ಸಣ್ಣ ಕಥೆ :ಇಪ್ಪತ್ತೊಂದನೆ ಕೋಳಿ ಮೊಟ್ಟೆ...

ಸಣ್ಣ ಕಥೆ :ಇಪ್ಪತ್ತೊಂದನೆ ಕೋಳಿ ಮೊಟ್ಟೆ...

(picture from http://www.letstalkagric.com/wp-content/uploads/2016/01/hatching.jpg)
ಶಂಕರ ತೀರಾ ಖುಷಿಯಿಂದ ಬೀಗುತ್ತಿದ್ದ, ಅಕ್ಕಿಯ ಪುಟ್ಟಿಯೊಳಗಿನ ಅಕ್ಕಿಯ ಮೇಲೆ ಸಾಲಾಗಿ ಕೂತ ಸಣ್ಣ ಗಾತ್ರದ ನಾಟಿ ಕೋಳಿಮೊಟ್ಟೆಗಳನ್ನು ನೋಡುತ್ತ.. ಅರಳಿದ ಕಣ್ಣುಗಳಿಂದ ನೋಡುತ್ತಿದ್ದವನ ಅಚ್ಚರಿಗು ಕಾರಣವಿತ್ತು.. ಆಗಲೆ ಹತ್ತು ಬಾರಿ ಎಣಿಸಿ ನೋಡಿದ್ದಾನೆ - ಆಗಲೆ ಹದಿನಾರು ಮೊಟ್ಟೆಗಳು ಸೇರಿವೆ.. ಈ ಸಾರಿ ಸಾಕಿದ್ದು ಪರಮಾಯಿಶಿ ಕೋಳಿಯೆ ಇರಬೇಕು.. ಇನ್ನೂ ದಿನವೂ ಮೊಟ್ಟೆಯಿಕ್ಕುತ್ತಲೆ ಇದೆ.. 'ಹೋದ ಸಾರಿಯ ಮೂದೇವಿ ಕೋಳಿ ಬರಿ ಏಳಕ್ಕೆ ಸುಸ್ತಾಗಿ ಹೋಗಿತ್ತು.. ಇದೇ ವಾಸಿ ಹದ್ನಾರಿಕ್ಕಿದ್ರು ಇನ್ನು ಜಡಿತಾನೆ ಇದೆ ಬಂಪರ ಲಾಟರಿ ತರ.. ಏನು ಇಪ್ಪತ್ತುಕ್ಕೂ ಹೋಗ್ಬಿಡುತ್ತೊ ಏನೊ ..' ಎಂದು ಹಿರಿಹಿರಿ ಹಿಗ್ಗುತ್ತಿತ್ತು ಶಂಕರನ ಮನಸು..

ಕಳೆದ ಬಾರಿಯ ಆ ಕೋಳಿ ಸಿಕ್ಕಿದ್ದೆಲ್ಲಾ ತಿಂದು ಗಾತ್ರದಲ್ಲಿ ಯಮನಂತೆ ದಷ್ಟಪುಷ್ಟವಾಗಿದ್ದರು, ಮೊಟ್ಟೆಯಿಕ್ಕುವ ವಿಚಾರದಲ್ಲಿ ಮಾತ್ರ ತೀರಾ ಚೌಕಾಸಿ ಮಾಡಿ ನಿರಾಸೆ ಮಾಡಿಬಿಟ್ಟಿತ್ತು.. ಸಾಲದ್ದಕ್ಕೆ ಮೊಟ್ಟೆಯೊಡೆದು ಮರಿಯಾದಾಗ ಕನಿಷ್ಟ ಏಳಾದರು ಕೋಳಿ ಪುಳ್ಳೆಗಳು ಸಿಕ್ಕಿ, ಆ ಏಳೂ ದೊಡ್ಡವಾಗಿ ಇಡಿ ಕೇರಿಯ ತುಂಬಾ ಓಡಾಡಿಕೊಂಡಿರುವ ದೊಡ್ಡ ಗುಂಪನ್ನೆ ಈದುಬಿಟ್ಟಾಗ ಎರಡು ಮೂರು ಕೆಜಿ ತೂಗುವ ಪ್ರತಿ ಕೋಳಿಯು ಎಷ್ಟು ದುಡ್ಡು ತರಬಹುದೆನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದವನನ್ನು ಒಂದೇ ಏಟಿಗೆ ಮಕಾಡೆ ಮಲಗಿಸುವಂತೆ ಏಳರಲ್ಲಿ ಆರು ಪಿಳ್ಳೆಗಳು ತಿಂಗಳೊಪ್ಪತ್ತು ಬಾಳಾದೆ, 'ಗೊಟಕ್' ಎಂದು ಶಿವನ ಪಾದ ಸೇರಿಬಿಟ್ಟಿದ್ದವು.. ಮಿಕ್ಕಿದ್ದೊಂದು ಕೂಡ ಕುಂಟ ಕಾಲಿನದಾಗಿ ಹುಟ್ಟಿ ಕಾಲೆಳೆದುಕೊಂಡು ನಡೆಯುವುದನ್ನು ನೋಡುವುದೆ ಅಸಹ್ಯವೆನಿಸಿ, ಮೂಲೆ ಮನೆಯ ಪಾತಕ್ಕನಿಗೆ ಕೊಟ್ಟಷ್ಟು ಕಾಸಿಗೆ ಮಾರಿ ಕೈ ತೊಳೆದುಕೊಂಡಿದ್ದ..

ನೂರಾರು ಕೋಳಿಗಳ ಒಡೆಯನಾದಾಗ, ದಿನಕ್ಕೊಂದೆರಡು ಕೋಳಿಯಾದರೂ ಮಾರಿ ಬಂದ ಕಾಸಿಗೆ ಮೂರು ಹೊತ್ತು ಕಳ್ಳೆ ಮಿಠಾಯಿ, ಗಾಂಧಿ ಕೇಕು ತಿನ್ನಬೇಕೆಂದು ಕನಸು ಕಾಣುತ್ತಿದ್ದವನ ಆಸೆಯೆಲ್ಲ ಮಣ್ಣುಪಾಲಾಗಿ ಹೋಗಿತ್ತು. ನಯಾಪೈಸೆಗೂ ಅವ್ವನ ಹತ್ತಿರ ಗೋಗರೆಯುವ ಸ್ಥಿತಿ ಬಂದಾಗೆಲ್ಲ ಇದಕ್ಕೆಲ್ಲ ಕಾರಣ ಆ ಬದುಕದೆ ಹೋದ ಕೋಳಿಪಿಳ್ಳೆಗಳೆ ಎಂದೆನಿಸಿ ದಿನವೂ ಅವುಗಳಿಗೆ ಹಿಡಿಶಾಪ ಹಾಕಿಕೊಂಡೆ ಕಳೆದಿದ್ದ. 'ಮೊಟ್ಟೆಗೆ ನಾಕಾಣಿ ಕೊಡ್ತೀನಿ, ನಾಟಿ ಕೋಳಿ ಮೊಟ್ಟೆ ನನಗೆ ಮಾರಿಬಿಡೊ...' ಎಂದ ಸೀತಕ್ಕನಿಗು ' ಹೋಗಕ್ಕೊ, ಹೋಗು ನಾನೊಲ್ಲೆ... ದೊಡ್ಡದಾಗ್ಲಿ ಬೇಕಾದ್ರೆ ಆಮೇಲೆ ಇಡಿ ಕೋಳಿನೆ ಕೊಳ್ಳೊವಂತೆ...' ಅಂತ ಧಿಮಾಕು ಮಾತು ಆಡಿದ್ದವನಿಗೆ 'ಯಾಕ್ಲಾ ? ನಾ ಮೊಟ್ಟೆ ಕೇಳ್ದಾಗ್ಲೆ ಕೊಟ್ಟಿದ್ರೆ ಆಯ್ತಿರ್ಲಿಲ್ವಾ? ಈಗ ನಿಂಗು ಇಲ್ಲ ನಂಗು ಇಲ್ಲ ಅನ್ನೊ ಹಾಗೆ 'ಗೊಟಕ್' ಅನಿಸಿಬಿಟ್ಟೆಯಲ್ಲಾ?' ಎಂದು ಹಂಗಿಸಿದಾಗಂತು ನಾಚಿಕೆ ಅವಮಾನದಿಂದ ತಲೆ ತಗ್ಗಿಸುವಂತಾಗಿ ವಾರಗಟ್ಟಲೆ ಅವಳ ಕಣ್ಣಿಗೇ ಬೀಳದಂತೆ ಅಡ್ಡಾಡಿದ್ದ.. ಆ ಕ್ಯಾಣಕ್ಕೆ ಅರ್ಧ, ಈ ಸಾರಿ ಎಲ್ಲೆಲ್ಲೊ ವಿಚಾರಿಸಿ 'ಸ್ಪೆಷಲ್' ಕೋಳಿಯನ್ನೆ ತಂದು ಸಾಕಿಕೊಂಡಿದ್ದ..!

ಆ ಹಿನ್ನಲೆಯಿಂದಲೆ ಈ ಬಾರಿ ಕೋಳಿಯ ಧಾರಾಳತನಕ್ಕೆ ಕುಣಿದು ಕುಪ್ಪಳಿಸುವಂತಾಗಿತ್ತು... ಸರಿಯಾದ ಹತ್ತು ಮೊಟ್ಟೆಯಿಕ್ಕಿದರು ಸಾಕು ಎಂದು ಎದುರು ನೋಡುತ್ತಿದ್ದವನಿಗೆ ಈ ಹುಲುಸಾದ ಫಸಲು ಕಂಡು ಈ ಬಾರಿ ಕನಿಷ್ಠ ಒಂದು ಹತ್ತಾದರು ಪುಳ್ಳೆಗಳು ಕಚ್ಚಿಕೊಳ್ಳಬಹುದೆಂದು ಭರವಸೆಯಾಗಿ ಮತ್ತೆ ನೂರಾರು ಕೋಳಿಗಳ ಒಡೆಯನಾದ ಕನಸು ಮತ್ತಷ್ಟು ಬಣ್ಣ ಹಚ್ಚಿಕೊಂಡು ಕಣ್ಮುಂದೆ ಕುಣಿಯತೊಡಗಿತು. ಈ ಹೊಸ ಕೋಳಿಯೇನು ಸಾಮಾನ್ಯದ್ದಾಗಿರಲಿಲ್ಲ... ದಿನವೂ ಬೆಳಗಿನ ಮೊಟ್ಟೆಯಿಕ್ಕುವ ಹೊತ್ತಿಗೆ ಸರಿಯಾಗಿ ಎಲ್ಲಿದ್ದರೂ, ತನ್ನ ಕುಕ್ಕೆಯ ಗೂಡಿನ ಹತ್ತಿರ ಬಂದು ಮೈಯೆಲ್ಲಾ ಮುದುಡಿಕೊಂಡು ತನ್ನನ್ನೆ ಕಂಬಳಿ ಹೊದ್ದಂತೆ ಕೂತುಕೊಂಡಿತೆಂದರೆ ತನ್ನ ಗುಂಪಿಗೆ ಇನ್ನೊಂದು ಮೊಟ್ಟೆ ಕೂಡಿತೆಂದೇ ಖಚಿತ ಶಂಕರನಿಗೆ - ಪಕ್ಕದಲ್ಲಿದ್ದ ಕುಕ್ಕೆಯನ್ನು ಅದರ ಮೇಲೆ ಕವುಚಿ ಹಾಕಿ, ಎದುರುಗಡೆ ಕುಕ್ಕುರುಗಾಲು ಹಾಕಿ ಕೂತುಬಿಡುತ್ತಿದ್ದ - ಅದರ ಕೆಲಸ ಮುಗಿಸಿದ 'ಸಿಗ್ನಲ್' ಕಾಯುತ್ತ.. ಇನ್ನೇನು ಮುಗಿಯಿತು, ಇನ್ನು ಮೊಟ್ಟೆಗಳನ್ನು ಇಕ್ಕುವುದಿಲ್ಲ ಎನ್ನುತ್ತಲೆ ಇಪ್ಪತ್ತೊಂದನೆ ಮೊಟ್ಟೆಯಿಕ್ಕಿದ ನಂತರವಷ್ಟೆ ಸುಮ್ಮನಾಯಿತು ಆ ಗತ್ತಿನ ಕೋಳಿ...!

ವಠಾರದ ಜಗುಲಿಯಿಂದ ದಿನವು ಈ ಕೋಳಿಯ ದಿನಚರಿಯನ್ನೆ ಗಮನಿಸುತ್ತಿದ್ದ ಸೀತಕ್ಕ, ' ಲೋ ಶಂಕ್ರಾ...ಈ ಸಾರಿನಾದ್ರೂ ನಾ ಹೇಳಿದ ಮಾತು ಕೇಳೊ... ಬೇಕಾದ್ರೆ ಮೊಟ್ಟೆಗೆ ಎಂಟಾಣಿ ಕೊಡ್ತೀನಿ.. ನನ್ನ ಮಗಳು ಬಸ್ರೊಸಗೆ, ಬಾಣಂತನಕ್ಕೆ ಅಂತ ಬಂದವ್ಳೆ.. ಅವಳಿಗೆ ನಾಡ್ಕೋಳಿ ಮೊಟ್ಟೆನೆ ಆಗ್ಬೇಕು, ಫಾರಂ ಕೋಳಿ ತೀರಾ ವಾಯು... ಹೋದ್ಸಾರಿ ತರ ಮಾಡ್ದೆ ಕೊಡೊ..' ಅಂದಳು

ಹೋದ ಸಾರಿಯ ಅನುಭವದಿಂದ ಮೆತ್ತಗಾಗಿದ್ದ ಶಂಕರ, ಈ ಬಾರಿ ಯಾವುದೆ ಗತ್ತು ತೋರಿಸದ ಮಾಮೂಲಿ ದನಿಯಲ್ಲಿ, ' ಇಲ್ಲ ಕಣಕ್ಕ.. ನಾ ಎಲ್ಲಾ ಮರಿ ಮಾಡಿ ದೊಡ್ಡ ಕೋಳಿ ಗುಂಪು ಮಾಡಿ ಸಾಕ್ಬೇಕು ಅಂತ ಆಸೆ... ಇದ್ರಾಗು ಅದೆಷ್ಟು ಉಳಿತಾವೊ ಗೊತ್ತಿಲ್ಲ... ಬೇಡ ಕಣಕ್ಕ, ಇನ್ನೊಂದ್ ಸಾರಿ ನೋಡಾಣ..' ಎಂದ

' ಅಯ್... ಅದ್ಯಕ್ಯಾಕ್ ಅಳ್ಮೋರೆ ಮಾಡ್ಕೊಂಡ್ ಒದಾಡ್ತಿಯೊ..? ನಾ ಏನು ಹಾಕಿದ್ದೆಲ್ಲ ಕೊಡು ಅಂತಾ ಕೇಳಿದ್ನಾ? ಹೆಂಗು ಇದು ಇಪ್ಪತ್ತೊಂದು ಮೊಟ್ಟೆ ಮಡಗೈತೆ.. ಹತ್ತು ಇಟ್ಕೊಂಡು ಮರಿ ಮಾಡ್ಕೊ, ಮಿಕ್ಕಿದ್ದು ನನಗೆ ಮಾರ್ಬಿಡು... ಅಲ್ಲಿಗೆ ಇಬ್ಬುರ್ದೂ ನಡ್ದಂಗಾಯ್ತಲ್ಲಾ..? ' ಎಂದು ಒಂದು 'ಪ್ರಳಾಯಂತಕ' ಐಡಿಯಾದ ಬೀಜ ಬಿತ್ತಿದಳು..

ಶಂಕರನಿಗೆ 'ಹೌದಲ್ಲವಾ?' ಅನಿಸಿ ಒಂದು ತರದ ಪ್ರಲೋಭನೆ ಶುರುವಾಯಿತು ಒಳಗೊಳಗೆ.. ಜತೆಗೆ 'ಸೀತಕ್ಕ ಈಗಲೆ ಕಾಸು ಕೊಡ್ತಾಳೆ... ಪಿಳ್ಳೆನ ಬೆಳ್ಸಿ ದೊಡ್ಡದು ಮಾಡಿ ಮಾರೊತನಕ ಕಾಯೋ ಹಂಗಿರಲ್ಲ... ಹೇಗು ಒಂದಷ್ಟು ಮೊಟ್ಟೆ ಮರಿ ಆಗ್ದೇನು ಇರ್ಬೋದಲ್ವಾ? ಅದರ ಲೆಕ್ಕಾಚಾರದಲ್ಲೆ ಯಾಕೆ ಮಾರ್ಬಾರದು?' ಅನಿಸಿ ಆಸೆಯ ಬತ್ತಿಗೆ ಎಣ್ಣೆ ಹಚ್ಚತೊಡಗಿತು. ಏನೇನನ್ನೊ ಯೋಚಿಸಿ, ಆಲೋಚಿಸಿ ಹಿಂದಿನ ಅನುಭವದಿಂದ ಎಷ್ಟು ಮೊಟ್ಟೆ ಮರಿಯಾಗದೆ ಹೋಗಬಹುದು ಅಥವಾ 'ಗೊಟಕ್' ಅಂದು ಬಿಡಬಹುದೆನ್ನುವ 'ಮ್ಯಾಜಿಕ್ ಫಾರ್ಮೂಲ' ದ ಲೆಕ್ಕಚಾರ ಹಾಕಿದವನೆ, 'ನೋಡು ಸೀತಕ್ಕ ನೀ ಮಗಳ್ಗೆ ಅಂತ ಕೇಳ್ತಿದೀಯ ಹೇಗೆ ಇಲ್ಲಾ ಅಂತ ಹೇಳ್ಲಿ ? ಆದರೆ ಹತ್ತೆಲ್ಲ ಕೊಡಕಾಗಾಕಿಲ್ಲ... ಒಂದೈದು ಕೊಡ್ತೀನಿ ನೋಡು ಬೇಕಾದ್ರೆ... ಆದ್ರೆ ಅರವತು ಪೈಸಾದಂಗೆ ಮೂರು ರೂಪಾಯಿ ಕೊಡ್ಬೇಕು... ' ಅಂದ..

ನಾಟಿಕೋಳಿ ಮೊಟ್ಟೆ ಬೇಕಂದ್ರೂ ಅಂಗಡೀಲಿ ಸಿಗೊಲ್ಲ ಅಂತ ಗೊತ್ತಿದ್ದ ಸೀತಕ್ಕ ' ಆಗಲಿ' ಅನ್ನುವಂತೆ ತಲೆಯಾಡಿಸಿದಳು.. ಮೂಲೆಯ ಕಾಕನ ಅಂಗಡಿಯಲ್ಲಿ ಫಾರಂಕೋಳಿ ಮೊಟ್ಟೆಯೊಂದಕ್ಕೆ ಐವತ್ತು ಪೈಸೆ ಅಂತ ಗೊತ್ತಿದ್ದ ಶಂಕರ ತಾನು ಅರವತ್ತು ಪೈಸೆಯ ಹಾಗೆ ಮಾರಿದ ಜಾಣತನಕ್ಕೆ ಒಳಗೊಳಗೆ ಖುಷಿಪಟ್ಟುಕೊಂಡಿದ್ದ... ಅದಾಗಲೆ ಅವನ ಮನದಲೊಂದು ಅದ್ಭುತ ಐಡಿಯಾ ಒಂದು ಮೂರ್ತ ರೂಪ ತಾಳುತ್ತಿತ್ತು... 'ಹೇಗೂ ಫಾರಂ ಮೊಟ್ಟೆ ಐವತ್ತು ಪೈಸೆ... ಸೀತಕ್ಕ ಕೊಟ್ಟ ಕಾಸಲ್ಲಿ ಐದು ಫಾರಂ ಕೋಳಿ ಮೊಟ್ಟೆ ತಂದು ಮಿಕ್ಕಿದ ಮೊಟ್ಟೆಗಳ ಜತೆ ಮರಿಯಾಗೊ ಹಾಗೊ ಸೇರಿಸಿಬಿಟ್ಟರೆ, ಇಪ್ಪತ್ತೊಂದು ಮೊಟ್ಟೆನು ಉಳ್ಕೊಂಡ ಹಾಗಾಗುತ್ತೆ... ಸೀತಕ್ಕ ಕೊಟ್ಟಿರೊ ಲಾಭದ ಕಾಸಲ್ಲಿ ನಾ ಬೇಕಾದಷ್ಟು ಕಳ್ಳೆ ಮಿಠಾಯಿ, ಗಾಂಧಿ ಕೇಕು ತಗೊಂಡು ತಿನ್ಬೋದು... ಕೋಳಿಗೇನು ಗೊತ್ತಾಗುತ್ತೆ ಮೊಟ್ಟೆ ತನ್ನದಾ ಇಲ್ಲಾ ಫಾರಂದಾ ಅಂತ? ಕಾವು ಕೊಟ್ಟು ಮರಿ ಮಾಡುತ್ತೆ... ನಂಗೆ ಕಾಸು ಸಿಕ್ತೂ, ಕೋಳಿ ಮರೀನು ಉಳೀತು '.. ಅಂದುಕೊಂಡ ಹಾಗೆ ಐದು ಫಾರಂ ಮೊಟ್ಟೆ ತಂದು ಸೇರಿಸಿಯೂ ಬಿಟ್ಟಾ ಮೊಟ್ಟೆಯ ಪುಟ್ಟಿಗೆ.. ಅವತ್ತಿನ ಕಳ್ಳೆಮಿಠಾಯಿ ಯಾಕೊ ತುಂಬಾ ರುಚಿಯೆನಿಸಿತ್ತು ಶಂಕರನಿಗೆ..!

ಗುಟ್ಟಾಗಿಡಬೇಕೆಂದಿದ್ದರು ಹೆಂಗಸರ ಬಾಯಲ್ಲಿ ಗುಟ್ಟೆಲ್ಲಿ ನಿಲ್ಲುತ್ತದೆ ? ಅದು ಹೇಗೊ ಸೀತಕ್ಕನ ಬಾಯಿಂದ ನಾಟಿಮೊಟ್ಟೆ ಮಾರಿದ ವಿಷಯ 'ಲೀಕ್' ಆಗಿ ಹೋಗಿತ್ತು.. ಅದರ ಮುಂದಿನ ದಿನವೆ ಪಕ್ಕದ ಬೀದಿ ಮೀನಕ್ಕ ಗೋಲಿ ಆಡುತ್ತಿದ್ದವನನ್ನು ಹಿಡಿದು, ' ನಾ ಎಪ್ಪತ್ ಪೈಸಾ ಕೊಡ್ತೀನಿ ನಂಗೊಂದೈದು ಮೊಟ್ಟೆ ಕೊಡೊ ಶಂಕ್ರಾ..' ಅಂದಾಗ ಹೇಗೂ 'ಹೊಸ ಫಾರ್ಮುಲ' ಇದೆಯಲ್ಲಾ ಅನಿಸಿ ಹಿಂದೆ ಮುಂದೆ ನೋಡದೆ 'ಹೂಂ' ಅಂದುಬಿಟ್ಟಿದ್ದ.. ಕಾಕನ ಅಂಗಡಿಗೆ ಹೋಗಿ ಮತ್ತೈದು ಮೊಟ್ಟೆ , ಮಿಠಾಯಿ ಕೊಳ್ಳುವಾಗ, 'ಏನೊ ಶಂಕ್ರ ನೀನೆ ಕೋಳಿ ಸಾಕ್ತೀಯಾ ನನ್ಹತ್ರ ಮೊಟ್ಟೆ ತೊಗೋತೀಯಾ... ಏನ್ಸಮಾಚಾರ?' ಎಂದು ಕೀಟಲೆ ಮಾಡಿದ್ದನ್ನು ಲಕ್ಷಿಸದೆ ಓಡಿಬಂದಿದ್ದ. ಅದೇ ಲಾಜಿಕ್ಕಿನಲ್ಲಿ ಬೀದಿ ಕೊನೆಯ ದೊಡ್ಡ ಮನೆಯ ಸಿಂಗಾರಮ್ಮ ಕೂಡ, 'ನಂಗೊಂದೈದು ಕೋಡ್ತಿಯೇನೊ ಶಂಕ್ರಾ ? ಜಾಸ್ತಿ ಕಾಸು ಕೊಡ್ತೀನಿ' ಅಂದಾಗ ಮಾತೆ ಆಡದ ಅಷ್ಟು ದೊಡ್ಡ ಮನೆಯವರು ಸ್ವತಃ ಮಾತನಾಡಿಸಿ ಕೇಳುವಾಗ ಇಲ್ಲಾ ಅನ್ನುವುದು ಹೇಗನಿಸಿ 'ಪ್ರಸ್ಟೀಜಿಗೆ' ಮತ್ತೈದು ಮೊಟ್ಟೆ ಮಾರಿ ಮತ್ತೆ ಕಾಕನ ಅಂಗಡಿಗೆ ಧಾಳಿಯಿಟ್ಟಿದ್ದ.. ಈಗ ಉಳಿಯುತ್ತಿದ್ದ ಹೆಚ್ಚಿನ ಕಾಸು ಮಿಠಾಯಿಗೆ ಹೋಗುವ ಬದಲು ದೀಪಾವಳಿಗೆ ಕೊಳ್ಳಬೇಕಾದ ಪಟಾಕಿಯ ಲೆಕ್ಕಕ್ಕೆ ಜಮೆಯಾಗತೊಡಗಿತ್ತು..!

ವಿಷಯ ಹಾಗು ಅಲ್ಲಿ ಇಲ್ಲಿ ಸುತ್ತಾಡಿ ಕೊನೆಗೆ ಅವ್ವನ ಕಿವಿಗು ಬಿದ್ದು, ' ಏನ್ಲಾ ಶಂಕ್ರಾ..? ಊರೋರ್ಗೆಲ್ಲ ನಾಟಿಕೋಳಿ ಮೊಟ್ಟೆ ಮಾರ್ತಿದಿಯಂತೆ ? ಬೇವರ್ಸಿ ನನ್ಮಗನೆ ದಿನಾ ನಿಂಗೆ ಉಣ್ಣಕಿಕ್ಕಿ ಸಾಕಿ ಸಲಹೋಳು ನಾನು... ಅಂತಾದ್ರಾಗೆ ಮನೆಗೆ ತೊಗೊಳವ್ವಾ ತಿನ್ಕೊ ಅಂತ ಒಂದೈದು ಮೊಟ್ಟೆ ಕೊಡದೆ ಊರೋರ್ಗೆಲ್ಲ ದಾನ ಮಾಡ್ಕೊಂಡು ಬಂದಿದೀಯಾ.. ಮನೆಗೆ ಮಾರಿ, ಪರರಿಗೆ ಉಪಕಾರಿ ಅನ್ನೊ ಹಾಗೆ... ' ಎಂದು ಉಗಿದು ಉಪ್ಪಿನಕಾಯಿ ಹಾಕಿದಾಗ , ಇವಳ ಕಿವಿಗೆ ಹೇಗೆ ಬಿತ್ತು ವಿಷಯ ಅನ್ನೊ ಗೊಂದಲದ ಜೊತೆಗೆ , ಕೇಳಿದಾಗೆಲ್ಲ ಕಾಸು ಕೊಡದಿದ್ರೂ ಈಗ ಮಾತ್ರ ತರ್ಲೆ ತೆಗೀತಿದಾಳೆ ಎಂದು ಸಿಟ್ಟೆದ್ದು, ' ..ಸುಮ್ನೆ ಏನು ಯಾರ್ಗೂ ಕೊಟ್ಟಿಲ್ಲ ತಿಳ್ಕೊ... ಎಲ್ಲಾ ಕಾಸ್ ಕೊಟ್ಟವ್ರೆ... ನೀನು ಕಾಸ್ ಕೊಡು ನಿಂಗೂ ಮಾರ್ತೀನಿ... ಬರಿ ಒಂದು ರೂಪಾಯಿ ಒಂದು ಮೊಟ್ಟೆಗೆ...' ಎಂದು ನೇರ ವ್ಯವಹಾರದ ಮಾತಾಡಿದ್ದ ' ಅವ್ವಾ ಅಂತೇನಾದ್ರೂ ಡಿಸ್ಕೌಂಟ್ ಕೊಡ್ಬೇಕಾ? ಬ್ಯಾಡ್ವಾ? ' ಎಂಬ ಗೊಂದಲವನ್ನು ನಿವಾರಿಸಿಕೊಳ್ಳಲಾಗದೆ..

' ಅಯ್ಯೊ ಪಾಪಿ ನನ್ಮಗನೆ.. ನನ್ ಹತ್ರನೆ ಕಾಸ್ ಕೇಳ್ತೀಯಾ? ಅದೂ ಒಂದ್ರೂಪಾಯ್ಗೊಂದು ?' ಎಂದು ಮೂಲೆಯಲಿದ್ದ ಬೆತ್ತದತ್ತ ಕೈ ಹಾಕಿದ್ದನ್ನು ಕಂಡೆ ಒಂದೆ ಏಟಿಗೆ ಬಾಗಿಲಿನತ್ತ ನೆಗೆದವನೆ, ' ಅಯ್ಯೊ.. ಸುಮ್ಕಿರು ಧೈಯ್ಯ ಮೆಟ್ಕೊಂಡಂಗೆ ಆಡ್ಬೇಡ... ನೀ ಕೊಡ ಕಾಸು ಪಟಾಕಿಗೆ ಇಟ್ಕೊತೀನಿ... ಹಬ್ಬಕ್ಕೆ ನಿನ್ಹತ್ರ ಕೇಳೋದಿಲ್ಲ ...ಅದ್ಯಾಕೆ ಇಷ್ಟೊಂದು ಎಗರಾಡ್ತಿ..?' ಎಂದ

'ಹಾಳಾಗೋಗು ಬಡ್ಡಿಮಗನೆ... ಹೋಗ್ಲಿ ಎಂಟಾಣೆ ಕೊಡ್ತೀನಿ ..ಮಿಕ್ಕಿದ್ದೆಲ್ಲಾ ತತ್ತಾ...' ಎಂದವಳ ಮಾತನ್ನೂ ಲೆಕ್ಕಿಸದೆ, ' ಹೋಗವ್ವೊ.. ಮಾಡಿ ಮನೆ ಸಿಂಗಾರವ್ವ ಒಂದ್ರುಪಾಯಿ ಕೊಡ್ತಾರಂತೆ.. ನೀನು ಅಷ್ಟೇ ಕೊಟ್ರೆ ಕೊಡ್ತೀನಿ.. ಇಲ್ದೆ ಇದ್ರೆ ಇಲ್ಲಾ' ಎಂದವನೆ ಓದಿ ಹೋಗಿದ್ದ...

ಹಾಗೆ ಓಡಿ ಹೋದವನ ಮೇಲೆ ಮತ್ತಷ್ಟು ಹಿಡಿಶಾಪ ಹಾಕಿಕೊಂಡು ಸುಮ್ಮನಾಗಿದ್ದಳು ಚಿಂಕರವ್ವ, ಅದು ಬಗ್ಗುವ ಅಳಲ್ಲವೆಂದು ಗೊತ್ತಿದ್ದ ಕಾರಣ... ಶಂಕ್ರ ಅಲ್ಲಿಂದ ನೇರ ಹೋದವನೆ ಮತ್ತೈದು ಮೊಟ್ಟೆಯನ್ನು ಸಿಂಗಾರವ್ವನ ಮಡಿಲಿಗೆ ಹಾಕಿ ಯಥಾ ರೀತಿ ಇನ್ನೈದು ಬಿಳಿಯ ಮಿರಮಿರ ಮಿಂಚುವ ಫಾರಂ ಕೋಳಿ ಮೊಟ್ಟೆ ತಂದು ಸೇರಿಸಿದ.. ಅಲ್ಲಿಗೆ ಹಾಕಿದ ಇಪ್ಪತ್ತೊಂದು ಮೊಟ್ಟೆಯಲ್ಲಿ ಒಂದನ್ನುಳಿದು ಮಿಕ್ಕೆಲ್ಲಾ ಫಾರಂ ಕೋಳಿಯ ಮೊಟ್ಟೆಗಳಾಗಿಹೋಗಿತ್ತು.. ಅದನ್ನೆಲ್ಲ ಒಟ್ಟುಗೂಡಿಸಿ ಕೋಳಿ ಬಂದು ಕಾವು ಕೊಡುವ ಜಾಗದಲ್ಲಿರಿಸಿ ಎದುರು ಜಗುಲಿಯ ಮೇಲೆ ಹೋಗಿ ಕೂತವನೆ ಒಂದು ಕೈಲಿ ಚಡ್ಡಿ ಜೇಬಿನಲ್ಲಿ ಸೇರಿದ್ದ ಕಾಸನ್ನು ನೇವರಿಸುತ್ತ ಕೋಳಿ ಬಂದು ಕಾವು ಕೊಡುವುದೊ ಇಲ್ಲವೊ ಎಂದು ಆತಂಕದಿಂದ ಕಾಯುತ್ತಿದ್ದ.. ಎಲ್ಲಾ ಸರಿಯಾಗಿ ನಡೆದರೆ, ಇನ್ನು ಇಪ್ಪತ್ತೊಂದು ದಿನಕ್ಕೆ ಸರಿಯಾಗಿ ತಾಯಿಕೋಳಿಯ ಕಾವಿಗೆ ಎಲ್ಲಾ ಮೊಟ್ಟೆಯೊಡೆದು ಮರಿಯಾಗಿ ಈಚೆ ಬರಬೇಕು.. ಆ ಇಪ್ಪತ್ತೊಂದನ್ನು ಬೆಳೆಸಿದರೆ ಅದರಿಂದ ಇನ್ನಷ್ಟು ಮರಿಗಳಾಗಿ ಹಾಗೆ ಮುಂದುವರೆಸುತ್ತಾ ಹೋದರೆ ದೊಡ್ಡ ಕೋಳಿ ಫಾರಂ ಮಾಡುವಷ್ಟು ಕೋಳಿಗಳಾಗಿಬಿಡುತ್ತದೆ..! ಆದರೆ ಕೋಳಿಗೆ ಮೊಟ್ಟೆ ತನ್ನದಲ್ಲ ಅಂತ ಅನುಮಾನ ಬಂದುಬಿಟ್ರೆ ಕಾವು ಕೊಟ್ಟು ಮರಿ ಮಾಡುತ್ತಾ? ಫಾರಂ ಕೋಳಿ ಬಿಳಿ ಬಣ್ಣ ನೋಡೀನೂ ಕಾವು ಕೊಡುತ್ತಾ? ಎಂದೆಲ್ಲಾ ಅನುಮಾನದಲ್ಲಿ ದಿಟ್ಟಿಸುತ್ತಿದ್ದವನಿಗೆ ಕೊನೆಗು ಕೋಳಿ ಮಾಮೂಲಿನಂತೆ ಬಂದು ತನ್ನ ರೆಕ್ಕೆಗಳನ್ನು ಬಿಚ್ಚಿ ಅಷ್ಟಗಲಕ್ಕೂ ಹರವಿಕೊಂಡು ಒಂದು ಮೊಟ್ಟೆಯೂ ಹೊರಗೆ ಕಾಣದಂತೆ, ಕಾವು ಕೊಡಲು ಕುಳಿತಾಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ... ಅಲ್ಲಿಂದಾಚೆಗೆ ದಿನವು ಆಗ್ಗಾಗ್ಗೆ ಬಂದು ಕೋಳಿ ಕಾವು ಕೊಡಲು ಕೂತಿದೆಯೊ ಇಲ್ಲವೊ, ನೋಡುವುದೆ ಒಂದು ನಿತ್ಯದ ಕೆಲಸವಾಗಿಬಿಟ್ಟಿತು ಶಂಕರನಿಗೆ..

ಅವನ ಕಾತರದಷ್ಟೆ ವೇಗವಾಗಿ ಕಾವಿಗೆ ಮರಿಗಳು ಹೊರಬರದಿದ್ದರೂ, ದಿನವೂ ತಪ್ಪದಂತೆ ಬಂದು ಕಾವು ಕೊಡುತ್ತಿದ್ದ ಕೋಳಿಯ ನಿಷ್ಠೆ ಮಾತ್ರ ಮೆಚ್ಚಿಗೆಯಾಗಿ ಹೋಗಿತ್ತು ಶಂಕರನಿಗೆ.. ಒಂದೊಂದೆ ದಿನ ಕಳೆದು ಇಪ್ಪತ್ತೊಂದನೆ ದಿನ ಬರುತ್ತಿದ್ದಂತೆ ಕೋಳಿಯಿಟ್ಟಿದ್ದ ಇಪ್ಪತ್ತೊಂದನೆ ಮೊಟ್ಟೆ ಪಕ್ವವಾಗಿ, ಅದರೊಳಗಿನ ಗೋಡೆಯನ್ನು ಭೇಧಿಸಿಕೊಂಡು ಮೊದಲ ಮರಿ ಹೊರಬಂದಾಗ ಶಂಕರನಿಗೆ ಸ್ವರ್ಗಕ್ಕೆ ಮೂರೆ ಗೇಣು ಎನ್ನುವ ಲೆಕ್ಕ... ಅವ್ವ ಅದನ್ನು ಕೈಗೆತ್ತಿಕೊಂಡು ನೋಡಿದವಳೆ ಅದಾವ ಲೆಕ್ಕಾಚಾರದಲ್ಲೊ 'ಇದು ಯಾಟೆ ಅಲ್ಲಾ ಹುಂಜ..' ಎಂದು ಖಚಿತ ತೀರ್ಪು ಕೊಟ್ಟರೂ, ಗುಂಪಿಗೊಂದು ಗಂಡು ಹೇಗೂ ದಿಕ್ಕಿರಬೇಕು ಅದು ಇದೇ ಆಗಲಿ ಅಂದುಕೊಂಡು ಸಮಾಧಾನ ಪಟ್ಟುಕೊಂಡ ಶಂಕರ.. ಮಿಕ್ಕವಿನ್ನು ಮೊಟ್ಟೆಯ್ಹೊಡೆದು ಹೊರಬರದಿದ್ದರೂ, ಅವು ಸ್ವಂತ ಮೊಟ್ಟೆಗಳಲ್ಲದ ಕಾರಣ ಸ್ವಲ್ಪ ಹೆಚ್ಚು ಕಾಲ ಬೇಕೇನೊ ಎಂದುಕೊಂಡವನಿಗೆ ಇಪ್ಪತ್ತೆರಡಾಗಿ, ಇಪ್ಪತ್ತ ಮೂರು ದಾಟಿ, ಇಪ್ಪತ್ತನಾಲ್ಕನೆ ದಿನವಾದರು ಅವು ಚಿಪ್ಪೊಡೆದು ಹೊರಬರುವ ಲಕ್ಷಣವೆ ಕಾಣದಾದಾಗ ಯಾಕೊ ಭೀತಿಯಾಗತೊಡಗಿತು... ಅದೂ ಸಾಲದೆನ್ನುವಂತೆ ದಿನವೂ ತಪ್ಪದೆ ಬಂದು ಕಾವು ಕೂರುತ್ತಿದ್ದ ಕೋಳಿ , ಇದ್ದಕ್ಕಿದ್ದಂತೆ ತನ್ನ ದಿನಚರಿ ಬದಲಿಸಿ ಹಗಲಿನಲ್ಲಿ ಅವುಗಳತ್ತ ಹೋಗುವುದನ್ನೆ ನಿಲ್ಲಿಸಿಬಿಟ್ಟಿತು - ಸಂಜೆಯ ಮಾಮೂಲಿ ಒಡನಾಟದ ಹೊರತಾಗಿ.. ಅಂದು ಮಾತ್ರ ಅನುಮಾನ ಬಲವಾದಂತೆನಿಸಿದ ಶಂಕರನಿಗೆ ಯಾರನು ಕೇಳುವುದೆಂದೂ ಗೊತ್ತಾಗಲಿಲ್ಲ.. ತಟ್ಟನೆ ಅಂಗಡಿ ಕಾಕನನ್ನೆ ವಿಚಾರಿಸಿದರೆ ಹೇಗೆ ಎಂದನಿಸಿ ಮಿಠಾಯಿ ಕೊಳ್ಳುವ ನೆಪದಲ್ಲಿ ಅಲ್ಲಿಗೆ ಓಡಿದ್ದ..

' ಕಾಕಾ... ನೀ ಮಾರ್ತೀಯಲ್ಲ ಮೊಟ್ಟೆ, ಅವನ್ನ ಮರಿನು ಮಾಡ್ಬೋದು ಅಲ್ವಾ?' ಅಂದಾ

ಪೆದ್ದನನ್ನು ನೋಡುವಂತೆ ನೋಡಿ ಕಿಸಕ್ಕನೆ ನಕ್ಕ ಕಾಕ, ' ಅದೆಲ್ಲಾಯ್ತುದೆ ? ಫಾರಂ ಕೋಳಿ ಮೊಟ್ಟೆ ಅಪ್ಪಿ ತಪ್ಪಿ ಶಾಖಕ್ಕೆ ಮರಿ ಆಗ್ದೆ ಇರಲಿ ಅಂತ ಫಾರಂನಲ್ಲೆ ಪಿನ್ನು ಚುಚ್ಚಿ ಸಣ್ಣ ತೂತಾ ಮಾಡಿ ಕಳಿಸಿಬಿಟ್ಟಿರ್ತಾರಲ್ಲ? ತೂತು ಬಿದ್ಮೇಲೆ ಅಬಾರ್ಶನ್ ಮಾಡಿದಂಗೆ ಅಲ್ವೇನೊ ಗುಗ್ಗು ? ಮರಿ ಹೆಂಗಾಗುತ್ತೆ? ' ಎಂದು ತನ್ನ ಆ ವಿಷಯದ ಮೇಲಿದ್ದ 'ಸ್ಪೆಷಲ್' ಧ್ಯಾನವನ್ನು ತೋರಿ ಹಲ್ಲು ಕಿರಿದಿದ್ದ . ಅದೆ ಬಿರುಸಲ್ಲಿ, ' ನನ್ಹತ್ರ ಅಷ್ಟೊಂದು ಮೊಟ್ಟೆ ತೊಗೊಂಡು ಹೋಗಿದ್ದು , ಮರಿ ಮಾಡೋಕಲ್ಲಾ ತಾನೆ? ' ಎಂದು ಅವಹೇಳನ ಅಪಹಾಸ್ಯದ ನಗೆ ನಗತೊಡಗಿದ.

ಶಂಕರನಿಗೆ ಏನು ಹೇಳಲೂ ತೋಚಲಿಲ್ಲ... ಏನಾಗುತ್ತಿದೆಯೆಂದೂ ಅರಿವಾಗದಷ್ಟು ಅಯೋಮಯ ಮಯಕ ಆವರಿಸಿಕೊಂಡಂತಾಗಿತ್ತು... ಐದು ಹತ್ತಿರಲಿ, ಒಂದೆ ಒಂದು ಗಂಡು ಕೋಳಿ ಬಿಟ್ಟರೆ ಮಿಕ್ಕೇನು ಇರದು ಎನ್ನುವುದನ್ನು ನಂಬಿ ಜೀರ್ಣಿಸಿಕೊಳ್ಳಲೆ ಕಷ್ಟವಾಗಿತ್ತು.. ಯಾವುದಕ್ಕು ಮತ್ತೆ ಹೋಗಿ ನೋಡುವುದು ಸರಿಯೆಂದು ಮನೆಯತ್ತ ನಡೆದರೆ, ಮೊಟ್ಟೆಯಿದ್ದ ಕೊಟ್ಟಿಗೆಯ ಕಡೆಯಿಂದ ವಾಚಾಮಗೋಚಾರ ಬೈದುಕೊಂಡು ಬರುತ್ತಿದ್ದ ಅವ್ವ ಕಾಣಿಸಿಕೊಂಡಿದ್ದಳು... ಇವನ ಮುಖ ಕಂಡವಳೆ ಪಕ್ಕಕ್ಕೆ 'ಥೂ' ಎಂದು ಉಗಿದವಳೆ ಒಂದೂ ಮಾತಾಡದೆ ವೇಗವಾಗಿ ನಡೆದು ಹೋದದ್ದು ಕಂಡು ಏನಾಗಿರಬಹುದೆಂದು ಗೊತ್ತಗದೆ ಒಳಗೆ ಬಂದು ಬಗ್ಗಿ ನೋಡಿದ್ದ..

ಅಲ್ಲಿ ನೋಡಿದರೆ ಮಿಕ್ಕೆಲ್ಲಾ ಇಪ್ಪತ್ತು ಮೊಟ್ಟೆಗಳು ಕಾವಿಗೊ ಏನೊ ಅರೆಬರೆ ಚಿಪ್ಪೊಡೆದುಕೊಂಡು ತೆರೆದುಕೊಂಡಿದ್ದವು. ಅವುಗಳ ಒಳಗಿನಿಂದ ಮರಿಯ ಬದಲಿಗೆ ಕಪ್ಪು, ಬೂದು ಬಣ್ಣದ ಲೋಳೆಯಂತಹ ಘನ ಮಿಶ್ರಣವೊಂದು ಹೊರಚಾಚಿಕೊಂಡಿತ್ತು.. ಇನ್ನು ಕೆಲವು ಚಿಪ್ಪು ಒಡೆಯದೆ ಹಾಗೆ ಅನಾಥವಾಗಿ ಬಿದ್ದಿದ್ದವು...

ಅವನ್ನೆತ್ತಿ ಎಸೆಯಬೇಕೊ , ಹಾಗೆ ಬಿಡಬೇಕೊ ಅರಿವಾಗದ ಸಂದಿಗ್ದತೆಯಲ್ಲಿ ದಾರಿ ಕಾಣದೆ ಕಂಗಾಲಾದವನಂತೆ ಅವನ್ನೆ ದಿಟ್ಟಿಸಿ ನೋಡುತ್ತಾ ಜಗುಲಿಯ ಮೇಲೆ ಕುಸಿದ ಶಂಕರನ ಕಣ್ಣಲ್ಲಿ ಇದ್ದದ್ದು ನಿರಾಶೆಯೊ, ಕೋಪವೊ, ಅವಮಾನವೊ ಅರಿವಾಗದ ಗೊಂದಲ ದ್ರವರೂಪಾಗಿ ದ್ರವಿಸಿ ನಿಲ್ಲದ ಕಂಬನಿಯ ಧಾರೆಯಾಗಿ ಹರಿಯತೊಡಗಿತ್ತು..

*****************

Comments

Submitted by nageshamysore Wed, 02/17/2016 - 19:49

In reply to by smurthygr

ನಮಸ್ಕಾರ ಮೂರ್ತಿಗಳೆ, ಧನ್ಯವಾದಗಳು..:-) ಹೊರಗೂ ಬಂದಿಲ್ಲ ಒಳಗೂ ಹೋಗಿಲ್ಲ - ಎಲ್ಲಾ ನಮ್ಮ ಕವಿಗಳ ಸಹವಾಸ ! ಸಣ್ಣ ಕಥೆಯ ಉದ್ದ ನೋಡಿ ' ದಪ್ಪ - ಸಣ್ಣಕಥೆ' ಅಂತೆ ಛೇಡಿಸುತ್ತಾರೆ !! ಸರಿ ಅವರಿಗಾಗಿಯಾದರು ಒಂದು ಕೈ ನೋಡೇಬಿಡುವ ಅಂದುಕೊಂಡು ಸುಮ್ಮನೆ ಗೀಚಿದ ಕಥೆಗಳಿವು.. ಆದರೂ ಇನ್ನೂ ಅಗತ್ಯ ಉದ್ದಕ್ಕಿಂತ ಹೆಚ್ಚಾಗಿಯೇ ಇದೆಯೇನಿಸುತ್ತಿದೆ !

Submitted by nageshamysore Wed, 02/17/2016 - 21:37

In reply to by Palahalli Vishwanath

ಪಾಲಹಳ್ಳಿ ವಿಶ್ವನಾಥರೆ ನಮಸ್ಕಾರ ಮತ್ತು ಧನ್ಯವಾದಗಳು.. ಇಲ್ಲಿ ಗಣಿತ ಏನೋ ಸರಿಯಾಗಿತ್ತು ಆದರೆ ಎಣಿಸಿದಂತೆ ಮಾತ್ರ ನಡೆಯಲಿಲ್ಲ ಅಷ್ಟೇ!

Submitted by nageshamysore Wed, 02/17/2016 - 21:37

In reply to by Palahalli Vishwanath

ಪಾಲಹಳ್ಳಿ ವಿಶ್ವನಾಥರೆ ನಮಸ್ಕಾರ ಮತ್ತು ಧನ್ಯವಾದಗಳು.. ಇಲ್ಲಿ ಗಣಿತ ಏನೋ ಸರಿಯಾಗಿತ್ತು ಆದರೆ ಎಣಿಸಿದಂತೆ ಮಾತ್ರ ನಡೆಯಲಿಲ್ಲ ಅಷ್ಟೇ!

Submitted by kavinagaraj Sat, 02/20/2016 - 08:08

In reply to by nageshamysore

ನನಗಾಗಿಯೇ ಬರೆದ ಕಥೆ!! ಧನ್ಯವಾದಗಳು, ನಾಗೇಶರೇ. ಮೊಟ್ಟೆಯ ವಿಷಯದಲ್ಲಿ ನಾನು ಅಜ್ಞಾನಿ. ಆದ್ದರಿಂದ ನೀವು ಹೇಳಿರುವುದೆಲ್ಲಾ ಸರಿಯೆಂದು ಒಪ್ಪಿ ಅಭಿನಂದಿಸುವೆ. :)

Submitted by nageshamysore Sat, 02/20/2016 - 08:43

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು... ಸುಮ್ಮನೆ ಹಾಸ್ಯಕ್ಕೆ ಹೇಳಿದೆ, ಅಷ್ಟೆ :-)

ಇದು ಬಾಲ್ಯದಲ್ಲಿ ನಾ ಕಂಡಿದ್ದ ಸತ್ಯ ಘಟನೆಯೊಂದರಿಂದ ಪ್ರೇರಿತವಾದದ್ದೆ. ಆಗ ಗೊತ್ತಾಗಿದ್ದೇನೆಂದರೆ ಫಾರಂ ಕೋಳಿ ಮೊಟ್ಟೆಯನ್ನು ಸ್ಟರಿಲೈಸ್ ಮಾಡಿಬಿಟ್ಟಿರುವುದರಿಂದ ಕಾವು ಕೊಟ್ಟರು ಅದು ಮರಿಯಾಗಲು ಸಾಧ್ಯವಿಲ್ಲ ಎಂದು ( ಆಗ ಪಿನ್ನಲ್ಲಿ ಚುಚ್ಚಿ ತೂತು ಮಾಡಿಬಿಟ್ಟಿರುತ್ತಾರೆ ಎಂದೆ ಕೇಳಿದ್ದೆ - ಗುಂಡು ಪಿನ್ನಿನಲ್ಲಿ ಒಂದೊಂದೆ ಮೊಟ್ಟೆ ತೆಗೆದುಕೊಂಡು ಚುಚ್ಚಿಚುಚ್ಚಿ ತೂತು ಮಾಡುತ್ತಾರೆಂದೆ ಭಾವಿಸಿದ್ದೆ !). 'ಕಾಷಿಯಸ್ ಮೈಂಡ್ ' ಅನ್ನೋ ಬ್ಲಾಗ್ ಸೈಟಿನಲ್ಲಿ ಫಾರ್ಮ್ ಕೋಳಿ ಮೊಟ್ಟೆಲೂ ಆತ್ಮ ಇರುತ್ತಾ ಅಂತ ಪ್ರಶ್ನೆ ಕೇಳಿದ್ರು - ಆಗ ಈ 'ಪಿನ್ನು' ಚುಚ್ಚಿ ನಿಷ್ಕ್ರೀಯವಾಗಿಸೋ ವಿಷಯ ನೆನಪಾಗಿ , ಆತ್ಮ ಇರೋದಕ್ಕೂ ಬಿಡದೆ ಬರಿ ತಿನ್ನೋಕೆ ಯೋಗ್ಯ ಅನ್ನೊ ಹಾಗೆ ಮಾಡ್ತಾರಲ್ಲ ಅನ್ನಿಸ್ತು. ಅದೇ ಎಳೆ ಹಿಡ್ಕೊಂಡು ಸುಮ್ಮನೆ ಒಂದು ಕಥೆ ಹೊಸೆದೆ :-)

Submitted by smurthygr Sat, 02/20/2016 - 18:56

In reply to by nageshamysore

ಮೊಟ್ಟೆಯನ್ನು ಸ್ಟರಿಲೈಸ್ ಏನೂ ಮಾಡಬೇಕಾಗಿಲ್ಲ ಅಂತ ಕೇಳಿದ್ದೇನೆ. ಫಾರಂ ಹೆಣ್ಣುಕೋಳಿಗಳು ಗಂಡು ಕೋಳಿಯ ಸಂಪರ್ಕವಿಲ್ಲದೇ ತಮ್ಮಷ್ಟಕ್ಕೇ ತಾವೇ ಮೊಟ್ಟೆ ಇಡುತ್ತವೆ, ಆದರೆ ಅವು ಮರಿಯಾಗಲ್ಲ ಅಂತ ಕೇಳಿದ್ದೆ.

Submitted by nageshamysore Sat, 02/20/2016 - 19:16

In reply to by smurthygr

ಮೂರ್ತಿಗಳೆ ನಿಮ್ಮ ಮಾತೆ ಸತ್ಯವಿರಬೇಕು - ಸ್ಟರಿಲೈಸ್ ಅನ್ನುವುದು ಬರಿ ನನ್ನ ಊಹೆ ಮಾತ್ರವಲ್ಲದೆ ಖಚಿತ ಮಾಹಿತಿಯಲ್ಲ. ಹೀಗಾಗಿ ನಿಮ್ಮ 'ಅಂಡೆ ಕಾ ಫಂಢಾ' ನೆ ಸರಿಯಾದ ವಿವರಣೆ ಇರಬೇಕು.. ಅದಕ್ಕೆ ಮತ್ತೆ ಥ್ಯಾಂಕ್ಸ್ !

Submitted by keshavmysore Sun, 02/21/2016 - 01:24

In reply to by nageshamysore

ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಗೊಂದಲವೇಕೆ? ಶ್ರೀನಿವಾಸ ಮೂರ್ತಿಗಳು ಹೇಳಿರುವುದು ಸರಿ
⦁ ಹುಂಜದ ಸಂಪರ್ಕವಿಲ್ಲದೇ ಸಾಕುವ ಕೋಳಿಗಳು ಇಡುವ ಮೊಟ್ಟೆಗಳು ಮರಿಯಾಗುವುದಿಲ್ಲ - ಮನುಷ್ಯರಲ್ಲಿ ಋತುಮತಿಯಾದ ಹೆಣ್ಣಿನ ಗರ್ಭಾಶಯವು ನಿಗದಿತ
ಋತುಚಕ್ರಕ್ಕನುಗುಣವಾಗಿ ಉತ್ಪತ್ತಿ ಮಾಡುವ ಅಂಡಕೋಶಕ್ಕೆ ಸಮಾನ ಈ ಮೊಟ್ಟೆಗಳು. ಕೋಳಿ ಫಾರಮ್ ಎಂದರೆ ಮೊಟ್ಟೆಗಳಿಗಾಗಿಯೇ ಕೋಳಿಗಳನ್ನು ಸಾಕುವ ಕೃಷಿ.
⦁ ಇನ್ನು ಮರಿಮಾಡುವುದಕ್ಕೆಂದೇ ಸಾಕುವ ಫಾರಮ್ ಗಳೆಂದರೆ ಬ್ರೀಡರ್ ಫಾರಮ್ ಗಳು. ಇಲ್ಲಿ ಕೋಳಿಗಳು ಹುಂಜದ ಸಂಪರ್ಕದಲ್ಲೇ ಬೆಳೆಯುತ್ತವೆ. ಹೀಗಾಗಿ, ಇವುಗಳು ಇಡುವ ಮೊಟ್ಟೆಗಳು ನಿಜವಾದ ಅರ್ಥದಲ್ಲಿ ಭ್ರೂಣಗಳು - ಮನುಷ್ಯರಲ್ಲಿ ಅಂಡಾಣು-ವೀರ್ಯಾಣುಗಳ ಸಂಯೋಗದಿಂದ ಫಲಿತವಾದ ಭ್ರೂಣಕ್ಕೆ ಸಮ. ಇಂತಹ ಮೊಟ್ಟೆಗಳಲ್ಲಿ ನಮ್ಮ ನಿಮ್ಮ ಪರಿಕಲ್ಪನೆಯ ’ಆತ್ಮ’ ಸೃಜಿತವಾಗಿರುತ್ತದೆ.
⦁ ಅಂತೆಯೇ, ಮನುಷ್ಯರಲ್ಲಿ ಹೇಗೆ ಗಂಡು-ಹೆಣ್ಣುಗಳ ನಿಯತ ಸಂಯೋಗವಿದ್ದರೂ ಸಹ ಹೆಣ್ಣಿನ ಪ್ರತಿಯೊಂದು ಅಂಡವೂ ಭ್ರೂಣವಾಗುವುದಿಲ್ಲವೋ ಹಾಗೆಯೇ ಬ್ರೀಡರ್ ಫಾರಮ್ ಕೋಳಿಗಳು ಇಡುವ ಮೊಟ್ಟೆಗಳೆಲ್ಲವೂ ಫಲಿತವಾದ (ಫರ್ಟೈಲ್) ಮೊಟ್ಟೆಗಳಾಗಿರುವುದಿಲ್ಲ.
⦁ ಹೆಚ್ಚಿನ ಮಾಹಿತಿಗಾಗಿ ಗೂಗಲಿಸಿ ಅಷ್ಟೆ! ಸಂಪದದಲ್ಲಿ ಪ್ರತಿಕ್ರಿಯಿಸುವಾಗ ಚಿತ್ರದ ಅಪ್ ಲೋಡ್ ಸೌಲಭ್ಯವಿಲ್ಲದಿರುವುದರಿಂದ ಚಿತ್ರ ಹಾಕಲಾಗಿಲ್ಲ. ಇಲ್ಲದಿದ್ದಲ್ಲಿ ಮನೆಗೆ ಮೊಟ್ಟೆ ತಂದಾಗ ಅದನ್ನು ಒಡೆದಾಗ ಅದು ಫಲಿತವಾದ (ಫರ್ಟೈಲ್) ಮೊಟ್ಟೆಯೋ ಅಲ್ಲವೋ ನೀವೇ ಕ್ಷಣಮಾತ್ರದಲ್ಲಿ ಹೇಳಬಹುದಂತೆ.

ಹುಟ್ಟಿನಿಂದ ಸಸ್ಯಾಹಾರಿಯಾದ ಕಾರಣ ಇದುವರೆಗೂ ಮೊಟ್ಟೆಯನ್ನು ಕೈಯಲ್ಲೂ ಸಹ ಮುಟ್ಟಿಲ್ಲ. ಹಾಗಾಗಿ ಈ ಮೇಲೆ ಬರೆದಿರುವ ಮಾಹಿತಿ ಬರಿಯ ಓದಿಕೊಂಡ ತಿಳುವಳಿಕೆಯಷ್ಟೆ. ಮೊಟ್ಟೆ ತಿನ್ನುವವರು ಮೇಲೆ ಹೇಳಿದ್ದನ್ನು ಪರಾಮರ್ಶಿಸಬೇಕು!
-ಕೇಶವ ಮೈಸೂರು

Submitted by nageshamysore Sun, 02/21/2016 - 06:01

In reply to by keshavmysore

ಸುಪರ್..!! ಕೇಶವರೆ ತುಂಬಾ ಧನ್ಯವಾದಗಳು - ಮೊಟ್ಟೆಯ ಸವಿಸ್ತಾರ ಜಾತಕವನ್ನು ಗೂಗಲಿಸಿ ಹಾಕಿ ಮಾಹಿತಿಯ ಅಪೂರ್ಣತೆಯನ್ನು ಪೂರ್ಣಗೊಳಿಸಿದ್ದಕ್ಕೆ.. :-) ಕಥೆಯಲ್ಲಿ ಪ್ರಾಸಂಗಿಕವಾಗಿ ಬಂದ ಘಟನೆಯೊಂದು ಅಂತಿಮವಾಗಿ ಮೊಟ್ಟೆ ತಿನ್ನುವವರ / ತಿನ್ನದವರ ಸುಲಭ 'ಜ್ಞಾನ ವೃದ್ಧಿ'ಗೆ ಕಾರಣವಾದದ್ದು ಕೂಡ ಈ ಮಾಹಿತಿ ತಂತ್ರಜ್ಞಾನ ಯುಗದ ಶಕ್ತಿ, ಸಾಮರ್ಥ್ಯಗಳ ದ್ಯೋತಕ. ಇನ್ನು ತಿನ್ನುವವರ / ತಿನ್ನದವರ ಜಿಜ್ಞಾಸೆ ಬಿಡಿ - ರಾಜರತ್ನಂ ಕುಡಿಯದೆ ಇದ್ದರೂ ಬರೆದ ಕುಡುಕರ ಹಾಡುಗಳ ಹಾಗೆ !

ಇನ್ನು ಕಥೆಯಲ್ಲಿ ಬರುವ ಮೊಟ್ಟೆಗಳು ಮಾತ್ರ ಮೊದಲ ಗುಂಪಿನವೆ - ಕೋಳಿ ಫಾರಂನಿಂದ ಬಂದವು :-)

Submitted by keshavmysore Thu, 02/25/2016 - 15:55

ಇದು ಕಥೆಗೆ ಪೂರಕವಾದ ಅಥವಾ ಸಂಬಂಧಿತವಾದ ಪ್ರತಿಕ್ರಿಯೆ ಅಲ್ಲದಿದ್ದರೂ, ಆತ್ಮದ ವಿಷಯದಲ್ಲಿ ಜಿಜ್ಞಾಸೆ ಮತ್ತಷ್ಟು ಹೆಚ್ಚಿ, ಪ್ರತಿಕ್ರಿಯೆ-ಸಂವಾದದ ಮುಂದುವರೆದ ಭಾಗವೆಂದು ಭಾವಿಸುತ್ತ:-
ನಾನು ಮೇಲೆ ಹೇಳಿದ ಹಾಗೆ ಫಲಿತವಾದ ಮೊಟ್ಟೆಯೊಳಗೆ ಸೃಜಿತವಾದದ್ದು / ಪ್ರವೇಶವಾದದ್ದು ’ಆತ್ಮ’ವಲ್ಲ - ’ಜೀವ’. ಏಕೆಂದರೆ ಜೀವಕ್ಕೆ ಸಾವಿದೆ (ನೀವು ಆಮ್ಲೆಟ್ ಮಾಡಿ ತಿಂದಾಗ). ಆದರೆ ಆತ್ಮಕ್ಕೆ ಸಾವಿಲ್ಲ! ಅಲ್ಲವೇ?

Submitted by nageshamysore Thu, 02/25/2016 - 18:43

In reply to by keshavmysore

ಆತ್ಮ ಅವಿನಾಶಿ ಎನ್ನುವ ಮಾತು ನೆನೆದಾಗ ನಿಮ್ಮ ಮಾತು ನಿಜವೆನಿಸುತ್ತದೆ. ಬಹುಶಃ ಜೀವಾತ್ಮ, ಪರಮಾತ್ಮ ಎನ್ನುವ ವರ್ಗೀಕರಣವೂ ಅದರಿಂದಲೆ ಉದ್ಭವಿಸಿದ್ದೋ ಏನೋ ? ಅದೆಂತೆ ಇದ್ದರು ಚರಾಚರಗಳೆಲ್ಲದರಲ್ಲು ಪರಮಾತ್ಮನಿದ್ದಾನೆ ಎಂದು ಹೊರಟರೆ ಜೀವವಿರುವ ಮತ್ತು ಇಲ್ಲದುದರ ನಡುವಿನ ವ್ಯತ್ಯಾಸವೇ ಅಳಿಸಿ ಹೋಗಿಬಿಡುತ್ತದೆ. ಮಾನವ ದೇಹದ ಹಾಗೆ, ಸಾವಿಗೀಡಾಗುವುದು ಬರಿ ಮೊಟ್ಟೆಯ 'ದೇಹವೆನ್ನುವ ಆಮ್ಲೆಟ್' ಮಾತ್ರ ಅಂದುಕೊಂಡರೆ ಅಲ್ಲೂ ಆತ್ಮದ ಅಸ್ತಿತ್ವವನ್ನು ಊಹಿಸಿಕೊಳ್ಳಬಹುದೇನೊ !

Submitted by keshavmysore Thu, 02/25/2016 - 21:08

In reply to by nageshamysore

ಸಂಭಾಷಣೆ ಎತ್ತಲಿಂದ ಎತ್ತಲೋ ಹೋದರೂ ಸಹ, ಮುಂದುವರಿಸಲು ಅಡ್ಡಿಯಿಲ್ಲವೆಂದುಕೊಳ್ಳುತ್ತಾ.....
ಚರಾಚರ ಎಂದಾಗ ಜೀವವಿರುವ ಅಚರ ಎಂದರೆ ಮರಗಿಡಗಳು - ಈ ಎಲ್ಲದರಲ್ಲಿ ಆತ್ಮ ಅಥವ ಜೀವದ ಉತ್ಪತ್ತಿಗಾಗಿ ಅಗತ್ಯವಾದ ಚೈತನ್ಯ ಇರುತ್ತದೆ ಅಂದು ಅರ್ಥೈಸಬಹುದಲ್ಲವೇ? ಉದಾಹರಣೆಗೆ, ಸಸ್ಯಾಹಾರಿಗಳು ತಿನ್ನುವ ದವಸ ಧಾನ್ಯ - ಬೀಜಗಳು. ಅವುಗಳನ್ನು ನೀರಿನಲ್ಲಿ ನೆನೆಸಿದಾಗ ಅಥವಾ ನೆಲದಲ್ಲಿ ಬಿತ್ತಿ ನೀರುಣಿಸಿದಾಗ ಮೊಳಕೆಯೊಂದು ಮೂಡಿತೆಂದರೆ ಜೀವವೊಂದರ ಉತ್ಪತ್ತಿಯಾಯಿತೆನ್ನಬಹುದು. ಅಂದರೆ ಆ ಬೀಜವು ಫಲಿತವಾದ ಮೊಟ್ಟೆ ಅಥವಾ ಭ್ರೂಣಕ್ಕೆ ಸಮ ಎನ್ನಬಹುದೇ? ವ್ಯತ್ಯಾಸವೆಂದರೆ ಯಾವ ಜೀವಕ್ಕೆ ೫ ಅರಿವುಗಳೂ ಇರುತ್ತವೋ ಅವನ್ನು ಮಾತ್ರ ’ಜೀವಿ’ ಎಂದು ಪರಿಗಣಿಸಿದರೆ, ಅದಕ್ಕಿಂತ ಕಡಿಮೆ ಅರಿವುಳ್ಳ ಜೀವಿಗಳನ್ನು ಅಂದರೆ ಸಸ್ಯ ಸಂಕುಲದ ಜೀವಿಗಳನ್ನು ಆತ್ಮವುಳ್ಳ ’ನಿರ್ಜೀವಿ’ ಎನ್ನಲು ಬರುತ್ತದೆಯೆ? ಅಂದರೆ ಚರ ಜೀವಸಂಕುಲವು ಜೀವಾತ್ಮ - ಪರಮಾತ್ಮಗಳನ್ನೊಳಗೊಂಡ ಜೀವಿಗಳಾದರೆ, ಅಚರ ಜೀವಸಂಕುಲವು ಬರಿಯ ಪರಮಾತ್ಮವುಳ್ಳ (ನಿರ್)ಜೀವಿಗಳೆ?

Submitted by nageshamysore Thu, 02/25/2016 - 21:29

In reply to by keshavmysore

ಕೇಶವರೆ, ಇದಕ್ಕೆಲ್ಲ ಪ್ರಬುದ್ಧವಾಗಿ ಸಮರ್ಪಕವಾಗಿ ಉತ್ತರ ಕೊಡುವಷ್ಟು ಜ್ಞಾನ ನನ್ನಲ್ಲಿಲ್ಲ ( ಕವಿ ನಾಗರಾಜರು , ಶ್ರೀಧರರಂತಹ ಉಸ್ತಾದರು ಅದನ್ನು ಸಮರ್ಪಕವಾಗಿ ಮಾಡಬಲ್ಲರು). ಆದರೆ ನನ್ನ ಸ್ವಗ್ರಹಿಕೆಗೆ ಅನುಕೂಲವಾಗುವಂತೆ ಇದಕ್ಕೆ ನನ್ನದೊಂದು ಸರಳ ಸಿದ್ದಾಂತವಿದೆ - ಜೀವಿಯಾಗಲಿ ನೀರ್ಜೀವಿಯಾಗಲಿ ಚರಾಚರವಾಗಲಿ (ಕಲ್ಲು ಮಣ್ಣಿನಂತಹ ವಸ್ತುವು ಸೇರಿದಂತೆ ) , ಸಕಲವೂ ಮಾಡಲ್ಪಟ್ಟಿರುವ ಮೂಲವಸ್ತುವೆಂದರೆ ಪಂಚಭೂತಗಳು. ಅಲ್ಲಿಗೆ ಎಲ್ಲಾ ಒಂದೆ ಮೂಲ ಅನ್ನುವ ತೀರ್ಮಾನಕ್ಕೆ ಬರಬಹುದು. ನಾವು ಈ ಮೂಲವನ್ನೆ ಒಂದು ಶಕ್ತಿಯ ಆಕರವೆಂದು ಭಾವಿಸಿಕೊಂಡರೆ - ಚಲನ ಶೀಲ / ಸಜೀವ ವಸ್ತುಗಳಲ್ಲಿ ಈ ಶಕ್ತಿ 'ಚಲನ ಶಕ್ತಿಯಾಗಿ ( ಕೈನೆಟಿಕ್ ಎನರ್ಜಿ)' ಅಸ್ತಿತ್ವದಲ್ಲಿರುತ್ತದೆ - ಆಧ್ಯಾತ್ಮಿಕವಾಗಿ ಹೇಳುವುದಾದರೆ ಇದನ್ನು ಪ್ರಕೃತಿ / ಚೇತನಾ ರೂಪದ ಶಕ್ತಿ ಎನ್ನಬಹುದು. ಅದೇ ನಿರ್ಜೀವ ಅಥವಾ ಜಡವಸ್ತುಗಳಲ್ಲಿ ಇದೇ ಶಕ್ತಿ 'ಸ್ಥಾಯಿ ರೂಪದಲ್ಲಿ ( ಪೊಟೆನ್ಶಿಯಲ್ ಎನರ್ಜಿ) ಅಸ್ತಿತ್ವದಲ್ಲಿರುತ್ತದೆ - ಅರ್ಥಾತ್ ಜಡಬ್ರಹ್ಮದ ಅಥವಾ ಪುರುಷ ರೂಪಿನ ಅಸ್ತಿತ್ವದಲ್ಲಿ. ಯಾವುದರಲ್ಲಿ ಈ ಎರಡು ಶಕ್ತಿಗಳ ಸಂಯೋಗ ನಡೆಯುತ್ತದೋ ಅಲ್ಲಿ ಚಲನಶೀಲತೆ ಸಾಧ್ಯವಾಗುತ್ತದೆ ಮತ್ತು ನಾವು ಜೀವಿಯೆನ್ನುವ ಸ್ವರೂಪ ಕಾಣಿಸಿಕೊಳ್ಳುತ್ತದೆ (ಗಿಡ, ಮರ , ಪ್ರಾಣಿ, ಮಾನವ ಇತ್ಯಾದಿ) . ಬಹುಶಃ ಜೀವಿಗಳಲ್ಲಿ ಅಂತಹ ಒಂದು ಸಂಘಟನೆ ಸಾಧ್ಯವಾಗಿಸುವ ಚೇತನಶಕ್ತಿಯನ್ನೆ ಆತ್ಮ, ಪರಮಾತ್ಮ ಎನ್ನಬಹುದು.. ನಿರ್ಜೀವಿಗಳಲ್ಲಿ ಅದು ಪ್ರಾಯಶಃ ಜಡಶಕ್ತಿಯಾಗಷ್ಟೆ ಉಳಿದುಬಿಡುವುದರಿಂದ ಅಲ್ಲಿ ಆತ್ಮದ ಪ್ರಕಟ ರೂಪವಿರದೆ ಬರಿ ನಿಷ್ಕ್ರಿಯ ರೂಪವಿದೆ ಎಂದೂ ಭಾವಿಸಿಕೊಳ್ಳಬಹುದೆನಿಸುತ್ತದೆ.

ಎಲ್ಲಾ ಬರಿ ನನಗೆ ತೋಚಿದ ಅಪಕ್ವ ವಿವರಣೆ.. ತಪ್ಪು ಗ್ರಹಿಕೆಯಿದ್ದರೆ ಕ್ಷಮೆಯಿರಲಿ :-)