ಪುನರಪಿ...

ಪುನರಪಿ...

(Picture fromWikipedia : https://en.m.wikipedia.org/wiki/File:EndlessKnot03d.png)
 
ಪುನರಪಿ ಜನನಂ, ಪುನರಪಿ ಮರಣಂ
ಜಾತಸ್ಯ ಧ್ರುವಂ, ಮರಣಂ ಶರಣಂ
ಪುನರಪಿ ಜನನೀ, ಜಠರೇ ಶಯನಂ
ಬರದೇಕೊ ಜೊತೆ, ಗತ ನಿಚ್ಚಳ ಸ್ಮರಣಂ ||

ಸ್ವರ್ಗವೆ ಜನನಿ, ಜನ್ಮಭೂಮಿ ಇನಿದನಿ
ಜನನ ಮರಣ ನಡು-ಮಾತ್ರಾ ಮನನಿ
ಯಾಕಾಗದು ಸ್ಮೃತಿ, ಮರುಕಳಿಪ ಪ್ರತಿಧ್ವನಿ ?
ಬೀಜಾಕ್ಷರದೆ ಸೂಕ್ಷ್ಮ, ಬರೆದೊಳಗಡೆ ಧಮನಿ ||

ಜನ್ಮಾಂತರ ಜಾಡು ಬರಿ, ಕರ್ಮಾಂತರ ಜಾಡ್ಯ
ಒಳಿತು ಕೆಡಕು ತೂಗಿ, ಕರ್ಮಶೇಷಾ ಪ್ರಾರಬ್ದ
ಅಕ್ಕಸಾಲಿಯಂತೆ ಅವ, ಹಳೆ ಚಿನ್ನಾ ಕರಗಿಸಿ 
ತಿಲ ಗುಲಗಂಜಿ ಮಿಗಿಸಿ, ಹಣೆಗಂಟಿಸುವ ಪ್ರಾಪ್ತಿ ||

ಭುವಿ ನಿಶ್ಚಲ ನಿಲಯಂ, ಮನು ಚಂಚಲ ಹೃದಯಂ
ಕರ್ಮಸಂಚಯದ ಬೆಡಗು, ತಪನೆ ಯಾತನೆ ಜೀವನಂ
ನಿಮಿತ್ತ ಮಾತ್ರತೆ ಹೆಗಲೆ, ನಡಿಗೆ ಪೂರ್ವಯೋಜಿತ
ಮಾಯೆ ಕ್ಷಣಚಿತ್ತ ಕ್ಷಣಪಿತ್ತ, ಅಸ್ಥಿರತೆ ಗೊಣಗಾಡಿಸುತ ||

ಜನಜನಿತ ಗುಣ ವಿಸ್ಮೃತಿ, ಜನ್ಮಪಾಕದಲದ್ದಿ ಪರಿಪಕ್ವ
ಜನ್ಮಜನ್ಮ ಸರಕಾಗಿ ಚರ, ನಿವ್ವಳ ತುಲನೆ ಪಕ್ವಾಪಕ್ವ
ಮುಕ್ತಿಯಾಗೆ ಸಂಸಾರ ಚಕ್ರ, ಮೋಕ್ಷ ದೊರಕೆ ಸುಭೀಕ್ಷ
ಸರಿ ತಪ್ಪದದೆ ಪುನರಪಿಸಿ, ಮೋದಾಮೋದದೆ ಪರೀಕ್ಷ || 

- ನಾಗೇಶ ಮೈಸೂರು

 

Comments

Submitted by kavinagaraj Fri, 02/26/2016 - 16:13

ನಾಗೇಶರೇ, ನಿಮ್ಮ ಹಾಗೆ ಕವನದಲ್ಲಿಳಿಸಲಾಗದೆ ಈ ವಿಷಯದಲ್ಲಿ ಹಿಂದೆ ಲೇಖನ ಬರೆದುಬಿಟ್ಟಿದ್ದೆ. ಲಿಂಕ್: http://vedajeevana.blogspot.in/2014/05/blog-post_21.html
ಆ ಲೇಖನದ ಸ್ವಲ್ಪ ಭಾಗವಿದು: "ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ ಎಂಬ ವಾದವೂ ಮುಂದೆ ಬರುತ್ತದೆ. ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳನ್ನೂ ನಾವು ಕಾಣುತ್ತಿರುತ್ತೇವಲ್ಲವೆ?"
ವಂದನೆಗಳು, ನಾಗೇಶರೇ.

Submitted by keshavmysore Fri, 02/26/2016 - 16:56

In reply to by kavinagaraj

ಕವಿಗಳೇ,
ಹಿಂದಿನ ಜನ್ಮದ ನೆನಪು ಇದ್ದಿದ್ದರೆ ಏನೇನಾಗುತ್ತಿತ್ತು, ಅದಿಲ್ಲದೇ ಇರುವುದು ದೇವರ ಕರುಣೆಯೇ ಎನ್ನುವ ತರ್ಕದಿಂದ ಪುನರ್ಜನ್ಮವೆಂಬುದು ಇದೆಯೋ ಇಲ್ಲವೋ ಎಂಬುದನ್ನು ಸಾಧಿಸಲು ಅಥವಾ ಅಲ್ಲಗಳೆಯಲು ಸಾಧ್ಯವೇ? ಆತ್ಮಕ್ಕೆ ಸಾವಿಲ್ಲ ಎಂಬ ನಂಬಿಕೆಯೇ / ಸಿದ್ಧಾಂತವೇ ಪುನರ್ಜನ್ಮ ಇರಬಹುದೆಂಬ ಅಥವಾ ಇರಲೇಬೇಕೆಂಬ ಅಗತ್ಯವನ್ನು ಹುಟ್ಟುಹಾಕುತ್ತದೆ. ಆತ್ಮವೊಂದಕ್ಕೆ ಪುನರ್ಜನ್ಮ ಇಲ್ಲದಿದ್ದಾಗ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಯಿತೆಂಬ ತರ್ಕವೂ ಸಹ ಪುನರ್ಜನ್ಮದ ಇರುವಿಕೆ ಅಥವಾ ಇಲ್ಲದಿರುವಿಕೆಗೆ ಉತ್ತರವಾಗಲಾರದು ಅಲ್ಲವೇ?
ಹಾಗಾಗಿ ’ನಂಬಿಕೆ’ ಎನ್ನುವುದು ತರ್ಕಕ್ಕೆ ಮೀರಿದ್ದು, ಅನುಭವದಿಂದ ಮಾತ್ರ ವೇದ್ಯವಾಗಬಹುದಂತಹುದ್ದು ಎಂದು ಭಾವಿಸಿದರೆ ಒಳಿತಲ್ಲವೇ?
- ಕೇಶವಮೈಸೂರು

Submitted by nageshamysore Fri, 02/26/2016 - 19:00

In reply to by keshavmysore

ಕೇಶವರೆ, ಕವಿಗಳು ಉತ್ತರಿಸುವ ಮೊದಲು, ನನ್ನದೊಂದೆರಡು ನುಡಿ ( ನಿಮ್ಮ ಪ್ರಶ್ನೆಗದು ಉತ್ತರವಲ್ಲ) :ದೇಹವೆನ್ನುವ ಬಟ್ಟೆಯ ಪಯಣ ಸರಾಸರಿ ನೂರು ವರ್ಷವೆಂದುಕೊಂಡರೆ ಆತ್ಮದ ಪಯಣ ಅದಕ್ಕಿಂತ ಅನೇಕ ಪಟ್ಟು ಹೆಚ್ಚು - ಉದಾಹರಣೆಗೆ ಹತ್ತು ಪಟ್ಟು ಎಂತಿಟ್ಟುಕೊಳ್ಳುವ - ತನ್ನ ಅಂತಿಮ ಗಮ್ಯವಾದ ಮೋಕ್ಷ ಸ್ಥಿತಿ (ಸರಿಯಾದ ಹಾದಿಯಲ್ಲಿ ನಡೆದರೆ ಎಂದೂ ಸೇರಿಸಿಕೊಳ್ಳುವ). ಆಗ ಅದು ಹತ್ತು ಬಾರಿ ಪುನರ್ಜನ್ಮವೆತ್ತಿದ ನಂತರ (ದೇಹ ಬದಲಾಯಿಸಿದ ನಂತರ) ಮೋಕ್ಷ ಪಡೆಯಲು ಸಾಧ್ಯವಾಗುತ್ತದೆ ಈ ಚಿತ್ರಣದಲ್ಲಿ. ಹೀಗಾಗಿ ಒಂದೆ ಆತ್ಮ ಬೇರೆ ಬೇರೆ ಬಟ್ಟೆ ಧರಿಸುವುದನ್ನೆ ಪುನರ್ಜನ್ಮ ಎಂದುಕೊಳ್ಳಬಹುದಲ್ಲವೆ ?

ಆದರೆ ನಿಮ್ಮ ಮಾತು ನಿಜ - ಎಲ್ಲ ನಂಬಿಕೆಗೆ ಬಿಟ್ಟ ವಿಷಯ :-)

Submitted by kavinagaraj Fri, 02/26/2016 - 19:48

In reply to by keshavmysore

ವಂದನೆಗಳು, ಕೇಶವರೇ. ಪುನರ್ಜನ್ಮವಿಲ್ಲವೆಂದಾದರೆ ಆತ್ಮಕ್ಕೆ ಅಂತ್ಯವಿದೆ ಎಂದಾಗುತ್ತದೆ. ಆತ್ಮ ಅವಿನಾಶಿ, ಆದಿಯಿಲ್ಲ, ಅಂತ್ಯವಿಲ್ಲವೆಂಬ ವಾದಕ್ಕೆ ಸೋಲಾಗುತ್ತದೆ. ಮೋಕ್ಷ ಅನ್ನುವುದು ಪುನರ್ಜನ್ಮವಿಲ್ಲದ ಸ್ಥಿತಿಯಲ್ಲ, ಆದರೆ ಸುದೀರ್ಘ, ಬಹು ಬಹು ಬಹು ದೀರ್ಘ ಅವಧಿಯ ನಂತರದವರೆಗೆ ಮೋಕ್ಷ ಸ್ಥಿತಿಯಲ್ಲಿದ್ದು ಮತ್ತೆ ಜನ್ಮ ಬರುವುದೆನ್ನುತ್ತಾರೆ. ಈ ಅವಧಿ ಅದೆಷ್ಟು ದೀರ್ಘವಾದುದೆಂದರೆ ಪುನರ್ಜನ್ಮವಿಲ್ಲವೆನ್ನುವಷ್ಟು ಎಂದೆನ್ನುವ ವಾದವಿದೆ. ಇಂತಹ ವಿಷಯಗಳ ಬಗ್ಗೆ ಹಲವು ಬರಹಗಳಲ್ಲಿ ನನ್ನ ವೇದಜೀವನ ಬ್ಲಾಗಿನಲ್ಲಿ ಚರ್ಚಿಸಿರುವೆ. ಅವಕಾಶವಾದಾಗ ಓದಲು ವಿನಂತಿ. ತರ್ಕಕ್ಕೆ ಮೀರಿದ್ದು ನಂಬಿಕೆಯಾದರೂ, ನಮ್ಮ ಅನುಭವಗಳಾದರೂ ಸೀಮಿತವಾದವುಗಳು. ಹೀಗಿರುವಾಗ ಅನುಭವ, ನಂಬಿಕೆ, ನಮಗಿಂತ ಹೆಚ್ಚು ತಿಳಿದವರು ಎಂದು ನಾವು ನಂಬುವವರ ನುಡಿಗಳು ನಮಗೆ ಮಾರ್ಗದರ್ಶಿಯಾಗುತ್ತವೆ.

Submitted by nageshamysore Fri, 02/26/2016 - 18:37

In reply to by kavinagaraj

ಕವಿಗಳೆ ನಮಸ್ಕಾರ... ನಿಮ್ಮ ಲಿಂಕು ಇಲ್ಲಿಂದ ಕೆಲಸ ಮಾಡಲಿಲ್ಲವಾದರು ನಿಮ್ಮ ಟಿಪ್ಪಣಿಯಿಂದ ಸಾರವಂತು ಗೊತ್ತಾಯಿತು. ನಾನು ಕವನದಲ್ಲಿ ಹೇಳಲು ಹೊರಟಿದ್ದು ಕೂಡ - ಜನ್ಮಜನ್ಮಾಂತರದ ಪಯಣದಿಂದ ಜೀವಾತ್ಮ ಹೆಚ್ಚೆಚ್ಚು ಶುದ್ಧಗೊಂಡು ಮೋಕ್ಷದತ್ತ ಚಲಿಸುವುದೆ ಅಂತಿಮ ಗಮ್ಯವಾದರೆ, ಸ್ಮೃತಿಯ ತುಣುಕು ಜತೆಯಿದ್ದರೆ ಆ ಗಮ್ಯದತ್ತ ಚಲನೆ ಸುಲಭವಾದೀತಲ್ಲ ಎನ್ನುವ ಅನಿಸಿಕೆಯಿಂದ ( ಮಾಯೆಯ ಮುಸುಕಡಿ ಸಿಕ್ಕಿ ಕುಸಿಯುವ ಬದಲು ಅರಿವಿನ ದೆಸೆಯಿಂದ ಗಮ್ಯದತ್ತ ಚಲಿಸುವ ಪ್ರಲೋಭನೆಗೆ ಸಹಾಯಕವಾಗಬಹುದಿತ್ತೇನೊ ಅನ್ನುವ ಭಾವದಲ್ಲಿ). ಆದರೆ ನಿಮ್ಮ ಮಾತು ನಿಜವೇ - ಅದು ಉಂಟು ಮಾಡಬಹುದಾದ ಅಡ್ಡ ಪರಿಣಾಮಗಳು ಇನ್ನೊಂದು ತರದವು !