ಒಂಟಿ ವೃಕ್ಷ !
ಬಹಳ ದಿನಗಳ ನಂತರ, ಸ್ವಲ್ಪ ಗಂಭೀರವಾದ ಒಂದು ಸಣ್ಣ ಕಥೆ ಬರೆಯುವ ಮನಸ್ಸಾಯಿತು. ಆಲೋಚನೆ ಕೂಸಾಗಿದ್ದು ಹೀಗೆ:
"ನೀನು ಮುಷಂಡೀ ಹಾಗೆ ಇದ್ರೆ ಆಗಲ್ಲ. ಮುಂದೆ ನುಗ್ಗಬೇಕು. ಇಲ್ದಿದ್ರೆ ತುಳಿದುಬಿಡ್ತಾರೆ. ಇವಳೂ ನಿನ್ ಕ್ಲಾಸ್’ನಲ್ಲೇ ಇರೋದು .. ಇವಳನ್ನ ಫಾಲೋ ಮಾಡು". ಹಿರಿಯರು ಹೇಳಿದ ಮಾತು ಏನೂ ಅರ್ಥವಾಗದೇ ಇದ್ರೂ, ಆಯ್ತು ಅಂತ ಫಾಲೋ ಮಾಡಿದೆ.
"ಎಷ್ಟು ಚೆನ್ನಾಗಿ ಓದ್ತಾಳೆ ನೋಡು ಅವಳು ... ನೋಡಿ ಕಲಿ ... ಅವಳನ್ನ ಫಾಲೋ ಮಾಡು, ಜೀವನದಲ್ಲಿ ಉದ್ದಾರ ಆಗ್ತೀಯಾ". ತಲೆಗೆ ಎಷ್ಟು ವಿಷಯ ಹೋಯ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಹೇಳಿದಂತೆ ಮಾಡಿದೆ.
"ಅವಳು ನೋಡು ಓದಿನಲ್ಲೂ ಜಾಣೆ ಸಂಗೀತದಲ್ಲೂ ಜಾಣೆ. ಟಿವಿ ರಿಯಾಲಿಟಿ ಶೋ’ಗಳಲ್ಲಿ ಹಾಡ್ತಾಳೆ. ಅವಳನ್ನ ಫಾಲೋ ಮಾಡು. ಹೆಣ್ಣು ಹುಡುಗಿ ಗೆಲ್ಲಲಿ". ಅದೂ ಮಾಡಿದ್ದೆ. ಅವಳು ಗೆದ್ದು ಮುನ್ನೆಡೆದಳು.
ಹೀಗೇ ಅವಳನ್ನು ಫಾಲೋ ಮಾಡಿ ಮಾಡಿ ಪರಿಸ್ಥಿತಿ ಹೇಗೆ ಆಗಿತ್ತು ಅಂದರೆ ಅವಳ ಮೇಲೆ ಒಂದು ವಿಚಿತ್ರ ಅಟ್ಯಾಚ್ಮೆಂಟ್ ಬೆಳೆದುಬಿಟ್ಟಿತ್ತು. ಮುಂದೆ ಒಂದು ದಿನ ಅವಳೊಂದಿಗೆ ಹಸೆಮಣೆ ಏರುತ್ತೇನೆ, ಆಗ ಒಮ್ಮೆಯಾದರೂ ಅವಳು ಕೈಹಿಡಿದು ನನ್ನನ್ನು ಫಾಲೋ ಮಾಡ್ತಾಳೆ ಅನ್ನೋ ಆಸೆ.
ಅಳೆದೂ ತೂಗಿ ರಿಹರ್ಸಲ್ ನೆಡೆಸಿ ಕೊನೆಗೂ ಧೈರ್ಯ ಮಾಡಿ ಅವಳಲ್ಲಿ ನಿವೇದಿಸಿಕೊಂಡೆ. ಆಕೆಯ ಮೊದಲ ಪ್ರಶ್ನೆ ನನ್ನನ್ನು ಮೂಕಾಗಿಸಿತ್ತು. ಆಕೆ ನುಡಿದಿದ್ದು "ನೀನು ಯಾರು?".
ನನ್ನ ನಿವೇದನೆಗೆ ಆಕೆ ಅಚ್ಚರಿಯಿಂದ ಕೇಳಿದ ಆ ಪ್ರಶ್ನೆ ನನಗೆ ’ಅಹಂಕಾರ’ ಎಂದು ತೋರಲಿಲ್ಲ. ಹಾಗಾಗಿ ಚಿಕ್ಕಂದಿನಿಂದ ಇಂದಿನವರೆಗಿನ ಕಥೆ ಸಂಕ್ಷಿಪ್ತವಾಗಿ ಹೇಳಿಕೊಂಡೆ. ಅವಳು ಸಾವಧಾನವಾಗಿ ಕೇಳಿಸಿಕೊಂಡಳು.
ನಂತರ ನುಡಿದಳು "ನೀನು ಸದಾ ನನ್ನನ್ನ ಫಾಲೋ ಮಾಡುತ್ತ ನನ್ನ ಹಿಂದೆಯೇ ಇದ್ದಿದ್ದರಿಂದ ನಾನು ನಿನ್ನನ್ನು ನೋಡೇ ಇರಲಿಲ್ಲ. ನನ್ನ ಧ್ಯೇಯ ಸದಾ ಮುಂದೆ ನೋಡುವತ್ತ ಇತ್ತು. ಹಾಗಾಗಿ ಹಿಂದಿರುಗಿ ನೋಡುವ ಪ್ರಮೇಯ ಬರಲಿಲ್ಲ. ನಾ ನೆಡೆವ ದಾರಿ ಸರಿ ಇರದಿದ್ದರೆ ಎಚ್ಚರಿಸುವ, ನಾ ನೆಡೆವ ದಾರಿಯಲ್ಲಿ ಎಡವದಂತೆ ತಡೆಯುವ ಜೊತೆಗಾರನೊಬ್ಬನ ಕೈಹಿಡಿಯುವಾಸೆ. ನೀನು ಹಿಂದೆ ಇದ್ದರೆ, ನಾ ಬಿದ್ದ ಮೇಲೆಯೇ ನಿನಗೆ ಅರಿವಾಗೋದು, ಅಲ್ಲವೇ? ಕ್ಷಮೆ ಇರಲಿ"
ಆಕೆ ಹೇಳಿದ್ದರಲ್ಲಿ ಕಿಂಚಿತ್ತೂ ತಪ್ಪು ಕಾಣಲಿಲ್ಲ. ಬದಲಿಗೆ ಈ ವಿಷಯದಲ್ಲೂ ನನಗೆ ಅವಳು ಮಾರ್ದಶಿ ಆಗಿದ್ದಳು ಅನ್ನಿಸಿತು. ನಿಜ, ಈಗಲೂ ಅವಳು ಹೇಳಿದ್ದು ಸರಿ ಎಂದಿತು ಮನ ಆದರೆ ಸ್ವಂತವಾಗಿ ವಿಚಾರ ಮಾಡಲು ಸೋತಿತ್ತು. ಅವಳಿಗೆ ನಾ ಅರ್ಹನಲ್ಲ !
ಅವಳು ನನಗೆ ಮಾಡಲ್ ಆಗಿದ್ದಳು. ಅವಳ ನೆರಳಲ್ಲಿ ನಾನು ಬರೀ ಡಲ್ ಆಗಿದ್ದೆ ಅಷ್ಟೇ!
ನನ್ನ ಸೋಲಲ್ಲಿ ಅವಳ ತಪ್ಪು ಏನೂ ಇಲ್ಲ. ತಪ್ಪು ನನ್ನದು. ನಾನು ನನ್ನ ಕರ್ತವ್ಯ ಬಿಟ್ಟು ಅವಳನ್ನು ಫಾಲೋ ಮಾಡುವುದರಲ್ಲೇ ಕಾಲ ಕಳೆದೆ. ಅಲ್ಲಲ್ಲ, ಇಲ್ಲಿ ನನ್ನ ತಪ್ಪೂ ಇಲ್ಲ. ಅವಳನ್ನು ಫಾಲೋ ಮಾಡಲು ಪ್ರೇರೇಪಿಸಿದ್ದು ಯಾರು? ಒಬ್ಬರ ಭವಿಷ್ಯವನ್ನು ರೂಪಿಸುವುದರಲ್ಲಿ ಹಿರಿಯರ ಹೊಣೆಗಾರಿಕೆ ಏನು? ಅರ್ಥವೇ ಆಗುತ್ತಿಲ್ಲ! ನಾ ಅರಿಸಿಕೊಂಡು ಸವೆದ ಹಾದಿಯಲ್ಲಿ ತುಂಬ ದೂರ ಬಂದಿದ್ದೀನಿ.
ಒಮ್ಮೆ ಹಿಂದಿರುಗಿ ನೋಡಿದೆ. ನನ್ನ ಹಿಂದೆ ಬಂದವರು ಯಾರೂ ಇರಲಿಲ್ಲ ಅಲ್ಲಿ. ಅವಳನ್ನಂತೂ ಇನ್ನು ಫಾಲೋ ಮಾಡಲಾರೆ. ಬಟಾಬಯಲಲ್ಲಿ ನಿಂತ ಒಂಟಿ ವೃಕ್ಷ ನಾನು!
Comments
ಉ: ಒಂಟಿ ವೃಕ್ಷ !
ನಿಜ ಸಾರ್
In reply to ಉ: ಒಂಟಿ ವೃಕ್ಷ ! by ಕೃಷ್ಣ ಯಾದವ್ ಬಿಎಸ್ಸಿ
ಉ: ಒಂಟಿ ವೃಕ್ಷ !
ಅನಂತ ಧನ್ಯವಾದಗಳು ಕೃಷ್ಣ ಯಾದವ್ !
ಉ: ಒಂಟಿ ವೃಕ್ಷ !
ಗಂಭೀರವಾದ ಸಣ್ಣ ಕತೆ - ನೀವು ಹೇಳಿದಂತೆಯೇ ಗಂಭೀರವಾಗಿದೆ, 'ಫಾಲೋ' ಮಾಡುವಂತಿದೆ!! :)
ನೀವು ಬಳಸಿದ ಮುಷುಂಡಿ ಎಂಬ ಪದ ನನ್ನ ಹಳೆಯ ನೆನಪನ್ನು ಕೆದಕಿತು. ನಾನು ಹಾಸನದಲ್ಲಿ ಅಂತಿಮ ಬಿಎಸ್ ಸಿ ಪರೀಕ್ಷೆ ಮುಗಿಸಿ ನನ್ನ ತಂದೆ-ತಾಯಿ ವಾಸವಿದ್ದ ನರಸಿಂಹರಾಜಪುರಕ್ಕೆ ಬಂದೆ. ಅವರಿಗೆ ಅಲ್ಲಿಗೆ ವರ್ಗವಾಗಿ ಕೆಲವು ತಿಂಗಳು ಮಾತ್ರ ಆಗಿದ್ದರಿಂದ ಅದು ನ.ರಾ.ಪುರಕ್ಕೆ ನನ್ನ ಮೊದಲ ಭೇಟಿಯಾಗಿತ್ತು. ಅಲ್ಲಿನ ಹೊಸ ವಾತಾವರಣವನ್ನು ಸವಿಯುತ್ತಾ ಮರುದಿನ ಬೆಳಿಗ್ಗೆ ಮನೆಯ ಮುಂದೆ ನಿಂತಿದ್ದೆ. ಒಬ್ಬರು ಹಿರಿಯರು ಕೈಯಲ್ಲಿ ಚೊಂಬು ಹಿಡಿದುಕೊಂಡು ಹೊರಟಿದ್ದರು. ಸ್ವಚ್ಛ ಭಾರತದ ಶೌಚಾಲಯ ಅವರ ಮನೆಯಲ್ಲಿರಲಿಲ್ಲವೆಂದು ಕಾಣುತ್ತದೆ. 'ಯಾರೋ ನೀನು?' ಎಂಬ ಪ್ರಶ್ನೆಗೆ 'ಇಂತಹವರ ಮಗ ಎಂದು ಹೇಳಿದ್ದೆ. ಇನ್ನೊಂದು ಪ್ರಶ್ನೆಗೆ ಡಿಗ್ರಿ ಪರೀಕ್ಷೆ ಬರೆದು ಬಂದಿದ್ದೇನೆಂದು ಹೇಳಿದೆ. ಅವರು ಏನು ಹೇಳಿದರು ಗೊತ್ತೆ? 'ಪರೀಕ್ಷೆಯಲ್ಲಿ ಪಾಸಾಗುತ್ತಾ? ಪಾಸಾದರೂ ನಿನ್ನ ಮುಷುಂಡಿ ಮುಖಕ್ಕೆ ನೌಕರಿ ಸಿಗುತ್ತಾ?' ಎಂದೆನ್ನುತ್ತಾ ಮುಂದೆ ಹೋದರು. ಪಕ್ಕದ ಮನೆಯವರು ನಗುತ್ತಾ ಇದನ್ನು ಕೇಳಿಸಿಕೊಳ್ಳುತ್ತಿದ್ದರು. ನಾನು ಪೆಚ್ಚಾಗಿ ಮನೆಯೊಳಗೆ ಬಂದಿದ್ದೆ. ನಂತರ ತಿಳಿದದ್ದು, ಅವರೊಬ್ಬರು ಕೆಲಸವಿಲ್ಲದ ಲಾಯರ್ ಅಂತೆ. ಎಲ್ಲರಿಗೂ ವ್ಯಂಗ್ಯವಾಗಿ ಮಾತನಾಡುವುದು ಅವರ ಹವ್ಯಾಸವಾಗಿತ್ತಂತೆ. ನಾನು ಡಿಗ್ರಿ ಓದುತ್ತಿದ್ದಾಗಲೇ ಅಂಚೆ ಕಛೇರಿ ಕೆಲಸಕ್ಕೆ ಅರ್ಜಿ ಹಾಕಿದ್ದೆ. ಕಾಕತಾಳೀಯವಾಗಿ ಮರುದಿನವೇ ನೇಮಕಾತಿ ಆದೇಶ ಬಂದಿತ್ತು. ಆ ಲಾಯರಿಗೆ ಮೊದಲು ವಿಷಯ ತಿಳಿಸಿಬಂದಿದ್ದೆ. ಅವರ ಪ್ರತಿಕ್ರಿಯೆ, 'ಉದ್ಧಾರವಾಯಿತು, ಬಿಡು' ಎಂಬುದಾಗಿತ್ತು!! :)) ನಿಮ್ಮ ಮುಷುಂಡಿ ಪದಬಳಕೆಗೆ ಧನ್ಯವಾದಗಳು, ಭಲ್ಲೆಯವರೇ. :)
In reply to ಉ: ಒಂಟಿ ವೃಕ್ಷ ! by kavinagaraj
ಉ: ಒಂಟಿ ವೃಕ್ಷ !
ಧನ್ಯವಾದಗಳು ಕವಿಗಳೇ ! ಮನೆಗಳಲ್ಲಿ ಹಿರಿಯರು ಬಳಸುವ ಪದಗಳನ್ನು ಹಾಗೇ ಬರಹಕ್ಕೆ ತರುವ ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ ... ತಂದೆಯವರು ಒಮ್ಮೆ 'ಅಶಿಕ್ಷಿತರು' ಅನ್ನೋ ಪದ ಬಳಸಿ ಬೈದಿದ್ದು ನಿಮ್ಮ ಅನುಭವ ಓದಿ ನೆನಪಾಯ್ತು !