ಮಾನವಧಮ೯

ಮಾನವಧಮ೯

 
 
                           ಬದುಕು ದೇವರು ಮಾನವನಿಗೆ ಕೊಟ್ಟ ಅದ್ಭುತವಾದ ಒಂದು ವರ. ಇದನ್ನು ನಾವು ಅರಿತು ಬಾಳಿದರೆ ನಮ್ಮ ಬಾಳು ಸಾಥ೯ಕ. ಈ ಬದುಕಿನಲ್ಲಿ ಎಲ್ಲವೂ ಇದೆ.    ಸುಖ-ದುಃಖ, ಸೋಲು-ಗೆಲುವು, ಬಡತನ-ಸಿರಿತನ, ನೋವು-ನಲಿವು, ಸ್ತುತಿ-ನಿಂದನೆ ಇತ್ಯಾದಿಗಳ ಮಿಶ್ರಣವೇ ಬದುಕು.  ಇವೆಲ್ಲವೂ ಎಲ್ಲ ಕಾಲಕ್ಕೂ ಒಂದೇ ಸಮನಾಗಿ  ಒಬ್ಬನಲ್ಲೇ ಇರುವುದಿಲ್ಲ. ಈ ಎಲ್ಲವೂ ಬಂದು ಹೋಗುತ್ತಿರುತ್ತವೆ.  ಇಂದು ಸುಖವಿದ್ದಲ್ಲಿ ನಾಳೆ ದುಃಖ ಬರಬಹುದು.  ಒಮ್ಮೆ ಸೋಲಾದರೆ ಗೆಲುವು ಮುಂದೆ ಸಿಗಬಹುದು. ಇದೆ ರೀತಿ  ಸ್ತುತಿ  ಮತ್ತು ನಿಂದನೆಗಳು ಬರುವುದು ಸಹಜ. ಸುಖ, ಗೆಲುವು, ಸಿರಿತನ, ನಲಿವು, ಮುಂತಾದವುಗಳು ನಮ್ಮೆಡೆಗೆ ಬಂದಾಗ ಹಿಗ್ಗದೆ ಇರುವುದನ್ನು ಕಲಿತಾಗ,  ಇದಕ್ಕೆ ವಿರುದ್ದವಾದ ಪರಿಸ್ಥಿತಿ ಬಂದಾಗ ನಾವು ಕುಗ್ಗುವುದಿಲ್ಲ.   ಶಾಂತಿ ಮತ್ತು ನಿಮ೯ಲವಾದ ಜೀವನವನ್ನು ನಡೆಸಬೇಕೆಂದು ಮನಸ್ಸು ಮಾಡಿ, ಸಮಸ್ಥಿತಿಯಿಂದ ಪ್ರಾಂಜಲ ಮನಸ್ಸಿನಿಂದ ಮುನ್ನೆಡೆಯಬೇಕು.   ಈ ರೀತಿ  ನಿರಂತರ ಸಾಧನೆ ಮಾಡಿದಾಗ ಮಾತ್ರ,   ಬದುಕಿನಲ್ಲಿ   ಎತ್ತರಕ್ಕೆ ಏರಲು ಸಾಧ್ಯ. ಈ ಸಾಧನೆ ಹೇಳುವಷ್ಟು ಸುಲಭವಲ್ಲ. ಕಷ್ಟಸಾಧ್ಯವಾದ ಈ ಸಾಧನೆಯನ್ನು   ನಿರಂತರವಾಗಿ ಜೀವನದುದ್ದಕ್ಕೂ ನಿರ್ವಹಣೆ ಮಾಡಿದ ಹಲವಾರು   ವ್ಯಕ್ತಿಗಳು,   ಶ್ರೇಯಸ್ಸನ್ನು ಹೇಗೆ ಪಡೆಯಲು ಸಾಧ್ಯ?ಎಂಬುದನ್ನು ನಮ್ಮಂತಹ ಪಾಮರರಿಗೆ ತೋರಿಸಿಕೊಟ್ಟಿದ್ದಾರೆ.  ವಿವೇಕ, ತ್ಯಾಗ, ಪ್ರಯತ್ನ, ಸದ್ಗುಣ ಮತ್ತು ಇವೆಲ್ಲವುದರ ಸಕಾಲದ  ಆಚರಣೆ ಸಾಧಕನ  ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿ ಪರಿಪಕ್ವವಾಗಿ ಬೆರೆತು, ಆತನ ಶ್ರೇಯೋಭಿವೃದ್ಧಿಗೆ  ಕಾರಣವಾಗುತ್ತದೆ. ಮನುಷ್ಯನಲ್ಲಿ ಅಡಗಿ ಕುಳಿತಿರುವ ಮೃಗತ್ವವನ್ನು ಹೊಡೆದೋಡಿಸಿ,  ದೈವತ್ವವನ್ನು ಉಳಿಸಿಕೊಂಡು   ಬಾಳುವುದೇ ಪ್ರತೀ ಧಮ೯ದ ಉದ್ದೇಶ.  ಇದನ್ನೇ  ಮಾನವ ಧರ್ಮ ಎಂದು ಕರೆಯುವುದು. 
                           ಈ ಜಗತ್ತಿನ ಎಲ್ಲ ಧಮ೯ಗಳು ಸಾಧಕನನ್ನು ಪರಮಸತ್ಯದೆಡೆಗೆ ಕರೆದೊಯ್ಯುವ ಮಾಗ೯ಗಳು. ಅವುಗಳಲ್ಲಿರುವ ಸಾರವನ್ನು ಸಾಧಕ   ಅರಿತುಕೊಂಡಿರುತ್ತಾನೆ.    ತನ್ನ ಸ್ವಧರ್ಮ ಪರಿಪಾಲನೆಯ ಜೊತೆಗೆ ಆತನು ಮತ್ತಿತರ ಧಮ೯ವನ್ನು  ಗೌರವಿಸುತ್ತಾ  ಬೆಳೆಯುತ್ತಾನೆ. ವಾದ-ವಿವಾದಗಳು ಎಂದಿಗೂ ಶಾಂತಿಯನ್ನು ಕೊಡಲಾರವು. ಈ ಜಗತ್ತಿನ ಯಾವ ಭೌತಿಕ ಸಂಪತ್ತು ನಮ್ಮೊಳಗಿನ ನೆಮ್ಮದಿಯನ್ನು ತುಂಬಿ ಕೊಡಲಾರದು.  ವೇದ ಉಪನಿಷತ್ತುಗಳಲ್ಲಿ ಭಗವಂತನು ನೀಡಿರುವ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು,  ಧರ್ಮವನ್ನು ಸರಿಯಾಗಿ ಪರಿಪಾಲನೆ ಮಾಡಿದಾಗ ಅಸಾಧ್ಯವೆನಿಸಿದ್ದು ಕೂಡಾ ಸಾಧ್ಯವಾಗುತ್ತದೆ ಎಂದು ಆತನಿಗೆ ಚೆನ್ನಾಗಿ ಗೊತ್ತು,.   

 

Comments

Submitted by kavinagaraj Mon, 02/22/2016 - 12:18

ಎಂದಿನಂತೆ ಸುಂದರ ವಿಚಾರಲಹರಿ! ಧನ್ಯವಾದಗಳು, ಪ್ರಕಾಶರೇ.
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||