ಈ ಕಥೆ ಗೊತ್ತಾ..?
ಸಾಗರದಾಚೆಯಲೊಂದು ಸುಭಿಕ್ಷ ನಾಡು
ಪರಮ ಶಿವಭಕ್ತ ರಾಜ ಕಾಯುವ ಬೀಡು
ದೊರೆಗೊಬ್ಬಳು ಮುದ್ದಿನ ತಂಗಿ ಜೊತೆಗೆ
ವಿಧವೆ ಅವಳ ಬಾಳೇ ಬೇಸರ ಅವಗೆ
ತವರಲ್ಲೇ ಇದ್ದವಳು ಹೊರಟಳು ಹೊರಗೆ
ಸುಮ್ಮನೆ ವಾಯುವಿಹಾರ ಕಾಲಹರಣಕೆಂದೆ
ಸಂಜೆಯ ತಂಗಾಳಿಗೆ ಎದೆಯ ಆಸೆಯುಕ್ಕಿ
ವಿರಹದ ಬೇಗೆಯು ಕಾಯಿಸಿತು ಬಡದೇಹವ
ಕಂಡಳಾಗ ನೀಳ ಸುಂದರ ಪುರುಷನೊಬ್ಬನ
ಮಾಡಿಕೊಂಡಳು ತಾನೇ ಪ್ರೇಮ ನಿವೇದನೆ
ಆದರೇನು? ಅವ ವಿವಾಹಿತನೆಂದ ನಸು ನಕ್ಕು
ಅವನೇ ತೋರಿದ ಜೊತೆಯಲ್ಲಿದ್ದ ಇನ್ನೋರ್ವನ
ಮನದ ಕಾವನಿಳಿಸಿ ನಾಚುತ್ತಾ ಕೇಳಿದಳು
ಅನುರಾಗದ ಅರ್ಪಣೆ ಕೇಳದೆ ಕುಪಿತಗೊಂಡ
ಮಾತಿಗೆ ಮಾತು ಬೆಳೆದು ಗಾಯವಾಯಿತು
ಅಳುತ್ತಾ ಹಿಂದಿರುಗಿದಳು ಪರಿತ್ಯಕ್ತ ನಾರಿ
ವಿಷಯ ಮುಟ್ಟಿತು ಕೊನೆಗೆ ರಾಜನಿಗೆ
ಮಮತೆ ಹರಿದು ಕೋಪದಲ್ಲಿ ಉರಿದುರಿದು
ಅಬ್ಬರಿಸಿ ಬಂಧಿಸಿ ಹಾರಿಸಿಕೊಂಡು ಬಂದ
ಸೋಗಿನಲಿ ವಿವಾಹಿತನ ಪ್ರೀತಿಯ ವನಿತೆಯನು
ಪತಿವ್ರತೆಯ ಬಂಧನವ ಬಿಡಿಸಲು ಆಯಿತು
ಮಹಾಯುದ್ಧ ಸಾಗರಕೆ ಸೇತುವೆ ಕಟ್ಟಿ
ಮುತ್ತಿದರು ರಾಜ್ಯವ ವಧಿಸಿದರು ಅಣ್ಣನ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ ಎಂಬ ಸುಖಾಂತದಲ್ಲಿ
Comments
ಉ: ಈ ಕಥೆ ಗೊತ್ತಾ..?
ವಾಹ್! ಒಂದು ಪದ್ಯದಲ್ಲಿ ಸಂಪೂರ್ಣ ರಾಮಾಯಣ - ಚೆನ್ನಾಗಿದೆ !
In reply to ಉ: ಈ ಕಥೆ ಗೊತ್ತಾ..? by nageshamysore
ಉ: ಈ ಕಥೆ ಗೊತ್ತಾ..?
ಹೌದು. ಧನ್ಯವಾದಗಳು