ಭಯಭೀತರ ಬಗೆಗೊಂದಿಷ್ಟು....

ಭಯಭೀತರ ಬಗೆಗೊಂದಿಷ್ಟು....

ನನ್ನ ದೈನಂದಿನ ವ್ಯವಹಾರಗಳ ಸುತ್ತಮುತ್ತ ನಡೆಯುವ ವಿದ್ಯಮಾನಗಳೇ ನನ್ನ ಹಲವು ಬರಹಕ್ಕೆ ಪ್ರೇರಣೆಯಾಗುತ್ತವೆ.ಮೊನ್ನೆಯಷ್ಟೇ ನಡೆದ ಘಟನೆಯೊಂದು ನನ್ನನ್ನು ಈ
ಬರಹ ಬರೆಯಲು ಪ್ರೇರೇಪಿಸಿದೆ ಎಂದರೆ ಸುಳ್ಳಾಗಲಾರದು.ನಮ್ಮ ಆಫೀಸು ಕಟ್ಟಡವೊಂದರ ಎರಡನೆಯ ಮಹಡಿಯಲ್ಲಿದೆ.ದಿನನಿತ್ಯ ನೂರಾರು ಜನರು ಹಣಕಾಸಿನ
ವ್ಯವಹಾರಕ್ಕೆ ಬರುವ ಕಚೇರಿಯದು.ಅಂದು ಶನಿವಾರವಿರಬೇಕು.ಕಚೇರಿಯಲ್ಲಿ ಕಾಲಿಡಲಾಗದಷ್ಟು ಜನಸಂದಣಿಯಿತ್ತು.ನನ್ನ ಆ ಸಹದ್ಯೋಗಿಗೆ ಸುಮಾರು ಮೂವತ್ತರ
ಹರೆಯ.ಮಹೇಶ್ ಎನ್ನುವುದು ಆತನ ಹೆಸರು. ಆತ ತನ್ನ ಕುರ್ಚಿಯಲ್ಲಿ ಕುಳಿತು ಕೆಲಸದಲ್ಲಿ ಮಗ್ನನಾಗಿದ್ದ.ತಲೆ ಬಗ್ಗಿಸಿ ಏನನ್ನೋ ಬರೆಯುತ್ತ ಕುಳಿತಿದ್ದವನಿಗೆ ಕೇಳಿಸಿದ್ದು
’ಪಟಪಟ’ಸದ್ದು.ಏನೆಂದು ತಲೆಯೆತ್ತಿ ನೋಡುವಷ್ಟರಲ್ಲಿ ಪಾರಿವಾಳವೊಂದು ಹಾರುತ್ತ ಅವನು ಕುಳಿತಿದ್ದ ಟೇಬಲ್ಲಿನ ಬಳಿಯೇ ಬರುತ್ತಿರುವುದು ಅವನಿಗೆ ಕಂಡಿದೆ. ಹಾಗೆ ತನ್ನೆಡೆಗೆ
ಹಾರಿ ಬರುತ್ತಿದ್ದ ಪಕ್ಷಿಯನ್ನು ಕಂಡಿದ್ದೇ ತಡ ಆತ ಏಕಾಏಕಿ ’ಹೋ.’ಎಂದು ಜೋರಾಗಿ ಅರಚುತ್ತ ತನ್ನ ಕುರ್ಚಿಯನ್ನು ಬಿಟ್ಟು ಓಡತೊಡಗಿದ.ಮೊದಲೇ ದಾರಿ ತಪ್ಪಿಸಿಕೊಂಡು
ನಮ್ಮ ಆಫೀಸಿನೊಳಗೆ ನುಗ್ಗಿ ಗಾಬರಿಗೊಂಡಿದ್ದ ಪಾರಿವಾಳ ಇವನ ಗದ್ದಲದಿಂದ ಮತ್ತಷ್ಟು ಆತಂಕಗೊಂಡವರಂತೆ ತನ್ನ ರೆಕ್ಕೆಗಳನ್ನು ಇನ್ನಷ್ಟು ಜೋರಾಗಿ ಪಟಪಟಗುಟ್ಟಿಸುತ್ತ
ನಮ್ಮ ಆಫೀಸಿನ ತುಂಬೆಲ್ಲ ಹಾರಾಡತೊಡಗಿತು.ಅದರ ಹಾರಾಟವನ್ನು ಕಂಡು ಮತ್ತಷ್ಟು ಭಯಭೀತನಾದ ಮಹೇಶ್ ಹೆಚ್ಚು ಕಡಿಮೆ ಕಚೇರಿಯ ದೊಡ್ಡ ಕಿಟಕಿಯೊಂದರಿಂದ ಕೆಳಕ್ಕೆ
ಧುಮುಕಿಬಿಡುವ ಆಲೋಚನೆಗೆ ಬಂದುಬಿಟ್ಟಿದ್ದ.ಆದರೆ ಹೆಚ್ಚಿನ ಅನಾಹುತ ಸಂಭವಿಸುವುದಕ್ಕೂ ಮುನ್ನ ಕಚೇರಿಯ ಸೆಕ್ಯುರಿಟಿ ಗಾರ್ಡ್ ಪಾರಿವಾಳವನ್ನು ಕೈಯಲ್ಲಿ ಹಿಡಿದು
ಕಿಟಕಿಯಿಂದ ಅದನ್ನು ಹೊರಕ್ಕೆ ಹಾರಿಸಿದ.ಸರಿಸುಮಾರು ಒಂದೈದು ನಿಮಿಷಗಳ ಕಾಲಾವಧಿಯಲ್ಲಿ ಇದೆಲ್ಲವೂ ನಡೆದುಹೋಗಿತ್ತು.ಹಣ ಬಟವಾಡೆಗಾಗಿ ಕಚೇರಿಯ ಕೌಂಟರಿನಲ್ಲಿ
ನಿಂತಿದ್ದ ಜನ ಮಹೇಶನನ್ನೇ ವಿಚಿತ್ರವಾಗಿ ನೋಡತೊಡಗಿದ್ದರು.’ಯಕಶ್ಚಿತ್ ಪಾರಿವಾಳಕ್ಕೂ ಹೆದರುವವರಿದ್ದಾರಾ..’? ಎನ್ನುವ ಪ್ರಶ್ನೆಯೊಂದು ಅವರೆಲ್ಲರ ಮುಖಭಾವದಲ್ಲಿ
ಕಾಣುತ್ತಿತ್ತು.ಆದರೆ ಮಹೇಶನಿಗೆ ಇದ್ಯಾವುದರ ಪರಿವೆಯೂ ಇಲ್ಲ.ಆತ ಜೋರಾಗಿ ನಿಟ್ಟುಸಿರುಬಿಡುತ್ತಿದ್ದ. ಅವನ ಕಪಾಳಗಳಿಂದ ಬೆವರು ಜಿನುಗುತ್ತಿತ್ತು.ಏದುಸಿರು ಬಿಡುತ್ತಿದ್ದ ಆತನ
ಎದೆಬಡಿತ ಜೋರಾಗಿದ್ದು ಸ್ಪಷ್ಟವಾಗಿ ಕಂಡುಬರುತ್ತಿತ್ತು.ನಾನು ಹಿಂದೆಂದೂ ಆತನ ಇಂಥಹ ವರ್ತನೆಯನ್ನು ಕಂಡಿರಲಿಲ್ಲ.ಅಂದಿನ ಅವನ ವರ್ತನೆ ನನಗೂ ವಿಲಕ್ಷಣವೆನ್ನಿಸಿದ್ದು
ಸುಳ್ಳಲ್ಲ.’ಕಸ ಜಾಲ್ರೆ ಮಹೇಶಾ,ಕಿತಾಕ್ ಭಿಲೋ..’? (ಏನಾಯ್ತೋ ಮಹೇಶ,ಯಾಕೆ ಹೆದರಿಕೊಂಡೆ) ಎಂದಾತನನ್ನು ಕೊಂಕಣಿಯಲ್ಲಿ ಕೇಳಿದೆ.ಅದಕ್ಕುತ್ತರಿಸಿದ ಆತ ,’ಮಕ್ಕ್
ಉಡ್ಚ್ ಪಕ್ಷಿ ಪಳೇಲಾರಿ ಭಯ್ ದಿಸ್ತಾ ಸರ್..’? ( ನನಗೆ ಹಾರುವ ಹಕ್ಕಿಗಳನ್ನು ಕಂಡರೇ ಭಯವಾಗುತ್ತೆ ಸರ್) ಎಂದಾಗ ನಿಜಕ್ಕೂ ಆಶ್ಚರ್ಯವಾಯಿತು.ಎಪ್ಪತೆಂಭತ್ತು ಕೇಜಿಯ
ದಾಂಡಿಗನೊಬ್ಬ ತೀರ ಪಾರಿವಾಳದಂತಹ ನಿರುಪದ್ರವಿ ಪಕ್ಷಿಯನ್ನು ಕಂಡು ಹೆದರಿ ಕಂಗಾಲಾಗಿದ್ದು ನನ್ನಲ್ಲೊಂದು ಕುತೂಹಲವನ್ನು ಹುಟ್ಟಿಸಿತು.ಇಂಥದ್ದೊಂದು ಭಯದ ಬೆಂಬತ್ತಿ
,ಇದರ ಹಿನ್ನಲೆಯನ್ನು ತಿಳಿದುಕೊಳ್ಳುವ ಉತ್ಸಾಹದಿಂದ. ಲೈಬ್ರರಿಯನ್ನು,ಅಂತರ್ಜಾಲವನ್ನು ತಡಕಾಡುತ್ತಿದ್ದವನಿಗೆ ಕಣ್ಣಿಗೆ ಬಿದ್ದ ಮೊಟ್ಟ ಮೊದಲ ಶಬ್ದವೇ ’ಫೋಬಿಯಾ’

ಫೋಬಿಯಾ ಎಂದರೆ ಭಯ ಎಂದರ್ಥ.ಯಾವುದಾದರೊಂದು ವಸ್ತು ಅಥವಾ ಸನ್ನಿವೇಶದೆಡೆಗಿನ ಅಸಹಜ ,ಅರ್ಥಹೀನ ಅತಿರೇಕದ ಭಯವೆನ್ನುವುದು ಫೋಬಿಯಾದ
ವ್ಯಾಖ್ಯಾನ.ಗ್ರೀಕ್ ಶಬ್ದವಾದ ’ಫೊವೋಶ್’ ಎನ್ನುವುದರ ಆಂಗ್ಲ ಅವತರಣಿಕೆಯಾಗಿರುವ ’ಫೋಬಿಯಾ’,ಒಂದು ಬಗೆಯ ಮಾನಸಿಕ ಅಸಮತೋಲನವೆನ್ನುವುದು ತಜ್ನರ
ಅಭಿಮತ.ಹೆಚ್ಚಿನ ಫೋಬಿಯಾಗಳು ನಿರಪಾಯಕಾರಿಯೆನ್ನುವುದು ನಿಜವೇ ಆಗಿದ್ದರೂ ಕೆಲವು ಫೋಬಿಯಾಗಳು ತೀರ ಪ್ರಾಣಕ್ಕೆ ಸಂಚಕಾರ ತರುವಷ್ಟು
ಅಪಾಯಕಾರಿಯಾಗಬಲ್ಲವೆಂದರೆ ನಿಮಗೆ ಆಶ್ಚರ್ಯವೆನಿಸಬಹುದು.ಕೆಲವರಿಗೆ ಜಿರಳೆಗಳನ್ನು ಕಂಡರ ಭಯ,ಉಳಿದವರಿಗೆ ಹಲ್ಲಿಯನ್ನು ಕಂಡರೆ ಭೀತಿ,ಹಲವರಿಗೆ ನೀರಿನೆಡೆಗೆ
ಅಂಜಿಕೆಯಾದರೆ ,ಅನೇಕರಿಗೆ ಎತ್ತರದ ಪ್ರದೇಶಗಳ ಕುರಿತಾದ ಹೆದರಿಕೆ.ಇವುಗಳೆಲ್ಲವೂ ನಾವು ತೀರ ಸಹಜವೆನ್ನುವಂತೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ
ಗಮನಿಸಿರಬಹುದಾದ ಫೋಬಿಯಾಗಳು.ಆದರೆ ತೀರ ವಿರಳವೆನಿಸುವ,ನಮಗರಿವಿರದ ಕೆಲವು ವಿಲಕ್ಷಣ ಫೋಬಿಯಾಗಳ ಕುರಿತು ಇಂದು ನಿಮ್ಮ ಮುಂದೆ ಹೇಳಬೇಕೆನ್ನಿಸಿದೆ.

ನಾನು ಆಗಲೇ ಹೇಳಿದ ನನ್ನ ಸಹದ್ಯೋಗಿಗೆ ಇರುವ ಪಕ್ಷಿಗಳ ಕುರಿತಾದ ಭಯದ ಹೆಸರು ’Ornithophobia'.ಭಾರತದಲ್ಲಿ ಇಂಥದ್ದೊಂದು ಭಯ ತೀರ ವಿರಳವಾದರೂ
ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ನಿತೋಫೊಬಿಯಾದಿಂದ ಬಳಲುತ್ತಿರುವವರ ಸಂಖ್ಯೆಕಡಿಮೆಯೇನಿಲ್ಲ.ಎಳೆಯ ಮಕ್ಕಳ ಕೈಯಲ್ಲಿನ ತಿಂಡಿಯ ಆಸೆಗಾಗಿ ಪಕ್ಕನೆ ಮೇಲೆರಗುವ
ಸಣ್ಣಪುಟ್ಟ ಪಕ್ಷಿಗಳ ಎಗರುವಿಕೆಯ ಘಟನೆಗಳು ಸೂಪ್ತವಾಗಿ ಮನದಲ್ಲಿ ಉಳಿದುಹೋಗುವುದು ಸಹ ಇಂಥಹ ಫೋಬಿಯಾಕ್ಕೆ ಕಾರಣವಾಗಬಹುದೆನ್ನುವುದು ಮನೋವಿಜ್ನಾನಿಗಳ
ಅಂಬೋಣವಾದರೂ,ಅದೊಂದು ತರ್ಕವೇ ಈ ಬಗೆಯ ಫೋಬಿಯಾದ ಹುಟ್ಟಿಗೆ ಏಕಮಾತ್ರ ಕಾರಣವಲ್ಲವೆನ್ನುವುದನ್ನೂ ವಿಜ್ನಾನಿಗಳೇ ಸ್ಪಷ್ಟಪಡಿಸುತ್ತಾರೆ.ಹೀಗೊಂದು
ಫೊಬಿಯಾಕ್ಕೆ ಬಲಿಯಾದವರಿಗೆ ಹಕ್ಕಿಗಳ ರೆಕ್ಕೆಯ ಸದ್ದುಗಳು ಅಗಾಧವಾದ ಭಯವನ್ನುಂಟು ಮಾಡುತ್ತವೆ.ಪಕ್ಷಿಗಳು ತೀರ ತಮ್ಮ ಹತ್ತಿರದಲ್ಲಿಯೇ ಹಾರುತ್ತಿವೆಯೆಂಬುದು
ಖಾತರಿಯಾದ ಕ್ಷಣವೇ ತಮ್ಮೆಲ್ಲ ಸಂವೇದನೆಯನ್ನು ಕಳೆದುಕೊಂಡು ,ಉದ್ವೇಗದಿಂದ ವರ್ತಿಸುವ ಇಂಥವರು ಗಾಬರಿಯಿಂದ ತಮ್ಮ ಪ್ರಾಣಕ್ಕೆ
ಅಪಾಯವನ್ನುಂಟುಮಾಡಿಕೊಳ್ಳುವ ಸಂಭವನಿಯತೆಯನ್ನು ಸಹ ಅಲ್ಲಗಳೆಯಲಾಗದು.ತೀರ ಅತಿರೇಕದ ಪಕ್ಷಿಭೀತರು ಮನೆಯಿಂದಲೂ ಹೊರಬೀಳದೆ,ಕೈದಿಗಳಂತೆ
ಗೃಹಬಂಧನದಲ್ಲಿಯೇ ಉಳಿದುಕೊಂಡುಬಿಡುವ ಪ್ರಸಂಗಗಳು ಇಂದಿಗೂ ವಿದೇಶದಲ್ಲಿ ನಡೆಯುತ್ತಿವೆಯೆನ್ನುವುದು ನಂಬಲಾಗದ ಸತ್ಯ.ಮಾನಸಿಕ ತಜ್ನರೊಂದಿಗಿನ ಸಣ್ಣದ್ದೊಂದು
ಸಮಾಲೋಚನೆ ಮತ್ತು ಕೆಲವು ಔಷಧಿಗಳಿಂದ ಪಕ್ಷಿಭೀತಿಯನ್ನು ಗುಣಪಡಿಸಬಹುದೆನ್ನುವ ಸಂಗತಿ ಪಕ್ಷಿಭೀತರಿಗೆ ಕೊಂಚ ಸಮಾಧಾನದ ನೀಡಬಹುದೇನೋ.ಖ್ಯಾತ ಇಂಗ್ಲಿಷ್
ನಿರ್ದೇಶಕ ಅಲ್ಫ್ರೆಡ್ ಹಿಚ್ಕಾಕ್ ,1963ರಲ್ಲಿಯೇ ಪಕ್ಷಿಭೀತಿಯನ್ನಾಧರಿಸಿ ’ದ ಬರ್ಡ್ಸ್’ಎನ್ನುವ ಸಿನಿಮಾವೊಂದನ್ನು ನಿರ್ದೇಶಿಸಿದ್ದ ಎನ್ನುವುದು ಗಮನಾರ್ಹ.

ಅತಿಯಾಗಿ ಮಾತನಾಡುತ್ತ ಊಟ ಮಾಡುತ್ತಿರುವಾಗ ,ಕೆಲವೊಮ್ಮೆ ಮಾತಿನ ಭರದಲ್ಲಿ ತಿನ್ನುತ್ತಿರುವ ತುತ್ತು ಉಸಿರಿನಲ್ಲಿ ಸಿಕ್ಕಿಕೊಂಡು ಅನ್ನವೆನ್ನುವುದು ನೆತ್ತಿಗೇರಿ
ಶುರುವಾಗುವ ತಾತ್ಕಾಲಿಕ ಅಸಾಧ್ಯ ಕೆಮ್ಮು ಎಲ್ಲರಿಗೂ ಪರಿಚಿತವೇ.ನೀರು ಕುಡಿದೋ,ಮುಖವನ್ನೊಮ್ಮೆ ಆಗಸದತ್ತ ಎತ್ತಿಯೂ ಅಂಥಹ ಕೆಮ್ಮಿಗೆ ಉಪಶಮನ
ಕಂಡುಕೊಳ್ಳುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಆದರೆ ಹೀಗೊಂದು ಕೆಮ್ಮಿನ ಭಯಕ್ಕೆ ಊಟವನ್ನೇ ತಿರಸ್ಕರಿಸುವ ಜನರ ಬಗ್ಗೆ ನಿಮಗೆ ಗೊತ್ತೆ? ಹೌದು.Phagophobia
ಎನ್ನುವ ಭೀತಿಯಿಂದ ಬಳಲುತ್ತಿರುವವರ ಸಮಸ್ಯೆಯಿದು.ಕನ್ನಡದಲ್ಲಿ ’ನುಂಗುಭೀತಿ’ಎನ್ನುವುದು ಇದರ ಸಮನಾರ್ಥಕ ಪದವಾಗಬಹುದು.ಯಾವುದೇ ದೈಹಿಕ
ನ್ಯೂನತೆಗಳಿಲ್ಲದಾಗಿಯೂ ನುಂಗುಭೀತರು ಆಹಾರ ಸ್ವೀಕರಿಸುವುದರ ಬಗ್ಗೆ ಚಿಂತಿತರಾಗಿರುತ್ತಾರೆಂದರೆ ನಿಮಗೆ ನಂಬಲು ತುಸುಕಷ್ಟವೆನಿಸಬಹುದು.ನುಂಗುವ ಪ್ರತಿಯೊಂದು
ತುತ್ತು ,ಗಂಟಲೊಳಗೆ ಸಿಲುಕಿ,ಉಸಿರುಕಟ್ಟಿ ಸಾಯುವ ಭಯದಿಂದ ,ಆಹಾರವನ್ನೇ ಸ್ವೀಕರಿಸದೆ,ಅಥವಾ ಕೇವಲ ಜಲಾಹಾರಗಳನ್ನು ಮಾತ್ರ ಸ್ವೀಕರಿಸುವ ಇಂಥವರು
ಸಹಜವಾಗಿಯೇ ರಕ್ತಹೀನತೆ,ತೂಕಹೀನತೆಯಂತಹ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ.ತಜ್ನರಿಂದ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಆಹಾರಹೀನತೆಯೆನ್ನುವುದು ನುಂಗುಭೀತರ
ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಬಲ್ಲದೆನ್ನುವುದು ವಿಜ್ನಾನಿಗಳು ಕಂಡುಕೊಂಡಿರುವ ಸಂಗತಿ.

ನಿಮ್ಮೆದುರಿಗೊಬ್ಬ ಸುಂದರಿ ನಡೆದು ಬರುತ್ತಿದ್ದಾಳೆಂದುಕೊಳ್ಳಿ.ಆಗ ನೀವೇನು ಮಾಡುತ್ತೀರಿ? ನೀವು ಅವಿವಾಹಿತರಾಗಿದ್ದರೆ ನೇರವಾಗಿ ಲೈನ್
ಹೊಡೆಯುತ್ತೀರಿ.ವಿವಾಹಿತರಾಗಿದ್ದರೆ ಪಕ್ಕದಲ್ಲೇ ಇರುವ ಮಡದಿ ತಿಳಿಯದಂತೆ ಸುಂದರಿಯೆಡೆಗೆ ವಕ್ರದೃಷ್ಟಿ ಬೀರುತ್ತೀರಿ ಅಲ್ಲವೇ? ಆದರೆ ಕೆಲವರ ಸಂಗತಿ
ಹಾಗಲ್ಲ.ಸುಂದರಿಯರನ್ನು ಕಂಡರೆ ಸಾಕು ಅಂಥವರಿಗೆ ಮೈಯಲ್ಲೊಂದು ನಡುಕ,ಹಣೆಯ ಮೇಲೆ ಸಣ್ಣಗೆ ಬೆವರು ಶುರುವಾಗಿಬಿಡುತ್ತದೆ.ಸುಂದರಿಯರನ್ನು ಕಂಡಾಕ್ಷಣ
ಶುರುವಾಗುವ ಅಪರೂಪದ ದುರದೃಷ್ಟಕ್ಕೆ ’Venustraphobia’ ಎಂದು ಹೆಸರು.ಇದು ತೀರ ಮಾರಣಾಂತಿಕ ಭಯವಲ್ಲದಿದ್ದರೂ ಭಾವನಾತ್ಮಕವಾಗಿ ಪುರುಷನ
ಮನೋಸ್ಥೈರ್ಯವನ್ನು ಕುಗ್ಗಿಸಿಬಿಡುವ ಮನೋವ್ಯಾಧಿ.ತಮ್ಮ ದೈಹಿಕ ರೂಪ ಮತ್ತು ವ್ಯಕ್ತಿತ್ವದೆಡೆಗಿರಬಹುದಾದ ಸೂಪ್ತ ಕೀಳರಿಮೆ ಇಂಥದ್ದೊಂದು ಭೀತಿಗೆ ಕಾರಣವೆಂಬುದಾಗಿ
ಪರಿಣಿತರು ಅಭಿಪ್ರಾಯ ಪಡುತ್ತಾರೆ.ತಮ್ಮ ವ್ಯಕ್ತಿತ್ವದಲ್ಲೊಂದು ಆತ್ಮವಿಶ್ವಾಸವನ್ನು ಕಂಡುಕೊಳ್ಳುತ್ತ,ತನ್ನಷ್ಟಕ್ಕೆ ತಾನೇ ಹುರಿದುಂಬಿಸಿಕೊಳ್ಳುತ್ತ,ಧನಾತ್ಮಕ ಮನೋಭಾವವನ್ನು
ಬೆಳೆಸಿಕೊಂಡರೆ,ಯಾವುದೇ ತಜ್ನರ ನೆರವಿಲ್ಲದೆ,ಸುಂದರಿಯರ ಭೀತಿಯ ಕಾಯಿಲೆ ಮಾಯವಾಗುತ್ತದೆನ್ನುವುದು ವೈದ್ಯಕೀಯ ಲೋಕದ ವಿವರಣೆ.

ತೆನ್ನಾಲಿರಾಮನ ಹಾಸ್ಯಪ್ರಜ್ನೆಗೆ ಮೆಚ್ಚಿದ ಕಾಳಿದೇವಿಯು,ಆತನಿಗೆ ’ವಿಕಟಕವಿ’ಎನ್ನುವ ಬಿರುದನ್ನಿತ್ತ ಕತೆಯೆನ್ನು ನೀವೆಲ್ಲರೂ ಕೇಳಿರಲಿಕ್ಕೆ ಸಾಕು.’ವಿಕಟಕವಿ’ಎನ್ನುವ ಶಬ್ದವನ್ನು
ತಿರುಗುಮುರುಗಾಗಿ ಓದಿದರೂ ವಿಕಟಕವಿ ಎಂದೇ ಉಚ್ಚರಿಸಲ್ಪಡುವುದು ಈ ಶಬ್ದದ ವಿಶೇಷ.ಕನ್ನಡದಲ್ಲಿ ಇಂಥಹ ಪದಗಳಿಗೆ ಗತಪ್ರತ್ಯಾಗತ ಪದಗಳೆಂದು
ಕರೆಯಲಾಗುತ್ತದೆ.ಪ್ಯಾಲಿಂಡ್ರೋಮುಗಳೆಂದು ಇಂಗ್ಲೀಷಿನಲ್ಲಿ ಗುರುತಿಸಲ್ಪಡುವ ಇಂತಹ ಪದಗಳನ್ನು ಓದುವಾಗ ಕೆಲವರ ಗಂಟಲು ಒಣಗತೊಡಗುತ್ತದೆ,ತಕ್ಷಣಕ್ಕೊಂದು
ತಲೆನೋವು ಕಾಣಿಸಿಕೊಳ್ಳುತ್ತದೆಂದರೆ ಅಂಥವರು Aibohphobia ಎನ್ನುವ ಭಯದಿಂದ ಬಳಲುತ್ತಿದ್ದಾರೆಂದರ್ಥ.ಗತಪ್ರತ್ಯಾಗತ ಶಬ್ದಗಳೆಡೆಗಿನ ಭೀತಿ
ನಿರಪಾಯಕಾರಿಯಾಗಿರುವಂಥದ್ದು. ಇಂಥದ್ದೊಂದು ಭೀತಿಯ ಇರುವಿಕೆಯನ್ನು ಗಮನಿಸಿದ ವಿಜ್ನಾನಿಗಳು ಇದಕ್ಕಿಟ್ಟಿರುವ ಹೆಸರು ಸಹ ಗತಪ್ರತ್ಯಾಗತ ಪದವೇ ಎನ್ನುವುದು
ವಿಶೇಷ.

ಹೆಚ್ಚಿನ ಭೀತಿಗಳೊಂದಿಗೆ ಮುಖಾಮುಖಿಯಾಗುವವರೆಗೂ ಅನೇಕರಿಗೆ ತಮ್ಮಲ್ಲಡಗಿರುವ ಭೀತಿಯ ಇರುವಿಕೆಯ ಅರಿವಿರುವುದಿಲ್ಲ. ಡಬ್ಲ್ಯೂಡಬ್ಲ್ಯೂ ಎಫ್ ನ ದೈತ್ಯದೇಹಿ
,ಕುಸ್ತಿಪಟು ಏಳಡಿಯ ಅಂಡರ್ ಟೇಕರನಂತಹ ವ್ಯಕ್ತಿ ಸಹ ಸಣ್ಣದ್ದೊಂದು ಸೌತೆಕಾಯಿಯನ್ನು ಕಂಡರೆ ಭಯದಿಂದ ನಡಗುತ್ತಾನೆನ್ನುವುದು ,ದೈಹಿಕ ಗಾತ್ರಕ್ಕೂ
,ಫೋಬಿಯಾಗಳಿಗೂ ಯಾವುದೇ ಸಂಬಂಧವಿಲ್ಲವೆನ್ನುವುದಕ್ಕೆ ಸಾಕ್ಷಿ. ಮನೋವಿಜ್ನಾನವೆನ್ನುವ ಮಾಯಾಲೋಕದಲ್ಲಿ ಇಂಥಹ ಅನೇಕ ವಿಸ್ಮಯಗಳು ಅಡಗಿವೆ. ಒಂದೆಡೆ
ಹಣಕ್ಕಾಗಿ ಕೊಲೆ ಮಾಡಲು ಹೇಸದ ಜನರಿದ್ದರೆ ,ಇನ್ನೊಂದೆಡೆ ಹಣವನ್ನು ಕಂಡರೆ ಹುಟ್ಟುವ ’ಕ್ರೊಮೆಟೋಫೊಬಿಯಾ’ ಎನ್ನುವ ಭೀತಿಯಿದೆ.ಜೀವನವಿಡಿ ತಮ್ಮನ್ನು
ಬಾತುಕೊಳಿಯೊಂದು ಹಿಂಬಾಲಿಸುತ್ತಿರುತ್ತದೆಂಬ ಭ್ರಾಂತಿಹುಟ್ಟಿಸುವ ಅನೂಹ್ಯ ಮತ್ತು ವಿಲಕ್ಷಣ ಆಂಟಿಡಾಯೇಫೋಬಿಯಾ ಎನ್ನುವ ಕಾಯಿಲೆಯಿದೆ.ಮೀಸೆಯ ಬಗ್ಗೆ ಭಯ,ನಿದ್ರೆಯ
ಭಯ,ಆಫೀಸಿನ ಬಗೆಗಿನ ಭಯ ಹೀಗೆ ಹತ್ತು ಹಲವಾರು ಬಗೆಯ ಆಸಕ್ತಿಕರ ಭಯಗಳಿವೆ.ಅವುಗಳ ಬಗ್ಗೆ ಮುಂದೆಂದಾದರೂ ಬರೆಯುವೆ.ಸದ್ಯಕ್ಕೆ ಇಷ್ಟು ಸಾಕಲ್ಲವೇ?

Comments

Submitted by kavinagaraj Fri, 02/12/2016 - 12:30

ಇಂತಹ ಫೋಬಿಯಾಕ್ಕೆ ಕಾರಣಗಳಿರುತ್ತವೆ. ನನಗೆ ವಾಹನಗಳ ಬಂಪರಿನಲ್ಲಿ ಕಟ್ಟಿರುವ ಕುಚ್ಚುಗಳನ್ನು ಕಂಡರೆ ಈಗಲೂ ಭಯವಿದೆ. ಕಾರಣವೆಂದರೆ ಚಿಕ್ಕವನಿದ್ದಾಗ ಲಾರಿಗೆ ಕಟ್ಟಿದ್ದ ಬಂಪರಿನ ಕುಚ್ಚನ್ನು ಮುಟ್ಟಿ ಮುಂದೆ ಹೋಗುತ್ತಿದ್ದಾಗ ಲಾರಿಯ ಕ್ಲೀನರ್ ಧುತ್ತನೆ ಎದುರಿಗೆ ಬಂದು ನನ್ನ ಕಪಾಳಕ್ಕೆ ಬಾರಿಸಿಬಿಟ್ಟಿದ್ದ. ಕುಚ್ಚನ್ನು ಕಂಡಾಗಲೆಲ್ಲಾ ನನಗೆ ಆ ಹೊಡೆತ ಮತ್ತು ಕ್ಲೀನರ್ ಎದುರಿಗೆ ಬಂದು ನಿಂತಂತಾಗುತ್ತದೆ. ನನ್ನ ಸರ್ಕಾರಿ ವಾಹನಕ್ಕೆ ವಾಹನದ ಡ್ರೈವರ್ ಕಟ್ಟಿದ್ದ ಕುಚ್ಚನ್ನೂ ನಾನು ತೆಗೆಸಿದ್ದೆ!