ವರಕವಿಗೊಂದು ನಮನದ ಹೊತ್ತು..

ವರಕವಿಗೊಂದು ನಮನದ ಹೊತ್ತು..

(Photo source wikipedia: https://en.m.wikipedia.org/wiki/File:DRBendre.jpg)
 
ಜನವರಿ 31 ವರಕವಿ ದ.ರಾ.ಬೇಂದ್ರೆ ಜನ್ಮದಿನ. ಜನ್ಮತಃ ಕವಿಯಾಗಿ ಕಾವ್ಯಧಾರೆಯ ಸುಗ್ಗಿ ಹರಿಸಿದ ಈ ಕರ್ನಾಟಕ ಕುಲ ತಿಲಕರ ಎಲ್ಲಾ ಕವನಗಳನ್ನು ಓದಲು ಎಲ್ಲರಿಗು ಆಗದಿದ್ದರೂ ಹಾಡುಗಳ ರೂಪದಲ್ಲಿ, ಭಾವಗೀತೆಗಳ ಸಂಕಲದ ರೂಪದಲ್ಲಿ, ಪಾಠ ಪಠ್ಯಗಳ ನಡುವಲ್ಲಿ ಸುಳಿದಾಡಿದ ಗೀತೆಗಳು ಕನ್ನಡಿಗರೆಲ್ಲರಿಗು ಚಿರ ಪರಿಚಿತವೆ. ಧಾರವಾಡದ ಈ ದೈತ್ಯ ಪ್ರತಿಭೆಯಿಂದ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿಯ ಗರಿ ಸಿಗುವಂತಾಗಿದ್ದು (ನಾಕು ತಂತಿ) ಮಾತ್ರವಲ್ಲದೆ ಕನ್ನಡದ ದೊಡ್ಡ ಹೆಸರುಗಳ ಸಾಲಿನಲ್ಲಿ ಬೇಂದ್ರೆಯವರ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿ, ದಂತಕಥೆಯಾಗುವಂತೆ ಮಾಡಿದ್ದು ಅವರ ಅದ್ಭುತ ಕಾವ್ಯ ಪ್ರತಿಭೆಗೆ ಕನ್ನಡ ನಾಡು ಸಲ್ಲಿಸಿದ ಅರ್ಹ ಗೌರವ.. ಕಾವ್ಯದ ಹೊರತಾಗಿ ಸಾಹಿತ್ಯದ ಇತರ ಪ್ರಕಾರಗಳಲ್ಲು ಕೈಯಾಡಿಸಿದ್ದರೂ, ಈ ಕೆಳಗೆ ಅವರ ಕವನ ಸಂಕಲನಗಳೆಲ್ಲವನ್ನು ಅದು ಪ್ರಕಟವಾದ ಅನುಕ್ರಮಣಿಕೆಯಲ್ಲಿ ಹೊಂದಿಸಿ ಕವನದ ರೂಪದಲ್ಲಿ ಹೊಸೆದಿದ್ದೇನೆ - ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ, ಆ ಮಹಾನ್ ಜೀವಕ್ಕೊಂದು ಹೃತ್ಪೂರ್ವಕ ನಮನ ಸಲ್ಲಿಸುತ್ತ...

ವರಕವಿ ದ.ರಾ.ಬೇಂದ್ರೆ ಗೊತ್ತಾ ? ಹರಿಸಿದ್ದೆಲ್ಲ ಧಾರೆ ಘನ ಕಾವ್ಯಕುಸುರಿ 
'ಕೃಷ್ಣಾಕುಮಾರಿ' ಹಿಡಿದ 'ಗರಿ' ಮೂಡಿ 'ಮೂರ್ತಿ ಮತ್ತು ಕಾಮ ಕಸ್ತೂರಿ'
'ಸಖೀಗೀತ' ಹಾಡಿ 'ಉಯ್ಯಾಲೆ' ತೂಗೆ ಆಯ್ತಲ್ಲ 'ನಾದಲೀಲೆ' ಜನನ
'ಮೇಘದೂತ'ನದಂತೆ 'ಹಾಡುಪಾಡು' ಇಳೆಗೆ ಇಳಿದ 'ಗಂಗಾವತರಣ' ||

ಕುಡಿಕುಡಿದು ನಿತ್ಯ 'ಸೂರ್ಯಪಾನ' ತುಂಬಿಸಿ 'ಹೃದಯ ಸಮುದ್ರ'
'ಮುಕ್ತಕಂಠ'ದೆ ಮನ ಹಾಡಿತೆ 'ಚೈತ್ಯಾಲಯ'ದಿ ಕವಿತಾ ಸರಿತ್ಸಾಗರ
ಸೋಲೊಪ್ಪದ ಪರಿ 'ಜೀವಲಹರಿ', ಕಾಡಲುಂಟೆ 'ಅರಳು ಮರಳು' ?
ನಮಿಸೂ ಮುಗಿಯದ 'ನಮನ', ಸ್ಪೂರ್ತಿ 'ಸಂಚಯ' ಅಕ್ಷಯ ಬೆರಳು ||

'ಉತ್ತರಾಯಣ' ಸಂಕ್ರಮಣ ಯಾತ್ರೆ, ಹುಡುಕಿತ್ತೆ 'ಮುಗಿಲ ಮಲ್ಲಿಗೆ'
ಸಿಕ್ಕರಲ್ಲಿ 'ಯಕ್ಷ ಯಕ್ಷಿ', ನುಡಿಸೆ 'ನಾಕುತಂತಿ' ಜ್ಞಾನಪೀಠವದಾಗೆ
ಮೀರದ ಕವಿ 'ಮರ್ಯಾದೆ'ಗೆ, ಕರೆದಳೆ 'ಶ್ರೀಮಾತ' ನೀ 'ಬಾ ಹತ್ತರ'
ನಿಗರ್ವಿಮನಕೆ 'ಇದು ನಭೋವಾಣಿ', ಅಹಮಿಕೆಯಿಲ್ಲ 'ವಿನಯ' ಸ್ವರ ||

ಜೀವಋತುಗೆ 'ಮತ್ತೆ ಶ್ರಾವಣ ಬಂತು', ಹಾಡೆ 'ಒಲವೇ ನಮ್ಮ ಬದುಕು'
'ಚತುರೋಕ್ತಿ' ಜತೆಗೆ ಹಾಕುತೆ 'ಪರಾಕಿ', ಎಷ್ಟು 'ಕಾವ್ಯವೈಖರಿ' ಸರಕು !
'ತಾ ಲೆಕ್ಕಣಿಕೆ ತಾ ದೌತಿ' ಅನ್ನುತಲೆ ಮಾಡಿದ 'ಬಾಲಬೋಧೆ' ತಿರುಳು
ಮುಪ್ಪ ಪಳಗಿಸೆ 'ಚೈತನ್ಯದ ಪೂಜೆ', ಮಾಗಿದೆದೆಯಲು 'ಪ್ರತಿಬಿಂಬಗಳು' ||

ತಡೆಹಿಡಿವರಾರು 'ಶ್ರಾವಣ ಪ್ರತಿಭೆ' ? ನಿಂತ ಕೂತೆಡೆಯೆ ಬರೆವ ದೈತ್ಯ
ಕೂರಬಿಡದೆ 'ಕುಣಿಯೋಣು ಬಾ' ಎಂದೆಲ್ಲರನು ಕುಣಿದಾಡಿಸಿದಾ ನೃತ್ಯ 
ಮಾನವ ಬೇಂದ್ರೆ, ಚಿಂತಕ ಬೇಂದ್ರೆ, ತ್ರಿಮುಖಿ ಸೃಜನಶೀಲ 'ಬುದ್ಧ' ಬೇಂದ್ರೆ
ಪದ್ಮಶ್ರಿ ಅಂಬಿಕಾತನಯದತ್ತನ ಕಾವ್ಯತೋಟಕೊಂದು ನಮನದೀ ಮುದ್ರೆ ||

- ನಾಗೇಶಮೈಸೂರು

Comments

Submitted by santhosha shastry Tue, 02/02/2016 - 21:41

ವರಕವಿ ಬೇಂದ್ರೆಯವರ ಬರವಣಿಗೆಗಳನ್ನೆಲ್ಲಾ ಸೊಗಸಾಗಿ ಪೋಣಿಸಿದ್ದೀರಾ ರಾಯರು. ಬೇಂದ್ರೆಯವರ ಎಲ್ಲಾ ಬರಹಗಳನ್ನೋದಿರದ ನಮ್ಮಂಥವರಿಗೆ ಇದು ಸೊಗಸಾದ ಪರಿವಿಡಿ. ಸೊಗಸಾದ ಕವಿತೆಗೆ ಮತ್ತು ತನ್ಮೂಲಕ ಕವಿರಾಯರಿಗೆ hatts off.

Submitted by nageshamysore Wed, 02/03/2016 - 04:16

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು.. ಎಲ್ಲಾ ಪುಸ್ತಕಗಳನ್ನ ಓದೋಕಂತು ಆಗುತ್ತೊ ಇಲ್ವೊ, ಕನಿಷ್ಠ ಹೆಸರುಗಳನ್ನಾದರು ಓದಿ ತಿಳ್ಕೊಂಡಿರೋಣ ಅಂತ ಅಷ್ಟೆ.. ಅವಕಾಶ ಸಿಕ್ದಾಗ ಆದಷ್ಟನ್ನ ಓದೋದು ಹೇಗು ಇದ್ದೆ ಇರುತ್ತೆ.. :-)

Submitted by Huddar Shriniv… Fri, 02/05/2016 - 13:36

ಬೇಂದ್ರೆ ಕಾಡುವ ಕವಿ.ಬೇಂದ್ರೆ ಬದುಕಿದ್ದಾಗ ಅವರನ್ನು ಅನೇಕರು ಕಾಡಿದರಂತೆ. ಇರಲಿ, ಬೇಂದ್ರೆ ಬದುಕಿದ್ದಾಗಲೆ ಅವರನ್ನು ಕುರಿತು ಆಗಿನ ಮಹಾನ್ ಅನ್ನುವ ಸಾಹಿತಿಗಳು ಅವರ ಕುರಿತು ಕವಿತೆ ಬರೆದಿದ್ದಾರೆ. ಈಗ ನೀವು ಅವರ ಕವಿತೆಗಳ ಶಿಷ೵ರಿಕೆ ಇಟ್ಟಕೊಂಡು ಸುಂದರವಾದ ಕವಿತೆ ಬರೆದಿದ್ದೀರಿ.ಓದಿ ಖುಷಿಯಾಯಿತು.

Submitted by nageshamysore Fri, 02/05/2016 - 18:56

In reply to by Huddar Shriniv…

ಶ್ರೀನಿವಾಸ ಹುದ್ದಾರರೆ, ನಮಸ್ಕಾರ ಮತ್ತು ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ನಿಮ್ಮ ಮಾತು ಅಕ್ಷರಶಃ ನಿಜ - ಆದರೀಗ ಈಗ ನಿರಂತರ ಕಾಡುವ ಸರದಿ ಬೇಂದ್ರೆಯವರ ಕವಿತೆಗಳದ್ದು..! ಅವರ ಕಾವ್ಯ ಗಂಗೆಯನ್ನು 'ಇಳಿದು ಬಾ ತಾಯಿ ಇಳಿದು ಬಾ' ಎಂದು ಕರೆಯುವ ಅಗತ್ಯವೆ ಇಲ್ಲಾ.. 'ಕಾಡುಮೇಡಿಗೆಲ್ಲ' ತಾನಾಗೆ ಬಂದವತರಿಸುವ ಶ್ರಾವಣದ ರೀತಿ, ನಿಸರ್ಗ ಸಹಜವಾಗಿ ಅನಾವರಣಗೊಳ್ಳುತ್ತದೆ.. 'ನೀ ಹೀಂಗ ನೋಡಬ್ಯಾಡ ನನ್ನ' ಅನ್ನುವ ದೈನ್ಯತೆಯೂ ಕವನದ ಬದಲು ಕಣ್ಣೀರಾಗಿ ಹರಿದು ಹೋಗುತ್ತದೆ - ಆ ತಾಕತ್ತು ಬೇಂದ್ರೆಯವರ ಕವನಗಳ ಅಸೀಮ ಶಕ್ತಿಯೆ ಬಿಡಿ :-)

Submitted by ಗಣೇಶ Sun, 02/07/2016 - 22:49

ವಾಹ್ ನಾಗೇಶರೆ, ಕವನ ಸಂಕಲನಗಳನ್ನು ಅದು"ಪ್ರಕಟವಾದ ಅನುಕ್ರಮಣಿಕೆ"ಯಲ್ಲೇ ಕವನ ಹೊಸೆದಿದ್ದೀರಲ್ಲಾ... ಸೂಪರ್.
ನಿಮಗೆ ಬಹುಮಾನವಾಗಿ :) ಇದೊಂದು ಕೊಂಡಿ- http://kannadadeevige.blogspot.in/2014/08/blog-post.html

Submitted by nageshamysore Mon, 02/08/2016 - 07:16

In reply to by ಗಣೇಶ

ಗಣೇಶ್ ಜಿ ನಮಸ್ಕಾರ ಮತ್ತು ಧನ್ಯವಾದಗಳು.. ಕೊಟ್ಟ ಬಹುಮಾನದ ಕೊಂಡಿಯಲ್ಲಿ ಬೇಂದ್ರೆಯವರ ಹಕ್ಕಿ ಮತ್ತು ಬೆಕ್ಕುಗಳೆರಡನ್ನು ಹಾರಿಸಿಬಿಟ್ಟಿರಿ. ತುಂಬ ಒಳ್ಳೆಯ, ಉಪಯುಕ್ತ ಜಾಲತಾಣದ ಪರಿಚಯ ಮಾಡಿಸುತ್ತ :-)

Submitted by nageshamysore Wed, 02/10/2016 - 19:25

In reply to by Shreekar

ನಮಸ್ಕಾರ ಮತ್ತು ಧನ್ಯವಾದಗಳು ಶ್ರೀಕರ್, ನೀವು ಕೊಟ್ಟ ಲಿಂಕಿನ ಲೇಖನ ಸೊಗಸಾಗಿದೆ. ಅಲ್ಲಿರುವ ಉದಾಹರಣೆಗಳು ಕೂಡಾ ಚೆನ್ನಾಗಿವೆ.. :-)