ದೇವರೊಡನೆ ಸಂದರ್ಶನ - 9
ಗಣೇಶ: ಸಂದರ್ಶನ ಮುಂದುವರೆಸಬೇಕೋ, ಬೇಡವೋ ಅನ್ನುವ ಗೊಂದಲದಲ್ಲಿ ನಾನು ಕೆಲವು ದಿನಗಳು ಬರಲಿಲ್ಲ. ಆದರೂ ಮನಸ್ಸು ಕೇಳದೆ ಇಂದು ಬಂದಿರುವೆ. ನಮಗೆ ಆಧಾರವಾದ ಭೂಮಿ ದೊಡ್ಡದು ಒಪ್ಪೋಣ. ಈ ಭೂಮಿಗಿಂತಲೂ ದೊಡ್ಡದು ಯಾವುದು?
ದೇವರು: ನೆಲಕ್ಕಿಂತ ಮಿಗಿಲು ಜಲ. ಘನವಾದ ಯಾವುದೇ ವಸ್ತು ಅದಕ್ಕಿಂತ ಮೊದಲು ಇದ್ದದ್ದು ದ್ರವರೂಪದಲ್ಲೇ! ಈ ಭೂಮಿ ಸಹ ಇದ್ದದ್ದು ಹಾಗೆಯೇ!
ಗಣೇಶ: ಜಲ ದೊಡ್ಡದು ಹೇಗೆ ಅಂತ ಹೇಳು ಮಹರಾಯ.
ದೇವರು: ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ.
ಗಣೇಶ: ನಾಗರಿಕತೆಗಳು ಬೆಳೆದದ್ದೇ ನದೀತೀರಗಳಲ್ಲಿ ಅಂತ ಓದಿದ ನೆನಪು. ಸಿಂಧೂ ನಾಗರಿಕತೆ, ನೈಲ್ ನದಿ ತಟದ ನಾಗರಿಕತೆ, ಇತ್ಯಾದಿ. ನೀರು ಜೀವನಕ್ಕೆ ಮುಖ್ಯವೆಂಬುದು ಒಪ್ಪುವ ಮಾತೇ! ಈ ಕಾವೇರಿ ಗಲಾಟೆ, ಕಳಸಾ-ಬಂಡೂರಿ ಸಮಸ್ಯೆ ಇಂತಹವೆಲ್ಲಾ ಬಗೆಹರಿಯೋದು ಯಾವಾಗ? ಮಳೆ ಇಲ್ಲ, ಜಲಾಶಯಗಳಲ್ಲಿ ನೀರಿಲ್ಲ, ಆದರೂ ನೀರು ಬಿಡಿ ಅಂತ ಗಲಾಟೆ ಮಾಡ್ತಾರೆ. ಟ್ರಿಬ್ಯೂನಲ್ ಆದೇಶ ಅಂತ ಕದ್ದುಮುಚ್ಚಿ ನೀರು ಬಿಡ್ತಾರೆ. ಈ ಜಲಜಗಳದಿಂದಲೇ ಮುಂದೆ ಯುದ್ಧಗಳೇ ಆಗುತ್ತವೆಯೋ ಏನೋ!
ದೇವರು: ಈ ರಾಜ್ಯ, ಜಿಲ್ಲೆ, ದೇಶ, ಇತ್ಯಾದಿ ಗಡಿಗಳೆಲ್ಲಾ ನೀವು ಮಾನವರುಗಳು ಮಾಡಿಕೊಂಡದ್ದು. ನದಿಯ ನೀರು ಈ ರಾಜ್ಯ, ಆ ರಾಜ್ಯ, ಈ ದೇಶ, ಆ ದೇಶ ಅಂತೆಲ್ಲಾ ನೋಡುವುದಿಲ್ಲ. ಕೇವಲ ತಗ್ಗು ಇರುವೆಡೆ ಹರಿಯುವುದಷ್ಟೇ ಅದಕ್ಕೆ ಗೊತ್ತು. ವಿವೇಚನೆಯಿಂದ ಬಳಸಿದರೆ, ವಿವೇಚನೆಯಿಂದ ವರ್ತಿಸಿದರೆ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆ. ಆದರೆ ನಿಮ್ಮ ನಾಯಕರುಗಳಿಗೆ ಓಟು, ಕುರ್ಚಿ ಮೇಲಷ್ಟೇ ಕಣ್ಣು! ಹಾಗಾಗಿ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದಿವೆ.
ಗಣೇಶ: ಭೂಮಿಯ ಮೇಲ್ಭಾಗದ ಮುಕ್ಕಾಲು ಭಾಗ ನೀರಿನಿಂದ ಕೂಡಿದ್ದು ಕಾಲು ಭಾಗ ಮಾತ್ರ ಭೂಮಿ ಇದೆ. ಹೀಗಿದ್ದರೂ ನೀರಿನ ಅಭಾವ ಅನ್ನುವುದು ಆಶ್ಚರ್ಯ. ಭೂಮಿಯಲ್ಲಿರುವ ನೀರಿನ ಶೇ. 96.5ರಷ್ಟು ಭಾಗ ಸಾಗರಗಳಲ್ಲಿನ ಉಪ್ಪುನೀರಾಗಿದ್ದು ಮಾನವ ಬಳಕೆಗೆ ಬರುವುದಿಲ್ಲ. ಉಳಿದ ಶೇ. 3.5ರಷ್ಟರಲ್ಲಿ ಸಹ ಹೆಚ್ಚಿನ ಭಾಗ ಹೆಪ್ಪುಗಟ್ಟಿದ ನೀರಿನ ರೂಪದಲ್ಲಿ ಅಂದರೆ ಮಂಜುಗಡ್ಡೆಯ ರೂಪದಲ್ಲಿರುತ್ತದಂತೆ. ಉಳಿದ ಶೇ. 1 ರಿಂದ 2ರಷ್ಟು ಭಾಗ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿ ಲಭ್ಯವಾಗಿದೆಯಂತೆ.
ದೇವರು: ನೀರಿನ ಮಹತ್ವ ಎಷ್ಟು ಅನ್ನುವುದು ನೀನು ಹೇಳಿದ ವಿವರದಿಂದಲೇ ನಿನಗೇ ಅರಿವಾಗಿರಬೇಕು. ಎಲ್ಲರಿಗೂ ಇದರ ಅರಿವು ಮೂಡಬೇಕು. ಮಂಜುಗಡ್ಡೆಯ ರೂಪದಲ್ಲಿರುವ ನೀರೆಲ್ಲಾ ಕರಗಿಸಿದರೆ ಸಮುದ್ರದ ಮಟ್ಟ ಈಗಿನದಕ್ಕಿಂತಲೂ ಸುಮಾರು 3 ಕಿ.ಮೀ. ಎತ್ತರಕ್ಕೆ ಏರುತ್ತದೆ. ನದಿಗಳು, ತೊರೆಗಳು, ಅಂತರ್ಜಲದ ರೂಪದಲ್ಲಿ ಇರುವ ಶುದ್ಧ ನೀರಿನ ಪ್ರಮಾಣ ಎಲ್ಲಾ ಪ್ರದೇಶಗಳಿಗೂ ಸದ್ಬಳಕೆ ಆಗಬೇಕಾದರೆ ನೀವು ವಿವೇಚನೆಯಿಂದ ವರ್ತಿಸುವುದು ಒಳಿತು. ಇಲ್ಲದಿದ್ದರೆ ನಿಮ್ಮ ಗೋರಿಗಳನ್ನು ನೀವೇ ತೋಡಿಕೊಳ್ಳುತ್ತೀರಿ ಅಷ್ಟೆ. ಗೊತ್ತುಗುರಿಯಿಲ್ಲದೆ ಬೋರ್ ವೆಲ್ ಗಳನ್ನು ತೋಡಿ ಇರುವ ಅಂತರ್ಜಲಮೂಲಗಳನ್ನು ಬತ್ತಿಸುತ್ತಿದ್ದೀರಿ. ನದಿ, ಕೆರೆ, ತೊರೆಗಳ ನೀರಿಗೆ ತ್ಯಾಜ್ಯ ವಸ್ತುಗಳನ್ನು ಸೇರಿಸಿ ಉಪಯೋಗಕ್ಕೆ ಬರದಂತೆ ಮಾಡಿಕೊಳ್ಳುತ್ತಿದ್ದೀರಿ. ಅಗತ್ಯವಿರುವಷ್ಟೇ ನೀರನ್ನು ಬಳಸದೆ ಪೋಲು ಮಾಡುತ್ತೀರಿ. ಕೆರೆ-ಕಟ್ಟೆಗಳನ್ನು ಮುಚ್ಚುತ್ತಿದ್ದೀರಿ, ಅತಿಕ್ರಮಿಸುತ್ತಿದ್ದೀರಿ. ಮಾತೆತ್ತಿದರೆ, 'ನಮ್ಮನ್ನು ಆ ದೇವರೇ ಕಾಪಾಡಬೇಕು' ಅಂದುಬಿಡುತ್ತೀರಿ! ಹೀಗೆಯೇ ಮಾಡುತ್ತಿದ್ದರೆ ನಿಮ್ಮನ್ನು ಯಾರೂ ಕಾಪಾಡಲು ಸಾಧ್ಯವೇ ಇಲ್ಲ.
ಗಣೇಶ: ನಾವೇ ದೇವರಾದರೆ ಮಾತ್ರ ಪರಿಹಾರ ಸಾಧ್ಯ! ನಾವೇ ನಿನಗಿಂತ ವಾಸಿ! ಮಳೆ ನೀರು ಕೊಯ್ಲು, ನೀರಿನ ಅಪವ್ಯಯದ ತಡೆಗಟ್ಟುವಿಕೆ, ಜಲಮೂಲಗಳು ಕಲುಷಿತಗೊಳ್ಳುವುದನ್ನು ತಪ್ಪಿಸುವುದು, ಕೆರೆ-ಕಟ್ಟೆಗಳ ಪುನರುಜ್ಜೀವನ, ಒಡ್ಡುಗಳ ನಿರ್ಮಾಣ ಮುಂತಾದ ಕೆಲಸಗಳಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಸರ್ಕಾರಗಳು ಮಾಡಬೇಕು, ಮಾಡುವಂತೆ ಜನರೂ ಮಾಡಬೇಕು. ಈ ಬುದ್ಧಿಯನ್ನಾದರೂ ಜನರಿಗೆ ಕೊಟ್ಟು ಪುಣ್ಯ ಕಟ್ಟಿಕೋ ದೇವರೇ!
ದೇವರು: (ನಗುತ್ತಾ) ನನಗೇ ಪುಣ್ಯದ ಪಾಠ ಹೇಳುತ್ತಿದ್ದೀಯಾ! ನನಗೆ ಪುಣ್ಯವೂ ಇಲ್ಲ, ಪಾಪವೂ ಇಲ್ಲ. ಎಲ್ಲವೂ ನಿಮಗೇ, ಎಲ್ಲವೂ ನಿಮದೇ! ಇಡೀ ಜಗತ್ತೇ ನಿಮ್ಮ ಕೈಲಿದೆ. ಹೇಗೆ ಬಳಸಬೇಕು, ಹೇಗೆ ಉಳಿಸಬೇಕು ಅನ್ನುವುದೂ ನಿಮಗೇ ಬಿಟ್ಟಿರುವೆ. ನೀವು ನೀರನ್ನು ರಕ್ಷಿಸಿದರೆ ನೀರು ನಿಮ್ಮನ್ನು ರಕ್ಷಿಸುತ್ತದೆ, ನೆನಪಿಡಿ.
ಗಣೇಶ: ಹಾಗಾದರೆ ನಿನ್ನನ್ನು ಏಕೆ ಪೂಜಿಸಬೇಕು? ನೀರನ್ನೇ ಪೂಜಿಸಿದರಾಯಿತು.
ದೇವರು: ಹಾಗೆಯೇ ಮಾಡು. ಅಂತಹ ಪೂಜೆಯೂ ನನಗೆ ತಲುಪುತ್ತದೆ.
ಗಣೇಶ: ಜಲಪುರಾಣ ಕೇಳಿ ನನ್ನ ಗಂಟಲೂ ಒಣಗಿದೆ. ನೀರು ಕುಡಿಯುವೆ. ಮತ್ತೆ ಸಿಗುತ್ತೇನೆ, ದೇವರೇ. ನಮಸ್ಕಾರ.
ದೇವರು: ಶುಭವಾಗಲಿ, ಹೋಗಿಬಾ.
-ಕ.ವೆಂ.ನಾಗರಾಜ್.
Comments
ಉ: ದೇವರೊಡನೆ ಸಂದರ್ಶನ - 9
ಹಿರಿಯರಾದ ಕವಿನಾಗರಾಜ್ ಸರ, ನೀರಿನ ಮಹತ್ವದ ಅರಿವಿನ ಕಣ್ಣು ತೆರೆಸಿದ ದೇವರೊಡನೆ ಸಂದರ್ಶನ ತುಂಬ ಮೆಚ್ಚುಗೆಯಾಯಿತು ಸರ್, ವಂದನೆಗಳು.
In reply to ಉ: ದೇವರೊಡನೆ ಸಂದರ್ಶನ - 9 by lpitnal
ಉ: ದೇವರೊಡನೆ ಸಂದರ್ಶನ - 9
ಧನ್ಯವಾದಗಳು, ಇಟ್ನಾಳರೇ.
ಉ: ದೇವರೊಡನೆ ಸಂದರ್ಶನ - 9
ಕವಿಗಳೆ ನಮಸ್ಕಾರ :-)
ನೀರು ನೀರು ಬಾಯಾರದವರಾರು ?
ನೀರೆ ಮೂಲ ಜೀವಕಾಧಾರ ಸಿಂಧು
ಜಲತತ್ವ ನೆಲತತ್ವ ಸಂಗಮಿಸೆ ಅನ್ನ
ನೆಲ ಜಲ ಕೂಡಲದೆ ಸುಖ ಸಂತಾನ ||
In reply to ಉ: ದೇವರೊಡನೆ ಸಂದರ್ಶನ - 9 by nageshamysore
ಉ: ದೇವರೊಡನೆ ಸಂದರ್ಶನ - 9
ಜಲಲಧಾರೆಯಂತೆ ನಿಮ್ಮ ಕವನಧಾರೆ!! ವಂದನೆಗಳು, ನಾಗೇಶರೇ.
ಉ: ದೇವರೊಡನೆ ಸಂದರ್ಶನ - 9
nice one again... :)
In reply to ಉ: ದೇವರೊಡನೆ ಸಂದರ್ಶನ - 9 by niranjanamurthy
ಉ: ದೇವರೊಡನೆ ಸಂದರ್ಶನ - 9
ಧನ್ಯವಾದ, ನಿರಂಜನಮೂರ್ತಿಯವರೇ.
ಉ: ದೇವರೊಡನೆ ಸಂದರ್ಶನ - 9
ಕವಿ ನಾಗರಾಜ ಸರ್ ಅವರಿಗೆ ನಮಸ್ಕಾರಗಳು.ಜೀವಿಸಲು ಆಹಾರಕ್ಕಿಂತ ನೀರು ಮುಖ್ಯವಾದ್ದದು.ಮಿತವ್ಯಯವಾಗಿ ನೀರನ್ನು ಉಪಯೋಗಿಸುವದು ನಮ್ಮಲೇರಲ್ಲ ಮುಖ್ಯ ಗೂರಿಯಾಗಬೇಕು.ನೀರಿನ ಮಹತ್ವದ ಬಗ್ಗೆ ಚೇನ್ನಾಗಿ ವಿವರಿಸಿದಿ ಸರ್.
In reply to ಉ: ದೇವರೊಡನೆ ಸಂದರ್ಶನ - 9 by Nagaraj Bhadra
ಉ: ದೇವರೊಡನೆ ಸಂದರ್ಶನ - 9
ಮೆಚ್ಚುಗೆಗೆ ವಂದನೆಗಳು, ನಾಗರಾಜ ಭದ್ರರವರೇ.
ಉ: ದೇವರೊಡನೆ ಸಂದರ್ಶನ - 9
ನಮ್ಮ ಮುಂದಿನ ಮಹಾಯುದ್ಧ ನೀರಿಗಾಗಿ ಅಂತ ತಿಳಿದವರು ಹೇಳಿದ್ದಾರೆ. ನೀರಿನ ಮಹತ್ವವನ್ನು ಬಲು ಸೊಗಸಾಗಿ ನಮ್ಮ ಮುಂದಿಟ್ಟಿದ್ದೀರಾ ಸರ. ತುಂಬಾ ಥ್ಯಾಂಕ್ಸ್.
In reply to ಉ: ದೇವರೊಡನೆ ಸಂದರ್ಶನ - 9 by santhosha shastry
ಉ: ದೇವರೊಡನೆ ಸಂದರ್ಶನ - 9
ಧನ್ಯವಾದ, ಸಂತೋಷ ಶಾಸ್ತ್ರಿಗಳೇ.
ಉ: ದೇವರೊಡನೆ ಸಂದರ್ಶನ - 9
ಕವಿನಾಗರಾಜರೆ,
ದೇವರೊಡನೆ ಸಂದರ್ಶನ ಲೇಖನದ ಪ್ರಭಾವವೋ ಏನೋ ಅನಿರೀಕ್ಷಿತವಾಗಿ ಮಥುರಾ- ವೃಂದಾವನ-ಗೋಕುಲಕ್ಕೆ ಕೆಲ ದಿನಗಳ ಹಿಂದೆ ಹೋಗಿ ಬಂದೆ! ಕೃಷ್ಣ ಓಡಾಡಿದ ಸ್ಥಳ ಸುತ್ತಾಡಿ ಖುಷಿಯೋ ಖುಷಿ.
ಈ ಸಲ ನೀರಿನ ಮಹತ್ವದ ಬಗ್ಗೆ ಅರಿವು ಮೂಢಿಸಿದ ದೇವರಿಗೆ ವಂದನೆಗಳು.
In reply to ಉ: ದೇವರೊಡನೆ ಸಂದರ್ಶನ - 9 by ಗಣೇಶ
ಉ: ದೇವರೊಡನೆ ಸಂದರ್ಶನ - 9
ಗಣೇಶರೇ, ತಡವಾಗಿ ಪ್ರತಿಕ್ರಿಯಿಸುತ್ತಿರುವೆ. ಸುಮಾರು 3 ತಿಂಗಳುಗಳ ಕಾಲ ವೈಯಕ್ತಿಕ ಕಾರಣಗಳಿಗಾಗಿ ಸಂಪದಕ್ಕೆ ಭೇಟಿ ಕೊಡಲು ಮತ್ತು ಲೇಖನ ಮುಂದುವರೆಸಲು ಆಗಿರಲಿಲ್ಲ. ಮುಂದಿನ ಕಂತನ್ನು ಇಂದು ಪ್ರಕಟಿಸಿರುವೆ, ವಂದನೆಗಳು. ನೀವು ಲೇಖನದ ಪ್ರಭಾವದಿಂದ ಅನಿರೀಕ್ಷಿತವಾಗಿ ಮಥುರಾ-ವೃಂದಾವನ-ಗೋಕುಲಕ್ಕೆ ಹೋಗಿಬಂದದ್ದು ಕೇಳಿ ಸಂತೋಷವಾಯಿತು. 'ದೇವರ' ಪ್ರಭಾವವಿರಬೇಕು ಎಂಬುದು ನನ್ನ ಅನಿಸಿಕೆ. :)