ಭಾರತ ಕಂಡ ದಾರ್ಶನಿಕರು - ಶ್ರೀ ರಾಘವೇಂದ್ರ ಸ್ವಾಮಿ

Submitted by rasikathe on Sun, 11/22/2015 - 11:29

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಶ್ರೀ ರಾಘವೇಂದ್ರ ಸ್ವಾಮಿಯವರು ಕ್ರಿಸ್ತ ಶಕ ೧೫೮೧ ರಲ್ಲಿ ತಮ್ಮಣ್ಣ ಭಟ್ಟರಿಗೆ ಎರಡನೇ ಮಗನಾಗಿ ಜನಿಸಿದರು. ತಮ್ಮಣ್ಣ ಭಟ್ಟರು ವಿಜಯನಗರದ ಆಸ್ಥಾನದಲ್ಲಿ ವಿಧ್ವಾಂಸರಾಗಿದ್ದರು. ವಿಜಯನಗರ ಆಸ್ಥಾನ ಅಧಃಪತನದ ನಂತರ ತಮ್ಮಣ್ಣ ಭಟ್ಟರು ಕಂಚೀಪುರಂ ಹತ್ತಿರದ ಭುವನಗಿರಿ ಎಂಬ ಹಳ್ಳಿಯಲ್ಲಿ ನೆಲಸಿದರು. ಶ್ರೀ ರಾಘವೇಂದ್ರ ಸ್ವಾಮಿಯವರು ವೆಂಕಟೇಶ್ವರನ ಅನುಗ್ರಹದಿಂದ ಭುವನಗಿರಿಯಲ್ಲಿ ಜನಿಸಿದ್ದರಿಂದ ಅವರಿಗೆ ವೆಂಕಟನಾಥ ಎಂದು ಹೆಸರಿಡಲಾಯಿತು. ವೆಂಕಟೇಶ್ವರ ದೇವರು ತಮ್ಮಣ್ಣ ಭಟ್ಟರಿಗೆ ಕನಸಿನಲ್ಲಿ ಬಂದು ಈ ಪುತ್ರನನ್ನು ಅನುಗ್ರಹಿಸಿದರಂತೆ. ಹೀಗೆ ಹುಟ್ಟುವಾಗಲೇ ದೈವತ್ವ ಗುಣ ಅವರದಾಗಿತ್ತು.

ವೆಂಕಟನಾಥನಿಗೆ ಸಣ್ಣ ವಯಸ್ಸಿನಲ್ಲೇ ದೇವರ ಗುಣಗಳಿದ್ದವು. ಅವನ ಅಕ್ಷರಾಭ್ಯಾಸದ ಮೊದಲ ದಿನವೇ ಅವನು ತಂದೆಯನ್ನು ಕೇಳಿದ ಪ್ರಶ್ನೆ ಹೀಗಿತ್ತು - ಓಂ ಕಾರವು ಹೇಗೆ ಭಗವಂತನ ಸರ್ವಾಂತಯಾಮಿ ಸತ್ಯವನ್ನು ಪ್ರತಿನಿಧಿಸುತ್ತೇ??? ಅವನು ಸಣ್ಣ ವಯಸ್ಸಿನ್ನಿಂದಲೇ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಅತಿ ವೇಗದಿಂದ ತನ್ನನ್ನು ತೊಡಗಿಸಿಕೊಂಡನು. ಪ್ರವಚನಗಳಲ್ಲಿ ಅತಿ ಆಸಕ್ತಿಯಿಂದ ತನ್ನ ಪ್ರಶ್ನೆಗಳನ್ನು ಗುರುವರ್ಯರನ್ನು ಕೇಳಿ, ತನ್ನ ಅನಿಸಿಕೆಯನ್ನು ಹಂಚ್ಕೊಂಡು, ಅದಕ್ಕೆ ಅರ್ಥವನ್ನು ಹುಡುಕಿಕೊಳ್ಳುತ್ತಿದ್ದನು. ಅವನು ಸಂಗೀತ, ಜಪ ತಪ, ಈಜುವುದು, ಆಧ್ಯಾತ್ಮ ಇದರಲ್ಲೆಲ್ಲ ಸಣ್ಣ ವಯಸ್ಸಿನಲ್ಲೇ ಎತ್ತಿದ ಕೈ ಆಗಿದ್ದನು. ಸ್ವಲ್ಪ ದೊಡ್ಡವನಾದ ಮೇಲೆ ಇವನಿಗೆ ಸರಸ್ವತಿ ಬಾಯಿಯೊಂದಿಗೆ ಮದುವೆಯಾಯಿತು. ನಂತರ ಒಂದು ಗಂಡು ಮಗುವೂ ಜನಿಸಿತು. ರಾಘವೇಂದ್ರರು ಮುಂದೆ ಮಧ್ವಾಚಾರ್ಯರ ತತ್ವಗಳಲ್ಲಿ ಮತ್ತು ದ್ವೈತ ಫಿಲಾಸಫಿಯಲ್ಲಿ ಪರಿಣತರಾದರು. ಆದರೂ ಬಡತನ ಅವರನ್ನ ಬಿಡಲಿಲ್ಲ. ಬಡತನದಿಂದಾಗಿ ಒಂದು ಊರಲ್ಲಿ ನಿಲ್ಲದೇ ಊರಿಂದೂರಿಗೆ ಪ್ರಯಾಣ ಮಾಡತೊಡಗಿದರು.

ಹೀಗೇ ಒಂದು ಹಳ್ಳಿಯಲ್ಲಿದ್ದಾಗ, ಪುರೋಹಿತರೊಬ್ಬರು ಅವರಿಗೆ ಶ್ರೀಗಂಧ ತೇಯಲು ಕೊಟ್ಟಾಗ, ರಾಘವೇಂದ್ರರು ಅಗ್ನಿ ಸೂಕ್ತವನ್ನು ಪಠಿಸುತ್ತಾ ಗಂಧ ತೇಯಿದರಂತೆ. ಅದನ್ನು ಭಕ್ತಾದಿಗಳು ಲೇಪಿಸಿದಾಗ ಅವರಿಗೆ ಏನೋ ಒಂದು ತರಹ ಉರಿಯಾದಂತಾಯಿತಂತೆ. ಮತ್ತೊಮ್ಮೆ ಗಂಧ ತೇಯುವಾಗ ವರುಣ ಸೂಕ್ತ ವನ್ನು ಪಠಿಸಿದರಂತೆ. ಆಗ ಭಕತಾದಿಗಳು ಅದನ್ನು ಲೇಪಿಸಿದಾಗ ಒಂದು ತರಹ ತಣ್ಣನೆಯ ಅನುಭವ ಆಯಿತಂತೆ. ಇದನ್ನ ನೋಡಿ ಭಕ್ತಾದಿಗಳೆಲ್ಲ ಅದು ದೇವರ ಮಹಿಮೆ, ಅವರೇ ದೇವರ ಸಾಕಾರ ಎಂದು ಕಾಲಿಗೆ ಬಿದ್ದರಂತೆ. ಹೀಗೆ ಅವರಲ್ಲಿದ್ದ ದೇವರ ಗುಣಗಳು ಒಂದೊಂದಾಗಿ ಹೊರಬೀಳಲಾರಂಭಿಸಿದವು. ಮುಂದೆ ರಾಘವೇಂದ್ರರು ಮುಂದಿನ ಶಿಕ್ಷಣ ಮತ್ತು ಜೀವನಕ್ಕಾಗಿ ಕುಂಭಕೋಣಮ್ ಗೆ ಪ್ರಯಾಣ ಬೆಳೆಸಿದರು.

ಕುಂಭಕೋಣಮ್ ನ ಶ್ರೀ ಮಠದಲ್ಲಿ ವಾಸ ಮತ್ತು ಶ್ರೀ ಮಠದ ಶ್ರೀ ಸುಧೀಂದ್ರ ಅವರಲ್ಲಿ ಶಿಷ್ಯಾಚಾರ ಸ್ವೀಕರಣೆ ಸ್ವಲ್ಪಸಮಯದಲ್ಲೇ ನಡೆಯಿತು. ಕೆಲ ಸಮಯದಲ್ಲೇ ಶ್ರೀ ಸುಧೀಂದ್ರ ಗುರುವು ಇವರ ಜ್ಞಾನವನ್ನು ಗುರುತಿಸಿ ತಕ್ಷಣ ಇವರನ್ನು ಆಸ್ಥಾನ ವಿದ್ವಾನ್ ಸ್ಥಾನಕ್ಕೆ ಏರಿಸಿದರು. ಇಲ್ಲಿದ್ದಾಗ ರಾಘವೇಂದ್ರರು ಅವರ ಆಧ್ಯಾತ್ಮಿಕ ತಿಳುವಳಿಕೆಯನ್ನು ಇನ್ನಷ್ಟು ಬಲವಾಗಿಸಿಕೊಂಡರು. ನಂತರ ದೇವರ ಇಚ್ಚೆಯಂತೆ ಶ್ರೀ ಸುಧೀಂದ್ರರ ನಂತರ ಸನ್ಯಾಸವನ್ನು ಸ್ವೀಕರಿಸಿ, ಶ್ರೀ ಮಠದ ಸ್ವಾಮಿಯಾದರು. ಇಲ್ಲಿದ್ದಾಗಲೇ ರಾಘವೇಂದ್ರರು ಮಂತ್ರ - ಮಾಯೆಗಳನ್ನು ಭಕ್ತಾದಿಗಳಿಗೆ ತೋರಿಸಿದರು - ಕಣ್ಣು ಕಾಣದವರಿಗೆ ದಿವ್ಯ ದೃಷ್ಠಿ, ಮಾತನಾಡದವರಿಗೆ ಮಾತಿನ ಶಕ್ತಿ, ಬಲಹೀನರಾದವರಿಗೆ ನಡೆಯುವ ಶಕ್ತಿ, ಇದೆಲ್ಲವುದನ್ನು ಅನುಗ್ರಹಿಸುವ ಮೂಲಕ. ರಾಘವೇಂದ್ರರು ವರುಣ ಯಜ್ಞವನ್ನು ಮಾಡುವಾಗ ಮಳೆಯನ್ನೇ ತರಿಸುತ್ತಿದ್ದರಂತೆ. ಇದನ್ನು ನೋಡಿದ ಶ್ರೀ ಮಠದ ಭಕ್ತಾದಿಗಳು ಇವರ ತತ್ವ ವಿಚಾರಗಳ ಅನುಯಾಯಿಗಳಾದರು. ರಾಘವೇಂದ್ರರು ಶ್ರೀ ಮಠದ ಮುಖ್ಯಸ್ಥರಾಗಿದ್ದಾಗಲೇ ಪರಿವ್ರಾಜಕ ಸೇವೆಯನ್ನೂ ಆರಂಭಿಸಿದರು.

ಶ್ರೀ ರಾಘವೇಂದ್ರರು ವೇದಾಂತ ಸಾರವನ್ನು ಎಲ್ಲ ಕಡೆಗಳಲ್ಲಿ ಸಾರಿ ಜನ ಸಾಮಾನ್ಯರ ಆಧ್ಯಾತ್ಮಿಕ ತಿಳುವಳಿಕೆಯನ್ನು ಹೆಚ್ಚಿಸಿದರು. ಅವರು ವೇದಾಂತ ಕೃತಿಗಳನ್ನೂ ರಚಿಸಿದರು - ಚಂದ್ರಿಕಾ, ನ್ಯಾಯ ಸುಧಾ, ತಂತ್ರ ದೀಪಿಕಾ, ನ್ಯಾಯ ಮುಕ್ತಾವಳಿ ಮುಂತಾದವು. ಇವರ ಕಾಲದ ಬಹು ಮಂದಿ ಮುಸಲ್ಮಾನ ಆಡಲಿತಕಾರರೂ ಇವರನ್ನು ಸನ್ಮಾನಿಸಿದರು. ಆಧ್ಯಾತ್ಮ ಚಳುವಳಿಯ ನಂತರ, ಇಚ್ಚಾಪೂರಣವಾಗಿ ಶ್ರೀ ರಾಘವೇಂದ್ರರು ೧೬೭೧ ರಲ್ಲಿ ಮಂಚಾಲ (ಮಂತ್ರಾಲಯ) ಎಂಬ ಹಳ್ಳಿಯಲ್ಲಿ ಬೃಂದಾವನವನ್ನು ಸೇರಿ ದೇವರಲ್ಲಿ ಲೀನವಾದರು. 

ಉಪದೇಶ/ ತತ್ವಗಳು: ಶ್ರೀ ರಾಘವೇಂದ್ರರು ದ್ವೈತ ತತ್ವ (ಮಧ್ವಾಚಾರ್ಯರ) ಮತ್ತು ವೈಷ್ಣವ ಸಂಪ್ರದಾಯವನ್ನು ಭೋಧಿಸಿದರು. ಆತ್ಮ ಬರೀ ಖಾಲಿಯಲ್ಲ, ಅದರಲ್ಲಿ ದೈವಸಾರವಿದೆ. ಆತ್ಮದ ಸಾರ - ಈ ಬೆಳಕು ಒಳಗಡೆಯಿಂದ ಬರಬೇಕು. ಯೋಗವು ಮುಕ್ತಿಗೆ ಬೇಕಾದ ಉಪಕರಣ, ಅದರಿಂದಲೇ ಮನಸ್ಸಿನ ನಿಯಂತ್ರತೆ ಸಾಧ್ಯ. ಆಸೆ, ಮೋಹ ಮುಂತಾದ ತಾತ್ಕಾಲಿಕವಾಗಿ ಸಂತಸ ನೀಡುವ ಗುಣಗಳನ್ನು ನಿಯಂತ್ರಿಸಿದಾಗಲೇ ಅತ್ಯಂತ ಎತ್ತರದಲ್ಲಿರುವ ಒಳಗಡೆಯ ಬೆಳಕು ಗೋಚರವಾಗುವುದು, ಇದಕ್ಕೆ ಶಾಸ್ತ್ರಗಳ ಅರಿವು ಬೇಕಾದ ವಸ್ತು. ಶಾಸ್ತ್ರಗಳು ಸರಿ, ತಪ್ಪುಗಳನ್ನು ತೋರಿಸಿ, ಸರಿಯಾದ ಮಾರ್ಗದರ್ಶನ ನೀಡುತ್ತವೆ.

ಶ್ರೀ ರಾಘವೇಂದ್ರರು, "ಶಂಕು ತೀರ್ಥ" ಎಂಬ ಬ್ರಹ್ಮನ ಆಸ್ಥಾನದಲ್ಲಿದ್ದ  ಕರ್ಮಜ ದೇವರು, ಮುಂದೆ ಪ್ರಹ್ಲಾದರಾಗಿ, ಬಾಹ್ಲೀಕರಾಜರಾಗಿ, ಶ್ರೀ ವ್ಯಾಸರಾಜರಾಗಿ, ಮೂಲರಾಮನ ಪೂಜೆಗಾಗಿ ಶ್ರೀ ರಾಘವೇಂದ್ರರಾಗಿ ಅವತರಿಸಿದರು ಎಂದು "ಶ್ರೀ ನೃಸಿಂಹ ಪುರಾಣ" ಹೇಳುತ್ತದೆ ಈ ಪದ್ಯದಲ್ಲಿ .....ಶಂಕುಕರ್ಣಾಕ್ಯದೇವಸ್ತು......