ಒಂದು ಸಿನಿಮಾ ಮಾಡೋಣ ಅಂತ !
"ಸರ್ .. ತಾವು ಸಿನಿಮಾ ರಂಗದಲ್ಲಿ ಉತ್ತಮ ಸಲಹೆ ನೀಡೋ ಹಿರಿಯರು ... ನಾನು ಒಂದು ಸಿನಿಮಾ ಮಾಡಬೇಕೂ ಅಂತಿದ್ದೀನಿ ... ಕೆಲವೊಂದು ವಿಚಾರ ನಿಮ್ಮಿಂದ ತಿಳಿದುಕೊಳ್ಳೋಣ ಅಂತ ನಿಮ್ಮಲ್ಲಿ ಬಂದೆ"
"ನಂದು ನೇರ ನುಡಿ. ಲೋಕಕ್ಕೆ ಹಿತವಾಗಲಿ ಅಂತ ಸುಮ್ ಸುಮ್ನೆ ಯಾರೂ ಸಿನಿಮಾ ಮಾಡೋಲ್ಲ ಬಿಡಿ ... ಎಲ್ಲರು ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ... ಸಿನಿಮಾ ರಂಗದಲ್ಲಿ ಇದು ಸ್ವಲ್ಪ ಬೇರೆ ರೀತಿ ಅಷ್ಟೇ ... ಗೇಣು ಬಟ್ಟೆ ಉಡಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳೋದು ..."
"ಅಯ್ಯಯ್ಯೋ! ನೀವು ಏನೇನೋ ಹೇಳಬೇಡಿ ... ಮಾಡಬೇಕು ಅಂದುಕೊಂಡಿರೋದು ಶುದ್ದ ಸಾಂಸಾರಿಕ ಚಿತ್ರವನ್ನೇ ... ಬಂಡವಾಳಾನೂ ತಕ್ಕಮಟ್ಟಿಗೆ ನಾನೇ ಹಾಕ್ತೀನಿ"
"ಸರಿ ಸರಿ! ಈಗ ಒಂದು ಚಿತ್ರ ಮಾಡ್ತೀನಿ ಅಂದುಕೊಂಡ ಮೇಲೆ ಒಂದು ದಿನದಲ್ಲಿ ಅದನ್ನ ಮುಗಿಸ್ತೀವಿ ಅಂತಲ್ಲ. ಅದು ನಿಮಗೆ ಗೊತ್ತೇ ಇದೆ. ಸಿನಿಮಾದ ಪ್ರತಿ ಹಂತವನ್ನೂ ಮೊದಲು ವಿಂಗಡಿಸಿಕೊಂಡು, ತಾರೆಯರ ಕಾಲ್-ಶೀಟ್ ನೋಡಿಕೊಂಡು ಮಾಡಬೇಕಾಗುತ್ತೆ. ಆಯಾ ಕಾಲಕ್ಕೆ ಹಣ ಹೊಂದಿಸಿ ಸುಸೂತ್ರವಾಗಿ ನೆಡೆಸಿಕೊಂಡು ಹೋಗಬೇಕು. ಹಣದ ಮುಂಗಟ್ಟು ಅಂತ ಒದರಿ ಒಮ್ಮೆ ಡಬ್ಬಕ್ಕೆ ಹೋದರೆ ಅಷ್ಟೇ! ಡಬ್ಬಕ್ಕೆ ಹೋದ ರೀಲು, ಹೆಣ ಎರಡೂ ಒಂದೇ ... ಹೊರಗೇನಾದ್ರೂ ಬಂದ್ರೆ ಅವಕ್ಕೆ ಜೀವ ಇರೋದಿಲ್ಲ. ಅವು ಗೋತಾ ಅಂತ್ಲೇ ಅರ್ಥ. ನೆನಪಿರಲಿ"
"ಸರ್! ನಾನು ಐ.ಟಿ’ನಲ್ಲಿ ಇದ್ದಿದ್ದು. ಪ್ರತಿ ಹಂತ ವಿಂಗಡಿಸೋದು, ಕಾಲ್-ಶೀಟು, ಹಣ ಹೊಂದಿಸೋದು, ಗೋತಾ ಎಲ್ಲ ನನಗೆ ಅರ್ಥ ಆಗುತ್ತೆ. ನಾವು ಅಲ್ಲಿ ಬೇರೆ ಹೆಸರಲ್ಲಿ ಕರೀತೀವಿ ಅಷ್ಟೇ"
"ಓಹೋ! ನೀವು ಕಂಪ್ಯೂಟರ್ ಜನ .. ಸರಿ ಸರಿ ... ನಿಮ್ಮ ಪ್ರಶ್ನೆ ಏನು?"
"ನೀವೇ ಹೇಳಿದ ಹಾಗೆ ಇಡೀ ಸಿನಿಮಾ ಅನ್ನೋದನ್ನ ವಿಂಗಡಿಸಿ ಮೊದಲಿಗೆ ಒಂದು ಇಡೀ ಹಾಡಿನ ಸೀಕ್ವೆನ್ಸ್ ಬಗ್ಗೆ ಮಾತಾಡೋಣ. ನಂತರ ಮುಂದಿನ ಹೆಜ್ಜೆ. ಏನಂತೀರಾ?"
"ಆಗಬಹುದು ... ಒಂದು ಡ್ಯುಯೆಟ್ ಹಾಡು ಅಂತ ಅಂದುಕೊಳ್ಳಿ. ಹೀರೋ ಮತ್ತು ಹೀರೋಯಿನ್ ಮೇಲೆ ಹಾಡಿನ ಚಿತ್ರೀಕರಣ, ಅಲ್ವೇ?"
"ಹೌದು ಸರ್!"
"ಹಾಡು ಒಂದು ಮನೆಯಲ್ಲೋ? ಬೀದಿಯಲ್ಲೋ? ಪಾರ್ಕ್’ನಲ್ಲೋ? ಬೆಟ್ಟದ ಮೇಲೋ?"
"ರೊಮ್ಯಾಂಟಿಕ್ ಹಾಡು ... ಸೀನಿಕ್ ಆಗಿದ್ರೆ ಚೆನ್ನ ... ಬೆಟ್ಟದ ಮೇಲೇ ಇರಲಿ"
"ಬೆಟ್ಟ ಗುಡ್ಡ ಅಂದ್ರೆ ನಿಸರ್ಗ. ಚೆನ್ನಾಗಿರುತ್ತೆ. ಆಮೇಲೆ ಒಂದೇ ರೀತಿ ಡ್ರಸ್ ಹಾಕಿ ಇಡೀ ಹಾಡು ಮಾಡಿದ್ರೆ ಚೆನ್ನಾಗಿರೋಲ್ಲ. ಲೋ ಬಡ್ಜೆಟ್ ಅನ್ನಿಸಿಕೊಳ್ಳುತ್ತೆ. ಪ್ರತಿ ಚರಣಕ್ಕೆ ಬೇರೆ ಬೇರೆ ಡ್ರಸ್ ಹಾಕ್ತೀರೋ? ಪ್ರತಿ ಫ್ರೇಮ್’ಗೆ ಬೇರೆ ಡ್ರಸ್ ಹಾಕ್ತೀರೋ?"
"ಪ್ರತಿ ಫ್ರೇಮ್ ಅಂದ್ರೆ ಸ್ವಲ್ಪ ಆಡಂಬರ ಆಯ್ತು ಅನ್ನಿಸುತ್ತೆ. ಪ್ರತಿ ಎರಡು ಅಥವಾ ಮೂರು ಫ್ರೇಮ್’ಗೆ ಇಟ್ಟುಕೊಳ್ಳಿ"
"ಆಗಲಿ ಬಿಡಿ ... ಮತ್ತೆ ಹೀರೋ ಹೀರೋಯಿನ್’ಗೆ ಮ್ಯಾಚಿಂಗ್ ಡ್ರಸ್ ಹಾಕ್ತೀರೋ?"
"ಇರಲಿ ಚೆನ್ನಾಗಿರುತ್ತೆ"
"ಆಯ್ತು ... ಹೀರೋಯಿನ್’ಗೆ ಶಾಕುಂತಲೆಯಂತೆ ಮಣಿ ಡ್ರಸ್ ಏನಾದ್ರೂ ಹಾಕೋ ಇರಾದೆ ಇದೆಯೋ?"
"ಇಲ್ಲ ಇಲ್ಲ ... ಇದು ಸಾಮಾಜಿಕ ಅಲ್ವೇ?"
"ಸಾಮಾಜಿಕ ಆದ್ರೆ ಏನು? ಹೀರೋ ಕಣ್ಣಲ್ಲಿ ಅಥವಾ ಕನಸಲ್ಲಿ ಅವಳು ಶಕುಂತಲೆಯಂತೆ ಕಾಣಬಾರದು ಅಂತ ಇದೆಯೇ?"
"ಇಲ್ಲ ಬಿಡಿ ಅದೆಲ್ಲ ಏನೂ ಬೇಡ ... ಸಿಂಪಲ್ ಆಗಿ ಡಿಸೈನರ್ ಸೀರೆ ಉಟ್ಟು ಹಾಡಲಿ"
"ನಿಮ್ಮಿಷ್ಟ .... ಇಬ್ಬರ ಮೇಲೆ ಮಾತ್ರ ಚಿತ್ರೀಕರಣಾನಾ? ಅಥವಾ ಎಕ್ಸ್ಟ್ರಾ ಡ್ಯಾನ್ಸರ್ಸ್ ಕೂಡ ಇರಬೇಕಾ?"
"ಹಾಡಿಗೆ ರಂಗೇರಬೇಕು ಅಂದ್ರೆ ಅವರುಗಳೂ ಇದ್ರೆ ಚೆನ್ನ, ಇರಲಿ"
"ಸರಿ ಸರಿ ... ನೋಟ್ ಮಾಡಿಕೊಳ್ತಿದ್ದೀನಿ, ಎಸ್ಟಿಮೇಟ್ ಮಾಡಲಿಕ್ಕೆ. ಎಕ್ಸ್ಟ್ರಾಗಳು ನಿಮಗೆ ಯಾವ ರೀತಿ ಬೇಕು? ಕಪ್ಪಗಿರೋ ದಕ್ಷಿಣದವರಾ? ಬೆಳ್ಳಗಿರೋ ಉತ್ತರದವರಾ? ಆಫ್ರಿಕನ್ ಅಮೇರಿಕನ್? ಬಿಳೀ ಅಮೇರಿಕನ್ / ಆಸ್ಟ್ರೇಲಿಯನ್? ಯಾರು ಬೇಕು?"
"ನನಗೆ ತಲೆ ಸುತ್ತು ಬರ್ತಿದೆ. ಒಂದು ಹಾಡಿಗೆ ಇಷ್ಟು ವಿಚಾರಗಳೇ?"
"ಸಿನಿಮಾ ಮಾಡೋದು ಅಂದ್ರೆ ಎರಡು ನಿಮಿಷದಲ್ಲಿ ಮ್ಯಾಗಿ ಮಾಡೋದು ಅಂದುಕೊಂಡ್ರಾ? ಈಗ ನಾನು ಕೇಳಿದ್ದಕ್ಕೆ ಉತ್ತರ ಹೇಳಿ"
"ಸ್ವಲ್ಪ ಕಪ್ಪಗಿರೋ ಎಕ್ಸ್ಟ್ರಾಗಳೇ ಇರಲಿ ... ಹೀರೋ ಹೀರೋಯಿನ್’ಗಳು ಇಬ್ಬರ ಬಣ್ಣ ಸ್ವಲ್ಪ ಅಷ್ಟಕ್ಕಷ್ಟೇ. ಅಕ್ಕಪಕ್ಕದವರು ಬೆಳ್ಳಗಿದ್ರೆ ಇವರಿಬ್ಬರನ್ನ ಯಾರೂ ನೋಡೋಲ್ಲ! "
"ಅವರಿಬ್ಬರ ಬಣ್ಣದ ಬಗ್ಗೆ ತಲೆ ಬಿಸಿ ಬೇಡ ... ಯಾರ್ಯಾರನ್ನೋ ಹೆಂಗೆಂಗೋ ಮಾಡಿ ತೋರಿಸಿದ್ದೀವಿ ಸಿನಿಮಾದಲ್ಲಿ. ಮತ್ತೇ ... ಇನ್ನೇನೋ ಕೇಳಬೇಕಿತ್ತು ... ಹಾಡು ಎಂಡ್ ಹೇಗೆ ಆಗುತ್ತೆ?"
"ಅಂದ್ರೆ?"
"ಅಲ್ಲಾ, ಈ ಹಾಡು ಕನಸಿನ ಹಾಡಾ? ಕೊನೇ ಸೀನ್’ನಲ್ಲಿ ವಿಲನ್ ರೀತಿಯಲ್ಲಿ ಅಪ್ಪ-ಅಮ್ಮ-ಮತ್ಯಾರೋ ಎಂಟ್ರಿ ಕೊಡ್ತಾರಾ? ಹೇಗೆ?
"ಓ! ಇದಕ್ಕೆ ಎಟ್ರಾ ಬಡ್ಜೆಟ್ ಆಗುತ್ತಾ?"
"ಅಲ್ವೇ ಮತ್ತೆ? ಕೊನೇ ಸೀನ್ ಒಂದು ರೂಮಿನಲ್ಲಿ ನೆಡೆದರೆ, ಆ ರೂಮಿನ ರೆಂಟ್ ಯಾರು ಕೊಡ್ತಾರೆ?"
"ಬಿಡಿ ... ಕೊನೇ ಸೀನ್’ನಲ್ಲಿ ಯಾವ ವಿಲನ್ ಎಂಟ್ರೀನೂ ಇಲ್ಲ"
"ಸರಿ ... ಈಗ ಒಂದು ಹಾಡಿಗೆ ಬಡ್ಜೆಟ್ ಕ್ಯಾಲ್ಕುಲೇಟ್ ಮಾಡೋಣ ...."
"ಬೇಡಾ ಬಿಡಿ ಸರ್! ಒಂದು ಸಿನಿಮಾ ತೆಗೆಯೋದು ನಮ್ಮಲ್ಲಿ ಒಂದು ಪ್ರಾಜಕ್ಟ್ ಮಾಡಿದಂತೆಯೇ ಅಂತ ಅರ್ಥ ಆಯ್ತು. ನಾನು ನನ್ನ ನಿರ್ಧಾರ ಬದಲಿಸಿದ್ದೇನೆ ... ನಾನು ಅಂದುಕೊಂಡಿದ್ದ ಬಂಡವಾಳದಲ್ಲಿ ಇಪ್ಪತ್ತೈದು ಪರ್ಸೆಂಟ್ ಖರ್ಚು ಮಾಡಿ ಮಕ್ಕಳ ಶಾಲೆ ತೆಗೆದರೆ, ಐದು ವರ್ಷದಲ್ಲಿ ಅದರ ಹತ್ತರಷ್ಟು ದುಡ್ಡು ಮಾಡಬಹುದು"
"ಹ್ಮ್ಮ್ ... ದೂರದ ಬೆಟ್ಟ ನುಣ್ಣಗೆ ಅಂತ ಇದಕ್ಕೇ ಹೇಳೋದು. ಸ್ಕೂಲ್ ತೆಗೆಯೋ ಬಗ್ಗೆ ಮತ್ತೊಬ್ಬರ ಹತ್ತಿರ ಸಲಹೆ ಕೇಳೋಕ್ಕೆ ಹೋದಾಗ ಅರಿವಾಗುತ್ತೆ ಅಲ್ಲಿ ಹುದುಗಿರೋ ವಿಚಾರಗಳು ! ನೀರಿನ ಅಲೆ ಮೇಲೆ ಸರ್ಫ್ ಮಾಡಿಕೊಂಡು ಸಾಗರದ ಗರ್ಭದಲ್ಲಿರೋ ಮುತ್ತು ಬೇಕೂ ಅಂದ್ರೆ ಎಲ್ಲಿ ಸಿಗುತ್ತೆ !!"
- ಶ್ರೀನಾಥ್ ಭಲ್ಲೆ
Comments
ಉ: ಒಂದು ಸಿನಿಮಾ ಮಾಡೋಣ ಅಂತ !
ಶ್ರೀನಾಥಭಲ್ಲೆಯವರಿಗೆ ವಂದನೆಗಳು
ಸಿನೆಮಾ ಮಾಡುವ ಕುರಿತು ಬರೆದ ಲೇಖನ ಮುದ ನೀಡುವುದರ ಜೊತಗೆ ನಮ್ಮ ಚಿತ್ರರಂಗ ಸಾಗಿರುವ ದಿಕ್ಕನ್ನ ಚೆನ್ನಾಗಿ ನಿರೂಪಿಸಿದ್ದಿರಿ,
In reply to ಉ: ಒಂದು ಸಿನಿಮಾ ಮಾಡೋಣ ಅಂತ ! by H A Patil
ಉ: ಒಂದು ಸಿನಿಮಾ ಮಾಡೋಣ ಅಂತ !
ಪಾಟೀಲರಿಗೆ ವಂದನೆಗಳು ... ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ ... ಎರಡೂವರೆ-ಮೂರು ಘಂಟೆಗಳ ಕಾಲ ಸಿನಿಮಾ ನೋಡಿ 'ಚೆನ್ನಾಗಿಲ್ಲ' ಅನ್ನೋ ಒಂದು ಮಾತು ಆಡಿ ನಮಗೇ ಅರಿವಿಲ್ಲದೆ ಎಷ್ಟೋ ಜನರ ಶ್ರಮವನ್ನು ತಿಪ್ಪೆಗೆ ಹಾಕುತ್ತೇವೆ ಅನ್ನೋ ಯೋಚನೆ ಮನಸ್ಸಿಗೆ ಬಂದಾಗ ಮೂಡಿದ ಕಲ್ಪನೆಯ ಬರಹ. ನಿಮ್ಮ ಮಾತು ಕೇಳಿದಾಗ ಇದು ಪೂರಾ ಕಲ್ಪನೆಯಲ್ಲ ಎನ್ನಿಸಿತು.
ಉ: ಒಂದು ಸಿನಿಮಾ ಮಾಡೋಣ ಅಂತ !
ಸಿನೆಮಾ ಮಾಡೋದು ಅಂದ್ರೆ ಭಲೇ ತ್ರಾಸ್ ಕೆಲ್ಸ ಮಾರಾಯ...
ಎನ್ನೋರು ಬಹಳ ಜನ -
ಅದು ನಿಜ....!!
ನಿಮ್ಮ ಬರಹ ಆ ಹಿನ್ನೆಲೆಯಲ್ಲಿ ಮೂಡಿ ಬಂದಿದೆ..
ಷೋಕಿಗಾಗಿ ಸಿನೆಮಾ ಮಾಡೊರೆ ಈಗ ಜಾಸ್ತಿ....!!
ಈಗೀಗ ಅದೊಂದು ಪ್ಯಾಕೇಜ್ ಆಗಿದೆ...!!
ಶುಭವಾಗಲಿ
\\\||||///
In reply to ಉ: ಒಂದು ಸಿನಿಮಾ ಮಾಡೋಣ ಅಂತ ! by venkatb83
ಉ: ಒಂದು ಸಿನಿಮಾ ಮಾಡೋಣ ಅಂತ !
ಸಪ್ತಗಿರಿ'ಯವರಿಗೆ ನಮಸ್ಕಾರ ... ಕಪ್ಪನ್ನು ಬಿಳಿ ಮಾಡಲು ಇರುವ ಒಂದು ದಾರಿ ಈ ಶೋಕಿ. ಏನಂತೀರಾ?
In reply to ಉ: ಒಂದು ಸಿನಿಮಾ ಮಾಡೋಣ ಅಂತ ! by bhalle
ಉ: ಒಂದು ಸಿನಿಮಾ ಮಾಡೋಣ ಅಂತ !
ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ ...
ಉ: ಒಂದು ಸಿನಿಮಾ ಮಾಡೋಣ ಅಂತ !
>>ನೀರಿನ ಅಲೆ ಮೇಲೆ ಸರ್ಫ್ ಮಾಡಿಕೊಂಡು ಸಾಗರದ ಗರ್ಭದಲ್ಲಿರೋ ಮುತ್ತು ಬೇಕೂ ಅಂದ್ರೆ ಎಲ್ಲಿ ಸಿಗುತ್ತೆ !!" :) :)
ಭಲ್ಲೇಜಿ, ಸಿನೆಮಾದ ಒಂದು ಹಾಡಿಗೇ ಸುಸ್ತು ಹೊಡೆದೆವು! ಸೂಪರ್ ಹಾಸ್ಯ.
In reply to ಉ: ಒಂದು ಸಿನಿಮಾ ಮಾಡೋಣ ಅಂತ ! by ಗಣೇಶ
ಉ: ಒಂದು ಸಿನಿಮಾ ಮಾಡೋಣ ಅಂತ !
ಗಣೇಶ್'ಜಿ ನಮಸ್ಕಾರಗಳು ... ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ
ನಾವು ಒಂದು ಹಾಡಿಗೇ ಸುಸ್ತಾದೆವು ... ನಟನೆ ಬಾರದ ನಟ-ನಟಿಯರ ಸುತ್ತ ರೀಲು ಸುತ್ತೀ ಸುತ್ತೀ ಆ ನಿರ್ಮಾಪಕರು ಇನ್ನೆಷ್ಟು ಸುಸ್ತು ಹೊಡೆಯುತ್ತಾರೋ ಆ ಪರಮಾತ್ಮನೇ ಬಲ್ಲ !
ಉ: ಒಂದು ಸಿನಿಮಾ ಮಾಡೋಣ ಅಂತ !
'ಸಿನೆಮಾ ತೆಗೆದು ನೋಡು' ಎಂದು ಸಿನೆಮಾ ಶೀರ್ಷಿಕೆ ಇಡಿ ಎಂದು ಆ ಹಿರಿಯರು ಸಲಹೆ ನೀಡಿದ್ದಿರಬಹುದು! ಆ ಶೀರ್ಷಿಕೆಗೂ ರಾಯಲ್ಟಿ ಕೇಳಿರಬಹುದು!! :)) ಅಬ್ಬಾ, ಇಷ್ಟೆಲ್ಲಾ ಇದೆಯಾ! ಎಂದು ಅನ್ನಿಸಿತು!
In reply to ಉ: ಒಂದು ಸಿನಿಮಾ ಮಾಡೋಣ ಅಂತ ! by kavinagaraj
ಉ: ಒಂದು ಸಿನಿಮಾ ಮಾಡೋಣ ಅಂತ !
ಕವಿಗಳಿಗೆ ವಂದನೆಗಳು ... ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ
ರಾಯಲ್ಟಿ ಕೇಳಿದ್ದರೂ ತಪ್ಪು / ಅಚ್ಚರಿಯಿಲ್ಲ !! ಇದು ಕಲ್ಪನೆಯ ಬರಹ ಆದರೂ ಇನ್ನೊಮ್ಮೆ ಯೋಚಿಸಿದಾಗ ಸತ್ಯವೇ ಅನ್ನಿಸುತ್ತದೆ.