2015ರ ಭಾರತದ ವಿದೇಶಾಂಗ ನೀತಿ: ಯಶಸ್ವೀ ವರ್ಷ

2015ರ ಭಾರತದ ವಿದೇಶಾಂಗ ನೀತಿ: ಯಶಸ್ವೀ ವರ್ಷ

2015ರಲ್ಲಿ ಜಾಗತಿಕ ರಾಜಕೀಯ ಹಲವಾರು ನಿರೀಕ್ಷಿತ ಹಾಗೂ ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾಯ್ತು. ಅಮೆರಿಕಾ, ರಷ್ಯಾ ಮತ್ತು ಯುರೋಪಿನ ಕೆಲವೊಂದು ರಾಷ್ಟ್ರಗಳಿಗೆ ತಮ್ಮ ಆಧುನಿಕ ಶಸ್ತ್ರಾಸ್ತ್ರಗಳ ಪರೀಕ್ಷೆಗೆ  ಇಸ್ಲಾಮಿಕ್ ಸ್ಟೇಟ್ ವೇದಿಕೆ ಕಲ್ಪಿಸುವುದರಿಂದ ಹಿಡಿದು ನಿರಾಶ್ರಿತರ ಸಮಸ್ಯೆಯವರೆಗೆ ಇಡೀ ಪ್ರಪಂಚವೇ ಗೊಂದಲದ ಗೂಡಾಗಿ ಮಾರ್ಪಾಡಾಯ್ತು. ಇದೇ ಗೊಂದಲದ ವರ್ಷದಲ್ಲಿ ಭಾರತದ ವಿದೇಶಾಂಗ ನೀತಿಯಲ್ಲೂ ಅನೇಕ ಮಹತ್ವದ ಬದಲಾವಣೆಗಳಾಗಿವೆ. ಕಳೆದ ಒಂದು ವರ್ಷದ ಭಾರತದ ವಿದೇಶಾಂಗ ನೀತಿ ಹಲವಾರು ಹೊಸ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿದೆ. ನೆರೆಹೊರೆಯ ರಾಷ್ಟ್ರಗಳಿಂದ, ವಿಶ್ವದ ಪ್ರಮುಖ ಶಕ್ತಿಗಳ ಜೊತೆಗಿನ ಸಂಬಂಧದಲ್ಲಿ ಸಮತೋಲನ ಕಾಪಾಡಿಕೊಳ್ಳುವಲ್ಲಿ ಭಾರತದ ಯಶಸ್ಸು ಹಿಂದಿನ ಕೆಲವು ದಶಕಗಳಿಗಿಂತ ವಿಭಿನ್ನವಾಗಿದೆ. ಅಮೆರಿಕಾದಿಂದ ರಷ್ಯಾದವರೆಗೆ, ಯುರೋಪಿಯನ್ ಯುನಿಯನ್ ನಿಂದ ಆಸಿಯಾನ್ ವರೆಗೆ ಭಾರತದ ವಿಶ್ವಾಸ ವೃದ್ಧಿಸಿಕೊಳ್ಳುವ ಮೂಲಕ ಮೋದಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಈ ವರ್ಷಾಂತ್ಯದಲ್ಲಿ ಭಾರತದ ವಿದೇಶಾಂಗ ನೀತಿಯ ಮಹತ್ವದ ಯಶಸ್ಸು ವಿಶ್ವ ಶಕ್ತಿಗಳ ಮಧ್ಯೆ ಸಮತೋಲನ ಕಾಯ್ದುಕೊಂಡಿರುವುದು. ಮುಂಬರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಮತ್ತು ರಿಪಬ್ಲಿಕ್ ಪಕ್ಷಗಳೆರಡರಲ್ಲೂ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿಯ ಬಗ್ಗೆ ಸ್ಪಷ್ಟ ನಿಲುವುಗಳಿಲ್ಲ. ಅಮೆರಿಕಾದ ಈ ರಾಜಕೀಯ ನಾಯಕತ್ವದ ಗೊಂದಲವನ್ನು ರಷ್ಯಾ ಮತ್ತು ಚೈನಾ ತಮ್ಮ ಹಿತಾಸಕ್ತಿಗಳ ಪರವಾಗಿ ಉಪಯೋಗಿಸುತ್ತಿದ್ದಾರೆ. ಈ ಸಂದಿಗ್ಧ ಸಮಯದಲ್ಲಿ ಭಾರತ ಅಮೆರಿಕಾದೊಂದಿಗೆ ತನ್ನ ಸಂಬಂಧವನ್ನು ಇನ್ನೊಂದು ಮಟ್ಟಕ್ಕೆ ಸುಧಾರಿಸಿಕೊಂಡು, ಯುರೋಪಿಯನ್ ಯೂನಿಯನ್, ರಷ್ಯಾ ಮತ್ತು ಚೈನಾಗಳ ಜೊತೆಗೂ ಅಷ್ಟೇ ತೀಕ್ಷ್ಣತೆಯ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಿದೆ.  ಅಮೆರಿಕಾ, ರಷ್ಯಾ ಹಾಗೂ ಚೈನಾ ಈ ಮೂರು ಬಲಾಡ್ಯ ದೇಶಗಳೊಡನೆ ವ್ಯವಹರಿಸುವಾಗ ಮೋದಿ ಈ ವರ್ಷ ತೋರಿದ ದಿಟ್ಟತನ ಗುಣಾತ್ಮಕ ಫಲಿತಾಂಶ ನೀಡುತ್ತಿದೆ. ಕಳೆದ ಕೆಲವು ದಶಕಗಳಿಂದ ಭಾರತದ ವಿದೇಶಾಂಗ ನೀತಿಯಲ್ಲಿ ಮರೆಯಾಗಿದ್ದ ಆತ್ಮವಿಶ್ವಾಸ 2015ರಲ್ಲಿ ಮರುಕಳಿಸಿದ್ದು ಈ ವರ್ಷದ ವಿದೇಶಾಂಗ ನೀತಿಯ ಮುಖ್ಯ ಅಂಶಗಳಲ್ಲೊಂದು. 
ಏಷ್ಯಾದ ಸಣ್ಣ ಪುಟ್ಟ ರಾಷ್ಟ್ರಗಳ ರಾಜಕೀಯ ಆಯಾಮಗಳನ್ನು ಪ್ರಶ್ನಾತೀತವಾಗಿ ನಿಯಂತ್ರಿಸುತ್ತಿದ್ದ ಏಷ್ಯಾದ ದೈತ್ಯ ಚೈನಾ ಪಾಲಿಗೆ ಅದರ ಇತಿಮಿತಿಗಳನ್ನು ತಿಳಿಸಿಕೊಡುವ ಸಣ್ಣ ಪ್ರಯತ್ನ ಈ ವರ್ಷ ನಡೆದಿದೆ. ಭಾರತದ ಈ ವರ್ಷದ ರಾಜತಾಂತ್ರಿಕ ನಡೆಗಳು ಏಷ್ಯಾದ ಈ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಬದಲಿಸಿವೆ. ಏಷ್ಯಾದ ಸಮಾನಮನಸ್ಕ ರಾಷ್ಟ್ರಗಳಾದ ಜಪಾನ್, ವಿಯೆಟ್ನಾಮ್, ಆಸ್ಟ್ರೇಲಿಯಾ, ಸಿಂಗಾಪುರ್, ಫಿಲಿಪ್ಪೈನ್ಸ್ ಮತ್ತು ಮಲೇಷಿಯಾಗಳ ಜೊತೆಗೆ ಭಾರತದ ರಾಜತಾಂತ್ರಿಕ ಸಂಬಂಧಗಳು ಈ ವರ್ಷ ಇನ್ನಷ್ಟು ಗಟ್ಟಿಯಾಗಿವೆ. ಏಷ್ಯಾದ ಅನೇಕ ರಾಷ್ಟ್ರಗಳು ಚೈನಾ ಪ್ರಭಾವದ ತಡೆಯಾಗಿ ನಿಲ್ಲುವ ಒಂದು ಪ್ರಾದೇಶಿಕ ಶಕ್ತಿಯ ನಿರೀಕ್ಷೆಯಲ್ಲಿದ್ದು, ಈ ವರ್ಷದ ಭಾರತದ ವಿದೇಶಾಂಗ ನೀತಿ ಭಾರತ ಏಷ್ಯಾ ರಾಜಕೀಯ ಚದುರಂಗದಲ್ಲಿ ನಿರ್ಣಾಯಕ ಪಾತ್ರ ವಹಿಸುವಂತೆ ಮಾಡಿದೆ.  ಈ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಿ ಪ್ರಭಾವ ತಗ್ಗಿಸುವಲ್ಲಿ ಭಾರತ ಗಮನಾರ್ಹ ಯಶಸ್ಸು ಕಂಡಿದೆ. ಮಧ್ಯ ಪ್ರಾಚ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲೂ ಭಾರತದ ವಾಣಿಜ್ಯ ನೀತಿ ಇನ್ನಷ್ಟು ಸ್ಪಷ್ಟವಾಗಿ, ಈ ಪ್ರದೇಶಗಳಲ್ಲೂ ಚೈನಾದ ಏಕಸ್ವಾಮ್ಯ ವ್ಯಾಪಾರೀಕರಣಕ್ಕೆ ಸಡ್ಡು ಹೊಡೆದಿದೆ.
ಕಳೆದ ಎರಡು ದಶಕಗಳಿಗೆ ಹೋಲಿಸಿದಾಗ ಭಾರತ- ಬಾಂಗ್ಲಾದೇಶ ಸಂಬಂಧಗಳು ಅತ್ಯುತ್ತಮವಾಗಿವೆ. ಸಿರಿಸೇನಾ ಅಧಿಕಾರಕ್ಕೆ ಬಂದಾಗಿನಿಂದ ಶ್ರೀಲಂಕಾ ಜೊತೆಗಿನ ಸಂಬಂಧಗಳು ಸುಧಾರಿಸಿವೆ. ಅಫಘಾನಿಸ್ತಾನದ ಜೊತೆಗೂ ಭಾರತ ರಚನಾತ್ಮಕ ಸಂಬಂಧಗಳನ್ನು ಬೆಲೆಸಿಕೊಂಡಿದೆ.ಇಷ್ಟೆಲ್ಲಾ ರಾಜತಾಂತ್ರಿಕ ಯಶಸ್ಸುಗಳ ನಂತರವೂ, ಭಾರತದ ನೆರೆಹೊರೆಯ ವಿದೇಶಾಂಗ ನೀತಿ ಅಂದರೆ ದಕ್ಷಿಣ ಏಷ್ಯಾದ ನೀತಿಯ ಬಗ್ಗೆ ಹಲವಾರು ಅಪಸ್ವರಗಳೆದ್ದಿದ್ದವು. ಮುಖ್ಯವಾಗಿ ನೆರೆಯ ಪಾಕಿಸ್ತಾನ ಮತ್ತು ನೇಪಾಳಗಳೊಂದಿಗೆ ಕದಡಿದ ಸಂಬಂಧಗಳು ಮೋದಿ ವಿದೇಶಾಂಗ ನೀತಿಯ ವೈಫಲ್ಯ ಎಂದೇ ಪರಿಗಣಿಸಲ್ಪಟ್ಟಿತ್ತು. ಆದರೆ ಕಳೆದ ಒಂದು ದಶಕಕ್ಕೂ ಹೆಚ್ಚಿನ ಸಮಯದಲ್ಲಿ ಊಹಿಸಲೂ ಸಾಧ್ಯವಿಲ್ಲದ ರಾಜತಾಂತ್ರಿಕ ನಡೆಗೆ ಡಿಸೆಂಬರ್ 25 ಸಾಕ್ಷಿಯಾಯ್ತು. 2015ರ ಎಲ್ಲಾ ರಾಜತಾಂತ್ರಿಕ ವಿಜಯಗಳಿಗೆ ಮುಕುಟಪ್ರಾಯದಂತೆ ಮೋದಿ ಪಾಕಿಸ್ತಾನ ಭೇಟಿ ವಿಶ್ವ ರಾಜಕೀಯದ ಗಮನವನ್ನು ಮತ್ತೊಮ್ಮೆ ಭಾರತದ ಕಡೆಗೆ ತಿರುಗಿಸಿದೆ. ಅಫಘಾನಿಸ್ತಾನದಿಂದ ಹಿಂದಿರುಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಪೂರ್ವ ಸೂಚನೆ, ತಯಾರಿಯಲ್ಲದೆ ಹಠಾತ್ತನೆ ಲಾಹೋರ್ ಗೆ ಭೇಟಿ ನೀಡಿ ಪಾಕ್ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಶಯ ಕೋರುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು. ಮೋದಿ ಪಾಕ್ ಭೇಟಿಯ ಟ್ವೀಟ್ ಬಂದ ಕೂಡಲೇ, ವಿಶ್ವ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾದದ್ದಷ್ಟೇ ಅಲ್ಲ, ಕೆಲವೊಂದು ಟೀಕೆ ಟಿಪ್ಪಣಿಗಳಿಗೂ ಅವಕಾಶ ಮಾಡಿಕೊಟ್ಟಿತು. ನವಾಜ್ ಶರೀಫ್ ಭೇಟಿಯಿಂದ ಅಂಥ ಲಾಭವೇನಿಲ್ಲ, ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ನಿರ್ಧರಿಸುವುದು ಪಾಕ್ ಸೈನ್ಯ ಎಂಬ ತಕ್ಷಣದ ನಕಾರಾತ್ಮಕ ವಾದಗಳೂ ಕೇಳಿ ಬಂದಿವೆ. ಆದರೂ ಮೋದಿ ಪಾಕ್ ಭೇಟಿಯನ್ನು ವಿಮರ್ಶಾತ್ಮಕ ದೃಷ್ಠಿಯಿಂದ ನೋಡಿದಾಗ ಭಾರತ- ಪಾಕ್ ಮುಂದಿನ ಮಾತುಕತೆಗೆ ಮೋದಿ ಲಾಹೋರ್ ಭೇಟಿ ಇನ್ನಷ್ಟು ಬಲ ತುಂಬಲಿದೆ. ಮೋದಿ ಭೇಟಿಯ ಸಂದರ್ಭದಲ್ಲಿ ಪಾಕ್ ಸೈನ್ಯ ಸ್ವತಃ ಲಾಹೋರ್ ರಸ್ತೆಗಳಲ್ಲಿ ಮೋದಿ ಸ್ವಾಗತದ ಸಲುವಾಗಿ ಕಾರ್ಯ ನಿರ್ವಹಿಸಿದ್ದು ಮತ್ತೊಂದು ಅಚ್ಚರಿ!
ಈ ವರ್ಷದ ಕೊನೆಯಲ್ಲೂ ಭಾರತದ ವಿದೇಶಾಂಗ ನೀತಿಯ ಸಾಲು ಸಾಲು ಯಶಸ್ಸುಗಳಿಗೆ ನೇಪಾಳ ಮಾತ್ರ ಅಪವಾದವಾಗಿ ನಿಲ್ಲುತ್ತದೆ. ನೇಪಾಳ ನಾಯಕತ್ವ ದಿನೇ ದಿನೇ ಚೈನಾದತ್ತ ವಾಲುತ್ತಿದೆ. ಪ್ರತಿ ಬಾರಿ ನೇಪಾಳದಲ್ಲಿ ಆಯ್ಕೆಯದ ಹೊಸ ಪ್ರಧಾನಿ ಭಾರತಕ್ಕೆ ಭೇಟಿ ನೀಡುವುದು ಸಾಮಾನ್ಯ ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ನೇಪಾಳದ ಪ್ರಧಾನಿ ಖಡ್ಗ ಪ್ರಸಾದ್ ಓಲಿ ತಮ್ಮ ಚೊಚ್ಚಲ ವಿದೇಶ ಪ್ರವಾಸಕ್ಕೆ ಚೈನಾವನ್ನು ಆಯ್ದುಕೊಂಡಿರುವುದು ಭಾರತದ ಪಾಲಿಗೊಂದು ಎಚ್ಚರಿಕೆಯ ಘಂಟೆ.  ಹೀಗೆ ಈ ವರ್ಷದ ವಿದೇಶಾಂಗ ನೀತಿಯ ಏಳು ಬೀಳುಗಳನ್ನು ಗಮನಿಸಿದಾಗ, ವಿಶ್ವ ರಾಜಕೀಯದಲ್ಲಿ ಭಾರತಕ್ಕೆ 2015 ಬಹಳ ಮಹತ್ವದ ಕಾಲಘಟ್ಟವಾಗಿ ಪರಿಣಮಿಸುತ್ತದೆ. ಈ ವರ್ಷದಲ್ಲಿ ಭಾರತ ಕೈಗೊಂಡ ನಿರ್ಧಾರಗಳು ಭಾರತದ ಭವಿಷ್ಯದ ಅಸ್ಮಿತೆ ಹಾಗೂ ಅಸ್ತಿತ್ವಗಳೆರಡರಲ್ಲೂ ಮಹತ್ವದ ಪರಿಣಾಮ ಬೀರಲಿದೆ.

Comments

Submitted by ಗಣೇಶ Sun, 01/03/2016 - 21:49

ನಿಜ ಕೀರ್ತಿರಾಜರೆ, ಭಾರತ ತನ್ನಿಂದಾಗುವ ಪ್ರಯತ್ನ ಮಾಡುತ್ತಲಿದೆ. ಈ ವರ್ಷ ನೆರೆಕರೆಯವರ ಕಿರಿಕಿರಿ ಇಲ್ಲದೇ ಸಂಬಂಧ ವೃದ್ಧಿಸಿದರೆ ಸಾಕು ಅಂತ ಆಲೋಚಿಸುವಾಗಲೇ ಪಾಕ್ ತನ್ನ ಎಂದಿನ ಬುದ್ಧಿ ತೋರಿಸಿತು...:(