ಗರಿಕೆಯ ಪ್ರೇಮ,,,

ಗರಿಕೆಯ ಪ್ರೇಮ,,,

ಕವನ

ಬೆಂಗಳೂರಿನ

ಸಿಮೆಂಟಿನ ಮಧ್ಯದಲ್ಲೊಂದು 
ಗರಿಕೆ ಹುಲ್ಲು ತಲೆ ಎತ್ತಲು 
ಹವಣಿಸುತ್ತಿದೆ,

ಪದೇ ಪದೇ ಸೂರ್ಯನನು 
ನೋಡಲೆತ್ನಿಸಿದರೂ,
ಯಾರದೋ ಕಾಲಿನ 
ಗಟ್ಟಿ ಹೆಜ್ಜೆಯೋ, 
ಅಥವಾ
ಬಂಡಿಯ ಚಕ್ರವೋ 
ಹಾದು ಹೋಗುವುದಿದೆ,
ಗರಿಕೆಯ ತಲೆಯಮೇಲೆ,

ಆದರೂ ಅದಕ್ಕೇನೂ 
ಕೋಪವಿಲ್ಲ,,,
ಸದಾ ಏಳಲು ಪ್ರಯತ್ನಿಸುತ್ತಿದೆ,

ಸಿಮೆಂಟಿನ ಗಡಿ ದಾಟಿ,
ರಸ್ತೆಗಳ ಜಂಜಡ ದಾಟಿ,
ಮಣ್ಣಿಗಾಗಿ ಹುಡುಕಾಟ ನಡೆಸುತ್ತಿದೆ,,,

ಒಂದು ಹಿಡಿ ಮಣ್ಣಿಗೂ 
ಬಡತನವೇ ಬೆಂಗಳೂರಿನಲಿ,
ಇನ್ನ್ಹೇಗೆ ಇದು, ಶ್ರೀಮಂತ ನಗರ !!
ಗರಿಕೆ ಗೊಣಗಿಕೊಳ್ಳುತ್ತಿದೆ,,,,
ಆದರು ಕೋಪವಿಲ್ಲ,

ಮೊನ್ನೆಯ ಮಳೆಗೆ 
ಇದ್ದ ಬದ್ದ ದೂಳೆಲ್ಲ,,, 
ಕೆಸರಾಗಿ, ಮಣ್ಣಾಗಿ 
ರಸ್ತೆಯ ಬದಿಗೆ ಸರಿದಾಗ,
ಗರಿಕೆಯ ಕಾಯುವಿಕೆಗೆ ಅದೇನೋ ಆನಂದ 

ಆದರೆ 
ದೂಳು ಕೆಸರಾದಂತೆ,,,,
ಮುಂದೊಂದು ದಿನ,
ಸಿಮೆಂಟೂ ಪುಡಿಯಾಗಿ, ಮಣ್ಣಾದರೆ,,,,
ಮಾನವನ ಬದುಕನ್ನು ನೆನೆದು 
ದಗ್ಧವಾಯಿತು ಗರಿಕೆ,,,,,

ಇರುವ ಒಂದು ಭೂಮಿಯನು,
ಕೊಲ್ಲಲು ಪ್ರಯತ್ನಿಸಿದವರ 
ಮೂಢತನಕ್ಕೆ ಮೌನವಾಯಿತು,,,,,

Comments