ದೇಶ, ಕಾಲ, ಬದುಕು ಮತ್ತು ದೇವರು

ದೇಶ, ಕಾಲ, ಬದುಕು ಮತ್ತು ದೇವರು

ಪುಸ್ತಕದ ಲೇಖಕ/ಕವಿಯ ಹೆಸರು
ತೀರ್ಥರಾಂ ವಳಲಂಬೆ
ಪ್ರಕಾಶಕರು
ಯಾನ ಪ್ರಕಾಶನ

ಜನನಾರಾಭ್ಯ ಒಂದಷ್ಟು ಪ್ರಶ್ನೆಗಳು, ಕುತೂಹಲಗಳು ಉತ್ತರವಿಲ್ಲದೆ ಉಳಿದುಕೊಂಡೇ ಇರುತ್ತದೆ. ಈ ವಿಶ್ವ, ಭೂಮಿ, ಚರಾಚರ ವಸ್ತುಗಳು, ಅವುಗಳ ಬದುಕು ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ನಮಗಿನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ವಿಜ್ಞಾನ ಇಷ್ಟು ಮುಂದುವರಿದು ಬದುಕನ್ನು ಸರಾಗವಾಗಿಸಿದ್ದರೂ ಸಹ ಇನ್ನೂ ಪ್ರಕೃತಿ ತನ್ನ ನಿಗೂಢತೆಯನ್ನು ಬಿಟ್ಟು ಕೊಟ್ಟಿಲ್ಲ.

ರಾತ್ರಿ ಸುಮ್ಮನೆ ನಿಂತು ಕೋಟ್ಯಾನುಕೋಟಿ ನಕ್ಷತ್ರಗಳನ್ನು ವೀಕ್ಷಿಸಿದರೆ ಈ ಅಗಾಧತೆ ಅರಿವಾಗುತ್ತದೆ. ಸುತ್ತ ಮುತ್ತಲಿರುವ ಸಾಕಷ್ಟು ವಿಚಿತ್ರಗಳಿಗೆ, ವಿಶೇಷಗಳಿಗೆ ಕಣ್ಮುಚ್ಚಿಕೊಂಡು ಎಲ್ಲವೂ ಸಹಜವೆಂಬಂತೆ ನಾವು ಬದುಕುತ್ತಿದ್ದೇವೆ. ಆದರೆ ಮನಸಿನಾಳದಲ್ಲಿ ಪ್ರಶ್ನೆಗಳು, ಗೊಂದಲಗಳು ಹಾಗೆ ಇವೆ. ಈ ಅಸ್ಪಷ್ಟತೆಯನ್ನು ಗುರುತಿಸಿ, ಅದನ್ನು ಚಿಂತಿಸಿ, ಗಂಟು ಬಿಡಿಸುವ ಅಪರೂಪದ ಪುಸ್ತಕ ದೇಶ,ಕಾಲ,ಬದುಕು ಮತ್ತು ದೇವರು.

ತೀರ್ಥರಾಮ ವಳಲಂಬೆಯವರ ಈ ಗ್ರಂಥ, ಮಾಹಿತಿಯ ಬೆಳಕಿನ ಸಾಗರಕ್ಕೆ ಒಂದು ಪುಟ್ಟ ಬೆಳಕಿಂಡಿಯಂತಿದೆ. ಆಕಾಶಕಾಯಗಳ ಬಗೆಗೆ ಸರಳವಾದ ವಿವರಣೆಯೊಂದಿಗೆ ಪ್ರಾರಂಭವಾಗುತ್ತದೆ. ದೇವರ ಅಸ್ತಿತ್ವದ ಪ್ರಶ್ನೆಗಳು ಇಂದು ನಿನ್ನೆಯದಲ್ಲ. ಈ ನಂಬಿಕೆಯನ್ನು ತಾರ್ಕಿಕವಾಗಿ ವಿಶ್ಲೇಷಿಸಿದ್ದಾರೆ.

ಸ್ಟೀಫನ್ ಹಾಕಿಂಗ್ ರ ಕಾಲದ ನಿಲುವನ್ನು ಸವಿವರವಾಗಿ ನೀಡಿದ್ದಾರೆ. ಸ್ಥಿರ ವಿಶ್ವದ ವ್ಯಾಖ್ಯಾನ, ಏಕ ಕಾಲದಲ್ಲಿ ನಮ್ಮಂತೆಯೇ ಇರುವ ಹಲವು ವಿಶ್ವಗಳು ಈ ಪುಸ್ತಕದ ಮುಖ್ಯ ಭಾಗ. ಮಹತ್ತರ ಅಂಶವೆಂದರೆ ವೇದ ಮತ್ತು ವಿಜ್ಞಾನವನ್ನು ಸಮೀಕರಿಸಿರುವುದು. ಸೃಷ್ಟಿ,ಸ್ಥಿತಿ, ಲಯವನ್ನು ವೈಜ್ಞಾನಿಕವಾಗಿ ವಿವರಿಸಿರುವುದು ವಿಶೇಷ ಅಂಶ. ಪೂರ್ವಿಕರ ಜ್ಞಾನದ ಆಳ ಇದನ್ನು ಓದಿದಾಗ ಅರ್ಥವಾಗುತ್ತದೆ.

ಇಷ್ಟೆಲ್ಲಾ ಸೃಷ್ಟಿಯ ಬಗೆಗೆ, ವಿಶ್ವದ ಬಗೆಗೆ, ನಂಬಿಕೆಗಳ ಬಗೆಗೆ ಚಿಂತಿಸಿ ಮಂಥಿಸಿದರೂ ಅಸ್ಪಷ್ಟತೆ ಅಳಿಯುವುದಿಲ್ಲ. ಆಗ ಅಂತರಂಗದ ಒಳ ಹೊಕ್ಕು ಲೇಖಕರು ಅಧ್ಯಾತ್ಮವನ್ನು ಮನೋಜ್ಞವಾಗಿ ಅರ್ಥೈಸಿದ್ದಾರೆ. ಆಸ್ತಿಕ ಮತ್ತು ನಾಸ್ತಿಕ ವಾದಗಳು ಸೇರುವ ಬಿಂದು, ಅವೆರೆಡರ ಅಂತಿಮ ಯೋಚನೆ ಹೀಗೆ ಹಲವನ್ನು ಬಿಡಿಸಿಟ್ಟಿದ್ದಾರೆ.

ಇದರೊಂದಿಗೆ ಯೋಗಿಗಳ, ನಾಗ ಸಾಧುಗಳ, ಅಘೋರಿಗಳ ಜೀವನ ಶೈಲಿಯನ್ನು, ಪವಾಡಗಳನ್ನು ಉದಾಹರಣೆಗಳೊಂದಿಗೆ ನೀಡಿದ್ದಾರೆ. ಮೋಕ್ಷವನ್ನು ಇಲ್ಲಿ ಸುಲಭಾವಾಗಿ, ಸರಳವಾಗಿ ವಿವರಿಸಿದ್ದಾರೆ. ವಾಮಾಚಾರ,ಮೋಡಿ ಮುಂತಾದ ಸಿದ್ಧಿಗಳಲ್ಲಿ ಇರುವ ಜ್ಞಾನವನ್ನು ಕೂಡ ಇಲ್ಲಿ ತೋರಿಸಿದ್ದಾರೆ.

ಪ್ರಕೃತಿಯು ಸಕಲ ಜೀವ ರಾಶಿಯನ್ನು ನಿರ್ವಹಿಸುವ ಪ್ರಕ್ರಿಯೆ. ಅದರಲ್ಲಿ ಕರ್ಮದ ಪಾತ್ರ , ಇದೆಲ್ಲದರಿಂದ ಜೀವನ ಯೋಜನ ಬದ್ಧವಾಗಿ ನಡೆಯುವ ಕ್ರಮ. ಎಲ್ಲವೂ ಕೂಡ ಪೂರ್ವ ನಿರ್ಧಾರಿತ, ಹುಲ್ಲು ಕಡ್ಡಿಯ ಅಲುಗಾಟ ಕೂಡ ಶಕ್ತಿಯೊಂದು ನಿರ್ಧರಿಸುತ್ತದೆ. ಹೀಗೆ ಸಾಬೀತು ಪಡಿಸುತ್ತಾ ಸಾಗುವ ಈ ಗ್ರಂಥದ ಕೊನೆಯ ಭಾಗ ಪುರುಷಾರ್ಥ. ಇದರಲ್ಲಿ ವಿಧಿಯಾಟದಲ್ಲಿ ಮಾನವನ ಪಾತ್ರವೇನೆಂದು ಚರ್ಚಿಸಿದೆ. ಎಷ್ಟೇ ಮಾಹಿತಿಗಳು, ವಿವರಗಳು, ಉದಾಹರಣೆಗಳಿದ್ದರೂ ಅಧ್ಯಯನ ಮಾಡಿ, ಅದನ್ನು ತರ್ಕಕ್ಕೆ ಒಳಪಡಿಸಿ, ಅನುಭವಿಸಿ ನಂತರವೇ ಒಪ್ಪಬೇಕೆನ್ನುವ ಇದರ ವಿಚಾರಗಳು ಓದುಗರಲ್ಲಿ ಯೋಚನೆಗೆ ದಾರಿ ಮಾಡಿಕೊಡುತ್ತದೆ.

ಒಟ್ಟಾರೆ ಹೇಳುವುದಾದರೆ ಇದೊಂದು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಪರೂಪದ ಕೃತಿ ಎನ್ನುವುದರಲ್ಲಿ ಸಂದೇಹವಿಲ್ಲ. ಜೀವನ ದರ್ಶನದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸ್ತರಗಳ ಕುತೂಹಲವಿರುವ ಮನಸುಗಳಿಗೆ ಇದೊಂದು ಅದ್ಭುತ ರಸಗವಳ. ಅಂತಹವರೆಲ್ಲರು ಓದಲೆಬೇಕಾದ ಪುಸ್ತಕ ‘ದೇಶ ಕಾಲ ಬದುಕು ಮತ್ತು ದೇವರು’. ಹೆಚ್ಚಿನ ಮಾಹಿತಿಗೆ ಇದು www.mybookadda.in ಲಭ್ಯವಿದೆ.

Comments