ಲಘು ಹರಟೆ: ಗುಬ್ಬಣ್ಣನ 'ಅವಾರ್ಡ್ ವಾಪ್ಸಿ' ಪ್ರೋಗ್ರಾಮ್' ವರ್ಸಸ್ 'ದೀಪಾವಳಿ ದಿವಾಳಿ' !

ಲಘು ಹರಟೆ: ಗುಬ್ಬಣ್ಣನ 'ಅವಾರ್ಡ್ ವಾಪ್ಸಿ' ಪ್ರೋಗ್ರಾಮ್' ವರ್ಸಸ್ 'ದೀಪಾವಳಿ ದಿವಾಳಿ' !

ಮುಂದಿನ ವಾರದ ದೀಪಾವಳಿಗೆಂದು, ವಾರದ ಕೊನೆಯಲ್ಲಿ ಜನರಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸಿಂಗಪುರದ ಲಿಟಲ್ ಇಂಡಿಯಾ ಬೀದಿಗಳಲ್ಲಿ ಹಬ್ಬದ ಸಾಮಾನು ಖರೀದಿಗೆಂದು ಹುಡುಕಾಡುತ್ತಿದ್ದೆ - ಅದರಲ್ಲು ಮಣ್ಣಿನ ಹಣತೆ ಬೇಕು ಎಂದಿದ್ದ 'ಮನೆದೇವರ' ಆಜ್ಞಾನುಸಾರ. ಅಲಂಕರಣದ ಬರಿ ಪ್ಲಾಸ್ಟಿಕ್ಕಿನದೊ ಅಥವಾ ಮತ್ತಾವುದೊ ಲೋಹದ್ದೊ ಬಿಟ್ಟರೆ ಮಣ್ಣಿನ ಪುಟ್ಟ ಹಣತೆ ಕಣ್ಣಿಗೆ ಬೀಳಲೆ ಇಲ್ಲ. ಸರಿ 'ಬಫೆಲೊ ಸ್ಟ್ರೀಟ್' ಬಿಟ್ಟು ಸ್ವಲ್ಪ ಒಳಗಿನ ಬೀದಿಗಳಲ್ಲಿಯಾದರು ಅಡ್ಡಾಡಿ ನೋಡೋಣವೆಂದು ವೀರಮ್ಮ ಕಾಳಿಯಮ್ಮನ್ ಟೆಂಪಲ್ ದಾಟಿ, ಎದುರುಗಡೆಯ 'ವೀರಾಸಾಮಿ ಸ್ಟ್ರೀಟ್' ನಲ್ಲಿದ್ದ ಪುಟ್ಟ ಅಂಗಡಿಗಳತ್ತ ಇಣುಕತೊಡಗಿದ್ದೆ. 

ಅಲ್ಲೆ ಪಟ್ಟನೆ ಕಂಡಿತೊಂದು ಪುಟಾಣಿ ಅಂಗಡಿ. ಸದ್ದು ಮಾಡದ ಮತಾಪು, ಸುರುಸುರು ಬತ್ತಿಗಳಂತಹ 'ನಿಶ್ಯಬ್ದ' ಪಟಾಕಿಗಳ ಜತೆಗೆ ತರತರದ ಮಣ್ಣಿನ ಹಣತೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದ ಅಂಗಡಿಯಲ್ಲಿ ಸುಣ್ಣ ಬಣ್ಣ ಬಳಿಯದ , ಪ್ಲೇನ್ ಮಣ್ಣಿನ ಸಾಂಪ್ರದಾಯಿಕ ಹಣತೆಗಳನ್ನು ಆರಿಸತೊಡಗಿದ್ದೆ, ನಕ್ಷತ್ರಾಕಾರ ಇತ್ಯಾದಿಗಳ ಹೊಸ ಫ್ಯಾಷನ್ ಹಣತೆಗಳನ್ನು ಪಕ್ಕಕ್ಕಿರಿಸುತ್ತ. ಮನದಲ್ಲಿ ಹಾಗೆಯೆ, 'ಆಹಾ..! ಪಕ್ಕ ಹತ್ತಿರದಲ್ಲೆ ಫಸ್ಟ್ ಕ್ಲಾಸ್ 'ತೇ ತಾರೈ' ಮಾರುವ ಚಿಕ್ಕ ರೆಸ್ಟೋರೆಂಟು ಇದೆ, ಆಗಲೆ ಗಮ್ಮನೆ ಸುವಾಸನೆಯೂ ತೇಲಿ ಬರುತಿದೆ.. ಖರೀದಿ ಮುಗಿಸಿ ಒಂದು ದೊಡ್ಡ ಗ್ಲಾಸ್ ಪುಲ್ ಕುಡಿದು ಹೋಗೋದೆ ಸರಿ' ಎಂದು ಯೋಚಿಸುತ್ತ ಆ ಫ್ಲೇವರ್ಡ್ ಟೀಯ ನೆನಪಿಗೆ ಬಾಯಿ ಚಪ್ಪರಿಸುತ್ತ ಹಣತೆ ಆರಿಸುವ ಕೆಲಸ ಮುಗಿಸಿದ್ದೆ. ಜತೆಯಲ್ಲೆ ಸ್ವಲ್ಪ 'ಸೌಂಡ್ ಲೆಸ್' ಪಟಾಕಿ ಮತ್ತು ಮಿಕ್ಕಿದ್ದ ಸಣ್ಣ ಪುಟ್ಟ ಐಟಂ ಖರೀದಿಸಿ ನಿರಾಳ ಮನದಲ್ಲಿ ಆ ರೆಸ್ಟೋರೆಂಟಿನತ್ತ ಹೆಜ್ಜೆ ಹಾಕಿ ಬೀದಿಗೆ ಹೊಂದಿಕೊಂಡಂತೆ ಹಾಕಿದ್ದ ಟೇಬಲ್ ಮುಂದೆ ಕುಳಿತು, 'ಒನ್ ತೇ ತಾರೈ...ಕೊಡುಂಗೋ' ಎಂದೆ.

' ವಣ್ಣಲ್ಲ ರಂಡು ಕೊಡುಂಗೊ ಸಾರ್.. ರಂಡು ತೇತಾರೈ..' ಎಂದು ಹಿಂದಿನಿಂದ ಕೇಳಿ ಬಂದ ಚಿರಪರಿಚಿತ ದನಿಗೆ ತಲೆ ತಿರುಗಿಸಿ ನೋಡಿದರೆ, ಮತ್ತಾರು ? ಸಾಕ್ಷಾತ್ ಗುಬ್ಬಣ್ಣನೇ ನಿಂತಿದ್ದನಲ್ಲಿ !

' ಒಹೋ.. ಹ್ಯಾಪಿ ದಿವಾಲಿ ಗುಬ್ಬಣ್ಣ..! ವೀಕೆಂಡಲ್ಲಿ ದೀಪಾವಳಿ ಶಾಪಿಂಗಾ? ಏನು ಕೈಯೆಲ್ಲಾ ಇನ್ನೂ ಖಾಲಿ..ಈಗ ಬಂದಿರೋ ಹಾಗಿದೆ ? ಯಾವ್ದು ಬ್ಯಾಗೂ, ಶಾಪಿಂಗ್ ಕಾರ್ಟೂ ಕಾಣ್ತಾ ಇಲ್ವಲ್ಲಾ ..? ಫ್ಯಾಮಿಲಿ ಜತೆ ಬಂದಿದ್ದೀಯಾ? ' ಎನ್ನುತ್ತಾ ಸುತ್ತ ಮುತ್ತ ಕುಟುಂಬದವರೇನಾದರೂ ಕಾಣುತ್ತಾರ ಅಂತ ಆಚೀಚೆ ನೋಡಿದೆ..

' ಅಯ್ಯೋ ಬಿಡಿ ಸಾರ್.. ಯಾರು ಬಂದಿಲ್ಲ ನಾ ಒಬ್ನೆ... ಅದೂ ಅಲ್ದೆ ಪ್ರತಿ ಸಾರಿ ಹಾಗೆ ಈ ಸಾರಿ ದೀಪಾವಳಿಲಿ 'ದಿವಾಳಿ' ಆಗೊ ಮಾತೆ ಇಲ್ಲ .. ಬಿಲ್ಕುಲ್ ಡಿಸೈಡ್ ಮಾಡ್ಬಿಟ್ಟಿದ್ದೀನೀ... ನೋ ವೇಸ್ಟ್ ಎಕ್ಸ್ ಪೆನ್ಸಸ್ ..' ಅಂದ ಗುಬ್ಬಣ್ಣ.

ಇದು ಸ್ವಲ್ಪ ಹೊಸ ಟ್ವಿಸ್ಟ್.. ಯಾಕೆಂದರೆ ದೀಪಾವಳಿ ಬಂತೂಂದ್ರೆ, ಅವರ ಫ್ಯಾಮಿಲಿ ಪೂರ ಹೊಸ ಬಟ್ಟೆ, ಒಡವೆ ಅದೂ ಇದೂ ಅಂತ ಇಡೀ ವರ್ಷದ ಎಲ್ಲಾ ಹಬ್ಬಗಳ ಸೇಡನ್ನ ಒಂದೇ ಸಾರಿ ತೀರಿಸಿಕೊಳ್ಳೊ ಹೊತ್ತು. ಆ ಸೆಲಬ್ರೇಷನ್ನೆ ಇಲ್ಲಾ ಅಂದ್ರೆ ಎಲ್ಲೆ ಏನೊ ಸಿರಿಯಸ್ಸಾಗಿ ಎಡವಟ್ಟಾಗಿದೆ ಅಂತ ಅರ್ಥ.. 

'ಗುಬ್ಬಣ್ಣ.. ಐ ಕಾಂಟ್ ಬಿಲೀವ್ ಮೈ ಇಯರ್ಸ್.. ನಿಮ್ ಮನೇಲಿ, ಅದೂ ದೀಪಾವಳಿ ಆಚರಣೆ ಇಲ್ಲಾ ಅಂದ್ರೇನು ? ನಂಬೋಕಾಗಲ್ಲ ಬಿಡಪ್ಪಾ.. ನೀ ಸೆಲಬ್ರೇಟ್ ಮಾಡ್ದೆ ಇರ್ಬೋದು, ಆದರೆ ನಿಮ್ ಮನೆಯವರು ಬಿಡಬೇಕಲ್ಲಾ ? ಏನಾದ್ರೂ ಮಾಡೆ ಮಾಡಿಸ್ತಾರೆ..' ಎಂದೆ ಈ ವಾರ ತಾನೆ ನಮ್ಮ ಮನೆಗೆ ಖರ್ಚಾಗಿದ್ದ ಸಾವಿರಾರು 'ದೀಪಾವಳಿ ಡಾಲರು'ಗಳನ್ನೆ ನೆನೆಯುತ್ತ..

' ಪ್ರತಿ ವರ್ಷ ಹಾಗಿತ್ತೊ ಏನೊ.. ? ಈ ಸಾರಿ ಮಾತ್ರ ಹಾಗಿರಲ್ಲ ಸಾರ್.. ಕಂಡೀಷನ್ನಾಗಿ ಡಿಸೈಡ್ ಮಾಡಿಬಿಟ್ಟಿದ್ದೀನಿ.. ಅದೂ ಅಲ್ದೆ ಹಬ್ಬಕ್ಕೆ ಈ ಊರಲಿದ್ರೆ ತಾನೆ ಸೆಲಬ್ರೇಷನ್ನು..? ಇಲ್ಲೆ ಇರಲ್ಲ ಅಂದ್ಮೇಲೆ ಸೆಲಬ್ರೇಷನ್ ಎನ್ ಬಂತು, ಮಣ್ಣಾಂಗಟ್ಟೆ..?' ಎಂದು ಆತ್ಮವಿಶ್ವಾಸದಿಂದ ನುಡಿದವನ ಮಾತಿಗೆ ಇನ್ನು ಕುತೂಹಲ ಕೆದರಿ, ' ಹೌದಾ? ಹಾಗಾದ್ರೆ ಎಲ್ಲಿಗಪ್ಪಾ ಹೋಗೋದು ಊರುಬಿಟ್ಟು..? ಏನಾದ್ರೂ ಹಾಲಿಡೇ ಟೂರು ಹಾಕಿದ್ದೀರಾ ಹೇಗೆ - ಅಲ್ಲೆ ಸೆಲಬ್ರೇಟ್ ಮಾಡೋದು ಅಂತ ? ಟೂರು ಗೀರೂ ಅಂದ್ರೇನು ಕಮ್ಮಿಯಾಗುತ್ತಾ ? ಅದೂ ಡಬ್ಬಲ್ ದಿವಾಳಿ ಮಾಡೊ ಲೆಕ್ಕಾಚಾರ ಅಲ್ವಾ..?' ಎಂದೆ.

' ಅಲ್ಲೆಲ್ಲು ಇಲ್ಲಾ ಸಾರ್.. ಊರಿಗೆ , ಊರಿಗೆ ಹೋಗ್ತಾ ಇದೀವಿ ಹಬ್ಬಕ್ಕೆ.. ಇವಳ ತವರು ಮನೆಗೆ ಪೋನ್ ಮಾಡಿ ಹೇಳ್ಬಿಟ್ಟಿದೀನಿ ಎಲ್ಲಾ ಅಲ್ಲಿಗೆ ಹಬ್ಬಕ್ಕೆ ಬರ್ತೀವೀ ಅಂತ..!' ಎಂದು ಹೊಸ ಬಾಂಬ್ ಉಡಾಯಿಸಿದ ಗುಬ್ಬಣ್ಣ..!

'ಬಾ ಬಾ' ಎಂದು ಬಲವಂತದಿಂದ ಕರೆಯುತ್ತಿದ್ದರೂ, ಹೋದರೆ ಅಷ್ಟು ಖರ್ಚು, ಇಷ್ಟು ಖರ್ಚು, ಹೋದವರಿಗೆಲ್ಲ ಗಿಪ್ಟು, ದುಡ್ಡು ಅಂತೆಲ್ಲಾ ಸುರೀಬೇಕು ಎಂದೆಲ್ಲ ಕಾರಣದಿಂದ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಗುಬ್ಬಣ್ಣ ಈ ಬಾರಿ ತಾನೆ ಸುದ್ದಿ ಕಳಿಸಿ 'ಸಂಸಾರ ಸಮೇತ ಬರುತ್ತಿದ್ದೇನೆ' ಅನ್ನಬೇಕಾದರೆ ಅಚ್ಚರಿಯಾಗದೇ ಇದ್ದೀತೆ? ಅದರಲ್ಲು ಒಂದು ಸಾರಿ ವಿಮಾನ ಹತ್ತಬೇಕೆಂದರೂ ಮೂರು ಜನರ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಕೈ ಬಿಡುತ್ತದೆ ಅನ್ನುವ ಕಾರಣಕ್ಕೆ ವರ್ಷಕ್ಕೊಂದೆ ಬಾರಿ ಊರಿಗೆ ಹೋಗಿ ಬರುವ ಹವ್ಯಾಸವಿಟ್ಟುಕೊಂಡಿರುವ ಪ್ರಾಣಿ ಗುಬ್ಬಣ್ಣ.. ಅಂದ ಮೇಲೆ ಏನೊ ರೆವ್ಯುಲೂಷನರಿ ರೀಸನೀಂಗೇ ಇರಬೇಕು ಈ ಬಾರಿಯ ಟ್ರಿಪ್ಪಿಗೆ ಅಂದುಕೊಳ್ಳುತ್ತಲೆ ಕೇಳಿದೆ..

' ಅಲ್ಲವೊ ಗುಬ್ಬಣ್ಣ.. ಒಂದು ಕಡೆ ದೀಪಾವಳಿಗೆ ದಿವಾಳಿಯಾಗೊ ಪ್ರೋಗ್ರಾಮ್ ಸಸ್ಪೆಂಡ್ ಮಾಡಿದೀನಿ ಅಂತೀಯಾ.. ಈ ಕಡೆ ಸಂಸಾರ ಪೂರ ಹಬ್ಬಕ್ಕೆ ಊರಿಗೆ ಹೋಗ್ತಾ ಇದೀವಿ ಅಂತಲೂ ಹೇಳ್ತೀಯಾ.. ಎರಡೂ ಒಂದಕ್ಕೊಂದು ಮ್ಯಾಚೇ ಆಗಲ್ವಲ್ಲೊ ? ಬೇರೆಲ್ಲ ಬಿಡು.. ಬರಿ ಫ್ಲೈಟ್ ಖರ್ಚೇ ನೀ ಇಲ್ಲಿ ಮಾಡುತ್ತಿದ್ದ 'ದಿವಾಳಿ' ಖರ್ಚಿಗಿಂತ ಜಾಸ್ತಿ ಆಗುತ್ತಲ್ಲೊ..' ಎಂದೆ.

ಆ ಮಾತು ಕೇಳುತ್ತಿದ್ದಂತೆ ಪಕಪಕನೆ ನಕ್ಕ ಗುಬ್ಬಣ್ಣ, 'ಅದೆಲ್ಲ ಹಿಂದೆ ಸಾರ್.. ಈಗವೆಲ್ಲಾ ಮುಗಿದ ಕಥೆ... ಬರ್ತೀವಿ ಅಂತ ಸುಮ್ನೆ ಪೋನ್ ಮಾಡಿ ಹೇಳ್ತೀನಾ ? ಅದರರ್ಥ ಬರೋ ಪ್ಲೇನ್ ಚಾರ್ಜೆಲ್ಲಾ ಅವರೆ ನೋಡ್ಕೋಬೇಕು ಸಾರ್.. ಕಡಾ ಖಂಡೀಷನ್ ಆಗಿ ಹೇಳಿಬಿಟ್ಟಿದೀನಿ! ' ಎಂದ. 

ಹಾಗೆಂದವನ ಮುಖವನ್ನೆ ಅನುಮಾನದಿಂದ ನೋಡುತ್ತ, ' ರಿಯಲೀ ?? ಏನ್ ಗುಬ್ಬಣ್ಣ ಆನೆ ಹೊಟ್ಟೆಲಿ ಕೋಳಿ ಮೊಟ್ಟೆ ಬರ್ಸೊ ಮಾತಾಡ್ತಾ ಇದೀಯಾ... ಇದೆಲ್ಲಾ ಆಗೋದುಂಟೆ ? ಇವೆಲ್ಲ ಅವ್ರು ಎಂಟರ್ಟೈನ್ ಮಾಡ್ತಾರಾ..? ಅದು ಮದುವೆ ಆಗಿ ಹತ್ತು ಹದಿನೈದು ವರ್ಷ ಕಳೆದು ಈಗೆಲ್ಲ 'ಹಳೆ ಬಾಟ್ಲಿ, ಖಾಲಿ ಸೀಸಾ' ಅನ್ನೊ ಹಾಗೆ ಆಗಿರೋವಾಗ.. ?' ಎಂದೆ.

' ನಾನು ಮೊದಲಾಗಿದ್ದರೆ ಆಗೋಲ್ಲ ಅಂತಾನೆ ಹೇಳ್ತಿದ್ದೆ, ಹಾಗನ್ಕೊಂಡೆ ಸುಮ್ಮನಿದ್ಬಿಡ್ತಿದ್ದೆ ಸಾರ್.. ಆದ್ರೆ ಈಗಲ್ಲ ಬಿಡಿ..' ಗುಬ್ಬಣ್ಣನದಿನ್ನು ಅದೇ ಆತ್ಮವಿಶ್ವಾಸದ ಗಟ್ಟಿಯುತ್ತರ.

' ಈಗೇನಪ್ಪಾ ಅಂತಹ ಗ್ರೌಂಡ್ ಕಂಡೀಷನ್ ಚೇಂಜ್ ಆಗ್ಬಿಟ್ಟಿರೋದು ? ಏನ್ ನಿಮ್ಮತ್ತೆ ಮಾವನಿಗೆ ಲಾಟ್ರಿಯೇನಾದರೂ ಹೊಡಿತಾ - ನೀ ಕೇಳಿದ್ದೆ ತಡ ಸರ್ಕಾರಿ ಗ್ರಾಂಟ್ ತರ ಮಂಜೂರು ಮಾಡಿ, 'ಅಪ್ರೂವ್ಡ್' ಅಂಥ ಆರ್ಡರ್ ಪಾಸ್ ಮಾಡೋಕೆ...?' ಎಂದೆ ಸ್ವಲ್ಪ ಕೆಣಕುವ ದನಿಯಲ್ಲೆ. ಆದರೂ ಒಳಗೊಳಗೆ ಅಳುಕು - ಅದೇನಾದರೂ ನಿಜವೇ ಆಗಿಬಿಟ್ಟಿದ್ದರೆ ಗುಬ್ಬಣ್ಣನ ಆ ಸೌಭಾಗ್ಯಕ್ಕೆ ಹುಟ್ಟುವ ಹೊಟ್ಟೆಕಿಚ್ಚನ್ನು ನಿಭಾಯಿಸೋದು ಹೇಗೆ ಅಂತ.. 

' ಅಯ್ಯೋ ಲಾಟ್ರೀನೂ ಇಲ್ಲಾ, ಎಂತದ್ದು ಇಲ್ಲಾ ಬಿಡಿ ಸಾರ್.. ಹೆಚ್ಚು ಕಮ್ಮಿ ಅವರ ಜೀವನವೆಲ್ಲ ಲಾಟ್ರಿ ಹೊಡ್ಕೊಂಡೆ ಬರ್ತಿದ್ರೊ ಏನೊ.. ಪುಣ್ಯಕ್ಕೆ ಕೈಲಿದ್ದ ಗವರ್ಮೆಂಟ್ ಕೆಲಸ ಸಂಬಳ, ಗಿಂಬಳ ಅಂತೆಲ್ಲಾ ಸೇರಿ ಸಾಕಷ್ಟು ದುಡ್ಡು ಮಾಡಿಟ್ಟಿದಾರೆ.. ಬಿಚ್ಚೋಕೆ ಜುಗ್ಗತನ , ನಮ್ಮನ್ನೆ ಬೇಟೆಯಾಡೋಕ್ ನೋಡ್ತಾರೆ ಅಷ್ಟೆ..'

'ಅದ್ಸರಿ ಗುಬ್ಬಣ್ಣ.. ಆರ್ಗ್ಯುಮೆಂಟಿಗೆ ಅವರ ಹತ್ರ ದುಡ್ಡು ಇದೆ ಅಂತ್ಲೆ ಇಟ್ಕೋಳೋಣ .. ಆದ್ರೆ ಅವ್ರು ಅದನ್ಯಾಕೆ ನಿನಗೆ ಕೊಡ್ಬೇಕು, ಖರ್ಚು ಮಾಡ್ಬೇಕು ಅಂತ ನೀ ಲಾಜಿಕಲ್ ರೀಸನಿಂಗ್ ಹೇಳ್ತಾ ಇಲ್ವಲ್ಲಾ ?' ಎಂದೆ ಮತ್ತೆ ಅವನ ಮಾತನ್ನು ಟ್ರಾಕಿಗಿಳಿಸಲು ಯತ್ನಿಸುತ್ತ. 

ಅದೇ ಗಳಿಗೆ ಗುಬ್ಬಣ್ಣ ಬಾಯಿಬಿಡಲನುವಾಗುವುದಕ್ಕೆ ಸರಿಯಾಗಿ ಆರ್ಡರ್ ಮಾಡಿದ್ದ ತೇತಾರೈ ಬಂತು.. ಗುಬ್ಬಣ್ಣ ಲೋಟವನ್ನೆತ್ತಿ ಒಂದು ಗುಟುಕು ಚಪ್ಪರಿಸಿದವನೆ, ' ಹಾ ಟೀ ಅಂದ್ರೆ ಇದೂ ಸಾರ್.. ಸ್ವಲ್ಪ ಸಕ್ಕರೆ ಜಾಸ್ತಿ ಅನ್ನೋದ್ ಬಿಟ್ರೆ ಸುಪರ್ ಅಲ್ವಾ?' ಎಂದವನೆ ಮುಂದುವರೆಸುತ್ತ, ' ಸಾರ್.. ನಾನು ಹೇಳ್ತಿರೊ ಲಾಜಿಕ್ ಸಿಂಪಲ್ ಸಾರ್.... ನನ್ನ ಈ ಡಿಮ್ಯಾಂಡಿಗೆ ಮುಖ್ಯ ಪ್ರೇರಣೆ ನಮ್ಮ ಕನ್ನಡ ನಾಡಿನ ಬುದ್ಧಿ ಜೀವಿಗಳು ಅನಿಸಿಕೊಂಡ ಕೆಲವು ಮಹಾನ್ ಸಾಹಿತಿಗಳು, ರೈಟರ್ಸ್ ಸಾರ್..' ಅಂದ.

ನಾ ಫಕ್ಕನೆ ಬೆಚ್ಚಿ ಬಿದ್ದೆ.. ಎಲ್ಲಿಯ ಗುಬ್ಬಣ್ಣ ? ಎಲ್ಲಿಯ ಸಾಹಿತಿ ಲೋಕ ? ಯಾವ ಬುದ್ಧಿ ಜೀವಿ ಸಾಂಗತ್ಯ? ಎಲ್ಲವೂ ಅಯೋಮಯವಾಗಿ ಕಂಡಿತು.. ನಾನು ಬಾಯಿ ತೆರೆದು ಏನೊ ಕೇಳುವಷ್ಟರಲ್ಲೆ ಮತ್ತೆ ಬಾಯಿ ಹಾಕಿದ ಗುಬ್ಬಣ್ಣ  , 'ಗೊತ್ತು ಸಾರ್.. ನಿಮಗೀ ಅನುಮಾನ ಬಂದೇ ಬರುತ್ತೆ ಅಂತ.. ಗೋಕುಲಾಷ್ಟಮಿ, ಇಮಾಂಸಾಬಿ ಸಂಬಂಧ ಅಂಥ ಡೈಲಾಗ್ ಹೊಡೆಯೋಕ್ ಮುಂಚೆ ತಡ್ಕೋಳಿ ಸ್ವಲ್ಪ.. ನಾನು ಹೇಳ್ತಿರೋದು ಅವರ ಸಾಹಿತ್ಯ, ಬರೆದ ಕಥೆ, ಕವನ, ಪುಸ್ತಕ ಇತ್ಯಾದಿ ವಿಚಾರಗಳಲ್ಲ...'

'ಮತ್ತೆ..? ಇನ್ಯಾವ ವಿಚಾರ ?'

' ಅದೇ ಸಾರ್.. ಈಚೆಗೆ ತುಂಬಾ ಪಾಪ್ಯುಲರ್ ಆಗಿ ಸೋಷಿಯಲ್ ಮೀಡಿಯಾದಿಂದ ಹಿಡಿದು ಪುಟ್ಪಾತ್, ಕಲ್ಬೆಂಚ್ ಡಿಸ್ಕಷನ್ ವರೆಗು ಹಬ್ಕೊಂಡು, ಕವನ, ಚುಟುಕ, ಕಾರ್ಟೂನು ಅಂತ ನೂರಾರು ಅವತಾರ ತಾಳಿರೊ - 'ಅವಾರ್ಡ್ ವಾಪ್ಸಿ' ಪ್ರಕರಣ.. ಅಸಹಿಷ್ಣುತೆಯನ್ನು ಪ್ರತಿಭಟಿಸಿ ಕೊಟ್ಟಿದ್ದ ಅವಾರ್ಡೆಲ್ಲಾ ವಾಪಸ್ ಮಾಡ್ತಾ ಇದಾರಲ್ಲ ಆ ವಿಚಾರ..' 

' ಗುಬ್ಬಣ್ಣ ಈಗಲೂ ನಾನು ಅದೇ ತರದ ಇನ್ನೊಂದು ಡೈಲಾಗ್ ಹೊಡೀಬೇಕಾಗುತ್ತೆ ನೋಡು.. ಅಲ್ಲಯ್ಯಾ ಅದಕ್ಕು ನಿನ್ನ ಡಿಮ್ಯಾಂಡಿಗು ಎಲ್ಲಿದಯ್ಯಾ ಸಂಬಂಧ ? ಅದೇನೊ 'ಪಕ್ಕದವನ ಮನೇಲಿ ಮಗೂ ಹುಟ್ಟುದ್ರೆ ನಮ್ಮ ಮನೇಲಿ ತೊಟ್ಟಿಲು ತೂಗಿದ್ರೂ' ಅನ್ನೋ ಹಾಗೆ... ನೋ ರಿಲವೆನ್ಸ್ ಐ ಸೀ ಗುಬ್ಬಣ್ಣಾ.. ಸಾರೀ..' ಎಂದೆ..

ನನ್ನ ಮಾತಿನ ಧಾಟಿಯಿಂದಲೆ ನನ್ನ ಸಹನೆಗೆಡುತ್ತಿರುವುದನ್ನು ಅರಿತ ಕಿಲಾಡಿ ಗುಬ್ಬಣ್ಣ, ಇನ್ನು ಎಳೆದಾಡಿಸುವುದು ಸರಿಯಲ್ಲವೆಂದುಕೊಂಡೊ ಏನೊ..' .. ನಾ ಪೂರ್ತಿ ಹೇಳೋದಕ್ಕೆ ಬಿಡಿ ಸಾರ್.. ನೀವು ಬಿಡೋ ತನಕ ನಾ ಹೇಗೆ ತಾನೆ ಹೇಳೋಕಾಗುತ್ತೆ ? ಈ ಸಾಹಿತಿಗಳಿಗೆಲ್ಲ ನಿಮಗೆ ಗೊತ್ತಿರೋ ಹಾಗೆ ಹಣಕ್ಕಿಂತ ರೆಕಗ್ನಿಷನ್ ಮುಖ್ಯಾ.. ಹೌದು ತಾನೆ ? ಆ ರೆಕಗ್ನಿಷನ್ ಅಫಿಶಿಯಲ್ಲಾಗಿ ಬರೋದೆ ಅವಾರ್ಡ್ ಮುಖಾಂತರ ಅಲ್ವಾ? ಹೀಗಿದ್ರೂನೂ ಅಂಥಾ ದೊಡ್ಡ ದೊಡ್ಡ ಮನುಷ್ಯರೆಲ್ಲಾ ವರ್ಷಾನುಗಟ್ಲೆ ಹಿಂದೆಯಿಂದ ಕೊಟ್ಟಿದ್ದ ಅವಾರ್ಡುಗಳನ್ನೆ ಮುಖಾ ಮೂತಿ ನೋಡ್ದೆ ಯದ್ವಾತದ್ವಾ ವಾಪಸ್ಸು ಮಾಡೋದು ನೋಡಿ ನನಗೂ ಅದರಲ್ಲೊಂದು ಪಾಠ ಇದೆ ಕಲಿಯೋಕೆ, ಅದರಲ್ಲು ನಮ್ಮಂತಹ ಜನ ಸಾಮಾನ್ಯರಿಗೆ ಅನ್ನಿಸ್ತು ಸಾರ್.... ' ಎಂದ ಏನೊ ಜ್ಞಾನೋದಯವಾದ ಗುರುವರ್ಯನ ಹಾಗೆ ಪೋಸು ಕೊಡುತ್ತ..

' ಏನು ಅಂತಹ ಪಾಠಾ ? ಸ್ವಲ್ಪ ನಮ್ಮಂತಹ ಪಾಮರರಿಗೂ ತಿಳಿಸೊ ಅಪ್ಪಣೆಯಾಗಲಿ..' ಎಂದೆ ಮತ್ತೆ ಕೆಣಕುತ್ತ..

'ಅದೇ ಸಾರ್.. ಹೀಗೆ ದೊಡ್ಡದೊಡ್ಡ ವಿಚಾರವಾದಿಗಳೆ ತಮಗೆ ಅಮೂಲ್ಯ ಅನಿಸಿದ್ದು ಬಿಟ್ಟುಕೊಡ್ತಾ ಇದಾರೆ, ತಮಗೆ ಬೇಕಾದ ಮತ್ತೊಂದರ ಸಲುವಾಗಿ - ಉದಾಹರಣೆಗೆ ಅಸಹಿಷ್ಣುತೆ ಹೆಸರಿನಲ್ಲಿ ಕಳುವಾಗ್ತಿರೊ ವ್ಯಕ್ತಿ ಸ್ವಾತಂತ್ರದ ಸಲುವಾಗಿ.. ಅಂದ್ಮೇಲೆ ನಾವೂ ಅವರ ಆದರ್ಶಾನೆ ಅನುಕರಿಸ್ತಾ ಯಾಕೆ ಕೆಲವು ಅನುರೂಪಿ ತತ್ವಗಳನ್ನ ಅಳವಡಿಸ್ಕೊಬಾರದು ? ಅನ್ನಿಸ್ತು..'

' ಆಹಾ..'

' ನಮಗೂ ನಮ್ಮ ವ್ಯಕ್ತಿ ಸ್ವಾತಂತ್ರ ಅನ್ನೋದು ಕಳುವಾಗೋದು ಮದ್ವೆ ಆದ್ಮೇಲೆ ಅಲ್ವಾ ಸಾರ್... ಅದಕ್ಕೊಸ್ಕರ ನಮ್ಮನ್ನೆ ಟ್ರೇಡ್ ಮಾಡ್ಕೊಂಡು, ಅನುಸರಿಸ್ಕೊಂಡು, ಎಷ್ಟೆಲ್ಲಾ ಕಾಂಪ್ರಮೈಸೆ ಮಾಡ್ಕೊಂಡು ಬದುಕ್ತಿದ್ದೀವಲ್ವಾ?'

' ಅದಕ್ಕೆ..?'

' ಅದರ ಬೆಲೆ ಎಲ್ಲರಿಗು ಅರ್ಥ ಮಾಡಿಸ್ಬೇಕಲ್ವಾ ಸಾರ್..? ಅದಕ್ಕೆ ಮೊನ್ನೆ ಪೋನ್ ಮಾಡ್ದಾಗ ನಮ್ಮ ಮಾವನ ಮೇಲೆ ಎಕ್ಕಾಮುಕ್ಕಾ ಎಗರಾಡಿಬಿಟ್ಟೆ ಸಾರ್.. ಅವರಿಗೂ ಈ 'ಅವಾರ್ಡ್ ವಾಪ್ಸಿ' ಬಗ್ಗೆ ನೋಡಿ ಗೊತ್ತಿತ್ತಲ್ಲಾ? ನಾನೂ ಅದೇ ಟಾಫಿಕ್ ಎತ್ಕೊಂಡು ನನ್ನ ಮದುವೆಲಿ ಕೊಟ್ಟಿದ್ದ ಖಾಲಿ ಕಾಶಿಯಾತ್ರೆ ಪಂಚೆ, ಗಿಂಡಿ, ಉಂಗುರದಂತ ಐಟಮ್ಮೆಲ್ಲ ನನ್ನ ಲೆವಲ್ಲಿಗೆ ಸರಿಯಾದ ಮರ್ಯಾದೇನೆ ಅಲ್ಲಾ.. ಆ ಗೊತ್ತಿಲ್ಲದ ಕಾಲದಲ್ಲಿ ಏಮಾರ್ಸಿ, ತಲೆ ಕೆಡಿಸಿ ನಿಮ್ ಮಗಳನಾ ನನ್ನ ಕುತ್ತಿಗೆ ಕಟ್ಟಿಬಿಟ್ಟು ನನ್ನ ಲೈಫನ್ನೆ 'ಡೀರೈಲ್' ಮಾಡಿಬಿಟ್ಟಿದೀರಾ.. ಇದನ್ನ ಪ್ರತಿಭಟಿಸೊ ಸಲುವಾಗಿ ನಾನು ಅದೆಲ್ಲಾ ಉಡುಗೊರೆ ವಸ್ತುಗಳನ್ನ 'ಅವಾರ್ಡ್ ವಾಪ್ಸಿ' ಸ್ಕೀಮಲ್ಲಿ ವಾಪಸು ಕೊಡ್ತಾ ಇದೀನಿ - ಅಂದೆ ಸಾರ್..' ಗುಬ್ಬಣ್ಣ ತನ್ನ ಲಾ ಪಾಯಿಂಟಿನ ಮೊದಲ ಲಾಜಿಕಲ್ ತುಣುಕು ಹೊರಗೆ ಬಿಟ್ಟ..

ನನಗೆ ಈ 'ಕುತ್ತಿಗೆಗೆ ಕಟ್ಟಿದ್ದು' ಲಾಜಿಕ್- ಸರಿಯಾಗಿ ಅರ್ಥವಾಗಲಿಲ್ಲ.. ಕುತ್ತಿಗೆ ತಾಳಿ ಕಟ್ಟೋದು ಮದುವೆ ಗಂಡು, ಅರ್ಥಾತ್ ಗುಬ್ಬಣ್ಣ.. ಆದ್ರೆ ಮಾವನೆ ಹೆಂಡ್ತಿಯನ್ನ ಕುತ್ತಿಗೆಗೆ ಕಟ್ಟೊ ಶಾಸ್ತ್ರ ಎಲ್ಲೂ ನೋಡಿಲ್ವಲ್ಲಾ ? 'ಅದೇನ್ ಗುಬ್ಬಣ್ಣನ ಕಡೆ ಸ್ಪೆಷಲ್ ಸಂಪ್ರದಾಯಾನಾ ?' ಅಂತ ಕೇಳಬೇಕೆನಿಸಿದರೂ ಅದು ಬರಿ ಟೆಕ್ನಿಕಲ್ ಪಾಯಿಂಟ್ ಅಷ್ಟೆ, ಅಲ್ದೆ ಅದರಿಂದ ವಿಷಯಾಂತರನೂ ಆಗುತ್ತೆ ಅನಿಸಿ ಅದನ್ನಲ್ಲೆ ಕೈ ಬಿಟ್ಟು ಮೂಲ ವಿಷಯವನ್ನೆ ಕೆದಕಿದೆ..

' ಅಯ್ಯೊ ಗುಬ್ಬಣ್ಣ.. ಅವೆಲ್ಲಾ ಇನ್ನು ಎಲ್ಲಿರುತ್ತೊ..? ಪಂಚೆ ಗಿಂಚೆ ಎತ್ತಿಟ್ಕೊಂಡಿದ್ರೂ ಬೂಷ್ಟು ಕಟ್ಕೊಂಡ್ ಹಾಳಾಗಿರುತ್ತೊ ಏನೊ.. ಇನ್ನು ಆಗ ಕೊಟ್ಟಿದ ಉಂಗುರ ಈಗ ಕಿರು ಬೆರಳಿಗೂ ಆಗಲ್ಲಾ' ಸುಮಾರು ಐದಾರು ಪಟ್ಟು ದೊಡ್ಡದಾಗಿರಬಹುದಾದ ಅವನ ಬೆರಳನ್ನೆ ನೋಡುತ್ತ ಮುಂದುವರೆಸಿದೆ..' ಅದೂ ಸಾಲದು ಅಂತ ನೀ ಕೊಟ್ಟೆ ವಾಪಸ್ಸು ಅಂತಾನೆ ಇಟ್ಕೊ.. ಅವರಿಗೇನು ಖುಷೀಲಿ ತೊಗೋತಾರೆ ಬಂದಷ್ಟು ಚಿನ್ನ ಬರ್ಲೀ ಅಂತಾ'

' ಅದು ನನಗೂ ಗೊತ್ತು ಸಾರ್.. ನಾನಷ್ಟು ಅನಾಡೀ ನಾ? ಅದಕ್ಕೆ ಸರಿಯಾಗಿ ಹೇಳ್ಬಿಟ್ಟೆ ಸಾರ್.. ಪುಕ್ಕಟೆ ಸಿಕ್ತು ಅಂತ ಖುಷೀಲಿ ಎದ್ದು ಬಿದ್ದು ತೊಗೊಂಬಿಡ್ಬೇಡಿ.. ಇದು ಬರಿ ಅಡ್ವಾನ್ಸ್ ಮಾತ್ರಾ ಅಂದೆ..'

'ಹಾಂ ?'

' ಹೂಂ ಸಾರ್..'

' ಇನ್ನು ಖುಷಿಯಾಗಿ 'ಇನ್ನೇನು ? ಮದುವೆ ಬೆಳ್ಳಿ ಸಾಮಾನು, ರೇಷ್ಮೇ ಸೀರೆ, ಮಗಳಿಗೆ ಹಾಕಿದ ಬಂಗಾರ.. ಎಲ್ಲಾನೂ 'ಅವಾರ್ಡ್ ವಾಪ್ಸಿ' ಮಾಡ್ತೀರಾ? ' ಅಂತ ಕೇಳಿರ್ಬೇಕು ...'

' ಎಗ್ಸಾಕ್ಟಲಿ ಸಾರ್.. ವರ್ಡು ಟು ವರ್ಡು ಹೀಗೆ ಕೇಳಿದ್ರೂ..'

' ನೀ ಪೆದ್ದು ಪೆದ್ದಂಗೆ ಅದಕೂ ಹೂ ಅಂದ್ಯಾ?'

' ಹೂ ಅಂದೆ ಸಾರ್.. ಆದ್ರೆ ಪೆದ್ದು ಪೆದ್ದಾಗಿ ಅನ್ಲಿಲ್ಲಾ.. ಹೌದು ಅದೂ ರಿಟರ್ನ್ ಆಗುತ್ತೆ.. ಆದ್ರೆ ಅದು ಸೆಕೆಂಡ್ ಅಡ್ವಾನ್ಸ್ ಆಗುತ್ತೆ ಅಂದೆ..' ಎಂದ ಗುಬ್ಬಣ್ಣ..

ನನಗೆ ಇದು ಅನ್ ಎಕಪೆಕ್ಟೆಡ್ ಟರ್ನ್.. 'ಗುಬ್ಬಣ್ಣ ಸೀಮ್ಸ್ ಟು ಬಿ ಅಪ್ ಟು ಸಮ್ ಥಿಂಗ್' - ಅಂತ ಮೊದಲ ಬಾರಿಗೆ ಅನುಮಾನ ಬಂತು..

' ಅವರಿಗು ನನ್ನ ಹಾಗೆ ಕುತೂಹಲ ಜಾಸ್ತಿಯಾಗಿ - ಈ ಅಡ್ವಾನ್ಸ್ ವಿಷಯಾ ಸಾಕು.. ಫೈನಲ್ ಸೆಟಲ್ಮೆಂಟ್ ವಿಷಯಕ್ಕೆ ಬನ್ನಿ ಅಂದ್ರಾ ?' ಎಂದೆ.

' ಸಾರ್.. ನೀವೇನಾದ್ರೂ ನಮ್ಮ ಮಾವನಿಗೆ ರಿಲೇಷನ್ನಾ ? ಮತ್ತೆ ಅವರು ಕೇಳಿದ ಹಾಗೆ ವರ್ಡು ಟು ವರ್ಡು ಹೇಳ್ತಿದೀರಾ?' ಎಂದು ಮತ್ತೆ ಟ್ರಾಕ್ ಬದಲಿಸ ಹೋದ ಗುಬ್ಬಣ್ಣನನ್ನು ತಡೆದು, ' ಅದು ಸೆಕೆಂಡರಿ ಟಾಪಿಕ್ .. ಫಸ್ಟ್ ಕನ್ಕ್ಲೂಡ್ ದಿಸ್ ಟಾಫಿಕ್' ಎಂದೆ..

' ಸರಿ ಸಾರ್.. ಹೇಳ್ಬಿಡ್ತೀನಿ.. ಅವ್ರೂ ನಿಮ್ಮ ಹಾಗೆ ಕೇಳಿದ್ರೂ.. ನಾನು ಹೇಳ್ದೆ 'ಅಡ್ವಾನ್ಸ್ ಎಲ್ಲಾ ವಾಪಸ್ ಕೊಟ್ ಮೇಲೆ ಉಳಿದಿದ್ದೇನು ? ನಿಮ್ಮ ಮಗಳು, ಮೊಮ್ಮಗಳು ತಾನೆ ? ಅವರಿಬ್ಬರನ್ನು ಅದೇ 'ಅವಾರ್ಡ್ ವಾಪ್ಸಿ' ಸ್ಕೀಮಲ್ಲಿ ವಾಪಸ್ ಮಾಡಿಬಿಡ್ತೀನಿ... ಇಷ್ಟು ವರ್ಷದ ಮೈಂಟೆನೆನ್ಸ್ ಚಾರ್ಜು ಇತ್ಯಾದಿ ಎಲ್ಲಾ ಸೆಪರೇಟು ಬಿಲ್ ಲಾಯಾರು ಮುಖಾಂತರ ಕಳಿಸ್ತೀನಿ' ಅಂದೆ ಸಾರ್.. ಸಿರಿಯಸ್ಸಾಗಿ .' ಎಂದು ದೊಡ್ಡ ಬಾಂಬ್ ಶೆಲ್ ಹಾಕಿದ ಗುಬ್ಬಣ್ಣ..!

ನಾನೂ ಭೂಕಂಪವಾದವನಂತೆ ಎಗರಿಬಿದ್ದು ' ಹಾಂ!' ಎಂದು ಉದ್ಗಾರ ತೆಗೆದೆ, ಕೈಲಿದ್ದ ತೇತಾರೆಯ ಮಿಕ್ಕ ಚೂರನ್ನು ಕೈ ಮೇಲೆಲ್ಲಾ ಚೆಲ್ಲಿಕೊಳ್ಳುತ್ತ.. ಅದನ್ನು ಒರೆಸಿಕೊಳ್ಳಲು ಜೋಬಿನಿಂದೊಂದು ನ್ಯಾಪ್ಕಿನ್ ಕೊಡುತ್ತ ಗುಬ್ಬಣ್ಣ, ' ಬಿಲ್ಕುಲ್ ಅವರೂ ಹೀಗೆ ಬೆಚ್ಚಿ ಬಿದ್ದಿರಬೇಕು ಸಾರ್..'ಕಾಫಿ ಯಾಕ್ರಿ ಮೈ ಮೇಲ್ ಚೆಲ್ಕೊಂಡ್ರಿ' ಅಂತ ನಮ್ಮತ್ತೆ ವಾಯ್ಸ್ ಕೇಳಿಸ್ತಿತ್ತು.. '

'ಸರಿ ಹಾಳಾಯ್ತು.. ಆಮೇಲೇನಾಯ್ತು.. ಹೇಳು..'

' ಸಾರ್ ಟು ಮೇಕ್ ದ ಲಾಂಗ್ ಸ್ಟೋರಿ ಶಾರ್ಟ್ - ನಾ ಹೇಳಿದ್ದು ಸೀರಿಯಸ್ಸಾಗಿನೆ, ಬರಿ ಜೋಕ್ ಅಲ್ಲಾ ಅಂತ ಅವರಿಗು ಗೊತ್ತಾಯ್ತು ಸಾರ್..'

'ಓಹೋ..!'

' ಕೊನೆಗೊಂದು ಕಾಂಪ್ರಮೈಸಿಗೆ ಬಂದವರ ಹಾಗೆ.. 'ಪೋನಲ್ಲೆಲ್ಲಾ ಬೇಡಾ.. ಅದೇನೇನು ವಾಪಸ್ ಮಾಡ್ಬೇಕೂಂತಿದಿರೊ ಎಲ್ಲಾನೂ ಕರ್ಕೊಂಡು ಇಲ್ಲಿಗೆ ಬನ್ಬಿಡಿ ಹಬ್ಬಕ್ಕೆ.. ಎಲ್ಲಾ ಇಲ್ಲೆ ಕೂತು ಮಾತಾಡೋಣ.. ಏನೇನು ಶಾಂತಿಯಾಗ್ಬೇಕೊ ಎಲ್ಲಾ ಮಾಡಿಸೋಣ.. ' ಅಂದ್ರೂ ಸಾರ್..

'ಸರೀ ನೀ ಹೂ ಅಂದು ಹೊರಟ್ಬಿಟ್ಯಾ? '

'ಸುಮ್ನೆ ಎಲ್ ಹೊರಡ್ತೀನಿ ಸಾರ್..? ಟಿಕೆಟ್ ಖರ್ಚೇನು ಅವರ ತಾತನ ಮನೆಯದಾ?.. ನಾನಂತು ಅದಕ್ಕೆಲ್ಲಾ ದುಡ್ಡು ಹಾಕಿ ವೇಸ್ಟ್ ಮಾಡಲ್ಲಾ.. ಬೇಕೂಂತಿದ್ರೆ ಅವರೆ ಖರ್ಚು ಮಾಡಿ ಕರೆಸ್ಕೊಳ್ಳಲಿ ಅಂದೆ'

' ಹೂಂ ಅಂತ ಒಪ್ಕೊಂಡ್ಬಿಟ್ರಾ?'

' ಹೂ ಸಾರ್.. ಒಪ್ಕೊಳೋದೇನು ಬಂತು ? ಆಗ್ಲೆ ಬುಕ್ ಮಾಡಿ ಆನ್ಲೈನ್ ಟಿಕೆಟ್ಟು ಕಳಿಸ್ಬಿಟ್ಟಿದಾರೆ.. ನಾವು ಹೋಗೊದಷ್ಟೆ ಬಾಕಿ..' ಎಂದ ಗುಬ್ಬಣ್ಣ ಠೀವಿಯ, ಸಂತಸದ ದನಿಯಲ್ಲಿ..

ನಾನು ತಲೆ ಚೆಚ್ಚಿಕೊಳ್ಳುತ್ತ , ' ಕರ್ಮ ಕರ್ಮ ... ರಾಮ್ರಾಮಾ... ! ಸರಿ ಹೋಗು ಹೋಗಿ ಬಾ.. ಅಲ್ಲೇನು ನಿನಗೆ ದೀಪಾವಳಿ ಆಗುತ್ತೊ ಮಾರಿ ಹಬ್ಬಾ ಕಾದಿರುತ್ತೊ ಯಾರಿಗ್ಗೊತ್ತು..  ನಿನ್ನ ಅದೃಷ್ಟವಿದ್ದಂತಾಗಲಿ' ಎಂದೆ ಸಂತಾಪಭರಿತ ಕನಿಕರದ ದನಿಯಲ್ಲಿ.. 

ನಾನು ಹಾಗನ್ನುತ್ತಿದ್ದಂತೆ ಯಾಕೊ ಗುಬ್ಬಣ್ಣನ ಸಂತಸದ ಬಲೂನಿಗೆ ಪಿನ್ನು ಚುಚ್ಚಿದಂತಾಗಿ, ' ಯಾಕೆ ಸಾರ್..? ಎನಾದ್ರೂ ಎಡವಟ್ ಮಾಡ್ಕೊಂಡ್ನಾ?' ಅಂದ ತುಸು ಖಿನ್ನತೆ, ಆತಂಕದ ದನಿಯಲ್ಲಿ.

' ಇಲ್ವಾ ಮತ್ತೆ? ಅಲ್ಲಯ್ಯಾ.. ದೀಪಾವಳಿಗ್ ಮುಂಚೆ ದಿವಾಳಿಯಾಗೊ ಇಂತ ದೊಡ್ಡ ದೊಡ್ಡ ಐಡಿಯಾಗೆ ತಲೆ ಕೊಡೊಕ್ ಮುಂಚೆ ಒಂದ್ಸಾರಿ ನನ್ನ ಜತೆ ಆಗು ಹೋಗು ಡಿಸ್ಕಸ್ ಮಾಡ್ಬಾರ್ದಾ? ಪೆದ್ದಂಭಟ್ಟ..  ಊರಿಗೆ ಬಾ ಅಂದಾಗಲೆ ಅನುಮಾನ ಬರ್ಬೇಕೂ.. ಏನಿದ್ರೂ ಇಲ್ಲೆ ಸೆಟಲ್ ಮಾಡಿ ಅನ್ನೋದಲ್ವಾ? ಹೋಗ್ಲಿ ಅವರೆ ಟಿಕೆಟ್ ಹಾಕಿ ಕರೆಸ್ಕೊಳೊಕೆ ಹೊರಟಿದಾರೇಂದ್ರೆ ಭಾರಿ ಪ್ಲಾನೇ ಹಾಕಿರ್ಬೇಕು.. ಬರ್ಲಿ ನನ್ ಮಗ ಮೊದ್ಲು ಒದ್ದು ಬುದ್ಧಿ ಕಲ್ಸೋಣಾ ಅಂತಾ' 

' ಅಯ್ಯೊ.. ಹಾಗೆಲ್ಲಾ ಹೆದರಿಸ್ಬೇಡಿ ಸಾರ್.. ಹೀಗೆ ' ಅವಾರ್ಡ್ ವಾಪ್ಸೀ' ಸ್ಕೀಮ್ ಹಾಕಿದ್ರೆ ಹೆದರ್ಕೊಂಡು ಇನ್ನೊಂದಷ್ಟು ಹೊಸದಾಗಿ ಏನಾದ್ರೂ ಕೊಡ್ತಾರೆ.. ಹೇಗೂ ರಿಟೈರಾಗಿ ವಾಪಸ್ ಇಂಡೀಯಾಗೆ ಹೋಗ್ಬೇಕಾದ್ರೆ ಒಂದು ಸೈಟೊ ಮನೇನೊ ಗಿಟ್ಟುತ್ತೆ..ರಿಟೈರ್ಮೆಂಟ್ ಪ್ಲಾನ್ ಸರಿಹೋಗುತ್ತೆ ಅಂತ ದೊಡ್ಡ ವಿಶನ್ ಇಟ್ಕೊಂಡ್ ಹೀಗ್ ಮಾಡ್ದೆ ಅಷ್ಟೆ..'

' ಅಯ್ಯೊ ಮನೆ ಹಾಳು ಬುದ್ಧಿಯವನೆ.. ಅದೆಲ್ಲಾ ಬೇಕೂಂದ್ರೆ ಯಾರಾದ್ರೂ ಅವಾರ್ಡ್ ವಾಪ್ಸಿ ಐಡಿಯಾ ಮಾಡ್ತಾರೇನೊ..? ಇವೆಲ್ಲಾ ಸೆಂಟಿಮೆಂಟಲ್ ಮ್ಯಾಟರ್ಸ್.. ಲವ್ ಬರೋ ಹಾಗೆ ರಿಲೇಷನ್ಷಿಪ್ ಇಟ್ಕೊಂಡು ಗಿಟ್ಟಿಸ್ಕೊ ಬೇಕೂ.. ನೀ ಮಾಡಿರೊ ತರಕ್ಕೆ ಈಗ ಏನಾಗುತ್ತೆ ಗೊತ್ತಾ? '

' ಏನಾಗುತ್ತೆ ಸಾರ್..'

' ಅವರು ಯಾವುದಾದರು ಲಾಯರನ್ನ ಕನ್ಸಲ್ಟ್ ಮಾಡಿರ್ತಾರೆ.. ನಿನ್ ಮೇಲ್ ಯಾವ್ಯಾವ ಕೇಸ್ ಹಾಕ್ಬೋದ್ ಅಂತ.. ನೀನು ಸಿಂಗಪುರದಲ್ಲಿದ್ರೆ ನಿನ್ನ ಮೇಲಿನ ಕ್ರಮ ಅವರ ಜುಡಿಸ್ಟ್ರಿಕ್ಷನ್ನಿಗೆ ಬರಲ್ಲಾ.. ಅದಕ್ಕೆ ಸ್ಕೀಮು ಹಾಕಿ ನಿನ್ನ ಮೊದಲು ಅಲ್ಲಿಗೆ ಕರೆಸ್ಕೋತಾ ಇದಾರೆ.. ಅಲ್ಲಿಗೆ ಹೋದ್ಮೇಲೆ ಎಲ್ಲಾ ಅವರ ಜೋನೇ.. ಏನ್ ಮಾಡಿದ್ರೂ ನಡೆಯುತ್ತೆ..'

' ಏನ್ ಮಾಡ್ತಾರೇಂತೀರಾ ಸಾರ್..' ಹೆಚ್ಚು ಕಮ್ಮಿ ಅಳುವ ದನಿಯಲ್ಲಿ ಗುಬ್ಬಣ್ಣ ಕೇಳಿದ..

' ಏನು ಮಾಡೊದೇನು ಬಂತೂ? ನೀ ಹೆಂಗೆ ಅವಾರ್ಡ್ ವಾಪ್ಸೀ ಅಂತ ಅವರ ಮಗಳು ಮೊಮ್ಮಗಳನ್ನ ಕೊಡೋಕ್ ಹೋದ್ಯೊ ಅವರೂ ಹಾಗೇನೆ ಅದೇ ಲಾಜಿಕ್ಕಲ್ಲಿ ' ನೀನು ಅವರ ಮಗಳಿಗೆ ಸಿಕ್ಕಿದ್ದ ಅವಾರ್ಡು.. ಈಗ ಕಸ್ಟಮರ್ ಸ್ಯಾಟಿಸ್ ಫ್ಯಾಕ್ಷನ್ ಇಂಡೆಕ್ಸಿನಲ್ಲಿ ಫೇಲ್ಯೂರು ನೋಟಿಸ್ ಬಂದಿರೋದ್ರಿಂದ ಅವರೂ ನಿನ್ನನ್ನ ನಿಮ್ಮಪ್ಪ ಅಮ್ಮನಿಗೆ ' ಅವಾರ್ಡ್ ವಾಪ್ಸಿ ಸ್ಕೀಮಲ್ಲೆ' ಕೊಟ್ಟುಬಿಡ್ತೀವಿ ಅಂತಾರೆ..'

' ಅಯ್ಯೊ.. ನನಗೆ ಅಪ್ಪ ಅಮ್ಮನೆ ಬದುಕಿಲ್ವಲ್ಲಾ ಸಾರ್? ಯಾವಾಗಲೊ ಶಿವನ ಪಾದ ಸೇರ್ಕೊಂಡ್ರು..' ಹತಾಶೆಯ ದನಿಯಲ್ಲಿ ನುಡಿದ ಗುಬ್ಬಣ್ಣ..

' ಅದಿನ್ನು ಡೇಂಜರೂ.. ಈಗ ಅವರ ಉತ್ತರಾಧಿಕಾರಿಯಾಗಿ ಎಲ್ಲಾ ಡ್ಯಾಮೇಜ್ ಸೇಟಲ್ಮೆಂಟೆಲ್ಲ ನಿನ್ನ ತಲೆಗೆ ಬರುತ್ತೆ....'

' ಡ್ಯಾಮೇಜು ಎಂತಾದೂ ಸಾರ್.. ?'

' ಇನ್ನೆಂತದ್ದು.. ? ನೀನು ಪರ್ಮನೆಂಟ್ 'ಸೇಲ್ ಡೀಡ್' ಅಂತ ತಪ್ಪು ತಿಳ್ಕೊಂಡು ಅವರ ಮಗಳನ್ನ ಮದ್ವೆ ಆಗಿದೀಯಾ.. ಆದರೆ ಅದು ಆಕ್ಚುವಲೀ 'ಲೀಸಿಗೆ' ಅರ್ಥಾತ್ ಭೋಗ್ಯಕ್ಕಷ್ಟೆ ಕೊಟ್ಟ ಪ್ರಿವಿಲೇಜು.. ಆದರೆ ಬಳಕೆಯಲ್ಲಿ ಅದನ್ನ ಪೂರಾ ಡ್ಯಾಮೇಜು ಮಾಡಿ, ಸಾಲದ್ದಕ್ಕೆ ಮಗಳೂ ಅನ್ನೊ 'ಅನ್ ಆಥರೈಸ್ಡ್ ಕನ್ಸ್ಟ್ರಕ್ಷನ್ನು' ಮಾಡ್ಕೊಂಡಿದ್ದೂ ಅಲ್ದೆ, ಈಗ ಅವಾರ್ಡ್ ವಾಪ್ಸಿ ಅನ್ನೊ ನೆಪದಲ್ಲಿ ಎಲ್ಲಾ ಕಳಚಿ ಕೈ ತೊಳ್ಕೊಂಡು ಜವಾಬ್ದಾರಿಯಿಂದ ತಪ್ಪಿಸ್ಕೊಳೋಕ್ ನೋಡ್ತಾ ಇದಾನೆ, ವರದಷಿಣೆ ಕಿರುಕುಳ ಕೊಡ್ತಾ ಇದಾನೆ ಅಂತೆಲ್ಲ ನೂರೆಂಟು ಪೀನಲ್ ಕೋಡ್ ನಂಬರ್ ಹುಡುಕಿ ಕೇಸ್ ಜಡೀತಾರೆ.. ಅಲ್ಲಿಗೆ ನೀನು ಮತ್ತೆ ಸಿಂಗಾಪುರಕ್ಕೆ ವಾಪಸ್ಸು ಬರೋದನ್ನೂ ಕೂಡಾ ಮರ್ತುಬಿಡಬೇಕು..'

'ಅಯ್ಯೊ ಅದ್ಯಾಕೆ ಮರೀಬೇಕು ಸಾರೂ..?'

'ಮತ್ತೆ? ನೀನು ಇಲ್ಲಿ ರೆಸಿಡೆನ್ಸ್ ಸ್ಟೇಟಸ್ ಆದ್ರೂ, ಪಾಸ್ಪೋರ್ಟು ಇಂಡಿಯಾದು ತಾನೆ ? ಅಲ್ಲೇನೊ ಕ್ರಿಮಿನಲ್ ಕೇಸ್ ಬಿತ್ತು ಅಂದ್ರೆ, ಇಲ್ಲಿ ಸುಮ್ನೆ ಕೂತ್ಕೋತಾರಾ? ಯಾವುದೋ ಎಡವಟ್ಟು ಗಿರಾಕಿ ಇರಬೇಕು ಅನ್ಕೊಂಡು ಮೊದಲು ಸ್ಟೇಟಸ್ ಕಿತ್ತಾಕ್ತಾರೆ.. ಅಲ್ಲಿಗೆ ನಿನಗೆ ಪರಪ್ಪನ ಅಗ್ರಹಾರದ ಜೈಲೆ ಗತಿ.. ಮುದ್ದೇ, ನೀರು ಸಾರನ್ನ, ಪೋಲೀಸ್  ಬೆತ್ತದಲ್ಲಿ ಕುಂಡಿಗೇಟು.. ರಾಮಾ ರಾಮಾ ..ನಿಂಗೆ ಇವೆಲ್ಲಾ ಬೇಕಾ ?' ಎಂದೆ ಮತ್ತಷ್ಟು ಭೀಕರವಾಗಿ ವರ್ಣಿಸುತ್ತಾ..

ಆ ಮಾತು ಮುಗಿಯುತ್ತಿದ್ದಂತೆ ಪೂರ್ತಿ ಮ್ಲಾನವದನನಾಗಿ ಕೂತುಬಿಟ್ಟ ಗುಬ್ಬಣ್ಣಾ, ಅರ್ಧ ಕುಡಿದ ತೇತಾರೆಯನ್ನೂ ಹಾಗೆ ಬಿಟ್ಟು.. ಸ್ವಲ್ಪ ಹೊತ್ತಾದ ಮೇಲೆ ತಲೆಯೆತ್ತಿ,

' ಹಾಗಾದ್ರೆ ನನ್ನಿನೇನ್ ಮಾಡು ಅಂತೀರಾ ಸಾರ್?' ಎಂದ ದೈನ್ಯದ ದನಿಯಲ್ಲಿ..

' ಮಾಡೋದೇನು..? ಚೆನ್ನಾಗಿ ಯೊಚ್ನೆ ಮಾಡು.. ನನಗೇನೊ ಇಂಡಿಯಾ ಟ್ರಿಪ್ ದೀಪಾವಳಿ ಬಂಪರಿಗಿಂತ, ಸಿಂಗಪೂರು ದೀಪಾವಳಿ ಸೇಲಲ್ಲಿ 'ದಿವಾಳಿ' ಆಗೋದೆ ಸೇಫ್ ಅನ್ಸುತ್ತೆ..' ಎಂದೆ, ನಿರ್ಧಾರವನ್ನು ಅವನಿಗೆ ಬಿಡುತ್ತಾ. ಆಗ ತಟ್ಟನೆ ಮೇಲಕ್ಕೆದ್ದ ಗುಬ್ಬಣ್ಣ,

' ಸರೀ ಸಾರ್.. ನಾ ಹೋಗ್ಬರ್ತೀನಿ ' ಎಂದ..

' ಎಲ್ಲಿಗೆ.. ಮನೆಗಾ..? ಯಾಕೆ ಇಷ್ಟು ಅವಸರದಲ್ಲಿ..?'

' ಹೂಂ ಸಾರ್.. ಮನೆಗೆ... ಇವತ್ತೊಂದೆ ದಿನ ವೀಕೆಂಡ್ ರಜೆ ಉಳ್ಕೊಂಡಿರೋದು.. ಮನೆಗೆ ಹೋಗಿ ಅವರಿಬ್ಬರನ್ನ ಇವತ್ತೆ ಕರ್ಕೊಂಡು ಹೋಗಿ ದೀಪಾವಳಿ ಶಾಪಿಂಗ್ ಮುಗಿಸಿಬಿಡ್ತೀನೀ.. '

' ಮತ್ತೆ.. ಇಂಡಿಯಾ ಟ್ರಿಪ್..?'

' ಇಲ್ಲಾ ಸಾರ್..ಕ್ಯಾನ್ಸಲ್ ಮಾಡಿಬಿಡ್ತೀನಿ..  ನಾನೆ ಅವರಿಗೊಂದಷ್ಟು ದುಡ್ಡು-ಗಿಪ್ಟು ಕಳಿಸಿ ಕೈ ತೊಳ್ಕೊಂಡ್ ಬಿಡ್ತೀನಿ.. ಸಾರಿ ಹೇಳ್ಬಿಟ್ಟು..' ಎಂದ. ದನಿಯಲ್ಲಿ ಭಯಂಕರ ರೀ ಇಂಬರ್ಸ್ಮೆಂಟ್ ಪ್ಲಾನ್ ಫ್ಲಾಪ್ ಆದ ಬಗ್ಗೆ ಮಹಾನ್ ನಿರಾಶೆ ಎದ್ದು ಕಾಣುತ್ತಿತ್ತು. 

' ಅಲ್ ದ ಬೆಸ್ಟ್ ಗುಬ್ಬಣ್ಣಾ.. ಹ್ಯಾಪೀ ದೀಪಾವಳಿ.. ಇನ್ನು ಅರ್ಧಾ ತೇತಾರೈ ಹಾಗೆ ಉಳ್ಕೊಂಡಿದೆ ಕುಡಿದು ಹೋಗು ಹೋಗ್ಲೀ...? '

' ಥ್ಯಾಂಕ್ಸ್ ಸಾರ್.. ಹ್ಯಾಪಿ ದೀಪಾವಳಿ..  ಟೀ ಬೇಡಾ ಸಾರ್.. ಅವರಿಬ್ಬರನ್ನ ಕರ್ಕೊಂಡು ಬಂದ ಮೇಲೆ ಮತ್ತೆ ಒಟ್ಟಿಗೆ ಬಂದು ಇಲ್ಲೇ ಕುಡೀತೀವಿ.. ಈಗಾಗ್ಲೆ ಗುದುಗುಟ್ಟಿಸಿಕೊಂಡು ಗಡಿಗೆ ಮುಖ ಮಾಡ್ಕೊಂಡ್ ಕೂತಿದಾಳೆ .. ಅವಕ್ಕೆಲ್ಲ ಸ್ವಲ್ಪ ಶಾಂತಿ ಆಗ್ಬೇಕು ಮೊದಲು..' ಎಂದವನೆ ನಾಗಾಲೋಟದಲ್ಲಿ ದೌಡಾಯಿಸಿದ ಬಸ್ಟಾಪಿನತ್ತ..

ಅದಾದ ಮೇಲೆ ಹಬ್ಬದ ದಿನ ಇಡೀ ಫ್ಯಾಮಿಲಿ ಮೂವಿ ಫ್ಲೇಕ್ಸಿನಲ್ಲಿ ಪಾಪ್ ಕಾರ್ನು ತಿನ್ನುತ್ತ ಪಿಕ್ಚರಿಗೆ ಹೋಗುತ್ತಿರುವುದು ಕಂಡು ' ಗುಬ್ಬಣ್ಣನ ಅವಾರ್ಡ್ ವಾಪ್ಸಿ ಪ್ರೋಗ್ರಾಮ್' ಎಲ್ಲಾ ಸುಖಾಂತವಾಗಿರಬೇಕೆಂದು ಅನಿಸಿ ನಿರಾಳವಾಯ್ತು.. ದೂರದಿಂದಲೆ 'ಹ್ಯಾಪಿ ದೀಪಾವಳಿ ' ಎಂದು ಮತ್ತೊಮ್ಮೆ ನುಡಿದು ನಾ ಮನೆಯತ್ತ ನಡೆದೆ, ಮಗನ ಜತೆ ಸಿಂಗಪುರದ ಸದ್ದು ಮಾಡದ ಪಟಾಕಿಗಳನ್ನು ಉರಿಸಿ, ದೀಪಾವಳಿ ಆಚರಿಸೋಣವೆಂದು..

(ಎಲ್ಲರಿಗು ಗುಬ್ಬಣ್ಣ ಅಂಡ್ ಕೋ ನ ದೀಪಾವಳಿ ಶುಭಾಶಯಗಳು !)

 

Comments

ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಅಷ್ಟು ಲೇವಡಿ ಮಾಡಿದ್ರೂ ಗುಬ್ಬಣ್ಣ ಪಾಪ ಬೇಜಾರು ಮಾಡ್ಕೊಳ್ದೇನೆ ಕೋಆಪರೇಟ್ ಮಾಡ್ತಾನೆ ಪುಣ್ಯಕ್ಕೆ. ಬೇರೆಯವರಾಗಿದ್ರೆ ಹೀಗೆಲ್ಲ ಬರಿಯೋಕೆಲ್ಲಿ ಬಿಡ್ತಾ ಇದ್ರು ? ನಿನ್ನೆ ಹೀರೋ ಮಾಡ್ತಿದಿನೀಂತ ಮಸ್ಕಾ ಹೊಡೆದು ಒಪ್ಪಿಸಿದ್ದು - ಈಗ ಅಭ್ಯಾಸ ಆಗ್ಬಿಟ್ಟು, ಎಲ್ಲಿ ಸಾರ್ ಈಚೆಗೆ ನನ್ ಕಥೆ ಬರೀಲೆ ಇಲ್ಲಾ ಅಂತ ಕೇಳೊಕ್ ಶುರು ಮಾಡ್ದಾ ದೀಪಾವಳಿ ಟೈಮಲ್ಲಿ. ನನಗೂ 'ಪಾಪ ಗುಬ್ಬಣ್ಣ' ಅನಿಸಿದ್ರೂ, ಓದೋವ್ರಿಗೆ ಖುಷಿ ಕೊಡುತ್ತಲ್ಲ ಅಂತ ಇಬ್ರೂ ಡೀಲ್ ಕಂಟಿನ್ಯೂ ಮಾಡ್ತಾ ಇದೀವಿ :-)

Submitted by kavinagaraj Sat, 01/16/2016 - 11:50

ಬುಜೀಗಳು, ಪ್ರಗತಿಪರರು ಎಂದು ಸ್ವಘೋಷಣೆ ಮಾಡಿಕೊಂಡಿದ್ದವರ ವಿರುದ್ಧ ಮುಖಪುಸ್ತಿಗರು ತಿರುಗಿ ಬಿದ್ದ ಹಾಗೆ ಗುಬ್ಬಣ್ಣನ ಮೇಲೆ ಬ್ರಹ್ಮಾಸ್ತ್ರ ಎಸೆದರೆ ಅವನ ಪಾಡು ಏನಾಗಬೇಕು? ಅಂತೂ ಅವನ ಸಂಸಾರ ಉಳಿಸಿದ ಪುಣ್ಯವೂ ದಕ್ಕಿತಲ್ಲಾ! ಅಭಿನಂದನೆಗಳು.

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಅವಾರ್ಡು ವಾಪ್ಸಿ ಮಾಡಿ ಬದುಕ್ಕೊಬಹುದು ಆದರೆ ದೇವರು ಗಂಟು ಹಾಕಿದ 'ರಿವಾರ್ಡು' ವಾಪ್ಸಿ ಮಾಡಿ ಬದುಕಲಾದೀತೆ ? ಖಂಡಿತ ಬಿಡುವುದಿಲ್ಲ ಅನ್ನುತ್ತೆ ಗುಬ್ಬಣ್ಣನ ಅನುಭವ - ಅದಕ್ಕೆ ಸರಿಯಾದ ಸಮಯದಲ್ಲಿ ರಿಪೇರಿ ಮಾಡ್ಕೊಂಡ್ಬಿಟ್ಟ ದೀಪಾವಳಿ ಶಾಪಿಂಗ್ ನೆಪದಲ್ಲಿ :-)