ಕಿರುಗತೆಗಳು - 02 : ಊರಿಗೆ..

ಕಿರುಗತೆಗಳು - 02 : ಊರಿಗೆ..

ತಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟವಳಿಗೆ ಎಲ್ಲಿದ್ದೆನೆಂದು ಮನವರಿಕೆಯಾಗಲೆ ಅರೆಗಳಿಗೆ ಹಿಡಿಯಿತು... ಹಿಂದಿನ ದಿನ ಸಂಜೆ ಆಫೀಸು ಮುಗಿಯುತ್ತಿದ್ದಂತೆ, ಯಾಕೊ ರೋಸಿಹೋದಂತೆನಿಸಿ ವಾರದಿಂದ ಊರಿಗೆ ಹೋಗಬೇಕೆನ್ನುವ ತುಡಿತಕ್ಕೆ ಮತ್ತೆ ಚಾಲನೆ ಸಿಕ್ಕಿ , ಉಟ್ಟಬಟ್ಟೆಯಲ್ಲೆ ಮೆಜೆಸ್ಟಿಕ್ಕಿನಲ್ಲಿ ರಾತ್ರಿ ಬಸ್ಸು ಹಿಡಿದು ಹೊರಟಿದ್ದು ನೆನಪಾಯ್ತು.. 

ಹಾಳು ರಿಸರ್ವೇಶನ್ ಮಾಡಿಸದೆ ಹೊರಟಿದ್ದು.. ಊರಿನ ಡೈರೆಕ್ಟ್ ಬಸ್ಸಲ್ಲಿ ಸೀಟೆ ಇರಲಿಲ್ಲ.. ರಾತ್ರಿ ಹತ್ತರ ಸಮಯ ಬೇರೆ.. ಸಿಟಿ ಬಸ್ಸು ಹಿಡಿದು ಬಂದಿದ್ದೆ ಎರಡು ಗಂಟೆ ಹಿಡಿದಿತ್ತು.. 'ಒಂದೇ ಒಂದು ಲೇಡಿಸ್ ಸೀಟು ಇದಿಯಾ ನೋಡಿ, ಪ್ಲೀಸ್.. ' ಎಂದವಳನ್ನ ಒಂದು ತರಾ ಕುಹಕ ನಗೆಯೊಂದಿಗೆ , ' ಆಗಲ್ಲ ಮೇಡಂ ..ಎಲ್ಲಾ ಸೀಟು ರಿಸರ್ವೇಶನ್.. ಪುಲ್ ಆಗಿಬಿಟ್ಟಿದೆ.. ರಾತ್ರಿ ಜರ್ನಿ ಒಬ್ಬರೆ ಹೆಂಗಸು ಹೊರಟಿದ್ದೀರಾ , ರಿಸರ್ವ್ ಮಾಡಿಸೋಕೆ ಗೊತ್ತಾಗಲ್ವಾ?.. ' ಎಂದಿದ್ದ ಕಂಡಕ್ಟರ್, ಅವಳ ಕೈಲಿದ್ದ ಮೊಬೈಲನ್ನೆ ದಿಟ್ಟಿಸುತ್ತ.. 'ಆನ್ಲೈನಿನಲ್ಲಿ ಮೂರ್ಹೊತ್ತು ಆಡುತ್ತ, ಮಾತಾಡ್ತುತ್ತ ಕಳೆಯೊ ಅದೇ ಮೊಬೈಲಲ್ಲಿ ರಿಸರ್ವೇಶನ್ ಮಾಡೀಸಲೇನು ಧಾಡಿ?' ಎನ್ನುವ ಹಾಗೆ..

ಅಸಹಾಯಕತೆ, ಅಸಹನೆಗೆ ಬಂದ ಕೋಪಕ್ಕೆ ಅವನ ಮೇಲೆ ಕಾರಿಕೊಳ್ಳುವಂತಾದರು ಬಲವಂತದಿಂದ ನುಂಗಿಕೊಂಡಳು.. 'ಇವನ್ಯಾರು ಅದೆಲ್ಲಾ ಹೇಳೊದಕ್ಕೆ..? ಇದ್ದರೆ ಇದೆ, ಇಲ್ಲಾ ಅಂದ್ರೆ ಇಲ್ಲಾ ಅನ್ಬೇಕು... ಇಲ್ಲದ ತಲೆಹರಟೆಯೆಲ್ಲ ಯಾಕೆ ಬೇಕು?'.  ಇದ್ದಕ್ಕಿದ್ದ ಹಾಗೆ ಹೊರಟು, ಮನೆಗೆ ಹೋಗಿ ಬಟ್ಟೆ ತೆಗೆದುಕೊಂಡು ಬರಲು ಆಗಿರಲಿಲ್ಲ. ಆದರೂ ರಿಸರ್ವೇಶನ್ ಮಾಡಿಸದೆ ಬರಬಾರದಿತ್ತು.. ಆಗ ಇಲ್ಲಿ ಕಂಡ ಕಂಡ ಬಸ್ಸಿಗೆಲ್ಲ  'ಪ್ಲೀಸ್ ಒಂದೆ ಒಂದ್ ಲೇಡೀಸ್ ಸೀಟ್ ಇದೆಯಾ?' ಅಂತ ಭಿಕ್ಷೆ ಬೇಡುವ ಪ್ರಮೇಯವಿರುತ್ತಿರಲಿಲ್ಲ.. ಎಲ್ಲಾ ಅವನಿಂದಲೆ ಆಗಿದ್ದು.. ಹೊರಡೊ ಮೊದಲು ಗಂಟೆಗಟ್ಟಲೆ ಪೋನಿನಲ್ಲಿ ಕಾಡುತ್ತ, ರಿಸರ್ವೇಶನ್ ಚೆಕ್ ಮಾಡಲೂ ಟೈಮ್ ಇಲ್ಲದ ಹಾಗೆ ಮಾಡಿಬಿಟ್ಟಿದ್ದ.. ಬಸ್ಸಿಗೆ ಹೊರಡೊ ಮೊದಲಷ್ಟು ಟೈಮು ಇದ್ದರು, ಅವನು ಕೆಡಿಸಿದ ಮೂಡಿನಿಂದ ಚೆಕ್ ಮಾಡುವ ಪರಿಜ್ಞಾನವೂ ಕಳೆದುಹೋಗಿತ್ತು.. ಗಂಟೆಗಟ್ಟಲೆ ಮಾತಾಡಿದ್ದಾದರೂ ಏನು? ಅದೇ ಮಾತು, ಅದೆ ಗೋಳಾಟ.. ಪದೇಪದೇ ಒದರಿಕೊಂಡು ಜೀವ ತಿನ್ನುತ್ತಾನೆ.. ನನ್ನ ಪಾಡಿಗೆ ನನ್ನ ಬಿಡು..ನನ್ನ ಮನಸೀಗ ಸರಿಯಿಲ್ಲ ಅಂದರೂ ಕೇಳುವುದಿಲ್ಲ.. ಸ್ವಲ್ಪ ಜೋರಾಗಿ, ಒರಟಾಗಿ ಮಾತಾಡಿದರೆ ಒಂದು ಗಂಟೆ ಬದಲು ಎರಡು ಗಂಟೆ ಹಿಂಸೆ ಅನುಭವಿಸಬೇಕು.. ಹೇಗೊ ತಡೆದುಕೊಂಡು ಮುಗಿಸಿಬಿಡುವುದು ವಾಸಿ.. ಸಹ್ಯವಾಗದಿದ್ದರೂ ಸರಿ ಎಂದು ಅನುಭವಿಸಿದ್ದಾಗಿತ್ತು.. ಅವನ ಮಾತು ಹಾಳಾಗಲಿ , ಈಗ ಬಸ್ಸಿಗೇನು ಮಾಡುವುದು ? ಈಗ ಊರಿಗೆ ಬಸ್ಸು ಸಿಗದಿದ್ದರೆ ಮನೆಗೆ ಹೋಗುವ ಸಿಟಿ ಬಸ್ಸು ಮತ್ತೆರಡು ಗಂಟೆ ಹಿಡಿಯುತ್ತದೆ.. ಇಷ್ಟೊತ್ತಿನಲ್ಲಿ ಬಸ್ಸೂ ಸಿಗುವುದಿಲ್ಲ , ಅದರಲ್ಲು ಹೆಂಗಸರು ಇರುವುದು ಅನುಮಾನ... ಬರಿ ಕುಡಿದು ಕೆಕ್ಕರಿಸಿ ನೋಡುವವರ ನಡುವೆ, ಗಬ್ಬು ವಾಸನೆ ಅನುಭವಿಸಿಕೊಂಡು ಮೂಗು ಮುಚ್ಚಿಕೊಂಡೆ ನಿಲ್ಲಬೇಕು.. ಈ ಹೊತ್ತಿನಲ್ಲಿ ಆಟೊಗೆ ಹೋಗಲೂ ಭಯಾ.. ಎಲ್ಲಕ್ಕಿಂತ ಹೆಚ್ಚಾಗಿ ಊರಿಗೆ ಹೋಗಲೆಬೇಕು ಅನಿಸುತ್ತಿದೆ, ಮನಶ್ಯಾಂತಿಯೆ ಇಲ್ಲದಂತಾಗಿರುವ ಈ ಹೊತ್ತಲ್ಲಿ...

ಸಿಟ್ಟಿಗದು ಸಮಯವಲ್ಲ ಎಂದು ಸಿಕ್ಕಿದ ಬಸ್ಸನ್ನೆಲ್ಲ ಬೇಡಿ ಕೊನೆಗೆ ಭದ್ರಾವತಿಯತನಕ ಹೊರಡುವ ಬಸ್ಸೊಂದನ್ನು ಹಿಡಿದಾಗ 'ಉಸ್ಸಪ್ಪಾ' ಎಂದು ನಿಟ್ಟುಸಿರು ಬಿಡುವಂತಾಗಿತ್ತು.. ಅಲ್ಲಿಂದ ಊರಿಗೆ ಇನ್ನೊಂದು ಬಸ್ಸು ಹಿಡಿದು ನಡೆಯಬೇಕು.. ಕನಿಷ್ಠ ಮೂರ್ನಾಲ್ಕು ಗಂಟೆಯಾದರೂ ತಡವಾಗುತ್ತದೆ, ಡೈರೆಕ್ಟ್ ಬಸ್ಸಿಗೆ ಹೋಲಿಸಿದರೆ.. ಜತೆಗೆ ಟಿಕೆಟ್ಟಿಗೆ ಇನ್ನೂರು ರೂಪಾಯಿ ಹೆಚ್ಚು ಬೇರೆ ಆಗುತ್ತೆ.. ಆದರೂ ಸರಿ ಊರಿಗೆ ಮಾತ್ರ ಹೋಗಲೆಬೇಕು.. ಒಂದೆರಡೆ ದಿನವಿದ್ದು ಮತ್ತೆ ವಾಪಸ್ಸು ಬರಬೇಕಾಗಿದ್ದರು ಸರಿ.. 

ಹಾಗೆಂದುಕೊಂಡವಳು ಸೀಟಿನಲ್ಲಿ ನಿರಾಳ ಕೂತಾಗ ಮತ್ತವನ ನೆನಪಾಗಿತ್ತು. ಮೊಬೈಲು ತೆರೆದು ನೋಡಿದರೆ ಯಥಾರೀತಿ ಮೇಸೇಜುಗಳು.. ' ಊರಿಗೆ ಹೊರಟೆಯಾ?' 'ಬಸ್ಸು ಸಿಕ್ತಾ?' 'ಎಲ್ಲಿದ್ದೀಯಾ ಈಗ?' ' ಉತ್ತರಾನೆ ಕೊಡ್ತಿಲ್ಲ.. ಯಾಕೆ?' ಇತ್ಯಾದಿ. ಸಿಟಿಬಸ್ಸಿನಲ್ಲಿದ್ದಾಗಲೆ ಉತ್ತರಿಸಲು ಮನಸಿಲ್ಲದೆ, ಸ್ಟೇಟಸಿನಲ್ಲಿ ' ಟು ಹೋಮ್' ಎಂದು ಹಾಕಿ ಸುಮ್ಮನಾಗಿದ್ದಳು.. ಬಸ್ಸು ಹೊರಡತೊಡಗಿತ್ತು.. ಎಲ್ಲಿದ್ದರೊ ಇಷ್ಟು ಜನಗಳು..ಈ ರಾತ್ರಿಯಲ್ಲೂ ಬಸ್ಸು ಪುಲ್.. ಸದ್ಯ ಒಂದು ಸೀಟು ಹೇಗೊ ಸಿಕ್ಕಿತಲ್ಲ..!

ಆಗ ಸರಿಯಾಗಿ ಮತ್ತೆ ಅವನ ಕೊನೆ ಮೇಸೇಜು ಕಣ್ಣಿಗೆ ಬಿದ್ದಿತ್ತು..' ಸ್ಟೇಟಸ್ ನೋಡಿದೆ.. ಊರಿಗೆ ಹೊರಟಿದ್ದು ಕನ್ಫರ್ಮ್ ಆಯ್ತು.. ನಿನಗೆ ಮೆಸೇಜು ಹಾಕಿ ಕಾಟ ಕೊಡಲ್ಲ.. ಹ್ಯಾಪಿ ಜರ್ನೀ'  ಅಂದಿದ್ದ ಮೇಸೇಜು.. ' ಅಯ್ಯೊ ಪಾಪ' ಅನಿಸಿತ್ತು ಒಂದು ಗಳಿಗೆ.. ಎಷ್ಟೆ ಕಾಡಿದರೂ ಜೀವ ಇಟ್ಟುಕೊಂಡಿದಾನೆ... ಕ್ಷೇಮವಾಗಿದೀನೊ ಇಲ್ವೊ ಅಂತ ಒದ್ದಾಡ್ತಾ ಇರ್ತಾನೆ... ಹೇಳ್ತಾನೆ ಇದೀನಿ.. ನನಗೆ ನನ್ನ 'ಸ್ಪೇಸ್' ಬೇಕು ಇಷ್ಟು 'ಪೊಸೆಸ್ಸಿವ್' ಆಗಿರ್ಬೇಡ ಅಂತ.. ಕೇಳೋದೆ ಇಲ್ಲಾ.. ಅಷ್ಟೊಂದು ಹಚ್ಕೊಂಡಿದ್ದಾದ್ರು ಯಾಕೊ ? ಅದೇನು ನನ್ನ ತಪ್ಪಾ ?'

ಹೊರಡೊ ಮೊದಲು ಪೋನಲ್ಲು ಮಾತು ಕೊನೆಯಾಗಿದ್ದು ಜಗಳದ ರೀತಿಲೆ.. ಕೊನೆಗೆ ಏನೇನೊ ಒರಟಾಗಿ ಉತ್ತರಿಸಿ ಪೋನಿಡುವಂತೆ ಮಾಡಿದ್ದು... ಹೋದ ಸಲ ಇದೇ ತರ ಊರಿಗೆ ಹೊರಟಾಗ ರಾತ್ರಿ ಪೂರ್ತಿ ಮೇಸೇಜು ಕಳಿಸ್ತಾನೆ ಇದ್ದ ಪಾಪ.. ಅವಳು ಎಷ್ಟು ಖುಷಿಯಿಂದ ಮಾತಾಡಿದ್ದಳು ಇಡೀ ರಾತ್ರಿ ? ಪೋನ್ ಬ್ಯಾಟರಿ ಮುಗಿದು ಹೋದ್ರು ಮತ್ತೊಂದು ಹಳೆ ಪೋನಲ್ಲಿ ಸಿಮ್ ಹಾಕಿ ಮಾತಾಡಿದ್ದು.. ಹಾಗೆ ಇರೋಕೆ ಏನಾಗಿತ್ತು ಅವನಿಗೆ ? ಎಲ್ಲಾ ಅವಸರದಲ್ಲೆ ಮಾಡಿ ಹಾಳು ಮಾಡ್ತಾನೆ.. ಕಾಯಿ ಬಾಳೆಹಣ್ಣನ್ನ ಅರ್ಜೆಂಟು ತಿನ್ನೋಕೆ ಬೇಕು ಅಂತ ಒತ್ತಿ ಒತ್ತಿ ಮೃದು ಮಾಡ್ಬಿಟ್ರೆ ಹಣ್ಣಾಗಿ ಬಿಡುತ್ತಾ..? ಎಲ್ಲಾದಕ್ಕೂ ಕಾಯೊ ಸಹನೆ ಇರ್ಬೇಕು.. ಅವನಿಗೆ ಅದೇ ಇಲ್ಲಾ.. ನಂಗೆ ಟೈಮು ಕೊಡು ಯೋಚಿಸ್ಬೇಕು ಅಂದ್ರೆ ಕೇಳೋದೆ ಇಲ್ಲ... ಹಾಳಾದ್ದು ಕಣ್ಮುಚ್ಚಿ ಸೀಟಲ್ಲೆ ಮಲಗೋಣ ಅಂದ್ರೆ ಯಾಕೊ ಆಗ್ತಾ ಇಲ್ಲಾ ಬೇರೆ..

ಸರಿ ಹಾಳಾಗಲಿ, ನಿದ್ದೆ ಮಾಡದೆ ಸಂಕಟದಲ್ಲಿ ಒದ್ದಾಡ್ತನೆ, ಅನಿಸಿ ಒಂದು ಮೇಸೇಜು ಕಳಿಸೆ ಬಿಟ್ಟಳು..  'ಈಗ ಬಸ್ಸು ಸಿಕ್ತು.. ರಾಮ್ರಾಮಾ ಸಾಕಾಗೋಯ್ತು.. ಸಿಕ್ಕಿದ ಬಸ್ಗೆಲ್ಲ ಅಡ್ಡ ಹಾಕಿ ಬೇಡ್ಕೊಂಡ್ರೂ ಸೀಟಿಲ್ಲ..'

'ಅಯ್ಯೊ.. ಹಾಗಾದ್ರೆ ಬಸ್ಸು ಚೇಂಜ್ ಮಾಡಬೇಕಾ ತಿರ್ಗಾ ? ಡೈರೆಕ್ಟ್ ಬಸ್ಸು ಸಿಗಲಿಲ್ವಾ? ಯಾವ ಬಸ್ಸು ಸಿಕ್ತು ? ಮಲಗಿಕೊಂಡು ಆರಾಮವಾಗಿ ಹೋಗೊ ಹಾಗಾದ್ರೂ ಇದೆಯೊ ಇಲ್ವೊ'  ಹೇಳದಿದ್ದರು ಅವಳ ಪರಿಸ್ಥಿತಿಯನ್ನು ಅರೆಬರೆ ಊಹಿಸಿ ಒಂದೆ ಸಾರಿಗೆ ಪ್ರಶ್ನೆಯ ಮಳೆ ಸುರಿಸಿಬಿಟ್ಟ ಕೂಡಲೆ.. ಬಹುಶಃ  ಈ ರಾತ್ರಿ ಉತ್ತರಿಸುವುದೆ ಇಲ್ಲ ಅಂದುಕೊಂಡಿದ್ದಿರಬೇಕು.. ಅಷ್ಟು ಉದ್ದದ ಉತ್ತರ ನೋಡಿ, ಕೋಪವೆಲ್ಲ ಹೊರಟುಹೋಗಿದೆ ಅಂದುಕೊಂಡನೊ ಏನೊ..

ಕೆಲವಕ್ಕೆ ಚುಟುಕಾಗೆ ಉತ್ತರಿಸಿದಾಗ ಏನೊ ನಿರಾಳ... ಹಾಗೆ ಸ್ವಲ್ಪ ಹೊತ್ತು ಮಾತಾಡಿದರೆ ಇನ್ನು ಸಮಾಧಾನವಾದೀತೆಂದುಕೊಳ್ಳುವಾಗಲೆ ಬ್ಯಾಟರಿ ಅರ್ಧಕ್ಕಿಂತಲು ಕಡಿಮೆಯಿರುವುದು ಕಾಣಿಸಿತು.. ಇನ್ನು ಮಾತಿಗಿಳಿದರೆ ಆಮೇಲೆ ಫೋನ್ ಮಾಡಲೂ ಚಾರ್ಜು ಇರುವುದಿಲ್ಲ.. ಅವಸರಕ್ಕೆ ಹೊರಟು ಪವರ್ ಬ್ಯಾಂಕು ಚಾರ್ಜು ಮಾಡಿಕೊಳ್ಳಲು ಆಗಿರಲಿಲ್ಲ....

' ಚಾರ್ಜು ಇಲ್ಲಾ.. ಪೋನ್ ಆಫ್ ಮಾಡಬೇಕು.. ' ಅಂದಳು

ಆಗಲೂ ಅವನ ಅವಸರದ ಪ್ರಶ್ನೆಗಳು.. ಸದಾ ಕೇಳುತ್ತಲೆ ಇರುತ್ತಾನೆ ಏನಾದರೂ.. ಅವೆಲ್ಲ ಈಗಲೆ ಅರ್ಜೆಂಟಲ್ಲಾ... ಆದರು ಚುಟುಕಾಗಿ ಉತ್ತರಿಸಿದಳು.. ಮಾಮೂಲಿನಂತೆ ಕಾಡದೆ ' ಪೋನ್ ಎಮರ್ಜೆನ್ಸಿಗೆ ಬೇಕು.. ಆರಿಸಿಬಿಡು .. ಶಿವಮೊಗ್ಗ ತಲುಪಿದ ಮೇಲೆ ಬಸ್ಸು ಸಿಕ್ತಾ ಮೆಸೇಜು ಕಳಿಸು..' ಎಂದು ಬೈ ಹೇಳಿದ್ದ..

ಆಮೇಲೇನೊ ನಿರಾಳದ ನಿದ್ದೆ ಇದೀಗ ಎಚ್ಚರವಾಗೊ ತನಕ.. ಶಿವಮೊಗ್ಗ ಬಂದುಬಿಟ್ಟಿದೆ ಎಂದುಕೊಂಡೆ ಟೈಮ್ ನೋಡಿಕೊಂಡಳು - ಅರೆ, ನೇರ ಬಸ್ಸಲ್ಲಿ ಆದರೂ ಈ ಹೊತ್ತಿಗೆ ಬರುತ್ತಿದ್ದುದಲ್ಲವೆ ಎನಿಸಿ... ಬಸ್ಸಿಂದ ಕೆಳಗಿಳಿದು ಊರಿನ ಬಸ್ ಫ್ಲಾಟ್ ಫಾರಮ್ಮಿನತ್ತ ನಡೆದರೆ, ಅದೇ ಕೋತಿ ಮೀಸೆಯ ಡೈರೆಕ್ಟ್ ಬಸ್ಸಿನ ಕಂಡಕ್ಟರ್ ಕಣ್ಣಿಗೆ ಬಿದ್ದಿದ್ದ, ಬಸ್ಸಿನ ಬಾಗಿಲಲ್ಲಿ ಒರಗಿಕೊಂಡು ಹತ್ತುವವರಿಗಾಗಿ ಅಂಗಲಾಚುತ್ತ... ರಿಸರ್ವೇಶನ್ ಸೀಟುಗಳೆಲ್ಲ ಮುಕ್ಕಾಲು ಪಾಲು ಶಿವಮೊಗ್ಗದಲ್ಲೆ ಖಾಲಿಯಾಗುವ ಕಾರಣ ಇಲ್ಲಿಂದ ಹೊಸ ಸೀಟು ಹಿಡಿದೆ ನಡೆಯಬೇಕು.. ಅವನೆದುರಾಗಿ ಅವಳನ್ನು ಕಾಣುತ್ತಿದ್ದಂತೆ ರಾತ್ರಿಯದೆಲ್ಲ ನೆನಪಾಗಿ ಅವಾಕ್ಕಾದವನಂತೆ ಮಾತು ನಿಲ್ಲಿಸಿಯೆಬಿಟ್ಟ ಅರೆ ಗಳಿಗೆ..ಊರಿಗೆ ಟಿಕೆಟ್ಟು ಕೊಳ್ಳಲು ಅವಳ ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಲೆ, ಹಾಗು ಹೀಗು ಸಾವರಿಸಿಕೊಂಡು ಪೆಚ್ಚಾದ ದನಿಯಲ್ಲಿ, ' ಬಸ್ಸೆ ಸಿಕ್ಕಿರಲಿಲ್ಲ ಹೇಗ್ ಬಂದ್ಬಿಟ್ರಿ ಮೇಡಂ ? ಅದೂ ಈ ಬಸ್ಸನ್ನೆ ಹಿಡಿದಿದ್ದಿರಾ?' ಅವಳು ಮಾತಾಡದೆ ವ್ಯಂಗವಾಗಿ ನಕ್ಕು ಒಳಗೆ ಹೋಗಿ ಸೀಟೊಂದರಲ್ಲಿ ಕೂತಳು.. ಇನ್ನು ಅರ್ಧಗಂಟೆಯಿದೆ ಹೊರಡಲು..ಸದ್ಯ ಬೇಗನೆ ಬಂದು ಸೀಟೂ ಸಿಕ್ಕಿತು, ಅಂದುಕೊಂಡ ಹಾಗೆ ಎಂಟರ ಒಳಗೆ ಊರಿಗೆ ತಲುಪಬಹುದು ಅನಿಸಿ ಪ್ರಪುಲ್ಲವಾಯಿತು ಅವಳ ಮನಸು.

ಆ ಖುಷಿಯಲ್ಲೆ ಅವನ ನೆನಪಾಗಿ 'ಶಿವಮೊಗ್ಗ ಬಂತು' ಎಂದು ಮೆಸೇಜು ಕಳಿಸಿದಳು.. ತಟ್ಟನೆ ಮಾರುತ್ತರ ಬಂತು ' ಗ್ರೇಟ್.. ಇನ್ನು ಎಷ್ಟೊತ್ತು ಕಾಯ್ಬೇಕು...?'

' ಬಸ್ಸು ಸಿಕ್ತು, ಸೀಟಲ್ಲಿ ಕೂತಿದೀನಿ...' ಅಂದಾಗ ಬೆಂಗಳೂರಿನಲ್ಲಿ ಮಿಸ್ ಆಗಿದ್ದ ಅದೇ ಬಸ್ಸು ಶಿವಮೊಗ್ಗದಲ್ಲಿ ಸಿಕ್ಕಿತು ಎಂದವನಿಗರ್ಥವಾಗಲಿಕ್ಕೆ ಕೊಂಚ ಗಳಿಗೆಯೆ ಹಿಡಿಯಿತು.. ಅವನು ಖುಷಿಯಲ್ಲೆ 'ವಾವ್.. ಸುಪರ್..' ಎಂದ.. ಆ ಗಳಿಗೆಯ ಖುಷಿಗೆ ಇನ್ನು ಮಾತು ಬೇಕೆನಿಸಿ ತನ್ನನ್ನು ಕಂಡು ಪೆಚ್ಚಾದ ಕಂಡಕ್ಟರನ ಕಥೆಯನ್ನು ಹೇಳಿಕೊಂಡಳು.. ಕೊನೆಗೂ ಊರಿಗೆ ಸಮಯಕ್ಕೆ ಸರಿಯಾಗಿ ಹೋಗುತ್ತಿರುವ ಖುಷಿ ಪ್ರತಿ ಅಕ್ಷರದಲ್ಲು ಎದ್ದು ಕಾಣುತ್ತಿತ್ತು.. 

' ಐಯಾಂ ಸಾರಿ...ರಾತ್ರಿ ನಿನಗೆ ತುಂಬಾ ಪ್ರೆಷರ್ ಕೊಟ್ಟುಬಿಟ್ಟೆ... ಮನೆಯಲ್ಲಾದರು ಆರಾಮವಾಗಿದ್ದು ಬಾ.. ನಾ ಆದಷ್ಟು ಸೈಲೆಂಟಾಗಿ ಇರ್ತೀನಿ.. ಕಾಡಲ್ಲ..' ಎಂದವನ ಮಾತಿನಲ್ಲಿ ನಿಜಾಯತಿಯ ಎಳೆಯಿತ್ತು.. ' ಮನೆ ರೀಚ್ ಆದ ತಕ್ಷಣ ಮೆಸೇಜು ಕಳಿಸು ..' ಎಂದು ಅರೆಮನದಲ್ಲೆ ಮಾತು ಮುಗಿಸಲ್ಹೊರಟವನನ್ನು , ಮತ್ತೊಂದೆರಡು ಗಳಿಗೆ ಹಿಡಿದಿಟ್ಟುಕೊಂಡಳು - ಮಿಕ್ಕ ಬ್ಯಾಟರಿಯಿನ್ನು ಸಾಕಷ್ಟಿರುವುದನ್ನು ಗಮನಿಸಿ...

' ನೀನು ಹೇಳ್ತೀಯಾ ಆದರೆ ಫಾಲೊ ಮಾಡಲ್ಲ... ನೋಡೋಣ ಈ ಸಾರಿ ಏನು ಮಾಡ್ತೀಯಾ ಅಂತ..' ಎಂದು ಸ್ಮೈಲಿಯೊಂದನ್ನು ಹಾಕಿ ಪೋನು ಆರಿಸಿದಳು..

ಎಷ್ಟೊಬಾರಿ ಊರಿಗೆ ಬಂದು ಹೋಗಿದ್ದರೂ ಏನೂ ಪ್ಲಾನಿಲ್ಲದೆ ಬಂದ ಈ ಬಾರಿಯಂತೆ ಉತ್ಕಟ ತೀವ್ರತೆಯನ್ನು ಯಾವತ್ತೂ ಅನುಭವಿಸಿರಲಿಲ್ಲ.. ಮೊದಲ ಬಾರಿಗೆ ಹೊರಟವಳ ಕುತೂಹಲದಲ್ಲಿ ಕಾಯಲಾಗದೆ ಚಡಪಡಿಸಿತ್ತು ಮನಸು.. ಎರಡು ಗಂಟೆಯ ಪಯಣವೂ ಮೊದಲ ಬಸ್ಸಿನ ಪಯಣಕ್ಕಿಂತ ಹೆಚ್ಚು ಉದ್ದವಿರುವ ಹಾಗೆ.. ಆ ಹೇಳಲಾಗದ ಕಾತರದ ಭಾವ ಕಾಡುತ್ತಿರುವಾಗಲೆ ದೂರದ ಚಿರಪರಿಚಿತ ತಿರುವು ಕಾಣಿಸಿತ್ತು, ಇನ್ನೇನು ಊರು ಬಂದೆಬಿಟ್ಟಿತು ಎಂದು ಸಾರುತ್ತ. ಮತ್ತೆ ಒಳಗಿನ ಹರ್ಷವೆಲ್ಲ ಉಕ್ಕಿಬಂದಂತೆ ಉತ್ಸಾಹದ ಬುಗ್ಗೆಯುಕ್ಕಿ, ಪೋನ್ ಆನ್ ಮಾಡಿ ಒಂದು ಮೆಸೇಜು ಕಳಿಸಿದಳು 'ಮನೆ ಬಂತು, ಬೈ ಬೈ , ಹ್ಯಾವ್ ಎ ಗುಡ್ ಡೇ' .. ತಟ್ಟನೆ ಮರುತ್ತರ ಬಂತು, ' ಎಂಜಾಯ್ ದ ಸ್ಟೆ ಪೀಸ್ಪುಲೀ..'

ಅದಕ್ಕುತ್ತರಿಸದೆ ನಕ್ಕು ಬ್ಯಾಗೆತ್ತಿಕೊಂಡು ಕೆಳಗಿಳಿಯ ಹೊರಟವಳಿಗೆ ದೂರದ ಜಗುಲಿಯ ಮೇಲಿನಿಂದ ಕೈಯಾಡಿಸುತಿದ್ದ ಅಪ್ಪಾ ಕಾಣಿಸಿದ್ದರು, ಮರೆಯಲ್ಲಿ ಬಾಗಿಲ ಬಳಿ ನಿಂತಿದ್ದ ಅಮ್ಮನ ಗುಲಾಬಿ ಸೀರೆಯ ಸೆರಗಿನ ಹಿನ್ನಲೆಯಲ್ಲಿ.. 

ಎಂದಿಲ್ಲದ ನಿರಾಳ ಆಹ್ಲಾದತೆಯ ಮನದಲ್ಲಿ ಬಿರಬಿರನೆ ನಡೆಯಹತ್ತಿದಳು ಮನೆಯತ್ತ - ವೇಗವಾಗಿ ಹೋಗದಿದ್ದರೆ ಎಲ್ಲಿ ಆ ರಸ್ತೆಯೆ ಕರಗಿ ಮಾಯವಾಗಿ ಬಿಡುವುದೊ ಎನ್ನುವಂತೆ.

ಊರಿನ ಮೊದಲ ಸಾಲಿನಲ್ಲಿದ್ದ ಆ ಪರಿಚಿತ ಮನೆಗೆ, ಅಪರಿಚಿತಳ ಉತ್ಸಾಹದಲ್ಲಿ ನಡೆದವಳ ಮನಸೂ ಶಾಂತಿಯ ತವರೂರ ತಲುಪಿತ್ತು - ಆ ಗಳಿಗೆಯ ಮಟ್ಟಿಗೆ..!

********
 

Comments

Submitted by kavinagaraj Wed, 02/17/2016 - 16:32

ರಾತ್ರಿ ಹೊತ್ತಿನಲ್ಲಿ ಒಂಟಿಹೆಣ್ಣು, ಅದೂ ಬೆಂಗಳೂರಿನಲ್ಲಿ, ಊರಿಗೆ ಹೊರಟ ಪ್ರಸಂಗ ಕಳವಳ ಉಂಟು ಮಾಡಿಸಿತು. ಇನ್ನೊಮ್ಮೆ ಹೀಗೆ ಮಾಡಿಸಬೇಡಿ, ನಾಗೇಶರೇ!

Submitted by nageshamysore Wed, 02/17/2016 - 19:38

In reply to by kavinagaraj

ಅದು ನಮಗೆ ನಿಮಗೆ ಅರ್ಥ ಆಗುತ್ತೆ ಕವಿಗಳೇ, ಆದರೆ ಆ ರೀತಿ ಭಂಡ ಧೈರ್ಯದಿಂದ ಹೊರಡುವ ಆ ವೀರ ವನಿತೆಯರಿಗೂ ಅರ್ಥವಾಗಬೇಕಲ್ಲವೆ ? :-) ಹೇಳ ಹೊರಟರೆ ಕೋಪ , ಹೇಳದಿದ್ದರೆ ಆತಂಕ - ಎರಡರ ಕಲಸಿಟ್ಟ ಭಾವ ಕಥೆಗೆ ಸೂಕ್ತ ಅನಿಸಿ ಹೊಸೆದ ಕಥೆಯಿದು... ಕಥೆಯಲ್ಲೇನೊ ಹೋಗದಂತೆ ತಡೆಯಬಹುದು, ನಿಜ ಜೀವನದಲ್ಲಿ ಅವರವರ ಮುಂಜಾಗರೂಕತೆಯಲ್ಲಿ ಅವರಿರಬೇಕು :-) ಧನ್ಯವಾದಗಳು.