ಅಹಲ್ಯಾ ಸಂಹಿತೆ - ೧೦
ಅಧ್ಯಾಯ - 05
------------------
"ಇದೇನೆ ಇದು ? ಅಕಾಲದಲ್ಲಿ ಮಳೆ ಅನ್ನುವ ಹಾಗೆ ಈ ಭಣಗುಟ್ಟುವ ದಟ್ಟಕಾಡಿನಲ್ಲಿ ಇದ್ದಕ್ಕಿದ್ದಂತೆ ವಸಂತ ಬಂದಂತಿದೆ ? ಇಲ್ಲಿನ ಗಿಡಗಳು ಹೂ ಬಿಟ್ಟಿದ್ದನ್ನು ನೋಡಿಯೆ ಯುಗಗಳಾಗಿ ಹೋದ ಹಾಗೆ ಅನಿಸಿರುವಾಗ, ಇದೆಲ್ಲಿಂದಲೊ ಇದ್ದಕ್ಕಿದ್ದಂತೆ ಬಂದಿಳಿದುಬಿಟ್ಟಿದೆಯಲ್ಲ ಈ ನವಚೇತನ ? ಬರಿಯ ಹೂಗಳು ಮಾತ್ರವೇನು ? ನೋಡಲ್ಲಿ ಹೇಗೆ ಝೆಂಕರಿಸಿವೆ ದುಂಬಿಗಳು..! ಎಲ್ಲಿ ಹೋಗಿತ್ತೊ ಈ ಸುವಾಸನಭರಿತ ಸುಗಂಧಪೂರ್ಣ ತಂಗಾಳಿ..? "
"ಹೌದಲ್ಲವೆ..? ನಾವಿಲ್ಲಿ ಹುಟ್ಟಿಧಾರಭ್ಯ, ಬಾಳಿ ಬದುಕಿದ ಈ ಗಳಿಗೆಯವರೆಗೂ ಒಮ್ಮೆಯಾದರು ಇಲ್ಲಿ ಹೂ ಅರಳಿದ್ದು ಕಾಣಲಿಲ್ಲ.. ವಸಂತನಾಗಮನವನ್ನು ಕಾಣಲಿಲ್ಲ.. ನರನಾರಾಯಣರ ತಪೋನಿಷ್ಠೆಯ ಕಾವಿಗೆ ಕಮರಿ ಇಂಗಿಹೋದವೊ ಎಂಬಂತೆ ಎಲ್ಲವು ಒಂದು ಬದಲಾಗದ ಸ್ತಬ್ದಚಿತ್ರದಂತಾಗಿಬಿಟ್ಟಿದ್ದವಲ್ಲ ? ಇದೇನಿದು ಈ ಬದಲಾವಣೆ...? ತಪಸ್ವಿಗಳ ತಪ ಮುಗಿದುಹೋಯ್ತೇನು ?"
ಮರದ ಟೊಂಗೆಯೊಂದರ ಕವಲು ಮೂಲೆಯ ದೊಡ್ಡ ಪೊಟರೆಯೊಂದನ್ನೆ ಗೂಡನ್ನಾಗಿ ಮಾಡಿಕೊಂಡಿದ್ದ ಗಂಢಭೇರುಂಡದ ತಲೆಗಳೆರಡು ಹೀಗೆ ಮಾತನಾಡಿಕೊಳ್ಳುತ್ತಿದ್ದ ಅದೇ ಹೊತ್ತಲ್ಲಿ, ದೇವರಾಜನ ಅಪ್ಸರೆಯರ ಗುಂಪು ತಮ್ಮ ಬಿಡಾರ ಹೂಡಿದ್ದ ಕುಟೀರದಿಂದ ಹೊರಟು ನಿಂತಿತ್ತು ಕಾರ್ಯಸಾಧನೆಯ ಮೊದಲ ಅಂಗವಾಗಿ. ನಿತ್ಯ ಹಸಿರಿನಿಂದ ತುಂಬಿದ ಕಾನನವಾದರು ಹೂವೆ ಬಿಡದ ಕಡೆ, ಹಣ್ಣು ಕಾಯಾದರು ಬಿಡಲೆಲ್ಲಿ ? ಆಹಾರದ ಮೂಲವಿಲ್ಲದ ಕಡೆ ಯಾವ ಪಶುಪಕ್ಷಿ ಜಾತಿ ತಾನೆ ಬಂದು ಬದುಕುಳಿದೀತು..? ಅದರಿಂದಲೊ ಏನೊ ಆ ಸುತ್ತಲಿನ ಫಾಸಲೆಯಲ್ಲಿ ಹುಡುಕಿದರು ಒಂದು ಜೀವಜಂತು ಕಾಣುತ್ತಿರಲಿಲ್ಲ.
ಹಸಿರು ಗಿಡಮರದ ದಟ್ಟ ಕಾನನದಲ್ಲಿ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಿದ್ದುವೊ ಏನೊ ಹೊರತಾಗಿ, ಬರಿಗಣ್ಣಿಗೆ ಕಾಣುವ ಯಾವ ಜೀವಿಯೂ ಅಲ್ಲಿರಲಿಲ್ಲ. ಅಷ್ಟೇಕೆ ? ನರನಾರಾಯಣರು ಅಲ್ಲಿದ್ದ ಕಂದಮೂಲವನ್ನೊ, ಗಿಡದ ಎಲೆಗಳನ್ನೊ ಆಯ್ದು ಒಯ್ದಿದ್ದಿತ್ತೆ ಹೊರತು ಅವರೇನು ತಿನ್ನುತ್ತಿದ್ದರೆಂಬುದು ಒಮ್ಮೆಯೂ ಕಂಡವರಿಲ್ಲ..
ನರನಾರಾಯಣರನ್ನು ಬಿಟ್ಟರೆ ಆ ನಿಗೂಢತಮ ತಾಣದಲ್ಲಿದ್ದ ಮತ್ತೊಂದು ಜೋಡಿಯೆಂದರೆ ಈ ಗಂಢಭೇರುಂಡ ಮಾತ್ರ. ನರನಾರಾಯಣರ ಹಾಗೆಯೆ ಅನೋನ್ಯತೆಯ ಪ್ರತೀಕವೆಂಬಂತೆ ಒಂದೇ ದೇಹವನ್ನು ಹಂಚಿಕೊಂಡ ಎರಡು ತಲೆಗಳ ಆ ಜೀವಿ ಅದು ಹೇಗೊ ಬಂದು ಆ ಕಾಡಿನಲ್ಲಿ ಸೇರಿಕೊಂಡುಬಿಟ್ಟಿತ್ತು. ತಮ್ಮ ನೂರಾರು ಪ್ರಯೋಗಗಳ ನಡುವೆ ಅಂತಹ ವಿಚಿತ್ರ ಜೀವಿಯೊಂದನ್ನು ಪ್ರಯೋಗಾರ್ಥವಾಗಿ ಸೃಜಿಸಿದವರೆ ನರನಾರಾಯಣರು ಎಂದವರೂ ಉಂಟು...
ಅಲ್ಲಿದ್ದ ಎಲೆಗಳನ್ನೆ ತಿಂದು ಬದುಕುವ ಅಭ್ಯಾಸ ಮಾಡಿಕೊಂಡ ಆ ಗಂಢಭೇರುಂಡ ಜೋಡಿ ಯಾವುದೇ ರೀತಿಯಲ್ಲಿಯೂ ನರನಾರಾಯಣರ ತಪಸಿಗೆ ಭಂಗ ಬರದ ಹಾಗೆ ತಮ್ಮ ಪಾಡಿಗೆ ತಾವೂ ದೂರದ ಮರವೊಂದರಲ್ಲಿ ಬದುಕಿಕೊಂಡಿದ್ದವು. ಅದೆಷ್ಟು ಕಾಲದಿಂದ ಹಾಗೆ ಬದುಕಿದ್ದವೊ ? ಅವುಗಳಿಗೇ ಅರಿವಿರಲಿಲ್ಲ - ತಾತ, ಮುತ್ತಜ್ಜನ ಕಾಲದಿಂದ ಎಂದು ಲೋಕಾರೂಢಿಯಂತೆ ಹೇಳುವುದರ ಹೊರತು..
ಹೀಗಾಗಿಯೆ ಅಲ್ಲಿನ ಬದಲಾದ ವಾತಾವರಣ ಅವಕ್ಕೆ ಅಚ್ಚರಿ ಮೂಡಿಸಿದ್ದು....!
ಗಂಢಭೇರುಂಡವೊಂದರ ಜೋಡಿ ಸಾವಿರ ವರ್ಷಗಳ ಕಾಲ ಬದುಕಿರುವುದಾದರು, ಅದಕ್ಕೆ ಜನ್ಮವಿತ್ತ ಹಿಂದಿನ ತಲೆಮಾರುಗಳ ಬಾಯಿಂದ ಬಾಯಿಗೆ ದಂತಕಥೆಯಂತೆ ಹರಿದು ಬಂದ ವಿಷಯ - ನರನಾರಾಯಣರ ನಿರಂತರ ತಪ-ಕದನದ ಕಥಾನಕ. ಅಂದಿನಿಂದ ಇಂದಿನವರೆವಿಗು ಇದು ಬದಲಾಗದೆ ಉಳಿದ ವಾತಾವರಣ - ಇಂದೇಕೆ ಹೀಗೆ ಬದಲಾವಣೆ ಕಾಣುತ್ತಿದೆ ? ಎನ್ನುವ ವಿಸ್ಮಯದಿಂದ ಅವಕ್ಕೂ ಹೊರಬರಲಾಗಿಲ್ಲ ಇನ್ನೂ...
" ರತಿ ಮನ್ಮಥರ ಚಾಕಚಕ್ಯತೆ ಕಂಡೆಯಾ? ಒಂದೆ ಏಟಿಗೆ ಹೇಗೆ ಎಲ್ಲವನ್ನು ಬದಲಾಗಿಸಿಬಿಟ್ಟಿದ್ದಾರೆ ? ಅಲ್ಲಿ ನೋಡು.. ಬರಿಯ ಗುಡ್ಡದ ಸೀಳಿನ ನಡುವೆ ಹೇಗೆ ಜಲಪಾತ, ಝರಿಗಳು ಹರಿವ ಹಾಗೆ ಮಾಡಿಬಿಟ್ಟಿದ್ದಾರೆ ? ನಿಸ್ತೇಜವಾಗಿದ್ದ ವಾತಾವರಣವನ್ನು ಮನೋದ್ರೇಕ ಪ್ರೇರಕವಾಗುವಂತೆ ಬದಲಿಸಿಬಿಟ್ಟಿದ್ದಾರೆ..?" ಮೆಚ್ಚುಗೆಯನ್ನೆ ಧಾರೆಧಾರೆಯಾಗಿ ಹರಿಸುತ್ತ ನುಡಿದಳೊಬ್ಬ ಅಪ್ಸರೆ.
ನರನು ತಪಸಿನಲ್ಲಿದ್ದ ಎಡೆಯತ್ತ ಕಾಲುಹಾದಿಯಲ್ಲಿ ನಡೆದು ಬಂದ ಅವರಿಗೆ ಇನಿತೂ ಆಯಾಸವೆನಿಸದೆಷ್ಟು ಮನೋಹರ ವಾತಾವರಣ. ಆ ಆಹ್ಲಾದಕರ ಪರಿಸರದಲ್ಲಿ ಮಾಡಬೇಕಿರುವ ಮಹತ್ತರ ಕಾರ್ಯದ ಪರಿಣಾಮವೇನಾಗುವುದೊ ಎಂಬ ಭೀತಿಯನ್ನೆ ಮರೆಸುವಷ್ಟು ಮತ್ತೇರಿಸುವ ಉತ್ತೇಜಕ ವಾತಾವರಣ. ಅದೇ ಧೈರ್ಯದಿಂದ ಮುನ್ನಡೆದವರು ಹೆಜ್ಜೆಹೆಜ್ಜೆಗು ತಮ್ಮೊಂದಿಗೆ ತಂದಿದ್ದ ಸುಗಂಧ ದ್ರವ್ಯಗಳನ್ನು ಚಿಮುಕಿಸುತ್ತ ನಡೆಯುತ್ತಿದ್ದಾರೆ ಪರಿಸರದ ಮಾದಕತೆಗೆ ಮತ್ತಷ್ಟು ನೀರೆರೆಯುವಂತೆ...
ಅವರು ನರನ ತಪದ ಜಾಗದ ಹತ್ತಿರ ಬರುತ್ತಿದ್ದಂತೆ ಅಲ್ಲಿ ಆ ಬದಲಾವಣೆಯ ಪರಿಣಾಮ ಕುಗ್ಗುತ್ತ ಹೋಗಿರುವುದು ಕಾಣಿಸುತ್ತಿದೆ.. ಬದಲಾವಣೆಯ ಕುರುಹುಗಳು ಅಲ್ಲೂ ಇವೆಯಾದರೂ ಹೊರ ಸುತ್ತಿನಷ್ಟು ಗಾಢವಾಗಿಲ್ಲ... ಹಾಗೆಯೆ ಮುಂದುವರೆದ ಹೆಜ್ಜೆ ಮತ್ತಷ್ಟು ದಾರಿ ಸವೆಸುವ ಹೊತ್ತಿಗೆ ಸಾಲಿನ ಮುಂದಿದ್ದ ರಂಭೆ ತಟಕ್ಕನೆ ನಿಂತು, "ತಾಳಿ, ತಾಳಿ.. ರತಿದೇವಿಯ ಯೋಜನೆಯನುಸಾರ ನಾವು ಈ ದಿನ ಇಲ್ಲೆ ನೆಲೆಯೂರಬೇಕು... ಈ ದಿನದ ಪೂರ ಬರಿಯ ಮಧುರ ಗಾಯನ ಸಂಗೀತ ಗೋಷ್ಠಿಗಳನ್ನು ನಡೆಸುತ್ತ ಇಲ್ಲೆ ಬಿಡಾರ ಹೂಡಬೇಕು.. ಇಲ್ಲೆ ಎಂದರೆ ಈ ಪರಿಧಿಯ ಸುತ್ತಳತೆಯಲ್ಲೆ. ನೀವ್ಯಾರು ಇಲ್ಲಿಂದ ಮುಂದಕ್ಕೆ ಹೆಜ್ಜೆಯಿಕ್ಕದೆ ಬರಿಯ ಈ ಪರಿಧಿಯ ಸುತ್ತಳತೆಯಲ್ಲೆ ಹೆಜ್ಜೆಯಿಕ್ಕುತ್ತ ಸಾಗಬೇಕು. ಎಲ್ಲರು ತಲುಪಿ ಬಿಡಾರ ಹೂಡುವತನಕ ಕಾದು, ತಲುಪಿದ ಸಂಕೇತ ಸಿಕ್ಕಿದ ಮೇಲೆ ಮಾತ್ರವೆ ನಮ್ಮ ಕೆಲಸ ಆರಂಭಿಸಬೇಕು.."ಎಂದಳು.
ಎಲ್ಲರು ಅರ್ಥವಾದಂತೆ ತಲೆಯಾಡಿಸುವಾಗ ಅನುಮಾನಕ್ಕೆಡೆಯಿರದಂತೆ ತಿಳಿದುಕೊಳ್ಳುವವಳ ಹಾಗೆ ಕೇಳಿದವಳು ಘೃತಾಚಿ - "ಇಂದು ನಾವೆಲ್ಲ ಬರಿಯ ವಾದ್ಯ ವಾದನ ಮಾತ್ರದಲಷ್ಟೆ ನಿರತರಾಗಬೇಕಲ್ಲವೆ?"
" ಹೌದು.. ಇಂದೆಲ್ಲ ಮೆಲುವಾದ ದನಿಯ ಮಧುರ ವಾದನವಷ್ಟೆ ಹಿತಕರವಾಗಿ ಹರಿಯುವ ಹಾಗೆ ನೋಡಿಕೊಳ್ಳಬೇಕು.. ನಾಳೆಯ ಪ್ರಾತಃಕಾಲ ಮತ್ತು ಸಂಧ್ಯಾ ಸಮಯದಲಷ್ಟೆ ವಾದನದ ಜತೆಗೆ ಮಧುರ ಗಾಯನವನ್ನು ಸೇರಿ ಸಮ್ಮೋಹಕ ವಾತಾವರಣ ಸೃಜಿಸಬೇಕು..."
" ಆ ಹೊತ್ತಿನಲ್ಲಿ ಜಾಗ ಬದಲಿಸದೆ ಅಲ್ಲೆ ಇರಬೇಕಲ್ಲವೆ?" ಈಗ ಮೇನಕೆಯ ಪ್ರಶ್ನೆ.
" ಊಹೂಂ... ಪ್ರತಿ ಆರು ತಾಸಿಗೊಮ್ಮೆ ಅರ್ಧ ಯೋಜನದಷ್ಟು ದೂರ ಪರಿಧಿಯಿಂದ ಒಳಗೆ ಪ್ರವೇಶಿಸಬೇಕು.. ಹೀಗೆ ಎಲ್ಲಾ ಕಡೆಯಿಂದ ಸುತ್ತುವರೆಯುತ್ತ ಮುಂದುವರೆದರು ಪರಿಣಾಮ ಮಾತ್ರ ಕ್ರಮೇಣವಾಗಿಯಷ್ಟೆ ವ್ಯಾಪಿಸುವಂತಿರಬೇಕೆ ಹೊರತು ಒಂದೆ ಬಾರಿಗೆ ಅನುಭವ ವೇದ್ಯವಾಗಬಾರದು..."
" ವಾದನ, ಗಾಯನದ ನಂತರದ ಮುಂದಿನ ಹಂತ..?" ತಿಲೋತ್ತಮೆಯ ಕಡೆಯಿಂದ ಬಂದಿತ್ತು ಮತ್ತೊಂದು ಪ್ರಶ್ನೆ.
" ನಾಳಿದ್ದಿನ ಪ್ರಾತಃಕಾಲದ ಹೊತ್ತಿಗೆ ವಾದನ ಗಾಯನದ ನಿರಂತರ ಗೋಷ್ಟಿ ಆರಂಭವಾಗಿಬಿಡಲಿ.. ಪ್ರತಿ ಆರು ತಾಸಿನ ನಂತರ ಮತ್ತೆ ಅರ್ಧ ಯೋಜನೆ ಸಾಗುವ ಕ್ರಮ ಮುಂದುವರೆಸಬೇಕು... ಹೀಗೆ ನಾಲ್ಕನೆ ದಿನಕ್ಕೆ ಕಾಲಿಟ್ಟಾಗ ಜತೆಯಲ್ಲೆ ನಿಧಾನವಾಗಿ ಮನಮೋಹಕವಾದ ನೃತ್ಯವೂ ಆರಂಭವಾಗಲಿ, ಹಿತವಾದ ಗೆಜ್ಜೆಸದ್ದಿನ ಜತೆಗೆ.. ಆರನೆ ದಿನಕ್ಕೆ ನಾವೆಲ್ಲ ನರ ಮುನಿಯ ತಪದ ಜಾಗದಿಂದ ಅರ್ಧ ಯೋಜನ ದೂರದಲ್ಲಿರುತ್ತೇವೆ... ಅಲ್ಲಿಗೆ ನಮ್ಮ ಪಯಣ ನಿಂತುಬಿಡಲಿ.. ಅಲ್ಲಿನ ಬೆಳವಣಿಗೆ, ಸನ್ನಿವೇಶದನುಸಾರ ನೋಡಿಕೊಂಡು ಮುಂದಿನ ಹೆಜ್ಜೆ ನಿರ್ಧರಿಸುವ.."
ಎಂದವಳೆ ರಂಭ ಪ್ರತಿಯೊಬ್ಬರಿಗೂ ಒಂದೊಂದು ಪುಟ್ಟ ಪೆಟ್ಟಿಗೆಯನ್ನು ಕೈಗಿತ್ತಳು. ಅದು ಕೇವಲ ದಿಕ್ಸೂಚಿ ಮಾತ್ರವಾಗಿರದೆ ಪ್ರತಿಯೊಬ್ಬರು ತಲುಪಿದ ಜಾಗವನ್ನು ತೋರಿಸುವ ಮಾಹಿತಿ ಪೆಟ್ಟಿಗೆಯೂ ಆಗಿತ್ತು.. ಅದರಲ್ಲಿ ಪರಸ್ಪರರಿಗೆ ಹೇಗೆ ಸಂಕೇತಗಳನ್ನು ರವಾನಿಸಬಹುದೆಂದು ಎಲ್ಲರಿಗು ಗೊತ್ತಿದ್ದ ಕಾರಣ ಯಾರೂ ಅದರ ಕುರಿತು ಏನೂ ಪ್ರಶ್ನೆ ಕೇಳದೆ, ತಂತಮ್ಮ ದಾರಿ ಹಿಡಿದು ನಡೆಯತೊಡಗಿದರು..
ಆ ರಾತ್ರಿ ಇದ್ದಕ್ಕಿದ್ದಂತೆ ಆ ಕಾನನದ ತುಂಬೆಲ್ಲ ದೈವಿಕವಾದ ಗಂಧರ್ವ ಸಂಗೀತದ ಮಧುರ ಝೆಂಕಾರವೆ ತುಂಬಿಹೋಯ್ತು, ಅದುವರೆವಿಗಿದ್ದ ನಿಗೂಢ ಮೌನದ ಸತ್ವವನ್ನೆ ಅಲ್ಲಾಡಿಸುವ ಹಾಗೆ..!
*********************
ನರನ ತಪದ ತಲ್ಲೀನತೆಯಲ್ಲೂ, ಅಂತರಾಳದಂತಃಕರಣದೊಳಗೆ ಏನೊ ಬದಲಾಗುತ್ತಿರುವ ಸುಳಿವು ಈಗಾಗಲೆ ಸಿಕ್ಕಿಹೋಗಿದೆ...
ಮೊದಮೊದಲು ದೂರದಿಂದೆಲ್ಲಿಂದಲೊ ಕೇಳಿ ಬರುತ್ತಿದ್ದ ವಾದನ, ಗಾಯನದ ಕ್ಷೀಣ ಸದ್ದುಗಳು, ಕ್ರಮೇಣ ಬಲವಾಗುತ್ತ ಹೋಗಿ ಈಗ ತೀರಾ ಹತ್ತಿರದಿಂದಲೆ ಕೇಳಿಸುತ್ತಿವೆಯೆಂಬಂತೆ ಭಾಸವಾಗುತ್ತಿದೆ. ಜತೆಜತೆಗೆ ಈಗ ಲಯಬದ್ಧವಾದ ಗೆಜ್ಜೆಯ ಸದ್ದುಗಳು ಕೇಳಿಸುತ್ತಿವೆಯಾಗಿ ಅದು ನೃತ್ಯ, ಗಾಯನ, ವಾದನಗಳ ಸಂಗಮಿತ ಧ್ವನಿಯೆಂದು ಅರಿವಾಗಿ, ಏನೊ ಹೊಳೆದಂತೆ ಆ ತಪೋನಿರತ ಮೊಗದಲ್ಲಿಯೂ ಕಂಡೂ ಕಾಣದ ಮಂದಹಾಸ ಮೂಡಿಸಿದೆ....
ಅದು ದೇವರಾಜನ ಹುನ್ನಾರವೆಂದರಿವಾದ ನಗೆಯೊ, ತನ್ನ ಸಾಮರ್ಥ್ಯ, ಕಠೋರ ನಿಶ್ಚಲತೆಯನ್ನರಿಯದೆ ಮಕ್ಕಳಾಟವೆನ್ನುವಂತೆ ಭಾವಿಸಿ ಬರುತ್ತಿರುವ ಅವರ ಎಳಸುತನಕ್ಕೆ ಹುಟ್ಟಿದ ಕರುಣಾಪೂರ್ಣ ನಗೆಯೊ ಅಥವಾ ಮುಂದೇನಾಗಲಿದೆಯೆಂಬ ಅರಿವಿನ ದೆಸೆಯಿಂದ ಹುಟ್ಟಿದ ವಿಷಾದದ ನಗೆಯೊ - ಆದರೆ ಅದು ನರನ ತಪದ ಏಕಾಗ್ರತೆಯನ್ನು ಉಂಗುಷ್ಟವಿರಲಿ, ಕಣ ಮಾತ್ರದಷ್ಟು ವಿಚಲಿತಗೊಳಿಸಲಾಗಿಲ್ಲ. ಅಪಾರ ಮನಃಶ್ಯಕ್ತಿಯ ತೇಜ ತನ್ನ ಪ್ರತಿವಸ್ತು ಪರಿವರ್ತನದ ನಿರಂತರ ಕಾರ್ಯದಲ್ಲಿ ತನ್ನ ಕಾರ್ಯಾಗಾರವನ್ನು ನಡೆಸುತ್ತಲೆ ಇದೆ - ತನ್ನ ಪಾಡಿಗೆ ತಾನು.
(ಇನ್ನೂ ಇದೆ)
Comments
ಉ: ಅಹಲ್ಯಾ ಸಂಹಿತೆ - ೧೦
7ರಿಂದ 10ರವರೆಗಿನ ಕಂತುಗಳನ್ನು ಓದಿದೆ. ಈ ಪುರಾಣದ ಕಥೆಗಳನ್ನು ನೈಜವೆಂದು ಭಾವಿಸಿ ಒಳಾರ್ಥವನ್ನು ಗ್ರಹಿಸದೆ ಜನರನ್ನು ಸಾಂಪ್ರದಾಯಿಕರು ದಾರಿ ತಪ್ಪಿಸಿರುವರೆಂದು ನನ್ನ ವೈಯಕ್ತಿಕ ಅಭಿಪ್ರಾಯ. ಕಥೆಗಳು ಹೊರಡಿಸುವ ಸಾರ ಸಂದೇಶಗಳು ಮುಖ್ಯವಾದರೆ ಒಳಿತು. ಸಾಧಕರ ಹಾದಿಯಲ್ಲಿ ಅಡ್ಡಿಗಳಾಗುವುದು ಅರಿಷಡ್ವರ್ಗಗಳೇ ಹೊರತು ಬೇರೆ ಅಲ್ಲ. ಈ ಕಥೆಗಳೂ ಅದನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸುತ್ತವೆ ಅಷ್ಟೆ. ಇವನ್ನು ಭವ್ಯ ಸುಂದರ ರೂಪಕಗಳಾಗಿ ನೋಡಿದರೆ ಸಾರಗ್ರಹಣ ಸುಲಭವಾಗುತ್ತದೆ. ರಂಜನೀಯವಾಗಿ ಮುಂದುವರೆಸುತ್ತಿರುವಿರಿ. ಅಭಿನಂದನೆಗಳು, ನಾಗೇಶರೇ.
In reply to ಉ: ಅಹಲ್ಯಾ ಸಂಹಿತೆ - ೧೦ by kavinagaraj
ಉ: ಅಹಲ್ಯಾ ಸಂಹಿತೆ - ೧೦
ಕವಿಗಳೇ ನಮಸ್ಕಾರ ಮತ್ತು ಧನ್ಯವಾದಗಳು :-)
ನಮ್ಮ ಎಟುಕಿಗೆ ನಿಲ್ಲುವ ತನಕ ಎಲ್ಲವು ಪವಾಡ, ಅತಿಶಯದಂತೆ ಕಂಡರು ಗ್ರಹಿಕೆಗೆ ಸಿಗುತ್ತಿದ್ದಂತೆ ಸಾಮಾನ್ಯ ಸತ್ಯವಾಗಿಬಿಡುತ್ತದೆ. ಅದನ್ನು ವಿಜ್ಞಾನವೆಂದರು ಒಂದೆ, ಪವಾಡವೆಂದರು ಒಂದೆ - ತಾರ್ಕಿಕವಾಗಿ ಮತ್ತು ಸಂಗತವಾಗಿ ವಿವರಿಸುವಂತಿದ್ದರೆ ಸರಿ. ನಮ್ಮ ಪುರಾಣ ಪುಣ್ಯಕಥೆಗಳನ್ನು ಗೊಡ್ಡು ಕಥೆಗಳೊ, ವಾದಗಳೊ ಎಂದು ಸರಿಸಿಬಿಡುವ ಬದಲಿಗೆ ಅಲ್ಲೂ ನಮಗರಿಯದ ವಿಜ್ಞಾನವೇನೊ ಇದೆ, ಅದನ್ನು ಕಾಣುವ ಶಕ್ತಿ ನಮಗಿರಲಿಲ್ಲ ಅಷ್ಟೆ ಎಂದುಕೊಂಡು ನೋಡಿದರೆ ಬೇರೆಯೇ ತರಹದ ಒಳನೋಟಗಳು ಅನಾವರಣವಾಗಬಹುದು. ಮುಂದಿನ ಕಂತುಗಳಲ್ಲಿ ವೈಜ್ಞಾನಿಕ ವಿವರಣೆಯ ಅಂಶಗಳು ಬರತೊಡಗಿದಾಗ ಅದು ನೋಡುವವರ ದೃಷ್ಟಿಯ ಮೇಲೆ ಅದ್ಭುತವೂ ಅನಿಸಬಹುದು, ಮುಜುಗರವೂ ಅನಿಸಬಹುದು. ನಾನು ನೋಡಹೊರಟಿರುವುದು ತಾರ್ಕಿಕ ಮತ್ತು ವೈಜ್ಞಾನಿಕ ತಳಹದಿಯಿತ್ತೆನ್ನುವ ಅನಿಸಿಕೆಯ ಆಧಾರದ ಮೇಲೆ. ಬರಿ ಭಾಷೆ, ಸನ್ನಿವೇಶಗಳನ್ನು ಪೌರಾಣಿಕ ಚೌಕಟ್ಟಿನಲ್ಲಿ ಇರಿಸಿಕೊಂಡಿದ್ದೇನೆ - ರಂಜನೆಯ ಅಂಶದ ದೃಷ್ಟಿಯಿಂದ. ಹೀಗಾಗಿ ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತ !