ಸಣ್ಣಕಥೆ: ಸುಬ್ಬತ್ತೆ ಯಾಕೆ ಕೈ ಕೊಟ್ಲು ?

ಸಣ್ಣಕಥೆ: ಸುಬ್ಬತ್ತೆ ಯಾಕೆ ಕೈ ಕೊಟ್ಲು ?

ನಡುಬೀದಿಯ ಮಧ್ಯೆ ತುಂಡು ಚಡ್ಡಿಯಲ್ಲಿ ಗಾಳಿಪಠ ಹಾರಿಸುತ್ತಿದ್ದ ಮಾದೇಶನಿಗೆ ಬೀದಿಯ ತುದಿಯಲ್ಲಿ ಕೈಲೊಂದು ಚೀಲ ಹಿಡಿದ ಯಾರೋ ಇಬ್ಬರು ಆಗಂತುಕರು ಬರುವುದು ಕಂಡಿತಾದರು ಅದು ಯಾರದೋ ಮನೆಗೆ ಬರುತ್ತಿರುವ ನೆಂಟರಿರಬೇಕೆಂದುಕೊಂಡು ಅತ್ತ ಗಮನ ಕೊಡದೆ ಪಟ ಹಾರಿಸುವುದರಲ್ಲಿ ತಲ್ಲೀನನಾಗಿದ್ದ. ಆದರೆ ಬರುತ್ತಿರುವವರು ಹತ್ತಿರವಾದಂತೆ ಯಾರೋ ಪರಿಚಿತರಿರಬೇಕೆನ್ನುವ ಕ್ಷೀಣ ಅನಿಸಿಕೆ, ಆರು ಮನೆಯಾಚೆಯ ಗೋಪಾಲಣ್ಣನ ಮನೆಗೆ ಬರುವ ಹೊತ್ತಿಗೆ ಖಚಿತ ಅನಿಸಿಕೆಯಾಗಿ ಬದಲಾಗಿತ್ತು, ಅವರಾಡುತ್ತಿದ್ದ ಊರಿನ ಮಾತಿನ ಶೈಲಿಯಿಂದ. ಆದರು ಬಂದವಳು ಪುಟ್ಟಸುಬ್ಬತ್ತೆ ಮತ್ತು ದೊಡ್ಡಪ್ಪ ಎಂದರಿವಾಗಿದ್ದು ಮಾತ್ರ ಅವರು ಬಹುತೇಕ ಅವನನ್ನು ಹಾದು ಮನೆಯತ್ತ ಸಾಗುವಾಗ ಕೇಳಿಸಿದ 'ಪಟ ಹಾರಿಸ್ತಿದಿಯೇನೊ ಮಾದೇಸ ?' ಎಂದ ಅತ್ತೆಯ ಕಕ್ಕುಲತೆಯ ದನಿಯಿಂದ ಮಾತ್ರ... ಅವಳ ದನಿ ಕಿವಿಗೆ ಬೀಳುತ್ತಿದ್ದಂತೆ ಕೈಲಿದ್ದ ಪಟದ ಟ್ವೈನ್ ದಾರದ ಸೂತ್ರವನ್ನು ಹಾಗೆ ಪಕ್ಕದ ಲೈಟ್ಟು ಕಂಬವೊಂದಕ್ಕೆ ಸುತ್ತಿ ಗಂಟು ಹಾಕಿ ' ಅತ್ತೇ...' ಎಂದು ಕೂಗುತ್ತ ಹೋಗಿ ಅವಳನ್ನಪ್ಪಿಕೊಂಡುಬಿಟ್ಟಿದ್ದ ಬೀದಿ ಬಾಗಿಲಲ್ಲೇ..!

ಸುಬ್ಬತ್ತೆ ಬಂದಳೆಂದರೆ ಮಾದೇಶನಿಗೆ ಎಲ್ಲಿಲ್ಲದ ಉತ್ಸಾಹ, ಹಿಗ್ಗು.. ನಾಲ್ಕು ಜನ ತಮ್ಮಂದಿರಿದ್ದರು ಅವಳಿಗೆ ಈ ಕೊನೆ ತಮ್ಮನ ಮೇಲೆ ಅದೇನೊ ಅತಿ ಪ್ರೀತಿ.. ಅವನ ಮಕ್ಕಳ ಮೇಲೂ ಅದೇ ಅಕ್ಕರಾಸ್ತೆ - ಅದರಲ್ಲೂ ಮಾದೇಶನ ಮೇಲೆ. ಊರಿಗೆ ಬಂದಾಗೆಲ್ಲ ಕನಿಷ್ಠ ಹತ್ತದಿನೈದು ದಿನವಾದರೂ ಇದ್ದು ಹೋಗುವ ಅಭ್ಯಾಸವಿಟ್ಟುಕೊಂಡವಳು ಹಾಗೆ ಬರುವಾಗ ಎಂದೂ ಬರಿಗೈಯಲ್ಲಿ ಬಂದವಳಲ್ಲ. ಬೀಸುಗಲ್ಲಲ್ಲಿ, ಒರಳಿನಲ್ಲಿ ತಾನೇ ಕೈಯಾರೆ ಬೀಜ ಅರೆದು ಹಿಂಡಿ ತೆಗೆದ ಕೈಯೆಣ್ಣೆಯನ್ನೊ, ದಮ್ಮಿನಿಂದ ನರಳುತ್ತಿದ್ದರು ಕೆಮ್ಮುತ್ತಲೇ ಮಾಡಿಕೊಂಡ ಕಾರದ ಪುಡಿ, ಸಾಂಬಾರು ಪುಡಿಗಳನ್ನೊ, ವಾರಗಟ್ಟಲೆ ಎದ್ದುಬಿದ್ದು ಮಾಡಿಕೊಂಡು ಒಣಗಿಸಿಟ್ಟುಕೊಂಡ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿಗಳನ್ನೊ ಜತೆಗೆ ಹೊತ್ತುಕೊಂಡೆ ಬರುವುದು. ಬಂದವಳು ಅಷ್ಟೇ, ಒಂದರೆಗಳಿಗೆಯೂ ಸುಮ್ಮನಿರುವ ಜೀವವಲ್ಲ ಅವಳದು.. ಒಮ್ಮೆಯೂ ನಿಂತ ಕಡೆ ನಿಲ್ಲದೆ, ಕೂತ ಕಡೆ ಕೂರದೆ ಏನಾದರೂ ಕೆಲಸ ಮಾಡಿಕೊಂಡೆ ಇರುತ್ತಾಳೆ - ಅಡಿಗೆ ಮನೆ, ಬಚ್ಚಲು ಮನೆ, ಹಿತ್ತಲು, ದೇವರ ಮನೆ, ಹೊರಗಿನಂಗಳ, ಬಾಗಿಲೆದುರಿನ ರಂಗೋಲಿ - ಹೀಗೆ ಎಲ್ಲಿ ಕೈಯಾಡಿಸಳೆಂದು ಹೇಳಲೆ ಆಗದಷ್ಟು ಅಗಾಧ ವ್ಯಾಪ್ತಿಯ ಕಾರ್ಯ ಕ್ಷೇತ್ರ ಅವಳದು. ಅದಕ್ಕೆಂದೆ, ಅವಳು ಬಂದಿಳಿದಳೆಂದರೆ ಚಂದ್ರವ್ವನಿಗೆ ಒಂದು ರೀತಿ ಪುಲ್ ಟೈಂ ರಜೆ ಸಿಕ್ಕಿದ ಹಾಗೆ.. ಅವಳಿಗೆ ಯಾವ ಕೆಲಸಕ್ಕೂ ಕೈ ಹಾಕ ಬಿಡದೆ ಎಲ್ಲವನ್ನು ತಾನೇ ಮಾಡಿಕೊಂಡು, ಒಂದು ರೀತಿಯಲ್ಲಿ ಅಲ್ಲಿರುವವರೆಗೂ ಉಂಡ ಯಾವ ಅನ್ನದ ಋಣವು ಮೈಗೆ ಹತ್ತಿಕೊಳ್ಳದ ಹಾಗೆ, ಇರುವಾಗಲೇ ಚುಕ್ತಾ ಮಾಡಿದ್ದೂ ಅಲ್ಲದೆ ಅವರಿಗೇ ಇನ್ನಷ್ಟು ಹೊರೆಸಿ ಹೋಗಿಬಿಡುತ್ತಾಳೆ.. ಅದರಿಂದಲೊ ಏನೋ ಈ ವಯಸಲ್ಲೂ ಒಳ್ಳೆ ಗಟ್ಟಿಮುಟ್ಟಾಗಿ ಚಟುವಟಿಕೆಯಿಂದ ಇರಲು ಅವಳಿಗೆ ಸಾಧ್ಯವಾಗಿರುವುದು..

ಗಂಡನೆಂಬ ಪ್ರಾಣಿ ಅವಳ ಬದುಕಿನ ಪುಟಗಳಿಂದ ಮಾಯವಾಗಿ ಅದೆಷ್ಟು ದಶಕಗಳಾದವೊ ಏನೋ ? ಮಾದೇಶನಂತೂ ಹುಟ್ಟಿದಾಗಿನಿಂದಲು ನೋಡಿದ್ದು ಅವಳೊಬ್ಬಳನ್ನು ಮಾತ್ರವೇ. ಮದುವೆಯಾದ ಹೆಣ್ಣು ಮಗಳು ಮತ್ತು ಅಳಿಯ ಜತೆಗೆ ಇದ್ದು ವರ್ಷಾಂತರಗಳಿಂದಲು ಅವರ ಮತ್ತವರ ಮಕ್ಕಳ ಸೇವೆಮಾಡಿಕೊಂಡೆ ಸವೆದ ಜೀವ ಅವಳದು. ಅದೇನಾಯಿತೋ ಏನೋ , ತೀರಾ ಈಚೆಗೆ ಇದ್ದಕ್ಕಿದ್ದಂತೆ ಏನೋ ಮನಸ್ತಾಪವಾಗಿ ಮೊದಲು ಅವರೊಡನೆ ಮಾತು ಬಿಟ್ಟವಳು, ಆಮೇಲೆ ಇದ್ದ ಮನೆಗೆ ಒಂದು ಅಡ್ಡಗೋಡೆ ಏರಿಸಿ ಎರಡು ಭಾಗ ಮಾಡಿ ತಾನೇ ಬೇರೆ ಒಲೆ ಹಚ್ಚಿಕೊಂಡು ಬೇಯಿಸಿಕೊಂಡು ತಿನ್ನತೊಡಗಿದ್ದಳು.. ಅಷ್ಟೆಲ್ಲ ಅಕ್ಕರಾಸ್ತೆಯಿಂದ ಮಾಡಿಕೊಟ್ಟು ಹಚ್ಚಿಕೊಳ್ಳುವ ಅವಳು, ಅದೇಕೋ ದ್ವೇಷ, ಜಿದ್ದಿನ ವಿಷಯಕ್ಕೆ ಬಂದರೆ ಅಷ್ಟೇ ತೀವ್ರತೆಯಿಂದ ಸಾಧಿಸುವ ಛಲ, ಮನೋಭಾವದವಳು.. ಒಬ್ಬ ತಮ್ಮನೊಂದಿಗೆ ಹೀಗೆ ಯಾವುದೋ ವಿಷಯಕ್ಕೆ ಮಾತು ಬಿಟ್ಟವಳು, ಹದಿನೈದು ವರ್ಷ ಅವನ ಕಡೆ ಮುಖ ಕೂಡ ತಿರುಗಿಸದೆ ಹಗೆ ಸಾಧಿಸಿದ್ದಳು..!

ಪುಣ್ಯಕ್ಕೆ ಕೊನೆಯ ತಮ್ಮನ ಜೊತೆ ಮಾತ್ರ ಎಂದೂ ಯಾವ ರೀತಿಯ ಮನಸ್ತಾಪವೂ ಬಂದಿರಲಿಲ್ಲ. ಅವನಿಗೂ ಅಕ್ಕನ ಮೇಲೆ ಅತೀವ ಅಭಿಮಾನ, ಪ್ರೀತಿ. ವಾಪಸ್ಸು ಹೋಗದೆ ಜತೆಯಲ್ಲೇ ಇದ್ದುಬಿಡು ಎಂದು ಅವನೆಷ್ಟು ಒತ್ತಾಯಿಸಿದರು ಒಂದೆರಡು ವಾರಕ್ಕಿಂತ ಹೆಚ್ಚು ಎಂದೂ ನಿಂತಿಲ್ಲ.. ಆದರೆ ಎರಡು ಮೂರು ತಿಂಗಳಿಗೊಮ್ಮೆ ಮಾತ್ರ ಬಂದು ಹೋಗುತ್ತಾಳೆ. ಹೀಗಾಗಿ ಅವರಿಬ್ಬರ ನಡುವಿನ ಬಂಧ ಗಟ್ಟಿಯಾಗಿಯೇ ಉಳಿದುಕೊಂಡಿದೆ.. ಹೋಗುವಾಗ ಅಷ್ಟೋ ಇಷ್ಟೋ ಕಾಸು ಅವಳ ಕೈಗೆ ತುರುಕಲು ಯತ್ನಿಸಿದರು, ಕಷ್ಟ ಪಟ್ಟು ದುಡಿದು ಹೊಟ್ಟೆ ಬಟ್ಟೆಗೆ ನೇರ ಮಾಡಿಕೊಳ್ಳುತ್ತಿರುವ ತಮ್ಮನಿಗೆ ತೊಡಕು ಮಾಡಲಿಚ್ಚಿಸದೆ ನಯವಾಗಿ ನಿರಾಕರಿಸಿ ಸಾಗುತ್ತಾಳೆ. ಒಂದು ವೇಳೆ ಬಲವಂತದಿಂದ ಹಬ್ಬ ಹರಿದಿನ ಎಂದು ಕೈಗೆ ತುರುಕಿದರು, ಆ ದುಡ್ಡಲ್ಲಿ ಮುಂದಿನ ಸಾರಿಗೆ ಬರುವಾಗ ಮಾದೇಶನಿಗೊಂದು ಜೊತೆ ಬಟ್ಟೆಯನ್ನೂ ಅಥವಾ ಮನೆಗೆ ಬೇಕಾದ ಏನಾದರು ಸಾಮಾನನ್ನು ತಂದು ಹಾಕಿ ಕೈ ತೊಳೆದುಕೊಂಡು ಬಿಡುತ್ತಾಳೆ. ಹಾಗೆ ಏನೇನೊ ತಂದು ಕೊಡುತ್ತಾಳೆಂದೆ ಮಾದೇಶನಿಗು ಅವಳೆಂದರೆ ಅಚ್ಚುಮೆಚ್ಚು..

ಸೋಜಿಗವೆಂದರೆ ಗಂಡ ಹೋದ ಮೇಲೆ ಬಿಟ್ಟು ಹೋದ ಆ ನಾಡುಹೆಂಚಿನ ಮುರುಕಲು ಮನೆಯನ್ನು ಬಿಟ್ಟರೆ ಮತ್ಯಾವ ಆಸ್ತಿಯೂ ಅವಳಲಿಲ್ಲ.. ಆಸರೆಯಾಗಬಹುದಿದ್ದ ಮಗಳು ಅಳಿಯನ ಜೊತೆ ಮನಸ್ತಾಪ ಕಟ್ಟಿಕೊಂಡು ದೂರ ಉಳಿದಿದ್ದಾಗಿದೆ.. ಹೀಗಾಗಿ ಹೊಟ್ಟೆಪಾಡಿಗೆ ಏನಾದರು ಮಾಡಲೇಬೇಕು.. ಆದರೆ ಕೂಲಿನಾಲಿ ಮಾಡಿಕೊಂಡು ಬದುಕುವ ಜಾಯಮಾನ ಅವಳದಲ್ಲ. ಅದಕ್ಕೆ ತಾನೇ ದಿನಾ ಚಿಪ್ಪಿನ ಇಡ್ಲಿ, ವಡೆ, ದೋಸೆ ಮಾಡಿಕೊಂಡು ಕುಕ್ಕೆಯೊಂದರಲ್ಲಿ ಇಟ್ಟುಕೊಂಡು ಹೊಳೆ ಮಾದಿಗರ ಕೇರಿಗಳಲ್ಲಿ, ಹೊಲಗದ್ದೆಗಳಲ್ಲಿ ಮಾರಿ ಬರುತ್ತಾಳೆ.. ಊರಿಗೆ ಬಂದಾಗ ಅವಳ ಕೈನ ಅದೇ ತಿಂಡಿ ತಿಂದು ಅಭ್ಯಾಸವಾದ ಮಾದೇಶನಿಗೆ ಅವಳ ಕೈಯೂಟವೆಂದರೆ ತೀರಾ ಅಚ್ಚುಮೆಚ್ಚು.. ರುಚಿರುಚಿಯಾಗಿ ಮಾಡಿ ಬಡಿಸುವುದಲ್ಲದೆ ಕೂತು ತಿನ್ನಿಸುತ್ತಾಳೆ.. ಇದೆಲ್ಲಾ ಹಿನ್ನಲೆಯಲ್ಲೇ, ಅವಳನ್ನು ಕಂಡಕೂಡಲೆ ಕೈಲಿದ್ದ ಪಟವನ್ನು ಲೆಕ್ಕಿಸದೆ ಎದ್ದುಬಿದ್ದು ಓಡಿ ಬಂದು ಅವಳನ್ನು ತಬ್ಬಿಕೊಂಡಿದ್ದ . ಅವನನ್ನು ಕಂಡೊಡನೆ 'ಮಾದೇಸಾ...' ಎಂದು ಹೆಚ್ಚು ಕಮ್ಮಿ ಅಷ್ಟೇ ಕಕ್ಕುಲತೆಯಿಂದ ಬರಮಾಡಿಕೊಂಡ ಸುಬ್ಬತ್ತೆ, ತಬ್ಬಿಹಿಡಿದು ನಿಂತವನನ್ನು ಹಾಗೆ ಬಿಡದೆ ಎತ್ತಿ ಕಂಕುಳಿಗೇರಿಸಿಕೊಂಡೆ ಮನೆಯೊಳಗೆ ನಡೆದಿದ್ದಳು. ನಡೆಯುತ್ತಲೆ ಆಗಲೆ ಅವನ ಕೈಗೊಂದು ಬಾಳೆ ಹಣ್ಣು ಮತ್ತೊಂದು ಎಂಟಾಣಿ ಪಾವಲಿಯೂ ಭಕ್ಷೀಸಾಗಿ ಸಂದಾಯವಾಗಿ ಹೋಗಿತ್ತು. ಹಾಳು ಮೂಳು ತಿಂದಾರೆಂದು ಮನೆಯಲ್ಲಿ ಚಿಲ್ಲರೆ ಕಾಸು ಕೊಡುತ್ತಿರಲಿಲ್ಲವಾಗಿ, ಅವಳು ಕೊಡುವ ಈ ಭಕ್ಷೀಸು ಹಬ್ಬದೂಟವಿದ್ದಂತೆ ಮಾದೇಶನಿಗೆ. ಕಾಸು ಕೈ ಸೇರಿದ್ದೇ ತಡ ಅವಳ ಸೊಂಟದಿಂದ ಜಾರಿ ಅವಳ ಹತ್ತಿರವೇ ಇನ್ನೊಂದು ರೂಪಾಯಿ ಕೇಳಿ ಪಡೆದು ಓಡಿಹೋಗಿದ್ದ - ಮತ್ತೊಂದು ರೀಲು ಪಟ ಹಾರಿಸುವ ಮಾಂಜಾ ದಾರ ತರಲು..!

ಮಾದೇಶನಿಗೆ ಆವಳು ಪ್ರಿಯವಾಗಲು ಮತ್ತೊಂದು ಬಲವಾದ ಕಾರಣವೂ ಇತ್ತು.. ಮನೆಯಲ್ಲಿ ಅಪ್ಪ, ಅಮ್ಮ ಇಬ್ಬರೂ ತುಂಬಾ ಕಟ್ಟುನಿಟ್ಟು. ಅವನನ್ನು ಬೆಳೆಸುತ್ತಿರುವುದೆ ಒಂದು ಬಲವಾದ ಶಿಸ್ತಿನಿಂದ. ಆದರೆ ತುಡುಗು ಮನದ ಹುಡುಗ ಬುದ್ಧಿಯ ಮಾದೇಶನ ಚೆಲ್ಲಾಟದ ಸ್ವಭಾವಕ್ಕೆ ಅದು ಒಗ್ಗದ ವಿಷಯ.. ಹಾಗೆಂದು ಅನುಕರಿಸದೆ ಇರಲೂ ಸಾಧ್ಯವಿಲ್ಲ - ಅನುಕರಿಸುವಂತೆ ಮಾಡುವ ಪ್ರೇರಣೆಗೇನೊ ಎಂಬಂತೆ ಗೋಡೆಗೆ ನೇತುಹಾಕಿರುವ ಬಾರುಕೋಲು ಸದಾ ಎಚ್ಚರದಲ್ಲಿರಿಸಿರುತ್ತದೆ.. ಆದರೆ ಸುಬ್ಬತ್ತೆ ಮನೆಗೆ ಬಂದಾಗ ಮಾತ್ರ ಆ ಕೋಲಿಗೆ ಪೂರ್ಣ ರಜೆ..! ಅವಳೆಂದು ಅದರ ಬಳಕೆಗೆ ಅವಕಾಶ ಮಾಡಿಕೊಡುವುದಿಲ್ಲ.. 'ತುಂಟಾಟ ಹುಡುಗರು ಮಾಡದೆ ದೊಡ್ಡೊರಾ ಮಾಡ್ತಾರೆ ? ಅದಕ್ಕೆ ಮಕ್ಕಳಿಗೆಲ್ಲ ಈ ತರದ ಕೋಲಿನಲ್ಲಿ ಹೊಡೀತಾರೇನೊ ರಾಮಣ್ಣ ? ಎ ಚಂದ್ರೀ , ನೀನಾದರೂ ಹೆಣ್ಣೆಂಗಸು ತಡಿಬಾರದಾ ?' ಎಂದು ಮಾದೇಶನ ಪರ ವಹಿಸಿ ಏಟು ಬೀಳುವುದನ್ನು ತಪ್ಪಿಸಿದ್ದಾಳೆ ಅನೇಕ ಸರಿ.. ಅವಳಿಗೆ ಗೊತ್ತಿಲ್ಲದ ವಿಷಯವೆಂದರೆ ಹೊಡೆಯುವ ವಿಷಯ ಬಂದಾಗ ರಾಮಣ್ಣನಿಗಿಂತ 'ಚಂದ್ರಿಯೆ ಒಂದು ಕೈ ಮೇಲು' ಎಂದು. ಈಗಲೂ ಮಸುಕಾಗಿ ಕಾಣುವ ಎಷ್ಟೋ ಬಾಸುಂಡೆಯ ಗುರುತುಗಳೆಲ್ಲ ಅವ್ವನ ಕಾಣಿಕೆಯೆ. ಪಾಪ ಅಪ್ಪನ ಅವನದೇ ಆದ ತಲೆ ಬಿಸಿಯಲ್ಲಿ ಅವನಿಗಿದಕ್ಕೆಲ್ಲ ವೇಳೆಯಾದರೂ ಇರುವುದೆಲ್ಲಿ ? ದಿನಕ್ಕೊಂದು ಸಾರಿಯಾದರೂ ಏನಾದರೂ ನೆಪದಲ್ಲಿ ವದೆ ತಿನ್ನುತ್ತಿದ್ದ ಸೋಮೇಶನಿಗೆ ಸುಬ್ಬತ್ತೆ ಬಂದಾಗ ಮನೆಯೇ ಸ್ವರ್ಗ.. ಏನು ಮಾಡಿದರು ನಿಭಾಯಿಸಿಕೊಳ್ಳಬಹುದು ಅವಳ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು... ಅದಕ್ಕೆ ಅವನಿಗೆ ಭಂಢ ಧೈರ್ಯ, ಅವಳಿದ್ದಾಗ ಏನು ಮಾಡಿದರೂ ನಡೆಯುತ್ತೆ ಎಂದು. ಅದನ್ನೆ ಚಾಣಾಕ್ಷತೆಯಿಂದ ಬಳಸಿಕೊಂಡು ಒಂದೆರಡು ಬಾರಿ ಬೇಕೆಂತಲೇ ಏನೋ ತರಲೆ ಮಾಡಿ ನಿಭಾಯಿಸಿಕೊಂಡಿದ್ದಾನೆ.. ಅವಳಿಗಂತು ಇವನೆಂದರೆ ಪ್ರಾಣಿ... ಎಲ್ಲಾದಕ್ಕೂ ಅವನಿಗೆ ಬೆಂಬಲ ನಿಂತು ತತಾಯ ಗತಾಯ ಅವನನ್ನು ರಕ್ಷಿಸಿಕೊಳ್ಳುತ್ತಾಳೆ..

ಅವಳು ತಂದಿದ್ದ ತಿಂಡಿಗೆಲ್ಲಾ ಕೈಯಾಡಿಸಿ ಜತೆಗೆ ಸ್ಕೂಲಿಗೆ ಸಂಬಂಧಿಸಿದಂತೆ ಏನೇನೊ ಪ್ರಶ್ನೆ ಕೇಳಿದ್ದ ದೊಡ್ಡಪ್ಪನಿಗೆ ಚುಟುಕಾಗಿ ಉತ್ತರಿಸಿ ಮತ್ತೆ ತಾನು ಕಂಬಕ್ಕೆ ಕಟ್ಟಿ ಬಂದಿದ್ದ ಗಾಳಿಪಟದ ಯೋಗಕ್ಷೇಮ ವಿಚಾರಿಸಿಕೊಳ್ಳಲು ಓಡಿದ್ದ.. ಅಲ್ಲಿಗೆ ಬರುವ ಹೊತ್ತಿಗೆ, ಪಟದ ದಾರ ಹಿಡಿದುಕೊಂಡು ಕಂಬದ ಹತ್ತಿರ ನಿಂತಿದ್ದ ಆಪ್ತ ಗೆಳೆಯ ಗೋಪಾಲ ಕಾಣಿಸಿದ್ದ...

" ಎಲ್ಲಿಗೆ ಹೋಗಿದ್ಯೊ ಪಟ ಬಿಟ್ಬಿಟ್ಟು? ಆಚೆಬೀದಿ ಗೋವಿಂದ ಪೋಟ್ ಹೊಡ್ಕೊಂಡು ಹೋಗೊದ್ರಲ್ಲಿದ್ದ, ನಾ ಬಂದು ಗದರಿಸಿ ಓಡಿಸ್ದೆ " ಅಂದ..

" ಸಿಕ್ಲಿ ನನ್ಮಗ ವಿಚಾರಿಸಿಕೊಳ್ತೀನಿ ಗೋಪಾಲ, ಯಾಕೆ ಹೋದ್ಸಾರಿ ಕೊಟ್ಟಿದು ಸಾಕಾಗ್ಲಿಲ್ವಂತಾ ಗಲಿತಗಳು ? '

ಎಂದವನ ಮಾತಿಗೆ ನಕ್ಕು ' ಅದು ಹಾಳಾಗ್ಲಿ.. ನಾಳೆ ಪಟದ ಹಬ್ಬಕ್ಕೆ ಭೂತಯನ ಪಿಚ್ಚಲ್ಲಿ 'ಪಟ ಹಾರಿಸೋ ಪಂಥ ' ಇದೆ.. ನಿಂದೂ ಹೇಗೂ ದೊಡ್ಡ ಪಟಾನು ಇದೆ, ಜೋರಾಗಿ ಹಾರ್ತಾನೂ ಇದೆ... ನೀನು ಬಾರೋ ?' ಅಂದಿದ್ದ ಗೋಪಾಲ..

ಹಾಗೆಂದಿದ್ದೆ ತಡ ಆಸೆಯ ಹಕ್ಕಿ ಗರಿಗೆದರಿತು ಮಾದೇಶನಲ್ಲು - ನೂರಾರು ಪಟಗಳ ಮಧ್ಯದೆ ತನ್ನದು ಎತ್ತರಕ್ಕೆ ಹಾರಿ ಬಹುಮಾನ ಗಿಟ್ಟಿಸಿದರು ಗಿಟ್ಟಿಸಬಹುದೇನೊ..? ಆದರೆ ಹಿಂದೆಯೆ ತಟ್ಟನೆ ನನಪಾಗಿತ್ತು.. ಸ್ಕೂಲಿಗಂದು ರಜಾ ಇರಲಿಲ್ಲವಾಗಿ 'ಹೋಗಬೇಕೆಂದರು ಆಗದು' ಎಂದು..ಮನೆಯಲ್ಲಿ 'ಜಪ್ಪಯ್ಯ' ಎಂದು ಕುಣಿದಾಡಿದರು ರಜಾ ಹಾಕಲು ಬಿಡುವುದಿಲ್ಲ.. ' ಅಲ್ಲಿಗೆ ಹೋಗಲಾದರೂ ಹೇಗೆ ಸಾಧ್ಯಾ ?

' ಇಲ್ಲವೊ ಗೋಪಾಲ, ಸ್ಕೂಲಿದೆ , ಹಬ್ಬಕ್ಕೆ ರಜೆಯಿಲ್ಲ.. ಮನೇಲಿ ಬಿಡಲ್ಲ ...' ಎಂದ ಅಳು ಮುಖದಲ್ಲಿ..

ಅವನ ಮುಖವನ್ನೇ ಒಮ್ಮೆ ದಿಟ್ಟಿಸಿದ ಗೋಪಾಲ, ' ಈಗ್ಯಾಕೆ ಹೆದರ್ತೀಯೊ ? ಹೇಗಿದ್ರೂ ನಿಮ್ಮ ಸುಬ್ಬತ್ತೆ ಬಂದಿದಾರಲ್ಲ ? ಅವರ ಬೆನ್ನು ಹಿಡಿದು ಒಪ್ಪಿಸ್ಕೋ. ಆಮೇಲೆ ಇಬ್ರೂ ಜೊತೆಗೆ ಹೋಗಣ..' ಎಂದಿದ್ದ..

ಮಾದೇಶನಿಗೆ ಅದು ಸರಿಯೆನಿಸಿತು.. ಸುಮ್ಮಸುಮ್ಮನೆ ಸ್ಕೂಲಿಗೆ ಚಕ್ಕರು ಹಾಕುತ್ತೇನೆಂದರೆ ಬಿಡುವುದಿಲ್ಲ ; ನಾಲ್ಕು ಬಿಗಿದು ಎಳೆದೊಯ್ಯುತ್ತಾರೆ.. ಇನ್ನು ಪಟ ಹಾರಿಸೋ ಸ್ಪರ್ಧೆಗೆ ಅಂದರೆ ಮಾತಾಡೊ ಹಾಗೆ ಇಲ್ಲ, ನಿಂತಲ್ಲೆ ಚರ್ಮಾ ಸುಲಿದರೂ ಸುಲಿದರೆ. ಆದರೆ ಸುಬ್ಬತ್ತೆ ಬಂದ ನೆಪ ಮಾಡ್ಕೊಂಡು ಸ್ಕೂಲು ಬೇಡ ಮನೇಲೆ ಇರ್ತೀನಿ ಅಂತ ಹಟ ಹಿಡಿದರೆ, ಅತ್ತೆ ಬಂದಿದ್ದಕ್ಕೋಸ್ಕರ ಹಾಗೆ ಮಾಡ್ತಾ ಇರೋದು ಅಂತ ಅನ್ಕೋತಾರೆ. ಅತ್ತೆ ಕೂಡ ಹಿಂದೆ ಮಾಡಿದ ಹಾಗೆ 'ಬಾರು ಕೋಲು ಸೇವೆ' ಯಿಂದ 'ಬಚಾವ್' ಮಾಡಿ, 'ಹೋಗ್ಲಿ ಬಿಡೆ ಚಂದ್ರಿ.. ಒಂದು ದಿನ ತಾನೆ ? ಮಗು ಆಸೆ ಪಡ್ತಾ ಇದೆ, ಇವತ್ತೊಂದು ದಿನ ಮನೇಲಿರುತ್ತಂತೆ.. ಈಗಿನ ಸ್ಕೂಲುಗಳಲ್ಲಿ ಮಕ್ಕಳಿಗೆ ಅದೇನು ಪಾಠ ಹೇಳ್ಕೊಡ್ತಾರೊ, ಇಲ್ಲ ಓದೊ ಕುಲುಮೆಲಿ ಹಾಕಿ ರುಬ್ತಾರೊ ಗೊತ್ತಾಗಲ್ಲ..ಮಕ್ಕಳು ಸ್ಕೂಲಿಗೆ ಹೋಗಕೆ ಹೆದರುತ್ವೆ...' ಅಂತೆಲ್ಲ ಭಾಷಣ ಬಿಗಿದು ನನ್ನ ಪಾರ್ಟಿಗೆ ಸಪೋರ್ಟು ಮಾಡ್ತಾರೆ.. ಒಂದುವೇಳೆ ಒಂದೆರಡು ಮೂಗೇಟು ಬಿದ್ರೂ , ರಜಾ ಅಂತೂ ಸಿಗುತ್ತೆ...

ಹೀಗೆಲ್ಲ ಆಲೋಚಿಸಿದ ಮಾದೇಶ ಗೋಪಾಲನಿಗೆ, 'ನಾ ಏನಾದ್ರೂ ನೆಪ ಹಾಕಿ ಬರ್ತೀನಿ... ಆಮೇಲೆ ಇಬ್ರೂ ಹೋಗಣ,,, ಈ ಪಟ ದಾರ ನಿನ್ಹತ್ರಾನೆ ಇರಲಿ , ನಾಳೆ ತೊಗೊಂಬಾ... ಅವರ ಕಣ್ಣೆದುರಿಗೆ ನಾ ತರಕೆ ಆಗೋದಿಲ್ಲ..' ಎಂದು ಮತ್ತೆ ಮನೆ ಕಡೆ ಓಡಿದ್ದ. ನಾಳೆಗೆಂದು ಮಾಡಬೇಕಿದ್ದ ಕೆಲವು ಹೋಮ್ವರ್ಕುಗಳಿದ್ದವು - ಆದರೆ ಈ ನಿರ್ಧಾರಕ್ಕೆ ಬಂದ ಮೇಲೆ ಅವನ್ನೇನು ಮಾಡುವ ಅವಶ್ಯಕತೆ ಇಲ್ಲ ಅನಿಸಿತು. ತೆರೆದಿದ್ದ ಚೀಲವನ್ನು ಮತ್ತೆ ಮುಚ್ಚಿ ಬೇಗನೆ ನಿದ್ದೆ ಹೋಗಿದ್ದ. ಅಂದು ರಾತ್ರಿಯೆಲ್ಲ ಬರಿ ಸ್ಪರ್ಧೆಯ ಕನಸೆ..! ಹೋದ ಹಾಗೆ, ಗೆದ್ದ ಹಾಗೆ, ಬಹುಮಾನದ ದುಡ್ಡಿನ ಹಾರ ಹಾಕಿಕೊಂಡು ಕುಣಿದ ಹಾಗೆ...

ನೇಸರನೊಡಮೂಡಿ ಹುಲ್ಲುಗರಿಕೆಯ ಮೇಲಿನ ಇಬ್ಬನಿಯನ್ನು ಮುಟ್ಟಿ ಮೃದುವಾಗಿಸಿ, ಕರಗಿಸಿ ಎಬ್ಬಿಸುವ ಹೊತ್ತು.. ಚಂದ್ರವ್ವ ಮಗನ ಪಕ್ಕ ಕುಳಿತು ಆಗಲೆ ಎಬ್ಬಿಸಲಿಕ್ಕೆ ಸುಪ್ರಭಾತದ ಮಂತ್ರ ಆರಂಭಿಸಿಕೊಂಡಿದ್ದರು.. ' ಏಯ್ .. ಏಳೊ ಆಗಲೆ ಹೊತ್ತಾಯ್ತು ಸ್ಕೂಲಿಗೆ .... ಇವತ್ತು ಟೆಸ್ಟು ಬೇರೆ ಇದೆಯಂತೆ.. ಮೂರ್ಹೊತ್ತು ಆಟ ಆಟ ಅಂತ ಬುಕ್ಕು ಹಿಡಿದು ಓದಿದ್ದೆ ಇಲ್ಲ, ಅದೇನು ಕಡಿದು ಕಟ್ಟಿಹಾಕ್ತಿಯೊ ಟೆಸ್ಟಲ್ಲಿ..' ಎಂದು ಅವನು ಬಹುತೇಕ ಮರೆತೇ ಹೋಗಿದ್ದ ಟೆಸ್ಟನ್ನು ನೆನಪಿಸುತ್ತಲೆ ಸಹಸ್ರನಾಮಾರ್ಚನೆ ಆರಂಭಿಸಿದ್ದರು.. ಪಟದ ಸ್ಪರ್ಧೆಗೆ ಎಂದುಕೊಂಡು ಗಾಢ ನಿದ್ದೆಯಲ್ಲೂ ಸ್ವಯಂಪ್ರೇರಿತನಾಗಿಯೆ ಅರ್ಧ ಆಗಲೆ ಎದ್ದಿದ್ದ ಮಾದೇಶನಿಗೆ ಹೋಮ್ವರ್ಕಿನ ಜತೆಗೆ ಟೆಸ್ಟು ಕೂಡ ಇದೆ ಎಂಬ ನೆನಪೋಲೆ ಕಿವಿಗೆ ಬೀಳುತ್ತಲೆ, ಎದೆ ಧಸಕ್ಕೆಂದಿತ್ತು.. ಇನ್ನೇನು ಮಾಡಿದರೂ ಸ್ಕೂಲಿಗೆ ಮಾತ್ರ ಹೋಗೋಕೆ ಸಾಧ್ಯವೇ ಇಲ್ಲಾ.. ಹೋಂವರ್ಕ್ ಮಾಡಿಲ್ಲ, ಟೆಸ್ಟಿನ ಬಗ್ಗೆ ನೆನಪೇ ಇರಲಿಲ್ಲ... ಆಬ್ಸೆಂಟ್ ಆಗಿಬಿಟ್ರೆ ಎರಡರಿಂದಲೂ ಬಚಾವು...!

ಹಾಗೆಂದುಕೊಳ್ಳುತ್ತಲೆ ' ಅವ್ವಾ ನಾ ಇವತ್ತು ಸ್ಕೂಲಿಗೆ ಹೋಗಲ್ಲ , ಮನೇಲೆ ಇರ್ತೀನಿ ಅತ್ತೆ ಜೊತೆ..' ಎಂದ ರಾಗ ಎಳೆಯುತ್ತ..

' ಯಾಕೋ... ? ನೀನೇನು ಮನೆಲಿದ್ದು ಕಾರದಪುಡಿ, ಹಪ್ಪಳ, ಸಂಡಿಗೆ ಕರೀಬೇಕಿತ್ತಾ? ಎರಡು ಕೊಟ್ರೆ ದವಡೆ ಹಲ್ಲು ಮುರಿದು ಹೋಗಬೇಕು... ಎದ್ದು ಪಟಪಟಾ ಅಂತ ರೆಡಿ ಆಗ್ತಿಯೋ , ಇಲ್ಲಾ ದೊಣ್ಣೆ ಸೇವೆ ಆಗಬೇಕೋ ?' ಎಂದು ನೇರ ಬೆದರಿಕೆಯ ಎಚ್ಚರಿಕೆ ನೀಡಿದರು.. ಆದರೆ ಅದಕ್ಕೆಲ್ಲ ಬಗ್ಗುವಂತ ಪರಿಸ್ಥಿತಿಯಿರಲಿಲ್ಲ ಅಂದು.. ಹೋಮ್ವರ್ಕ್ ಮಾಡಿಲ್ಲ, ಟೆಸ್ಟ್ ಬೇರೆ, ಪಟದ ಹಬ್ಬದ ಸ್ಪರ್ಧೆ - ಹೇಗಾದರು ತಪ್ಪಿಸಿಕೊಳ್ಳುವ ದಾರಿ ಹುಡುಕಲೇ ಬೇಕಿತ್ತು...

' ಇಲ್ಲಾ, ಯಾಕೋ ಸ್ವಲ್ಪ ಹೊಟ್ಟೆ ನುಲುಸ್ತಾಯ್ತೆ ಕಣವ್ವಾ.. ಇವತ್ತೊಂದಿನ... 'ದಮ್ಮಯ್ಯ' ಅಂತೀನಿ.. ಮನ್ಲೆ ಇದ್ದು ರೆಸ್ಟ್ ತಕ್ಕಂತೀನಿ ' ಎಂದ ಸಾಧ್ಯವಾದಷ್ಟು ಮುಖ ಕಿವುಚಿ ಹೊಟ್ಟೆ ನೋವಿನೆಲ್ಲಾ ತೀವ್ರತೆ, ತೀಕ್ಷ್ಣತೆಯನ್ನು ಗಡಿಗೆ ಮುಖದ ಮೇಲೆ ತಂದು ಪ್ರದರ್ಶಿಸುವ ಕಲಾ ಪ್ರದರ್ಶನದಲ್ಲಿ ತೊಡಗಿಸಿಕೊಂಡ.. ಆದರೆ ಆ ಕಲಾವಿದನನ್ನೆ ಹೆತ್ತ ಮಹಾತಾಯಿ, ಆಕೆ... ಅಷ್ಟಕ್ಕೆಲ್ಲ ಬಿಡುವಳೆ ?

' ಎದ್ದು ಒಂದು ಗೋಲಿ ಸೋಡಾ ಕುಡುದ್ರೆ ಎಲ್ಲಾ ಸರಿಹೋಗುತ್ತೆ , ಏಳೊ ಮೇಲೆ.. ಗಂಜಿ ಮಾಡ್ಕೊಡ್ತೀನಿ ಕುಡಿದು ಹೋಗುವೆಯಂತೆ' ಎಂದು ಗದರಿಕೊಂಡರು.. ಹೀಗೆ ಒಂದೈದು ಹತ್ತು ನಿಮಿಷ ನಡೆದ ತಿಕ್ಕಾಟ ಫಲ ಕೊಡದೆ , ಚಂದ್ರವ್ವನ ಸಹನೆಯ ನಾಮಾರ್ಚನೆಯ ಮಿತಿಯ ಗಡಿ ದಾಟಿಸಿ, ಅಡಿಗೆ ಮನೆಯಲಿದ್ದ ದೋಸೆ ತಿರುವುವ ಲೋಹದ ಕೈ ಹಿಡಿದುಕೊಂಡು ಆಯುಧಸಮೇತ ರಂಗಪ್ರವೇಶ ಮಾಡುವ ಹಂತಕ್ಕೆ ತಲುಪಿಸಿತ್ತು.. ಅದನ್ನು ನೋಡುತ್ತಿದ್ದಂತೆ 'ಸದ್ಯ ! ಬಾರು ಕೋಲಿಲ್ಲ ಇವತ್ತು.. ದೋಸೆ ಮೊಗಚೋ ಕೈಯಲ್ಲಿ ಏಟು ಜೋರಾಗಿ ಬಿದ್ರು ಬರಿ ತೊಡೆ ಮೇಲೆ, ಕುಂಡಿ ಮೇಲೆ ತೊಗೊಂಡ್ಬಿಟ್ರೆ ಅಷ್ಟು ನೋವಾಗಲ್ಲ.. ಚೂಪು ತುದಿ ಕುಯ್ದೆ ಇರೋ ಹಾಗೆ ನೋಡ್ಕೊಂಡ್ರೆ ಸರಿ.. ಆದರೆ ಅತ್ತೆ ಯಾಕೆ ಇನ್ನೂ ಎಂಟ್ರಿ ಕೊಡಲಿಲ್ಲ? ಅವಳು ಬಂದ್ರೆ ಈ ಶುರುನ ಏಟೂ ತಪ್ಪುತ್ತೆ.. ಜಪ್ಪೊ ಮೊದಲೇ ಬೀದಿಗೆಲ್ಲ ಕೇಳೊ ಹಂಗೆ ಕಿರುಚ್ಕೊಂಡುಬಿಟ್ರೆ ಸಾಕು..' ಎಂದು ಮಾನಸಿಕವಾಗಿ ತನ್ನ ಪಾತ್ರಾಭಿನಯಕ್ಕು ಸಿದ್ದವಾಗುತ್ತಿದ್ದ ಮಾದೇಶ.

ಅವನ ಅನಿಸಿಕೆಗೆ ಪೂರಕವಾಗಿ ಒಳಗೇನೊ ಕೆಲಸ ಮಾಡುತ್ತಿದ್ದ ಅತ್ತೆ ಅಲ್ಲಿಂದಲೆ, 'ಗರಿ ಗರಿ ದೋಸೆ ಮಾಡ್ಕೊಡ್ತೀನಿ ಎದ್ದೇಳೋ ಮಾದೇಸಾ.. ಹಂಗೆಲ್ಲ ಸ್ಕೂಲು ತಪ್ಪಿಸ್ಕೊಬಾರದು ' ಅಂದ ಮಾತು ಕೇಳಿಸಿತು..

ಅಲ್ಲಿಂದ ಮುಂದಿನದೆಲ್ಲ ಗತ ಇತಿಹಾಸದ ಅದೇ ಸೀನುಗಳ ಪುನರಾವರ್ತನೆ... ಇನ್ನು ಸರಿಯಾಗಿ ನಾಲ್ಕು ಬೀಳುವ ತನಕ ಇದು ಮೇಲೇಳುವ ಜೀವವಲ್ಲ ಎಂದು ನುರಿತ ಅನುಭವದಿಂದಲೆ ಗ್ರಹಿಸಿದ್ದ ಚಂದ್ರವ್ವ, ಎಡದ ಕೈನಿಂದ ಅವನು ಹೊದ್ದಿದ್ದ ರಗ್ಗು ಕಿತ್ತೆಸೆದವರೇ, ಬಲದ ಕೈಲಿದ್ದ ದೋಸೆ ಮೊಗುಚಿನಿಂದ ಸಿಕ್ಕಸಿಕ್ಕ ಕಡೆ, ಎಲ್ಲೆಲ್ಲಿ ಚರ್ಮ ಕಣ್ಣಿಗೆ ಕಾಣಿಸುತ್ತದೆಯೊ ಅಲ್ಲೆಲ್ಲ ಮುಖ ಮೂತಿ ನೋಡದೆ 'ಅಂಗ ಸೇವೆ' ನಡೆಸತೊಡಗಿದ್ದರು..ಅಷ್ಟು ಬೇಗನೆ ಮಾತಿನ 'ವಾಗ್ಯುದ್ಧ' ಮುಗಿದು ಹೊಡೆಯುವ 'ಆಯುಧ ಕಾಂಡ' ಆರಂಭವಾಗುವುದೆಂದು ನಿರೀಕ್ಷಿಸಿರದಿದ್ದ ಮಾದೇಶನಿಗೆ, ಮೊದಲ ಹೊಡೆತ ಬೀಳುವ ಮೊದಲೇ, ಏಳು ಬೀದಿಗೆ ಕೇಳುವಷ್ಟು ಜೋರಾಗಿ ಕಿರುಚಬೇಕಿತ್ತೆಂದು ಏಟಿನ ಮಧ್ಯೆಯೆ ನೆನಪಾಗಿ, ' ಅಯ್ಯಪ್ಪಾ! ಅಯ್ಯಮ್ಮಾ! ಬೇಡ ವಡೀಬ್ಯಾಡ ಕಣವ್ವಾ ನೋಯ್ತದೆ.. ನಿನ್ ದಮ್ಮಯ್ಯ ಅಂತೀನಿ..ಇವತ್ತೊಂದಿನ ಬುಟ್ಬುಡು..' ಎನ್ನುತ್ತಲೆ ತನ್ನ ದನಿ ಒಳಗಿರೊ ಅತ್ತೆಗೆ ಕೇಳಿಸಿತೋ ಇಲ್ಲವೊ ಎನ್ನುವ ಕುತೂಹಲಕ್ಕೆ ಬಾಗಿಲಿನತ್ತ ನೋಡತೊಡಗಿದ.

ಆ ಹೊತ್ತಿಗೆ ಸರಿಯಾಗಿ ಒಳಗಿಂದ ಬಂದ ಸುಬ್ಬತ್ತೆ, ಅವನ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಚಂದ್ರವ್ವನನ್ನು ತಡೆಯದೆ ತಮ್ಮ ಪಾಡಿಗೆ ತಾವು ಹಾಸಿಗೆ, ಚಾಪೆ, ಬೆಡ್ ಷೀಟು ಮಡಿಸೆತ್ತಿಡುವ ಕಾಯಕದಲ್ಲಿ ನಿರತರಾದರು. ಇದರಿಂದ ಬೆಚ್ಚಿ ತನ್ನ ದನಿಯನ್ನು ಮತ್ತಷ್ಟು ತಾರಕಕ್ಕೆರಿಸಿದ ಮಾದೇಶನ ಹುನ್ನಾರವು ಫಲಕಾರಿಯಾಗದೆ, ಅಂದು ಚಂದ್ರವ್ವನಿಂದ ಮಾಮೂಲಿಗಿಂತ ಕೊಂಚ 'ಹೆಚ್ಚೇ' ಹೊಡೆತ ಬಿದ್ದಿತ್ತು.. ಏಟು ಬಿದ್ದ ಕಡೆಯೆಲ್ಲ ಬಾಸುಂಡೆಯಂತಾಗಿ ಕೆಂಪಗೆ ಮುಟ್ಟಿದರು ನೋಯುವಂತಾಗಿದ್ದರು ಹಲ್ಲುಮುಡಿ ಕಚ್ಚಿ ಸಹಿಸುತ್ತ ನಿರಂತರ ಆಕ್ರಂದನದಲ್ಲಿ ತೊಡಗಿದ್ದ ಆರೇಳು ನಿಮಿಷಗಳು ಗಂಟೆಗಳಂತೆ ಭಾಸವಾಗಿ ಕೊನೆಗೆ ಕೈಸೋತು ಬೇಸತ್ತು ಚಂದ್ರವ್ವನೆ ಹೊಡೆಯುವುದನ್ನು ನಿಲ್ಲಿಸಿ , ' ಈಗೆದ್ದು ರೆಡಿ ಆದೆ ಸರಿ ಇಲ್ದಿದ್ರೆ ತಿರುಗಾ ಬಂದು ಬುಲ್ಡೆಗೆ ಬಿಸಿನೀರು ಕಾಯಿಸ್ತೀನಿ ' ಎಂದು ಎಚ್ಚರಿಕೆ ಕೊಟ್ಟು ಒಳಗೆ ನಡೆದರು..

ಅಷ್ಟರಲ್ಲಿ ಅಲ್ಲಿದ್ದ ಸುಬ್ಬತ್ತೆಯೂ ಮಾತಾಡಿ, ' ಯಾಕೋ ಸ್ಕೂಲಿಗೆ ಹೋಗೋಕೆ ಇಷ್ಟು ಹಠ ಮಾಡ್ತೀ? ನೀನು ಓದಿ ದೊಡ್ಡೋನಾಗಿ ಆಫೀಸರಾಗೋಕೆ ಆಸೆಯಿಲ್ವೇನೊ ? ಏಳು, ಎದ್ದು ಬೇಗ ಹೊರಡು ' ಎಂದಾಗ ತನ್ನ ನಿರೀಕ್ಷೆಗೆ ವಿರುದ್ಧವಾಗಿ ವರ್ತಿಸಿದ ಅವಳ ಮೇಲೂ ಕೋಪ ಬಂದು ಬಿಕ್ಕುತ್ತಲೆ, 'ನೋಡತ್ತೆ ಹ್ಯಾಗೆ ಹೊಡೆದಿದಾಳೆ.. ಬಾಸುಂಡೆ ಬರೊ ಹಾಗೆ ? ಈಗ ನಾ ಹೋಗಿ ಸ್ಕೂಲಲ್ಲಿ ಕೂರೋದಾದ್ರು ಹೇಗೆ ? ನೀನಾದ್ರೂ ಏಳತ್ತೆ ಇವತ್ತೊಂದು ದಿನ ನನ್ನ ಬಿಟ್ಬಿಡು ಅಂತ..ಈ ಬಾಸುಂಡೆ ಅಂಡೂರ್ಕೊಂಡು ನಾ ಹೆಂಗತ್ತೆ ಕೂರಲಿ ?' ಎಂದ ದಯನೀಯವಾಗಿ ಕಾಣುವಂತೆ ನಟಿಸುತ್ತಾ.. ಬಾಸುಂಡೆಗಳೇನೊ ಬಲವಾಗಿಯೇ ಎದ್ದಿರುವುದು ಕಾಣಿಸುತ್ತಿತ್ತು..

'ಹೋಗ್ಲಿಬಿಡೆ ಚಂದ್ರಿ, ಇವತ್ತೊಂದು ದಿನ..ಬಾಸುಂಡೆ ಬಂದು ಕೆಂಪಾಗಿಬಿಟ್ಟಿದೆ, ಸ್ವಲ್ಪ ಹರಳೆಣ್ಣೆನಾದ್ರು ಹಚ್ತೀನಿ.. ' ಅನ್ನುತ್ತಲೇ ಮಾದೇಶನತ್ತ ತಿರುಗಿದವರೆ, ' ತಿರುಗಾ ಹೀಗೆಲ್ಲ ಮಾಡ್ಬೇಡ ನೀನು ಗೊತ್ತಾಯ್ತಾ ?' ಎಂದವರೇ ಎಣ್ಣೆ ಬಟ್ಟಲು ಹಿಡಿದು ಉರಿಯುತ್ತಿದ್ದ ಬಾಸುಂಡೆಗಳ ಮೇಲೆ ಸವರತೊಡಗಿದರು.

'ನೀವು ಸುಮ್ಮನಿರಿ ಸುಬ್ಬಕ್ಕ ಮುದ್ದಿನಿಂದಲೆ ಇವನು ಅರ್ಧ ಹಾಳಾಗಿರೋದು... ' ಅಂದರೂ ಅರೆಬರೆ ಮನದಲ್ಲೆ ಒಪ್ಪಿಕೊಂಡ ಸುಳಿವಿತ್ತಂತೆ ತಮ್ಮ ಸಂಗ್ರಾಮಕ್ಕೆ ವಿರಾಮವಿತ್ತು ಅಡಿಗೆಮನೆಗೆ ನಡೆದರು..

ಉರಿಯುತ್ತಿದ್ದ ಗಾಯಕ್ಕೆ ಎಣ್ಣೆ ಹಚ್ಚುತ್ತಿದ್ದ ಸುಬ್ಬತ್ತೆ,'ನೋಯುತ್ತೇನೊ?' ಅಂದಾಗ 'ಯಾಕೆ ಇವತ್ತು ಸುಬ್ಬತ್ತೆ ನನ್ ಪಾರ್ಟಿಗೆ ಸೇರಲಿಲ್ಲ? ಹಾಕ್ಕೊಂಡು ರುಬ್ಬುತಾ ಇದ್ರೂ ಸುಮ್ನೆ ಇದ್ರಲ್ಲ?' ಅಂದುಕೊಳ್ಳುತ್ತಿದ್ದವನು 'ಹೌದು' ಅನ್ನುವಂತೆ ತಲೆಯಾಡಿಸಿದ. ನಿಜಕ್ಕೂ ನೋವು ಹೆಚ್ಚಾಗೆ ಇತ್ತು.

'ಹರಳೆಣ್ಣೆ ಅರ್ಧ ಗಂಟೆಲಿ ನೋವು ಕಮ್ಮಿ ಮಾಡುತ್ತೆ.. ಇನ್ಮೇಲೆ ಹೀಗೆಲ್ಲ ಮಾಡ್ಬೇಡ ...' ಎಂದವಳೆ ಎದ್ದುಹೋದಳು ಸುಬ್ಬತ್ತೆ..

ಕೊರೆಯುತ್ತಿದ್ದ ಗೋದ್ರೆಜ್ ಸ್ಟೀಲು ಕುರ್ಚಿಯ ಮೇಲೊಂದು ಬೆಡ್ ಶೀಟ್ ಹಾಕಿ ಕೂತುಕೊಂಡವನೆ, ' ಇನ್ನು ಮನೆಯಿಂದ ಯಾವ
ನೆಪ ಹುಡುಕಿ ಹೊರಗೆ ಹೋಗಬಹುದು ? ತಡವಾಗದ ಹಾಗೆ ಪಟ ಹಾರಿಸೊ ಸ್ಪರ್ಧೆಯ ಜಾಗಕ್ಕೆ ಹೋಗಬೇಕಾದರೆ ಹೇಗೆ ಕಾರಣ ಹೇಳೋದು ? ' ಎನ್ನುವ ಅಲೋಚನೆ , ಅನ್ವೇಷಣೆಯಲ್ಲಿ ತೊಡಗಿದ..

'ನಾ ಗೋಪಾಲನ ಮನೆಗೆ ಹೋಗಿ ಬರ್ತೀನಿ.. ಹೋಮ್ವರ್ಕ್ ಮಾಡಕೆ ಗೊತ್ತಾಗ್ತಿಲ್ಲ.. ಗೋಪಾಲನ ಅಕ್ಕನ ಹತ್ರ ಹೇಳಿಸ್ಕೊಂಡು ಮಾಡಿ ತರ್ತೀನಿ...' ಅಂದ್ರೆ ಅವ್ವ ಕೂಗಾಡದೆ ಕಳಿಸ್ತಾಳೇನೊ ? ಅಂದುಕೊಳ್ಳುತ್ತ ಎಣ್ಣೆ ಹಾಕಿದ್ದ ಬಾಸುಂಡೆಗಳನ್ನು ಮೆಲುವಾಗಿ ಸವರಿಕೊಳ್ಳತೊಡಗಿದ ಮಾದೇಶ..

*************
 

Comments

Submitted by nageshamysore Fri, 02/19/2016 - 20:06

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ.. ಹಾಗಾದರೆ ಹಿಂದಿನ ಭಾಗ ಓದ್ಬೋದಲ್ವಾ ? ಅದೇ ಮಾದೇಶನ ಫ್ರೆಂಢ್ ಶಂಕರನ ಕೋಳಿಯ ಇಪ್ಪತ್ತೊಂದು ಮೊಟ್ಟೆ ಕಥೆ ? :-) ಪ್ರತಿಕ್ರಿಯೆಗೆ ಧನ್ಯವಾದಗಳು ಶಾಸ್ತ್ರಿಗಳೆ!

Submitted by nageshamysore Sat, 02/20/2016 - 13:54

In reply to by kavinagaraj

ಈಗ ನೀವು ಮೂರ್ತಿಗಳಿಬ್ಬರೂ ಸೇರಿ ನನ್ನ ಕೈಲಿ ಎರಡನೆ ಭಾಗನು ಬರೆಯೋ ಹಾಗೆ ಮಾಡ್ತಾ ಇದೀರಾ.. ಆದರೆ ಬರೆಯೊದೇನು ಅಂತ ಇನ್ನು ತಲೆ ಕೆರ್ಕೋತಾ ಇದೀನಿ :-)

Submitted by smurthygr Sat, 02/20/2016 - 18:53

In reply to by nageshamysore

<<ಆದರೆ ಬರೆಯೊದೇನು ಅಂತ ಇನ್ನು ತಲೆ ಕೆರ್ಕೋತಾ ಇದೀನಿ :-)>> ಕತೆಗೆ ತಲೆಬರಹ ಕೊಡುವಾಗ ಏನು ಯೋಚಿಸಿದ್ದಿರಿ? ನನಗಂತೂ ಸುಬ್ಬತ್ತೆ ಕೈಕೊಟ್ಟ ಬಗ್ಗೆ ಗೊತ್ತಾಗಲೇ ಇಲ್ಲ ... :-).

Submitted by nageshamysore Sat, 02/20/2016 - 19:11

In reply to by smurthygr

ಸುಬ್ಬತ್ತೆ ಬಂದಾಗೆಲ್ಲ ಮಾದೇಶನಿಗೆ ಅವಳದೆ ರಕ್ಷಣೆ, ಏನು ಕೀಟಲೆ ಮಾಡಬೇಕಾದರು. ಅವಳಿದ್ದಾಗ ಅವಳು ತನ್ನ ಪಾರ್ಟಿ ವಹಿಸಿಕೊಂಡು ಸದಾ ತನ್ನನ್ನು ರಕ್ಷಿಸುತ್ತಾಳೆ (ಉದಾಹರಣೆಗೆ ತಪ್ಪು ಮಾಡಿಯೂ ಒದೆ ಬೀಳದ ಹಾಗೆ) ಎನ್ನುವ ಬಲವಾದ ನಂಬಿಕೆ ಅವನಿಗೆ.. ಆ ನಂಬಿಕೆಯಲ್ಲೆ ಈ ಸಾರಿಯೂ ಸ್ಕೂಲಿಗೆ ಚಕ್ಕರು ಹಾಕಲು ಹೊರಟರೆ ತನ್ನ ಮೇಲಿನ ಅಪರಿಮಿತ ಪ್ರೀತಿಯಿಂದ, ತನ್ನ ಪರವಾಗಿ ವಾದಿಸಿ, ಒಂದು ದಿನದ ಮಟ್ಟಿಗೆ ಸ್ಕೂಲಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುವಳೆಂದು ಅವನ ಲೆಕ್ಕಾಚಾರ. ಆದರೆ ಎಲ್ಲಾ ವಿಷಯದಲ್ಲೂ ಅವನ ಪರ ವಹಿಸುತ್ತಿದ್ದವಳು, ಅಂದು ಮಾತ್ರ ಎದುರಿಗೆ ಏಟು ಬೀಳುತ್ತಿದ್ದರು ಸುಮ್ಮನಿದ್ದಳು ಮಾತ್ರವಲ್ಲದೆ, ಎಂದಿನಂತೆ ಚಂದ್ರವ್ವನನ್ನು ತಡೆಯಲು ಹೋಗಲಿಲ್ಲ.. ಅವಳು ಏಟು ಬೀಳದ ಹಾಗೆ ರಕ್ಷಿಸುವಳೆಂಬ ಕಾರಣಕ್ಕೆ ರಿಸ್ಕು ತೆಗೆದುಕೊಂಡ ಮಾದೇಶನಿಗೆ, ಸ್ಕೂಲಿನ ಚಕ್ಕರಿನ ವಿಷಯದಲ್ಲಿ ಮಾತ್ರ ಯಾಕೆ ಹಾಗೆ ಮಾಡಲಿಲ್ಲ ಎನ್ನುವ ಯಕ್ಷ ಪ್ರಶ್ನೆ.. 'ಯಾಕೆ ಕೈ ಕೊಟ್ಟಳು ಎಂದಿನಂತೆ ಕಾಪಾಡದೆ ?' ಎಂದು ಹಲುಬುವ ಎಳೆಯ ಮನದ ಗೊಂದಲಕ್ಕೆ ಆ ಹೆಸರು ಹೊಂದುತ್ತೇನೊ ಅನಿಸಿತು.. ಆದರೆ ನಿಮ್ಮ ಪ್ರತಿಕ್ರಿಯೆಯಿಂದ ಕಥೆಯ ಮೆಸೇಜಲ್ಲಿ ಸ್ವಲ್ಪ ಗ್ಯಾಪ್ ಇದೆ ಅಂತಲು ಗೊತ್ತಾಯ್ತು :-)

Submitted by nageshamysore Sat, 02/20/2016 - 19:33

In reply to by smurthygr

ಬೇರೆಲ್ಲ ವಿಷಯದಲ್ಲಿ ಮುದ್ದು ಇದ್ದರು ವಿದ್ಯೆಯ ವಿಷಯದಲ್ಲಿ ಅವಳಿಗೂ 'ಕಾಂಪ್ರೊಮೈಸ್' ಆಗುವುದು ಇಷ್ಟವಿಲ್ಲ.. ಮುಂದೆ ಅವನು ಓದಿ ದೊಡ್ಡವನಾಗಿ ಆಫೀಸರನೋ ಏನೊ ಆಗಬೇಕೆಂದರೆ ಸ್ಕೂಲಿಗೆ ನೆಟ್ಟಗೆ ಹೋಗಬೇಕೆಂದು ಅವಳಿಗೂ ಗೊತ್ತಿದೆ - ಅವಳೇ ಸ್ಕೂಲಿಗೆ ಹೋಗದಿದ್ದರೂ ಕೂಡ.. ಮುದ್ದು, ಪ್ರೀತಿ ಎಲ್ಲಾ ಉಣ್ಣೋದರಲ್ಲಿ, ತಿನ್ನೋದರಲ್ಲಿ ಎಲ್ಲಾದರಲ್ಲು ಅಲ್ಲಾ.. ಅನ್ನೊ ಸಾಮಾನ್ಯ ಜ್ಞಾನ ಕೂಡ ಇದೆ.. ಅದಕ್ಕೆ ಅವಳು ಬೀಳಲಿ ಎರಡು ಅಂತ ಸುಮ್ಮನೆ ಇದ್ದದ್ದು. ಹಾಗೆಯೇ ಮಾದೇಶನಿಗೆ ಅದು ಮೊದಲ ಪಾಠ - 'ಕೆನಾಟ್ ಟೇಕ್ ಎವೆರಿಥಿಂಗ್ ಫಾರ್ ಗ್ರಾಂಟೆಡ್ ಅಂಥ..'

ಈ ವಿವರಣೆಯಿಂದ ಸ್ವಲ್ಪ ಕ್ಲಾರಿಫೈ ಆಯ್ತಾ? :-)

Submitted by smurthygr Sun, 02/21/2016 - 10:49

In reply to by nageshamysore

ಇಷ್ಟನ್ನು ನಾನೇ ಊಹಿಸಿದ್ದೆ. ಆದರೆ ಕತೆಯಲ್ಲೂ ಇದು ವಾಚ್ಯವಾಗಿ ಒಂದೆಡೆ ಬಂದಿದ್ದರೆ ಚೆನ್ನಿತ್ತೇನೋ ಅಂತ ನನಗನ್ನಿಸಿತ್ತು. ಆದರೆ ಇಡೀ ಕತೆಯೇ ಮಾದೇಶನ ದೃಷ್ಟಿಕೋನದಲ್ಲಿ ಇರುವುದರಿಂದ ಸುಬ್ಬತ್ತೆಯ ಕಾರಣಗಳು ಅವನಿಗೆ ಪ್ರಶ್ನೆಯಾಗಿಯೇ ಉಳಿಯುವುದೂ ಸರಿ ಅಂತ ಕಾಣುತ್ತೆ. ಕಾಲಕ್ರಮೇಣ ಅವನಿಗೂ ಗೊತ್ತಾಗಬಹುದು!

Submitted by nageshamysore Sun, 02/21/2016 - 11:25

In reply to by smurthygr

ಮೂರ್ತಿಗಳೆ,

'ಆದರೆ ಇಡೀ ಕತೆಯೇ ಮಾದೇಶನ ದೃಷ್ಟಿಕೋನದಲ್ಲಿ ಇರುವುದರಿಂದ ಸುಬ್ಬತ್ತೆಯ ಕಾರಣಗಳು ಅವನಿಗೆ ಪ್ರಶ್ನೆಯಾಗಿಯೇ ಉಳಿಯುವುದೂ ಸರಿ ಅಂತ ಕಾಣುತ್ತೆ..'

- ಈ ಮಾತು ನಿಜ. ನನ್ನ ಮೂಲ ಉದ್ದೇಶ - ಬಗೆಹರಿಯದ ಪ್ರಶ್ನೆಯಾಗಿ ಉಳಿದು ಅವನ ಅರಿವಿನ ಮುಂದಿನ ಹೆಜ್ಜೆಗೆ ದಾರಿ ಮಾಡಿಕೊಡುವ ಅನುಭವವಾಗಬೇಕು ಎಂದು. ಅವನ ದೃಷ್ಟಿಯಿಂದ ನೋಡಿದಾಗ ಯಾಕೆ ಅಂದುಕೊಂಡಂತೆ ಆಗಲಿಲ್ಲ ಎನ್ನುವ ಪ್ರಶ್ನೆ ಉಳಿದುಕೊಳ್ಳುವುದು ಬಹಳ ಮುಖ್ಯ ಎನಿಸಿತು.

ಆದರೆ ಓದುಗರ ದೃಷ್ಟಿಯಿಂದ ಸುಬ್ಬತ್ತೆಯ ವರ್ತನೆಗೆ ಕಾರಣ ರೂಪಿ ಸಂಭಾಷಣೆಯೊಂದನ್ನು ಸೇರಿಸಬಹುದಿತ್ತೇನೊ - ಚಂದ್ರವ್ವನಿಗೆ ವಿವರಿಸುವ ರೀತಿಯಲ್ಲಿ. ಅದನ್ನೊಂದು ಕಮೆಂಟಿನ ರೂಪದಲ್ಲಿ ಸೇರಿಸಿಬಿಡುತ್ತೇನೆ ಬಿಡಿ - ಸಂಪೂರ್ಣತೆಯ ದೃಷ್ಟಿಯಿಂದ :-)

Submitted by keshavmysore Sun, 02/21/2016 - 11:57

In reply to by nageshamysore

ನಾಗೇಶರೇ,
ಚಂದಮಾಮದಲ್ಲಿ ಓದುತ್ತಿದ್ದ ಬೇತಾಳದ ಕಥೆಗಳಲ್ಲಿ ಬರುವಂತೆ - ಕಥೆಯೊಂದನ್ನು ಹೇಳಿ, ನಂತರ ಪ್ರತಿಕ್ರಿಯೆಯಲ್ಲಿ ಬೇತಾಳವು ಕೇಳಬಹುದಾದ ಪ್ರಶ್ನೆಯನ್ನೂ ತಾವೇ ಕೇಳಿ, ತದನಂತರ ಎಲ್ಲಿ ಸಂಪದಿಗರು - ಅಯ್ಯಾ ನಾಗೇಶರೇ, ಸುಬ್ಬತ್ತೆಗೆ ಮಾದೇಶನ ಮೇಲೆ ಪ್ರೀತಿಯಿದ್ದರೂ ಅವತ್ತು ಮಾತ್ರ ಯಾಕೆ ಕೈಕೊಟ್ಲು ಎಂಬ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ನೀವು ಹೇಳದೇಹೋದಲ್ಲಿ ನಿಮ್ಮ ತಲೆ ಕೆರೆಕೆರೆದು ಚಿಂದಿ ಚಿತ್ರಾನ್ನ ಆಗುತ್ತದೆ ಎಚ್ಚರವಿರಲಿ - ಎಂದು ಬರೆಯುವ ಮೊದಲೇ ಇನ್ನೊಂದು ಪ್ರತಿಕ್ರಿಯೆಯಲ್ಲಿ ತ್ರಿವಿಕ್ರಮನ ಉತ್ತರವನ್ನೂ ಕೊಟ್ಟು ಬಚಾವಾಗಿದ್ದೀರ! ಆದರೆ ಮಧ್ಯದಲ್ಲಿ ಮಾದೇಶ ಒಂದು ಸಾರಿ ಸೋಮೇಶನಾಗಿಬಿಟ್ಟದ್ದು???
-ಕೇಶವಮೈಸೂರು

Submitted by nageshamysore Sun, 02/21/2016 - 12:30

In reply to by keshavmysore

ಕೇಶವರೆ ಇದನ್ನೆ ಆದುನಿಕ ಪರಿಭಾಷೆಯಲ್ಲಿ 'ಕ್ರೌಡ್ ಸೋರ್ಸಿಂಗ್' ' ಕಂಟಿನ್ಯುಯಸ್ ಇಂಪ್ರೂವ್ಮೆಂಟ್' ಅಂತೆಲ್ಲ ಕರೆಯುವುದು ? ಸೋಶಿಯಲ್ ಮೀಡಿಯಾ ತರುವ ಅನೇಕ ಸಾಧ್ಯತೆಗಳಲ್ಲಿ ಇದೂ ಒಂದು :-)

ಸೋಮೇಶನನ್ನ ಸಂಪದದಲ್ಲಿ ರಿಪೇರಿ ಮಾಡಲು ಆಗದ ಕಾರಣ, ಅವನನ್ನು ಬ್ಲಾಗಿನಲ್ಲಿ ತಿದ್ದಿದ್ದೇನೆ. ಹದ್ದಿನ ಕಣ್ಣೋಟದಿಂದ ಅದನ್ನು ಹಿಡಿದು ಹಾಕಿದ್ದಕ್ಕೆ ಧನ್ಯವಾದಗಳು :-)

Submitted by nageshamysore Sun, 02/21/2016 - 11:43

ಮೂರ್ತಿಗಳ ಜತೆಗಿನ ಸಂವಾದದ ನಂತರ ಸೇರಿಸಿದ ಭಾಗ :
_______________________________________________

ಅಂದು ಮಧ್ಯಾಹ್ನ ಅಡಿಗೆ ಮನೆಯಲ್ಲಿ ಪಾತ್ರೆ ತಿರುವುತ್ತಿದ್ದ ಚಂದ್ರವ್ವನತ್ತ ನೋಡುತ್ತ ಸುಬ್ಬತ್ತೆ, ' ಹೊಡೆಯುವಾಗ ಮುಖಾಮೂತಿ ನೋಡದೆ ಚಚ್ಚಬಾರದೆ ಚಂದ್ರಿ.. ಸ್ವಲ್ಪ ಹುಷಾರು ಹೆಚ್ಚು ಕಮ್ಮಿಯಾದರೆ ನಾವೇ ನೋಡ್ಬೇಕಲ್ವಾ ? '

'ಹೂ ಸುಬ್ಬಕ್ಕಾ..ಆದರೆ ನನಗೊಂದು ಕುತೂಹಲ..'

'ಏನು ?'

'ಅಲ್ಲಾ...ಯಾವಾಗಲೂ ಅವನ ಪಕ್ಷನೆ ವಹಿಸ್ಕೊಂಡು ಅವನಿಗೆ ಒಂದು ಚೂರು ಏಟು ಬೀಳದ ಹಾಗೆ ನೋಡ್ಕೊತಿದ್ರಿ..ಇವತ್ಯಾಕೆ ಹೊಡಿತಿದ್ರು ಸುಮ್ಮನಿದ್ರಿ ಅಂತ ಆಶ್ಚರ್ಯ ಆಯ್ತು..'

' ಅದರಲ್ಲೇನೆ ಚಂದ್ರಿ ವಿಶೇಷ ? ನನ್ನ ಮೂರು ಜನ ಮೊಮ್ಮಕ್ಕಳು ಸ್ಕೂಲು ಓದು ಅಂತ ಹೋಗದೆ ಪೋಲಿ ಬಿದ್ದು ಹಾಳಾಗಿದ್ದು ನಾನೇ ನೋಡಲಿಲ್ವಾ ? ಮಾದೇಶ ಚುರುಕು ಹುಡುಗ ಆದರೆ ಸ್ವಲ್ಪ ತುಂಟ ಅಷ್ಟೆ.. ಅವನಿಗೆ ನಾ ಎಲಾ ವಿಷಯಕ್ಕೂ ಅವನ ಹಿಂದೇನೆ ಇರ್ತೀನಿ ಅನ್ನೊ ಭ್ರಮೆ ಇರಬಾರದು ಅಲ್ವಾ ? ಮುದ್ದು ಊಟ ತಿಂಡಿಲಿ, ಆದ್ರೆ ಓದೋ ವಿಷಯದಲ್ಲಿ ಅಲ್ಲಾ ಅಂತ ಗೊತ್ತಾಗಲಿ ಅನ್ಕೊಂಡು , ಕರುಳು 'ಚುರ್ರ್ ' ಅಂದ್ರು ಬಲವಂತವಾಗಿ ತಡ್ಕೊಂಡು ಸುಮ್ಮನಿದ್ದೆ... ಇಲ್ದಿದ್ರೆ ಮುಂದೆ ಬಗ್ಸೋಕಾಗುತ್ತೇನೆ ಅವನ್ನಾ ?'

'ಸುಬ್ಬಕ್ಕಾ.. ನಾ ನಿಮ್ಮನ್ನ ಏನೊ ಅನ್ಕೊಂಡಿದ್ದೆ ... ನೀವು ಓದಲ್ಲ, ಬರೆಯಲ್ಲ ನಿಮಗೇನು ಗೊತ್ತಾಗುತ್ತೆ ಅಂತ..ಆದರೆ ನೀವು ನನಗಿಂತ ಝೋರಿದೀರಿ ಬಿಡಿ' ಎಂದು ನಕ್ಕಳು ಚಂದ್ರವ್ವ..

ಆ ನಗೆಗೆ ತನ್ನ ನಗೆ ಜೋಡಿಸಲೆಂದು ತಿರುಗಿದ ಸುಬ್ಬತ್ತೆಯ ತಲೆಯ ಮೇಲೆ ಬಿಸಿಲು ಮಚ್ಚಿನ ಸಂದಿಯಿಂದ ಹಾದು ಬಂದ ಬಿಸಿಲು ಕೋಲೊಂದು ಹಾಯ್ದು , ಅವಳ ನರೆತ ಕೂದಲಿನ ಬೆಳ್ಳಿ ರೇಖೆಯನ್ನು ಅರೆಕ್ಷಣದ ಮಟ್ಟಿಗೆ ಫಳಗುಟ್ಟಿಸಿತು - ಅವಳ ಮಾತಿನ ಹಿಂದಿನ ಅನುಭವಕ್ಕೆ ಸಾಕ್ಷಿ ಎನ್ನುವಂತೆ..

*********