ನೆನಪು ಚಿಗುರುವ ಸಮಯ

ನೆನಪು ಚಿಗುರುವ ಸಮಯ

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು.

ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲನ. ಅದು ರಂಗಸ್ಥಳವೇನೋ ಎಂಬಂತೆ ಮಳೆ ಹನಿಗಳು ಉಲ್ಲಾಸದಿಂದ ಸಿಡಿದು, ಚದುರಿ ಮಾಯವಾಗುತ್ತಿದ್ದ ಅಪೂರ್ವ ದೃಶ್ಯವನ್ನು ಗೌರಿ ತನ್ನ ಪುಟ್ಟ ಮನಸ್ಸಿನ ಕುತೂಹಲದಿಂದ ನೋಡಿದಳು.

ನನಗೆ ಊರು ನೆನಪಾಯಿತು.

ಮೇ ತಿಂಗಳಿನ ಈ ದಿನಗಳಲ್ಲಿ ಕೊಪ್ಪಳ ತಾಲ್ಲೂಕಿನ ನನ್ನೂರು ಅಳವಂಡಿಯಲ್ಲಿ ಕಡು ಬೇಸಿಗೆ. ಫೆಬ್ರುವರಿ ತಿಂಗಳಿಂದಲೇ ಚುಚ್ಚತೊಡಗುವ ಬಿಸಿಲಿಗೆ ಮಾರ್ಚ್‌ ತಿಂಗಳ ಹೊತ್ತಿಗೆ ತುಂಬು ಪ್ರಾಯ. ಏಪ್ರಿಲ್‌-ಮೇ ತಿಂಗಳಲ್ಲಂತೂ ಕಡು ಬೇಸಿಗೆ. ಎಂಥಾ ಮಳೆಯನ್ನೂ ಮೊಗೆದು ಕುಡಿದು ಮತ್ತೆ ಒಣಗಿ ನಿಲ್ಲುವ ಬಿಸಿಲ ಬಯಲುಗಳು. ಕಾಲಿನ ಮೀನಖಂಡದವರೆಗೂ ನುಂಗಬಲ್ಲ, ಕಪ್ಪು ಮಣ್ಣಿನ ಬಿರುಕುಗಳು. ಮಸಾರಿ (ಕೆಂಪು) ಹೊಲದ ಬೆಣಚುಕಲ್ಲುಗಳು ಕಾಯ್ದು ಹೆಂಚಿನಂತೆ ಧಗಿಸುತ್ತವೆ. ನಮ್ಮ ಬಡಬಾಲ್ಯದ ಬರಿಗಾಲನ್ನು ಅವು ಅದೆಷ್ಟು ಸಾರಿ ಸುಟ್ಟು ಬೊಬ್ಬೆ ಏಳಿಸಿದ್ದವೋ!

ಕಾರೊಂದು ನಿಧಾನವಾಗಿ ಹರಿದು ಹೋಯಿತು. ಡಾಂಬರು ರಸ್ತೆ ಕ್ಷಣ ಕಾಲ ಮರೆಯಾಗಿ, ಮಳೆಯ ಪುಟ್ಟ ಪುಟ್ಟ ಹನಿಗಳು ಕಾರಿನ ದೇಹದ ಮೇಲೆ ಪುಟಿಪುಟಿದು ಹೊಳೆದು ಕಂಗೊಳಿಸಿದವು. ವೈಪರ್‌ ಮಾತ್ರ ನಿರ್ಲಕ್ಷ್ಯದಿಂದ ಗಾಜೊರೆಸುತ್ತಿತ್ತು. ಅದು ಸರಿದಾಡಿದ ಕಡೆ ಅಳುವ ಕಾರು, ಧಾರೆಯಾಗಿ ಸುರಿವ ನೀರು.

ಬಾಲ್ಯಕ್ಕೆ ಬಿಸಿಲು ಇರುವುದಿಲ್ಲ. ಕಹಿಯ ನೆನಪೂ ತುಂಬ ಹೊತ್ತು ನಿಲ್ಲುವುದಿಲ್ಲ. ಅಂಥ ಬಿಸಿಲಲ್ಲೇ ಬೇಸಿಗೆ ರಜಾ. ಹಿರಿಯರೆಲ್ಲ ಬೀಸಣಿಕೆಯಿಂದ ಗಾಳಿ ಹಾಕಿಕೊಳ್ಳುತ್ತಾ ಸಗಣಿ ಸಾರಿಸಿದ ಮನೆಯ ನೆಲದ ಮೇಲೆ ಉಸ್ಸೆಂದು ಮಲಗಲು ಯತ್ನಿಸುತ್ತಿದ್ದಾಗ, ಮಕ್ಕಳಾದ ನಾವು ಊರ ಹಳ್ಳ ಸುತ್ತಲು ಹೋಗುತ್ತಿದ್ದೆವು. ಆವಾಗಿನ್ನೂ ಹಳ್ಳ ಒಣಗಿರಲಿಲ್ಲ. ಬಿರು ಬೇಸಿಗೆಯಲ್ಲೂ ತೆಳ್ಳನೆಯ ನೀರು ಅಲ್ಲಲ್ಲಿ ಹರಿಯುತ್ತಿತ್ತು. ಸುತ್ತ ಕಡು ಹಸಿರು ಪಾಚಿ. ಅವೇ ನೀರು ಕುಡಿಯುತ್ತಿದ್ದ ಎಮ್ಮೆಗಳು. ಮುಖ ತೊಳೆಯುವ ದನ ಕಾಯುವ ಹುಡುಗರು. ನೀರು ಚಿಕ್ಕ ಮಡುವಾಗಿ ನಿಂತ ಕಡೆ ಕಪ್ಪು ಬಣ್ಣದ ಕಿರು ಬೆರಳ ಗಾತ್ರದ ಮೀನುಗಳನ್ನು ಹಿಡಿಯುವ ದುಸ್ಸಾಹಸದಲ್ಲಿ ನಾವು. ಅದನ್ನೇ ಹಿರಿಯರಂತೆ ಅಸಮಾಧಾನದ ಬಿರುಗಣ್ಣಿನಿಂದ ದಿಟ್ಟಿಸುವ ಸೂರ್ಯ.

ಕೊಡೆ ಹಿಡಿದಿದ್ದ ಹುಡುಗಿಯೊಬ್ಬಳು ಲಗುಬಗೆಯಿಂದ ಸಾಗಿ ಹೋದಳು. ಮಳೆ ಹನಿಗಳಿಗೆ ಈಗ ಕೊಡೆಯ ಮೇಲೆ ನರ್ತಿಸುವ ಸುಯೋಗ.

ಬಾಲ್ಯದ ನೆನಪಿನ ತುಂಬ ಊರ ಹಳ್ಳ ಹರಿಯುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಕಡುಗಪ್ಪು ನೀರನ್ನು ಚಿಕ್ಕ ನದಿಯಂತೆ ಹರಿಸುವ ಹಳ್ಳ ನನ್ನ ಸುಂದರ ನೆನಪುಗಳಲ್ಲಿ ಒಂದು. ’ಹಳ್ಳ ಬಂತು’ ಎಂಬ ಉದ್ಗಾರ ಇಡೀ ಊರನ್ನು ಹಳ್ಳದ ದಂಡೆಯುದ್ದಕ್ಕೂ ನಿಲ್ಲಿಸುತ್ತಿತ್ತು. ನೂರು ಮೀಟರ್‌ ಉದ್ದಕ್ಕೂ ಭೋರ್ಗರೆದು ಹರಿಯುವ ಹಳ್ಳದಲ್ಲಿ ತೇಲಿ ಹೋಗುವ ಲೆಕ್ಕವಿಲ್ಲದಷ್ಟು ಎಲೆ-ಕಸಕಡ್ಡಿಗಳು, ಹಾವು ಚೇಳುಗಳು. ಅಪರೂಪಕ್ಕೆ ಎಮ್ಮೆ, ಆಡು, ಕುರಿಗಳು. ಹಳ್ಳದ ಇನ್ನೊಂದು ದಿಕ್ಕಿಗೆ, ನೆರೆ ಇಳಿಯುವುದನ್ನೇ ಕಾಯುತ್ತ ನಿಂತ ಕೊಪ್ಪಳ-ಮುಂಡರಗಿ ಖಾಸಗಿ ಬಸ್‌ನ ಪ್ರಯಾಣಿಕರ ದಂಡು. ಕೂಲಿ ಕೆಲಸಕ್ಕೆ ಹೋಗಿ ಹಿಂತಿರುಗುವ ಆಳುಗಳು, ದನ ಕಾಯುವ ಹುಡುಗರು. ಬೆದರಿ ದೂರ ನಿಂತಿರುತ್ತಿದ್ದ ದನಗಳು. ನಾವು ಈ ಕಡೆಯಿಂದ ಕೂಗುತ್ತಿದ್ದೆವು. ಅವರು ಆ ಕಡೆಯಿಂದ ಕೇಕೆ ಹಾಕಿ ಪ್ರತಿಕ್ರಿಯೆ ನೀಡುತ್ತಿದ್ದರು. ನಡುವೆ ನಿರ್ಲಕ್ಷ್ಯದಿಂದ ಹರಿಯುವ ಹಳ್ಳ.

ಬೇಸಿಗೆಯಲ್ಲಿ ಸೊರಗುತ್ತ ಬಸವಳಿಯುವ ಹಳ್ಳದ ದಂಡೆಗಳಲ್ಲಿ ದಟ್ಟವಾಗಿ ಬೆಳೆದ ಜಾಲಿ ಗಿಡಗಳು. ಅವುಗಳ ನೆರಳಲ್ಲಿ, ಒಣ ಉಸುಕಿನ ಮೇಲೆ ಇಸ್ಪೀಟಾಡುವ ಸೋಮಾರಿ ಜನ. ಕದ್ದು ಬೀಡಿ ಸೇದುವ ಪ್ರಾಯದ ಹುಡುಗರು. ಶೇಂದಿ ಕುಡಿವ ಜನರು. ಬಾಲ್ಯದ ಕುತೂಹಲಕ್ಕೆ ಸಾವಿರ ಕಣ್ಗಳು. ಸಾವಿರ ಸಾವಿರ ದೃಶ್ಯಗಳು.

ಸೂರ್ಯ ಕಂದುತ್ತಿದ್ದಂತೆ ಮನೆಗೆ ಓಟ. ಪರೀಕ್ಷೆ ಮುಗಿದಿರುತ್ತಾದ್ದರಿಂದ ಲಾಟೀನದ ಸುತ್ತ ಕೂತು ಓದುವ ಪ್ರಮೇಯ ಇರುತ್ತಿರಲಿಲ್ಲ. ಜೋಳದ ಅಂಬಲಿಗೆ ಮಜ್ಜಿಗೆ ಸಾರು ಉಂಡು, ಹಾಸಿಗೆ ಸಮೇತ ಮಾಳಿಗೆ ಏರಿದರೆ, ಕೈಗೆಟಕುವ ಎತ್ತರದಲ್ಲಿ ಸ್ವಚ್ಛ ನಕ್ಷತ್ರಗಳು. ನನ್ನ ಅತಿ ಸುಂದರ ಶಾಂತ ರಾತ್ರಿಗಳನ್ನು ಹೀಗೆ ಆಕಾಶ ನಿಟ್ಟಿಸುತ್ತ ಕಳೆದಿದ್ದೇನೆ. ಎಳೆಯ ಕಂಗಳ ತುಂಬ ಸಾವಿರಾರು ಭರವಸೆಯ ಚುಕ್ಕಿಗಳು. ವಿದ್ಯುತ್‌ ಇಲ್ಲದ ನೀರವ ರಾತ್ರಿಗಳಲ್ಲಿ, ಮಿನುಗುತ್ತ ಭರವಸೆ ಹುಟ್ಟಿಸುತ್ತಿದ್ದ ದೀಪಗಳವು. ಅಣ್ಣಂದಿರೆಲ್ಲ ಮಲಗಿ, ಊರಿನ ಎಲ್ಲ ಸದ್ದೂ ನಿದ್ದೆ ಹೋದ ನಂತರವೂ ತುಂಬ ಹೊತ್ತು ನಕ್ಷತ್ರಗಳನ್ನೇ ನೋಡುತ್ತ ಎಚ್ಚರವಾಗಿರುತ್ತಿದ್ದೆ. ಯಾವ ಮಾಯದಲ್ಲಿ ಬಂದಿರುತ್ತಿತ್ತೋ ನಿದ್ದೆ. ಕಿವಿಗಳ ಹತ್ತಿರವೇ ಗುಬ್ಬಿಗಳು ಚಿಂವ್‌ಗುಟ್ಟುತ್ತ ಕಾಣದ ಕಾಳುಗಳಿಗಾಗಿ, ಹುಳು ಹುಪ್ಪಟೆಗಳಿಗಾಗಿ ಹುಡುಕಾಡುವಾಗಲೇ ಎಚ್ಚರ. ರಾತ್ರಿಯಲ್ಲಿ ಚೆಂದಗೆ ನಿದ್ದೆ ಮಾಡಿದ್ದ ಸೂರ್ಯ ಕಣ್ಣು ಬಿಡುವ ಹೊತ್ತಿಗೆ ಅಂಗಳ ಗುಡಿಸುವ, ನೀರು ಚಿಮುಕಿಸುವ ಹೆಂಗಳೆಯರು. ಕೈಯಲ್ಲಿ ಹಿತ್ತಾಳೆ ಚೊಂಬುಗಳನ್ನು ಹಿಡಿದು ಬಹಿರ್ದೆಶೆಗೆ ಹೊರಟ ಗಂಡಸರು. ಗುಡಿಸಿದ ಅಂಗಳಗಳಿಂದ ಏಳುವ ತೆಳ್ಳನೆಯ ದೂಳಿನ ಮೋಡದಿಂದ ಕೆಂಪಾಗಿ ನಗುವ ಸೂರ್ಯ. ನನ್ನ ಕಣ್ತುಂಬ ರಾತ್ರಿ ಕಂಡ ನಕ್ಷತ್ರಗಳ ಚಿತ್ರ.

ಮಳೆ ಬೀಳುತ್ತಲೇ ಇದೆ. ಸದ್ದಿಲ್ಲದೆ, ಸಣ್ಣಗೆ. ಹೊಡೆದು ತುಂಬ ಹೊತ್ತಾದರೂ ಬಿಕ್ಕಳಿಸುತ್ತಲೇ ಇರುವ ಮಗುವಿನಂತೆ.

ಆದರೆ, ನನ್ನೂರಲ್ಲಿ ಈಗ ಹಳ್ಳ ಮಳೆಗಾಲದಲ್ಲೇ ಬತ್ತುತ್ತದೆ. ಹಗಲು ಹೊತ್ತು ಬೀಸಣಿಕೆಗಳು ಕಾಣುವುದಿಲ್ಲ- ಪಂಖಾಗಳು ತಿರುಗುತ್ತವೆ. ಸಗಣಿ ಸಾರಿಸಿದ ನೆಲ ಈಗ ಅಪರೂಪ. ಕಪ್ಪು ಕಡಪಾ ಕಲ್ಲಿನ ಮೇಲೆ ನಿದ್ದೆ ಹೋಗುವ ಜನರಿಗೆ ಕನಸುಗಳು ಬೀಳುವುದೂ ಅನುಮಾನ. ಬಿರು ಬೇಸಿಗೆಯಲ್ಲಿ ಹಳ್ಳ ಸುತ್ತುವ ಮಕ್ಕಳು ಈಗಿಲ್ಲ. ಅವರೆಲ್ಲ ಟಿವಿ ನೋಡುತ್ತಾರೆ. ಸಂಜೆ ವೇಳೆ ಹೊರಹೊರಟರೂ ಅದು ಹಳ್ಳದ ಕಡೆಗಲ್ಲ. ಬ್ಯಾಟ್‌ ಹಿಡಿದು ಶಾಲೆಯ ಮೈದಾನಕ್ಕೆ ನುಗ್ಗುತ್ತಾರೆ. ರಾತ್ರಿ ಲಾಟೀನು ಉರಿಯುವುದಿಲ್ಲ. ಲೈಟ್ ಹಾಕುತ್ತಾರೆ. ಕಡು ಬಡವ ಕೂಡ ಅಂಬಲಿ ಉಣ್ಣುವುದಿಲ್ಲ. ರೇಶನ್‌ದಾದರೂ ಸರಿ, ಅಕ್ಕಿ ಇರುತ್ತದೆ. ಉಂಡು, ಮಾಳಿಗೆ ಏರುವ ಉಮೇದು ಎಷ್ಟು ಜನರಿಗೆ ಉಳಿದಿದೆಯೋ! ಊರ ತುಂಬ ಹರಡಿರುವ ಬೀದಿ ದೀಪಗಳ ಬೆಳಕಿನ ಎದುರು ನಕ್ಷತ್ರಗಳೇಕೋ ಮಂಕು ಮಂಕು.

ನೋವಿನ ಎಳೆಗಳಂತೆ ಮಳೆ ಬೀಳುತ್ತಲೇ ಇದೆ. ಸುಮ್ಮನೇ ನಿಂತ ಇವಳ ಮನಸ್ಸಿನಲ್ಲಿ ತೌರು ಮನೆಯ ಚಿತ್ರ ಮೂಡಿರಬೇಕು. ಜಗತ್ತು ತಿಳಿಯದ ಗೌರಿಯ ಮನಸ್ಸಿನಲ್ಲಿ ಯಾವ ಚಿತ್ರವಿದೆಯೋ. ಅವಳೂ ಮೌನವಾಗಿ ಮಳೆ ದಿಟ್ಟಿಸುತ್ತಿದ್ದಾಳೆ. ಬೆಂಗಳೂರಿನ ರಾತ್ರಿ ದೀಪಗಳ ಪ್ರಭೆಗೆ ಕಡುಕಪ್ಪು ಮೋಡಗಳೂ ಸುಟ್ಟ ಹಪ್ಪಳದಂತೆ ಕಾಣುತ್ತಿವೆ. ಮಳೆಗೆ ಬೆದರಿದವರಂತೆ ಜನ ಮನೆಯೊಳಗೆ ಟಿವಿ ಮುಂದೆ ಕೂತಿದ್ದಾರೆ. ರಸ್ತೆಯನ್ನೆಲ್ಲ ಮಳೆ ಹನಿಗಳ ನೃತ್ಯಕ್ಕೆ ಬಿಟ್ಟುಕೊಟ್ಟಿದ್ದಾರೆ.

ನನ್ನ ಮಗಳು ಬೆಂಗಳೂರಲ್ಲೇ ಬೆಳೆಯುತ್ತಾಳೆ. ಅವಳ ಪಾಲಿಗೆ ಊರಿನ ಹಳ್ಳ ಇಲ್ಲ. ಬಿರು ಬೇಸಿಗೆ ಇಲ್ಲ. ಅಂಬಲಿ-ಮಜ್ಜಿಗೆ ಊಟವಿಲ್ಲ. ಲಾಟೀನಿನ ಬೆಳಕಿಲ್ಲ. ಉಂಡ ಕೂಡಲೇ ಹಾಸಿಗೆ ಹೊತ್ತು ಮಾಳಿಗೆ ಏರುವುದಿಲ್ಲ. ದೊಡ್ಡವಳಾಗಿ ಬುದ್ಧಿ ಬಲಿತ ಮೇಲೆ, ಮಳೆ ಎಂದರೆ ಡಾಂಬರು ರಸ್ತೆಯ ಮೇಲೆ ಹನಿಗಳ ನಾಟ್ಯ ಎಂದು ನೆನಪಿಸಿಕೊಳ್ಳುತ್ತಾಳೇನೋ! ಮಳೆ ಮುಗಿಲು ಎಂದರೆ ಸುಟ್ಟ ಹಪ್ಪಳ ನೆನಪಾಗುವುದೇನೋ! ಗೇಟಿನ ಸರಳುಗಳ ಚೌಕಟ್ಟುಗಳ ಮೂಲಕ, ಹರಿದು ಹೋಗುವ ವಾಹನಗಳ ಮೇಲೆ ಸಿಡಿವ ಹನಿಗಳ ಚಿತ್ರದ ಮೂಲಕ ಮಳೆಯನ್ನು ನೆನಪಿಸಿಕೊಳ್ಳುತ್ತಾಳೇನೋ! ಯಾರು ಬಲ್ಲರು?

ನಿಂತಷ್ಟೂ ನೆನಪುಗಳು ಉಕ್ಕುತ್ತಲೇ ಇವೆ. ಭೋರ್ಗರೆಯುತ್ತಲೇ ಇವೆ. ಅವರವರ ಬಾಲ್ಯದ ದಿನಗಳು ಅವರವರ ಪಾಲಿಗೆ ಸೊಗಸೇ ಅಂದುಕೊಂಡರೂ ವಿಷಾದ ಹೋಗದು. ನೆನಪು ಜಾರದು. ಥೇಟ್ ಮಳೆಯ ಹನಿಗಳಂತೆ ಮತ್ತೆ ಮತ್ತೆ ಅಪ್ಪಳಿಸುತ್ತವೆ. ಥಟ್ಟನೇ ಸಿಡಿದು ಬಣ್ಣವರಳಿಸಿ ಪ್ರತಿಫಲಿಸಿ ಕರಗುತ್ತವೆ. ಮತ್ತೆ ಹನಿ, ಮತ್ತೆ ಪ್ರತಿಫಲನ. ಡಾಂಬರು ರಸ್ತೆ ಯಾವುದನ್ನೂ ಹೀರಿಕೊಳ್ಳುವುದಿಲ್ಲ. ಎಲ್ಲ ಹನಿಗಳನ್ನೂ ಬಳಿದು ಚರಂಡಿಗೆ ಹರಿಸುತ್ತದೆ. ಅಲ್ಲಿಂದ ಅವು ಎಲ್ಲಿಗೆ ಹೋಗುತ್ತವೋ! ಉಕ್ಕಿ ಹರಿಯಬೇಕೆಂದರೂ ಬೆಂಗಳೂರಿನಲ್ಲಿ ಹಳ್ಳವಾದರೂ ಎಲ್ಲಿದೆ?

ದಿಢೀರನೇ ಅಪ್ಪಳಿಸಿದ ಸಿಡಿಲಿಗೆ ಬೆದರಿ ವಿದ್ಯುತ್‌ ಕಣ್ಮುಚ್ಚಿತು. ಎಲ್ಲೆಡೆ ಆವರಿಸಿಕೊಂಡ ಅಂಧಕಾರ. ಈಗ ಮಳೆ ಕಾಣಿಸದು. ಅದರ ನರ್ತನ ಗೋಚರಿಸದು. ಟಾರು ರಸ್ತೆಯೂ ಇಲ್ಲ, ಬೀದಿ ದೀಪಗಳೂ ಇಲ್ಲ. ಮಳೆ ಬೀಳುತ್ತಿದೆ ಎಂಬ ಅರಿವಿನ ಹೊರತಾಗಿ ಏನೆಂದರೆ ಏನೂ ಕಾಣುತ್ತಿಲ್ಲ.

ಮೂವರೂ ಮೌನವಾಗಿ ನಿಂತಿದ್ದೆವು. ಮಳೆ ಬೀಳುವ ಮೆದು ಮರ್ಮರ ಈಗ ಸ್ಪಷ್ಟವಾಗಿ ಕೇಳುತ್ತಿತ್ತು. ಊರಿನ ಬಾನಿನಗಲ ಹರಡಿದ ನಕ್ಷತ್ರಗಳು ನೆನಪಾದವು. ಕಪ್ಪು ಬಾಣಲೆಯಲ್ಲಿ ಅರಳು ಚೆಲ್ಲಿದಂತೆ ಹರಡಿದ ನಕ್ಷತ್ರಗಳು ತುಂಬಿದ ನನ್ನ ಬಾಲ್ಯ ನೆನಪಾಯಿತು. ತಲೆ ಎತ್ತಿ ನೋಡಿದೆ. ಅಳುವ ಕಪ್ಪು ಮೋಡಗಳೇ ಎಲ್ಲೆಡೆ. ಇನ್ನು ನಕ್ಷತ್ರಗಳು ಎಲ್ಲಿಂದ ಬಂದಾವು?

ಮೆಲ್ಲಗೇ ಮಗಳ ಕೈ ಹಿಡಿದುಕೊಂಡೆ. ಆಕೆಯ ಇನ್ನೊಂದು ಕೈಯನ್ನು ರೇಖಾ ಹಿಡಿದುಕೊಂಡಳು. ಮೂವರೂ ಕತ್ತಲಲ್ಲೇ ಮನೆ ಹೊಕ್ಕೆವು. ಇವತ್ತು ರಾತ್ರಿಯಿಡೀ ಮಳೆ ಬಿಡುವ ಲಕ್ಷಣಗಳಿಲ್ಲ. ನಕ್ಷತ್ರಗಳು ಕಾಣುವುದಿಲ್ಲ. ಒಂದು ವೇಳೆ ಮೋಡ ಕರಗಿ, ಚದುರಿ ಬಾನು ಸ್ವಚ್ಛವಾದರೂ ಬೆಂಗಳೂರಿನ ದೀಪಗಳ ಬೆಳಕು, ದೂಳು ಅವುಗಳ ನಗೆಯನ್ನು, ತುಂಟತನವನ್ನು ಕಿತ್ತುಕೊಂಡಿರುತ್ತವೆ.

ಅದನ್ನೇ ಯೋಚಿಸುತ್ತ ಹಾಸಿಗೆ ಮೇಲೆ ಒರಗಿಕೊಂಡವನಿಗೆ ಯಾವಾಗ ನಿದ್ರೆ ಬಂದಿತ್ತೋ! ಫಕ್ಕನೆ ಬಿದ್ದ ಬೆಳಕಿಗೆ ಎಚ್ಚರವಾಯಿತು. ರಾತ್ರಿ ತಡವಾಗಿ ಕರೆಂಟ್ ಬಂದಿತ್ತು. ಸ್ವಿಚ್‌ಗಳನ್ನು ಆಫ್‌ ಮಾಡದೆ ಮಲಗಿದ್ದರಿಂದ ಅಪರಾತ್ರಿಯಲ್ಲಿ ಇಡೀ ಮನೆಯ ತುಂಬ ಬೆಳ್ಳಂಬೆಳಕು.

ಮಗಳು ಎದ್ದಾಳೆಂಬ ಧಾವಂತದಿಂದ ಲೈಟ್‌ಗಳನ್ನು ಆರಿಸಿದೆ. ಫ್ಯಾನ್‌ನ ವೇಗ ಕಡಿಮೆ ಮಾಡಿದೆ. ಕೊನೆಯ ಲೈಟ್‌ ಆರಿಸಿದಾಗ- ಹಿತವಾದ ಮಬ್ಬುಗತ್ತಲು. ಅರೆ ಕ್ಷಣ ಮೌನವಾಗಿ ಕೂತೆ. ಮನಸ್ಸಿನ ತುಂಬ ಊರ ನಕ್ಷತ್ರಗಳದೇ ಜಾತ್ರೆ.

ತಕ್ಷಣ ಎದ್ದು, ಟೇಬಲ್‌ ಲ್ಯಾಂಪ್‌ ಉರಿಸಿ ಕೂತು ಇದನ್ನೆಲ್ಲ ಬರೆದೆ.

- ಚಾಮರಾಜ ಸವಡಿ
೨೨-೫-೨೦೦೮

Rating
No votes yet

Comments