ಲಘು ಹರಟೆ: ಗುಬ್ಬಣ್ಣನ "ವನ್ ಡೇ...ಮಾತರಂ..!"

ಲಘು ಹರಟೆ: ಗುಬ್ಬಣ್ಣನ "ವನ್ ಡೇ...ಮಾತರಂ..!"

ಟೀವಿಯಲ್ಲಿ ಇಂಡಿಯಾ ಪಾಕಿಸ್ತಾನ್ ವನ್ ಡೆ ಮ್ಯಾಚ್ ಬರ್ತಾ ಇತ್ತು, ನೋಡ್ತಾ ಕೂತಿದ್ದೆ. ಹೊರಗೆ ಮಟಮಟ ಮಧ್ಯಾಹ್ನದ ಬಿಸಿಲು ಧಾರಾಕಾರವಾಗಿ ಬೆವರಿನ ಮಳೆ ಸುರಿಸುತ್ತಿದ್ದರು, ಒಂದು ಕಡೆ ಬಿಸಿಗಾಳಿಯ ಫ್ಯಾನಿಗೆ ಮುಖವೊಡ್ಡಿಕೊಳ್ಳುತ್ತ, ಮತ್ತೊಂದು ಕೈಲಿ ಬೀಸಣಿಗೆ ಗಾಳಿ ಹಾಕಿಕೊಳ್ಳುತ್ತ ಟೇಬಲ್ಲಿನ ಮೇಲಿದ್ದ ಪ್ಲೇಟಿನಿಂದ ಕಡಲೆ ಕಾಯಿ ಬೀಜ, ಚಿಪ್ಸ್ ತಿನ್ನುತ್ತಿದ್ದೆ ಡ್ರಿಂಕ್ಸಿನ ಗ್ಲಾಸ್ ಜತೆಗೆ ನಂಚಿಕೊಳ್ಳುತ್ತಾ. ಅಪರೂಪಕ್ಕೆ 'ಬಿಯರಿನ ಜತೆಗೊಂದು ನೈಂಟಿ'ಗೆ ಪರ್ಮಿಟ್ ಕೊಟ್ಟ ಮನೆ ದೇವತೆಯ ಕೃಪಾಕಟಾಕ್ಷಕ್ಕೂ, ತುಂಬಾ ದಿನಗಳ ಮೇಲೆ ಆ ಹೊತ್ತಿನಲ್ಲಿ ಇಂಡಿಯಾ ಸೂಪರ್ ಆಗಿ ಆಡುತ್ತಿದ್ದ ರೀತಿಗು, ಸೀರಿಯಲ್ 'ಕಿಲ್ಲರ್' ಧಾರಾವಾಹಿಗಳಿಗೆ 'ಖೊಕ್' ಬಿದ್ದರೂ ಕಿರಿಕಿರಿ ಮಾಡದೆ ಟಿವಿ ನೋಡಲು ಬಿಟ್ಟುಕೊಟ್ಟು, ಸಪ್ಲೈ ಡಿಪಾರ್ಟ್ಮೆಂಟ್ ಜವಾಬ್ದಾರಿ ವಹಿಸಿಕೊಂಡ ನನ್ನ 'ನೈಂಟಿ ಕೇಜಿ ತಾಜಮಹಲ್' ಧಾರಾಳಕ್ಕೊ, 'ಇದ್ದರೆ ಇಂತಹ ಭಾನುವಾರ ಇರಬೇಕಪ್ಪಾ' ಎಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಹೊರಗಿನಿಂದ ಕಂಚಿನ ಕಂಠದಂತಹ ನಿರ್ದಿಷ್ಠ ದನಿಯೊಂದು ಕೇಳಿಸಿತ್ತು..

"ವನ್...ಡೇ.... ಮಾತರಂ.."

ಅದು ನಿಸ್ಸಂಶಯವಾಗಿ ಗುಬ್ಬಣ್ಣನ ದನಿಯೆಂದರಿವಾಗಿ ಬೆಚ್ಚಿ ಬಿದ್ದವನಂತೆ ಮೊದಲು ಆ ನೈಂಟಿಯನ್ನೆತ್ತಿಕೊಂಡು ಒಂದೆ ಗುಟುಕಿಗೆ 'ಸ್ವಾಹಾ' ಮಾಡಿಬಿಟ್ಟೆ, ಹನಿಯ ಪಸೆಯೂ ಒಂದು ಚೂರು ಉಳಿಯದಂತೆ. ಸಿಂಗಪುರದಲ್ಲಿ ಮೊದಲೆ 'ಡ್ರಿಂಕ್ಸ್' ಎಂದರೆ ಪ್ರೀಮಿಯಮ್.. ಅದರಲ್ಲು ಹಾಟ್ ಡ್ರಿಂಕ್ಸ್ ಅಂದರೆ ಕೇಳುವ ಹಾಗೆಯೆ ಇಲ್ಲ. ಇನ್ನು ಗುಬ್ಬಣ್ಣನಿಗಂತು ಅದೆಂದರೆ ಪ್ರಾಣ; ಕಣ್ಣಿಗೆ ಬಿದ್ದರೆ ಸಾಕು, ಒಂದೇ ಗ್ಲಾಸ, ಎರಡಿದೆಯಾ, ಬೇರೆಯವರು ಕುಡಿಯುತ್ತಿರುವ ಲೋಟವಾ ಅಲ್ಲವಾ? ಇದ್ಯಾವುದನ್ನೂ ಲೆಕ್ಕಿಸದೆ ಕುಡಿದ ಮತ್ತಿನಲ್ಲಿರುವವನಂತೆ ಒಂದೆ ಏಟಿಗೆ ಎತ್ತಿ ಕುಡಿದು ಮುಗಿಸಿಬಿಡುತ್ತಾನೆ -'ತುಂಬಾ ಚೆನ್ನಾಗಿತ್ತು ಸಾರ್.. ಯಾರು ತಂದ್ಕೊಟ್ಟಿದ್ದು ?' ಎಂದು ಲೇವಡಿ ಬೇರೆ ಮಾಡುತ್ತಾ. ಅವನ ಲೆಕ್ಕದಲ್ಲಿ ಸಿಂಗಪುರದಲ್ಲಿ ಅಷ್ಟು ದುಡ್ಡು ಕೊಟ್ಟು ಕುಡಿಯುವವರೆಲ್ಲರು ಮುಠ್ಠಾಳರು; ಪುಕ್ಕಟೆ ಸಿಕ್ಕಿದಾಗ ಭಂಡತನದಿಂದಾದರು ಸರಿಯೆ, ಕುಡಿಯದೆ ಇದ್ದವರೂ ಇನ್ನೂ ಮುಠ್ಠಾಳರು. ಅವನ ಈ ಸಿದ್ದಾಂತದ ಅರಿವಿದ್ದ ಕಾರಣದಿಂದಲೆ ನಾನು ಹುಷಾರಾಗಿ ಆ ಅಪರೂಪದ ಭಾಗ್ಯವನ್ನು ಜಾರಗೊಡದೆ, ಲಪಟಾಯಿಸಬಿಡದೆ ಒಂದೇಟಿಗೆ ಮುಗಿಸಿಬಿಟ್ಟಿದ್ದು - ನಿಧಾನಕ್ಕೆ ಆಸ್ವಾದಿಸಿ ಕುಡಿಯುವ ರಸಾಸ್ವಾದನೆಗೆ ಭಂಗವಾದರು ಸಹ; ಆಸ್ವಾದನೆಗೆ ಭಂಗವುಂಟಾದರೂ, ರಸವಾದರೂ ದಕ್ಕೀತಲ್ಲ ಎನ್ನುವ 'ಸ್ವಸ್ವಾರ್ಥ' ಮನೋಭಾವವೆ ಅಲ್ಲಿ ಮುಖ್ಯ..!

ಬಿರುಗಾಳಿಯಂತೆ ನೇರ ಒಳಬಂದವನೆ ಗುಬ್ಬಣ್ಣ ಮತ್ತೆ , "'ವನ್..ಡೇ...ಮಾತರಂ'ಎಷ್ಟಾಯ್ತು ಸಾರು ಸ್ಕೋರು?" ಎಂದ.. ಆದರೆ ಹಾಗೆ ಕೇಳುತ್ತಿದ್ದಂತೆಯೆ ಮೇಲೆ ಕೆಳಗೆ ಆಡುತ್ತಿದ್ದ ಮೂಗಿನ ಹೊಳ್ಳೆಗಳು ಅವನಿಗೇನೊ ವಾಸನೆಯ ಸುಳಿವು ಸಿಕ್ಕಿದೆಯೆನ್ನುವ ಸೂಚನೆ ನೀಡುತ್ತಿರುವುದು ಅರಿವಾಗಿ, 'ಸದ್ಯ, ಸ್ವಲ್ಪದರಲ್ಲಿ ಪಾರಾದೆ' ಎಂದುಕೊಳ್ಳುತ್ತಲೆ ಸ್ಕೋರು ಹೇಳಿದೆ. 'ಬಾಯಿ ಬಿಟ್ಟರೆ ಬಣ್ಣಗೇಡು' ಅನ್ನುವಂತೆ ಏನೊ ಭಾರಿ ಹೆಮ್ಮೆಯಲ್ಲಿ ಸ್ಕೋರು ಹೇಳ ಹೊರಟವನಿಗೆ ಬಾಯಿಯ ಘಾಟು, ವಾಸನೆಯ ರೂಪದಲ್ಲಿ ಅಲೆಯಲೆಯಾಗಿ ಪ್ರವಹಿಸಿ ಅವನ ನಾಸಿಕಾಗ್ರದ ಆವಾಹಕಗಳನ್ನು ಪ್ರೇರೇಪಿಸಿ ಗುಟ್ಟು ಬಿಟ್ಟುಕೊಡಬಹುದೆಂಬ ಸತ್ಯ ಫಕ್ಕನೆ ಅರಿವಾಗದೆ ಹೋಯ್ತು..

" ವನ್.. ಡೇ... ಮಾತರಂ.. ಏನ್ಸಾರ್ ಇದು ಚೀಟೀಂಗೂ ? ಇದು ಡೆಫನೈಟ್ಲಿ ಮ್ಯಾಚ್ ಫಿಕ್ಸಿಂಗ್... ಐ ಸೆನ್ಸ್ ಸಮ್ ಥಿಂಗ್ ರಾಂಗ್ ಹಿಯರ್" ಅಂದ. ಹುಲಿ ವಾಸನೆ ಹಿಡಿದ್ಬಿಟ್ಟಿದೆ ಅಂತ ನನಗೂ ಗೊತ್ತಾಗೋಯ್ತು...ಇನ್ನು ಮುಚ್ಚಿಟ್ಟು ಸುಖವಿಲ್ಲ...

" ಚೀಟಿಂಗೂ ಇಲ್ಲಾ ಫಿಕ್ಸಿಂಗು ಇಲ್ಲಾ ಗುಬ್ಬಣ್ಣ... ಜಸ್ಟ್ ಕೋ ಇನ್ಸಿಡೆನ್ಸ್ ಅಷ್ಟೆ.. ಹೋಮ್ ಮಿನಿಸ್ಟ್ರಿಯಿಂದ ಒಂದ್ ನೈಂಟಿಗೆ ಪರ್ಮಿಟ್ ಸಿಕ್ತು.. ಅದನ್ನೆ ಇವತ್ತು ತಾನೆ ಮುಗಿಸಿದೆ.. ಮನಸು ಬದಲಾಯಿಸೋದ್ರೆ ಕಷ್ಟ ಅಲ್ವಾ..?" ಎಂದೆ ತುಸು 'ಹುಸಿ' ಅಪರಾಧಿ ದನಿಯಲ್ಲಿ..

" ಇವತ್ತು ತಾನೇ ಅನ್ನೋದು ತೀರಾ ಮೋಸಾ ಸಾರ್.. ಈಗ ಬರ್ತಾ ಇರೋ ಸ್ಮೆಲ್ ನೋಡಿದ್ರೆ 'ಈಗ ತಾನೇ' ಮುಗಿಸಿರೊ ಹಾಗಿದೆ.. ನನಗೆ ವಾಸನೆಲೆ ಗೊತ್ತಾಗ್ಬಿಡತ್ತೆ, ಎಷ್ಟೊತ್ತಾಗಿರಬೇಕು ಬಾಟಲ್ ಓಪನ್ ಮಾಡಿ ಅಂತ.."

"ಏನಿವೇ ಸಾರಿ ಗುಬ್ಬಣ್ಣ.. ಟೈಮು ಯಾವುದೇ ಆದ್ರೂ ಅದು ಖಾಲಿ ಅನ್ನೋದು ಮಾತ್ರ ಸತ್ಯಾ.. ಟೂ ಲೇಟ್ ನೌ.. ಬಾ ಕೂತ್ಕೊಂಡು ಬಿಯರ ಹಾಕ್ತಾ ಇಂಡಿಯಾ-ಪಾಕಿಸ್ತಾನ್ ಮ್ಯಾಚ್ ನೋಡ್ತಾ 'ವನ್..ಡೇ...ಮಾತರಂ' ಮಾಡೋಣ.." ಎಂದೆ ಸಮಾಧಾನಿಸುವ ದನಿಯಲ್ಲಿ. ಸದ್ಯಾ ಬೀರಾದರು ಸಿಗುವುದೆನ್ನುವ ಆಸೆಗೆ ಸ್ವಲ್ಪ ತಣ್ಣಗಾಗುವನೇನೊ ಎನ್ನುವ ಆಸೆಯಲ್ಲಿ..

" ಇಲ್ಲಾ ಸಾರ್.. ಮ್ಯಾಚ್ ಫಿಕ್ಸಿಂಗ್ ಅಂತ ಅನುಮಾನ ಬಂದ್ಮೇಲೆ, ಪರಿಹಾರವಾದರೇನೇ ಮನಸಿಗೆ ಸಮಾಧಾನ.. ನಾನು ಇನ್ವೆಸ್ಟಿಗೇಟ್ ಮಾಡಿ ನೋಡಿಬಿಡೋದೆ ಸರಿ.." ಎಂದು ಆ ಗ್ಲಾಸಿನ ಹತ್ತಿರ ಹೋಗಲಿಕ್ಕೆ ಹವಣಿಸುತ್ತಿರುವ ಹೊತ್ತಿಗೆ ಪಾಕಾಶಾಲೆಯಿಂದ ಬಿಸಿಬಿಸಿಯಾದ, ಗರಿಗರಿಯಾದ ಬಜ್ಜಿ, ಪಕೋಡ, ಬೊಂಡಗಳ ತಟ್ಟೆಯೊಂದನ್ನು ಹೊತ್ತುಕೊಂಡ ನನ್ನ ಶ್ರೀಮತಿಯ ಪ್ರವೇಶವಾಯಿತು - 'ಥರ್ಡ್ ಅಂಪೈರಿನ' ಹಾಗೆ. ಅದೇನು ಪುಣ್ಯಕ್ಕೊ ಇಂದು ಬಹಳ ಒಳ್ಳೆಯ ಮೂಡಿನಲ್ಲಿದ್ದಂತಿತ್ತು.. ಇಲ್ಲದಿದ್ದರೆ ನಾನಾಗಿ ಕೇಳದೆಯೆ ಬಜ್ಜಿ, ಬೊಂಡ ಬರುವುದೆಂದರೆ ಒಂದೊ, ಅವಳ ತವರಿನಿಂದ ಯಾರೊ ಬಂದಿರಬೇಕು ಅಥವಾ ಅವಳ ರೇಷ್ಮೆ ಸೀರೆಗೊ, ಚಿನ್ನದ ಒಡವೆಗೊ ಇಂಡೆಂಟು ಹಾಕುವ ಹುನ್ನಾರದ ಹಿನ್ನಲೆ ಇರಬೇಕು.. ಅದೇನೆ ಇದ್ದರೂ ಗುಬ್ಬಣ್ಣನ ಗಮನ ಬೇರೆ ಕಡೆ ತಿರುಗಿಸೋಕೆ 'ಪರ್ಫೆಕ್ಟ್ ಡಿಸ್ಟ್ರಾಕ್ಷನ್' ಅಂದ್ರೆ ಈ ತರದ ಕರಿದ ತಿಂಡಿಯ ಐಟಂಗಳೆ.. ನಾನು ಸ್ವಲ್ಪ ಸಮಾಧಾನದ ನಿಟ್ಟುಸಿರಿಟ್ಟೆ. ಅದೇ ಹೊತ್ತಿಗೆ ಅವಳನ್ನು, ಅವಳ ಕೈಲಿದ್ದ ತುಂಬಿ ತುಳುಕುವ ತಟ್ಟೆಯನ್ನು ನೋಡುತ್ತಿದ್ದಂತೆ ಉದ್ವಿಗ್ನನಾಗಿ ಹೆಚ್ಚುಕಡಿಮೆ ಕಿರುಚಿದ್ದ ಗುಬ್ಬಣ್ಣಾ, "ಅಂಪೈರ್....ಹೌ ಇಸ್ ದಟ್.." ಎಂದು ಬೌಲರ್ ಇಶಾಂತ್ ಶರ್ಮನ ಶೈಲಿಯಲ್ಲಿ. ಪುಣ್ಯಕ್ಕೆ ಅವಳು ಅಂಪೈಯರನ ಶೈಲಿಯಲ್ಲಿ ಕೈ ಬೆರಳೆತ್ತಿ '(ಗೆಟ್) ಔಟ್' ಎನ್ನಲಿಲ್ಲ... 

ಅವನ ದನಿಗೆ ಬೆಚ್ಚಿಬಿದ್ದಂತಾದ ನನ್ನ 'ಹಾಫಾಂಗಿ' ತಕ್ಷಣವೆ ಸಾವರಿಸಿಕೊಂಡು, " ಏನು ಗುಬ್ಬಣ್ಣನಾ ? ಸರಿ ಸರಿ..ಇವರಿಗೆ ಸರಿಯಾದ ಜೊತೆಯೊಂದು ಬೇಕಾಗಿತ್ತು.. ನೀವು ಸರಿ ಸಮಯಕ್ಕೆ ಬಂದಿರಿ ಬಿಡಿ" ಎಂದು ಛೇಡಿಸುತ್ತ ತನ್ನ ಕೈಲಿದ್ದ ತಟ್ಟೆಯನ್ನು ಟೀಫಾಯ್ ಮೇಲಿರಿಸಿದಳು. ಹಾಗಿರಿಸುತ್ತಲೆ ಅಲ್ಲೆ ಪಕ್ಕದಲ್ಲಿದ್ದ ಖಾಲಿ ಲೋಟ ಕೈಗೆತ್ತಿಕೊಳ್ಳಲು ಬಗ್ಗಿದವಳೆ, " ರೀ.. ಏನ್ರೀ ಇದು ? ಈಗ ತಾನೆ ಬಂದು ಹೋದಾಗ ಡ್ರಿಂಕ್ಸ್ ಲೋಟ ಭರ್ತಿಯಿತ್ತು.. ಅಡಿಗೆಮನೆಗ್ ಹೋಗಿ ಬರೋಷ್ಟರಲ್ಲಿ ಪೂರ್ತಿ ಖಾಲಿ...?! ಲೈಸೆನ್ಸ್ ಸಿಕ್ಕಿದ್ದೆ ತಡ ರಾಶ್ ಡ್ರೈವಿಂಗೇನ್ರಿ ? " ಎಂದು ಬಿಟ್ಟು ಗುಬ್ಬಣ್ಣನ ಮುಂದೆಯೆ ಏಕಾಏಕಿ 'ಮ್ಯಾಚ್ ಫಿಕ್ಸಿಂಗ್' ನ ಸೀಕ್ರೇಟ್ ರಟ್ಟು ಮಾಡಿಬಿಟ್ಟಳು.. ಅದುವರೆವಿಗು ಕಷ್ಟ ಪಟ್ಟು ಬಿಲ್ಡ್ ಮಾಡಿದ್ದ ಇನಿಂಗ್ಸನ್ನು 'ರನ್ನೌಟ್' ಆಗುವ ಮೂಲಕ ವಿಕೆಟ್ ಚೆಲ್ಲಿಕೊಂಡ ಹಾಗೆ.. ಗುಬ್ಬಣ್ಣ ತಟ್ಟನೆ ತಲೆಯೆತ್ತಿದವನೆ ನನ್ನ ಕಣ್ಣುಗಳನ್ನೆ ನೇರ ದೃಷ್ಟಿಯಿಂದ ನೋಡತೊಡಗಿದ್ದ.. ನಾನು ಮತ್ತೆತ್ತಲೊ ಕಣ್ಣು ತಿರುಗಿಸಿದ್ದೆ - 'ಹ್ಯಾಂಡಲ್ ದ ಬಾಲ್' ಮೂಲಕ ಔಟಾದ ತಿಳಿಗೇಡಿಯ ಹಾಗೆ.

ಹಾಳು ಪ್ರಾಜೆಕ್ಟಲ್ಲಿ ಅನಿರೀಕ್ಷಿತ ಹೊತ್ತಲ್ಲಿ ಅನೂಹ್ಯವಾಗಿ ಬಂದೊದೆಯುವ ಮರ್ಫಿಯ ಹಾಗೆ, ಅದುವರೆಗು ಒಳ್ಳೆ ಬಿಲ್ಡಪ್ ಕೊಡುತ್ತಿದ್ದ 'ಅರೆ-ಮತಿ'ಯೆ ಔಟ್ ಮಾಡಿಸಿದ ಬೇಸರಕ್ಕೆ ಬಯ್ಯುವಂತೆಯೂ ಇಲ್ಲದೆ ಪೆಚ್ಚು ನಗೆ ನಗುತ್ತ ಮ್ಯಾಚಿನತ್ತ ನೋಡತೊಡಗಿದ, ಅವಳ ಮಾತೆ ಕೇಳಿಸದವನಂತೆ. ಆದರೆ ಗುಬ್ಬಣ್ಣ ಬಿಡಬೇಕಲ್ಲಾ?

" ನೋಡುದ್ರಾ ಸಾರ್ ..? ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಹೆಂಗೆ ಸಿಕ್ಕೊಂಡ್ಬಿಡ್ತು ? ಅನುಭವಾ ಸಾರ್ ಅನುಭವಾ.. ಇಲ್ದಿದ್ರೆ ಇಷ್ಟು ಸಲೀಸಾಗೆ ಹೇಗೆ ಕಂಡು ಹಿಡೀತಿದ್ದೆ ನಾನು ? ನಮ್ ದೇವರ ಸತ್ಯ ನಮಗ್ ಗೊತ್ತಿಲ್ವಾ ಅನ್ನೊ ಹಾಗೆ.. ಇನ್ನು ಏನ್ ನೆಪ ಹೇಳೋದ್ ಬ್ಯಾಡಾ.. ಕಾಂಪನ್ಸೇಶನ್ ಪ್ಲಾನ್ ಬಿಚ್ಚಿಡಿ ಈಗ.." ಎಂದ. ಅವನ ಪ್ಲಾನಿನ ಮರ್ಜಿಗೆ ಬಿದ್ದು ಹೋದರೆ ಸಿಂಗಪುರದ ಆ ತುಟ್ಟಿ ಮದ್ಯದಂಗಡಿಯಲ್ಲಿ ಒಂದು ಪೂರ್ತಿ 'ಎಕ್ಸ್ಪೆನ್ಸಿವ್' ಬಾಟಲು ಪೀಕಬೇಕಾಗುತ್ತೆ.. ನನಗೇನೆ ನಾನು ದುಡ್ಡು ಕೊಟ್ಟು ಕುಡಿದವನಲ್ಲ, ಇನ್ನು ಗುಬ್ಬಣ್ಣನಿಗೆ ಕುಡಿಸುವುದೆ ? ಬಿಲ್ಕುಲ್ ಆಗದ ಮಾತು !

"ಗುಬ್ಬಣ್ಣ ಮ್ಯಾಚ್ ಇಂಟ್ರಸ್ಟಿಂಗ್ ಸ್ಟೇಜಲ್ಲಿದೆ ನೋಡೋಣ ಬಾರೊ.. ಈ ಮ್ಯಾಚ್ ಫಿಕ್ಸಿಂಗ್ ಗಿಕ್ಸಿಂಗ್ ಎಲ್ಲಾ ಆಮೇಲೆ ನಿರ್ಧರಿಸೋಣ.." ಎನ್ನುತ್ತ ಸಮಾಧಾನಿಸಿದೆ. ಅವನ ಮುಂದೆ ತಳ್ಳಿದ್ದ ಬೊಂಡ, ಬಜ್ಜಿಯಾದಿ ಕುರುಕು ತಿಂಡಿಗಳ ಮೇಲೆ ಗಮನ ಹರಿಸುತ್ತಾ, " ಏನ್ ಸಾರು ಇಲ್ಲೂ ಅದೇ ಗೋಳು ಬರಿ ಸಸ್ಯಾಹಾರವೆ ಇದೆ ?" ಎಂದು ಅಪಶೃತಿ ನುಡಿದ. ನಮ್ಮ ಮನೆಯಲ್ಲಿ ಎಲ್ಲಾ ವೆಜ್ಜೆ, ಯಾರು ಯಾವ ಕಾಲದಲ್ಲೂ ನಾನ್ವೆಜ್ಜು ಮಾಡಿದವರಲ್ಲ, ತಿಂದವರಲ್ಲ.. ಅದು ಗೊತ್ತಿದ್ದು ಯಾಕೆ ಗುಟುರು ಹಾಕುತಿದ್ದಾನೆ ? ಎಂದು ನನ್ನಲ್ಲೆ ಅಂದುಕೊಂಡೆ ಅವನ ಮುಂದೆ ಬಿಯರ್ ಗ್ಲಾಸ್ ತಳ್ಳಿದೆ, 'ಸಾರಾಯಂ ಸರ್ವ ರೋಗಾನಿಕಿ ಮದ್ದು' ಎನ್ನುವ ಹಾಗೆ.

" ಇಷ್ಟೊಂದು ಎಗ್ಸೈಟಿಂಗ್ ಮ್ಯಾಚು, ಅದೂ ಸಂಡೆ ನಡೆಯುವಾಗ ಬೀರಿನ ಜತೆಗೆ 'ವಿಶೇಷ ಐಟಂ' ಇರಬೇಕು ಸಾರ್.. ಮೊದಲೆ ಹೇಳಿದ್ದಿದ್ದರೆ ಬರುವಾಗಲೆ ಏನಾದರು ಕಟ್ಟಿಸಿಕೊಂಡು ಬಂದುಬಿಡುತ್ತಿದ್ದೆನಲ್ಲಾ, 'ಭರ್ಜರಿ ರಾಜಾ' ದಿಂದ" ಎಂದ.

'ಭರ್ಜರೀ ರಾಜಾ' ಅನ್ನೋದು 'ಬರ್ಗರ ಕಿಂಗ್'ನ ಕನ್ನಡೀಕರಿಸಿದ ರೂಪ.. ನವೆಂಬರು ಹತ್ತಿರವಾಗುತ್ತಿದ್ದಂತೆ ಗುಬ್ಬಣ್ಣನ ಕನ್ನಡ ಪ್ರೇಮವು ಜಾಗೃತವಾಗುವುದೇನು ಹೊಸತಲ್ಲ... ಆದರೆ ಈಗ 'ವನ್ ಡೇ ಮಾತರಂ' ಒನ್ ಡೆ ಮ್ಯಾಚ್ ನಡೆಯುವಾಗ ಈ ಕನ್ನಡ ಪ್ರೇಮ ಸ್ವಲ್ಪ ಗೋಕುಲಾಷ್ಟಮಿ, ಇಮಾಂಸಾಬಿ ಲೆಕ್ಕಾಚಾರ..

" ಅಲ್ಲೀಗ ಮಾರಾಟದ ಭರ್ಜರಿ ಭೇಟೆ ನಡೆದಿದೆ ಸಾರ್... ಒಂದು ಏಕ ಮಾಳಿಗೆ ಕೋಳಿ ಸೊಪ್ಪಿನ ರೊಟ್ಟಿ ಕೊಂಡ್ರೆ ಇನ್ನೊಂದು ಪುಕ್ಕಟ್ಟೆ" ಇದ್ಯಾವುದಪ್ಪ, 'ಏಕ ಮಾಳಿಗೆ ಕೋಳಿ ಸೊಪ್ಪಿನ ರೊಟ್ಟಿ' ಅಂತ ತಿರುಗ ತಲೆ ಕೆಡಿಸಿಕೊಬೇಡಿ - ಯಾಥಾರೀತಿ ಬರ್ಗರಿಗಿಟ್ಟ ಹೆಸರು ಅದು. ಮಾಳಿಗೆ ಅನ್ನೋದು ಬನ್ನುಗಳೆರಡರ ನಡುವೆ ಇರುವ ಅಟ್ಟಣೆ ಒಂದು ಮಾಳಿಗೆಯದ, ಎರಡು ಮಾಳಿಗೆಯದ ಅನ್ನುವುದರ ಮೇಲೆ ಅದರ ಗುಣ ವಿಶೇಷ ನಿಗದಿತವಾಗುತ್ತೆ...

"ಯಾಕೆ ಪೀಡ್ಜಾ ಹಟ್ಟು, ಮೆಕ್ಡೊನಾಲ್ಡ್ಸ್, ಕೇಎಫ್ಸಿ ಆದರೆ ಆಗಲ್ವಾ ? ಅಲ್ಲೂ ವಾರವಾರನು ಪ್ರಮೋಶನ್, ಡಿಸ್ಕೌಂಟೂ ಇರುತ್ತಲ್ಲ?" ಎಂದೆ ನಾನು. ಆ ಹೊತ್ತಿಗೆ ವಿರಾಟ್ ಕೋಹ್ಲಿ ಒಂದು ಪೋರ್ ಹೊಡೆದದ್ದು ಕಾಣಿಸಿತು..

"ಅಲ್ಲು ಹುರಿದ ಕೋಳಿ ತಾನೆ ಸಾರ್ ಸಿಗೋದು ? ಅಲ್ಲಿ ನೋಡಿ ನಮ್ಮ ವಿರಾಟ ಕೋಳಿಯೂ ಒಂದು 'ಚೌತಿ' ಹೊಡೆದುಬಿಟ್ಟ.."

ನನಗ್ಯಾಕೊ ಪೂರ್ತಿ ಅನುಮಾನ ಶುರುವಾಗಿಹೋಯ್ತು - 'ಬಿಯರೇರುವುದಕ್ಕೆ ಮುಂಚೆ ಯಾವತ್ತು ಗುಬ್ಬಣ್ಣ ಹೀಗೆ ಮಾತಾಡಿದವನಲ್ಲ.. ಅಂತದ್ದರಲ್ಲಿ ಈಗ ಕೋಹ್ಲಿಯನ್ನ, ಕೋಳಿ ಅನ್ನುತ್ತಿದ್ದಾನೆ, ಕೇಯಫ್ಸಿ ಫ್ರೈಡ್ ಚಿಕನ್ನನ್ನು ಹುರಿದ ಕೋಳಿ ಅನ್ನುತ್ತಿದ್ದಾನೆ, ಬೌಂಡರಿ ಹೊಡೆದ ಅನ್ನದೆ ಚೌತಿ ಬಾರಿಸಿದ ಅನ್ನುತ್ತಿದಾನೆ; ಆಗಲೆ ನೋಡಿದರೆ 'ಭರ್ಜರಿ ರಾಜಾ' ಎಂದು 'ಬರ್ಗರ ಕಿಂಗ್' ಜಾತಕವನ್ನೆ ಏಮಾರಿಸಿಬಿಟ್ಟ.. ಅದೆಲ್ಲ ಸಾಲದಂತೆ ಸೊಟ್ಟ ಸೊಟ್ಟಾಗಿ 'ವನ್ ಡೇ ಮಾತರಂ, ವನ್ ಡೇ ಮಾತರಂ' ಅಂತಾ ಬೇರೆ ಒಂದೆ ಸಮನೆ ಬಡಕೋತಾ ಇದಾನೆ - ಏನು ಬರುವಾಗ್ಲೆ ಲಿಟಲ್ ಇಂಡಿಯಾದಲ್ಲಿ ಒಂದು ಪೆಗ್ 'ರಮ್ಮು' ಏರಿಸಿಕೊಂಡೆ ಬಂದುಬಿಟ್ಟನಾ, ಹೇಗೆ ?' ಎಂದೆಲ್ಲಾ ಅನುಮಾನದ ನೂರೆಂಟು ಪ್ರಶ್ನೆಗಳು ಧುತ್ತೆಂದು ಎದುರಾಗುವ ಹೊತ್ತಿನಲ್ಲೆ ಮತ್ತೊಂದು ಮುತ್ತಿನ ವಾಗ್ಜರಿ ಉದುರಿಬಿದ್ದಿತ್ತು ಗುಬ್ಬಣ್ಣನ ಹೊಸ 'ಕಲಾಕಾರ' ಅವತಾರದಲ್ಲಿ..

" ಏನು ದಾಂಡಿಗರು ನಮ್ಮವರೂಂತೀನಿ? ಒಂದೂ ಗೂಟ ಕಳೆದುಕೊಳ್ಳದ ಹಾಗೆ ಓಟ ಪೇರಿಸ್ತಿದಾರಲ್ಲಾ? ಹೀಗೆ ಆಡ್ತಿದ್ರೆ ಮುನ್ನೂರು ದಾಟೋದು ಗಟ್ಟಿ.." ಎಂದ ಗೆಲ್ಲೋಕೆ ಬೇಕಾದ ಮುನ್ನೂರೂ ಚಿಲ್ಲರೆ ರನ್ನುಗಳ ಲೆಕ್ಕ ಹಾಕುತ್ತಾ..

ನನಗೇನೊ ಅನುಮಾನವಾಗಿ ಚಕ್ಕನೆ ಗೋಡೆಯ ಮೇಲಿದ್ದ ಕ್ಯಾಲೆಂಡರಿನತ್ತ ನೋಡಿದೆ.. ತಾರೀಖು ನೋಡುತ್ತಿದ್ದಂತೆ ಏನೊ ಜ್ಞಾನೋದಯವಾದಂತಾಗಿ ಗುಬ್ಬಣ್ಣನ ಅಸಾಧಾರಣ ವರ್ತನೆಗೊಂದು ಸುಳಿವು ಸಿಕ್ಕಂತಾಯ್ತು..

" ಲೋ ಗುಬ್ಬಣ್ಣಾ... ನವೆಂಬರ್ ಒಂದನೆ ತಾರೀಖು ಇನ್ನು ಒಂದು ವಾರ ದೂರದಲ್ಲಿದೆಯೊ.. ಈಗಿನಿಂದಲೆ ಇಷ್ಟೊಂದು ಅಭಿಮಾನ ಬಂದು ಬಿಟ್ರೆ ಹೇಗೊ ? ಅಕ್ಟೋಬರ ಮೂವ್ವತ್ತರ ರಾತ್ರಿಗೊ, ನವೆಂಬರ ಒಂದರ ಬೆಳಿಗ್ಗೆಗೊ ಜಾಗೃತಿಯಾದರೆ ಸಾಕೊ.. ಈಗ ಸದ್ಯಕ್ಕೆ ನೀನೆ ಹೇಳುತ್ತಿರುವ ಈ ಕ್ರಿಕೆಟ್ಟಿನ 'ವನ್ ಡೇ ಮಾತರಂ' ಸಾಕು.. ಮ್ಯಾಚ್ ನೋಡ್ತಾ ಎಂಜಾಯ್ ಮಾಡು ಬಾ, ಬೀಯರಿನ ಜತೆಯಲ್ಲಿ..."ಅಂದೆ.

ಗುಬ್ಬಣ್ಣ ಯಾಕೊ ಇನ್ನು ಕೆಂಪಾಗಿ ಗುರುಗುಟ್ಟುವಂತೆ ಕೆಕ್ಕರಿಸಿಕೊಂಡೆ ನನ್ನತ್ತ ನೋಡತೊಡಗಿದ.. ನನ್ನ 'ಗೆಸ್' ತಪ್ಪಾಗಿದ್ದಾಗೆಲ್ಲ ಅವನು ಹೀಗೆ 'ಗುರಾಯಿಸುವುದರಿಂದ' ನನಗು ನಾನು ಹೇಳಿದ್ದು 'ಹಾಫ್' ಸತ್ಯವೊ, 'ಕ್ವಾಟರ್' ಸತ್ಯವೊ ಇರಬೇಕೆಂದರಿವಾಗಿ 'ಮತ್ತೇನು ?' ಎನ್ನುವಂತೆ ಅವನತ್ತಲೆ ಮರು'ಗುರಾಯಿಸಿದೆ', ಹುಬ್ಬು ಮೇಲೇರಿಸುತ್ತ.

" ಅದಕ್ಕೆ ಸಾರ್.. ನಾನು ಹೇಳಿದ್ದು, ನೀವೆಲ್ಲ ಬರಿ 'ವನ್ ಡೇ ಮಾತರಂ' ಜನ ಅಂತ' ಎಂದು ಹೇಳಿ ವಿಷಯವನ್ನೆ ಮತ್ತಷ್ಟು ಗೋಜಲಾಗಿಸಿದ.

ಗುಬ್ಬಣ್ಣನಿಗೆ ಕ್ರಿಕೆಟ್ಟೆಂದರೆ ಪ್ರಾಣ.. ಅದರಲ್ಲಿ ವನ್ ಡೆ ಮ್ಯಾಚೆಂದರೆ ಪಂಚ ಪ್ರಾಣ.. ಅದರಲ್ಲು ಇಂಡಿಯಾ- ಪಾಕಿಸ್ಥಾನ್ ಮ್ಯಾಚು ಬೇರೆ - ದೇಶಭಕ್ತಿ ಉಕ್ಕಿ ಹರಿಯಲು ಇನ್ನಾವ ಕಾರಣ ಬೇಕು ? ಇದುವರೆವಿಗು ಆ ಕಾರಣದಿಂದಲೆ ನಿಜವಾದ 'ವಂದೇ ಮಾತರಂ' ಅನ್ನೆ ತುಸು ರೂಪಾಂತರಿಸಿ ವಂಡೆ ಕ್ರಿಕೆಟ್ಟಿನ 'ವನ್ ಡೇ ಮಾತರಂ' ಅನ್ನುತ್ತಿದ್ದನೆ? ಅಂದುಕೊಂಡಿದ್ದವನಿಗೆ, ಈಗ ಸ್ವಲ್ಪ ಅನುಮಾನ ಶುರುವಾಯ್ತು..

" ಏನೊ ಗುಬ್ಬಣ್ಣ.. ನೀನು ಹೇಳ್ತಾ ಇರೋ ತರ ನೋಡಿದ್ರೆ, ನೀನು ಹೇಳ್ತಾ ಇರೋದು ಕ್ರಿಕೆಟ್ ವನ್ ಡೇ ಮಾತರಂ ಅಲ್ಲಾ ಅನಿಸ್ತಿದೆ.. ಕನ್ನಡ ರಾಜ್ಯೋತ್ಸವದ ಭುವನೇಶ್ವರಿನೇನಾದರು ಮನಸಿನಲ್ಲಿಟ್ಟುಕೊಂಡು 'ವಂಡೇ ಮಾತರಂ' ಅನ್ನುತ್ತಿದ್ದಿಯಾ, ಹೇಗೆ ? ನಾವು ವಂದೇ ಮಾತರಂ ಸಾಮಾನ್ಯ ಹೇಳೋದು ಸ್ವಾತಂತ್ರ ದಿನಕ್ಕೊ, ಗಣರಾಜ್ಯಕ್ಕೊ ಅಲ್ವಾ?" ಎಂದು ಅನುನಯಿಸುವ ದನಿಯಲ್ಲೆ ಕೇಳಿದ್ದೆ. ಕನ್ನಡದಲ್ಲಿರೊ 'ಡ' ತೆಗೆದು ವಂದೆನಲ್ಲಿರೊ 'ದ' ಗೆ ಹಾಕಿ 'ಹೊಸ ಕನ್ನಡ ವರ್ಡು ಸಾರ್ ಇದೂ', ಅನ್ನೊ ಕಿಲಾಡಿ ಗುಬ್ಬಣ್ಣ. ಆದರೂ ಅವನು ಕುಡಿದೆ ಬಂದಿರಬೇಕೆನ್ನುವ ಗುಮಾನಿ ಮಾತ್ರ ಕಡಿಮೆಯಾಗಿರಲಿಲ್ಲ.. ಅದನ್ನು ನಾನಂತು ಪರೀಕ್ಷಿಸಿ ಹೇಳುವಂತಿರಲಿಲ್ಲ.. ನಾನೆ ಗುಂಡು ಹಾಕಿಕೊಂಡು ಕೂತಿರುವಾಗ ಅವನ ವಾಸನೆ ನಾನು ಹಿಡಿಯುವುದೆಲ್ಲಿ?

"ಅದನ್ನೆ ಸಾರ್.. ನಾನು ಹೇಳ್ತಿರೋದು.. ಯಾರಿಗೂ ಒಂದು ಚೂರು ಅಭಿಮಾನಾನೆ ಇಲ್ಲ.. ನಮ್ ದೇಶ, ನಮ್ ಭಾಷೆ, ನಮ್ ಸಂಸ್ಕೃತಿ, ನಮ್ ಆಚಾರ ವಿಚಾರ - ಎಲ್ಲಾ ಬರಿ ವನ್ ಡೇ ಮ್ಯಾಚ್ ತರ ವನ್ ಡೇ ಮಾತರಂ ಆಗ್ಬಿಟ್ಟಿದೆ.. ಮ್ಯಾಚ್ ದಿನ ಐವತ್ತೈವತ್ ಓವರ್ ನೋಡ್ಕೊಂಡ್ ಹಾರ್ಕೊಂಡ್, ಕುಣ್ಕೊಂಡ್ 'ಧಾಂ ಧೂಂ' ಅನಿಸೊ ಹಾಗೆ ಮಾಡಿ ಆಮೇಲೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೊ ತರ ಪೂರ್ತಿ ಬಿಟ್ ಹಾಕಿ ನೆಕ್ಸ್ಟ್ ವನ್ ಡೆ ಕಾಯ್ತಾರಲ್ಲಾ? ಹಾಗೆ " ಎಂದು ಕಿಡಿಗಾರಿದ ಗುಬ್ಬಣ್ಣ.

ನಾನು ಸ್ವಲ್ಪ ಮತ್ತೇರಿದ್ದ ಧೈರ್ಯದಲ್ಲೆ ದನಿಯೇರಿಸುತ್ತಾ,"ಗುಬ್ಬಣ್ಣ ಕಮ್ ಟು ದಿ ಪಾಯಿಂಟ್.. ನಿನ್ನ ಮಾತರಂ, ಕ್ರಿಕೆಟ್ ವನ್ ಡೇ ಮಾತರಂ ಅಲ್ಲಾ ಅನ್ನೋದಾದ್ರೆ ಇನ್ನೇನೂಂತಾ?" ಎಂದೆ.

" ಸಾರ್ ವನ್ ಡೇ ಮ್ಯಾಚ್ ನೋಡ್ತಾ , ಅದನ್ನೆ ನಾವ್ ಗಾಡ್ ಅನ್ನೊ ತರಹ ನೋಡೊದ್ರಿಂದ ಅಲ್ಲೂ ಅಪ್ಲೈ ಆಗುತ್ತೆ ಸಾರ್.. ಆದರೆ ನಾನು ಹೇಳಿದ ವನ್ ಡೇ ಮಾತರಂ ಅದಲ್ಲಾ .."

"ಮತ್ತೆ?"

" ನಾವ್ ಮಾಡೊ ಸೆಲೆಬ್ರೆಷನ್ನೆಲ್ಲ ಈಗ ಬರಿ ವನ್ ಡೇ ಮ್ಯಾಚ್ ತರನೇ ಆಗಿಬಿಟ್ಟಿದೆ ಅನ್ನೊ ರೀತೀಲಿ ಹೇಳಿದ್ದು.."

"ಅಂದ್ರೆ.."

" ಇನ್ನೂ ಗೊತ್ತಾಗಿಲ್ವಾ ಸಾರ್? ಎಲ್ ಗೊತ್ತಾಗುತ್ತೆ ? ಮ್ಯಾಚ್ ಫಿಕ್ಸಿಂಗ್ ಮಾಡೊಕ್ ಹೋಗಿ ಪೂರ್ತಿ ನೈಂಟೀನೂ ಒಂದೆ ಏಟಿಗೆ ಒಳಗೆ ಸೇರಿಸಿದೀರಾ... ನಾನು ಹೇಳಿದ್ದು ನಾವೀಗ ಹೊಸದೊಂದು ಸ್ಲೋಗನ್ 'ಕಾಯಿಲ್' ಮಾಡಬೇಕೂಂತ.."

"ಏನ್ ಸ್ಲೋಗನ್..?"

"ವನ್.. ಡೆ..ಮಾತರಂ.." ಅಂತ..

"ಯಾಕೊ..?"

"ವರ್ಷ ಪೂರ್ತಿ ಕ್ರಿಕೆಟ್ಟು ಸೇರಿದಂತೆ ಎಲ್ಲಾ ಹಬ್ಬಾ ಹರಿದಿನ, ರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ, ಎಲ್ಲಾ ತರದ ಜಯಂತಿಗಳಿಗು ಅದೊಂದೆ ಸ್ಲೋಗನ್ ಯೂಸ್ ಮಾಡ್ಬೋದ್.."

" ಹಾಂ...!"

" ಹೇಗಿದ್ರು ನಮ್ ಆಡಂಬರ, ತೋರಾಟಾ, ಹೋರಾಟ ಎಲ್ಲಾ ಬರಿ ಒಂದು ದಿನದ ಪ್ರತಾಪಾ ಮಾತ್ರಾ ತಾನೆ ? ಅದಕ್ಕೆ 'ವನ್ ಡೇ' ಅನ್ನೋದು ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತೆ ನೋಡಿ.. ಹಾಗೆ ಇನ್ನು ಮಾತರಂ ಅಂದ್ರೇನು ? ತಾಯಿ ಸಮಾನ ಅಂತ ತಾನೆ ? ಎಲ್ಲಾ ಹಬ್ಬದಲ್ಲು ಯಾವದಾದರು ತಾಯಿ ಪೂಜೆ ಇದ್ದೇ ಇರುತ್ತಲ್ಲಾ ? ಒಂದು ವೇಳೆ ಇರದಿದ್ರೂ ಆ ತಾಯಿ ತಾನೆ 'ಬ್ರಹ್ಮ'ದ ಮತ್ತೊಂದು ರೂಪಾ? ಅಲ್ಲಿಗೆ ಎಲ್ಲಾರೂ ತಾಯಿ ಅಂದ ಹಾಗೇ ತಾನೆ ಲೆಕ್ಕಾ?"

"ಓಹೋ..!"

" ಸೋ.. ಎಲ್ಲದಕ್ಕು ಸೇರಿಸಿಕೊಂಡು ಒಂದೆ ಸ್ಲೋಗನ್ನಲ್ಲಿ ನಿಭಾಯಿಸ್ಬೋದು.. ಒಂತರಾ ದೇಶ ಭಕ್ತೀನೂ ಆಗುತ್ತೆ.. ಮುಂದಿನ ವಾರ ರಾಜ್ಯೋತ್ಸವಕ್ಕೂ ಕನ್ನಡ ತಾಯಿ ಭುವನೇಶ್ವರಿಯ ಹಬ್ಬಾ ತಾನೆ? ಅಲ್ಲಿಗೂ ಅದನ್ನೆ ಹೇಳ್ಬೋದು..ಅಲ್ಲಿ 'ದ' ಕಾರದ ಬದಲು ಕನ್ನ'ಡ'ದ 'ಡ' ಕಾರ ಹಾಕಿ 'ವಂಡೆ' ಮಾತರಂ ಅಂದುಬಿಟ್ರೂ ಆಯ್ತೂ.."

"ಓಹ್.. ಅದಕ್ಕೊ ತಾವು ಇಷ್ಟೊತ್ತು ಅಚ್ಚಗನ್ನಡದಲ್ಲಿ ದಾಂಡಿಗ, ಗೂಟ ರಕ್ಷಕ, ಕ್ಷೇತ್ರಪಾಲಕ, ಚೌತಿ, ಷಷ್ಠಿ, ಹುರಿದ ಕೋಳಿ, ಭರ್ಜರಿ ರಾಜ ಅಂತೆಲ್ಲಾ ಅಪ್ಪಣೆ ಕೊಡಿಸುತ್ತಿದ್ದುದ್ದು..?"

ಪೆಚ್ಚುಪೆಚ್ಚಾಗಿ ಹಲ್ಲು ಕಿರಿಯುತ್ತ, " ರಾಜ್ಯೋತ್ಸವನಾದರೂ 'ವನ್ ಡೇ ಮಾತರಂ' ಬದಲು 'ವೀಕ್ಫುಲ್ ಮಾತರಂ'  ಆಗ್ಲಿ ಅಂತ ಸಾರ್.." ಅಂದ.

ನಾನು, " ಗುಬ್ಬಣ್ಣ, ನಿನ್ನ ಈ ಥಿಯರಿ ಯಾವುದಕ್ಕಾದರೂ ಅಪ್ಲೈ ಆಗ್ಬೋದು.. ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಬಿಲ್ಕುಲ್ ಆಗಲ್ಲ.." ಅಂದೆ.

ಗುಬ್ಬಣ್ಣ ಅರ್ಧ ಗಾಬರಿ, ಅರ್ಧ ಕೋಪದಿಂದ , " ಯಾಕೆ ಹಾಗಂತೀರಾ ಸಾರ್.." ಎಂದ ಅಳು ಮೂತಿ ಮಾಡಿಕೊಂಡು.

" ನೀನು ಪೆಗ್ಗು ಏರೋಕ್ ಮೊದ್ಲೆ ಗುಗ್ಗು ಆಗಿಬಿಟ್ಟಿದ್ದಿಯಲ್ಲೊ ಗುಬ್ಬಣ್ಣಾ..? 'ವನ್ ಡೇ ಮಾತರಂ' ಆಗ್ಲಿ, 'ವಂದೇ ಮಾತರಂ' ಆಗ್ಲಿ ಎರಡರಲ್ಲೂ ಕನ್ನಡ ಪದಗಳೆ ಇಲ್ವಲ್ಲೊ ? ಮೊದಲೆ ಕರ್ನಾಟಕದಲ್ಲಿ, ಬೆಂಗಳೂರಲ್ಲಿ ಕನ್ನಡ ಎಲ್ಲಿದೆ ಅಂತ 'ಲೆನ್ಸ್' ಹಾಕ್ಕೊಂಡ್ ಹುಡುಕ್ಬೇಕು.. ನೀನು ಅದನ್ನ ಕನ್ನಡ ಹಬ್ಬದ ಸ್ಲೋಗನ್ನಲ್ಲು ತೆಗೆದು ಹಾಕಿ ಕನ್ನಡಮ್ಮನ ಪೂರ್ತಿ ತಬ್ಬಲಿ ಮಾಡೋಕ್ ಹೊರಟ ಹಾಗಿದೆ..? ಇಲ್ಲಾ ಬಿಡು.. ಇಲ್ಲಿ ಮಾತ್ರ ನಮ್ ಸ್ಲೋಗನ್ 'ಜೈ ಕರ್ನಾಟಕ ಮಾತೇ'ನೊ, 'ಜೈ ಭುವನೇಶ್ವರೀ ಮಾತೇ'ನೊ ಆಗಿರಬೇಕೆ ಹೊರತು, ನಿನ್ನ 'ವನ್..ಡೇ...ಮಾತರಂ' ಅಲ್ಲ. ಅದರಲ್ಲು 'ವಂದೇ' ಅಂದ್ರೆ ನಮಸ್ಕಾರ, ಜೈಕಾರದ ಅರ್ಥ ಬರೋದು, ನಿನ್ನ 'ವನ್ ಡೇ' ಥಿಯರಿ ಅಲ್ಲಾ.. ಅದೇನಿದ್ರೂ ಮಿಕ್ಕಿದ್ದೆಲ್ಲಾದುಕ್ಕು ಆಗ್ಬೋದು - ಕನ್ನಡ ಮಾತ್ರ ಯುನಿಕ್ಕೇ!" ಎಂದೆ..

" ಹಾಗಾಂತೀರಾ.. ನಾನು ಏನೊ 'ಯುನಿಕ್' ರಿಸರ್ಚ್ ಮಾಡ್ದೆ ಅಂತಾ ತುಂಬಾ ಖುಷಿ ಪಟ್ ಬಿಟ್ನಲ್ಲಾ ಸಾರ್.." ಎಂದ ಗುಬ್ಬಣ್ಣ ಮತ್ತೆ ಪೆಚ್ಚು ಮೋರೆ ಹಾಕುತ್ತ.

ಅದೇ ಹೊತ್ತಿಗೆ ಸರಿಯಾಗಿ ಸಿಕ್ಸರ್ ಹೊಡೆದ ಕೋಯ್ಲಿ ವಿನ್ನಿಂಗ್ ರನ್ಸ್ ಬಾರಿಸಿ, ವಿಕೆಟ್ ಕಿತ್ತುಕೊಂಡು ಓಡತೊಡಗಿದ್ದ ಫೀಲ್ಡಿನಲ್ಲಿ.

" ಹೋಗ್ಲಿ ಬಿಡೊ ಗುಬ್ಬಣ್ಣ.. ಅಲ್ನೋಡ್ ನಿನ್ ಈ 'ವನ್..ಡೇ...ಮಾತರಂ' ಅಂತೂ ಕೆಲಸ ಮಾಡ್ತಾ ಇದೆ.. ವಿರಾಟ್ ಕೋಳಿ ಗೆಲ್ಲಿಸ್ಬಿಟ್ಟ.."

ಮ್ಯಾಚನ್ನು ಅದುವರೆವಿಗು ಸರಿಯಾಗಿ ಗಮನಿಸದೆ ಇದ್ದ ಗುಬ್ಬಣ್ಣ, ಅದನ್ನು ನೋಡುತ್ತಿದ್ದಂತೆ ಅದುವರೆಗಿದ್ದ ಖೇದವೆಲ್ಲಾ ಮಾಯವಾದವನಂತೆ ರೋಮಾಂಚಿತನಾಗಿ, " ಓಹ್..! ಗೆದ್ದೆ ಬಿಟ್ರಲ್ಲಾ ಸಾರ್..?'ವನ್...ಡೇ...ಮಾತರಂ...!'" ಎಂದವನೆ ಇನ್ನು ಅರ್ಧ ಮಿಕ್ಕಿದ್ದ ಬಿಯರ್ ಗ್ಲಾಸಿಗೆ ಕೈ ಹಾಕಿದ.. 

ಅಲ್ಲಿಗೆ ಅರ್ಧ ರಿಪೇರಿ ಆದ ಹಾಗೆ ಲೆಕ್ಕ ಎಂದುಕೊಂಡು ನಾನೂ, " ಜೈ ಕರ್ನಾಟಕ ಮಾತೆ" ಎಂದು ಒಂದು ಅಡ್ವಾನ್ಸ್ ಸ್ಲೋಗನ್ ಹಾಕಿ ಕುರುಕಲು ತಿಂಡಿಯ ತಟ್ಟೆಗೆ ಕೈ ಹಾಕಿದೆ..

- ನಾಗೇಶಮೈಸೂರು
(ಕನ್ನಡ ರಾಜ್ಯೋತ್ಸವಕ್ಕೆ ಗುಬ್ಬಣ್ಣ & ಕೋ ನ ಹಾರ್ದಿಕ ಶುಭಾಶಯಗಳೊಂದಿಗೆ " ಜೈ ಭುವನೇಶ್ವರಿ ಮಾತೆ!")
 

Comments

Submitted by Iynanda Prabhukumar Mon, 11/02/2015 - 12:41

ಬರೆಹ‌ ಚೆನ್ನಾಗಿದೆ. ನಮ್ಮ‌ ಕಾಲದ‌ ಹಾಸ್ಯ‌ ಲೇಖಕರ‌ ಶೈಲಿ ನೆನಪಾಯಿತು. ಆದರೆ ಬಿಯರ್ ಕುಡಿಯುತ್ತಾ ಹಾರ್ಡ್ ಡ್ರಿಂಕ್, ಅದರಲ್ಲೂ ನೈಂಟಿ, ಅದನ್ನೂ ಒಂದೇ ಗುಟುಕಲ್ಲಿ ಮುಗಿಸೋದೂ... ಯಾಕೋ ನೈಜತೆಯ‌ ಬಗ್ಗೆ ಅನುಮಾನಾಸ್ಪದ‌. ಅಥವಾ, ಈಗಿನ‌ ಕಾಲದಲ್ಲಿ ನೀರಿನಲ್ಲಿರೋ ಮತ್ತು ದಾರುವಿನಲ್ಲಿಲ್ಲ‌ ಅನ್ನೋ ಮಾತು ನಿಜಾನಾ, ಸಿಂಗಾಪುರದಲ್ಲೂ? ಏನೇ ಇರಲಿ, ವನ್ ಡೇ ಮಾತರಮ್ ಅನ್ನೋ ಪದಗುಂಪು (ಫ್ರೇಸ್) ಗಂ‍‍‍ಮತ್ತಾಗಿದೆ! (ರಮ್ ಇರೋದ್ರಿಂದ‌, ತಾನೇ?) ಎನಿವೇಸ್ ಚೇಯರ್ಸ್!

Submitted by nageshamysore Mon, 11/02/2015 - 17:13

In reply to by Iynanda Prabhukumar

ಐನಂಡ ಪ್ರಭುಕುಮಾರ್ ರವರೆ, ನಮಸ್ಕಾರ ಮತ್ತು ಧನ್ಯವಾದಗಳು.. ಶೈಲಿ ಲಘು ಹಾಸ್ಯದ ಧಾಟಿಯಲ್ಲಿರುವುದರಿಂದ ಹಳೆಯ ಕನ್ನಡ ಹಾಸ್ಯ ಬರಹಗಾರರನ್ನು ನೆನಪಿಸಿರಬೇಕು. ಅಂದಹಾಗೆ 'ನೈಂಟಿ'ಯನ್ನು ಒಂದೆ ಏಟಿಗೆ ಹಾಗೆ ಮುಗಿಸಬಹುದೊ ಇಲ್ಲವೊ ನನಗೂ ಗೊತ್ತಿಲ್ಲ / ಅನುಭವವಿಲ್ಲ. ಆದರೆ ಇಲ್ಲಿ ಸಿಂಗಾಪುರ ಮತ್ತು ಚೈನಾದಲ್ಲಿ ಪೂರ್ತಿ ಗ್ಲಾಸು ತುಂಬಿಸಿ 'ಗನ್ಬೇ' ಅನ್ನುತ್ತಾ 'ಬಾಟಂಸ್ ಅಪ್' ಮಾಡುವುದು ತೀರಾ ಮಾಮೂಲಿ. ಅಲ್ಲಿ ನೈಂಟಿಯೇನು ಬಂತು, ಅರ್ಧರ್ಧ ಬಾಟಲ್ಲನ್ನೆ ಬಗ್ಗಿಸಿಬಿಡುತ್ತಾರೆ - ಸರಿಯಾದ ಪಾರ್ಟಿ, ಫಂಕ್ಷನ್ನುಗಳಲ್ಲಿ ! ನೈಂಟಿಯ ಕಥೆಯೂ ಹಾಗೆ ಇರಬೇಕು ಅಂದುಕೊಂಡು ಸ್ವಲ್ಪ ಉತ್ಪ್ರೇಕ್ಷೆ ಅನಿಸಿದರು, ಬರೆದುಬಿಟ್ಟೆ ಪ್ರಹಸನದಲ್ಲಿ :-)

ನಿಮ್ಮ ಊಹೆ ನಿಜಾ - 'ರಮ್ಮು' ಕೂಡ ಆ ಪದಪುಂಜಕ್ಕೆ ಪ್ರೇರಣೆ :-)

Submitted by Iynanda Prabhukumar Tue, 11/03/2015 - 20:25

In reply to by nageshamysore

ಸಾಧಾರಣವಾಗಿ ನಮ್ಮಲ್ಲಿಯ‌ ಹಾರ್ಡ್ (ಅದು hot ಅಲ್ಲ‌; hard. soft drinks ಅಲ್ಲದಿರುವವು hard drinks) ಡ್ರಿಂಕ್ಸ್ 90 ತೊಗೊಳ್ತಾ ಬಿಯರೂ ತೊಗೊಂಡಿದ್ರೆ, ಭಯಂಕರ‌ ಕಿಕ್ ಹೊಡೆಯುತ್ತೆ. ಉತ್ತಮ‌ ಮಟ್ಟದ‌ ರೂ2000ಗೆ ಮೇಲ್ಪಟ್ಟ‌ ಮತ್ತು ರೂ 3000ಕ್ಕೂ ಮೇಲಿರೋ ಸಿಂಗಲ್ ಮಾಲ್ಟ್ ನಂಥ‌ ವಿಸ್ಕಿಗಳು ಹಾಗೆ ಮಾಡಲಾರವೇನೋ. ಆದರೆ ಅಂಥಾ ವಿಸ್ಕಿಗಳನ್ನ‌ ಕಿಕ್ ಬರಲೆಂದು ಕುಡಿಯುವದಿಲ್ಲ. ಅವುಗಳನ್ನ‌ ನಿಧಾನವಾಗಿ, ಪ್ರತಿ ಗಂಟೆಗೆ 60 ಎಮ್ ಎಲ್ ನಂತೆ ಒಟ್ಟು 180 ಕೂಡಾ ಕುಡಿಯುತ್ತಾ ಮಿತ್ರರೊಡನೆ ಹರಟುತ್ತಾ, ಎಂಜಾಯ್ ಮಾಡಬಹುದು. ವಿಸ್ಕಿಗಳನ್ನು ಕುಡಿಯುವದೂ, ಅವುಗಳ‌ನ್ನು ಅನುಭವಿಸುವದೂ ಒಂದು ಕಲೆ! [ಇದನ್ನೋದಿ ಮೂಗುಮುರಿಯುವವರೂ ಇದ್ದಾರು; ಹಾಗಾಗಿ ಇಷ್ಟೇ ಸಾಕು! :) ]

Submitted by nageshamysore Wed, 11/04/2015 - 05:09

In reply to by Iynanda Prabhukumar

ಇಷ್ಟು 'ಪಾನ ಜ್ಞಾನೋದಯ' ಮಾಡಿಸಿಕೊಟ್ಟು 'ತೀರ್ಥ ಜ್ಞಾನ' ಹೆಚ್ಚಿಸಿದ್ದಕ್ಕೆ ನಿಜಕ್ಕೂ ಧನ್ಯವಾದಗಳು. ಯಾವುದನ್ನೂ ಸರಿ ತಪ್ಪು ಎನ್ನುವುದರ ಮೂಸೆಯಲ್ಲಿಟ್ಟು ಹಣೆಪಟ್ಟಿ ಅಂಟಿಸಿ ನೋಡುವ ಬದಲು ಅದು ಹೇಗಿದೆಯೊ ಹಾಗೆ ಅರಿಯಲೆತ್ನಿಸುವುದು ಸರಿಯೆಂದು ನನ್ನ ಭಾವನೆ. ಆ ಒಂದು ದೃಷ್ಟಿಕೋನಕ್ಕೆ ಪೂರಕವಾಗಿಯೆ ನಿಮ್ಮ ವಿವರಣೆಯೂ ಇದೆ - ಮೂಗು ಮುರಿಯುವ ಅಗತ್ಯವಿಲ್ಲದೆ ಅದರ ಅರಿವಿರದವರು 'ವಾಹ್! ಇದು ಹೀಗಾ?' ಎಂದು ಕಣ್ಣರಳಿಸುವಂತೆ. ಥ್ಯಾಂಕ್ಸ್ :-)

Submitted by nageshamysore Mon, 11/02/2015 - 19:24

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರಂ ಮತ್ತು ಧನ್ಯವಾದಂ..! ನಾನು ವನ್ ಡೇ ಮಾತರಂ ಅಂದರೆ ನೀವು ವನ್ ಡೇ 'ಮಾತ್ರಂ' ಅಂತ ಹೊಸ ವ್ಯಾಖ್ಯೆಯನ್ನು ಸೇರಿಸಿ ಇನ್ನೂ ಮಜಬೂತ್ ಮಾಡಿಬಿಟ್ಟಿರಿ. ಮಾತ'ರಂ', ಮಾತ್ರಂ, ಮಾ'ತರಂ' - ಹೀಗೆ ಇನ್ನೂ ಏನೇನು ವಿಶೇಷಾರ್ಥಗಳುಹೊಮ್ಮಿ ಬರುತ್ತವೊ, ಏನೊ ? ಹರಟೆಯ ಧಾಟಿ, ಶೈಲಿಯೆಲ್ಲಾ ನನ್ನದಲ್ರಪ್ಪಾ, ಅದು 'ಗುಬ್ಬಣ್ಣ ಅಂಡ್ ಕೋ'ದು :-)

Submitted by ಗಣೇಶ Wed, 11/04/2015 - 23:14

ನಾಗೇಶರೆ,
ನಿಮ್ಮ ಹಾಗೂ ಗುಬ್ಬಣ್ಣನ ವನ್ ಡೇ ಮ್ಯಾಚ್ ಕೊನೇ ಓವರ್‌ವರೆಗೂ ಸೂಪರ್. ಹಾಗೇ ಪ್ರತಿಕ್ರಿಯೆಯಲ್ಲಿ ಐನಂಡ ಪ್ರಭುಕುಮಾರ್ ಅವರ ಎಕ್ಸ್‌ಪರ್ಟ್ ಒಪೀನಿಯನ್ ಸಹ..:)

Submitted by nageshamysore Wed, 11/04/2015 - 23:40

In reply to by ಗಣೇಶ

ಗಣೇಶ್ ಜಿ, ನಿಮ್ಮ ಪೋಸ್ಟ್ ಮ್ಯಾಚ್ ರಿವ್ಯೂ ಕೂಡ ಅಷ್ಟೇ ಸೂಪರ್..! ಗುಬ್ಬಣ್ಣನಿಗೆ ಇನ್ನೊಂದಷ್ಟು ರನ್ ಬಾರಿಸಲು ಸ್ಪೂರ್ತಿ ಸಿಕ್ಕ ಹಾಗೆ:-)

Submitted by nageshamysore Wed, 11/04/2015 - 23:46

In reply to by ಗಣೇಶ

ಗಣೇಶ್ ಜಿ, ನಿಮ್ಮ ಪೋಸ್ಟ್ ಮ್ಯಾಚ್ ರಿವ್ಯೂ ಕೂಡ ಅಷ್ಟೇ ಸೂಪರ್..! ಗುಬ್ಬಣ್ಣನಿಗೆ ಇನ್ನೊಂದಷ್ಟು ರನ್ ಬಾರಿಸಲು ಸ್ಪೂರ್ತಿ ಸಿಕ್ಕ ಹಾಗೆ:-)

Submitted by nageshamysore Tue, 01/19/2016 - 09:09

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಒನ್ ಡೆ ಮಟ್ಟಿಗಾದರು ತನ್ನ ಬಾವುಟ ಹಾರಾಡುತ್ತೇನೊ ಅಂತ ಗುಬ್ಬಣ್ಣನ ಆಸೆ - ಆದರೆ ಪಾಪ, ಕೊನೆಯಲ್ಲಿ ಸದಾ ಫ್ಲಾಫ್ ಶೋನೆ ಗಟ್ಟಿ. ಅದು ಓದಿದವರಿಗಾದ್ರು ಕಿಕ್ ಕೊಟ್ರೆ ಗುಬ್ಬಣ್ಣನಿಗು ಸ್ವಲ್ಪ ಸಮಾಧಾನ :-)