ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ)
(ಚಿತ್ರಕೃಪೆ: ಸ್ವಯಂಕೃತಾಪರಾಧ)
(ನಮ್ಮ ಊರುಗಳಲ್ಲಿ ಕಾಯಿಲೆ ಬಿದ್ದಾಗ ಆಗುವ ಅನುಭವ ಯಾರಿಗೂ ಹೊಸತಲ್ಲದಿದ್ದರು, ಹೊರದೇಶಗಳಲ್ಲಿನ ಇದರ ಅನುಭವದ ಮಾಹಿತಿ ಎಲ್ಲರಿಗು ಇರುವುದಿಲ್ಲ. ಅದರ ತುಣುಕೊಂದನ್ನು ಪರಿಚಯಿಸುವ ತೆಳು ಹಾಸ್ಯದ ಲಘು ಹರಟೆ / ಲಲಿತ ಪ್ರಬಂಧ - 'ವಿದೇಶಿ ವೈದ್ಯಾಯಣ' )
ಯಾಕೊ ಈಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾಯಿಲೆ ಬೀಳಲೂ ಭಯವಾಗುತ್ತದೆ. ಒಂದು ವೇಳೆ ಬಿದ್ದರೂ, ಅದರ ನಿವಾರಣೆಗೆಂದು ವೈದ್ಯರ ಹತ್ತಿರ ಹೋಗಲಿಕ್ಕೆ ಇನ್ನೂ ಹೆಚ್ಚು ಭಯ - ಸಣ್ಣ ಪುಟ್ಟ ರೋಗದ ಚಿಹ್ನೆಗಳನ್ನು ಹೇಳಿಕೊಂಡರೂ ಸಾರಾಸಗಟಾಗಿ ಎಲ್ಲಿ ನೂರೆಂಟು ತರದ ಪರೀಕ್ಷೆಗಳನ್ನು ಮಾಡಿಸಲು ಬರೆದುಕೊಟ್ಟು ಹೆದರಿದವರ ಮೇಲೆ ಕಪ್ಪೆ ಎಸೆಯುವರೊ ಅನ್ನುವುದರ ಜತೆ ಆ ಟೆಸ್ಟಿಂಗುಗಳಿಗೆ ಲ್ಯಾಬುಗಳಲ್ಲಿ ತೆರಬೇಕಾದ ಕಾಂಚಾಣದ ಅಂಕಶಾಸ್ತ್ರ ಮತ್ತೊಂದೆಡೆಯಿಂದ ಭುಸುಗುಟ್ಟುತ್ತಿರುತ್ತದೆ. ಹೀಗಾಗಿ ಯಾವುದೆ ಅನಾರೋಗ್ಯದ ಚಿಹ್ನೆ ಕಾಣಿಸಿಕೊಂಡರು ಮೊದಲು ಮೊರೆ ಹೋಗುವುದು 'ಸ್ವಯಂವೈದ್ಯ'ದ ಪರಿಣಿತಿಗೆ. ಅದಕ್ಕೇನು ಕಾರಣವಿಲ್ಲವೆಂದೇನಲ್ಲ; ಈಗಿನ ದಿನಗಳಲ್ಲಿ ಎಲ್ಲರ ಅನುಭವವೂ ಹೆಚ್ಚು ಕಡಿಮೆ ಹೀಗೆ ಇರುತ್ತದೆ. ಜಡ್ಡಾಗಿ ಮಲಗಿದಾಗ ಒಂದಷ್ಟು ನೋವು ನಿವಾರಕ ಮಾತ್ರೆಗಳೊ ಅಥವಾ ಇನ್ನಾವುದೊ ಬೇರು-ಕಷಾಯವನ್ನೊ ತೆಗೆದುಕೊಂಡು ಹೊದ್ದು ಮಲಗುವುದು ಮಾಮೂಲಿ ಪ್ರಥಮ ಚಿಕಿತ್ಸೆಯೆಂದೆ ಹೇಳಬಹುದು. ಒಂದರ್ಧ ದಿನದಲ್ಲಿ ಮೈಯೆಲ್ಲಾ ಬೆವರಿ, ತಲೆಯೆಲ್ಲಾ ಹಗುರವಾದಂತೆನಿಸತೊಡಗಿದರೆ ಜಡ್ಡಿನ ಗೊಡ್ಡುದನ ಬಿದ್ದೆದ್ದು ಓಡಿತೆಂದೆ ಅರ್ಥ - ಸದ್ಯ ಇಷ್ಟರಲ್ಲೆ ಮುಗಿಯಿತಲ್ಲ ಎಂದು ನಿಟ್ಟುಸಿರು ಬಿಡಬಹುದು. ಅದರಲ್ಲೆ ಒಂದೆರಡು ದಿನದಲ್ಲಿ ನೆಟ್ಟಗಾಯಿತೊ ಸರಿ.. ಆದರೆ ನಿಜವಾದ ಕಥೆ ಆರಂಭವಾಗುವುದು ಈ 'ಜಡ್ಡಿನ ಗೊಡ್ಡುದನ' ದಿಢೀರ್ ಚಿಕಿತ್ಸೆಗೆ ಬಗ್ಗದೆ ಹೋದಾಗಲೆ.. ಅದರಲ್ಲಿ ನಿಭಾಯಿಸಲಾಗದೆ ತೊಳಲಾಟ ಹೆಚ್ಚಾದಾಗಷ್ಟೆ ದವಾಖಾನೆಯತ್ತ ಹೆಜ್ಜೆ ಹಾಕುವುದು - ಅದೂ ಅಂಜುತ್ತ, ಅಳುಕುತ್ತಲೆ ಎನ್ನಿ !
ಇತ್ತೀಚೆಗೆ ಊರಿಗೆ ಹೋಗಿದ್ದಾಗ, ಸ್ವಲ್ಪ ಹೆಚ್ಚು ಕಡಿಮೆ ಇದೇ ರಾಗದಲ್ಲಿ ಪೇಚಾಡಿಕೊಳ್ಳುತ್ತ ತಮ್ಮ ಖೇದ-ವೇದನೆಯನ್ನು ತೋಡಿಕೊಂಡ ರಾಮು ಮಾಮನ ಮಾತು ಕೇಳಿದಾಗ ತಟ್ಟನೆ ' ಅರೆ ಹೌದಲ್ಲ? ಆ ನಮ್ಮ ಬಾಲ್ಯದ ಹಳೆಯ ವೈದ್ಯ ದಿನಗಳಿಗು, ಈಗಿನ ಹೈಟೆಕ್ ವೈದ್ಯ ಜಾಗೃತಿಗು ಅಜಗಜಾಂತರವಲ್ಲವೆ?' ಅನಿಸಿತ್ತು. ವಾರ್ಷಿಕ ರಜೆಗೆಂದು ಊರಿಗೆ ಬಂದಾಗ, ಸಣ್ಣಪುಟ್ಟ ಕಾಯಿಲೆ ಬಿದ್ದು ಅದೆ ಗೊತ್ತಿರುವ ಹಳೆಯ ಡಾಕ್ಟರರ ಹತ್ತಿರವೆ ಹೋದರು, ಮೊದಲಿನ ಮತ್ತು ಈಗಿನ ವಿಧಾನದಲ್ಲಿರುವ ವ್ಯತ್ಯಾಸ ರಾಚಿ ಹೊಡೆದಂತೆ ಎದ್ದು ಕಾಣಿಸುತ್ತಿತ್ತು. ದವಾಖಾನೆಯಲ್ಲೆ ಅಷ್ಟಿಷ್ಟು ಔಷಧಿ ನೀಡಿ, ಫೀಸು ಪಡೆದು ಒಂದೆ ಕಂತಿನಲ್ಲಿ ಸಾಗ ಹಾಕುತ್ತಿದ್ದ ಪ್ರಚಂಡ ಡಾಕ್ಟರಿಗೆ ಬದಲು ರೋಗ ಲಕ್ಷಣ ವಿಚಾರಿಸಿ, ನಾಡಿ ನೋಡಿ ಔಷಧಿಗೆಂದು ಚೀಟಿ ಬರೆದು ಮೆಡಿಕಲ್ ಶಾಪಿಗೆ ಓಡಿಸುವ ಪಕ್ಕಾ 'ವೃತ್ತಿಪರ ಡಾಕ್ಟರಿಕೆ' ಕಾಣತೊಡಗಿತ್ತು. ರಾಮು ಮಾಮನ ಮಾತಿನಲ್ಲಿ ಕಾಣಿಸಿಕೊಂಡ ಮಿಕ್ಕ ಹಲವು ಅಂಶಗಳು ಈ ಮೂಲ ಬೆಳವಣಿಗೆಯ ತಾರ್ಕಿಕ ಕವಲ ಶಾಖೆಗಳೆ ಅನಿಸುವಾಗಲೆ ತಟ್ಟನೆ, ಈ ವಿಧಾನಕ್ಕು ನಾನು ವಿದೇಶದಲ್ಲಿದ್ದು ಅನುಕರಿಸಬೇಕಾದ ರೂಪಕ್ಕು ಇರುವ ಸಾಮ್ಯತೆ, ವ್ಯತ್ಯಾಸಗಳು ಗೋಚರವಾಗತೊಡಗಿ ಹೆಚ್ಚುಕಡಿಮೆ ಎಲ್ಲಾ 'ವಾಣಿಜ್ಯಮಯ' ಆಯಾಮದತ್ತಲೆ ನಡೆದ ಧಾವಂತಗಳೆನಿಸಿತ್ತು. ಆಗಲೆ ಆ ವಿದೇಶಿ ಪದ್ದತಿಯ ವಿಧಿ ವಿಧಾನಗಳ ನೆನಪನ್ನು ಕೆದಕಿ ತುಲನಾತ್ಮಕವಾಗಿ ಅವಲೋಕಿಸತೊಡಗಿದ್ದು.
ಮೊನ್ನೆ ಹೀಗೆ ಒಂದು ಬಾರಿ ಸ್ವಯಂವೈದ್ಯಕ್ಕೆ ಬಗ್ಗದ ಜ್ವರದ ದೇಹವನ್ನೆತ್ತಿಕೊಂಡು ದವಾಖಾನೆಯೊಂದಕ್ಕೆ ಹೊರಟೆ. ಹಾಳು ಮೆಡಿಕಲ್ ಇನ್ಶೂರೆನ್ಸ್ ಹಾವಳಿಯಿಂದಾಗಿ ಹತ್ತಿರವಿರುವ ಅಥವಾ ಮನಸಿಗೆ ಬಂದ ಯಾವುದೊ ಕ್ಲಿನಿಕ್ಕಿಗೆ ಹೋಗುವಂತಿಲ್ಲ. ಕಂಪನಿಯ ಜತೆ ಕರಾರು ಮಾಡಿಕೊಂಡಿರುವ 'ಸರಪಳಿ' ಕ್ಲಿನಿಕ್ಕುಗಳ 'ಅಧಿಕೃತ ಶಾಖೆ'ಗೆ ಹೋಗಬೇಕು. ಮೊದಲೆ ನಿಲ್ಲಲೂ ತ್ರಾಣವಿಲ್ಲದೆ ತೂರಾಡುತ್ತಲೆ, ಟ್ಯಾಕ್ಸಿ-ಬಸ್ಸು-ಟ್ರೈನು - ಹೀಗೆ ಯಾವುದನ್ನೆ ಹತ್ತಿದರು ಬಿಡದೆ ಕಾಡಿ ನಡುಗಿಸುವ ಏಸಿಯನ್ನು ಬೈದುಕೊಳ್ಳುತ್ತಲೆ, ಹತ್ತಿರದ ಶಾಖೆಯೊಂದನ್ನು ತಲುಪಿದ್ದೆ - ಬೇರೆಯ ಹೊತ್ತಿನಲ್ಲಿ ಏಸಿಯೆ ಸಾಲದು ಎಂದು ಅಡ್ಡಾದಿಡ್ಡಿ ಬೈದುಕೊಂಡಿದ್ದನ್ನೂ ಮರೆತು. ಈ ದೇಶದಲ್ಲಿನ ಹವಾಗುಣಕ್ಕೆ ಏಸಿಯಿರದಿದ್ದರೆ ಬದುಕುವುದೆ ಆಗದು ಅನ್ನುವಷ್ಟು ಅನಿವಾರ್ಯತೆಯಿದ್ದರೂ, ಈ ಹುಷಾರು ತಪ್ಪಿದ ಹೊತ್ತಿನಲ್ಲಿ ಮಾತ್ರ ಅದರ ಇಡೀ ವಂಶಾವಳಿಯನ್ನೆ ಶಪಿಸುವಷ್ಟು ಕೋಪ ಬರುತ್ತದೆ - ಅದರ ಪೂರ್ವಜನಾದ ಫ್ಯಾನನ್ನು ಸೇರಿಸಿ...! ಇನ್ನು ದವಾಖಾನೆ ತಲುಪಿದ ಮೇಲೇನೂ ಕಡಿಮೆಯೆ? ಅಲ್ಲಿಯೂ ಇದೇ ಏಸಿಯ ಹಾವಳಿ. ಹೋಗಿ ಇನ್ಶೂರೆನ್ಸಿನ ಉಮೇದುವಾರಿಕೆ / ಚಂದಾದಾರಿಕೆಯ ಕಾರ್ಡ್ ತೋರಿಸಿ ರಿಜಿಸ್ಟರ್ ಮಾಡಿಸಿ ಆ ಕೃತಕ ಚಳಿಯಲ್ಲೆ ಕಾದು ಕೂರಬೇಕು, ಸರದಿ ಬರುವ ತನಕ. ಅಲ್ಲಂತೂ ಸದಾ ಹನುಮನ ಬಾಲದ ಸಾಲೆ; ಆ ಉದ್ದ ಸಾಲಿನ ಅರ್ಥ ಅಲ್ಲಿನ ಡಾಕ್ಟರ ಒಳ್ಳೆಯ ನುರಿತವನಿರಬೇಕೆಂದು ಪರ್ಯಾಯಾರ್ಥವಾಗುವುದರಿಂದ, ನೂಕುನುಗ್ಗಲಿಲ್ಲದ ಬೇರೆ ಕ್ಲಿನಿಕ್ಕಿಗೆ ಹೋಗುವ ಧೈರ್ಯವಾಗುವುದಿಲ್ಲ. ಸ್ವಲ್ಪ ಹೆಚ್ಚೆ ಕಾದರೂ ಸರಿ, ಆರೋಗ್ಯದ ವಿಷಯದಲ್ಲಿ ಯಾಕೆ ರಿಸ್ಕು ತೆಗೆದುಕೊಳ್ಳಬೇಕು ಹೇಳಿ?
ಸರಿ ಹಾಳಾಗಲಿ ಎಂದು ಬೈದುಕೊಂಡೆ ಕಾದು ಕೂತಿದ್ದಾಯ್ತು - ಕ್ಷಣಕ್ಷಣವೂ ಯುಗದಂತನಿಸಿದ ಅಹಲ್ಯಾ ಪ್ರತೀಕ್ಷೆಯಂತೆ. ಸರಿ ಸುಮಾರು ಒಂದು ಗಂಟೆ ಕಾದ ನಂತರ ಕೊನೆಗು ಸರದಿಯ ಕರೆ ಬಂದಾಗ ಮನದಲ್ಲೆ ದೈವಕ್ಕೆ ವಂದಿಸಿ ಒಳಗೆ ನಡೆದರೆ ಅಲ್ಲಿನ ಕಥೆಯೆ ಬೇರೆ ! ಅಲ್ಲಿನ ವೈದ್ಯ ಮಹಾಶಯ ' ಏನಾಗಿದೆ ನಿಮಗೆ?' ಎಂದು ಆರಂಭಿಸಿ ನನ್ನನ್ನೆ ಪ್ರಶ್ನೆ ಕೇಳತೊಡಗುವುದೆ? ಏನಾಗಿದೆ ಎಂದು ಕಂಡು ಹಿಡಿಯಲು ತಾನೆ ನಾವು ವೈದ್ಯರ ಹತ್ತಿರ ಹೋಗುವುದು? ಹಿಂದೆಲ್ಲಾ ನಮ್ಮೂರಿನ ಡಾಕ್ಟರುಗಳ ಬಳಿ ಹೋದರೆ ಇಷ್ಟೆಲ್ಲಾ ತಾಪತ್ರಯವೆ ಇರುತ್ತಿರಲಿಲ್ಲ. 'ಏನಾಗಿದೆಯೋ ನಿನಗೆ?' ಎಂಬ ಲೋಕಾಭಿರಾಮದ ಪ್ರಶ್ನೆಯೊಂದಿಗೆ ಆರಂಭಿಸುತ್ತಿದ್ದರು. ಅದಕ್ಕೆ ಉತ್ತರಿಸಲು ಬಾಯಿ ಬಿಚ್ಚುವ ಮೊದಲೆ ಕೈ ಹಿಡಿದು ನಾಡಿ ನೋಡಿ, ಸ್ಟೆತಾಸ್ಕೋಪನ್ನು ಎದೆ ಬೆನ್ನ ಮೇಲೆಲ್ಲಾ ಹರಿದಾಡಿಸಿ, ಗಂಟಲನ್ನು ಆಕಳಿಸಿಸಿ, ನಾಲಿಗೆ ನೋಡಿ ನಾವು ಏನಾದರೂ ಹೇಳುವ ಮೊದಲೆ ಜ್ವರ, ಕೆಮ್ಮು, ನೆಗಡಿಯಾದಿಗಳ ಕಿತಾಪತಿಯನ್ನು ಪತ್ತೆ ಮಾಡಿಕೊಂಡು ಬಿಡುತ್ತಿದ್ದರು. ಆಮೇಲೇನಿದ್ದರೂ ಸಾರಿಗೆ ಒಗ್ಗರಣೆ ಹಾಕಿದ ಹಾಗೆ 'ಡಾಕ್ಟರೆ ಸ್ವಲ್ಪ ಹೊಟ್ಟೆ ನೋವಿದೆ?' ' ರಾತ್ರಿಯಿಂದ ಯಾಕೊ ತೀರಾ ಸುಸ್ತು ಡಾಕ್ಟರೆ, ಮೂರ್ನಾಲ್ಕು ಸಾರಿ ಭೇಧಿನೂ ಆಯ್ತು..' 'ಕೈ ಕಾಲೆ ಬಿದ್ದು ಹೋದಂಗಾಗಿದೆ ಡಾಕ್ಟರೆ' ಎಂದೆಲ್ಲಾ ಸೇರಿಸಿದರೆ ತಾವಾಗಲೆ ಕೊಡಬಯಸಿದ ಔಷಧಿಗೆ ಇನ್ನೊಂದಷ್ಟು ಸೇರಿಸಿ ಕೊಟ್ಟರೆ ಮುಗಿಯಿತು, ಮತ್ತೆ ಅವರ ಹತ್ತಿರ ಹೋಗುವ ಅವಶ್ಯಕತೆಯೆ ಬರದಂತೆ ಔಷಧಿ ಕೆಲಸ ಮಾಡಿಬಿಟ್ಟಿರುತ್ತಿತ್ತು. ಇನ್ನೂ ಕೆಲವೊಮ್ಮೆ ಅವರ ಔಷಧಿಗಿಂತ ಮಾತಿನ ಮಾತ್ರೆಯೆ ಹೆಚ್ಚು ಕೆಲಸ ಮಾಡಿಬಿಡುತ್ತಿತ್ತು... ಜತೆಗೆ ಅಂಜಂಜುತ್ತಲೆ 'ಊಟ ಏನು ತಿನ್ನ ಬಹುದು ಡಾಕ್ಟ್ರೆ..?' ಎಂದು ಪೆಚ್ಚುಮುಖದಲ್ಲೆ ಕೇಳಿದರೂ ' ನಿಂಗೇನಾಗಿದಿಯೊ? ಕಲ್ಲು ಗುಂಡು ಇದ್ದ ಹಾಗಿದ್ದೀಯ.. ಏನು ಬೇಕಾದ್ರೂ ತಿನ್ನು ಹೋಗೊ.. ಯು ಆರ್ ಪರ್ಫೆಕ್ಟ್ ಲಿ ಆಲ್ರೈಟ್.. ಕೋಳಿ-ಕುರಿ-ಮೀನು ಏನು ಬೇಕಾದ್ರೂ ತಿನ್ನು ಹೋಗು, ಸ್ವಲ್ಪ ಎಣ್ಣೆ, ಮಸಾಲೆ ಕಮ್ಮಿ ಹಾಕ್ಕೊಂಡು...' ಅನ್ನುವ ಅವರ ಮಾತನ್ನು ಅಕ್ಷರ ಸಹಿತ ಪಾಲಿಸದೆ ಪಥ್ಯ ಮಾಡಿಕೊಂಡರೂ, ಆ ಮಾತಿನ ಧೈರ್ಯಕ್ಕೆ ಅರ್ಧ ಕಾಯಿಲೆ ವಾಸಿಯಾಗಿ ಹುಮ್ಮಸ್ಸು ಬಂದುಬಿಟ್ಟಿರುತ್ತಿತ್ತು . 'ಇಷ್ಟೊಂದು ಜಡ್ಡಲ್ಲಾ ಶಿವನೆ?' ಎಂದು ಹೋದವನು 'ಇಷ್ಟೇನಾ ಇದರ ಕತೆ?' ಎನ್ನುವಂತಾಗಿ ಎದೆಯುಬ್ಬಿಸಿಕೊಂಡು ಬರುವಂತಾಗಿ ಬಿಡುತ್ತಿತ್ತು. ಆ ಮಾತಿನ ಧೈರ್ಯದಲ್ಲೆ ಆಸೆ ತಡೆಯಲಾಗದೆ, ನಾಲಿಗೆ ರುಚಿ ಕೆಟ್ಟಿದೆಯೆಂದು ನೆಪ ಹೇಳಿಕೊಂಡು ಮನೆಯಲ್ಲಿ ಬೇಡ ಅಂದರು ಕಾರ, ಮಸಾಲೆಯನ್ನೆಲ್ಲ ಸೇರಿಸಿಕೊಂಡು ಗಡದ್ದಾಗೆ ತಿಂದಿದ್ದು ಉಂಟು.. ಅಷ್ಟಿದ್ದರೂ ಆ ಔಷಧಿಯ ರಾಮಬಾಣಕ್ಕೆ ಜಡ್ಡಿನ ಕುರುಹೆ ಇಲ್ಲದಂತೆ ಸಂಪೂರ್ಣ ಮಂಗಮಾಯ... ಅರ್ಧಂಬರ್ಧ ಔಷಧಿ ಖಾಲಿಯಾಗುವ ಮೊದಲೆ ಜಡ್ಡಿತ್ತು ಎನ್ನುವ ಗುರುತು ಇಲ್ಲದವರಂತೆ ಆಟದ ಬಯಲಿನಲ್ಲಿರುತ್ತಿದ್ದೆವು ಆ ದಿನಗಳಲ್ಲಿ ! ಈಗ ಆಗಿನ ಡಾಕ್ಟರುಗಳೂ ಇಲ್ಲ, ಆಗಿದ್ದ ವಯಸ್ಸೂ ಇಲ್ಲ, ಸದೃಢ ದೇಹವೂ ಇಲ್ಲಾ. ಆಗಿನ ಕಾಯಿಲೆಗಳೂ ಇಲ್ಲಾ ಅನ್ನುವುದು ಬೇರೆ ವಿಷಯ ಬಿಡಿ :-)
ಮೊದಲಿಗೆ, ಈ ದೇಶದ ವೈದ್ಯರ ಹತ್ತಿರ ಹಾಗೆ ಕೈ ಹಿಡಿದು ನೋಡಿ ರೋಗ ಪತ್ತೆ ಮಾಡುವ ಪದ್ದತಿಯೆ ಇಲ್ಲ. ಎಲ್ಲಾ ಲಕ್ಷಣಗಳನ್ನು ನೀವೆ ಬಾಯಿ ಬಿಟ್ಟು ಹೇಳಬೇಕು - ಯಾವುದೂ ಮರೆಯದಂತೆ. ಏನಾದರು ಏಮಾರಿದಿರೊ ಅಷ್ಟೆ - ಬರಿ ಜ್ವರವೆಂದರೆ ಅಷ್ಟಕ್ಕೆ ಮಾತ್ರೆ ಕೊಟ್ಟು ಸಾಗಹಾಕಿಬಿಡುತ್ತಾರೆ ! ನನಗೆಷ್ಟೊ ಬಾರಿ ನನ್ನ ಹೆಸರೆ ಸರಿಯಾಗಿ ನೆನಪಿರುವುದಿಲ್ಲ, ಇನ್ನೂ ಆಗಿಗೊಮ್ಮೆ ಬರುವ ರೋಗ ಲಕ್ಷಣ, ಚಿಹ್ನೆಗಳನ್ನು ಒಂದೂ ಮರೆಯದಂತೆ ಹೇಗೆ ವಿವರಿಸುವುದು? ಸಾಲದ್ದಕ್ಕೆ ಹೇಳಬೇಕಾದ್ದನ್ನು ಮೊದಲು ಕನ್ನಡದಲ್ಲಿ ಆಲೋಚಿಸಿ ನಂತರ ಅದನ್ನು ಮೆದುಳಿನ ಕಂಪ್ಯೂಟರಿಗೆ ರವಾನಿಸಿ ಇಂಗ್ಲೀಷಿಗೆ ಭಾಷಾಂತರಿಸಿಕೊಳ್ಳಬೇಕು (ಉದಾಹರಣೆಗೆ ಗಂಟಲಲ್ಲಿ ಕಫ ಇದೆಯೆಂದೊ, ಮೂಗು ಕಟ್ಟಿದೆಯೆಂದೊ.....). ಜ್ವರ, ನೆಗಡಿ, ಕೆಮ್ಮಿಗೇನೊ ಚಕ್ಕನೆ ಸಿಗುವ ಅನುವಾದ, ಕಫದಂತಹ ಹೆಸರಿಗೆ ಚಕ್ಕನೆ ಸಿಗುವುದಿಲ್ಲ. ನಾನಂತೂ 'ಬ್ಲಾಕ್ಡ್ ಥ್ರೋಟ್' ಅಂತ ಹೇಳಿಕೊಂಡು ನಿಭಾಯಿಸಿದ್ದೆ ಹೆಚ್ಚು. ಒಮ್ಮೆ ಯಾರೊ ಒಬ್ಬ ವೈದ್ಯ ಮಹಾಶಯ ' ವಾಟ್ ಇಸ್ ದ ಕಲರ್ ಆಫ್ ದ ಸ್ಪೂಟಂ - ಯೆಲ್ಲೊ, ಗ್ರೀನ್ ಆರ್ ಗ್ರೇ ?' ಎಂದು ಕೇಳಿದಾಗಲೆ 'ಸ್ಪೂಟಂ' ಅನ್ನೊ ಮೆಡಿಕಲಿ ಫಿಟ್ ಪದ ಬಳಸಬಹುದು ಅನ್ನೊ ಜ್ಞಾನೋದಯವಾಗಿದ್ದು... ಅಂತೂ ಹೇಗೊ ಹೆಣಗಿ ರೋಗ ಲಕ್ಷಣದ ವರದಿ ಸಲ್ಲಿಸಿಬಿಟ್ಟರೆ ಮುಗಿಯಿತು - ನಿಮ್ಮ ಎರಡೆ ನಿಮಿಷದ ಭೇಟಿ ಮುಗಿದಂತೆ ಲೆಕ್ಕ. ಆಮೇಲೆ ಹೊರಗೆ ಬಂದು ಇನ್ನರ್ಧ ಗಂಟೆ ಕಾಯಬೇಕು ಔಷಧಿಯ ಪೊಟ್ಟಣ ಕೊಡುವ ತನಕ. ಎರಡು ನಿಮಿಷದ ವೈದ್ಯರ ಭೇಟಿಗೆ ಎರಡು ಗಂಟೆ ಕಾಯಬೇಕೆನ್ನುವುದು ತೀರಾ ಅನ್ಯಾಯವಾದರು, ಬೇರೆ ದಾರಿಯಾದರೂ ಎಲ್ಲಿದೆ? ಸಾಲದ್ದಕ್ಕೆ ಇನ್ಶೂರೆನ್ಸ್ ಕಾರ್ಡಿನ ಗಿರಾಕಿಗಳೆಂದರೆ ಸಾಲದ ಗಿರಾಕಿಗಳಂತೆ ಸ್ವಲ್ಪ ಅಸಡ್ಡೆಯೂ ಇರುವುದೋ ಏನೊ - ನಗದು ಗಿರಾಕಿಗಳಿಗೆ ಹೋಲಿಸಿದರೆ !
ಒಂದು ಕಡೆ ಒಂದೆರಡೆ ನಿಮಿಷದಲ್ಲಿ ಮುಗಿದುಹೋಗುವ ವ್ಯವಹಾರದ ಸಲುವಾಗಿ ಗಂಟೆಗಟ್ಟಲೆ ಕಾಯಬೇಕಲ್ಲಾ ಎನ್ನುವ ಉರಿಯಾದರೆ ಮತ್ತೊಂದೆಡೆ ಅಷ್ಟು ಕಾದರು ಬರಿ ಒಂದೆರಡು ಗಳಿಗೆಯ ಕ್ಷಣಗಣನೆಯಲ್ಲಿ ಎಲ್ಲಾ ಮುಗಿದು ಹೋಗುವುದಲ್ಲ ಎನ್ನುವ ಆತಂಕ... ಆ ಕ್ಷಿಪ್ರ ಮೂಹೂರ್ತದಲ್ಲಿ ಆ ವೈದ್ಯ ಮಹಾಶಯನೇನು ನೆಟ್ಟಗೆ ಪರೀಕ್ಷಿಸುತ್ತಿದ್ದಾನಾ? ಅಥವಾ ಉದ್ದನೆಯ 'ಕ್ಯೂ'ವನ್ನು ಸಾಧ್ಯವಾದಷ್ಟು ಬೇಗ ಸಾಗಹಾಕಲು ಕಾಟಾಚಾರಕ್ಕೆ, ಯಾಂತ್ರಿಕವಾಗಿ ತನ್ನ ಕೆಲಸ ನಿಭಾಯಿಸುತ್ತಿದ್ದಾನಾ? ಎಂಬೆಲ್ಲಾ ಆತಂಕಗಳು ಸೇರಿಕೊಂಡು ಮನಸನ್ನು ಮತ್ತಷ್ಟು ಉದ್ವಿಗ್ನವಾಗಿಸಿ ಕಾಡತೊಡಗುತ್ತವೆ . ಸಾಲದ್ದಕ್ಕೆ ನಾವೇ ನಮಗಿರುವ ಎಲ್ಲಾ ರೋಗಲಕ್ಷಣಗಳನ್ನು ವಿವರಿಸಬೇಕೆನ್ನುವ ಆತಂಕವೂ ಜತೆ ಸೇರಿಕೊಂಡು, ಆ ಹೊತ್ತಿನ ಗಾಬರಿಯಲ್ಲಿ ಹೇಳಬೇಕೆಂದು ಒಂದೇ ಸಮನೆ ಉರು ಹೊಡೆದುಕೊಂಡು ನೆನಪಿನಲಿಟ್ಟುಕೊಂಡಿದ್ದ ಜಡ್ಡಿನ ಚಹರೆಗಳಲ್ಲೆಲ್ಲ ಕಲಸುಮೇಲೋಗರವಾಗಿ ಆ ವೈದ್ಯಮೂರ್ತಿಯ ಮುಂದೆ ಕುಳಿತು ಮಾತಾಡುವ ಹೊತ್ತಿಗೆ ಸರಿಯಾಗಿ ಹೇಳಬೇಕೆಂದುಕೊಂಡದ್ದರಲ್ಲಿ ಅರ್ಧಕ್ಕರ್ಧ ಮರೆತಂತೆಯೊ, ಉಲ್ಟಾಪಲ್ಟಿಯೊ ಆಗಿಬಿಟ್ಟಿರುತ್ತದೆ. ಕೊನೆಗೆ ಮನೆಗೆ ವಾಪಸ್ಸಾಗುವ ಹೊತ್ತಿಗೆ ಸರಿಯಾಗಿ ನಡುದಾರಿಯಲ್ಲಿ, ಹೇಳಬೇಕೆಂದು ಪದೆ ಪದೆ ನೆನಪಿಸಿಕೊಳ್ಳುತ್ತಿದ್ದ ಮುಖ್ಯ ಚಹರೆಯೊಂದನ್ನು ಹೇಳಲಿಲ್ಲವೆಂದು ತಟ್ಟನೆ ನೆನಪಾಗಿ, 'ಅರೆರೆ ! ಇದನ್ನು ಹೇಳಲೆ ಮರೆತುಬಿಟ್ಟೆನಲ್ಲಾ!?' ಎಂದು ಖೇದವಾಗುವುದು ಸಾಮಾನ್ಯ ಅನುಭವ. ಇದರ ನಡುವೆಯೆ ವೈದ್ಯರ ಮುಂದೆ ಕುಳಿತಿದ್ದ ಹೊತ್ತಿನಲ್ಲಿ ಆತ ನನ್ನನ್ನೆ ಏನಾಗಿದೆ ಎಂದು ಕೇಳಿದಾಗೆಲ್ಲ ಚಕ್ಕನೆ 'ಇವನು ನುರಿತ ವೈದ್ಯನಾ ಅಥವಾ ಅರೆಬರೆ ಬೆಂದವನಾ' ಎನ್ನುವ ಅನುಮಾನದ ಭೂತವು ಬಂದು ಸೇರಿಕೊಂಡು ನೆನಪಿನಲ್ಲಿದ್ದ ಅಷ್ಟಿಷ್ಟರಲ್ಲೂ ಖೋತಾ ಆಗುವಂತೆ ಮಾಡಿಬಿಡುತ್ತದೆ.. ಹೇಳಿ ಕೇಳಿ ಅದನ್ನೆಲ್ಲಾ ಕೂಲಂಕುಷವಾಗಿ ಪರೀಕ್ಷಿಸಿ, ವಿಚಾರಿಸಿ, ವಿಶ್ಲೇಷಿಸಿ ಪತ್ತೆ ಮಾಡಬೇಕಾದ ಹೊಣೆ ಅವನದಿರಬೇಕಲ್ಲವೆ?
ಹಾಗೆಂದು ಬಂದ ಹೊಸದರಲ್ಲೊಮ್ಮೆ ನನ್ನ ಸಹೋದ್ಯೋಗಿ ಮೋಹನನಲ್ಲು ಗೋಳಾಡುತ್ತ ಅದೇ ದೂರು ಹೇಳಿಕೊಂಡಿದ್ದೆ. ಅದಕ್ಕವನು ಯಾವುದೊ ಬಲಿಪಶುವನ್ನು ನೋಡುವಷ್ಟೆ ಕನಿಕರ ಭಾವದಿಂದ ನೋಡುತ್ತ, 'ಅಯ್ಯೊ, ಅವರನ್ನೆಲ್ಲ ಅಷ್ಟೊಂದು ಪೆದ್ದುಗಳು, ಗುಗ್ಗುಗಳು ಅಂದುಕೊಳ್ಳಬೇಡಿ... ನೀವು ಹೇಳಿದ್ದಷ್ಟನ್ನೆ ಬರೆದುಕೊಂಡು ಅದಕ್ಕೆ ಮಾತ್ರ ಔಷಧಿ ಕೊಟ್ಟರೆ ಅವರಿಗೆ ಸೇಫು. ನಾಳೆ ಏನಾದರು ಹೆಚ್ಚು ಕಡಿಮೆಯಾಗಿ ಪೇಷೆಂಟುಗಳು ಕೋರ್ಟು ಗೀರ್ಟು ಕೇಸು ಗೀಸು ಅಂತ ತರಲೆ ಮಾಡಿದರೆ, ಈ ರೆಕಾರ್ಡು ತೋರಿಸಿ ರೋಗಿ ಹೇಳಿದ ಲಕ್ಷಣಕ್ಕೆ ಔಷಧಿ ಕೊಟ್ಟಿದ್ದೆಂದು, ರೋಗಿಯೆ ಸರಿಯಾದ ಲಕ್ಷಣ ಹೇಳಿಕೊಳ್ಳದಿದ್ದರೆ ವೈದ್ಯರಾಗಿ ಅದರಲ್ಲಿ ತಮ್ಮ ತಪ್ಪೇನು ಇಲ್ಲವೆಂದು ವಾಧಿಸಿ ಜಾರಿಕೊಂಡುಬಿಡಬಹುದಲ್ಲಾ? ಅದಕ್ಕೆ ಅವರ ಎಲ್ಲಾ ಪ್ರಕ್ರಿಯೆಗಳು ಅವರು ಬಲಿಪಶುಗಳಾಗದಂತೆ ನೋಡಿಕೊಳ್ಳುವ ರೀತಿಯಲ್ಲಿ ಸೃಜಿಸಲ್ಪಟ್ಟಿರುತ್ತದೆ.. ನಿಮ್ಮ ಸೇಫ್ಟಿ ನೀವು ನೋಡಿಕೊಳ್ಳಬೇಕೆಂದರೆ ಎಲ್ಲಾ ಚಹರೆ, ಲಕ್ಷಣಗಳನ್ನು ಸರಿಯಾಗಿ ಹೇಳುವುದು ನಿಮ್ಮ ಹಣೆಬರಹವೆ ಹೊರತು ವೈದ್ಯರ ಜವಾಬ್ದಾರಿಯಲ್ಲ' ಎಂದು ಉಪದೇಶಿಸಿದ್ದ. ಅವನು ಹೇಳಿದಂತೆ ಈ ವೈದ್ಯ ಮಹಾನುಭಾವನೂ
ನಾವು ಹೇಳಿದ ಲಕ್ಷಣ ಚಿಹ್ನೆಗಳನ್ನೆ ಬರೆದಿಟ್ಟುಕೊಂಡು ಪ್ರತಿಯೊಂದಕ್ಕೂ - ತಲೆನೋವಿದೆಯೆಂದಿದ್ದಕ್ಕೊಂದು, ಜ್ವರಕ್ಕೊಂದು, ನೆಗಡಿಗೊಂದು, ಕೆಮ್ಮಿಗೊಂದು, ಮೈಕೈ ನೋವಿಗೊಂದು ಎಂದೆಲ್ಲ ಮಾತ್ರೆ ಔಷಧಿ ಕೊಡುವ ಪರಿ ಗಮನಿಸಿ, ಅಲ್ಲಿಂದ ಮುಂದೆ ಪ್ರತಿ ಬಾರಿಯೂ ಎಚ್ಚರಿಕೆ ವಹಿಸಿಕೊಂಡು ಒಂದು ಚೀಟಿ ಬರೆದಿಟ್ಟುಕೊಂಡೆ ಹೋಗುತ್ತಿದ್ದೆ - ಯಾವ ಲಕ್ಷಣವು ಮರೆತು ಹೋಗದ ಹಾಗೆ.. ಹೇಳುವುದನ್ನು ಮರೆತರೆ ಆ ಔಷಧಿ ಕೊಡುವುದಿಲ್ಲವಲ್ಲಾ ?
ಅದು ಅಷ್ಟಕ್ಕೆ ಮುಗಿದರೆ 'ಹಾಳಾಗಲಿ' ಎಂದು ಬೈದುಕೊಂಡು ಸುಮ್ಮನಿದ್ದುಬಿಡಬಹುದಿತ್ತು - ಆದರೆ ಅದು ಇಡೀ ಪುರಾಣದ ಒಂದು ಮಗ್ಗುಲು ಮಾತ್ರವಷ್ಟೆ. ಮೊದಲಿಗೆ ನೆಗಡಿ, ಗಂಟಲು ನೋವು, ಮೈಕೈ ನೋವು, ಜ್ವರದ ರೂಪದಲ್ಲಿ ಕಾಣಿಸಿಕೊಂಡ ಜಡ್ಡಿಗೆ ವೈದ್ಯೇಂದ್ರರೇನೊ ನಿಯ್ಯತ್ತಾಗಿ ಆಯಾಯ ಲಕ್ಷಣಕ್ಕೆ ತಕ್ಕ ಮದ್ದಿನ ಮಾತ್ರೆ ಕೊಟ್ಟುಬಿಡುತ್ತಾರೆ ನಿಜ. ಸಾಲದ್ದಕ್ಕೆ ಜತೆಗೊಂದಷ್ಟು 'ಆಂಟಿ ಬಯಾಟಿಕ್' ಮಾತ್ರೆಗಳನ್ನು ಜತೆಗೆ ಸೇರಿಸಿ ಅದರ ಕೋರ್ಸನ್ನು ತಪ್ಪದೆ ಮುಗಿಸಬೇಕೆಂದು ಎಚ್ಚರಿಕೆ ಕೊಟ್ಟು ಸಾಗ ಹಾಕಿಬಿಡುತ್ತಾರೆ (ಅದಕ್ಕೂ ನೀವು ತುಂಬಾ ನೋವಿದೆಯೆಂದೊ, ಸುಸ್ತಾಗುತ್ತಿದೆಯೆಂದೊ, ಎರಡು ದಿನದಿಂದಲೂ ನರಳುತ್ತಿರುವೆನೆಂದೊ ಬಾಯಿ ಬಿಟ್ಟು ಹೇಳಬೇಕು. ಇಲ್ಲವಾದರೆ ಸರಿ ಸುಮಾರು ಎಲ್ಲಾ ಕೇಸುಗಳಲ್ಲೂ ಬರಿ ಮಾಮೂಲಿ ಔಷಧಿಯಷ್ಟೆ ದಕ್ಕುವುದು). 'ಆಂಟಿ ಬಯಾಟಿಕ್' ಬಲವದೆಷ್ಟು ತೀವ್ರವಾಗಿ ಇರುತ್ತದೆಂದರೆ, ತೆಗೆದುಕೊಳ್ಳಲಾರಂಭಿಸಿದ ಅರ್ಧ ದಿನದಲ್ಲೆ ಜಡ್ಡಿನ ಲಕ್ಷಣವೆ ಮಂಗಮಾಯವಾಗಿಬಿಟ್ಟಿತೇನೊ ಎನ್ನುವ ಭ್ರಮೆ ಹುಟ್ಟಿಸುವಷ್ಟು ತೀಕ್ಷ್ಣಶಕ್ತಿಯದು. ಅದರ ಬಲದಲ್ಲಿ 'ನಿಜವಾಗಿಯೂ ಜಡ್ಡಾಗಿತ್ತಾ?' ಎಂದು ನಮಗೆ ಅನುಮಾನವಾಗುವಷ್ಟು ಹುರುಪು ತರಿಸಿಟ್ಟುಬಿಡುತ್ತದೆ ದೇಹದ ಪೂರಾ. ಒಂದು ಹೊತ್ತು ಆ ಮಾತ್ರೆ, ಔಷಧಿ ನಿಲ್ಲಿಸದ ಹೊರತು ಆ ಹುಸಿ ಉತ್ಸಾಹವೆಲ್ಲ ಆ ಔಷಧದ ಪ್ರಭಾವ, ಪರಾಕ್ರಮ ಎಂದು ಅರಿವೆ ಆಗುವುದಿಲ್ಲ. ಒಂದೇ ದಿನದ 'ಮೆಡಿಕಲ್ ಲೀವ್'ನಲ್ಲೆ ನಿಭಾಯಿಸಿ ಮರುದಿನವೆ ಕೆಲಸಕ್ಕೆ ಹಾಜಾರಾಗಿ, ಔಷಧಿ ಸೇವಿಸುತ್ತಲೆ ಕೆಲಸ ಮಾಡಿಕೊಂಡು ಏನೂ ಆಗದವರಂತೆ ಸೋಗು ಹಾಕಿಕೊಂಡಿದ್ದುಬಿಡಬಹುದು - ಒಳಗೊಳಗೆ ಏನೊ ಹರುಷವಿಲ್ಲವೇನೊ ಎಂದನಿಸುವ ಅನುಮಾನ ಕಾಡುತ್ತಿದ್ದರೂ ಸಹ. ಸಾಧಾರಣ ಹೈ ಡೋಸೇಜಿನ ಆ ಮಾತ್ರೆ, ಔಷಧಿಗಳು ಒಂದು ವಾರದ ಹೊತ್ತಿಗೆ ಮುಗಿದಾಗಲೆ , 'ಅರೆರೆ ..? ಯಾಕೊ ಇನ್ನು ಸುಸ್ತಾಗುವಂತೆ ಕಾಣುತ್ತಿದೆಯಲ್ಲಾ?' ಅನಿಸುವುದು. ಅದು ಸಾಲದೆನ್ನುವಂತೆ ಜ್ವರ, ನೆಗಡಿ, ವಾಸಿಯಾದಂತೆನಿಸಿದರೂ ಯಾಕೊ ಅತಿಸಾರವಾಗುತ್ತಿದೆಯಲ್ಲಾ? ಅನಿಸುವುದಕ್ಕು ಶುರು.. ಅಲ್ಲದೆ ಕೆಮ್ಮಿನ ಔಷಧಿ ಮುಗಿದರೂ ಯಾಕೊ ಒಣಕೆಮ್ಮು ಮಾತ್ರ ಕೈಬಿಡದೆ ಬೆನ್ನು ಹತ್ತುತ್ತ ಕನಿಷ್ಠ ಎರಡು ಮೂರು ವಾರವಾದರೂ ಕಾಡುತ್ತಲೆ ಇರುವುದು... ಆಗಲೆ ಅನುಮಾನ ಶುರು - ಈ ಔಷಧಿಗಳು ಮೂಲ ದೋಷ ಹುಡುಕಲೊಲ್ಲದ ಡಾಕ್ಟರನ ದೌರ್ಬಲ್ಯಕ್ಕೆ, ಹೊರ ಲಕ್ಷಣಕ್ಕೆ ಮಾತ್ರ ನೀಡಿದ ಮದ್ದೆ? ಎಂದು. ಒಂದು ಲಕ್ಷಣಕ್ಕೆ ಮದ್ದು ಕೊಟ್ಟು ಅದನ್ನಿನ್ನೊಂದಾಗಿ ಬದಲಿಸಿದರೆ ಆಮೇಲೆ ಅದಕ್ಕೆ ಬೇರೆ ಮದ್ದು ಕೊಡಬಹುದಲ್ಲಾ? ಹೀಗೆ ಒಂದೊಂದಾಗಿ ಕಾಣಿಸಿಕೊಂಡ ಹೊಸ ಲಕ್ಷಣಕ್ಕೆ ಔಷಧಿ ಕೊಡುತ್ತಾ ಹೋದರೆ ಯಾವುದಾದರೂ ಒಂದು ಹಂತದಲ್ಲಿ ಚಿರಪರಿಚಿತ ವ್ಯಾಧಿ ಲಕ್ಷಣಕ್ಕೆ ತಿರುಗಿದಾಗ ವಾಸಿಯಾಗುವ ಸಾಧ್ಯತೆ ಇದ್ದೇ ಇರುತ್ತದಲ್ಲಾ? ಇನ್ನೊಮ್ಮೊಮ್ಮೆ ಅನಿಸಿಬಿಡುತ್ತದೆ 'ಛೇ! ಇರಲಾರದೇನೊ? ಬಹುಶಃ ವಯಸಾಗುತ್ತಿದ್ದಂತೆ ನಮ್ಮ ದೇಹವೆ ದುರ್ಬಲವಾಗಿಬಿಡುತ್ತಿದೆ' ಎಂದು. ಆದರೆ ಗೆಳೆಯ ಮೋಹನ ಮಾತ್ರ ಇದನ್ನು ಒಪ್ಪುವುದೇ ಇಲ್ಲ. ಅದಕ್ಕೆ ಅವನದೆ ಆದ ಬೇರೆ ಸಿದ್ದಾಂತವೆ ಇದೆ ಎನ್ನಿ!
ಇಲ್ಲೆಲ್ಲ ಯಾವಾಗ ಕಾಯಿಲೆ ಬಿದ್ದರೂ ನಿಗದಿ ಪಡಿಸಿದ ಚಿಕಿತ್ಸಾಲಯಗಳಿಗೆ ಮಾತ್ರವೆ ಹೋಗಬೇಕೆಂದು ಹೇಳಿದ್ದೆನಲ್ಲವೆ? ಅದಕ್ಕೆ ಕಾರಣವೇನೆಂದರೆ ನಾವು ಕೆಲಸ ಮಾಡುವ ಕಂಪನಿಗಳು ಕಾಯಿಲೆ ಬಿದ್ದಾಗ ನಮ್ಮ ವೈದ್ಯೋಪಚಾರವನ್ನು ನಿಭಾಯಿಸುವ ಹೊಣೆಯನ್ನು ಇನ್ಶೂರೆನ್ಸಿನ ಕಂಪನಿಗಳಿಗೆ ವಹಿಸಿಬಿಟ್ಟಿರುತ್ತವೆ. ಹೀಗಾಗಿ ನಮ್ಮ ಆರೋಗ್ಯದ ನಿಭಾವಣೆಯ ಖರ್ಚೆಲ್ಲಾ ನಮ್ಮ ಕಂಪನಿಯ ಬದಲು ಇನ್ಶ್ಯೂರೆನ್ಸ್ ಕಂಪನಿಯ ತಲೆಗೆ ಬರುವುದು. ಅದಕ್ಕೆ ನಮ್ಮ ಕಂಪನಿ ದೊಡ್ಡ ಮೊತ್ತದ 'ಉದ್ಯೋಗಿಗಳ ಸಮೂಹ ವಿಮೆ' ಮಾಡಿಸಿ ಅದಕ್ಕೆ ತಗಲೊ ಮೊತ್ತದ ವಾರ್ಷಿಕ ಪ್ರೀಮಿಯಂ ಕಟ್ಟಿಬಿಟ್ಟರೆ ಆಯ್ತು. ಹೀಗಾಗಿ ಆ ವಿಮಾ ಕಂಪನಿಗಳು ಗುರುತಿಸಿದ ಅದೆ ದವಾಖಾನೆಗಳಿಗೆ ಹೋಗಬೇಕು; ಯಾಕೆಂದರೆ ಆ ಚಿಕಿತ್ಸಾಲಯಗಳು ಮಾತ್ರವೆ ಅವರೊಡನೆ ಪೂರ್ವ ನಿಯೋಜಿತ ಒಪ್ಪಂದ ಮಾಡಿಕೊಂಡಿರುವಂತಹವು. ಆ ವೈದ್ಯರುಗಳು ವಿಮೆಯ ಕಂಪನಿಗಳಿಗೆ ಮೋಸವಾಗದ ಹಾಗೆ ಬಿಗಿ ನೀತಿ ಅನುಸರಿಸುತ್ತ, ನಿಜವಾಗಿಯೂ ಅವಶ್ಯವಾದ ಚಿಕಿತ್ಸೆಗಳನ್ನು ಮಾತ್ರ ನೀಡುತ್ತ ಆ ಸವಲತ್ತಿನ ದುರ್ಬಳಕೆ ಆಗದಂತೆ ನೋಡಿಕೊಳ್ಳುವಂತಹವರು. ಅವರು ಮೆಡಿಕಲ್ ಸರ್ಟಿಫಿಕೇಟ್ ನೀಡಿದರೆ ಮಾತ್ರ ಕೆಲಸಕ್ಕೆ ಮೆಡಿಕಲ್ ರಜೆ ಹಾಕಲು ಸಾಧ್ಯ. ಹೀಗಾಗಿ ಕಂಪನಿಗಳೂ ಕೂಡ ಕಳ್ಳ ರಜೆ ಹಾಕುವವರ ಮೇಲೆ ಒಂದು ಕಣ್ಣಿಡಲು ಸಾಧ್ಯ - ಅದೇ ವೈದ್ಯರ ಮೂಲಕ. ಹೀಗೆ ಕಂಪನಿಗಳ, ವಿಮಾ ಸಂಸ್ಥೆಗಳ, ವೈದ್ಯರ ಮತ್ತು ಕೆಲಮಟ್ಟಿಗೆ ಉದ್ಯೋಗಿಗಳ ಮೇಲೆ ಪರಸ್ಪರ ಅವಲಂಬನೆ, ನಿಯಂತ್ರಣಗಳನ್ನು ಒಂದೆ ವ್ಯವಸ್ಥೆಯಲ್ಲಿ ಒದಗಿಸುವ ಕಾರಣ ಎಲ್ಲರೂ ಅದಕ್ಕೆ ಹೊಂದಿಕೊಂಡೆ ನಡೆಯಬೇಕಾಗುತ್ತದೆ - ನಂಬಿಕೆಗಿಂತ ಮಾಹಿತಿ ನೈಜಾಂಶಗಳ ಮೇಲೆ ನಡೆಯುವ ಸೂತ್ರವಾದರೂ ಸಹ.
ಆದರೆ ಹೇಳಿ ಕೇಳಿ ಇದು ಗ್ರಾಹಕರ ಯುಗ. ಈ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕಂಪನಿಯು ಗ್ರಾಹಕರನ್ನು ಮೆಚ್ಚಿಸಿ ತಮ್ಮ ತೆಕ್ಕೆಗೆ ಎಳೆದುಕೊಂಡು ಅವರನ್ನು ಅಲ್ಲೆ ನಿರಂತರವಾಗಿ ನಿರ್ಬಂಧಿಸಿಟ್ಟುಕೊಳ್ಳಲು ಏನೆಲ್ಲಾ ತರಹಾವರಿ ಸರ್ಕಸ್ಸುಗಳನ್ನು ಮಾಡುತ್ತಲೇ ಇರುತ್ತವೆ - ಗುಣಮಟ್ಟ ಹೆಚ್ಚಿಸುತ್ತ, ಸೇವೆಯ ವ್ಯಾಪ್ತಿ ವಿಸ್ತರಿಸುತ್ತ, ಸೋಡಿ ನೀಡುತ್ತಾ, ಮಾರಾಟ ದರ ತಗ್ಗಿಸುತ್ತಾ ಇತ್ಯಾದಿ, ಇತ್ಯಾದಿ. ಹೀಗಾಗಿ ಕಂಪನಿಯ ಮೇಲೆ ಗ್ರಾಹಕರನ್ನು ಮೆಚ್ಚಿಸುವ ಸೂಕ್ತ ಕ್ರಮ ಕೈಗೊಳ್ಳುವ ನಿರಂತರ ಒತ್ತಡ ಇದ್ದೇ ಇರುತ್ತದೆ. ಅದರಲ್ಲೂ ಶೇರು ಮಾರುಕಟ್ಟೆಯಲ್ಲಿರುವ ಕಂಪನಿಯಾದರಂತು ಸದಾ ಶೇರುದಾರರ ಕೆಂಗಣ್ಣಿನಡಿಯಲ್ಲಿಯೆ ಇರುವುದರಿಂದ ಸದಾಸರ್ವದಾ ಲಾಭದ ಹವಣಿಕೆಯಲ್ಲೆ ಇರಬೇಕಾದ ಅನಿವಾರ್ಯವಿರುತ್ತದೆ. ಹೀಗಾಗಿ ಕಂಪನಿಗಳು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ದಕ್ಷತೆ ಮತ್ತು ಕ್ಷಮತೆಯನ್ನು ಹೆಚ್ಚಿಸುವ ಅವಕಾಶಗಳಿಗಾಗಿ ಹುಡುಕುತ್ತಲೆ ಇರುತ್ತದೆ. ಅದರಲ್ಲಿ ಬಲು ಮುಖ್ಯವಾದ ಸಲಕರಣೆಯೆಂದರೆ 'ಅಂತರಿಕ ವೆಚ್ಚ ನಿಯಂತ್ರಣ' ನಿಭಾವಣೆ... ಅರ್ಥಾತ್ ಕಂಪನಿಯೊಳಗಿನ ಖರ್ಚು ವೆಚ್ಚಗಳಿಗೆಲ್ಲ ಯಾವುದಾದರೂ ರೀತಿಯ ಕಡಿವಾಣ ಹಾಕುವ ನಿರಂತರ ಯತ್ನ ನಡೆದೆ ಇರುತ್ತದೆ ಒಂದಲ್ಲಾ ಒಂದು ರೀತಿ; ಮೂಲ ಸರಕಿನ ದರ ಕುಗ್ಗಿಸುತ್ತಲೊ, ಸರಕು ಸಾಗಾಣಿಕೆ ವೆಚ್ಚ ತಗ್ಗಿಸುತ್ತಲೊ, ಸಂಬಳದ ಹೆಚ್ಚಳಕ್ಕೆ ಅಂಕುಶ ಹಾಕುತ್ತಲೊ, ಇನ್ಶೂರೆನ್ಸಿನಂತಹ ವೆಚ್ಚಗಳ ಮೇಲೂ ನಿಗಾವಹಿಸಿ ಮಿತಿ ನಿರ್ಬಂಧಕಗಳನ್ನು ಅಳವಡಿಸುತ್ತಲೊ - ಹೀಗೆ ಪ್ರಯತ್ನಗಳು ನಡೆದೆ ಇರುತ್ತವೆ. ಅದರ ಪರಿಣಾಮವಾಗಿಯೆ ಇನ್ಶೂರೆನ್ಸ್ ಕಂಪನಿಗಳ ಮೇಲೂ ಪ್ರೀಮಿಯಂ ವೆಚ್ಚ ತಗ್ಗಿಸುವ ಬಲವಾದ ಒತ್ತಡವೇರಲ್ಪಡುತ್ತದೆ - ದರ ತಗ್ಗಿಸುವ ಅಥವಾ ದರ ಹೆಚ್ಚಿಸದ ಹಾಗೆ ಬೇಡಿ ಹಾಕುತ್ತ. ಇನ್ಶೂರೆನ್ಸಿನ ಮಾರಾಟ ವಿಲೇವಾರಿ ಮಾಡುವ ಗುಂಪು ಅದೇ ರೀತಿಯ ಮತ್ತೊಂದು ಕಂಪನಿಯಾದ ಕಾರಣ ಅವರದೂ ಅದೇ ಕಥೆಯೆ - ಅವರೂ ತಮ್ಮ ವೆಚ್ಚ ನಿಭಾಯಿಸುವ ಹವಣಿಕೆಯಲ್ಲಿ ತಮ್ಮ ವರ್ತಕ ಕಂಪನಿಗಳ ಮೇಲೆ ಆ ಒತ್ತಡವನ್ನು ರವಾನಿಸಿಬಿಡುತ್ತವೆ. ಆ ವರ್ತಕ ಕಂಪನಿಗಳ ಪ್ರಕ್ಷೇಪಿತ ತುದಿಯೆ ಈ ವೈದ್ಯರ ಕ್ಲಿನಿಕ್ಕುಗಳಲ್ಲವೆ? ಆ ಒತ್ತಡ ಅವರ ಹಂತಕ್ಕೆ ಮುಟ್ಟಿತೆಂದರೆ ಅದರರ್ಥ ಅವರು ಪ್ರತಿ ಪೇಷೆಂಟಿಗೆ ಚಾರ್ಜು ಮಾಡುವ ಫೀಸಿನ ದರವನ್ನು ಖೋತಾ ಮಾಡಬೇಕೆಂದೆ ತಾನೆ ? ಮೊದಲು ತಲೆಗೆ ಐವತ್ತು ಡಾಲರು ಚಾರ್ಜು ಮಾಡುವ ಕಡೆ ಈಗ ಮೂವತ್ತು ಮಾಡಬೇಕೆಂದರೆ ಅದು ಹೇಗೆ ತಾನೆ ಸಾಧ್ಯಾ? ಆಗುವುದಿಲ್ಲ ಎಂದು ಗಿರಾಕಿಯನ್ನು ಕೈ ಬಿಡುವಂತಿಲ್ಲ - ಹಾಗೆ ಮಾಡಿದರೆ ಇಡೀ ಕಂಪನಿಯ ರೋಗಿಗಳೆ ಕೈ ತಪ್ಪಿ ಹೋಗಿ, ಒಂದು ದೊಡ್ಡ ಗುಂಪೆ ಕೈ ಜಾರಿ ಹೋಗುವುದಲ್ಲ ? ಗಿರಾಕಿ ಬಿಡುವಂತಿಲ್ಲ, ಸಿಗುವ ಕಾಸು ಗಿಟ್ಟುವಂತಿಲ್ಲ. ಹೆಚ್ಚು ಗಿರಾಕಿಗಳು ಬರುವುದರಿಂದ ಒಟ್ಟಾರೆ ನಷ್ಟವಾಗುವುದಿಲ್ಲವೆಂದು ಇನ್ಶೂರೆನ್ಸ್ ಕಂಪನಿ ಪಟ್ಟು ಹಿಡಿದು ಕೂತಿರುತ್ತದೆ. ತೀರಾ ಬಿಗಿ ನಿಲುವು ತಾಳಿದರೆ ಗಿರಾಕಿ ಜಾರಿ ಬೇರೆ ಕಂಪನಿಯ / ಕ್ಲಿನಿಕ್ಕಿನ ಕೈ ಸೇರಿಕೊಳ್ಳುತ್ತದೆ. ಬಿಟ್ಟರು ಕಷ್ಟ, ಉಳಿಸಿಕೊಂಡರೆ ಇನ್ನೂ ಕಷ್ಟ - ಎನ್ನುವ ಉಭಯಸಂಕಟ.
ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮ್ಮ ವೈದ್ಯ ಮಹಾಶಯರುಗಳು ಏನು ಮಾಡಬೇಕು? ಅಲ್ಲೆ ನೋಡಿ ನಮ್ಮ ಮೋಹನ ಭಾಗವತರ ಮನೋಹರ ಉವಾಚ ಧುತ್ತೆಂದು ಅವತರಿಸಿಬಿಡುವುದು..! ಅವರ ಉದ್ಘೋಷದ ಸಾರಾಂಶ ಇಷ್ಟೆ ; ನಮ್ಮ ವೈದ್ಯೋತ್ತಮರು ಸಂಕಟದಲ್ಲಿ ಸಿಕ್ಕಿಬಿದ್ದುದು ನಿಜವೇ ಆದರು ಅದರಿಂದ ಹೊರಬರುವ ಉಪಾಯ ಹುಡಕಲಾಗದ ದಡ್ಡರೇನಲ್ಲವಂತೆ... ಇನ್ಶೂರೆನ್ಸ್ ಕಂಪನಿಗಳು ಚಾಪೆ ಕೆಳಗೆ ತೂರಿದರೆ ಇವರು ರಂಗೋಲೆಯಡಿ ಸುಸುಳುವ ಚಾಣಾಕ್ಷರು! ಹೇಗಿದ್ದರೂ ದರ ನಿಗದಿಯಾಗುವುದು ಪ್ರತಿ ಬಾರಿಯ ಭೇಟಿಗೆ ತಾನೆ? ಒಂದು ಭೇಟಿಗೆ ಮೂವತ್ತಾದರೇನಾಯ್ತು? ಒಂದು ಭೇಟಿಯಲ್ಲಿ ವಾಸಿಯಾಗಿಸುವ ಬದಲು ಎರಡು ಭೇಟಿಯಲ್ಲಿ ವಾಸಿಯಾಗುವ ಹಾಗೆ ಮಾಡಿದರೆ ಆಯ್ತಲ್ಲಾ! ಪ್ರತಿ ಭೇಟಿಗೆ ಮೂವತ್ತೆ ಆದರು ಒಟ್ಟು ಅರವತ್ತು ದಕ್ಕಿಸಿಕೊಂಡಂತಾಗಿ ಮೊದಲಿಗಿಂತ ಹತ್ತು ಹೆಚ್ಚೆ ಸಂಪಾದಿಸಿದಂತಾಗಲಿಲ್ಲವೆ ? ಹಾಗೆ ಮಾಡುವುದೇನೂ ಕಷ್ಟವಿಲ್ಲವಂತೆ... ಮೊದಲ ಬಾರಿ ಅರೆಬರೆ ಸಾಮರ್ಥ್ಯದ ಅಥವಾ ಕಡಿಮೆ ಡೋಸೇಜಿನ ಮದ್ದು ನೀಡಿದರಾಯ್ತಂತೆ - 'ಕಾಸಿಗೆ ತಕ್ಕ ಕಜ್ಜಾಯ' ಎನ್ನುವ ಹಾಗೆ... ಅದು ಮುಗಿಯಲು ಹೇಗೂ ಒಂದಷ್ಟು ದಿನಗಳು ಬೇಕು. ಅಷ್ಟಕ್ಕೆ ವಾಸಿಯಾದರೆ ಸರಿ.. ಆಮೇಲೂ ವಾಸಿಯಾಗದಿದ್ದರೆ ಆ ರೋಗಿ ಹೇಗೂ ಎರಡನೆ ಭೇಟಿಗೆ ಮತ್ತೊಮ್ಮೆ ಬರಲೇಬೇಕಲ್ಲ ? ಆ ಎರಡನೆ ಭೇಟಿ ಹೊಸ ಭೇಟಿಯ ಲೆಕ್ಕವೆ ಆದರೂ ಅದೇ ರೋಗಿಯ ಮೂಲಕ ಬಂದ ಕಾರಣ ಮಾಮೂಲಿನ ಐವತ್ತಕ್ಕಿಂತ ಹೆಚ್ಚೆ ಗಿಟ್ಟಿದಂತಾಗಲಿಲ್ಲವೆ? ಒಂದೆ ಬಾರಿ ಕೈ ಸೇರದೆ ಎರಡು ಕಂತಿನಲ್ಲೆ ಪಡೆದರು ಒಟ್ಟಾರೆ ಲಾಭವಂತು ಬಂದಂತಾಯ್ತಲ್ಲವೆ? ಮಧ್ಯ ಒಂದಷ್ಟು ಅಂತರ ಬರುವಂತಾದರೂ ಅದಕ್ಕೆ ಪರಿಹಾರಾರ್ಥವಾಗಿ ಹೇಗು ಹತ್ತು ಹೆಚ್ಚೆ ಸಿಗುವಂತಿದೆಯಲ್ಲಾ? ಪಾಪ, ಮೊದಲ ಭೇಟಿಗೆ ವಾಸಿಯಾಗದ ರೋಗಿ ಇನ್ನಷ್ಟು ದಿನ ನರಳಬೇಕೆನ್ನುವುದನ್ನು ಬಿಟ್ಟರೆ ಎಲ್ಲಾ ರೀತಿಯಿಂದಲೂ ಇದು ಕ್ಷೇಮಕರ - ರೋಗಿಯೂ ಸೇರಿದಂತೆ; ಯಾಕೆಂದರೆ ತೀರಾ ಬಲಾಢ್ಯ ಡೋಸೇಜ್ ಕೊಟ್ಟು ಅವನ ದೇಹವನ್ನೆ 'ಟೆಸ್ಟಿಂಗ್ ಲ್ಯಾಬೋರೇಟರಿ' ಮಾಡಿಕೊಳ್ಳುವ ಬದಲು, ರೋಗ ನಿರೋಧಕತೆಯನ್ನು ಕುಗ್ಗಲಿಕ್ಕೆ ಬಿಡದ 'ಲೋ ಡೋಸೇಜ್' ಕೊಡುವುದು ರೋಗಿಯ ಸುರಕ್ಷೆಯ ದೃಷ್ಟಿಯಿಂದ ಉತ್ತಮ. ರೋಗಿಗಂತು ಹೇಗೂ ಅದು ಗೊತ್ತಾಗುವ ಸಾಧ್ಯತೆಯಿಲ್ಲ. ಒಂದು ವೇಳೆ ಅನುಮಾನ ಬಂದರೂ ಏನು ಮಾಡುವಂತಿಲ್ಲ - ಮೊದಲ ಬಾರಿಯ ಮದ್ದು ಕೆಲಸ ಮಾಡಲಿಲ್ಲದ ಕಾರಣ ಎರಡನೆ ಬಾರಿ 'ಸ್ಟ್ರಾಂಗ್' ಮೆಡಿಸಿನ್ ಕೊಡುತ್ತಿದ್ದೇನೆಂದು ಹೇಳಿದರೆ ಅವರು ತಾನೆ ಏನು ಮಾಡಲಾದೀತು ? ಅಬ್ಬಬ್ಬಾ ಎಂದರೆ ಏನು ತಾನೆ ಮಾಡಿಯಾರು..? ಈ ಡಾಕ್ಟರು ಬೇಡ ಎಂದು ಇನ್ನೊಬ್ಬ ಡಾಕ್ಟರನ ದವಾಖಾನೆ ಮೆಟ್ಟಿಲು ಹತ್ತಬಹುದು. ಆದರೆ ಅವನ ಪಾಡೂ ಇದೇ ಆದ ಕಾರಣ ಇಡಿ ವ್ಯವಸ್ಥೆ ತನ್ನಂತಾನೆ ಸರಿದೂಗಿಸಿಕೊಂಡು ಹೋಗುತ್ತದೆ - ಅವನ ಬೇಸತ್ತ ಪೇಷೆಂಟು ಇವನತ್ತ ಬರುವ ಹಾಗಾದಾಗ! 'ವ್ಯವಹಾರಾತುರಾಣಾಂ ನಃ ಭಯಃ , ನಃ ಲಜ್ಜಾಃ' ಎಂದು ಅವರದೆ ನಾಣ್ಣುಡಿ ಮಾಡಿಕೊಂಡು 'ಸಹಕಾರವೆ ಜೀವನ' ಎಂದು ಡ್ಯೂಯಟ್ಟು ಹಾಡುತ್ತ ದಿನ ನಿಭಾಯಿಸಬಹುದಲ್ಲವೆ? ಹೀಗಾಗಿಯೆ ಈಚೆಗೆ ಯಾವುದೇ ಕಾಯಿಲೆಗೆ ದವಾಖಾನೆಗೆ ಹೋದರೂ ಎರಡೆರಡು ಬಾರಿ ಎಡತಾಕುವಂತಾಗಿರುವುದು ಎಂದು ಹೊಸ ಸಿದ್ದಾಂತವನ್ನೆ ಮಂಡಿಸಿಬಿಟ್ಟಿದ್ದರು 'ಮೋಹನ ಭಾಗವತರು'. ಈಚೆಗೆ ಮೊದಲಿನಷ್ಟು ಸಲೀಸಾಗಿ ಒಂದೆ ಭೇಟಿಯಲ್ಲಿ ವಾಸಿಯಾಗದ ಅನುಭವ ನನಗೂ ಆಗಿದ್ದರೂ ಅದಕ್ಕೆ ದಿನಕ್ಕೊಂದರಂತೆ ಹೊಸದಾಗಿ ಹುಟ್ಟಿಕೊಳ್ಳುವ ವೈರಸ್, ಬ್ಯಾಕ್ಟೀರಿಯಗಳು ಕಾರಣವೆಂದುಕೊಂಡಿದ್ದೆನೆ ಹೊರತು ಡಾಕ್ಟರರ ಚಮತ್ಕಾರಿ ಕೈವಾಡ ಕಾರಣವೆಂದು ನಂಬಲು ಸಾಧ್ಯವಾಗಲಿಲ್ಲ . ಹೀಗಾಗಿ ಅವನ ಸಿದ್ದಾಂತವನ್ನು ನಯವಾಗಿಯೆ ಅಲ್ಲಗಳೆಯುತ್ತ ಬದಿಗೆ ಸರಿಸಿದ್ದೆ - ವೃತ್ತಿಪರ ವೈದ್ಯವೃತ್ತಿಯಲ್ಲಿರುವವರು ಹಾಗೆಲ್ಲ ಮಾಡಲಾರರು ಎಂದು ವಾದಿಸುತ್ತ.
ಹಾಗೆಂದಾಗ ಅವನೊಂದರೆಗಳಿಗೆ ನನ್ನ ಮುಖವನ್ನೆ ನೋಡಿ ನಂತರ 'ನಾನೂ ಹಾಗೆ ಅಂದುಕೊಂಡಿದ್ದೆ, ಸ್ವಂತ ಪ್ರತ್ಯಕ್ಷ ಅನುಭವಾಗುವತನಕ' ಎಂದ. ಅನುಭವ ಅಂದ ತಕ್ಷಣ ಕುತೂಹಲ ಕೆರಳಿ 'ಏನಾಯ್ತು ಅಂತಹಾ ಅನುಭವ?' ಎಂದೆ. ಆಗ ಅವನು ಹೇಳಿದ್ದು ಕೇಳಿ ನಂಬುವುದೊ ಇಲ್ಲವೆ ಡೋಂಗಿ ಬಿಡುತ್ತಿದ್ದಾನೊ ಎಂದು ನಿರ್ಧರಿಸಲಾಗದಿದ್ದರು ಆ ನಂತರ ಎಲ್ಲ ಡಾಕ್ಟರರತ್ತ ಒಂದು ಅನುಮಾನದ ದೃಷ್ಟಿಯಿಂದಲೆ ನೋಡುವಂತಾಗಿದ್ದು ಮಾತ್ರ ಅಪ್ಪಟ ಸತ್ಯ. ಅವನು ಹೇಳಿದ್ದಾದರು ಇಷ್ಟೆ; ಕಳೆದ ಬಾರಿ ಈ ತರಹದ್ದೆ ಕ್ಲಿನಿಕ್ಕೊಂದರ ಒಳ ಹೊಕ್ಕ ಮೋಹನ ಹೋದ ತಕ್ಷಣ ಆ ಇನ್ಶೂರೆನ್ಸ್ ಕಾರ್ಡ್ ಕೊಡಲು ಮರೆತುಬಿಟ್ಟನಂತೆ, ರಿಜಿಸ್ಟರ್ ಮಾಡಿಸುವ ಹೊತ್ತಿನಲ್ಲಿ. ಹೋದ ತಕ್ಷಣ ಕಾರ್ಡನ್ನು ದಾಖಲಿಸಿ ' ಕ್ಯೂ' ನಂಬರ ಪಡೆದ ಮೇಲಷ್ಟೆ ನಮ್ಮ ಸರತಿಗೆ ಕಾಯುವುದು ಅಲ್ಲಿನ ಸಾಮಾನ್ಯ ಪದ್ದತಿ. ಈ ಬಾರಿಯೂ ಅದೆ ಪ್ರಕಾರ ಸರತಿಯ ಸಂಖ್ಯೆ ಪಡೆದು ಡಾಕ್ಟರರನ್ನು ಭೇಟಿಯಾಗಿ ನಂತರ ಮತ್ತೆ ಕಾದು ಕುಳಿತಿದ್ದನಂತೆ ತನ್ನ ನಂಬರನ್ನು ಕರೆಯುವುದನ್ನೆ ಕಾಯುತ್ತ - ವೈದ್ಯರು ನಿರ್ದೇಶಿಸಿದ ಪ್ರಕಾರ ಔಷಧಿಯ ಪೊಟ್ಟಣ ಕಟ್ಟಿಕೊಡುವುದನ್ನೆ ಕಾದು; ಈ ಬಾರಿಯ ಕರೆ ಬಂದಾಗ ಹೋಗಿ ಪೊಟ್ಟಣವನ್ನು ಪಡೆಯುವ ಹೊತ್ತಿಗೆ ಸರಿಯಾಗಿ, ಆ ಕೌಂಟರಿನಲ್ಲಿದ್ದ ವ್ಯಕ್ತಿ ಐವತ್ತು ಡಾಲರು ಕೊಡಲು ಹೇಳಿದಾಗಷ್ಟೆ ಅವನಿಗೆ ನೆನಪಾದದ್ದು ತಾನು ಕಾರ್ಡ್ ಕೊಡಲು ಮರೆತುಬಿಟ್ಟನೆಂದು. ಆಗ ತಡಬಡಾಯಿಸುತ್ತ ಕ್ಷಮೆ ಯಾಚಿಸುತ್ತ ಪರ್ಸಿನಿಂದ ಕಾರ್ಡೆತ್ತಿ ಕೊಟ್ಟಿದ್ದೆ ತಡ ಆ ಕೌಂಟರಿನ ಮೋಹಿನಿ ಹೌಹಾರಿ, ಕೈಗಿತ್ತಿದ್ದ ಔಷಧದ ಪೊಟ್ಟಣವನ್ನು ಅವನ ಕೈಯಿಂದ ಅವಸರವಸರವಾಗಿ ಕಿತ್ತು ವಾಪಸ್ಸಿಟ್ಟುಕೊಂಡು, ಅವಸರವಸರವಾಗಿ ಮತ್ತೆ ಒಳ ಹೊಕ್ಕು ಡಾಕ್ಟರ ಜತೆಗೇನೊ ಗುಸುಗುಸು ನಡೆಸಿ ಮತ್ತಾವುದೊ ಬೇರೆಯ ಔಷಧಿ ಕಟ್ಟಿಕೊಟ್ಟು ಬಿಟ್ಟಳಂತೆ! ಸಾಲದ್ದಕ್ಕೆ ಮೊದಲು ಕೊಟ್ಟಿದ್ದ ದೊಡ್ಡ ಪೊಟ್ಟಣ ಹೋಗಿ ಈ ಬಾರಿ ಅದರ ಅರ್ಧಕ್ಕರ್ಧ ಸೈಜಿನ ಚಿಕ್ಕ ಪ್ಯಾಕೆಟ್ಟು ಬೇರೆ... ಆ ಘಟನೆಯ ನಂತರವಷ್ಟೆ ಅವನಿಗರಿವಾಯಿತಂತೆ ದುಡ್ಡು ತೆತ್ತರೆ ಒಂದು ಔಷಧಿ, ಇನ್ಶೂರೆನ್ಸ್ ಕಾರ್ಡಿಗೆ ಮತ್ತೊಂದು ಔಷಧಿ ಎಂದು. ಅಲ್ಲದೆ ಆಫೀಸಿನಲ್ಲಿ ಇತ್ತೀಚೆಗೆ ತಾನೆ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸಿದ್ದು ಯಾಕೆಂದು ಅರಿವಾಗದೆ ಗೊಂದಲದಲ್ಲಿದ್ದವನಿಗೆ, ಬಹುಶಃ ಮೊದಲಿಗಿಂತ ಅಗ್ಗದ ಪ್ರೀಮಿಯಂ ಸಿಕ್ಕಿತೆಂದು ಬದಲಾಯಿಸಿರಬಹುದೆಂದು ಬೇರೆ ಜ್ಞಾನೋದಯವಾಯಿತಂತೆ... ಅವನು ಹೇಳಿದ್ದು ಅದೆಷ್ಟು ನಿಜವೊ, ಸುಳ್ಳೊ - ಆದರೆ ಅದನ್ನು ಕೇಳಿದ ಮೇಲೆ ನನ್ನಲ್ಲೂ ಅನುಮಾನದ ವೃಕ್ಷಕ್ಕೆ ಬೀಜಾಂಕುರವಾದಂತಾಗಿ, ಇದ್ದರೂ ಇರಬಹುದೇನೊ ಎನ್ನುವ ಗುಮಾನಿಯೂ ಬರತೊಡಗಿತು ಎಂಬುದು ಸುಳ್ಳಲ್ಲ !
ನಿಜವಾಗಿಯು ಕಾಯಿಲೆ ಬಿದ್ದಾಗ ಸರಿಯಾದ ಔಷಧಿಗಾಗಿ ಪರಿತಪಿಸುತ್ತ ಅನುಭವಿಸುವ ಪರಿ ಒಂದು ಪಜೀತಿಯಾದರೆ, ಮಾಮೂಲಿ ಗಿರಾಕಿಗಳಂತೆ ಬಂದು ಹೋಗುವ ಮೆಲುವಾದ ತಲೆನೋವು, ಮೈ ಕೈ ನೋವು, ಜ್ವರ, ನೆಗಡಿಯಂತಹ ಭಾಧೆಗಳದು ಇನ್ನೊಂದು ಕಥೆ. ಇವು ಬಂದು ವಕ್ಕರಿಸಿಕೊಂಡ ಹೊತ್ತಿಗೆ ವೈದ್ಯರ ಹತ್ತಿರ ಹೋಗುವ ಮೊದಲು ತುಸು ಕೈ ಮದ್ದಿನಲ್ಲೊ, ಮನೆ ಮದ್ದಿನಲ್ಲೊ ಅಥವಾ ಸಾರಿಡಾನ್, ಅನಾಸಿನ್, ಕ್ರೋಸಿನ್ ಜಾತಿಯ ಯಾವುದಾದರು ಫ್ಯಾರಾಸ್ಯೂಟಾಮಲ್ಲಿನಂತಹ ಮಾತ್ರೆ ನುಂಗಿ ಮಲಗೆದ್ದು ವಾಸಿ ಮಾಡಿಕೊಳ್ಳುವ ಸಾಧ್ಯತೆಗಳೇನು ಕಮ್ಮಿಯಿಲ್ಲ. ಅದೂ ಅಲ್ಲದೆ ವೈದ್ಯರ ಹತ್ತಿರ ಹೋದಾಗ ಸಾಮಾನ್ಯ ಅವರ ಕೊಡುವ ಔಷಧದ ಡೋಸೇಜ್ ತುಂಬಾ ಹೆಚ್ಚಿನದಾದ ಕಾರಣ ಅದು ದೇಹದ ನೈಸರ್ಗಿಕ ಪ್ರತಿರೋಧ ಶಕ್ತಿಯನ್ನು ಕುಂದಿಸಿಬಿಡಬಹುದೆನ್ನುವ ಭೀತಿಯೂ ಸೇರಿಕೊಂಡಿರುವುದರಿಂದ ಸಾಧ್ಯವಾದರೆ ದವಾಖಾನೆಯ ಮುಖ ನೋಡದಿರುವುದೆ ಒಳಿತು ಎನ್ನುವ ಮನೋಭಾವ ಅಪರೂಪವೂ ಅಲ್ಲ. ಒಂದೆರಡು ದಿನಗಳಲ್ಲಿ ತಂತಾನೆ ವಾಸಿಯಾದರೆ ಆ ಔಷಧಿಗಳ ರಾಶಿಯಿಂದ ತಪ್ಪಿಸಿಕೊಳ್ಳಬಹುದಲ್ಲ ಎನ್ನುವ ಮುಂಜಾಗರೂಕತೆ ಸಮಯೋಚಿತವೂ ಹೌದು. ಔಷದೋಪಚಾರ ಉಚಿತವೆ ಆದರು ಕೊನೆಗೆ ಸೇವಿಸಬೇಕಾದವರು ನಾವೆ ತಾನೆ? ಆದರೆ ಹಾಗೆ ನಿಭಾಯಿಸಿಕೊಳ್ಳಲೂ ಆಗದ ವಿಚಿತ್ರ ಪರಿಸ್ಥಿತಿ - ಅಲ್ಲೂ ಅಡ್ಡ ಬರುವುದು ಕಂಪನಿ ನಿಯಮಗಳೆ ! ಇಲ್ಲಿನ ಸಾಮಾನ್ಯ ನಿಯಮವೆಂದರೆ ಮೆಡಿಕಲ್ ರಜೆ ಹಾಕಿಕೊಳ್ಳಬೇಕೆಂದರೆ - ಒಂದೆ ಒಂದು ದಿನವಾದರೂ ಸರಿ , ಡಾಕ್ಟರರ ಹತ್ತಿರ ಮೆಡಿಕಲ್ ಸರ್ಟಿಫಿಕೇಟ್ ಬರೆಸಿಕೊಂಡು ತರಲೇಬೇಕು. ಡಾಕ್ಟರ ಹತ್ತಿರವೆ ಹೋಗದಿದ್ದರೆ ಸರ್ಟಿಫಿಕೇಟು ಸಿಗುವುದಾದರು ಎಂತು? ನಮ್ಮ ಊರುಗಳ ಹಾಗೆ ಇಲ್ಲಿ ಕಾಸು ತೆತ್ತು ಪೋರ್ಜರಿ ಪತ್ರ ಕೊಡುವ ಸಾಧ್ಯತೆಯೂ ಇಲ್ಲ - ಕೊಟ್ಟವರು, ತೆಗೆದುಕೊಂಡವರು ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಕಂಬಿ ಎಣಿಸುವ ಪಾಡಾಗಬಾರದಲ್ಲ...? ಏನೊ ಒಂದು ದಿನದ ರೆಸ್ಟು ತೆಗೆದುಕೊಂಡರೆ ಎಲ್ಲಾ ಸರಿಯಾಗಿಬಿಡುತ್ತದೆ ಎಂದು ನಂಬಿಕೆಯಿದ್ದರೂ, ರಜೆ ಹಾಕಲು ವೈದ್ಯರ ಶಿಫಾರಸು ಪತ್ರ ಬೇಕೇ ಬೇಕು. ಅದು ಬೇಕೆಂದರೆ ವೈದ್ಯರ ಭೇಟಿ ಮಾಡಿ ಕಾಯಿಲೆ ಹೇಳಿ ಮದ್ದು ಪಡೆದರಷ್ಟೆ ಸಾಧ್ಯ. ಆ ಔಷಧದ ಸಹವಾಸ ಬೇಡವೆಂದು ಹೊರಟರೆ ರಜೆ ಸಿಗುವುದಿಲ್ಲ. ರಜೆಗಾಗಿ ಔಷಧಿ ತೆಗೆದುಕೊಳ್ಳುವುದೆಂದರೆ ಮತ್ತೊಂದು ಬಗೆಯ ಪ್ರಾಣ ಸಂಕಟ. ಆದರೆ ಮೋಹನನಂತಹ ಗಿರಾಕಿಗಳಿಗೆ ಆ ಸಂಕಟವೂ ಇಲ್ಲವೆನ್ನಿ. ನೇರವಾಗಿ ಡಾಕ್ಟರ ಬಳಿ ಹೋದವನೆ ಇರುವುದರ ಜತೆಗೆ ಇನ್ನಷ್ಟು ಸೇರಿಸಿಯೆ ಹೇಳಿ, ಕೊಟ್ಟದ್ದೆಲ್ಲಾ ಔಷಧಿ ಪಡೆದು ಬರುತ್ತಾನಂತೆ - ಹೆಚ್ಚು ಹೇಳಿದಷ್ಟು ಮೆಡಿಕಲ್ ಸರ್ಟಿಫಿಕೇಟ್ ಸಿಗುವುದು ಸುಲಭವಾದ ಕಾರಣ ಈ ಕಿಲಾಡಿತನ. ಸರ್ಟಿಫಿಕೇಟ್ ಸಿಕ್ಕ ಮೇಲೆ ಇನ್ನೇನು, ರಜೆ ಹಾಕಲು ಅಡ್ಡಿಯೇನೂ ಇಲ್ಲವಲ್ಲಾ? ಕೊಟ್ಟ ಔಷಧಿ ಸೇವಿಸಿದರೆ ಉಂಟು, ಇರದಿದ್ದರೆ ಕಸದ ಬುಟ್ಟಿಗೆ ಒಗೆದರಾಯ್ತು ಅಥವಾ ಎಮರ್ಜೆನ್ಸಿ ಬಳಕೆಗೆ ಎತ್ತಿಟ್ಟುಕೊಂಡರೂ ಆಯ್ತು!
ಬೇರೆಲ್ಲಾ ಕಥೆ ಏನೆ ಇದ್ದರೂ ಈ ಔಷಧಿಗಳು ರಾಮಬಾಣದ ಹಾಗೆ ಒಂದೆ ಏಟಿಗೆ ಕೆಲಸ ಮಾಡಿ ತಕ್ಷಣದ 'ರಿಲೀಫ್' ಕೊಡುವುದಂತೂ ಸತ್ಯ. ಅದು ಪೂರ್ತಿ ವಾಸಿಯಾಯಿತೊ ಅಥವಾ ವಾಸಿಯಾದಂತೆ ನಟಿಸಿತೊ ಎನ್ನುವ ಗೊಂದಲಕ್ಕಿಂತಲು, ಈ ಬಿಡುವಿರದ, ತಲೆ ಕೆರೆದುಕೊಳ್ಳಲು ಪುರುಸೊತ್ತಿಲ್ಲದ ಕಾಲದಲ್ಲಿ ತಕ್ಷಣದ ಉಪಶಮನ ನೀಡುವ ಮದ್ದೆ ಅಮೃತಕ್ಕೆ ಸಮನಿದ್ದಂತಲ್ಲವೆ? ಯಾವುದೆ 'ಬದಿ ಪರಿಣಾಮಗಳಿರದ' ಸುರಕ್ಷಿತ ಆದರೆ ನಿಧಾನ ಪ್ರಭಾವದ ಚಿಕಿತ್ಸಾ ಕ್ರಮಕ್ಕಿಂತ, ತುಸು 'ಸೈಡ್ ಎಫೆಕ್ಟ್' ಇದ್ದರೂ ಕೂಡಲೆ ಶಮನ ಶಾಂತಿ ನೀಡುವ ಈ ಆಧುನಿಕ ಜಗದ ಮಾಂತ್ರಿಕ ಗುಂಡುಗಳಿಗೆ ಇಡಿ ಮನುಕುಲವೆ ಶರಣಾಗಿರುವುದರಲ್ಲಿ ಅತಿಶಯವೇನೂ ಇಲ್ಲ. ಬದಲಾಗುವ ಕಾಲ, ಬದಲಾಗುವ ಜನ-ಮನ-ಮನೋಭಾವಗಳಿಗನುಸಾರ ಜೀವನ ಕ್ರಮಗಳೂ ಬದಲಾದ ಹಾಗೆ ಅವರ ಪ್ರಾಶಸ್ತ್ಯದ ವಿಧಿ, ವಿಧಾನಗಳು, ಪರಿಗಣನೆಗಳು ಬದಲಾಗುತ್ತ ಹೋಗುವುದು ಅನಿವಾರ್ಯ ಪ್ರಕ್ರಿಯೆ. ಆದರೂ ಯಾವ ಕಾಲಮಾನದಲ್ಲಿದ್ದರು ಸರಿ ಮೂಲ ಕಾರಣವನ್ನು ಹುಡುಕಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದೆ ಸರಿಯಾದ ಚಿಕಿತ್ಸಾ ಕ್ರಮ ಎನ್ನುವ ಮಾತು ಮಾತ್ರ ಎಲ್ಲಾ ಕಾಲಕ್ಕು ಸತ್ಯ. ಅದರ ಸುಳಿವು ಸಿಗದೆ ಹೋದಾಗ ಬರಿಯ ಕುರುಹುಗಳಿಗೆ ಮದ್ದು ನೀಡಿ ನಿವಾರಿಸುತ್ತಲೊ, ಮತ್ತೊಂದಾಗಿ ಪರಿವರ್ತಿಸುತ್ತಲೊ ನಡೆವ 'ಟ್ರಯಲ್ ಅಂಡ್ ಎರರ್' ವಿಧಾನ ಎಷ್ಟೆ ಸಾರ್ವತ್ರಿಕವಾಗಿ ಪ್ರಚಲಿತವಿದ್ದರೂ ಅದಕ್ಕೆ ತಗಲಬಹುದಾದ ವೆಚ್ಚ, ಶ್ರಮ, ದುರಸ್ತಿ ಮಾಡಲಾಗದ ಪ್ರತಿಕೂಲ ಫಲಿತಾಂಶದ ಸಾಧ್ಯತೆ ಇವೆಲ್ಲ ಲೆಕ್ಕ ಹಾಕಿದರೆ ಮೂಲದೋಷದ ಚಿಕಿತ್ಸೆ ಸಾಮಾನ್ಯವಾಗಿ ಸರಳವೂ, ಕಡಿಮೆ ವೆಚ್ಚದ್ದೂ, ಕಡಿಮೆ ಯಾತನೆಯದು ಮತ್ತು ಶೀಘ್ರ ಗುಣವಾಗುವಂತದ್ದು ಎನ್ನುವುದರಲ್ಲಿ ಸಂದೇಹವೆ ಇಲ್ಲ. ಯಾವ ವೈದ್ಯಕೀಯ ವಿಧಾನದ ಚಿಂತನಾ ವಿಧಾನವಾದರು ಸರಿ (ಸ್ಕೂಲ್ ಆಫ್ ಥಾಟ್), ಚಿಕಿತ್ಸೆಯಾದರೂ ಸರಿ - ಮೂಲದೋಷ ಹುಡುಕಿ ನೀಡುವ ಚಿಕಿತ್ಸೆಯಾದರೆ ಅದು ಖಂಡಿತ ಪರಿಣಾಮಕಾರಿಯಾಗುತ್ತದೆನ್ನುವುದರಲ್ಲಂತು ಎರಡು ಮಾತಿಲ್ಲ. 'ಅದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವ ವೈದ್ಯ ಸಿಗುವಂತೆ ಮಾಡಪ್ಪ' ಎಂದು ದೈವಕ್ಕೆ ಮೊರೆಯಿಡುವುದಷ್ಟೆ ನಾವು ಮಾಡಬಹುದಾದ ಸುಲಭದ ಕಾರ್ಯ!
(ನುಣುಚು ಹನಿ : ಈ ಲಘು ಲಹರಿಯಲ್ಲಿ ಬರುವ ಪಾತ್ರ, ಸಂದರ್ಭ, ವಿವರಣೆ, ಉದಾಹರಣೆಗಳೆಲ್ಲ ಕಪೋಲಕಲ್ಪಿತ!)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ)
ರಾಯರೇ ಈಗ ಇದು ditto ಸ್ವದೇಶಿ ವೈದ್ಯಾಯಣ. ನನ್ನ ಸ್ನೇಹಿತರೊಬ್ಬರ ಅನುಭವ ಕೂಡಾ.
ಇಂದಿನ ವೈದ್ಯ ವಿಧಾನದ ಬಗ್ಗೆ ಬಹಳ ಸೊಗಸಾಗಿ ಎಂದಿನ ಚೇತೋಹಾರಿಯಾದ ಧಾಟಿಯಲ್ಲಿ ರಾಯರು ಬರೆದಿದ್ದೀರಿ. ತುಂಬಾ ತುಂಬಾ ವಂದನೆಗಳು.
In reply to ಉ: ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ) by santhosha shastry
ಉ: ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ)
ಶಾಸ್ತ್ರಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಅಂತೂ ಇದೂ ಪೂರ್ತಿ 'ದೇಶಿ' ಸರಕಾಗಿ ಬಿಕರಿಯಾಗುತ್ತಿದೆ ಅಂದ ಹಾಗಾಯ್ತು. ಪ್ರಗತಿಯ ಹೆಸರಿನಲ್ಲಿ ಎಲ್ಲರು ಕಟ್ಟಬೇಕಾದ ತೆರಿಗೆಯೆಂದರೆ ಇದೇ ನೋಡಿ. ಜನ ಯಾವಾಗಲೂ ಹೆಚ್ಚುತ್ತಿರುವ ಸಂಬಳ, ಸವಲತ್ತುಗಳ ಮೇಲೆ ನಿಗಾ ಇಡುತ್ತಾರೆಯೆ ಹೊರತು ಅದು ತರಬಹುದಾದ ಕೊಳ್ಳುವ ಶಕ್ತಿಯ ಅನುಪಾತವನ್ನಲ್ಲ. ಈ ರೀತಿಯ ವ್ಯವಸ್ಥೆಯಲ್ಲಿ ಬೇಕಿರಲಿ, ಬೇಡದಿರಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಬೇರೆ. ಇವೆಲ್ಲ ಜತೆಗೂಡಿದರೆ ವೈದ್ಯಕೀಯ ಉದ್ಯೋಗವೆನ್ನುವುದು ಸೇವೆಯೆಂಬ ಪರಿಧಿಯ ಎಲ್ಲೆ ಮೀರಿ, ವಾಣಿಜ್ಯ ಜಗದ ಮಾಯಾ ಜಾದುವಿನಲ್ಲಿ ಬೆರೆತು ಹೋಗಿರುವುದು ನಿಚ್ಚಳವಾಗಿ ಕಾಣುತ್ತದೆ. ಎಷ್ಟೊ ಜನರ ಮನೋಭಾವವೂ 'ಇನ್ಶುರೆನ್ಸಿನವರು ಕಟ್ಟುವುದು ತಾನೆ ? ಕೊಡಲಿ ಬಿಡಿ' ಎನ್ನುವಂತಿರುತ್ತದೆ. ಆದರೆ ಅದಿಲ್ಲದವರ ಪಾಡು ಕೇಳುವವರಾರು ? ಇನ್ಶುರೆನ್ಸ್ ಇಲ್ಲವೆಂದು ಖರ್ಚೇನು ಕಡಿಮೆಯಾಗುವುದಿಲ್ಲವಲ್ಲ ? ಪ್ರಗತಿಯ ಫಲಿತವೆ ಇದರ ಉತ್ತರವನ್ನು ಕಂಡುಕೊಟ್ಟೀತೆಂದು ಆಶಿಸೋಣ :-)
ಉ: ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ)
ನಾಗೇಶರೇ, ಇಲ್ಲಿಯ ಕಥೆಯೇನೂ ಬೇರೆಯಾಗಿಲ್ಲ. ಜ್ವರ ಎಂದು ಹೋದವನನ್ನು ಬಿಪಿ ಜಾಸ್ತಿ ಎಂದು ಹೇಳಿ ಎಕೋ ಟೆಸ್ಟ್, ರಕ್ತ ಪರೀಕ್ಷೆ ಎಲ್ಲಾ ಮಾಡಿಸಿ ಅಡ್ಮಿಟ್ ಮಾಡಿಬಿಟ್ಟರು. ನನಗೆ ಗೊತ್ತಿತ್ತು, ಇಷ್ಟೆಲ್ಲಾ ಅಗತ್ಯವಿಲ್ಲವೆಂದು, ಆದರೂ ವೈದ್ಯರ ಮಾತು ಮೀರಲಾಗಿರಲಿಲ್ಲ. ಪುನಃ ಮರುದಿನವೂ ಅಲ್ಲೇ ಇರಲು ಹೇಳಿದಾಗ ಇನ್ನೊಬ್ಬ ಪರಿಚಿತ ವೈದ್ಯರ ಶಿಫಾರಸು ಪಡೆದು ಹೊರಬಂದಾಗ ರೂ.10,000/-ಕ್ಕೂ ಹೆಚ್ಚು ಹಣ ಪೀಕಿಯಾಗಿತ್ತು. ಡಾಕ್ಟರರ 'ರಿಪೋರ್ಟುಗಳೆಲ್ಲಾ ನೋಡಿದೆ, ಎಲ್ಲಾ ಸರಿಯಾಗಿದೆ, ಡೋಂಟ್ ವರಿ' ಎಂಬ ಮಾತಿನೊಂದಿಗೆ ಹೊರಬಿದ್ದಿದ್ದೆ.
In reply to ಉ: ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ) by kavinagaraj
ಉ: ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ)
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಎಲ್ಲಾ ಅಧುನಿಕ ಸೌಲಭ್ಯ ಮಾತು ಪರೀಕ್ಷಾ ವಿಧಾನಗಳ ಅಳವಡಿಕೆ ಅನ್ನುವ ಹೆಸರಲ್ಲಿ ಅಗತ್ಯ ಮೀರಿ ಇಂತಹ ದಾರಿ ಹಿಡಿದು ಹಣ ದೋಚುವುದು ನಮ್ಮಲ್ಲು ಮಾಮೂಲಾಗಿ ಹೋಗುತ್ತಿದೆ ಅನ್ನುವುದು ವಿಷಾದ. ಖೇದವೆಂದರೆ ಇದೇ ವ್ಯವಸ್ಥೆಯಲ್ಲೆ ಬಡಜನರು ಹೆಣಗುತ್ತಾ ಬದುಕಬೇಕು. ಬಹುಶಃ ಭರಿಸಲು ಸಾಧ್ಯವಿಲ್ಲವೆಂಬ ನೆಪದಲ್ಲೆ ಅವರು ಇಂತಹ ಚಕ್ರವ್ಯೂಹದಿಂದ ಬಚಾವಾಗುತ್ತಾರೆಂದು ಕಾಣುತ್ತದೆ..