ಅರೆ ಬತ್ತಲೆ ಫಕೀರನ ನೆನೆದು..
ಚಿತ್ರ ಕೃಪೆ : ವಿಕೀಪೀಡಿಯಾ (https://en.m.wikipedia.org/wiki/File:Portrait_Gandhi.jpg)
ಕಳೆದ ಬಾರಿಯ ಗಾಂಧಿ ಜಯಂತಿಯ ಹೊತ್ತಿನಲ್ಲಿ ಬರೆದ ಕವನವಿದು. 'ಸ್ವಚ್ಚ' ಅಭಿಯಾನದ ಚರ್ಚೆ ಚಾಲನೆಯಲ್ಲಿದ್ದ ದಿನಗಳು. ಆ ಕಳೆದ ಬಾರಿಯ ಆಚರಣೆಯಲ್ಲಿದ್ದ ವಿಶೇಷತೆಯೇನೆಂದರೆ, ಆ ದಿನ ಪೂರ್ತಿ ಮಹಾತ್ಮಾ ಗಾಂಧಿಮಯವಾಗಿದ್ದುದು. ಅಲ್ಲಿಯವರೆಗು ಆ ಆಚರಣೆಗೆ ಅಷ್ಟೊಂದು ಕಸುವು ತುಂಬುವ ವಾತಾವರಣವೆ ನಿರ್ಮಾಣವಾಗಿರಲಿಲ್ಲ. ಜತೆಗೆ ಸ್ವಚ್ಚಾಭಿಯಾನದ ಖದರು ಜತೆಗೆ ಸೇರಿಕೊಂಡು ಹೊಸದೊಂದು ಕಳೆ ಸೃಷ್ಟಿಯಾಗಿಬಿಟ್ಟಿತ್ತು. ಆದರೆ ರಾಜಕೀಯದಲ್ಲಿ ಎಲ್ಲವನ್ನು ಅಷ್ಟು ಸುಲಭದಲ್ಲೊಪ್ಪಿ, ಅಪ್ಪಿಕೊಂಡುಬಿಡಲಾಗುವುದೆ ? ಕೇಂದ್ರದಲ್ಲಿ ಅಧಿಕಾರದದಲ್ಲಿರದ ಆದರೆ ರಾಜ್ಯದ ಚುಕ್ಕಾಣಿ ಹಿಡಿದ ಪಕ್ಷಗಳಿಗೆ ಈ ಅಭಿಯಾನದ ಕುರಿತು ವಿರೋಧವಿರದಿದ್ದರು ಅದರಲ್ಲಿ ಪಾಲ್ಗೊಳ್ಳುವಿಕೆಯಲ್ಲಿ ಮಾತ್ರ ಮೀನಾಮೇಷವೆ. ಯಾರೆ ಪಾಲ್ಗೊಂಡರು ಅದರ ಹೆಸರು, ಖ್ಯಾತಿ, ಕೀರ್ತಿಯ ಮೊತ್ತವೆಲ್ಲ ತಮಗೆ ನೇರ ಸಲ್ಲದೆಂಬ ಅರಿವು ಕೂಡ ಆ ವರ್ತನೆಗೆ ಕಾರಣವಾಗಿತ್ತೇನೊ. ಅದೆಂತಿದ್ದರೂ, ತಾನಿದ್ದ ಆಶ್ರಮದಲ್ಲಿ ಸ್ವಚ್ಚತೆಗೆ ಅತೀವ ಕಾಳಜಿ ವಹಿಸಿ ಸ್ವಯಂ ತನ್ನನ್ನೆ ಆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತ ಬದುಕು ನಡೆಸಿದ ಈ ಅರೆ ಬತ್ತಲೆ ಫಕೀರ ಬಿಟ್ಟು ಹೋದ ಪರಂಪರೆ ಮಾತ್ರ ಶಾಶ್ವತ. ಅವನ ಕುರಿತು ಪರವಾದ, ವಿರೋಧವಾದ ವಾದ ವಿವಾದಗಳು ಏನೆ ಇರಲಿ ಆ ಮೂಲಕವಾದರು ಸದಾ ಪ್ರಸ್ತುತವಾಗುತ್ತ ಹೋಗುವ ವ್ಯಕ್ತಿತ್ವ ಗಾಂಧಿಯದು.
ಆ ಪುಣ್ಯಾತ್ಮನ ಜನ್ಮದಿನದಂದು ಒಂದು ಪುಟ್ಟ ಸ್ಮರಣೆ ಈ ಕವನದ ಅರ್ಪಣೆಯ ಮೂಲಕ. ಸ್ವಚ್ಚತೆಯನ್ನು ಜೀವನದ ಆದರ್ಶವೆಂಬಂತೆ ಪಾಲಿಸುತ್ತ ಅನುಕರಿಸಿದ ಈ ಸಾಬರಮತಿಯ ಸಂತನನ್ನು, ಆ ಸ್ವಚ್ಚ ಭಾರತ್ ಅಭಿಯಾನದ ಜೊತೆಗೆ ತಳುಕು ಹಾಕುತ್ತ, ಅದೊಂದು ನಿತ್ಯ ನಿರಂತರ ಕಾರ್ಯವೆ ಹೊರತು ಒಮ್ಮೆ ಮಾಡಿ ಮುಗಿಸಿ ಕೈತೊಳೆದುಕೊಳುವಂತದ್ದಲ್ಲ ಎಂಬ ನೆನಪೋಲೆಯನ್ನು ತನ್ಮೂಲಕ ಪ್ರೇರೇಪಿಸುತ್ತ..
ಸ್ವಚ್ಛ ಸ್ವಚ್ಛ ಅಚ್ಛ ಅಚ್ಛ
____________________
ಪೀಎಮ್ಮೆಂದರು ಸ್ವಚ್ಚ ಸ್ವಚ್ಛ ಸ್ವಚ್ಛ
ಗಾಂಧಿ ಪ್ರತಿಮೆಗೊಂದು ಹೂ ಗುಚ್ಛ
ನೆರೆದವರೆಲ್ಲ ನುಡಿದು ಅಚ್ಛಾ ಅಚ್ಛಾ
ನಾವ್ಯಾರಿಗೆ ಕಡಿಮೆ ಮಿಕ್ಕವರುವಾಚ ||
ಪೀಎಮ್ಮು ಮಾಡಿದ್ದೊಂದೆ, ದಿನಪೂರ್ತಿ
ಬೆಳಗಿಂದ ಸಂಜೆ ಗಾಂಧಿ ಜಪ ಸರತಿ
ಎಲ್ಲಿ ಮಾಯವಾಗಿತ್ತೆ ಗಾಂಧಿ ಈಚೆಗೆ ?
ಇವತ್ತು ಮಾತ್ರ ಸಡಗರ ಕಡೆಗು ನಗೆ ||
ಯಾವ್ಯಾವುದೊ ಗಾಂಧಿಗಳೆಲ್ಲ ಹೆಸರು
ಹರಿದಾಡಿತ್ತಲ್ಲ ಅಲ್ಲಿಲ್ಲಿ ಏನೆಲ್ಲ ಕೊಸರು
ಇಂದು ಮಾತ್ರ ಮೋಹನ ಕರಮ ಚಂದ
ಮೊದಲ ಬಾರಿಗೆ ನೆನಪು ಜನ್ಮದಿನ ಚಂದ ||
ಗಿಲೀಟುಗಳಿಲ್ಲದ ಒಡವೆ ಮೊದಲ ಸಾರಿ
ನಾಯಕ ನಿಜ ತತ್ವ ಬಂಗಾರದ ಕುಸುರಿ
ರಾಜಕೀಯವಿಲ್ಲದ ರಾಷ್ಟ್ರಕೀಯ ಕಾರಣ
ಸ್ವಚ್ಛ ಭಾರತವಾಗಿಸಲೊಂದು ಅಭಿಯಾನ ||
ಸುಮ್ಮನಿದ್ದರಾಗದು ಜನ ಸರ್ಕಾರ ಮೊತ್ತ
ತಾನೂ ನಡೆಸಬೇಕು ಏನಾದರು ಗಮ್ಮತ್ತ
ಕೈಗೂಡಿಸಿದರು ದಿನ ವಾರ ತಿಂಗಳ ಪೂರ
ಸ್ವಚ್ಛ ಮಾಸಾಚರಣೆ ವಿರೋಧ ಪಕ್ಷದ ಸಾರ ||
------------------------------------------------------------------------------------
ನಾಗೇಶ ಮೈಸೂರು, ೦೨. ಅಕ್ಟೋಬರ .
-------------------------------------------------------------------------------------
Comments
ಉ: ಅರೆ ಬತ್ತಲೆ ಫಕೀರನ ನೆನೆದು..
ಏನೇ ಹೇಳಿ, ಗಾಂಧಿ ತಾತ ಭಗವದ್ಗೀತೆಯಂಥ ಅಮೂಲ್ಯ ರತ್ನ. ಎಲ್ಲರಿಗೂ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜನ್ಮದಿನದ ಶುಭಾಶಾಯಗಳು. ಹಾಡು ಹಳೆಯದಾದರೇನು ಭಾವ ನವನವೀನ. ರಾಯರಿಗೆ ಲಾಲ್ ಸಲಾಂ.
In reply to ಉ: ಅರೆ ಬತ್ತಲೆ ಫಕೀರನ ನೆನೆದು.. by santhosha shastry
ಉ: ಅರೆ ಬತ್ತಲೆ ಫಕೀರನ ನೆನೆದು..
ಸಂತೋಷ್ ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಫಕೀರನ ಜೊತೆಗೆ ವಾಮನನನ್ನು ನೆನಪಿಸಿದ್ದಕ್ಕೆ ಮತ್ತೂ ಧನ್ಯವಾದಗಳು. ಅದರಿಂದಲೆ ಪ್ರೇರಿತನಾಗಿ ಶಾಸ್ತ್ರಿಗಳ ಕುರಿತಾದ ಒಂದು ಕವನ ಹೊಸೆದು ಸಂಪದದಲ್ಲಿ ಹಾಕಿದ್ದೇನೆ. (ಕೆಳಗೆ ಕೊಂಡಿಯನ್ನು ಕೊಟ್ಟಿದೆ ನೋಡಿ) - :-)
http://sampada.net/%E0%B2%9C%E0%B3%88-%E0%B2%9C%E0%B2%B5%E0%B2%BE%E0%B2%...
ಉ: ಅರೆ ಬತ್ತಲೆ ಫಕೀರನ ನೆನೆದು..
ನಾಗೇಶ್, ಗಾಂಧಿ ಬಗೆಗಿನ ಪದ್ಯ ಚೆನ್ನಾಗಿದೆ.
ಗಾಂಧಿ ನೆನೆದು ಕವಿ ಗೋಪಾಲಕೃಷ್ಣ ಅಡಿಗರಿಗೆ ಅನಿಸಿದ್ದು ಹೀಗೆ...
--
ಗಾಂಧಿ ಬಂದ. ಅವನ ಹಿಂದೆ ಮೊದಲು ಬಂದ ಭೂಪನು
ನಾನೆ. ಅವನ ಕೊರಳಿಗೇರಿದಂಥ ಮೊದಲ ಹಾರವು
ನನ್ನದೇ. ಖಾದಿಯುಡಿರಿ ಎಂದನೋ ಇಲ್ಲವೋ
ಖಾದಿ ತೊಟ್ಟ ಧೀರ ನಾನು ! ರಾಟೆ ಹಿಡಿದು ನೂತೆನಯ್ಯ,
ಅದರೊಳಿಲ್ಲ ಸಂಶಯ. ಹಾಗು ಹೀಗು ಜೈಲಿಗೂ
ನುಸುಳಿಹೋದೆ ನಿಶ್ಚಯ. ‘ ಗಾಂಧಿಗೆ ಜೈ, ಗಾಂಧಿಗೆ ಜೈ’
ಕೊರಳು ಬಿರಿವ ತನಕವೂ ಕಿರಲಿದೆ ನಾ ಇಷ್ಟು ದಿನ ;
ಈಗ ಹೋದನವನು. ನಾನು ಮಾಡಲೇನೋ ತಿಳಿಯದು;
ಅವನು ಒಂದು ಸಲವೊ ಏನೊ ಮಾಂಸ ತಿಂದು ಅತ್ತನು;
ದಿನದಿನವೂ ಅದನೆ ತಿಂದು ಅನುಗಾಲವು ಅಳುವೆ ನಾನು !
ಒಂದು ಸಲವೊ ಏನೊ ಅವನು ಸುಳ್ಳು ಹೇಳಿ ಅಳಲಿದ;
ನನಗೊ ದಿನಾ ಅದೇ ಕೆಲಸ, ಅದೇ ಅಳಲು ಪ್ರತಿದಿನ.
ಅವನೋ ಮಹಾತ್ಮನಾದ; ಅರಳಲಿಲ್ಲ ನನ್ನ ಮನ.
ನಾನು ಅವನು ಒಂದೆ ಲೋಹ,
ಕಬ್ಬಿಣ-ಕರಿ ಕಬ್ಬಿಣ.
ಯಾವ ರಸವು ಸೋಂಕಿತವನ ?
ಯಾವ ಬೆಂಕಿ ತಾಕಿತವನ ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ;
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ ;
ಆರೆಂದರೆ ಹಿಗ್ಗಲಿಲ್ಲ, ಮೂರೆಂದರೆ ಕುಗ್ಗಲಿಲ್ಲ; ನಾನಚ್ಯುತ, ನಾ ನಿರ್ಜರ, ನಾನೆ ಅದ್ವಿತೀಯ;
ಒಂದೆ ರೀತಿ, ಒಂದೆ ರೀತಿ ಒಂದೆ ಸಮ, ನೆಲಮಟ್ಟ-
ಅರಿತಿರೇನು ನೀವು ನನ್ನ ಹೆಬ್ಬಾಳಿನ ಗುಟ್ಟ !
(ನನ್ನ ಅವತಾರ ಪದ್ಯದಿಂದ)
In reply to ಉ: ಅರೆ ಬತ್ತಲೆ ಫಕೀರನ ನೆನೆದು.. by ರಾಮಕುಮಾರ್
ಉ: ಅರೆ ಬತ್ತಲೆ ಫಕೀರನ ನೆನೆದು..
ರಾಮ್ ಕುಮಾರ್ ನಮಸ್ಕಾರ ಮತ್ತು ಧನ್ಯವಾದಗಳು. ಗಾಂಧಿವಾದದ ಹುಸಿ ಯಾ ಡೊಂಗಿತನದ ಅನುಕರಣೆಯನ್ನು ಅಡಿಗರಿಗಿಂತ ಸೊಗಸಾಗಿ, ಇಷ್ಟೆ ನವಿರಾದ ವ್ಯಂಗ್ಯದಲ್ಲಿ ಲೇವಡಿ ಮಾಡುವುದು ಕಷ್ಟ. ಅದಕ್ಕೆ ಅಡಿಗರ ಕವನ ಸದಾ ಕಾಲವು ಮನದಲ್ಲಿ ನಿಂತುಬಿಡುವುದು. ಅದರ ಸವಿರುಚಿಯನ್ನು ಮತ್ತೆ ಉಣಬಡಿಸಿದ್ದಕ್ಕೆ ಧನ್ಯವಾದಗಳು.
ಉ: ಅರೆ ಬತ್ತಲೆ ಫಕೀರನ ನೆನೆದು..
ಗಾಂಧಿ ಒಬ್ಬ ಸಾಧಕ. ಕೆಲವು ಅರೆಕೊರೆಗಳು ಇದ್ದರೂ ಅವನ್ನು ಮೀರಿ ನಿಂತವರು! ತಡವಾಗಿ ಪ್ರತಿಕ್ರಿಯಿಸುತ್ತಿರುವೆ. ಗಾಂಧಿಯ ನೆನಪು ಅಕ್ಟೋಬರ್, 2 ಮತ್ತು ಜನವರಿ, 30ಕ್ಕೆ ಸೀಮಿತವಾಗಿಬಿಟ್ಟಿದೆ.
In reply to ಉ: ಅರೆ ಬತ್ತಲೆ ಫಕೀರನ ನೆನೆದು.. by kavinagaraj
ಉ: ಅರೆ ಬತ್ತಲೆ ಫಕೀರನ ನೆನೆದು..
ನಮಸ್ಕಾರ ಮತ್ತು ಧನ್ಯವಾದಗಳು ಕವಿಗಳೆ. ನಿಮ್ಮ ಮಾತು ನಿಜ - ನಮ್ಮ ಆಚರಣೆ, ನೆನಪುಗಳೆಲ್ಲ ಬರಿಯ ಜನ್ಮದಿನ ಪುಣ್ಯತಿಥಿಗಳ ಸುತ್ತಲಷ್ಟೆ ಜಾಸ್ತಿ. ಪ್ರತಿ ವ್ಯಕ್ತಿಯಲ್ಲು ಇರುವ ದೌರ್ಬಲ್ಯ, ಸಾಮರ್ಥ್ಯಗಳ ಹೂರಣದ ಪರಿಗಣನೆಯಲ್ಲಿ ಹೇಳುವುದಾದರೆ ಆ ಪರಿಮಿತಿಯಲ್ಲು ತನ್ನ ಜೀವನ್ ಶೈಲಿ, ದೃಷ್ಟಿಯಿಂದರೆ ಪ್ರಭಾವ ಬೀರಿದ ವ್ಯಕ್ತಿತ್ವ ಗಾಂಧೀಜಿಯದು.