ಅಹಲ್ಯಾ ಸಂಹಿತೆ-೦೬

ಅಹಲ್ಯಾ ಸಂಹಿತೆ-೦೬

ಅದು ಯುಗಸಂಧಿಯ ಕಾಲ.. ಆ ಯುಗ ಮುಗಿದು ಮುಂದಿನ ಯುಗಕ್ಕೆ ಕಾಲಿಡಲು ಸುಮಾರು ಒಂದು ದಶ ಲಕ್ಷ ವರ್ಷಗಳ ಅಂತರವಿತ್ತು. ಸಹಸ್ರಕವಚನೇನು ಕಡಿಮೆ ಚಾಣಾಕ್ಷ್ಯನಲ್ಲ.. ಈ ಯುಗದಲ್ಲಿ ದಶಲಕ್ಷ ವರ್ಷ ಬದುಕಿ, ಯಾರ ಕೈಲಾದರು ಕವಚ ಛೇಧನಕ್ಕೆ ಒಳಗಾದರು ಸಹ ಯುಗಾಂತ್ಯಕ್ಕೆ ಬರಿಯ ಅರ್ಧದಷ್ಟು ಕವಚಗಳಷ್ಟೆ ಕಳೆದುಕೊಳ್ಳಲು ಸಾಧ್ಯ. ಮಿಕ್ಕ ಕವಚಗಳ ಜತೆ ಮತ್ತೆ ಅಷ್ಟೆ ಆಯಸ್ಸನ್ನು ಹೊತ್ತುಕೊಂಡು ಮುಂದಿನ ಯುಗದಲ್ಲಿ ಮತ್ತೊಂದು ದಶಲಕ್ಷ ವರ್ಷ ರಾಜ್ಯಭಾರ ನಡೆಸಬಹುದು..! ಸೂರ್ಯದೇವ ಈ ಸೂಕ್ಷ್ಮ ಗಮನಿಸಿದ್ದನೋ, ಇಲ್ಲವೊ - ವರವಂತೂ ನೀಡಿಬಿಟ್ಟಿದ್ದ.. ಇನ್ನು ಕವಚ ಛೇಧನ ಸಾಧ್ಯವಾಗದೆ ಹೋದರೆ ಮಾತಾಡುವಂತೆಯೆ ಇಲ್ಲ.. ತನ್ನಿರುವಿಕೆಯನ್ನು ಯುಗಯುಗಗಳಾಚೆಗು ದಾಟಿಸಿ, ಒಂದು ವಿಧದ ಅಮರತ್ವವನ್ನು ಅವನಿಗವನೆ ಆರೋಪಿಸಿಕೊಂಡುಬಿಡಬಹುದು !

ಯುಗಾಂತರವಿಡಿ ದೈತ್ಯ ದಮನ ಮಾಡಿದ್ದು ಅಲ್ಲದೆ ಮುಂದಿನ ಯುಗದಲ್ಲೂ ಅದನ್ನೆ ನಿಭಾಯಿಸಬೇಕೆಂದರೆ ಹೇಗೆ? ಅದನ್ನು ಸ್ವಲ್ಪ ಸರಳೀಕರಿಸಬೇಕೆಂದೆ ನರನಾರಾಯಣರ ಜನುಮವಾಯಿತೆನ್ನುತ್ತಾರೆ. ಅವರಿಬ್ಬರಲ್ಲಿ ಒಬ್ಬ ಸಹಸ್ರ ವರ್ಷದ ತಪದಲ್ಲಿ ನಿರತನಾಗಿದ್ದರೆ ಮತ್ತೊಬ್ಬ ಸಹಸ್ರಕವಚನ ಜತೆಯ ಸಹಸ್ರ ವರ್ಷದ ಕದನದಲ್ಲಿ ನಿರತ.. ಹೀಗೆ ಸಾವಿರ ವರ್ಷದಲ್ಲಿ ಒಂದು ಕವಚ ಹರಿದರೆ, ಅದೇ ಹೊತ್ತಲ್ಲಿ ಸಹಸ್ರ ವರ್ಷದ ತಪ ಮುಗಿಸಿ ಮೇಲೆದ್ದ ನರ, ಮುಂದಿನ ಮತ್ತೊಂದು ಸಾವಿರ ವರ್ಷದ ಕದನದಲ್ಲಿ ತೊಡಗಿಸಿಕೊಳ್ಳುತ್ತಿದ್ದ.. ಆ ಹೊತ್ತಲ್ಲಿ ಆಗ ತಾನೇ ಹೋರಾಟ ಮುಗಿಸಿದ್ದ ನಾರಾಯಣ ಮತ್ತೊಂದು ಸಾವಿರ ವರ್ಷದ ತಪಕ್ಕೆ ಕೂರುತ್ತಿದ್ದ - ಆ ತಪದ ಮೂಲಕ ಮುಂದಿನ ತನ್ನ ಸರದಿಯ ಶಕ್ತಿಸಂಚಯದ ಚೀಲ ತುಂಬಿಸಿಕೊಳ್ಳಲು. ಹೀಗೆ ಇಬ್ಬರು ಸರದಿಗನುಸಾರವಾಗಿ ತಪ-ಮತ್ತು-ಕದನದ ಚಕ್ರದಲ್ಲಿ ನಿರತರಾಗಿದ್ದ ಕಾರಣ, ಸಹಸ್ರ ಕವಚಗಳನ್ನು ಹರಿಯುವ ಕಾರ್ಯ ಮುಂದಿನ ಯುಗಕ್ಕೊಯ್ಯುವ ಅಗತ್ಯವಿಲ್ಲದ ಆ ಯುಗದಲ್ಲೆ ಮುಗಿದುಹೋಗುತ್ತಿತ್ತು - ಎಲ್ಲಾ ಅಂದುಕೊಂಡ ಹಾಗೆ ಸರಿಯಾಗಿ ನಡೆದರೆ. ಈ ಕಾರಣದಿಂದಲೆ ಬದರಿಕಾಶ್ರಮದ ಆ ಪರಿಸರದಲ್ಲಿ ನಿರಂತರ ಕದನ ಮತ್ತು ನಿರಂತರ ತಪದ ಸೂಚನೆ ಸಂಕೇತಗಳು ಸದಾ ಕಾಣಸಿಗುತ್ತಿದ್ದುದು. ಯುಗದಿಂದ ಯುಗಕ್ಕೆ ಕುಂಠಿತವಾಗುವ ಧರ್ಮಶಕ್ತಿಯ ದೆಸೆಯಿಂದಾಗಿ ಮುಂದಿನ ಯುಗದತನಕ ಕ್ರಮಿಸಬಿಡದೆ, ಹೇಗಾದರೂ ಈ ಯುಗದಲ್ಲೆ ಅವನ ಕಥೆ ಮುಗಿಸಲು ಯೋಜನೆ ಹಾಕಿ ಭಧ್ರವಾಗಿ ಪಟ್ಟು ಹಾಕಿಕೊಂಡು ಕೂತಿದ್ದರು ನರನಾರಾಯಣರು ಎಂಬುದು ಮತ್ತೊಂದು ಪ್ರಚಲಿತದಲ್ಲಿದ್ದ ಕಥೆ..!

ಆದರೆ ಹಾಗೆ ಪ್ರಚಲಿತವಿದ್ದ ಹಲವಾರು ಅವತರಣಿಕೆಗಳಲ್ಲಿ ಯಾವುದು ನಿಜ, ಯಾವುದು ಊಹೆಯೆಂದು ಹೇಳುವವರು ಮಾತ್ರ ಯಾರು ಇಲ್ಲ... ಖಚಿತವಾಗಿ ಹೇಳಬಲ್ಲವರು ನರನಾರಾಯಣರು ಮಾತ್ರವೆ ಆದರು ಅವರನ್ನು ಯಾರು ಮುಖತಃ ಕಂಡು ಮಾತಾಡಿದ್ದೆ ಇಲ್ಲ. ನಿರಂತರ ತಪ ಅಥವಾ ಯುದ್ಧದಲ್ಲಿ ತೊಡಗಿಕೊಂಡವರು ಯಾರ ಕೈಗೆ ತಾನೆ ಸಿಗುವುದಾದರೂ ಎಂತೊ ? ಅವರಿರುವ ಆ ಬದರಿಕಾಶ್ರಮದ ಪುಣ್ಯಭೂಮಿಯ ಮಹಿಮೆಯೇನು ಕಡಿಮೆಯದೇ ? ಯಾರೂ ಅತ್ತ ತಲೆಯಿಕ್ಕಿ ಮಲಗಲೂ ಆಗದಂತೆ ಯಾವುದೊ ತೀಕ್ಷ್ಣವಾದ ಶಕ್ತಿ ತೇಜವೊಂದು ಆ ಪ್ರದೇಶವನ್ನೆಲ್ಲ ಸುತ್ತುವರಿದು ಕಾಯುತ್ತಿರುವಂತಿದೆ. ಹೀಗಾಗಿ ಅಲ್ಲೇನು ನಡೆದಿದೆಯೆಂದು ಅರಿಯಲು ಯಾರಿಗು ಸಾಧ್ಯವೆ ಇಲ್ಲ ಎನ್ನುವಂತಹ ಪರಿಸ್ಥಿತಿ...

ಅಲ್ಲಿ ನಡೆಯುತ್ತಿರುವುದರ ನಿಜ ಹಿನ್ನಲೆಯ ಅರಿವಿರುವುದು ಕೇವಲ ನರನಾರಾಯಣರಿಬ್ಬರಿಗೆ ಮಾತ್ರವೆ. ಅವರಲ್ಲಿ ಕೈಗೊಂಡಿರುವ ನಿಗೂಢ ಕಾರ್ಯದ ರಹಸ್ಯವೇನೆಂದು ಅವರಿಗೆ ಮಾತ್ರವೆ ಗೊತ್ತು. ಅಷ್ಟೇಕೆ, ನರನಾರಾಯಣರ ಸೃಷ್ಟಿಯೆ ಆ ಬೃಹತ್ಕಾರ್ಯದ ಒಂದು ಮಹತ್ತರ ಭಾಗ. ಮುಂದಿನ ಯಾವುದೊ ಅಗೋಚರ ಭೂಮಿಕೆಗೆ ವೇದಿಕೆ ಸಿದ್ದಪಡಿಸುವ ಮಹತ್ತರ ಕಾರ್ಯದ ಮುನ್ನುಡಿಯೆ ಅವರ ಕಾರಣ ಜನ್ಮಾವತಾರ... ಅದರ ಸಿದ್ದತೆಗಾಗಿಯೆ ಈ ಯುಗಾಂತರ ಪ್ರಕ್ಷೇಪದ ಕಾರ್ಯಭಾರ. ಆ ಭೂಮಿಕೆಗೆ ಬೇಕಾದ ದೈವೀಕವಾದ ಸಾತ್ವಿಕ ಶಕ್ತಿಯನ್ನು ಕ್ರೋಢಿಕರಿಸಬೇಕೆಂದರೆ, ಒಂದೆಡೆ ಅದನ್ನು ನೇರವಾಗಿ ಒಟ್ಟುಗೂಡಿಸಬೇಕು; ಮತ್ತೊಂದೆಡೆ ಬೇಡದ ರಾಕ್ಷಸೀ ತಾಮಸ ಶಕ್ತಿಯನ್ನು ಹಣಿಸಿ, ಮಣಿಸುತ್ತ ಪರೋಕ್ಷವಾಗಿಯೂ ಹೆಚ್ಚಿಸಬೇಕು. ನಿವ್ವಳ ಸಾತ್ವಿಕ ಶಕ್ತಿಯನ್ನು ಪ್ರಬಲಗೊಳಿಸಿದರಷ್ಟೆ ಆ ಬ್ರಹ್ಮಾಂಡ ಮಹಾಯಜ್ಞಕ್ಕೆ ಸರಿಯಾದ ವೇದಿಕೆಯ ನಿರ್ಮಾಣವಾಗಲು ಸಾಧ್ಯ. ಅದಕ್ಕಾಗಿಯೆ ಈ ದೈತ್ಯ ದಮನದ ಮಹಾಕಾಂಡ.

ಅದುವರೆವಿಗು ಅಂದುಕೊಂಡಂತೆ ಎಲ್ಲವು ನಡೆದುಕೊಂಡು ಬಂದಿತ್ತು ಅವರೆಣಿಕೆಯನುಸಾರ. ಅದು ಹೀಗೆ ಮುಂದುವರೆದಿದ್ದರೆ ಎಲ್ಲವು ಸರಿಯಿರುತ್ತಿತ್ತೊ ಏನೊ ? ಯುಗಾಂತ್ಯದೊಳಗೆ ಸಹಸ್ರಕವಚನ ವಧೆಯಾಗಿ ಮುಂದಿನ ಯುಗ ನಿಷ್ಕಳಂಕಿತವಾಗಿ ಅವನ ಪೀಡೆಯಿಂದ ಮುಕ್ತವಾಗಬಹುದಿತ್ತು - ಆ ನಡುವೆ ದೇವೆಂದ್ರನ ಕಿತಾಪತಿ, ಕುಚೇಷ್ಟೆ ಸಂಭವಿಸದಿದ್ದರೆ... ತನ್ನ ಪದವಿಯ ಬುಡಕ್ಕೆಲ್ಲಿ ಎರವಾಗುವುದೊ ಎಂದು ಭೀತಿಯಲ್ಲಿ ತಪಸಿನಲ್ಲಿದ್ದ ನರನನ್ನು ತಡವಿ, ಅವನ ಸಹಸ್ರ ವರ್ಷದ ತಪ ನಡುವೆಯೆ ಮುರಿದುಬಿದ್ದು ಹೋಗುವಂತೆ ಮಾಡಿರದಿದ್ದರೆ... ನಡುವೆ ಮುರಿದ ತಪದ ಫಲವಾಗಿ ಸಹಸ್ರ ವರ್ಷದ ತಪ ಮತ್ತೆ ಮೊದಲಿನಿಂದ ಆರಂಭಿಸಬೇಕಾಗಿ ಬಂದದ್ದು ಒಂದಾದರೆ, ಆ ಕಾರಣದಿಂದ ಸಾವಿರದನೆ ಕಟ್ಟಕಡೆಯ ಕವಚವನ್ನು ಅದೇ ಯುಗದಲ್ಲಿ ಬೇಧಿಸಲಾಗದೆ ಮುಂದಿನ ಯುಗವೊಂದಕ್ಕೆ ಒಯ್ಯಬೇಕಾದ ಅನಿವಾರ್ಯವೂ ಉಂಟಾಗಿದ್ದು ಇನ್ನೊಂದು.

ಯುಗಾಂತ್ಯದ ಪ್ರಳಯದಲ್ಲಿ ಎಲ್ಲದರ ವಿನಾಶವಾಗುವ ಕಾರಣ, ಅದರ ಜತೆಯಲ್ಲೆ ಸಹಸ್ರಕವಚನ ಕಥೆಯೂ ಮುಗಿದುಬಿಡಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು. ಆದರೆ ನಿಗೂಢ ನಿಯಾಮಕದ ಚಿತ್ತಕ್ಕದು ಪಥ್ಯವಾಗಲಿಲ್ಲವೊ ಏನೊ ? ಆ ಯುಗದಲ್ಲಿ ಒಂಭೈನೂರ ತೊಂಬತ್ತೊಂಬತ್ತು ಕವಚಗಳನ್ನು ಹರಿಸಲು ಮಾತ್ರ ಸಾಧ್ಯವಾದ ಕಾರಣ, ಮಿಕ್ಕೊಂದು ಕವಚದ ಹರಣಕ್ಕೆ ಮತ್ತೊಂದು ಯುಗದವರೆಗು ಕಾಯುವಂತಾಗಿಹೋಯ್ತು... ಆ ಒಂದು ವಧೆಯ ಕಾರಣಕ್ಕಾಗಿಯೆ ಮತ್ತೊಂದು ಯುಗದಲ್ಲೂ ಜನ್ಮ ತಾಳುವಂತಾಯ್ತು ನರನಾರಾಯಣರು - ಕೃಷ್ಣಾರ್ಜುನರ ರೂಪಿನಲ್ಲಿ...!

ಮತ್ತೊಂದು ಯುಗದ ಆ ಜನ್ಮದಲ್ಲಿ ನರನ ಕೈಯಿಂದ ಹತನಾಗಲೆಂದು ಹುಟ್ಟಿದ ಸಹಸ್ರಕವಚ ಮತ್ತಾರು ಆಗಿರದೆ ಕವಚ-ಕರ್ಣಕುಂಡಲಧಾರಿಯಾಗಿಯೆ ಕುಂತಿಯಲ್ಲಿ ಜನಿಸಿದ್ದ ಸೂರ್ಯಪುತ್ರ - ಕರ್ಣನೇ ಆಗಿದ್ದು ಮತ್ತೊಂದು ಬಗೆಯ ವಿಧಿ ಛೋದ್ಯ... ಇದೇನು ಮಹಾಭಾರತದ ಮುನ್ನುಡಿಯಾಗಲೆಂದು, ಯೋಜಿತವಾಗಿಯೆ ನಿಭಾಯಿಸಿದ ಭೂಮಿಕೆಯೊ ಅಥವ ಇಂದ್ರನ ಅಚಾತುರ್ಯದಿಂದಾಗಿ ನಡೆದ ಅಕಸ್ಮಿಕ ಸಂಘಟನೆಯೊ, ಅ ನರನಾರಾಯಣರಿಗಷ್ಟೆ ಗೊತ್ತೇನೊ ? ಆ ಅನಪೇಕ್ಷಣೀಯ ಯುಗಾಂತರ ಪರಿಸ್ಥಿತಿಗೆ ತಾನೇ ಬಲವಾದ ಕಾರಣನಾದೆನೆಂಬ ಪಾಪಪ್ರಜ್ಞೆಗೊ ಏನೊ, ದೇವರಾಜನೂ ನರನ ಆ ಮುಂದಿನ ಅವತಾರದಲ್ಲಿ ಅವನ ಕಾರಣಜನ್ಮ ಪಿತನಾಗುವ ಮೂಲಕ, ಆ ಅಂತಿಮ ವಧೆಯನ್ನು ಮತ್ತಷ್ಟು ಸುಗಮವಾಗಿಸಿದನೆಂಬುದು ಸೂಕ್ಷ್ಮದಲ್ಲಿ ಗಮಸಿದಲ್ಲದೆ ಕಾಣಬರದ ಸತ್ಯ.

ಆದರೆ ಅಹಲ್ಯೆಯೆಂಬ ಅಪರೂಪದ ಅತಿಶಯ ರೂಪರಾಶಿಯ ಸೃಷ್ಟಿಗೆ, ಈ ದೇವರಾಜನ ಕುಚೋದ್ಯವೆ ಪರೋಕ್ಷ ಕಾರಣವಾಯ್ತೆಂಬುದು ಮಾತ್ರ ವಿಚಿತ್ರ. ಸಾಲದೆನ್ನುವಂತೆ ಅವಳ ಬದುಕಿನ ಮತ್ತಷ್ಟು ವೈಚಿತ್ರ್ಯಗಳಿಗೆ ತಿರುವು ಕೊಡುವ ಸೂತ್ರಧಾರಿಯಾಗಿಯೊ, ನಾಯಕನಾಗಿಯೊ, ಖಳನಾಯಕನಾಗಿಯೊ ಅದೇ ದೇವೆಂದ್ರನೆ ಪಾತ್ರ ನಿರ್ವಹಿಸಿದನೆನ್ನುವುದು ವಿಧಿಯ ವಿಚಿತ್ರ ವಿಪರ್ಯಾಸಗಳಲ್ಲೊಂದೆನ್ನಬಹುದೇನೊ.. ಅವನ ಅಚಾತುರ್ಯದಿಂದಲೆ, ಸುಗಮವಾಗಿ ನಡೆಯುತ್ತಿದ್ದ ಪ್ರಯೋಗದ ಹಳಿ ತಪ್ಪಿಹೋಗಿ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿತ್ತು, ತೇತ್ರಾಯುಗದಲ್ಲಿ ಶ್ರೀ ರಾಮನ ಮೂಲಕ ಅದರ ಪರಿಹಾರ ದೊರಕುವ ತನಕ...

ಅದಕ್ಕೆ ಬುನಾದಿ ಹಾಕಿದ ನರನ ತಪೋಭಂಗದ ಪ್ರಕರಣ ಇಷ್ಟೆಲ್ಲಾ ಹುನ್ನಾರಗಳನ್ನು ಬಚ್ಚಿಟ್ಟುಕೊಂಡಿರಬಹುದೆಂದು ಸ್ವತಃ ದೇವರಾಜ ಇಂದ್ರನಿಗೂ ಗೊತ್ತಿರಲಿಲ್ಲ - ರಂಭಾದಿ ಅಪ್ಸರೆಯರನ್ನು ಕಳಿಸುವ ಸಿದ್ದತೆ ಮಾಡುತ್ತ ಮನ್ಮಥನನ್ನು ಜತೆಗೂಡಿಸುವಾಗ ಸಹ..!

ಆ ಇಂದ್ರನೂ ಋಷಿಮುನಿ ಜಗದ ಜಟೆ, ಗಡ್ಡ, ಮೀಸೆಗಳನ್ನು ಹೊರತುಪಡಿಸಿದರೆ ಆಕಾರ, ರೂಪು, ಮೈಕಟ್ಟುಗಳಲ್ಲಿ ನೋಡುವುದಕ್ಕೆ ಬಹುತೇಕ ಗೌತಮನಂತೆ ಇದ್ದ ಎನ್ನುವುದು ಬಹುಶಃ ಅದೇ ನಾಟಕದ ಇನ್ನೊಂದು ಪೂರ್ವ ನಿಯೋಜಿತ ಅಂಕವೊ ಏನೊ...?

ಅಧ್ಯಾಯ - 04:
_______________

ಎಲ್ಲೆಡೆಯೂ ಕೋಲಾಹಲವೊ, ಕೋಲಾಹಲ. ಎಲ್ಲಾ ಕಡೆ ಬರಿ ಅದರದೆ ಮಾತು..

ನರನಾರಾಯಣರ ತಪೋ ಭಂಗಮಾಡುವ ದೇವೇಂದ್ರನ ಬಾಲಿಶ ಯತ್ನ ಹೇಗೆ ವಿಫಲವಾಯ್ತೆಂಬ ಚರ್ಚೆಯೆ ಎಲ್ಲಾ ಕಡೆಯೂ..

'ಎಲಾ..?! ನರ ನಾರಾಯಣರಂತಹವರನೆ ಕೆಣಕುವ ದುರ್ಬುದ್ಧಿ ದೇವರಾಜನಿಗೇಕೆ ಬಂತು ?' ಎಂದವರು ಕೆಲವರಾದರೆ, 'ಯಾಕೊ ಪಾಪಿ ದೇವೇಂದ್ರನಿಗೆ ಕೇಡುಗಾಲ ಬಂದಂತಿದೆ... ಅದಕ್ಕೆ ಕೆಂಡದೊಡನೆ ಸರಸವಾಡುವ ಸಾಹಸಕ್ಕಿಳಿದ್ದಾನೆ.. ಹೋಗಿ ಹೋಗಿ ಇಂತಹ ಕೆಲಸಕ್ಕೆ ಕೈ ಹಾಕುವುದೆ ?' ಎಂದು ಮೂಗಿನ ಮೇಲೆ ಬೆರಳಿಟ್ಟವರಿನ್ನಷ್ಟು.

ಆದರೆ ಇವೆಲ್ಲಾ ಅಂತೆ ಕಂತೆಗಳನ್ನು ಮೀರಿ, ಇಡೀ ಪ್ರಕರಣದ ಸಫಲ ಫಲಾನುಭವಿಯಾಗಿ ತನ್ನೆ ನಿರೀಕ್ಷೆಗು ಮೀರಿ ಖುಷಿ ಪಟ್ಟವನು ಮಾತ್ರ ಸಾಕ್ಷಾತ್ ದೇವೇಂದ್ರನೆ ಎಂದು ಮಾತ್ರ ಯಾರಿಗೂ ತಿಳಿದಂತಿಲ್ಲ.. ಅದು ಹೇಗೆ ಎಂದು ನೋಡಬೇಕಾದರೆ ಎರಡು ದಿನ ಹಿಂದಕ್ಕೆ ಹೋಗಬೇಕು - ಅವನು ತನ್ನ ಯೋಜನೆಗೆ ಚಾಲನೆ ಕೊಟ್ಟ ದಿನಕ್ಕೆ.

ಅಂದು ಪುಟ್ಟ ಮಂತ್ರಾಲಯವೆ ನೆರೆದಂತಿದೆ ದೇವೇಂದ್ರನ ಖಾಸಗಿ ಸಭಾಮಂದಿರದಲ್ಲಿ. ಎಂದಿನಂತೆ ಅಗ್ನಿ, ವಾಯು, ವರುಣರ ಜತೆಗೆ ಮನ್ಮಥನೂ ಸೇರಿಕೊಂಡಿದ್ದಾನೆ. ಕಾಮದೇವನಿದ್ದೆಡೆ ರತಿಯಿಲ್ಲದೆ ನಡೆದೀತೆ ? ಅಂತೆಯೆ ರತಿದೇವಿಯೂ ಅವನ ಜತೆಗೂಡಿದ್ದಾಳೆ. ಆದರೆ ಸಭಾಮರ್ಯಾದೆಗನುಸಾರ ಹೆಣ್ಣುಗಳ ಗುಂಪಿನೆಡೆ ಸರಿದು ಅಲ್ಲಿದ್ದ ಅಪ್ಸರೆಯರ ಜತೆ ನಿಂತಿದ್ದಾಳೆ. ರಂಭೆ, ತಿಲೋತ್ತಮೆ, ಮಿತ್ರವೃಂದಾದಿ ಬಳಗದ ಅಪ್ಸರೆಯರ ರೂಪು ಲಾವಣ್ಯದ ಅಮೋಘ ಪ್ರದರ್ಶನ ಗೋಷ್ಠಿಯೆ ಅಲ್ಲಿ ನಡೆದಂತಿದೆ. ಮಿಕ್ಕಂತೆ ಅಷ್ಟಿಷ್ಟು ಪರಿಚಾರಕರ ಮತ್ತು ಕಾವಲಿನವರ ಬಳಗ ಬಾಗಿಲಿಂದಾಚೆಗೆ ಕಾವಲು ನಿಂತಿವೆ - ಅನುಮತಿಯ ವಿನಃ ಯಾರನ್ನು ಒಳಬಿಡಬಾರದೆಂಬ ಕಟ್ಟಪ್ಪಣೆಯನ್ನು ಶಿಸ್ತಾಗಿ ಪರಿಪಾಲಿಸಲು. ಸಭೆಯ ವಿಷಯವೇನೆಂದು ಅವರಿಗು ಗೊತ್ತಿಲ್ಲ - ಯಾವುದೊ ಮಹತ್ವದ ಅತಿ ರಹಸ್ಯದ ಚರ್ಚೆಯಾಗಲಿದೆ ಎಂಬುದರ ಸುಳಿವಿನ ಹೊರತಾಗಿ.

ಸಭೆಯ ಗುಸು ಗುಸು ಗದ್ದಲ ನಿಲ್ಲಿಸಿ ವಿಷಯದ ಚರ್ಚೆಯತ್ತ ಗಮನ ಹರಿಸುವಂತೆ ಮಾಡಲು ಕೆಮ್ಮುತ್ತ ಗಂಟಲು ಸರಿಪಡಿಸಿಕೊಂಡ ನರೇಂದ್ರ. ಅದನ್ನು ಕೇಳುತ್ತಿದ್ದಂತೆ ಎಲ್ಲರು ತಂತಮ್ಮ ಪಿಸು ಮಾತು ನಿಲ್ಲಿಸಿ ದೇವರಾಜನತ್ತ ದಿಟ್ಟಿಸತೊಡಗಿದರು ಕಾತರದಿಂದ.

ನಿಧಾನವಾಗಿ ನಾರದರ ಭೇಟಿಯಿಂದ ತಮ್ಮ ಹಿಂದಿನ ಸಮಾಲೋಚನೆಯವರೆಗು ಸಂಕ್ಷಿಪ್ತವಾಗಿ ನೆರೆದವರೆಲ್ಲರಿಗು ವಿವರಿಸಿದ ದೇವೇಂದ್ರ. ಅವನು ಮಾತು ನಿಲ್ಲಿಸಿದ ಮೇಲೂ ಕೆಲಗಳಿಗೆ ಯಾರೂ ಮಾತಾಡುತ್ತಿಲ್ಲ... ಮೊದಲಿಗೆ ಆ ಮೌನಕ್ಕೆ ದನಿ ಕೊಟ್ಟವನು ಮನ್ಮಥ..

" ದೇವರಾಜ, ನಿನ್ನ ಮಾತಿನ ಸಾರ ಗ್ರಹಿಸಿದರೆ ನಾವೀಗ ನರನಾರಾಯಣರ ತಪೋಭಂಗದ ಯೋಜನೆ ಹಾಕ ಹೊರಟಂತಿದೆಯಲ್ಲಾ?" ಎಂದ.

(ಇನ್ನೂ ಇದೆ)
 

Comments

Submitted by kavinagaraj Mon, 03/14/2016 - 15:16

5 ಮತ್ತು 6ರ ಕಂತುಗಳನ್ನು ಓದಿದೆ. ನರನಾರಾಯಣ, ಸಹಸ್ರಕವಚ, ಕೃಷ್ಣಾರ್ಜುನ- ಕರ್ಣರ ಕಥೆಗಳು!! ಮುಂದುವರೆಯಲಿ.

Submitted by nageshamysore Tue, 03/15/2016 - 17:19

In reply to by kavinagaraj

ಕವಿಗಳೇ, ನಮಸ್ಕಾರ ಮತ್ತು ಧನ್ಯವಾದಗಳು :-)
ನಮ್ಮ ಎಲ್ಲಾ ಮುಖ್ಯ ಪುರಾಣ ಕಥೆಗಳಿಗೂ, ಅವತಾರಗಳಿಗು, ಪಾತ್ರಗಳಿಗೂ ಸಮನ್ವಯ ದೃಷ್ಟಿ ನೀಡುವ ಕೊಂಡಿ ಏನಾದರು ಇದೆಯೇ ಎಂದು ಹುಡುಕುತ್ತ ಹೊರಟಾಗ ಹೊಳೆದ ಕಥೆಯಿದು. ಹೀಗಾಗಿ ಎಲ್ಲಾ ಯುಗದ ಪಾತ್ರಗಳಿಗೂ ಅಷ್ಟಿಷ್ಟು ತಗಲಿಕೊಳ್ಳುತ್ತ ಹೋಗಲಿದೆ. ಕೊನೆಗೆಲ್ಲವನ್ನು ಒಂದು ಮೂಲಸೂತ್ರದಡಿ ಹಿಡಿದಿಡಲೆತ್ನಿಸುತ್ತದೆಯಾಗಿ ಈ ಪಾತ್ರವ್ಯಾಪ್ತಿ ಕಥೆಗೆ ಅನಿವಾರ್ಯವಾಗಿದೆ :-)