ಪರಿಭ್ರಮಣ
ಒಂದು ಕಾದಂಬರಿಯ ಸುತ್ತಾ ....
ಈಗಷ್ಟೇ ಮುಗಿಸಿದ 'ಪರಿಭ್ರಮಣ' ಎಂಬ ಕಾದಂಬರಿಯ ಕುರಿತು ಈ ಬರಹ. ನಾಗೇಶ ಮೈಸೂರು ಅವರ ಈ ಕೃತಿ, ಸಂಪದ online ಪತ್ರಿಕೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂದಿದೆ.ಕೆಳಗಿನ ಲಿಂಕ್ ನಲ್ಲಿ ಈ ಸರಣಿ ಲಭ್ಯವಿದೆ.
https://nageshamysore.wordpress.com/00162-%e0%b2%95%e0%b2%a5%e0%b3%86-%e...
ಪರಿಭ್ರಮಣೆ ಮುಗಿದಿದೆಯಾದರೂ ಇದೊಂದು ಕಾಡುವ ಆವರ್ತನ. ಕಥೆಯಲ್ಲಿ ಜೀವನದ ಅವರೋಹಣವನ್ನು, ಅದರ ಅಧಃಪತನದ ವಿವಿಧ ಮುಖಗಳನ್ನು ಯಶಸ್ವಿಯಾಗಿ ಚಿತ್ರಿಸಿದ್ದಾರೆ. ಇದನ್ನೆಲ್ಲಾ ದಾಟಿ ಆರೋಹಣದ ಮಾರ್ಗವನ್ನು ತರ್ಕಬದ್ಧವಾಗಿ, ಆಧ್ಯಾತ್ಮಿಕವಾಗಿ ವಿವರಿಸಿರುವುದು ಅದ್ಭುತ.
ಈಗಿನ ಕಾಲಮಾನಕ್ಕೆ ಸರಿಯಾಗಿ IT ಯ ಬದುಕಿನ ಸೂಕ್ಷ್ಮತೆಯನ್ನು, ವಿದೇಶದಲ್ಲಿ ಭಾರತೀಯರ ಜೀವನವನ್ನು, ಕೆಲಸದ ಒತ್ತಡವನ್ನು, ಮಾನಸಿಕ ಸ್ತರವನ್ನು ಬಿಂಬಿಸುವ ಅಪರೂಪದ ವಿಶೇಷ ಕೃತಿ 'ಪರಿಭ್ರಮಣ'.
ಮೊದಲಿಗೆ ಅಧಃಪತನದ ದಾರಿಯಲ್ಲಿ ಸಾಗುವ ಕಥೆಯ ಮುಖ್ಯಪಾತ್ರ. ಮಾನಸಿಕ ತೊಳಲಾಟದಲ್ಲಿ ಲೌಕಿಕ ಜಂಜಡದಲ್ಲಿ ಸಿಕ್ಕಿಕೊಂಡು ನೈಜವಾಗಿ ಸೋಲುವ ಕ್ಷಣಗಳು ಮನಸ್ಸು ಮುಟ್ಟುತ್ತದೆ. ಸಾಮಾನ್ಯವಾಗಿ ಎಲ್ಲಾ ಕಥೆಯಂತೆ ನಾಯಕನಿಗೆ ದೌರ್ಬಲ್ಯಗಳೇ ಇಲ್ಲದಂತೆ ಮಾಡಿ , ಅವನನ್ನು ಆರಾಧಿಸುವಂತೆ ಮಾಡದೆ ಲೇಖಕರು ವಾಸ್ತವಕ್ಕೆ ಹತ್ತಿರವಾಗುವಂತೆ ಬರೆದಿದ್ದಾರೆ.
ಎಷ್ಟೇ ದೌರ್ಬಲ್ಯಗಳಿದ್ದರೂ ,ಕೆಳ ಬಿದ್ದರೂ ಜೀವನ ಸಾಗಲೇಬೇಕು. ಕರ್ತವ್ಯ ನಿಭಾಯಿಸುತ್ತಾ, ಪಶ್ಚಾತ್ತಾಪದ ಬಿಸಿ ತುಪ್ಪವನ್ನು ಇಟ್ಟುಕೊಂಡು ಮುಂದುವರಿಯುವ ರೀತಿ ಚೆನ್ನಾಗಿ ಮೂಡಿ ಬಂದಿದೆ. ಇನ್ನು ಇದೇ ಭೂಮಿಕೆಯಲ್ಲಿ ಹುದುಗಿಸಿರುವ IT ಯ ಬಹುಮುಖ್ಯ ಭಾಗವಾದ production/go live. ಅಧ್ಯಾಯವಂತೂ ಟೆಕ್ಕಿಗಳಿಗೆ ಹಬ್ಬದೂಟದಂತೆ, ಅಲ್ಲಿನ ಪರಿಚಯವಿಲ್ಲದವರಿಗೆ ಇಣುಕಿ ನೋಡಲು ಕೊಟ್ಟ ಕನ್ನಡಿಯಂತೆ ಸಹಾಯಕವಾಗಿದೆ. ಈ ಕ್ಷೇತ್ರದ ಒಳತಂತ್ರ, ಷಡ್ಯಂತ್ರ , ಪ್ರತಿ ತಂತ್ರ ಇವೆಲ್ಲ ಇಲ್ಲಿ ದುಡಿಯುವವರಿಗೆ ಉಪಯುಕ್ತ ಮಾಹಿತಿಯಂತಿದೆ.
ಮನಸ್ಸಿನ ತೊಳಲಾಟದ ,ನೋವಿನ ಪರಮಾವಧಿಯಲ್ಲಿ ಔಷಧಿಯಂತೆ ಸಲಹುವ ಆಧ್ಯಾತ್ಮಿಕ ಉಪಚಾರ ಸಮಯೋಚಿತವಾಗಿದೆ. ದಾರಿ ತಪ್ಪಿದಾಗ ತಿದ್ದುವ ಗುರುವಿನ ಸಹಾಯ ಇಲ್ಲಿ ಓದುಗನಿಗೂ ಕೂಡ ಮಾನಸಿಕ ಸ್ತರವನ್ನು, ಜ್ಞಾನವನ್ನು ಹೆಚ್ಚಿಸುತ್ತದೆ. ಅಂತ್ಯದಲ್ಲಿ ತಾಮಸ ಭಾವಗಳಿಂದ ಮುಕ್ತವಾಗುವ ಕ್ರಿಯೆ, ಇನ್ನಷ್ಟು ಒಗಟುಗಳಿಗೆ ತೆರೆದುಕೊಳ್ಳುವ ಹುಮಸ್ಸು ಇವೆಲ್ಲವೂ ಕಥೆಯನ್ನು ಮುಗಿಸುತ್ತಾದರೂ ಮತ್ತೊಂದು ಸುತ್ತು ಪರಿಭ್ರಮಣದಲ್ಲಿ ಶುರುವಾಗುತ್ತದೆ.
ಒಟ್ಟಿನಲ್ಲಿ ವಿದೇಶಿ ಸಂಸ್ಕಾರದ ಗಂಧದಲ್ಲಿ, ಎಂಜಿನಿಯರುಗಳ ಆಂತರ್ಯದಲ್ಲಿ, ಮನಸಿನ ನೂರು ಭಾವನೆಗಳಲ್ಲಿ,ಹೆಣ್ಣಿನ ಮೋಹದಲ್ಲಿ, ಆಧ್ಯಾತ್ಮದ ಪಾವಿತ್ರ್ಯದಲ್ಲಿ ಒಳ ಹೊಕ್ಕು, ಚಿಂತಿಸಿ,ಮಂಥಿಸಿ , ಅಭ್ಯಸಿಸಿ, ಉತ್ತರ ಹುಡುಕುವ ಈ ಸುದೀರ್ಘ ಕಾದಂಬರಿ ಅಮೋಘವಾಗಿದೆ. ಇಂಥ ಪ್ರಣತಿಯೊಂದನ್ನು ಹೊತ್ತಿಸಿದ ಲೇಖಕರಿಗೆ ಧನ್ಯವಾದಗಳು.
Comments
ಉ: ಪರಿಭ್ರಮಣ
ಸಂಪದದಲ್ಲೇ ಓದಿ ಅಲ್ಲಲ್ಲಿಯೇ ಪ್ರತಿಕ್ರಿಯಿಸಿರುವೆನಾದ್ದರಿಂದ ಇಲ್ಲಿ ಹೇಳುವುದೇನೂ ಇಲ್ಲ. ನೆನಪಿಸಿದ್ದಕ್ಕೆ ಧನ್ಯವಾದಗಳು, ಮನುಶ್ರೀಯವರೇ.