||ಕೇಳು ಆಯ್ಲಾನ್ ಕೇಳುವ್.....||
ಕೇಳು ಆಯ್ಲಾನ್ ಕೇಳು ಲೋಕವ, ಎಲ್ಲಿ ನಿನ್ನಯ ಬಾಲ್ಯವು?
ಎಲ್ಲಿ ಆಟಿಕೆಗಳೆಲ್ಲಿ ಗೆಳೆಯರು ಎಲ್ಲಿ ನಿನ್ನಯ ಶಾಲೆಯು?
ಬದುಕು ಬಾಳುವ ಹೂವು ಸುರುಟಿದೆ, ತಾನು ಅರಳುವ ಮುನ್ನವೆ.
ಜಗದಲಲೆಯುತ ಬದುಕನರಿಯುವ ಯೋಗ ಕಮರಿದೆ ಸಸಿಯಲೆ!
ಕೇಳು ತಾಯಿಯ ಮುತ್ತನೊಂದನು , ತಂದೆ ಕೊಡಿಸಿದ ಚೆಂಡನು.
ಮರಳಿಸಲು ಹೇಳು ನಿನ್ನ ಜೀವನ ನಿನ್ನ ಪುಟ್ಟ ಲೋಕವ.
ಕಡಲ ತಟದಲಿ ನೀನು ನಡೆದ ಪುಟ್ಟ ಹೆಜ್ಜೆಯ ಗುಳಿಯಲಿ,
ತೇಲಿ ಬಂದ ಅಲೆಯ ಸಾಲ್ಗಳು ಅಂದು ತುಂಬಿತು ನೀರನು.
ಇಂದು ನಿನ್ನ ಮೃತ್ಯುಶೀತಲ ದೇಹ ಕಂಡ ಶರಧಿಯು,
ಗದ್ಗತೆಯ ಕೊರಳಲಿ ನೀಡುತಿದೆ ಹಣೆಗೆ ನೂರು ಚುಂಬನ.
ಧರ್ಮ ಕೋಶವ ಸೀಳುತ ಮೃಗ ಕೆರಳಿ ನಡೆಸಿದೆ ಮರ್ಧನ.
ಅದರ ಕ್ರೌರ್ಯದ ತುಳಿತದಡಿಯಲಿ ನಿನ್ನ ಜೀವನ ಚೇತನ.
ಕೇಳು ಆಯ್ಲಾನ್ ಕೇಳು ಕೂಗಿ ಧರ್ಮವಿರದ ಲೋಕದಿಂದ,
ಯಾವ ದೇಶ ಧರ್ಮ ಜಾತಿಯ ಗರ್ಭದಲಿ "ನಾ" ಜನಿಸಲೆಂದು?
ಮೃಗವ ಮೀರಿದ ರಕ್ಕಸತನ ಧರ್ಮದಂಡವ ಹಿಡಿದಿದೆ.
ಮೃಗಜನ್ಮ ಮಾನವ ಜನ್ಮಕ್ಕಿಂತ ಔನ್ನತ್ಯವ ತೋರಿದೆ.
ಮನುಜ "ಕರ್ಮವು" ಮ್ಲಾನತೆಯಲಿ ಬಿದ್ದು ಹೊರಳಾಡುತಲಿದೆ.
ಧರ್ಮವಿರದ ಅಂಧ ಜಗದಲಿ ಕುರುಡು ಹೆಜ್ಜೆಗಳಿಟ್ಟಿವೆ.
- ಚಂದ್ರಹಾಸ (೧೫ -೧೧-೨೦೧೫)
Comments
ಉ: ||ಕೇಳು ಆಯ್ಲಾನ್ ಕೇಳುವ್.....||
ಮರಳ ತಡಿಯಲ್ಲ೦ದು ಉಸಿರೊಗೆದೆದ್ದು ಹಾ.. ಚೀತ್ಕರಿಸುತ /
ಮರಳಿ ಬಾರದ ಲೋಕದೆಡೆ ನಡೆದಿತ್ತು ಪುಟ್ಟನ ಕಾಯವು /
ಕರುಳ ಹಿ೦ಡಿತು ನೆನಪು , ಹಾರೈಸುವೆನು ಕರಗಳ ಮುಗಿಯುತ /
ಮರುಳುತನ ಕೊನೆಗೊ೦ಡು ಮನುಜತೆಗೊಮ್ಮೆ ಸಿಕ್ಕಲಿ ನ್ಯಾಯವು //
ಚ೦ದ್ರಹಾಸರೇ, ಮನ ಮುಟ್ಟುವ ಬರಹ..
In reply to ಉ: ||ಕೇಳು ಆಯ್ಲಾನ್ ಕೇಳುವ್.....|| by raghumuliya
ಉ: ||ಕೇಳು ಆಯ್ಲಾನ್ ಕೇಳುವ್.....||
ಧನ್ಯವಾದಗಳು !!!