ಗುರುತ್ವ ತರಂಗ (ಗುರುತ್ವದಲೆ)
ಎರಡು ಕಪ್ಪು ಬಿಲದ ಕಥೆ ಗೊತ್ತ ?
ಬಿಲಿಯಾಂತರ ವರ್ಷದ ಹಿಂದಿನ ಮಾತು.
ಅಂತಿಂಥದ್ದಲ್ಲ, ಮೂವತ್ತು ಸೂರ್ಯರ ಗಾತ್ರ
ಅತಿ ಗುರುತ್ವಕೆ ತಲೆ ತಿರುಗಿ ತಂತಮ್ಮದೆ ಸುತ್ತ
ಗಿರಕಿ ಹೊಡೆದು ಮೋಹಕೆ ತಮ್ಮನೆ ಕಬಳಿಸುತ್ತ..
ಭೀಕರ ಅದ್ಭುತ ಗಾತ್ರ 'ಜಿನಾರ್ಮಸ್' ಹೆಸರು
ಸದ್ದಿನ ಉಲಿದನಿ ಬಿಲಿಯಾಂತರ ವರ್ಷದ ಫಸಲು
ಢಿಕ್ಕಿಸಿ ಕಬಳಿಸಿದ ಹೊತ್ತು ಗುದ್ದಾಟ ಕುಲುಕಾಟ ಅಪಾರ
ಎತ್ತೆತ್ತಿ ಹಾಕಿ ನುಂಗಿ ನೀರು ಕುಡಿಸೊ ಸಮಬಲ ಭೀಕರ..
ಏದುಸುರಿನಸುರಿ ಶಕ್ತಿ ಪೊಂಗು, ಗುರುತ್ವ ತರಂಗ ಗುನುಗು..
ಹಿರಿಹಿರಿ ಹಿಗ್ಗಿದವೆ ಭೌತ ಖಗೋಳ ಬಳಗ
ಬೆಳಕ ಜತೆ ಸದ್ದ ಕುರುಹು ಅನಂತ ದೂರದ ಜಗ
ಸಂಸರ್ಗ ಮಿಲನದ ಹೊತ್ತಲಿ ತೊಳಲಾಡಿದ ಅಂತರಂಗ
ಮೊದಲಪ್ಪುಗೆಗೆ ಸಿಡಿಸಿದ ಮೊದಲ ಸದ್ದೆ ಈ ತರಂಗ
ಕೊನೆಗೂ ಮುಟ್ಟಿತು ಭೂವಿಯ, ಗುರುತ್ವದತಿ ಅಲೆ ಪ್ರಖರ..
ಆಗಲಿಕ್ಕುಂಟಂತೆ ಈಗ ಕಪ್ಪು ಬಿಲದ ಗುಟ್ಟು ರಟ್ಟು
ನೋಡಿದಷ್ಟೆ ಆಲಿಸೊ ಸುಖ, ವಿಶ್ವ ಸೃಷ್ಟಿಯ ಒಗಟು
ಬೆಳಕಿನ ವೇಗದ ಘರ್ಷಣೆ, ಭೀಕರ ಘರ್ಜನೆ ಸಾಗಿಷ್ಟು ದೂರ
ಸಮ್ಮಿಲನದ ಕೊನೆಗಳಿಗೆಯ ಮೊದಲ, ದಾಖಲೆ ಸದ್ದಿನ ಪ್ರವರ
ನಿಜವಾಗಿಸಿ ಐನ್ ಸ್ಟೈನನ ಮಾತ, ಗುರುತ್ವದಲೆಗಳ ವಿಚಾರ..
ಲೀಗೊ ದರ್ಶಕ ಕೇಂದ್ರದ ಯಂತ್ರ, ಹಿಡಿದನೆ ಸದ್ದು
ಕೋಟ್ಯಾಂತರ ವ್ಯಯಿಸಿ, ದುಡಿದ ಜನಗಣ ಸಹಸ್ರ
ಗುರುತ್ವದಲೆಗಳು ತಟ್ಟಿ ಮನೆ ಬಾಗಿಲಿನಲಿ ಹೊಸತು
ಗೊತ್ತಿರದಿದ್ದಾ ನಿಗೂಢ ತೆರೆಸುವ ಕೀಲಿ ಕೈ ಮಾತು
ಪಿಸುಗುಟ್ಟೆ ಬ್ರಹ್ಮಾಂಡವಲ್ಲೆಲ್ಲೊ ಎದೆಬಡಿತ ಧರಣಿಯಲೊ..!
Comments
ಉ: ಗುರುತ್ವ ತರಂಗ (ಗುರುತ್ವದಲೆ)
ಯಾವಾಗಲೋ ಹುಟ್ಟಿದ ಯಾವುದೋ ಅಲೆ ಈಗ ನಮ್ಮನ್ನು ಅಲುಗಾಡಿಸುತ್ತಿದೆ!! :) ಕವನ ಚೆನ್ನಾಗಿದೆ, ನಾಗೇಶರೇ, ಅಭಿನಂದನೆಗಳು.
In reply to ಉ: ಗುರುತ್ವ ತರಂಗ (ಗುರುತ್ವದಲೆ) by kavinagaraj
ಉ: ಗುರುತ್ವ ತರಂಗ (ಗುರುತ್ವದಲೆ)
ಕವಿಗಳೇ ನಮಸ್ಕಾರ ಮತ್ತು ಧನ್ಯವಾದಗಳು. ನೀವಂದಂತೆ ಅದು ಯಾವಾಗಿನಿಂದಲೊ ಅಲುಗಾಡಿಸುತ್ತಲೆ ಇದೆ ಬ್ರಹ್ಮಾಂಡವನ್ನು, ಅದರ ಸದ್ದು ಕೇಳಲೂ ನಾವಿಲ್ಲಿಯತನಕ ಕಾಯಬೇಕಾಯ್ತು ನೋಡಿ! :-)