ಪರಿಣಾಮವೇನೋ ಅಂತ‌ ಯಾರೊಂದಿಗೂ ಹೇಳಿಕೊಳ್ಳುವ‌ ಧೈರ್ಯವಾಗಿದ್ದಿತಿಲ್ಲ‌. ಈಗ‌ ಇದು ಹುಚ್ಚಲ್ಲ‌ ಅನ್ನುವ‌ ಸಮಾಧಾನ‌ ತಂದಿದ್ದಕ್ಕೆ.
ರಾಯರದ್ದು, ಗಂಭೀರ‌ ಬರವಣಿಗೆಯಲ್ಲೂ ಚೇತೋಹಾರೀ ಶೈಲಿ. ತುಂಬಾ ಥ್ಯಾಂಕ್ಸ್.

Submitted by nageshamysore Mon, 10/12/2015 - 03:21

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನನಗೂ ಇದು ಅನೇಕರಿಗೆ ಅನೇಕ ಬಾರಿ ಆಗಿರಬಹುದಾದ ಅನುಭವ ಅನ್ನಿಸ್ತು - ವಿವರಣೆ ಕೊಡೋಕೆ ಅಥವ ವಿವರಣೆಯಲ್ಲಿ ಹಿಡಿಯೋಕೆ ಕಷ್ಟ ಸಾಧ್ಯ ಅನಿಸಿದರು, ನೋಡುವ ಎಂದು ಒಮ್ಮೆ ಆ ತರದ ಅನುಭವವಾದ ತರುವಾಯದಲ್ಲೆ ಪ್ರಯತ್ನಿಸಿದ್ದರ ಫಲ ಈ ಬರಹ. ಅದರ ಸಂಪೂರ್ಣ ವಿಶ್ವರೂಪವನ್ನು ಅದರೆಲ್ಲ ವೈವಿಧ್ಯತೆಯೊಡನೆ ತರಲಾಗದಿದ್ದರು, ಮುಖ್ಯ ತುಣುಕುಗಳು ಪ್ರಸ್ತಾಪಿತಗೊಂಡಿವೆಯೆನಿಸುತ್ತದೆ. ಈ 'ಸೀರಿಯಸ್ ಶೈಲಿಯು' ಚೆನ್ನಾಗಿದೆಯೆಂದದ್ದಕ್ಕೆ ನನ್ನಿ. ನನಗೆ ವಿವಿಧ ಗುಂಪುಗಳಿಗೆ, ನಿರೀಕ್ಷೆಗಳಿಗೆ ಹೊಂದುವಂತೆ ವಿವಿಧ ಸ್ತರಗಳಲ್ಲಿ ಬರೆಯುವ ಆಸೆ. ಹೀಗಾಗಿ ಬಾಲಿಶದಿಂದ ಗಹನದವರೆಗು ಎಲ್ಲಾ ಕಡೆ ಯತ್ನಿಸುತ್ತೇನೆ, ಕೈಲಾದ ಮಟ್ಟಿಗೆ :-)

Submitted by Manushree Jois Mon, 10/12/2015 - 14:17

In reply to by nageshamysore

ಇದೊಂದು ಅದ್ಭುತ ಬರಹ. ಇಂತಹ ಅನುಭವಗಳನ್ನು ಹಂತ ಹಂತವಾಗಿ ಬಿಡಿಸಿಟ್ಟಿರುವುದೇ ಆಶ್ಚರ್ಯ. Abstract concept ಅನ್ನು ಯಶಸ್ವಿಯಾಗಿ ಚಿತ್ರಿಸಿದ್ದೀರಿ.

ಇಷ್ಟೊಂದು ಅನುಭವಿಸಿ, ವಿಶ್ಲೇಸಿಸಿ, ಆಸ್ವಾದಿಸಿ ಬರೆದ ನಿಮಗೆ ವಂದನೆಗಳು. ಅಪೂರ್ವ ಅಪರೂಪದ ಬರವಣಿಗೆಗೆ ಧನ್ಯವಾದಗಳು.

Submitted by nageshamysore Mon, 10/12/2015 - 16:40

In reply to by Manushree Jois

ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು - ಮನಮುಟ್ಟುವುದೆಂದರೆ ಅದರಲ್ಲಿ ತಾನೆ ಬರಹದ ಧನ್ಯತೆ ? :-)

Submitted by kavinagaraj Thu, 01/14/2016 - 11:39

ಭಾವಜೀವಿಗಳಿಗೆ, ಅಂತರಂಗದೊಳಗೆ ಇಣುಕುವವರಿಗೆ ಇದು ಅನುಭವಕ್ಕೆ ಬರುವ ಸಂಗತಿಯಾಗಿದೆ. ಇದಕ್ಕೆ ಅಕ್ಷರ ರೂಪ ಕೊಟ್ಟು ವಿವರಿಸಿರುವ ರೀತಿ ಸೊಗಸಾಗಿದೆ. ದನ್ಯವಾದಗಳು, ಸಂಕ್ರಾಂತಿಯ ಶುಭಾಶಯಗಳು, ನಾಗೇಶರೇ.

Submitted by nageshamysore Tue, 01/19/2016 - 09:40

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಇತ್ತೀಚೆಗೆ ದೇವುಡುರವರ ಮಹಾದರ್ಶನ ಕಾದಂಬರಿ ಓದುತ್ತಿದ್ದೆ. ಅಲ್ಲಿ ಯಾಜ್ಞವಲ್ಕರ ಬಾಲ್ಯದ ಪ್ರಸ್ತಾಪದಲ್ಲಿ ಬಗೆಬಗೆಯ ಮಾತಿನ ರೀತಿಯ ಪ್ರಸ್ತಾಪ ಬರುತ್ತದೆ (ಉದಾಹರಣೆಗೆ ಉದಾನ).. ಶಬ್ದದ ಮಾತಾಡದೆ ಮೂಕ ಪಶುವಿನೊಡನೆ ಸಂಭಾಷಿಸುವ ಸಂವಹನ ಮತ್ತು ಅದು ಸಾಧ್ಯವಿರುವ ಬಗೆಯ ಕುರಿತು ದೇವುಡು ಅವರ ವಿವರಣೆ ಅದ್ಭುತ. ಬಹುಶಃ ಅಂತಹುದ್ದೆ ರೀತಿಯ ಸಶಕ್ತ ವಿವರಣೆ ಇಂತಹ ಅನುಭವಕ್ಕು ಇರಲು ಸಾಧ್ಯ ಅನಿಸಿತು. ಹೇಳದೆಯೆ ಅರ್ಥವಾಗುವ ಕೆಲವು ಮನಸಿನ ಮಾತುಗಳದು ಈ ಹಾದಿಯೆ ಇರಬೇಕು. ಏನೇ ಆಗಲಿ ಅದೊಂದು ವಿಭಿನ್ನ ಅನುಭವ ಅನ್ನುವುದಂತು ಸತ್ಯ :-)