ಕಿರುಗಥೆಗಳು - 01 : ಮುನಿಸು

ಕಿರುಗಥೆಗಳು - 01 : ಮುನಿಸು

ತಳಮಳದಿಂದ ಹಿಡಿತಕ್ಕೆ ಸಿಗದೆ ಒದ್ದಾಡುತ್ತಿದ್ದ ಮನಸಿಗೆ ಅವಳು ಆನ್-ಲೈನ್ ಆಗಿದ್ದು ಕಂಡು ತಟ್ಟನೆ ಜೀವ ಬಂದಂತಾಗಿ, ಹೊಯ್ದಾಟವೆಲ್ಲ ಒಂದೆ ಏಟಿಗೆ ಸ್ಥಿಮಿತಕ್ಕೆ ಬಂದಂತಾಯ್ತು. 'ಹಾಯ್' ಎಂದು ಮೇಸೇಜ್ ಕಳಿಸಿ ಮಾರುತ್ತರಕ್ಕಾಗಿ ಹಾತೊರೆದು ಕೂತ - ನಿನ್ನೆ, ಮೊನ್ನೆಯಂತೆ ನಿರ್ಲಕ್ಷಿಸದೆ ಇಂದಾದರು ಮಾತನಾಡುವಳೆಂದು. 

ಪ್ರತೀಕ್ಷೆಯ ಪ್ರತಿ ಕ್ಷಣವು ಯುಗದಂತೆ...

'ಹಾಯ್..' ಎಂದ ಪರದೆಯನ್ನು ನೋಡುತ್ತಿದ್ದಂತೆ ನಿಂತು ಹೋದಂತಿದ್ದ ಉಸಿರಾಟ ನಿರಾಳ ನಿಟ್ಟುಸಿರಾಗಿತ್ತು. 

'ಗುಡ್ ಮಾರ್ನಿಂಗ್.. ಹೇಗಿದ್ದಿ? ..' 

ಯಾಕೊ ಮಾರುತ್ತರವಿಲ್ಲ.... ಇನ್ನು ಕೋಪ ಆರಿದಂತೆ ಕಾಣುತ್ತಿಲ್ಲ.. ಹೇಗಾದರು ರಮಿಸಬೇಕು, ನಿನ್ನೆಯ ಹಾಗೆ ಕೋಪ, ಜಗಳದಲ್ಲಿ ಮುಕ್ತಾಯವಾಗಲಿಕ್ಕೆ ಬಿಡಬಾರದು.. ಆದರೆ ಏನು ಮಾತಾಡಲು ಹೊಳೆಯುತ್ತಿಲ್ಲ... ಹಿಂದೆಲ್ಲ ಗಂಟೆಗಟ್ಟಲೆ ಮಾತಾಡುತ್ತಿದ್ದರೂ ಮುಗಿಯಲೆ ಇಲ್ಲ ಅನ್ನುವಷ್ಟು ಸರಕಿರುತ್ತಿತ್ತು.. ಈಗೇಕೆ ಹೀಗೆ ? ಮನಸು ಸರಿಯಿದ್ದರೆ ಅದೆ ಮಾತಿನ ಹೂರಣವಾಗುತ್ತದೆ.. ಇಲ್ಲದಿದ್ದರೆ ಯಾವ ಮಾತಿಗೇನು ಅನಾಹುತ ಕಾದಿದೆಯೊ ಎನ್ನುವ ಅನುಮಾನದಲ್ಲಿ ಏನೂ ಹೊರಡುವುದಿಲ್ಲ..

' ಈಗ ಎದ್ದೆಯಾ...'

ಕೆಲವೊಮ್ಮೆ ಆಯುಧವಿಲ್ಲದೆ ಕೊಲ್ಲಲು, ಹಿಂಸಿಸಲು ಮೌನವೊಂದಿದ್ದರೆ ಸಾಕು.. ಭುಗಿಲೆಬ್ಬಿಸಿ, ದಿಗಿಲಾಗಿಸಿ, ಕಂಗೆಡಿಸಿ, ಕಂಗಾಲಾಗಿಸಿ ಮೆಟ್ಟಿಹಾಕಿಬಿಡಬಹುದು.. 

ಆದರೆ ತಡೆದುಕೊಳ್ಳಬೇಕು.. ಅವಳ ಮನಸ್ಸು ಸರಿಯಿಲ್ಲ.. ಈಗವಳಿಗೆ ಬೇಕಾದ್ದು ಸಮಾಧಾನಿಸುವ ಮಾತ ಸಖ್ಯ, ಶಾಂತಿ ನೀಡುವ ಮೌನ..

' ಇನ್ನೂ ಕೋಪಾನಾ?...'

'........'

'ಐ ಯಾಮ್ ರಿಯಲಿ ಸಾರೀ.. ತಪ್ಪಾಯ್ತೂ..'

'........'

' ನಂಗೊತ್ತು ನಿಂಗೆ ಬೇಜಾರಾಗಿದೆ... ಬಟ್ ಐಯಾಂ ರೀಯಲಿ ಟ್ರೈಯಿಂಗ್ ಹಾರ್ಡ್..'

'........'

ಮಾತು ಯಾರಪ್ಪನ ಗಂಟಿದ್ದರು ಇರಬಹುದು.. ಕೋಪವೇನು ಯಾರಪ್ಪನ ಮನೆ ಗಂಟೆ ? ನೆಪವಿಲ್ಲದೆಯೆ ಕಾಲಿಕ್ಕುವ ಖಳನಿಗೆ, ನೆಪ ಸಿಕ್ಕಿದರೆ ಮಾತಾಡುವಂತೆಯೆ ಇಲ್ಲ..

'ಏನಾದ್ರೂ ಮಾತಾಡಬಾರದೆ? ಹೀಗೆ ಮೌನ ಗೌರಿ ತರ ಕೂತ್ರೆ ನನಗೆ ಹೇಗೆ ಅರ್ಥ ಆಗಬೇಕು?'

' .........'

' ನಾ ಏರ್ಪೋರ್ಟಿಗೆ ಹೊರಡ್ಬೇಕು ... ಆಗ್ಲೆ ಲೇಟ್ ಆಗಿದೆ..ಏನಾದ್ರೂ ಹೇಳಬಾರದೆ?' ಕೋಪದೊಂದಿಗೆ ಬೆರೆತ ದೈನ್ಯವನ್ನ ಪದಗಳಾಗಿಸಿ ಪರದೆ ಮೇಲೆ ಮೂಡಿಸುತ್ತ ನುಡಿದ..

ಅವಳದದೆ ದಿವ್ಯ ಮೌನ.. ಆದರೆ ಪ್ರತಿ ಮೇಸೇಜನ್ನು ಓದುತ್ತಿರುವುದು ಕಾಣುತ್ತಿದೆ..

' ನಿನಗೆ ತುಂಬಾ ಇಗೊ ಜಾಸ್ತಿ ಬಿಡು... ಅಷ್ಟೊಂದು ಬೇಡ್ಕೊತಾ ಇದೀನಿ..ಕೇರೆ ಮಾಡಲ್ವಲ್ಲಾ ನೀನು.. ? ಕಲ್ಲು ಹೃದಯದ ಕಟುಕ ರಾಕ್ಷಸಿ ನೀನು... ಐ ಹೇಟ್ ಯೂ...' ಈ ಮಾತನ್ನ ಟೈಪ್ ಮಾಡಿದವನಿಗೆ ಕಳಿಸಲೊ ಬಿಡಲೊ ಅನ್ನೊ ಸಂದಿಗ್ದ.. 

ಅದಾವುದೊ ಧ್ಯಾನದಲ್ಲಿ ಡಿಲೀಟ್ ಮಾಡಲು ಹೋಗಿ 'ಸೆಂಡ್ ' ಒತ್ತಿ ಬಿಟ್ಟ.... !

ಅದುವರೆವಿಗು ಮೌನವಾಗಿದ್ದ ಬಾಂಬ್ ಆಗ ಸಿಡಿಯಿತು...!

' ಐ ಹೇಟ್ ಯು ಟೂ....!!'

ಸ್ಟೇಟಸ್ ಅನ್ ಲೈನ್ ಇದ್ದವಳು ಪಟ್ಟನೆ ಮತ್ತೆ ಮಾಯವಾಗಿಬಿಟ್ಟಳು... ಮಿಂಚಿಹೋದ ಅಚಾತುರ್ಯಕ್ಕೆ ಚಿಂತಿಸುತ್ತ ಮತ್ತೆ ಎಷ್ಟು ಮೇಸೇಜು ಕಳಿಸಿದರೂ ನಿರುತ್ತರ.. 

ಅವಳು ಮತ್ತೆ ಆನ್ಲೈನಿಗೆ ಬರಲೆ ಇಲ್ಲ , ಮೇಸೇಜುಗಳನ್ನು ನೋಡುತ್ತಲೂ ಇಲ್ಲಾ.. 

ಅದರಲ್ಲಿದ್ದುದ್ದೆಲ್ಲ ಬರಿ ನೂರಾರು ಸಾರಿಗಳು, ನೂರಾರು ತಪ್ಪೊಪ್ಪಿಗೆಗಳು .. ಆದರೆ ಕೇಳುವವರಿಲ್ಲ, ನೋಡುವವರಿಲ್ಲ..

ನಿರಾಶನಾಗಿ ಮೇಲೆದ್ದ ಅವನು ಭಾರವಾದ ಮನದೊಡನೆ ಭಾರದ ಲಗೇಜನ್ನು ಎಳೆಯುತ್ತ ಏರ್ಪೋರ್ಟಿನತ್ತ ನಡೆದ, ಇನ್ನೆಲ್ಲಾ ಮುಗಿಯಿತು ಎಂಭಂತೆ...

ಅರ್ಧಗಂಟೆಯ ನಂತರ ಟ್ಯಾಕ್ಸಿಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದವನಿಗೆ ಇಡಿ ಪ್ರಪಂಚವೆ ಬೇಡವೆನಿಸುವಂತಹ ಅಸಹನೀಯಾ, ವೈರಾಗ್ಯ ಭಾವ.. ಎರಡು ಮೂರು ಬಾರಿ ಪೋನಿನ ಬೀಪ್ ಸದ್ದು ಕೂಡ ಗಮನಿಸದಷ್ಟು ಅನ್ಯಮನಸ್ಕತೆ.. 

ಎರಡು ಗಂಟೆಯ ನಂತರ ಪ್ಲೇನಿನೊಳಗೆ ಕುಳಿತಾಗ ಪೋನ್ ಏರ್ಪ್ಲೇನ್ ಮೋಡಿಗೆ ಬದಲಿಸಲಿಲ್ಲವೆಂದು ನೆನಪಾಯ್ತು..
ತೆರೆದು ನೋಡಿದರೆ ಅಲ್ಲೊಂದು ಯಾರದೊ ಮೇಸೇಜ್ ಕಾಯುತ್ತಿತ್ತು.. ಯಾರದೆಂದು ನೋಡುವ ಮನಸಿರದಿದ್ದರು ತೆರೆದು ನೋಡಿದ , ಆಫ್ ಮಾಡುವ ಮೊದಲು..

ಎರಡು ಗಂಟೆಗು ಮೊದಲು ಅವಳು ಕಳಿಸಿದ್ದ ಮೇಸೇಜೊಂದು ಅಲ್ಲಿ ಕಾಯುತ್ತಿತ್ತು...

' ಹ್ಯಾಪಿ ಜರ್ನೀ...!!!!'

'........'

ಅದೊಂದು ಮಾತಿನ ಹಿಂದೆ, ಮುನಿಸಿನ ಮೋಡವೆಲ್ಲ ಕರಗಿ ಅಡಗಿಸಿಟ್ಟ ಪ್ರೀತಿಯ ಮಳೆಯಾದ ಅದ್ಭುತ ಸಂದೇಶವಿತ್ತು..

ಆ ಎರಡು ಪದಗಳ ಹಿಂದಿನ ಭಾವದರಿವಿನಿಂದಲೆ, ಅವನ ಮೈ ಮನದಲ್ಲಿ ಮತ್ತೆ ನವಚೇತನ ತುಂಬಿಕೊಂಡಂತಾಗಿ ಆನಂದದ ಶಿಳ್ಳೆಯಾಗಿ ಹೊರಬಿತ್ತು, ಪಯಣಕ್ಕೆ ಉತ್ಸಾಹ ತುಂಬುವ ಸಂಜೀವಿನಿಯಾಗಿ..

*********

 

Comments