ಕಥೆ : ಇಂದಿರಾ - ಪ್ರಿಯದರ್ಶಿನಿ

ಕಥೆ : ಇಂದಿರಾ - ಪ್ರಿಯದರ್ಶಿನಿ

                                                                                              ಕಥೆ - ಇಂದಿರಾ - ಪ್ರಿಯದರ್ಶಿನಿ

ಮೊಲೆ ಮುಡಿಬಂದಡೆ ಹೆಣ್ಣೆಂಬರು.

ಗಡ್ಡ ಮೀಸೆ ಬಂದಡೆ ಗಂಡೆಂಬರು.

ನಡುವೆ ಸುಳಿವ ಆತ್ಮನು

ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ!! - ಜೇಡರ ದಾಸಿಮಯ್ಯ

                        ಶಿವಾಜಿರಾವ ಮೊರೆ ತನ್ನ ಅಟೋರಿಕ್ಷಾ ತಂದು ಜರ್ಮನ್ ದವಾಖಾನಿ ಸರ್ಕಲ್‍ನ ರಿಕ್ಷಾ ಸ್ಟ್ಯಾಂಡಿನಲ್ಲಿ ನಿಲ್ಲಿಸಿದಾಗಲೂ ನಿನ್ನೆ ರಾತ್ರಿ ಬಿದ್ದ ಕನಸನ್ನೆ ಅವನ ಮನಸು ಧ್ಯಾನಿಸುತ್ತಿತ್ತು. ಲಗ್ನಾಗಿ ಹದಿನಾಲ್ಕು ವರ್ಷ ಆದರೂ ಮಕ್ಕಳಾಗದ ಶಿವಾಜಿಗೆ ಅನೇಕ ಬಾರಿ ಎರಡನೇ ಮದುವೆ ವಿಚಾರ ಬಂದರೂ ತನ್ನ ಅಲ್ಪ ಆದಾಯದಲ್ಲಿ ಅದು ಸಾಧ್ಯವಾಗದ ಮಾತು ಎಂದು ಬಂದ ವಿಚಾರವನ್ನು ಹಾಗೇ ದೂಡಿ ಬಿಡುತ್ತಿದ್ದ. ಈಗ ಅವನ ಹೆಂಡತಿ ಜಮುನಾ ಬಸಿರಾಗಿದ್ದು ಎರಡೂ ಬಳಗದಲ್ಲಿ ಸಂತಸ ತಂದಿತ್ತು. ಜಮುನಾ ಬಾಣಂತನಕ್ಕೆಂದು ತನ್ನ ತವರು ಮನೆ ಮದಾರಮಡ್ಡಿಗೆ ಶಿಫ್ಟಾಗಿದ್ದಳು. ವಾರಕ್ಕೊಮ್ಮೆ ಸಂಜಿ ಮುಂದ ತಾನೂ ಮದಾರಮಡ್ಡಿಗೆ ಹೋಗಿ ಒಂದು ತಾಸಿದ್ದು ಹೆಂಡತಿ ಜೊತೆ ಎಲ್ಲಾ ಸುದ್ದಿ ಹೇಳಿ ಅತ್ತಿ ರೇಣವ್ವ ಕೊಟ್ಟ ಚಾ ಕುಡಿದು ಬರುತ್ತಿದ್ದ. ಶಿವಾಜಿಯ ಆದರ್ಶ ವ್ಯಕ್ತಿ ಅಂದರೆ ಇಂದಿರಾಗಾಂಧಿ. ಇಂದಿರಾಗಾಂಧಿಗೆ ಯಾರಾದರೂ ಬಯ್ದರೆ ಅವರನ್ನು ಹೊಡೆಯಲು ಏರಿ ಹೋಗಿಬಿಡುತ್ತಿದ್ದ. ಸ್ವಲ್ಪ ಹುಂಬತನ ಶಿವಾಜಿಯಲ್ಲಿತ್ತು. ರಾಜಕೀಯ ಪ್ರಜ್ಞೆ ಮತ್ತು ರಾಜಕೀಯ ಕುರಿತಂತೆ ಅವನ ಮಾತುಗಳನ್ನ ರಿಕ್ಷಾ ಸ್ಟ್ಯಾಂಡಿನಲ್ಲಿ ಇತರ ರಿಕ್ಷಾ ಚಾಲಕರಾದ ಫಕ್ರು, ಯುಸುಫ್, ವಿಠ್ಠಲ, ಸಿದ್ಧಲಿಂಗ ಮಹಾಂತೇಶ ಇವರೆಲ್ಲ ಕೇಳುತ್ತಿದ್ದರು. ‘ಲೇ! ಮಕ್ಕಳ್ರ ! ನಮ್ಮ ದೇಶದ ರಾಜಕಾರಣದಾಗ ಗಂಡಸ ಅಂತಿದ್ರ ಅದು ಇಂದ್ರಾಗಾಂಧಿ ಒಬ್ಬಾಕಿನ ಆ ಮಕ್ಕಳು ಬ್ರಿಟೀಷರು ಒಂದ ಇದ್ದ ಭಾರತಾನ ಮೂರು ತುಂಡ ಮಾಡಿದರು. ಈ ಕಡೆ ಒಂದು ಪಾಕಿಸ್ತಾನಾ ಆ ಕಡೆ ಒಂದು ಪಾಕಿಸ್ತಾನಾ ಮಾಡಿ ನಡಕ ನಮ್ಮನ್ನ ಇಟ್ರು. ಈ ನಮ್ಮ ಅವ್ವ ಪಾಕಿಸ್ತಾನಾ ಎರಡು ಮಾಡಿದಳು. ಇಲ್ಲದಿದ್ರ ಎರಡರ ನಡುವೆ ನಾವು ಶೆಗಣಿ. . . ಶೆಗಣಿ. . . ಆಕಿದ್ವಿ’. ವಿರೋಧ ಪಕ್ಷದವರು ಆಕಿನ್ನ ದುರ್ಗಾದೇವಿಗೆ ಹೋಲಿಸಿದರು ತೀಳಿತಿಲ್ಲ’. ಎಂದು ಒಂದು ಬೀಡಿ ಹಚ್ಚಿ ರಿಕ್ಷಾಕ್ಕ ಒಂದು ಕೈ ಆನಿಸಿ ನಿಂತು ಕೊಂಡು ದುರ್ಗಾ ಸ್ತೋತ್ರ ಹೇಳಿದಂಗ ಇಂದಿರಾ ಸ್ತೋತ್ರ ಹೇಳುತ್ತಿದ್ದ. ಮಹಾಂತೇಶ ವಿಠ್ಠಲ ಕೂಡಿ ಅವನನ್ನು ಇನ್ನಷ್ಟು ಕೆಣಕಿ ಹುರಿದುಂಬಿಸುತ್ತಿದ್ದರು. ಜಮುನಾ ಬಸಿರಾದ ಮೇಲೆ ಶಿವಾಜಿ ಇನ್ನಷ್ಟ ಹುರುಪಾಗಿದ್ದ. ತನಗ ಮೊದಲನೇದ್ದು ಹೆಣ್ಣ ಆಗಲಿ ಎಂದು ಬಯಸಿದ್ದ. ‘ಪೈಲಾ ಬೇಟಿ ತೂಪ ರೋಟಿ’ ಅಂತಾರಲ್ಲ ಎಂದು ಜ್ಞಾಪಿಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲ ತಾನು ಅವಳನ್ನ ಇಂದಿರಾಗಾಂಧಿ ತರಹಾ ಬೆಳಸಬೇಕು ಅನ್ನೂದು ಅವನ ಒಳ ಇಚ್ಛೆಯಾಗಿತ್ತು.

    ನಿನ್ನೆ ರಾತ್ರಿ ಒಂದು ಗಿರಾಕಿನ್ನ ಗಾಂಧಿ ಚೌಕಿನಲ್ಲಿ ಇಳಿಸಿ ಮದಾರಮಡ್ಡಿಗೆ ಬಂದ. ಹೆಂಡತಿನ್ನ ಮಾತಾಡಿಸುತ್ತಾ ಅಂದಿನ ಸುದ್ದಿ ಹೇಳುತ್ತಿದ್ದ. ಅತ್ತಿ ರೇಣವ್ವ ಚಾ ತಂದು ಅಳಿಯನ ಮುಂದ ಇಟ್ಟಳು. ರೇಣವ್ವ ಶಿವಾಜಿನ್ನ ತಮ್ಮ ಅಂತಲೇ ಕರಿತಿದ್ದಳು. ‘ತಮ್ಮಾ ಯಾಕೊ ಮದ್ಯಾಣದಿಂದ ಈಕೀ ಮೆತ್ತಗಾಗ್ಯಾಳಪಾ, ಸ್ವಲ್ಪ ನೋವು ಬಂದಂಗ ಅನಸಾಕ ಹತ್ತ್ಯಾವು, ರಾತ್ರಿ ಏನರ ತ್ರಾಸ ಆದ್ರ ಹೆಂಗಂತ ಚಿಂತಿ ಆಗೈತಿ. ಇವ ನಮ್ಮ ಹಿರ್ಯಾಗ ಏನೂ ತಿಳಿಯೂದಿಲ್ಲ. ಮತ್ತ ರಾತ್ರಿ ಅಷ್ಟ ಹಾಕಿ ಮಲಗಿದನಂದ್ರ ಈ ಕಡೆ ಖಬರ ಇರೂದಿಲ್ಲ, ಎಬ್ಬಿಸಿದ್ರೂ ಏಳೂದಿಲ್ಲ, ನೀ ಇವತ್ತ ರಾತ್ರಿ ಇಲ್ಲೆ ಇರ್ತಿಯೇನ್ ನೋಡು’ ಅಂದಳು. ಅದಕ್ಕ ಜಮುನಾ ‘ಯವ್ವಾ ನಿಂದೂ. . . ಒಂದೀಟೂ ತಿಳಿಯಾಂಗಿಲ್ಲ. ಡಾಕ್ಟರ್ ಕೊಟ್ಟ ತಾರೀಖಿಗೆ ಇನ್ನ ಎಂಟು ದಿನಾ ಐತಿ ... ನನಗೇನಾಗಿಲ್ಲ ನಾ ಆರಾಮ ಅದೇನಿ ಹಂಗೇನರ ತ್ರಾಸ ಆದ್ರ ಫೋನ ಮಾಡ್ತೀನಿ, ಮೋಬೈಲ ಕಡಿ ಅಷ್ಟ ಲಕ್ಷ್ಯ ಇರಲಿ, ಅತ್ತಿ ಒಬ್ಬಾಕಿ ಅದಾಳ ಆಕಿಗೆ ಕಣ್ಣ ಬ್ಯಾರೆ ಕಾಣಂಗಿಲ್ಲ. ನೀವು ಮನಿಗೆ ಹೋಗ್ರಿ ಎಂದಳು. ‘ಆತೇಳು ಏನಾರ ಇದ್ರ ಫೋನ ಮಾಡ್ರಿ. ಯಕ್ಕಾ ನೀ ಯೇನ್ ಕಾಳಜಿ ಮಾಡಬ್ಯಾಡಾ’ ಎಂದವನೇ ಮನೆಗೆ ಬಂದು ರಿಕ್ಷಾ ಹಚ್ಚಿ ಊಟಾ ಮಾಡಿ ಮಲಗಿದ. ರಾತ್ರಿ ಕನಸಿನಲ್ಲಿ ಸಣ್ಣ ಹುಡುಗಿಯೊಬ್ಬಳು ಬಂದು ‘ಅಪ್ಪಾ’, ‘ಅಪ್ಪಾ’ ಎಂದು ಕರದಂಗೆ ಕನಸಿನಲ್ಲಿ ತನ್ನ ರಿಕ್ಷಾದಲ್ಲಿ ಕೂಡ್ರಿಸಿಕೊಂಡು ಉಣಕಲ್ ಕೆರಿಗೆ ಹೋದಂತೆ ಅನಿಸಿತು. ಅಲ್ಲಿ ಆಕಿ ಆಡಿಕೊತ ಹೋಗಿ ನೀರಿಗಿಳಿದು ಮೂಣಿಗಿಧಂಗ ತಾನು ಗಾಬರಿಬಿದ್ದು ಓಡಿಹೊಗಿ ನೀರಿನಿಂದ ಎತ್ತಿ ಉಳಿಸಿದಂಗ ಅವಳ ಬಟ್ಟೆಯೆಲ್ಲಾ ಒದ್ದಿ ಆಗಿ ಅತ್ತಂತೆ ಹೀಗೆ ಏನೇನೋ ಆಗಿ ಕೊನೆಗೆ ಎಚ್ಚರ ಆಗಿತ್ತು. ಇಂದು ರಿಕ್ಷಾ ಸ್ಟ್ಯಾಂಡಿಗೆ ಹಚ್ಚಿದ ಮೇಲೂ ಒಂದ ರೀತಿ ಸುಂದ ಹೊಡೆದು ಕೂತಿದ್ದ. ಹೀಗೆ ಸುಂದ ಹೊಡೆದು ಕುಳಿತ ಗೆಳೆಯನ ಬಗ್ಗೆ ಉಳಿದವರಿಗೆ ಆಶ್ಚರ್ಯ ಅನ್ನಿಸಿತು. ‘ಯಾಕೊ, ಶಿವಾಜಿ ವೈನಿನ್ನ ದವಾಖಾನಿಗೆ ಸೇರಿಸಿರೇನು?’ ಎಂದು ಕೇಳಿದರೆ ‘ಯೇ ಇಲ್ಲ ಬಿಡಲೇ’ ಎಂದುತ್ತರಿಸಿ ಸುಮ್ಮನಾದ. ನಿನ್ನೆ ರಾತ್ರಿ ಬಿದ್ದ ಕನಸಿನ ಬಗ್ಗೆ ಇವರ ಹತ್ತರ ಹೇಳಿದರ ಸುಮ್ನ ಆಸ್ಯಾಡತಾರ ಬ್ಯಾಡ ಎಂದೆನಿಸಿ ಸುಮ್ಮನಾದ. ಅಷ್ಟೊತ್ತಿಗೆ ಫೋನ ಬಂತು. ಅತ್ತಿ ರೇಣವ್ವ ‘ತಮ್ಮಾ ಇಲ್ಲೋಡು, ಈಕಿನ್ನ ತಾವರಗೇರಿ ದವಾಖಾನಿಗೆ ಈಗ ಕರಕೊಂಡ ಬಂದೀವಿ ಏನೂ ತ್ರಾಸ ಇಲ್ಲ ನೀ ಆಮ್ಯಾಲ ಅಟ ಬಂದ ಹೋಗು’. ‘ಹ್ಞೂಂ ಬಂದೆ’ಎಂದು ಆಗಲೇ ರಿಕ್ಷಾ ಏರಿ ಗೆಳೆಯರಿಗೆ ವಿಷಯ ತಿಳಿಸಿ ಹೊರಟ. ಸಂಜೆ ನಾಲ್ಕರ ಸುಮಾರಿಗೆ ಶಿವಾಜಿ ಅಪ್ಪ ಆದ. ಅವನ ಇಷ್ಟದಂತೆ ಹೆಣ್ಣು ಮಗುವೇ ಹುಟ್ಟಿತ್ತು.

        ಹೀಗೆ ಒಂದು ವಿಚಿತ್ರ ಕನಸಿನ ನಂತರ ಹುಟ್ಟಿದ ಹೆಣ್ಣು ಕೂಸನ್ನು ‘ಅವ್ವಾ’, ‘ಅವ್ವಾ’ ಎಂದು ಆಡಿಸುತ್ತಾ ಬೆಳೆಸಿದ. ಆಮೇಲೆ ಯಾವಾಗಲೊ ಒಂದು ದಿನ ತನಗೆ ಕೂಸು ಹುಟ್ಟುವ ಹಿಂದಿನ ದಿನಾ ಬಿದ್ದ ಕನಸಿನ ಕುರಿತು ತನ್ನ ಹೆಂಡತಿಗೆ ಮತ್ತು ಅತ್ತೆವ್ವಗ ಹೇಳಿದ. ಅವರು ‘ಹೌದಾ’ ಎಂದು ಆಶ್ಚರ್ಯ ವ್ಯಕ್ತ ಪಡಿಸಿ ಮರೆತಿದ್ದರು. ಆದರೆ ಶಿವಾಜಿ ಮಾತ್ರ ಮರೆತಿರಲಿಲ್ಲ ಮಗಳಿಗೆ ಹೆಸರಿಡುವಾಗ ಇಂದಿರಾ ಅಂತಲೇ ಇಡುವ ನಿರ್ಧಾರ ಮಾಡಿದ. ಆದರೆ ಇಂದಿರಾಗಾಂಧಿಯ ಕಡು ವಿರೋಧಿಯಾದ ಶಿವಾಜಿ ಮಾವ ಮತ್ತು ಜಮುನಾ ಸುತಾರಾಂ ಒಪ್ಪಲಿಲ್ಲ. ಕೊನೆಗೆ ಭಟ್ಟರು ಜಾತಕ ನೋಡಿ ಶಿವಾಜಿ ಅಭಿಲಾಷೆ ಇಡೇರುವಂತೆ ಪ್ರಿಯದರ್ಶನಿ ಎಂದು ಹೆಸರಿಡಲು ಹೇಳಿದರು. ಇದಕ್ಕೆ ಜಮುನಾನೂ ಒಪ್ಪಿಗೆ ಕೊಟ್ಟದ್ದರಿಂದ ‘ಪ್ರಿಯದರ್ಶನಿ’ ಎಂದು ಹೆಸರಿಟ್ಟರು. ಶಿವಾಜಿ ತನ್ನ ಮಗಳಿಗೆ ಏನೂ ಕೊರತೆಯಾಗದಂತೆ ಬೆಳೆಸಲು ಪ್ರಯತ್ನಿಸುತ್ತಿದ್ದ. ಅವಳಿಗೆ ಬೇಕಾಗುವ ಎಲ್ಲಾ ಆಟಿಗೆ ವಸ್ತುಗಳನ್ನು ಹುಬ್ಬಳ್ಳಿಯಿಂದಲೇ ತರುತ್ತಿದ್ದ. ಉಣಸು ತಿನಿಸಿಗಾಗಲಿ ಬಟ್ಟೆ ಬರೆಗಾಗಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದ, ಅವಳನ್ನ ಮನೆಯಲ್ಲಿ ಆಗಲಿ ಓಣಿಯಲ್ಲಿ ಆಗಲಿ ಯಾರೂ ಬಯ್ಯದಂತೆ ತಾಕೀತು ಮಾಡಿದ್ದ. ‘ಭಾಳ ದಿನಕ್ಕ ಮಗಳು ಹುಟ್ಯಾಳಂತ ಶಿವಾಜಿ ಮಗಳನ್ನ ಭಾಳ ಜೀವ ಮಾಡ್ತಾನ’ ಎಂದು ಓಣಿ ಜನಾ ಅವನ ಪ್ರೀತಿಗೆ ಅಡ್ಡ ಬರಲಿಲ್ಲ. ಹೀಗೆ ಬೆಳೆದ ಮಗಳನ್ನ ಒಂದು ದಿವಸ ಶಾಲೆಗೆ ಒಯ್ದು ಹೆಸರು ಹಚ್ಚಿದ, ಮಗಳು ಸ್ವಲ್ಪ ದೊಡ್ಡವಳಾದ ಮೇಲೆ ಅವಳಿಗೆ ದಿನಾಲು ವ್ಯಾಯಾಮ ಮಾಡಿಸುವುದು, ಈಜು ಕಲಿಸುವುದು ಮಾಡಹತ್ತಿದ. ಅಷ್ಟೇ ಅಲ್ಲ ಅವಳನ್ನ ಕರಾಟೆ ಕ್ಲಾಸಿಗೂ ಹಚ್ಚಿದ. ದಿನಗಳೆದಂತೆ ಅವಳಿಗೆ ಸೈಕಲ್ ಕಲಿಸಿದ, ಚುರುಕಾಗಿದ್ದ ಪ್ರಿಯದರ್ಶನಿ ಎಲ್ಲವನ್ನೂ ಬೇಗ ಗ್ರಹಿಸಿ ಕಲಿಯುತ್ತಿದ್ದಳು. ಶಾಲೆಯಲ್ಲಿ ಅವಳ ಚುರುಕುತನ ನೋಡಿ ಅವಳನ್ನು ಕ್ಲಾಸ್ ಲೀಡರ ಮಾಡಿದರು. ಶಿವಾಜಿಯ ತಮ್ಮ ಲಕ್ಷ್ಮಣ ಊರ ಹೊರಗೆ ಇರುವ ಒಂದು ಫ್ಯಾಕ್ಟರಿಗೆ ಕೆಲಸಕ್ಕೆ ಹೊಗುತ್ತಿದ್ದ. ಫ್ಯಾಕ್ಟರಿ ದೂರ ಇದ್ದದ್ದರಿಂದ ಬೈಕ್ ತೆಗೆದುಕೊಂಡು ಹೋಗುತ್ತಿದ್ದ. ಶಿವಾಜಿ ದಿನಾಲೂ ಬೆಳಿಗ್ಗೆ ತನ್ನ ರಿಕ್ಷಾ ಜೊತೆಗೆ ಬೈಕನ್ನು ಒರೆಸಿ ಒಮ್ಮೆ ಶುರು ಮಾಡಿ ಟ್ರಯಲ್ ನೋಡಿ ಇಡುತ್ತಿದ್ದ. ಮಗಳಿಗೂ ಅದನ್ನ ಹೇಗೆ ಶುರು ಮಾಡಬೇಕು ಗೇರ್ ಹಾಕುವುದು ಹೇಗೆ ಎಂದು ಎಲ್ಲವನ್ನು ಹೇಳಿ ಕೊಟ್ಟ. ದಿನ ನೋಡುತ್ತಿದ್ದಂತೆ ಏಳನೇ ತರಗತಿಗೆ ಬಂದ ಪ್ರಿಯಾ ಬೇಸಿಗೆ ರಜೆಯಲ್ಲಿ ಕಾಕಾನ ಬೈಕನ್ನು ಅಪ್ಪನ ರಿಕ್ಷಾ ಹೊಡೆಯಲು ಕಲಿತಳು. ಬೆಳಿಗ್ಗೆ ಈಜು ಕಲಿಯುವುದು ಸಂಜೆ ಶಟಲ್ ಆಡುವುದು ಹೀಗೆ ದೈಹಿಕ ಶ್ರಮದಿಂದ ಅವಳ ದೇಹ ವಯಸ್ಸಿಗೆ ಮೀರಿ ಬೆಳೆಯಿತು. ಅಪರಿಚಿತರು ಅವಳನ್ನು ಕಾಲೇಜು ಹುಡುಗಿ ಎಂದೇ ಭಾವಿಸುತ್ತಿದ್ದರು. ಈಜಲು ಆಟ ಆಡಲು ಅನುಕೂಲವಾಗಲೆಂದು ಅವಳು ಬಾಯ್ ಕಟ್ ಹೇರ್ ಸ್ಟೈಲ್ ಮಾಡಿಸಿದ್ದಳು. ಉಡುಗೆಯಂತೂ ಗಂಡು ಹುಡುಗರ ತರಹವೇ ಇರುತಿತ್ತು. ಇದಕ್ಕೆಲ್ಲ ಅಪ್ಪನ ಬೆಂಬಲ ಇದ್ದಿದ್ದರಿಂದ ಮನೆಯಲ್ಲಿ ಯಾರೂ ಈ ಬಗ್ಗೆ ತಕರಾರು ಮಾಡುತ್ತಿರಲಿಲ್ಲ.

        ಅಪ್ಪ ಶಿವಾಜಿ ಮಗಳನ್ನು ನೋಡಿ ಸಂಭ್ರಮಿಸುತ್ತಿದ್ದ. ನಾಳಿನ ಪ್ರಧಾನಿಯನ್ನು ಅವಳಲ್ಲಿ ಕಾಣುತ್ತಿದ್ದ. ಶಿವಾಜಿಗೆ ಕನಸಿನಲ್ಲಿ ಬಂದು ‘ಅಪ್ಪಾ’, ‘ಅಪ್ಪಾ’ ಅಂದದ್ದು ಅವಳು ನೀರಿನಲ್ಲಿ ಬಿದ್ದಿದ್ದು ತಾನು ಎತ್ತಿ ಹಿಡಿದಿದ್ದು ಇನ್ನೂ ನೆನಪಿತ್ತು. ಪ್ರಿಯದರ್ಶನಿಯನ್ನ ಚಿಕ್ಕ ಮಗು ಎಂದೇ ಭಾವಿಸಿದ್ದ. ಆದರೆ ನೋಡು ನೋಡುತ್ತಲೇ ಬೆಳೆದ ಅವಳು ಮುಂದಿನ ವರ್ಷ ಹತ್ತನೇ ತರಗತಿಯ ಪರಿಕ್ಷೆಗೆ ಕೂಡ್ರುವವಳಿದ್ದಳು. ಶಿವಾಜಿಯ ತಂಗಿ ರತ್ನವ್ವ ಬೇಸಿಗೆ ಸೂಟಿಗೆ ತವರಿಗೆ ಬಂದಿದ್ದಳು. ತನ್ನ ಸೋದರ ಸೋಸಿಯ ಬೆಳವಣಿಗೆ ಕಂಡು ಖುಷಿಪಟ್ಟಳು. ತನ್ನ ಅತ್ತಿಗೆಗೆ ‘ವೈನಿ, ನಮ್ಮ ಪ್ರಿಯಾಗ ಇನ್ನ ಆರತಿ ಮಾಡುದ ಯಾವಾಗ ಅಂತೀನಿ? ನಮ್ಮದೆಲ್ಲಾ ಏಳನೆತ್ತೆ ಸೂಟ್ಯಾಗ ಆಗಿಬಿಟ್ಟಿತ್ತು. ಈಕೀದು ಯಾಕ ತಡಾ ಆತಲ್ಲ? ಸ್ವಲ್ಪ ನೀವ ಹುಷಾರಿಲೇ ನೋಡ್ರಿ. ಹಂಗೇನರ ಇದ್ರ ಡಾಕ್ಟರಿಗೆ ತೋರಸರಿ’ ಎಂದು ಹುಡಗಿಗೆ ಇಷ್ಟ ವಯಸ್ಸಾದ್ರೂ ಅವಳಿನ್ನೂ ಋತುಮತಿ ಆಗಿಲ್ಲವೆಂಬುದನ್ನ ಎತ್ತಿ ಆಡಿದಳು. ಅದು ಸಹಜವೂ ಆಗಿತ್ತು. ಈ ಮಾತಾದಾಗಿನಿಂದ ಜಮುನಾಳ ತಲೆಯಲ್ಲಿ ಹುಳು ಹೊಕ್ಕಂತಾಯಿತು. ಹಗಲೆಲ್ಲ ಮಗಳನ್ನು ಪರೀಕ್ಷಾ ದೃಷ್ಠಿಯಿಂದ ನೋಡತೊಡಗಿದಳು. ಅವಳು ಯಾವುದಾದರೂ ಹೆಣ್ಣು ಹುಡಗರ ಜೊತೆ ಮಾತಾಡಿದರೆ ಕದ್ದು ಕೇಳುವುದು, ಯಾವುದಾದರೂ ಗಂಡು ಹುಡಗರ ಜೊತೆ ಸಲುಗೆಯಿಂದ ಮಾತಾಡಿದರೆ ಬಯ್ಯುವುದು, ಬಚ್ಚಲಿಗೆ ಹೊದರೆ ಏನೋ ನೆವ ಮಾಡಿಕೊಂಡು ಹೋಗಿ ಹಿಂದೆ ನಿಲ್ಲುವುದು ಮಾಡತೊಡಗಿದಳು. ಒಂದು ರೀತಿ ಸಂಕಟಕ್ಕೆ ಒಳಗಾದವಳಂತಾದ ಜಮುನಾಳಿಗೆ ಈಗ ಅವಳು ಹಾಕಿಕೊಳ್ಳುವ ಬಟ್ಟೆ ಮೇಲೆ ಕಣ್ಣು ಬಿತ್ತು. ಈ ಬಟ್ಟೆಗಳಿಂದಾಗಿಯೆ ಅವಳು ಋತುಮತಿಯಾಗುವುದು ತಡವಾಗಿದೆ ಎಂಬುದು ಅವಳ ಗುಮಾನಿಯಾಗಿತ್ತು. ಟೀ ಶರ್ಟ, ಶಾಟ್ರ್ಸ ಹಾಕ್ಕೊಂಡು ಹೊರಗೆ ಹೊಗುವಂತಿಲ್ಲ, ಲೆಗ್ಗಿನ್ಸ ಹಾಕ್ಕೊಂಡು ಮಂದಿ ಮನಿಗೆ ಹೋಗಬ್ಯಾಡಾ ಕೂದಲು ಉದ್ದಾಗಿ ಚೆಂದಾಗಿ ಬೆಳೆಸುವಂತೆ ಒತ್ತಾಯಿಸಿದಳು. ಪೌಡರ ಸ್ನೋ ಹಾಕಿಕೊಳ್ಳುವಂತೆ ಮುಂತಾಗಿ ಹೇಳಿ ಮಗಳನ್ನು ತಿದ್ದುವ ಪ್ರಯತ್ನ ಮಾಡಿದಳು. ಶಿವಾಜಿ ತನ್ನ ಮಗಳಿಗೆ ‘ಬಾಬಾ’ ಎಂದು ಪ್ರೀತಿಯಿಂದ ಕರೆಯುತ್ತಿದ್ದ. ಅದಕ್ಕೂ ಜಮುನಾ ವಿರೋಧ ವ್ಯಕ್ತಪಡಿಸಿದಳು. ಮತ್ತೇನು ‘ಬಾಭಿ’ ಅಂತ ಕರಿಲೇನು ಎಂದು ಮಗಳ ಜೊತೆ ಸೇರಿ ಹಾಸ್ಯ ಮಾಡಿದ. ಆದರೂ ಜಮುನಾ ತನ್ನ ಪ್ರಯತ್ನ ಬಿಡಲಿಲ್ಲ. ಪ್ರಿಯದರ್ಶನಿ ಮಾತ್ರ ತನ್ನ ಶಾಲಾ ಹೆಣ್ಣು ಗೆಳತಿಯರಿಗಿಂತಾ ಓಣಿಯಲ್ಲಿರುವ ಗಂಡು ಗೆಳೆಯರ ಜೊತೆ ಹೆಚ್ಚಾಗಿ ಬೆರೆಯುತ್ತಿದ್ದಳು. ಅವರ ಜೊತೆ ಕ್ರಿಕೆಟ, ಲಗೋರಿ, ಬಗರಿ ಆಡುತ್ತಿದ್ದಳು. ಜಮುನಾ ಈ ಕುರಿತು ಶಿವಾಜಿಗೆ ಕಂಪ್ಲೇಂಟ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ.

     ದಿನಗಳುರುಳಿದವು ಮತ್ತೆ ದಸರಾ ಬಂತು. ಸೂಟಿಗೆ ಬಂದ ರತ್ನವ್ವ ಪ್ರಿಯಾಳನ್ನ ಇನ್ನಷ್ಟು ಸೂಕ್ಷ್ಮವಾಗಿ ನೋಡಿ ತನ್ನ ಅತ್ತಿಗಿಗೆ ಹೇಳಿದಳು. ‘ವೈನಿ ನನಗ ಇದರಾಗ ಏನೋ ಸಂಶಯ ಬರಾಕ ಹತ್ತೈತಿ, ನಡಿ ಡಾಕ್ಟರ ಹತ್ತಿರ ಕರಕೊಂಡ ಹೋಗಿ ಬರೂಣ’ ಎಂದಳು. ಅದಕ್ಕೆ ಜಮುನಾ ‘ಅಲ್ಲ ಅಕ್ಕಾ  ಡಾಕ್ಟರ ಏನಾಗೈತಿ ಅಂತ ಕೇಳಿದರ ಏನ ಹೇಳಬೇಕಬೇ? ಯೇ ನಾ ಒಲ್ಲಿ ತಗಿ’ ಅಂದಳು. ‘ಅದರಾಗೇನೈತಿ ಇದ್ದದ್ದ ಹೇಳೂದ ಅವ್ರು ಪರೀಕ್ಷಾ ಮಾಡಿ ಹೇಳತಾರಲ್ಲ, ನೀ ಯೇನ್ ಮಾತಾಡಬ್ಯಾಡಾ ನಾನ ಎಲ್ಲಾ ಹೇಳತೀನಿ ನಡಿ’ ಎಂದಳು. ಜಮುನಾಗೆ ಮೊದಮೊದಲು ಹೆದರಿಕೆ ಅನ್ನಿಸಿದರೂ ರತ್ನವ್ವನ ಕಿಟಿಪಿಟಿ ತಡೀದೇ ಗಂಡಗೂ ಹೇಳಿ ಒಪ್ಪಿಸಿದಳು. ಶಿವಾಜಿ ಜಮುನಾ ರತ್ನವ್ವ ಕೂಡಿ ಮಾತಾಡಿದರು. ಮನೇಲಿದ್ದ ಹಿರಿಯಳಾದ ಶಿವಾಜಿಯ ಅವ್ವನೂ ಇದಕ್ಕೆ ಸಹಮತ ವ್ಯಕ್ತಪಡಿಸಿದ ಮೇಲೆ ಹುಬ್ಬಳ್ಳಿಯ ಡಾಕ್ಟರಗೆ ತೋರಿಸೂದು ಅಂತ ನಿರ್ಧಾರ ಆಯಿತು. ಹೆಂಗೂ ಸಾಲಿ ಸೂಟಿ ಬಿಟ್ಟೈತಿ ಈಗ ಹೋಗಿ ಬರೂಣ ನಾಳಿ ಏನಕೇನರ ಆದ್ರ ಏನ ಗತಿ ಇರೂದ ಒಂದ ಹೆಣ್ಣ ಹುಡಗಿ ಎಂದು ಅವಸರಿಸಿ ಹೊರಟರು.

        ಡಾಕ್ಟರ ತಪಾಸಣೆ ಮಾಡಿ ಮೂವರನ್ನು ಒಳಗ ಕರದು ಹೇಳಿದರು ‘ಇದು ಡಿ.ಎಸ್.ಡಿ ಪ್ರಾಬ್ಲಂ’ ಅಂದ್ರ, ‘ಲಿಂಗ ಅಭಿವೃದ್ಧಿ ಸಮಸ್ಯೆ’ ‘ಈಕೀ ಹುಟ್ಟುವಾಗಲೇ ಉಭಯ ಲಿಂಗಿಯಾಗಿಯೇ ಹುಟ್ಟಿದ್ದಾಳೆ. ಆದರೆ ಬೆಳೆದಂತೆ ಹುಡುಗರ ಲಕ್ಷಣ ಹೆಚ್ಚಾಗಿವೆ. ನೀವು ಹುಡುಗಿ ಅಂತಲೇ ಬೆಳೆಸಿದ್ದೀರಿ, ಆದರೆ ಈಗ ಈತ ಹುಡುಗ. ಹುಡಗರಿಗೆ ಇರಬೇಕಾದ ಎಲ್ಲಾ ಲಕ್ಷಣ ಅದಾವು. ಸಮಾಜ ಮೊದ ಮೊದಲು ಇದನ್ನು ಒಪ್ಪಲಿಕ್ಕಿಲ್ಲ ಆದ್ರ ಮುಂದ ಒಪ್ಪಿಕೊತದ. ನೀವು ಇನ್ನ ಮುಂದ ಅವನನ್ನು ಹುಡುಗನಂತೆ ಕಾಣಿರಿ ಅಂದ್ರ ಮಾನಸಿಕವಾಗಿ ತಾನು ಹುಡುಗ ಅಂತ ಅವನೂ ಒಪ್ಪಿಕೊಳ್ಳುತ್ತಾನೆ, ಬರೀ ದೈಹಿಕವಾಗಿ ಒಪ್ಪಿದರ ಸಾಲದು. ಒಂದ ಸಣ್ಣ ಆಪರೇಶನ್ ಮಾಡಬೇಕು. ಮಾಡಿದ್ರ ಖಂಡಿತಾ ಇವಾ ಗಂಡಸ ಆಗತಾನ, ಅಷ್ಟ ಅಲ್ಲ ಮುಂದ ಅಪ್ಪನೂ ಆಗತಾನ. ನೋಡಿ ವಿಚಾರ ಮಾಡಿ ಹೇಳ್ರಿ. ಆದಷ್ಟ ಲಗೂ ಆಪರೇಶನ್ ಆದ್ರ ಹುಡಗಿಗೆ ಏನೂ ಪ್ರಾಬ್ಲಂ ಆಗಂಗಿಲ್ಲ. ವಯಸ್ಸಿನ ತಿಳುವಳಿಕೆ ಆಗೂವ ಮೊದಲೇ ಇದು ಆಗಿದ್ರೆ ಛೋಲೋ ಆಗತಿತ್ತು. ಈಗೂ ಏನ ತ್ರಾಸಿಲ್ಲ ಮಾಡಸರಿ’ ಎಂದು ತಿಳಿಸಿದರು. ಜಮುನಾ ಮತ್ತು ಶಿವಾಜಿ ಮೂಕರಾಗಿ ಕುಳಿತರು. ಆದರ ರತ್ನವ್ವ ಡಾಕ್ಟರರನ್ನು ಇನ್ನಷ್ಟ ಪ್ರಶ್ನಿ ಕೇಳಿ ಏನೂ ತ್ರಾಸ ಆಗೂದಿಲ್ಲ ಅನ್ನೂದ ಖಾತ್ರಿ ಪಡಿಸಿಕೊಂಡಳು. ತನ್ನ ಅಣ್ಣ ಅತ್ತಿಗಿಗೂ ಇನ್ನಷ್ಟ ತಿಳಿಸಿ ಹೇಳಿ ಆಪರೇಶನ್ ಮಾಡಿಸಿದಳು. ಆಪರೇಶನ್ ಆದ ಮೇಲೆ ಪ್ರಿಯದರ್ಶನಿ ಪ್ರೀತಮ್ ಆಗಿ ಮಾರ್ಪಟ್ಟ. ಇದರಿಂದ ಖುಷಿಯಾದ ಜಮುನಾ ‘ಸಾಯಿಬಾಬಾನ ಕರುಣೆ ಎಷ್ಟಂತ ಹೇಳಲಿ, ನೋಡ್ರಿ ಮಕ್ಕಳಿಲ್ಲ ಅಂದಿದ್ದಕ್ಕ ಮಗಳನ್ನ ಕೊಟ್ಟ. ಅದನ್ನ ಗಂಡಮಗನ್ನ ಮಾಡಿ ನಮ್ಮ ವಂಶ ಉಧ್ಧಾರ ಮಾಡಿದಾ’ ಎಂದು ಎಲ್ಲರ ಬಳಿ ಹೇಳಿಕೊಂಡಳು. ಆದರೆ ಶಿವಾಜಿ ಮಾತ್ರ ಗೊಂದಲದಲ್ಲಿದ್ದ. ಇಂದಿರಾಗಾಂಧಿ ಹೆಣ್ಣು ರೂಪದ ಗಂಡಸು. ತನ್ನ ಪ್ರಿಯದರ್ಶಿನಿ ಪ್ರಧಾನಿ ಆಗುವ ಕೆಪ್ಯಾಸಿಟಿ ಇದ್ದವಳು. ಈ ಪ್ರೀತಮ್‍ಗೆ ಆ ಕೆಪ್ಯಾಸಿಟಿ ಇದೆ ಎಂಬುದು ಖಾತ್ರಿಯಿಲ್ಲ ಎಂದೆನಿಸಿ ಖಿನ್ನನಾದ. ಆದರೆ ಪ್ರೀತಮ್ ಮನಸ್ಸು ಹೊಯ್ದಾಡುತ್ತಿರುವುದು ಯಾರಿಗೂ ಕಾಣಲೇ ಇಲ್ಲ,

 ಶ್ರೀನಿವಾಸ.ಹುದ್ದಾರ   

 ಧಾರವಾಡ  

Comments

Submitted by lpitnal Tue, 10/06/2015 - 22:35

ಗೆಳೆಯ ಶ್ರೀನಿವಾಸ ಜಿ, ಇಂದಿರಾ ಪ್ರಿಯದರ್ಶಿನಿಯ ನೆನಪಿನೊಂದಿಗೆ ಕಥೆ ಗರಿಗಟ್ಟತೊಡಗಿ, ನೂರು ಗಂಡಸರ ಮಧ್ಯೆ ಒಂದೇ ಗಂಡಿನಂತೆ ಬದುಕಿದ ಅವಳ ಛಾಯೆಯ ನೆನಪಿನ ಕಥೆ. ಮನುಷ್ಯನ ಸಹಜ ಬೆಳವಣಿಗೆಯಲ್ಲಿ ಏರುಪೇರಾದರೆ, ಈ ನೆಲದ ಬದುಕಿನಲ್ಲಿ ಎಷ್ಟೊಂದು ಉದ್ವೇಗಗಳು. ಉಭಯ ಲಿಂಗಿಯಾಗಿ ಹುಟ್ಟುವ ಜೀವಗಳ ಬದುಕನ್ನೇ ತುಂಬ ಚನ್ನಾಗಿ ಕಥಾರೂಪದಲ್ಲಿ, ಆರೋಪಕ್ಕೆ ಎಣೆ ಇಲ್ಲದಂತೆ ಹೆಣೆದಿದ್ದೀರಿ. ಹೆಣ್ಣು ಗಂಡಾಗಿ ರೂಪಾಂತರ ಹೊಂದುವ ಪ್ರವರವೇ ಹೆಚ್ಚು ಚಿಂತನೆಗೆ ಹಚ್ಚುವಂತದ್ದು. ನಮ್ಮ ಸಮಾಜ, ಮನೆಗಳಲ್ಲಿ ಗಂಡು ಹೆಣ್ಣುಗಳನ್ನು ಬೆಳೆಸುವ ವಿಶಿಷ್ಟತೆಗಳು ಭಿನ್ನ. ಅವರ ಸ್ವಾತಂತ್ರ್ಯಗಲು ಭಿನ್ನ. ಹೀಗಾಗಿ ಆತಂಕಗಳೇ ಹೆಚ್ಚು, ಸಮಾಜದ ದೃಷ್ಟಿಯೂ ಆ ಜೀವದ ಬೆಳವಣಿಗೆಯ ಮೇಲೂ ಬಹು ಪ್ರಭಾವ ಬೀರುತ್ತದೆ. ಶಿವಾಜಿ ಕನಸಿನಲ್ಲಿ ಆ ಕೂಸು ನೀರಿನಲ್ಲಿ ಮುಳುಗುವ ಸಂಕೇತದಲ್ಲಿ ಅವನ ಕನಸು ಮುಳುಗಿಹೋಗುವ ಪ್ರತೀಕ ಚನ್ನಾಗಿದೆ. ಭಾಷೆಯ ಪ್ರಯೋಗ ಬಹು ಮೆಚ್ಚುಗೆಯಾಯಿತು. ಸುಂದರ ಕಥೆ ಸರ್, ವಂದನೆಗಳು.

Submitted by Huddar Shriniv… Fri, 10/09/2015 - 15:28

In reply to by lpitnal

ಸರ್, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ವಿಭಿನ್ನವಾಗಿ ಪ್ರತಿಕ್ರಿಯಿಸಿ ನನ್ನನ್ನು ಪ್ರೇರೆಪಿಸಿದ್ದೀರಿ.ನಿಮ್ಮ ಬೆಂಬಲ ಹಿಗೆಯೆ ಇರಲಿ.