ದಂತ ಲಹರಿ
ಜಗತ್ತಿನಲ್ಲಿ ಯಾರಿಗೆ ನಗು / ನಸುನಗು ಇಷ್ಟ ಇಲ್ಲ ಹೇಳಿ. ನಸುನಗು ಯಾರನ್ನಾದರೂ mesmerise ಮಾಡುತ್ತದೆ. ಅದರಲ್ಲೂ ಮಗುವಿನ ನಗುವಂತೂ ಎಂಥ ರಾಕ್ಷಸನನ್ನೂ ಮಂತ್ರಮುಗ್ಧನನ್ನಾಗಿಸುತ್ತದೆ. ಈ ನಗುವಿಗೆ ಬೆನ್ನೆಲುಬಾಗಿ support ಕೊಡುವುದೇ ದಂತಪಂಕ್ತಿ -ಹಲ್ಲಿನ ಸಾಲು. ಹಲ್ಲು ಭೌತಿಕವಾಗಿ ಮಾತ್ರ ತುಟಿಯಂಚಿನ ನಗೆಗೆ supportive ಆಗಿಲ್ಲ - ಸೌಂದರ್ಯ ಪ್ರಜ್ಞಾನುಸಾರವಾಗಿಯೂ ನಗೆಗೆ supportive ಆಗಿದೆ. ಕೇವಲ ಸೌಂದರ್ಯದ ದೃಷ್ಟಿಯಿಂದಷ್ಟೇ ನೋಡಿದಾಗ, ನೀವು ಆನಂದಿಸುವುದು ಸುಂದರ ದಂತಪಂಕ್ತಿಯ ನಗುವನ್ನೋ, ಅಥವಾ ಬೊಚ್ಚುಬಾಯಿಯ ನಗುವನ್ನೋ? ನಗುವಿಗೂ ಹಲ್ಲಿಗೂ ಅವಿನಾಭಾವ ಸಂಬಂಧವಿದೆಯೆಂದು ಈಗಲಾದರೂ ಒಪ್ಪುತ್ತೀರಾ?
ಈ ಮೇಲೆ ಹೇಳಿದ್ದಕ್ಕೆ ಮಗುವಿನ ಬೊಚ್ಚು ಬಾಯಿಯ ನಗು ಅಪವಾದ - ಮಗುವಿನ ನಗುವೇನು, ಅದರ ಯಾವುದೇ ಚರ್ಯೆ ನಮಗೆ ಆನಂದದಾಯಕ. ಆಗಷ್ಟೇ ಒಂದೋ ಎರಡೋ ಹಲ್ಲು ಬಂದ ಮಗುವಿನ ನಗು ನಮಗೆ ಒಂದು ninety ಹಾಕಿದಷ್ಟು ಮತ್ತೇರಿಸುವುದು ಸಹಜ. ಕೆಲವು ಬಾರಿ ಈ ninety ಅಪಾಯಕಾರಿಯೂ ಆದೀತು. ಆ ಮಗು ಮುಗ್ಧವಾಗಿ, ನಮ್ಮನ್ನು ಅದರ `ಆಹಾರ' ವೆಂದೆಣಿಸಿ, ಕಚ್ಚಿದಾಗ!
ಕವಿವರೇಣ್ಯರನ್ನು ಕೇಳಿ, ಮುಖ ಸೌಂದರ್ಯದಲ್ಲಿ (ಮುಖ ಸೌಂದರ್ಯದಲ್ಲಿ ಮಾತ್ರ!) ಅವರು ಮೊದಲ ಪ್ರಾಶಸ್ತ್ಯ ನೀಡುವುದು ಕಣ್ಣುಗಳಿಗೆ. ಆದರೆ, ಮುಖದ ಸುರೂಪ ಚಿಕಿತ್ಸಕರ ಪ್ರಥಮ ಆಯ್ಕೆ, ಹಲ್ಲುಗಳು-ಸುಂದರ ದಂತಪಂಕ್ತಿ. ಕಡಿಮೆ ಅಪಾಯದಲ್ಲಿ ಇವುಗಳನ್ನು ತಿದ್ದಿ ತೀಡಬಹುದೆಂಬುದು ಇದರ ಹಿಂದಿನ ಮರ್ಮವಿದ್ದರೂ ಇದ್ದೀತೇ ! ಎಲ್ಲ ಪೂಜೆಗಳ ಮುಂಚೆ ಗಣೇಶ ಪೂಜೆ ಮಾಡಿದಂತೆ, ಮುಖ ಸುರೂಪ ಚಿಕಿತ್ಸೆಯಲ್ಲಿ ಸುದಂತಪಂಕ್ತೀಕರಣಕ್ಕೆ ಅಗ್ರಪೂಜೆ.
ರಾಜಕಾರಣಿಗಳು, ಓಟಿಗಾಗಿ ಜೇಬಿಗೆ ಕೈ ಹಾಕುತ್ತಿದ್ದುದು ಈವರೆಗೆ ಸಾಮಾನ್ಯವಾಗಿತ್ತು. ಆದ್ರೆ ನಂ ಸಿದ್ರಾಮಣ್ಣ ಹಲ್ಲಿಗೇ ಕೈ ಹಾಕಿದ್ದಾರೆ - `ದಂತಭಾಗ್ಯ' ನೀಡುವ ಮೂಲಕ! (ಕೈ ಪಕ್ಷದವರಾಗಿದ್ದಕ್ಕೆ ಅವರು ಹಲ್ಲಿಗೆ `ಕೈ' ಹಾಕಿದ್ದಾ ಗೊತ್ತಿಲ್ಲ) ಅಂತೂ `ಕೈ' ಯಿಂದ `ದಂತಭಾಗ್ಯ' (ಅಂದ್ರೆ ಕಪಾಲಮೋಕ್ಷ!) ಈ `ದಂತಭಾಗ್ಯ' ಎಲ್ಲರಿಗಲ್ಲ – ಅಹಿಂದ ಬೊಚ್ಚು ಬಾಯಿಗಳಿಗೆ ಮಾತ್ರ.
ಲಗಾಮಿಲ್ಲದ ಬಿಚ್ಚುಬಾಯಿಯಿಂದಾಗಿ, ಬೊಚ್ಚು ಬಾಯಿಯ ಭಾಗ್ಯವೊದಗುವುದು ಜೀವನ ಧರ್ಮ. ಜನರ ಕೋಪಕ್ಕೆ ಮೊದಲ ಬಲಿಯಾಗುವುದೇ ಹಲ್ಲು. ಅದಕ್ಕೇ `ಹಲ್ಲುದಿರಿಸಿ ಬಿಡ್ತೀನಿ' ಅನ್ನೋದು ಜನರ ಆಪ್ಯಾಯಮಾನವಾದ ಬೈಗುಳ. ಧರ್ಮವೋ, ಅಧರ್ಮವೋ, ಸಮಾಜದಲ್ಲಿ ಏನಾದರೂ, ಹಲ್ಲು ಉದುರುವುದು ಮಾತ್ರ ಬಡವರದ್ದೇ. ಅದಕ್ಕೇ ಹುಟ್ಟಿರೋದು ಈ ಗಾದೆಗಳು - `ಬಡವಾ, ನೀ ಮಡಗ್ಧ್ಹಂಗಿರು' `ಬಡವನ ಕೋಪ, ದವಡೆಗೆ ಮೂಲ !'.
ನಮ್ಮೆದುರಿದ್ದವನನ್ನು ಮಾತಿನಲ್ಲಿ ಸೋಲಿಸಲಾಗದ ಅಸಹಾಯಕತೆಯಲ್ಲಿ, ಕೋಪ ನೆತ್ತಿಗೇರಿ, ದೈಹಿಕ ಹಲ್ಲೆಗೆ ಶರಣಾಗುತ್ತೇವಲ್ಲಾ, ಅದರ ಮೊದಲ ಮೆಟ್ಟಲೇ ಕಪಾಲಮೋಕ್ಷ. ಆದರಿದಕ್ಕೆ ಬಲಿಯಾಗುವುದು ಮಾತ್ರ ಹಲ್ಲೇ (ಅದಕ್ಕೇ ಇರಬೇಕು, ಇದಕ್ಕೆ ನಾವು ಹೇಳುವುದು 'ಹಲ್ಲೆ!') ಹಳೆಯ ಚಲನಚಿತ್ರಗಳಲ್ಲಿ ಗಂಡ ಹೆಂಡಿರ ಜಗಳ ಸಮಾಪ್ತಿಯಾಗುತ್ತಿದ್ದುದೇ ಗಂಡನಿಂದ ಹೆಂಡತಿಗೆ ಕಪಾಲಮೋಕ್ಷದಲ್ಲಿ. ಈಗ ಕಾಲ ಬದಲಾಗಿದೆ ಬಿಡಿ–ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ! ಪಾತ್ರ ತಿರುವು ಮುರುವಾದರೂ, ಹಲ್ಲೆಯಾಗುವುದು ಹಲ್ಲಿಗೇ – ಆಗ ಹೆಂಡಿರ ಹಲ್ಲು, ಈಗ ಗಂಡಂದಿರ ಹಲ್ಲು!
* * *
ಪ್ರಣಯದ ಪ್ರಥಮ ಸೋಪಾನವಾದ `ಚುಂಬನ' ದಲ್ಲಿ ತುಟಿಯೇ hero ಆದರೂ, ಹಲ್ಲು ಅಂಬೋ support charecter ಇಲ್ಲದೇ `ಕಾರ್ಯಸಿದ್ಧಿ' ಆಗದು –ಇದನ್ನು ರಸಿಕರಾಗಲೀ, ಅರಸಿಕರಾಗಲೀ ಯಾರಾದರೂ ಒಪ್ಪುವಂಥದೇ. ಅದಕ್ಕೇ ಹೇಳಿದ್ದು `ಅನುಭವಸ್ಥ'ರು - `ಪ್ರಥಮ ಚುಂಬನಂ ದಂತ ಭಗ್ನಂ' ಅಂತ.
ಈ ಗಾದೆಯನ್ನು ರಾಸಿಕ್ಯಾನುಸಾರ ಎರಡು ರೀತಿ ಅರ್ಥೈಸಿಬಹುದೆಂಬುದು ನನ್ನ ಅಂಬೋಣ. ತಪ್ಪಿದ್ದಲ್ಲಿ ಕ್ಷಮೆಯಿರಲಿ.
`ಅಗ್ನಿಕಾರ್ಯ ಬಾರದ ಬ್ರಾಹ್ಮಣ ಗಡ್ಡ ಸುಟ್ಕೊಂಡ’ ಅನ್ನೋ ಗಾದೆಯಂತೆ, ಪ್ರೀತಿಯನ್ನು ಸರಿಯಾಗಿ ಹ್ಯಾಂಡಲ್ ಮಾಡಲಾಗದೇ, ಅವಸರಪಟ್ಟು, ಪ್ರೇಮಿ ಚುಂಬನದ stage ಗೆ ಹೋಗಿ ಹೊಡೆತ ತಿನ್ನುವುದು ಒಂದರ್ಥ.
ಈ ಗಾದೆ ಧ್ವನಿಸಬಹುದಾದ ಇನ್ನೊಂದರ್ಥಕ್ಕೆ ಸಾಂಪ್ರದಾಯಕರ ಕ್ಷಮೆಯಿರಲಿ. ಚುಂಬನದ ಮಧುರಾನುಭೂತಿಯನ್ನು ತಪ್ಪಂದಾಜಿಸಿ ವಾತ್ಸ್ಯಾಯನನ ಕಾಮಸೂತ್ರದ `ದಂತಕ್ಷತ'ದ ಅವಾಸ್ತವಿಕ ಪ್ರಯೋಗಗಳಿಂದಲೂ ಹೀಗಾಗುವುದುಂಟು! `ಹೀಗೂ ಉಂಟೇ?!' ಅನ್ನಬೇಡಿ– ಅದು `ಅವರವರ ಭಾವಕ್ಕೆ, ಅವರವರ ಭಕುತಿಗೆ!'
`ಚುಂಬನದಲ್ಲಿ ಹಲ್ಲಿನ ಪಾತ್ರ' ಅನ್ನುವ ವಿಷಯದಲ್ಲಿ Phd ಮಾಡಿದಲ್ಲಿ ನನಗೆ ಓದುಗರು ಸಹಾಯ ನೀಡಿಯಾರು ಎನ್ನುವ ಆಶಾಭಾವನೆ. `ಮಾಹಿತಿ'ಗಾಗಿಯಷ್ಟೇ ಸ್ವಾಮಿ, `ಅನುಭವ'ಕ್ಕಾಗಿ ಅಲ್ಲ ! ನೋಡಿ, ಇಲ್ಲೂ ಉದುರುವುದು ನನ್ನ ಹಲ್ಲೇ!!
* * *
ಹಿಂದೂ ಧರ್ಮಾಚರಣೆಯಲ್ಲಿ ಪ್ರಮುಖವಾದ ತಳಹದಿಯೆಂದರೆ - ಪುನರ್ಜನ್ಮದಲ್ಲಿನ ನಂಬಿಕೆ. ಹಿಂದಿನ ವೇದವಕ್ತಾರರ ಈ ನಂಬಿಕೆಗೆ ನಮ್ಮ ಹಲ್ಲುಗಳೇ ಕಾರಣವೋ ಎಂಬುದು ನನ್ನ ಶಂಕೆ. ಯಾಕಂತಿರೋ, ಈ ಹಲ್ಲುಗಳೂ ನಮ್ಮ ಶೈಶವಾವಸ್ಥೆಯಲ್ಲಿ ಒಮ್ಮೆ ಬಿದ್ದು ಮತ್ತೆ ಹುಟ್ಟುತ್ತವಷ್ಟೇ ? ದವಡೆ ಹಲ್ಲು ಬಿಟ್ಟು ಉಳಿದೆಲ್ಲವೂ ಒಮ್ಮೆ ಬಿದ್ದು ಹುಟ್ಟುತ್ತವೆ.
ಮಕ್ಕಳ ಹಲ್ಲು ಬರುವಿಕೆ ತಾಯಂದಿರ ಸಂಭ್ರಮಕ್ಕೆ ಕಾರಣವಾಗುತ್ತದೆ. (ಪಾಪ ಮೊದಲ ಸಲ ಹಲ್ಲು ಹುಟ್ಟಿದಾಗ ಆ ಮಗು ಬೇಧಿಯಿಂದ ತೊಳಲಾಡುತ್ತಿದ್ದರೂ ಕೂಡಾ !) ಹಲ್ಲು ಬರೋದು ಸ್ವಲ್ಪ ತಡವಾದರೂ ಸಾಕು, ಸಕಲ ಬೇರುಗಳಿಂದ ಮಗುವಿನ ಸೂಕ್ಷ್ಮ ವಸಡನ್ನುಜ್ಜಿ, ಸಿಸೇರಿಯನ್ ಮಾಡಿ, ಹಲ್ಲನ್ನು ಹೊರ ಮೂಡಿಸುವ ಅಮ್ಮಂದಿರೂ ಇದ್ದಾರೆ. ದೊಡ್ಡವರ ಹಲ್ಲುಗಳ ವಿಕೃತಿ ಸಹ್ಯವಾಗೋಲ್ಲ – ಆದರೆ, ಮಕ್ಕಳಲ್ಲಿ ಹಲ್ಲು ಹೇಗಿದ್ದರೂ ಚೆಂದ. ಒಂದೊಂದೂ ಒಂದೊಂದು ರೂಪ. ಮಕ್ಕಳೇ ಹಾಗೆ.
ಹುಲುಮಾನವರಂತೆ ಹಲ್ಲುಗಳಲ್ಲೂ ಜಾತಿ ಭೇದವಿದೆ - ಬಾಚೀಹಲ್ಲು, ಕೋರೆಹಲ್ಲು, ದವಡೇ ಹಲ್ಲುಗಳೆಂಬ ಪ್ರಭೇದಗಳು. (ಪುಣ್ಯ, ಇವು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆಯಷ್ಟೇ, ಶಿವಾಯಿ, ನಮ್ಮಂತೆ ಒಬ್ಬರ ಮೇಲೊಬ್ಬರು `ಹಲ್ಲು' ಮಸೆಯುವುದಿಲ್ಲ). ಇವುಗಳಲ್ಲಿ ಕೋರೆಹಲ್ಲು `ಕ್ರೂರತನದ ಸಂಕೇತ' ದ ಪೇಟೆಂಟ್ ಹೊಂದಿದೆ. ಕೋರೆಹಲ್ಲಿಲ್ಲದೇ ಯಾವುದೇ ರಾಕ್ಷಸನ ಚಿತ್ರ ಪೂರ್ಣಗೊಳ್ಳುವುದೇ ಇಲ್ಲ ! ಆಹಾರವನ್ನು ಸಿಗಿಯುವ ಕಾರ್ಯಕಾರಣದಿಂದಲೇ ಕೋರೆಹಲ್ಲಿಗೆ ಈ ಪ್ರಾಮುಖ್ಯ.
ಹಿಂದಿನ ಪೌರಾಣಿಕ ಚಲನಚಿತ್ರಗಳಲ್ಲಿ ರಾಕ್ಷಸರನ್ನು portrait ಮಾಡಲು ಕೋರೆಹಲ್ಲನ್ನು ಬಳಸುತ್ತಿದ್ದಂತೆಯೇ, ಈಗಿನ ಚಲನಚಿತ್ರಗಳಲ್ಲಿ ವಿದೂಷಕರನ್ನು ಕುರೂಪಿಗಳನ್ನಾಗಿ ಬಿಂಬಿಸಲು `ಹಲ್ಲುಬ್ಬ'ನ್ನು ಬಳಸಲಾಗುತ್ತಿದೆ. ಏನೋ ಸ್ವಲ್ಪ ಹಲ್ಲುಬ್ಬಾಗಿದ್ದರೆ ಸಾಕು, ಜನ ಅವರಿಗೆ `ತುರಿಮಣೆ' ಎನ್ನುವ ಅಭಿನಾಮದಿಂದ ಕರೆಯಲಾರಂಭಿಸುತ್ತಾರೆ ! ಅಂಥವರಿಗೆ ಕಾಯಿ ತುರಿಯುವುದು ಕಷ್ಟವಾಗೋದಿಲ್ಲ ಅನ್ನುವ ಕಾರಣಕ್ಕೆ. ರಸಿಕರು, ಈ ಹಲ್ಲುಬ್ಬು ಚುಂಬನದ ವೇಳೆ ತ್ರಾಸದಾಯಕ ಎಂದರೂ, ಇದು ವೈಜ್ಞಾನಿಕವಾಗೇನೂ ದೃಢಪಟ್ಟಿಲ್ಲ ! ಈ ಹಲ್ಲುಬ್ಬನ್ನು ನಿವಾರಿಸಿಕೊಳ್ಳಲೋಸುಗ ದಂತವೈದ್ಯರಿಗೆ ಒಂದಿಷ್ಟು ದುಡ್ಡು ಪೀಕಿ, `ತಂತಿಬೇಲಿ' ಹಾಕಿಸಿಕೊಂಡು, ಸುರೂಪ ಚಿಕಿತ್ಸೆ ಪಡೆಯುವುದೂ ಉಂಟು.
ಸೌಂದರ್ಯದ ಖನಿ - ರೂಪದರ್ಶಿಗಳ ಪ್ರಮುಖ ಆಕರ್ಷಣೆಯೇ ಮುಖ ಸೌಂದರ್ಯ (ಕೆಲ ಬರಗೆಟ್ಟ ರಸಿಕರನ್ನು ಹೊರತು ಪಡಿಸಿ ! ). ಅದರಲ್ಲೂ ಅವರ ಸುಂದರ ದಂತಪಂಕ್ತಿಗೆ ಮೊದಲ ಪ್ರಾಶಸ್ತ್ಯ. ಹಾಗಾಗಿಯೇ ಅವರ ದಂತಪಂಕ್ತಿ - ಕವಿವಾಣಿಗನುಗುಣವಾಗಿ, ದಾಳಿಂಬೆ ಕಾಳ್ಗಳಂತೆ ! ಇದಕ್ಕಾಗಿ ರೂಪದರ್ಶಿಗಳು ಎಂಥ ಸುರೂಪಿ ಚಿಕಿತ್ಸೆಗೂ ತಯಾರು.
ದಂತಪಂಕ್ತಿ ದಾಳಿಂಬೆ ಕಾಳುಗಳ ತರಹ ಇದ್ದರಷ್ಟೇ ಚಂದ ಅನ್ನುವುದು ಸುಳ್ಳು. ಈ ಹಿಂದೆ ಮೌಸಮೀ ಚಟರ್ಜಿ ಎನ್ನುವ ನಟೀಮಣಿಗೆ ಒಂದು ಉಬ್ಬು ಹಲ್ಲಿತ್ತು. ಅದೇ ಆಕೆಯ ಸೌಂದರ್ಯದ ರಹಸ್ಯವಾಗಿತ್ತು. ನನ್ನ ಕಾಲದವರಾದ್ರೆ ಇದಕ್ಕೆ ಹ್ಞೂ ಅಂದೀರಿ, ಇಲ್ಲವಾದರೆ ನನ್ನ ಮೇಲೆ ಹಲ್ಲು ಮಸೆದೀರಿ !
* * *
ಇಬ್ಬರ ನಡುವಿನ ಜಗಳದಲ್ಲಿ, ಕಾವೇರುವುದೇ ಒಬ್ಬ ಇನ್ನೊಬ್ಬನಿಗೆ `ಹಲ್ಲು ಮುರೀತೀನಿ ನೋಡು' ಎನ್ನುವದರಿಂದ. ಚಲನಚಿತ್ರಗಳಲ್ಲಿ, ಹೀರೋ ಮೊದಮೊದಲು ವಿಲನ್ ಕಡೆಯವರಿಂದ ಹೊಡೆತ ತಿಂದರೂ, ಅವ ತನ್ನ ಅಸಲಿಯತ್ತನ್ನು ತೋರಿಸಲು, ಅವನ ಒಂದು ಹಲ್ಲು ಬಲಿಯಾಗಿ ಒಂದು ತೊಟ್ಟು ರಕ್ತ ಒಸರಬೇಕಾಗುತ್ತದೆ. ನೋಡಿ, ತನ್ನ ಹಲ್ಲಿಗೆ ಪೆಟ್ಟಾಗುವುದನ್ನು ಯಾವ ಹೀರೋನೂ ಸೈರಿಸಲಾರ ! ನಂತರ ಆತ, ತನ್ನ ಹಲ್ಲಿಗೆ ಕೈ ಹಾಕಿದಾತ ಫಡ್ಚ ಆಗೋವರೆಗೂ ವಿರಮಿಸೋದಿಲ್ಲ.
ಇದಾದ very next ಸೀನಿನಲ್ಲಿ ನಾಯಕ-ನಾಯಕಿಯರ ಚುಂಬನ-ಪ್ರಣಯದ ಹಾಡು ! ನೋಡಿ, ಸಿದ್ಧಸೂತ್ರದ ಚಲನಚಿತ್ರವೊಂದರಲ್ಲಿ ಎಲ್ಲಾ ಸೀನಿನಲ್ಲೂ `ಹಲ್ಲಿನ' role ಉಂಟು ! Support character Award ಅದಕ್ಕೇ ದಕ್ಕಬೇಕಲ್ಲವೇ ?!
ಪುರಾಣಗಳಲ್ಲಿಯೂ ಹಲ್ಲಿನಿಂದಾಗಿ ಕದನಗಳಾಗಿವೆ. ಬಿದ್ದು ಹಲ್ಲು ಮುರ್ದಿದ್ದಕ್ಕೆ ತಾನೇ ಗಣಪ ಚಂದ್ರನಿಗೆ ಶಾಪ ಕೊಟ್ಟಿದ್ದು ! ಕೃಷ್ಣನಿಗೆ ಅಪವಾದ ಬಂದು `ಶ್ಯಮಂತಕ ಮಣಿ' ಕಥೆ ನಡೆದದ್ದು. ಇದರಿಂದಲೇ ಕೃಷ್ಣ -ಜಾಂಬವತೀ ಪರಿಣಯವಾಗಿ, ನಂತರದ ಸಂಸಾರದ ಜಗಳ ಶುರು ಆಗಿದ್ದು ಅಂಬೋದು ಇಹ-ಸಂಸಾರಿಗರ ಕುಹಕವಷ್ಟೇ.
* * *
ಹಲ್ಲುನೋವು ಎಂದಾಗ, ಎಷ್ಟು ಜನರ ಮೈ ಜುಂ ಎನ್ನುತ್ತದೆ – ಖುಷಿಯಿಂದಲ್ಲ ! - ನೋವಿನ ಅನುಭವದ ನೆನಪಿನಿಂದ ! ನರಕದಲ್ಲಿನ ಕುಂಭೀಪಾಕದ ನೋವನ್ನಾದರೂ ಸಹಿಸಿಯೇನು, ಈ ಹಲ್ಲುನೋವು ನನ್ನಿಂದ ಸಹಿಸಲಾಗದು ಎಂದು ನಾವೆಲ್ಲರೂ ಸಮಾನಮನಸ್ಕರಾಗಿ ಅನುಭವಿಸಿದ್ದಿದೆ. ಮನೆ ವೈದ್ಯದನುಗುಣವಾಗಿ ಲವಂಗ, ಪುಟಾಣಿ, ಹತ್ತಿ ಮತ್ತಿತರ ಎಲ್ಲ ಆಯುಧಗಳಿಗೂ ಹಲ್ಲುನೋವು ಬಗ್ಗದಿದ್ದಾಗ, ಹಲ್ಲುನೋವಿಗೆ ಸೋತು ಶರಣೆಂದು, ದಂತವೈದ್ಯರ ಬಳಿ ಸಾಗುತ್ತೇವೆ. ಹಲ್ಲು ನೋವಿದ್ದಾಗ, ಹಸಿವಾದರೂ ತಿನ್ನಲಾಗದ ಸಂಕಟ ! ಅಂಥ ಸಮಯದಲ್ಲೇ ಮನೆಯಲ್ಲಿ ಚಕ್ಕುಲಿ, ಕೋಡುಬಳೆ ಮಾಡುವುದು ಕಾಕತಾಳೀಯವಷ್ಟೇ. ಸಂತೆಯಲ್ಲಿಯೂ ನಿದ್ರೆ ಮಾಡಬಲ್ಲಂಥ ಶಕ್ತಿಯುಳ್ಳ ನಾನೂ, ಹಲ್ಲು ನೋವಿದ್ದಾಗ ನಿದ್ರಿಸಲಾಗದೇ ಸೋತಿದ್ದಿದೆ. ಹಲ್ಲು ನೋವಿನಿಂದಾಗಿ, `ದೇವರೇ ನನ್ನನ್ನು ಹಲ್ಲಿಲ್ಲದವನನ್ನಾಗಿ ಮಾಡಪ್ಪಾ' ಎಂದು ಬೇಡಿಕೊಳ್ಳುತ್ತೇವೆ – ತಾತ್ಕಾಲಿಕ ಸಿಟ್ಟಿನಿಂದ. ಈ ಹಲ್ಲು ನೋವಿನಲ್ಲಿ ನಾವು `ಹಲ್ಲು ಕಿತ್ತ ಹಾವಿನಂತೆ' ಅಸಹಾಯಕರಾಗಿರುತ್ತೇವೆ.
ಹಲ್ಲಿನ ತೊಂದರೆಯ ಇನ್ನೊಂದು ರೂಪ sensitivity. ತಣ್ಣನೆಯದು, ಬಿಸಿಯಾದ್ದು, ಖಾರವಾದ್ದು ಏನು ತಾಕಿದರೂ, mild shock ಹೊಡೆದಂತೆ, ಮೈ ಎಲ್ಲಾ ಜುಂ ಅನ್ನಿಸುವ ಅನುಭವ. ಐಸ್ ಕ್ರೀಮಿನ ವ್ಯಾಮೋಹ, ಬಿಸಿಯೂಟ (ಶಾಲೆಗಳದ್ದಲ್ಲ, ಮನೆಯ ಹದವಾಗಿ ಹಬೆಯಾಡುತ್ತಿರುವ ಮೃಷ್ಟಾನ್ನ) ದ ಆನಂದ ಎಲ್ಲವನ್ನೂ ತ್ಯಜಿಸಿ ಸನ್ಯಾಸೀ ಜೀವನ ನಡೆಸಬೇಕಾದ ನಿರ್ಭರತೆ ! ಈ ದುರ್ಭರ ಬಾಳಿಗೆ ಬೆಳಕು ನೀಡಲೆಂದೇ ದಂತವೈದ್ಯರ ಸೇವಾ ನಿಲಯಗಳು. ಈಗಂತೂ ಬೆಂಗಳೂರಿನಂಥ ನಗರಗಳಲ್ಲಿ ಕುಟುಂಬಕ್ಕೊಂದರಂತೆ ದಂತ ಚಿಕಿತ್ಸಾಲಯಗಳಿವೆ ಎನ್ನುವುದು ಕೇವಲ ಕುಹಕದ ಮಾತಷ್ಟೇ !
* * *
ದಂತ ಪುರಾಣದಲ್ಲಿ ಇಷ್ಟೆಲ್ಲಾ ಆದ ಮೇಲೆ, ದಂತಮಾರ್ಜನದ ಬಗ್ಗೆ ಹೇಳದಿದ್ದರೆ ಹೇಗೆ? ಮುಂಚೆ, ಸುಮ್ಮನೆ ಹಾಯಾಗಿ ಬೇವಿನ ಕಡ್ಡಿ, ಇಜ್ಜಲು ಪುಡಿ ಉಪಯೋಗಿಸಿ ದಂತಮಾರ್ಜನ ಮುಗಿಸುತ್ತಿದ್ದೆವು. ಆಗ ಯಾವಾಗಾದರೂ ನಾವು ತೊಂದರೆ ಅನುಭವಿಸಿದ್ದುಂಟಾ? ಇಲ್ಲ. ಆದರೆ, ದಂತ ಸಂರಕ್ಷಣೆಯ ಮೇಲೆ ಪುಂಖಾನುಪುಂಖವಾಗಿ Phd ಮಾಡಿ, ಇರುವ, ಇರಲಾರದ, ಇರಬಾರದ ತೊಂದರೆಗಳನ್ನೆಲ್ಲಾ ಪಟ್ಟಿ ಮಾಡಿ, ಅವುಗಳಿಗೆ ಏಕಮೇವಾದ್ವಿತೀಯ ಪರಿಹಾರ ತಮ್ಮಿಂದಷ್ಟೇ ಸಾಧ್ಯ ಅನ್ನುತ್ತ ಸಾವಿರದೆಂಟು tooth paste ಕಂಪನಿಗಳು ನಮ್ಮ ಮೇಲೆ ದಾಂಗುಡಿಯಿಟ್ಟಾಗ ನಿಜವಾದ ತೊಂದರೆಗಳು ಆರಂಭವಾದವು. ಹಲ್ಲಿನ ಸಂಪೂರ್ಣ ಸುರಕ್ಷೆಯ ಈ ಗುತ್ತಿಗೆದಾರರು , ಇಜ್ಜಲು ಪುಡಿಯ ಉಪಯೋಗವನ್ನು ಅನಾಗರೀಕವೆಂದು ಬಿಂಬಿಸಿ, ನಮ್ಮನ್ನು ಟೂತ್ಪೇಸ್ಟ್ ಬಳಕೆಗೆ ಒಗ್ಗಿ ಹೋಗುವಂತೆ ಮಾಡಿದರು. ಅದೇ ಜನರು ಈಗ, `ನಿಮ್ಮ ಟೂತ್ಪೇಸ್ಟಿನಲ್ಲಿ ಬೇವಿನಂಶ ಇದೆಯೇ, ಇಜ್ಜಲಿನಂಶ ಇದೆಯೇ' ಎಂದು ಜಾಹೀರಾತು ಹಾಕುತ್ತಿದ್ದಾರೆ. ಇದೊಂಥರಾ, ಬೀಜೇಪಿಯ `ಘರ್ ವಾಪ್ಸಿ' ಯಂತಿದೆ ! ಇದನ್ನು ಮೆಚ್ಚಬೇಕೋ, ಅಥವಾ ನಮ್ಮ ಅಜ್ಞಾನಕ್ಕೆ ಬೈದುಕೊಳ್ಳಬೇಕೋ ತಿಳೀವಲ್ದಾಗಿದೆ ! ಈಗಂತೂ ನಮ್ಮ ಟೂತ್ಪೇಸ್ಟ್ಗಳಲ್ಲಿ ಉಪ್ಪು, ಜೀರಿಗೆ ಮತ್ತಿನ್ನೇನನ್ನೋ ಸೇರಿಸಿ `ಮಸಾಲಾ ಛಾಟ್' ನಂತಾಗಿಸಿರುವುದು, whatsapp ನಲ್ಲೆಲ್ಲ ಹರಿದಾಡ್ತಿದೆ.
* * *
ಒಟ್ಟಿನಲ್ಲಿ ಹಲ್ಲು ಮುಖದ identification. (ಈ ಮಾತು ಅಪರಾಧ ಶಾಸ್ತ್ರ ಅಭ್ಯಸಿಸುವವರಿಗೆಲ್ಲ ವೇದವಾಕ್ಯ). ಈ ಹಿಂದೆ ಕಮಲಹಾಸನ್ನ `ಮೈಕೇಲ್ ಮದನ್ ಕಾಮರಾಜನ್' ಅನ್ನುವ ತಮಿಳು ಚಲನಚಿತ್ರದಲ್ಲಿ, ಆತ ಮಾಡಿದ್ದ ನಾಲ್ಕು ಪಾತ್ರಗಳ Identification, ಹಲ್ಲುಗಳ ಮೂಲಕ ಎನ್ನುವುದು ಅದರ ವಿಶೇಷವಾಗಿತ್ತು. ಅಷ್ಟೇಕೆ, ಹಲ್ಲಿನ ಸೆಟ್ ಉಪಯೋಗಿಸುವ ಮಂದಿಯನ್ನು, ಹಲ್ಲಿನ ಸೆಟ್ ಹಾಕಿಕೊಳ್ಳದಾಗ, ನಾವು ಸರಿಯಾಗಿ ಗುರ್ತಿಸಲಾರೆವು ! ಅಷ್ಟು ಪ್ರಾಮುಖ್ಯ ಈ ಹಲ್ಲಿಗೆ. ಕೆಲವೊಮ್ಮೆ ದೇವರ ಗುರ್ತಿಸುವಿಕೆಗೂ ಹಲ್ಲಿನ ಅಭಿದಾನ ನೆರವಾಗುತ್ತದೆ. ಯಾಕೆ, ನಮ್ಮ `ಏಕದಂತ' ಇಲ್ಲವೇ? ಏನಂತೀರಿ ?!
* * *
Comments
ಉ: ದಂತ ಲಹರಿ
ಶಾಸ್ತ್ರಿಗಳೆ ಇದು 'ದಂತ' ಲಹರಿಯಲ್ಲ, ಹಲ್ಲಾಯಣದ 'ಅನಂತ ಲಹರಿ'..! ಹಲ್ಲಿನ ಗುಟ್ಟೆಲ್ಲ ಬಿಚ್ಚಿಟ್ಟುಬಿಟ್ಟಿದ್ದೀರೆಂದು ಹಲ್ಲಿನಿಂದಲೆ ಹಲ್ಲೆಯಾಗಿಬಿಟ್ಟೀತೂ ಜೋಪಾನ..! ಈ ಕಡೆಯೆಲ್ಲ ನಾನು ಯಾರನ್ನು ಕಂಡರೂ ನೀಟಾದ, ಫಳಗುಟ್ಟುವ ದಂತಪಂಕ್ತೆಯರನ್ನು ಕಂಡು ಅಚ್ಚರಿ ಪಡುತ್ತಿದ್ದೆ - ಅದು ಹೇಗೆ ಈ ಪರಿಪೂರ್ಣತೆ, ಹೊಳಪು, ಅನುಕ್ರಮತೆ, ಕ್ರಮಬದ್ಧತೆ ಸಾಧ್ಯವೆಂದು. ಸಾಲುಗಟ್ಟಿ ನಿಂತ ದಂತಸುರೂಪಾಲಯಗಳನ್ನು ಕಂಡಾಗ ಅರ್ಥವಾಯಿತು - ಇದೇ ಇನ್ನೊಂದು ದೊಡ್ಡ ಬಿಜಿನೆಸ್ ಅಂತ...! ಹೀಗೇ ಒಂದು ಕಡೆ ಸಿನೆಮಾ ನಟ ಟಾಮ್ ಕ್ರೂಸ್ ನಂತಹವರು ಕೂಡ ಇಂತದ್ದೆ ದಂತಾಸುರೂಪಾಲಯಗಳಲ್ಲಿ ಮಾರ್ಪಡಿಸಿಕೊಂಡ ನಂತರವೆ ಈಗಿನ ಸುರೂಪ ಸಾಧ್ಯವಾಗಿದ್ದು ಎಂದು ಓದಿದ ನೆನಪು. ಒಟ್ಟಾರೆ 'ಸಂಪೂರ್ಣ ದಂತಾಯಣ'ದ ಮೂಲಕ ಹಲ್ಲಿನ 'ಸಂಪೂರ್ಣ ರಾಮಾಯಣ' ಕಟ್ಟಿಕೊಟ್ಟ ಲಲಿತ ಪ್ರಬಂಧ ಚೆನ್ನಗಿದೆ :-)
In reply to ಉ: ದಂತ ಲಹರಿ by nageshamysore
ಉ: ದಂತ ಲಹರಿ
ರಾಯರಿಗೆ ಧನ್ಯವಾದಗಳು. ದಂತವೈದ್ಯರ Business ಮೇಲೆ ಕಣ್ಣು ಹಾಕಿದ್ದಕ್ಕೆ ನನ್ನ ಮೇಲೆ 'ಹಲ್ಲೆ' ಆಗದಿದ್ದಲ್ಲಿ ನನ್ನ ಪುಣ್ಯ! ಆಗ ಈ ದಂತಾಯಣದಿಂದ ನನ್ನ 'ಅಂತಾಯಣ' ಆದೀತು.
ಉ: ದಂತ ಲಹರಿ
ಶಾಸ್ತ್ರಿ ಸರ್ ಅವರಿಗೆ ನಮಸ್ಕಾರಗಳು.ನಿಮ್ಮ ಬರಹವು ದಂತಗಳು ಮನುಷ್ಯನ ದೇಹದ ಸೌಂದರ್ಯವನ್ನು ಬಿಂಬಿಸುವ ಮುಖ್ಯವಾದ ಭಾಗವೆಂದು ವಿವರಿಸಿದೆ.ದಂತಾಯಣ ತುಂಬಾ ಚೆನ್ನಾಗಿ ಮುಡಿಬಂದಿದ್ದೆ.
In reply to ಉ: ದಂತ ಲಹರಿ by Nagaraj Bhadra
ಉ: ದಂತ ಲಹರಿ
ಧನ್ಯವಾದಗಳು ಭದ್ರ ಸರ.
ಉ: ದಂತ ಲಹರಿ
ದಂತಪುರಾಣ ಚೆನ್ನಾಗಿದೆ, ಒಳ್ಳೆಯ ಮಾಹಿತಿಗಳನ್ನೂ ಒಳಗೊಂಡಿದೆ.