ಆ ಡ್ರೆಸ್ ಹಾಕಿದ್ರೆ ಹೀಗೆ ಆಗ್ತಿರಲಿಲ್ಲ!!
“ಅಮ್ಮ, ನಾಳೆ ನೀಲಿ-ಕೆಂಪು ಹಾಕಲಾ? ಅಥವಾ ಹಸಿರು-ಬಿಳಿನಾ?” , “ಎಷ್ಟು ಸಲ ಕೇಳ್ತೀಯಾ? ಈಗ ಗಂಟೆ ಹನ್ನೊಂದು ಮಲಕ್ಕೋ ಸುಮ್ಮನೆ”. ಬೆಳಗ್ಗೆ ಎದ್ದಾಗ ಕೂಡ ನಂಗಿನ್ನು ಡಿಸೈಡ್ ಮಾಡಕ್ಕೆ ಆಗಿರಲಿಲ್ಲ. ಕೊನೆಗೆ ಒಂದನ್ನು ಹಾಕಿ, ಸರಿಯಾಗದೆ ಮತ್ತೆ ಬಿಚ್ಚಿ ಇನ್ನೊಂದನ್ನು ಹಾಕಿಕೊಂಡು ಹೊರಟೆ. ಆದರೂ ಮೊದಲು ಹಾಕಿದ ಡ್ರೆಸ್ಸೇ ಇರಬೇಕಿತ್ತು ಅಂತ ಮನಸಲ್ಲಿ ಕೊರೆಯೋಕೆ ಆಗಲೇ ಶುರುವಾಗಿತ್ತು.
ಕಾಲೇಜಿನ ಮೊದಲ ದಿನ ಆವತ್ತು. ಎಷ್ಟು ಸಾಧ್ಯನೋ ಅಷ್ಟು ರೆಡಿಯಾಗಿದ್ದೆ. ಎಲ್ಲ ಸರಿಯಿದ್ದರೂ ಮತ್ತೆ ಮತ್ತೆ ನೋಡಿಕೊಳ್ಳುತ್ತಿದ್ದೆ. ಕಾಲೇಜಿನ ಅಷ್ಟು ಕಣ್ಣುಗಳು ಇಲ್ಲೇ ಇವೆ ಎಂದು ತಲೆಯೆತ್ತಲೂ ಸಂಕೋಚ ಪಡುವಂತಾಗಿತ್ತು. ಇನ್ನು ಚಿತ್ರ-ವಿಚಿತ್ರವಾಗಿ ಬಂದ ಹುಡುಗಿಯರ ನಡುವೆ ನನಗೆ ನಿಲ್ಲಲೇ ಭಯವಾಗುತ್ತಿತ್ತು. ಹುಡುಗರ ಗುಂಪಿನ ಕಡೆಗೆ ತಲೆಯೆತ್ತಿಯೂ ನೋಡಿರಲಿಲ್ಲ. ಅಲ್ಲೊಂದು ದೊಡ್ಡ ಹುಡುಗಿಯರ ಗುಂಪು ಕಾಣಿಸಿತು, ಮರೆಯಾಗೋಣವೆಂದು ಅತ್ತ ಹೊರಟೆ. ಅದೃಷ್ಟಕ್ಕೆ ಅದು ನನ್ನ ಕ್ಲಾಸಿನವರದೆ ಗುಂಪಾಗಿತ್ತು. ನನ್ನ ತರಹವೇ ನಾಚಿ ನೀರಾಗಿದ್ದ ಜಲಜ ಸಿಕ್ಕಿದ್ದು ಆಗಲೆ. ಜೊತೆ ಒಬ್ಬರಿರಲೂ ಊರು ಗೆಲ್ಲುವ ಪೌರುಷದಂತೆ. ಇಬ್ಬರೂ ಹೊಸ ಕಾಲೇಜನ್ನು ಅವಲೋಕಿಸ ತೊಡಗಿದೆವು.
ಅದು ಹೇಗೋ, ಫಸ್ಟ್ ಡೇ, ಫಸ್ಟ್ ಕ್ಲಾಸ್, ಫಸ್ಟ್ ಪೀರಿಯಡ್ ಶುರುವಾಗಿ ಬಿಟ್ಟಿತು. ಬೆಂಚಲ್ಲಿ ಕುಳಿತು ಕೋಣೆಯಲ್ಲಿದ್ದ ಎಲ್ಲರನ್ನೂ ಅಪಾದಮಸ್ತಕ ನೋಡ ತೊಡಗಿದೆವು. ಆಗ ಒಳಗಡಿ ಇಟ್ಟವರೇ ನಮ್ಮ ಫಸ್ಟ್ ಲೆಕ್ಚರರ್, ಅವರು ಲೆಕ್ಚರರ್ ಅಥವಾ ಸ್ಟುಂಡೆಂಟ್ ಅಂತ ಅನುಮಾನವಿತ್ತು. ಒಂದು ನಗು ಬೀರಿ ಹಾಜರಾತಿ ಕರೆಯಲು ಪ್ರಾರಂಭಿಸಿದರು. ಎಲ್ಲರ ಕಣ್ಣುಗಳ ಏಕ ದೃಷ್ಟಿಯಿಂದಲೋ, ದೊಡ್ಡ ಮಕ್ಕಳೆಂಬ
ಭಯದಿಂದಲೋ ಅವರು ಕೂಡ ನರ್ವಸ್ ಆದಂತೆ ಕಂಡರು. ಹುಡುಗರ ಕಿಸಿ ಪಿಸಿ ಮಾತಿನಿಂದ ಮತ್ತಷ್ಟು ಭೀತಿಗೊಂಡದ್ದು ನೋಡಿದ ಮೇಲೆ ನನಗೆ ಪಾಪ ಅನಿಸಿತು.
A ಯಿಂದ ಆದೇಶ್ ಎಂದು ಶುರುವಾಯಿತು. ಪಾಠಕ್ಕಿಂತಲೂ ತದೇಕ ಚಿತ್ತದಿಂದ ಅಟೆಂಡೆನ್ಸ ಕೇಳುತ್ತಿದ್ದೆ. ಆದರೆ ಮಧ್ಯೆಯಲ್ಲೋ ಅಧ್ಯಾಪಕರ ಮೇಲೆ ಮರುಕ ಬಂದು, ಅವರ ಜೀವನದ ಘಟನೆಗಳನ್ನು ನಾನೇ ಊಹಿಸಿಕೊಳ್ಳತೊಡಗಿದೆ. ಅಂದರೆ ಕಷ್ಟ ಪಟ್ಟು ಓದಿ, ಪರೀಕ್ಷೆ ಪಾಸು ಮಾಡಿ, ಪಾಠ ಮಾಡಬೇಕೆಂಬ ಗುರಿಯಿಟ್ಟು ಕೊಂಡು, ಎಂಜಿನಿಯರ್ ಕೆಲಸಗಳನ್ನೆಲ್ಲಾ ಬದಿಗಿಟ್ಟು ಬಂದರೆ ಕ್ಲಾಸಲ್ಲಿ ವಿದ್ಯಾರ್ಥಿಗಳಿಂದ ಅವಮಾನ. ಪಾಪ ಎಷ್ಟು ಬೇಸರ ಮಾಡಿಕೊಳ್ಳಬಹುದು. ಹೀಗೆ ಎತ್ತೆತ್ತಲೋ ಸಾಗಿತ್ತು ನನ್ನ ತಲೆಹರಟೆ . ಆಗಲೇ ಪಕ್ಕದಲ್ಲಿದ್ದ ಜಲಜ ತಿವಿದು ‘ರೇಖಾ B ಅಂದರೆ ನೀನೆನಾ” ಅಂದಳು. ಆಗ ನನ್ನನ್ನೇ ಹುಡುಕುತಿದ್ದ ವಾಸ್ತವಕ್ಕೆ ನಾನು ಬಂದೆ. ದಿಗ್ಗನೆ ಎದ್ದು ನಿಂತು “ಪ್ರೆಸೆಂಟ್ ಸರ್” ಎಂದು ತಡವರಿಸಿದೆ.
ಒಂದು ಕ್ಷಣ ಮೌನ. ಎಲ್ಲರೂ, ಕಿಟಕಿ, ಬಾಗಿಲುಗಳನ್ನು ಸೇರಿಸಿ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದವು. ಸರ್ ನ ಕಣ್ಣುಗಳು ನನ್ನಲ್ಲೇ ನೆಟ್ಟಿದ್ದವು. ಸಿಟ್ ಡೌನ್ ಎಂಬ ಅಘೋಷಿತ ವಾಕ್ಯ ಕೇಳಿದಂತಾಗಿ ಕೂರಲು ಹವಣಿಸಿದೆ. ಆದರೆ ಕೇಳಿದ್ದೆ ಬೇರೆ, absent minded or mind itself is absent? . ಅವರ ಡೈಲಾಗ್ ಗೆ ನಾನೇ ಅರ್ಧ ಕ್ಷಣ ಬೆರಗಾದೆ. ಎಲ್ಲಾ ಕಡೆಯಿಂದ ನಗು ಶುರುವಿಟ್ಟಿತು. ಈ ತನಕ ಇದ್ದ ಶೀತಲ ಜಡತ್ವ ಮಾಯವಾಗಿ ಆತ ಹೀರೋ ಆಗಿದ್ದ. ತೀರಾ ಶಿಳ್ಳೆ ಹೊಡೆಯದೆ ಹುಡುಗರು ಸಂತಸವನ್ನು ಹೇಗೋ ಹತ್ತಿಕ್ಕಿಕೊಂಡರು. ನಗುವಿನಲ್ಲಿ ಅವನನ್ನು ಒಪ್ಪಿದ ಪ್ರತಿಕ್ರಿಯೆ ಆತನನ್ನು ಖುಷಿ ಪಡಿಸಿರಬೇಕು. ನಾನು ಮುಖ ಎತ್ತಲಾಗದೆ ಸುಮ್ಮನೆ ಕುಳಿತೆ. ಅದೇ ವಾಕ್ಯ ಅದೇ ಶೈಲಿಯಲ್ಲಿ ಮತ್ತೆ ಅನುರಣಿಸಿತು. ಮರೆತು ಹೋಗತ್ತೇನೋ ಎಂದು ಎಲ್ಲರೂ ಪುನಃ ಅದನ್ನು ಹೇಳಿ ಆನಂದಿಸುತ್ತಿದ್ದರು.ನಾನು ಮಾತ್ರ ನಗಲು ಅರಿಯದೆ ,ಅಳಲು ಆಗದೆ ಇದ್ದೆ. ಎಲ್ಲೋ ಕೇಳಿದ ಡೈಲಾಗ್ ಹೊಡೆಯಲು ನಾ ಸಂದರ್ಭ ಸೃಷ್ಟಿಸಿದ್ದೆ. ದಿನ ನಿತ್ಯ ಅದು ನಮ್ಮ ಕ್ಲಾಸಿನಲ್ಲಿ ಪ್ರತಿಧ್ವನಿಯಾಗುತ್ತಲೇ ಇತ್ತು.
Comments
ಉ: ಆ ಡ್ರೆಸ್ ಹಾಕಿದ್ರೆ ಹೀಗೆ ಆಗ್ತಿರಲಿಲ್ಲ!!
ತೀರಾ ಸಣ್ಣದೆನಿಸುವ ವಿಷಯಗಳೂ ಕೂಡ ಸೂಕ್ಷ್ಮ ಆತಂಕಗಳಾಗಿ ಮನಸನ್ನು ಕಾಡುವಾಗ, ಅದು ಉಂಟು ಮಾಡುವ ಅನ್ಯಮನಸ್ಕತೆ ಅಭಾಸಗಳಿಗೆ ಕಾರಣ ಮೂಲವಾಗುವುದನ್ನು ತುಂಬಾ ಸೊಗಸಾಗಿ ಬಿಂಬಿಸಿದ ಕಥೆ. ಚುಟುಕಾದ ಕಥೆಯ ಸಾಲುಗಳಲ್ಲೆ ಆ ಮಾನಸಿಕ ಗೊಂದಲ, ಆತಂಕಗಳ ದೆಸೆಯಿಂದೊದಗುವ ವ್ಯತಿರಿಕ್ತ ಪರಿಣಾಮಗಳು ಚಿಕ್ಕ ಗುಳ್ಳೆಯಂತಹ ವಸ್ತುವನ್ನು ಹೇಗೆ ಗುಡ್ಡೆಯಾಗಿಸಿಬಿಡಬಹುದೆಂದು ಸೊಗಸಾಗಿ ನಿರೂಪಿತವಾಗಿದೆ. ಒಬ್ಬರ ಅವಹೇಳನ, ಅಪಹಾಸ್ಯ ಮಿಕ್ಕವರ ಕೀಟಲೆಗೆ ವಸ್ತುವಾಗುವ ರೀತಿ ತುಂಬಾ ಸಹಜವಾಗಿ ಮೂಡಿಬಂದಿದೆ. ಇಂತಹ ಸಂಧರ್ಭಗಳು ಉಂಟುಮಾಡುವ ಕೀಳರಿಮೆಯಿಂದ ಹೊರಬರುವುದೆ ಒಂದು ದೊಡ್ಡ ಸಾಹಸವಾಗಿ ಬಿಡುತ್ತದೆ...!
In reply to ಉ: ಆ ಡ್ರೆಸ್ ಹಾಕಿದ್ರೆ ಹೀಗೆ ಆಗ್ತಿರಲಿಲ್ಲ!! by nageshamysore
ಉ: ಆ ಡ್ರೆಸ್ ಹಾಕಿದ್ರೆ ಹೀಗೆ ಆಗ್ತಿರಲಿಲ್ಲ!!
ಹೌದು .. ಒಮ್ಮೆ ಕೀಳರಿಮೆ ಎನಿಸಿದ್ದು ಕಾಲಾಂತರದಲ್ಲಿ ಹಾಸ್ಯವಾಗಿ ಬಿಡುತ್ತದೆ. ಅದಕ್ಕೆಂದೇ ಹಾಸ್ಯದ ಎಳೆಯನ್ನಿಟ್ಟು ಚುಟುಕದ ರೀತಿ ಸೇರಿಸಿರುವುದು. ಧನ್ಯವಾದಗಳು