ಸಂತೃಪ್ತಿ
ಸೋಲೆಂಬುದು ಈ ಜೀವನದಲ್ಲಿ ಎಲ್ಲರೂ ಅನುಭವಿಸುವ ಒಂದು ಅವಮಾನ. ಆದರೆ ಈ ಜಗತ್ತಿನ ಜನಗಳ ನಡೆ ಅತೀ ವಿಚಿತ್ರ. ಆ ಒಂದು ಕ್ಷೇತ್ರದಲ್ಲಿ ತಾವೆ ಸ್ವತಃ ನಿಂತು ಅನುಭವದ ಮೂಸೆಯ ಸವಿ ಕಂಡಿದ್ದರೂ , ಅದೆ ಒಂದು ಪರಿಸ್ಥಿತಿ ಬೇರೆಯವರ ಜೀವನದಲ್ಲಿ ನಡೆದಾಗ ಪೂತಿ೯ ಮರೆತುಬಿಡುತ್ತಾರೆ. ಈ ಸಂಭಾವಿತರ ಸೋಗು ಅದೆಲ್ಲಿಂದ ಹೆಡೆ ಎತ್ತಿ ಬಿಡುವುದೊ ನಾ ಕಾಣೆ. ಆದರೆ ಸೋಲಿನ ಹಿಂದೆ ಗೆಲುವು ಅಡಗಿ ಕುಳಿತಿರುವುದು ಗೊತ್ತಾಗಲು ಕಾಯಬೇಕು. ತಾಳ್ಮೆ ಬೇಕು.
ಪಾಪ ಅವನದೇನು ತಪ್ಪು? ಕೆಲವೊಂದು ಸಾರಿ ಮನುಷ್ಯನ ಜೀವನ ಪರಿಸ್ಥಿತಿಯ ಕೈ ಗೊಂಬೆಯಾಗಿಬಿಡುತ್ತದೆ. ಯಾವ ರೀತಿ ಇರಬೇಕು, ಯಾವ ರೀತಿ ಬದುಕಬೇಕು ಅನ್ನುವ ಗೊಂದಲದಲ್ಲಿ ಸಿಕ್ಕು ಒದ್ದಾಡುತ್ತಾನೆ. ಆದರೆ ಏನೇ ಆದರೂ ಈ ಸಮಾಜವನ್ನು ಎದುರಿಸಿ ಬಾಳುವುದಿದೆಯಲ್ಲ; ನಿಜಕ್ಕೂ ಹರಸಾಹಸಪಡಬೇಕು. ಮೊದಲೆ ಎಲುವಿಲ್ಲದ ನಾಲಿಗೆ. ಮನಸ್ಸಿಗೆ ಬಂದಂತೆ ಮಾತನಾಡುವ ಜನ.
ಎಷ್ಟು ಒಳ್ಳೆಯವನು ಅವನು. ಆದಷ೯ದ ಮನೆ ಬಾಗಿಲು ತಟ್ಟಿ ತನ್ನಷ್ಟಕ್ಕೆ ಬದುಕುತ್ತಿರುವ ವ್ಯಕ್ತಿ. ಬಹುಶಃ ಈಗಿನ ಕಾಲದಲ್ಲಿ ಇಂಥವರು ಕಾಣ ಸಿಗುವುದು ಅಪರೂಪ. ತಾನಾಯಿತು ತನ್ನ ಕೆಲಸವಾಯಿತು. ಓದುವುದು, ಬರೆಯುವುದು ಅವನಿಗಂಟಿದ ಹವ್ಯಾಸ.
ಊರು ಬಂಗಾರ ಪೇಟೆ. ಅಪ್ಪ ಅಮ್ಮನಿಗೆ ಒಬ್ಬನೆ ಮಗ. ತಂಗಿಗೆ ಮದುವೆಯಾಗಿ ಗಂಡನ ಮನೆಯಲ್ಲಿ ಸುಃಖವಾಗಿ ಇದ್ದಾಳೆ. ಜನ್ಮ ಕೊಟ್ಟ ತಾಯಿಗೆ ಮಗನದೆ ಚಿಂತೆ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ ಅನ್ನುವಷ್ಟು ಕೊಪ್ಪರಿಗೆಯ ತುಂಬ ಸಂತೋಷವನ್ನೇ ಉಣಬಡಿಸಿದ ಮಗ ಅವನು. ತನ್ನೊಡಲ ಪ್ರೀತಿಯೆಲ್ಲ ಧಾರೆಯೆರೆದು ಮುದ್ದಾಗಿ ಬೆಳೆಸಿದಳು ಸಾಕಮ್ಮ.
ಆದರೆ, ವಿಧಿ ನಿಯಮ ಮೀರುವ ಶಕ್ತಿ ಯಾರಿಗಿದೆ ಹೇಳಿ? ಸರಕಾರದವರ ಅಣತಿಯಂತೆ ಇದ್ದ ಒಂದಷ್ಟು ಜಮೀನು ಅವರ ಕೈಗೆ ಒಪ್ಪಿಸಿ; ಅವರು ಕೊಟ್ಟಷ್ಟು ಹಣವನ್ನು ತೆಗೆದುಕೊಂಡು ಊರು ಬಿಟ್ಟು ಬೆಂಗಳೂರು ಸೇರಿದರು. ಮುಂದೆ ಏನು ಅನ್ನುವ ಯೋಚನೆ ಬೃಹದಾಕಾರವಾಗಿ ಸಂಸಾರದಲ್ಲಿ ನೆಲೆಯೂರಿತು. ಮಗನಿಗೆ ಬರುವ ಸಂಬಳ ಜೀವನ ನಿವ೯ಹಣೆಗೆ ತೊಂದರೆಯಿಲ್ಲ. ಆದರೆ ಮದುವೆ ವಯಸ್ಸು ಮೀರುತ್ತಿದೆ. ಇಷ್ಟು ದಿವಸ ಹುಡುಗಿ ಹುಡುಕೊದರಲ್ಲಿ ದಿನಗಳು ಕಳೆದಿದ್ದೇ ಗೊತ್ತಾಗಲಿಲ್ಲ. ಆದರೆ ವಯಸ್ಸು ನಿಲ್ಲುತ್ತ? ಆಗಲೆ ಮೂವತ್ತನಾಲ್ಕು ವಷ೯. ಈಗೇನು ಮಾಡಲಿ ಎಂಬ ಯೋಚನೆ ಅಮ್ಮನಿಗೆ.
ಈ ಇಕ್ಕಟ್ಟಾದ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ಬಂತಲ್ಲ ಹೆತ್ತವರಿಗೆ; ಶುರುವಾಯಿತು ಯೋಚನೆ ಮಗನಿಗೆ.
ಸುಮಾರು ಐವತ್ತು ವಷ೯ಗಳಿಂದ ಬದುಕಿ ಬಾಳಿದ ಊರನ್ನು ತೊರೆಯಲಾರದೆ, ಮಗನ ಮಾತಿಗೆ ಕಟ್ಟು ಬಿದ್ದು ಪಟ್ಟಣ ಸೇರಿದರೂ ಆಗಾಗ ಊರ ಕಡೆ ಹೋಗಿ ಬರುವ ರೂಢಿ ಮುಂದುವರೆದಿತ್ತು. ಮೊದ ಮೊದಲು ಎಲ್ಲವೂ ಚೆನ್ನಾಗಿಯೆ ಇತ್ತು. ಯಾವಾಗ ಇವರ ವಿಷಯ ಗೊತ್ತಾಯಿತೊ ಆತ್ಮೀಯರೂ ಆಡಿಕೊಳ್ಳಲು ಶುರು ಮಾಡಿದರು. ಮಗನಲ್ಲಿ ಹೇಳಿಕೊಳ್ಳದೆ ಒಳಗೊಳಗೆ ಕೊರಗುತ್ತಿದ್ದಳವಳು. ಕ್ರಮೇಣ ಊರಿಗೆ ಹೋಗುವುದನ್ನೆ ಕಡಿಮೆ ಮಾಡಿದಳು. ನಮ್ಮ ಬದುಕು ನಮಗೆ ಅನ್ನುವ ನಿಟ್ಟುಸಿರು. ಸಿಟಿ ಸೇರಿದ ಮೇಲೆ ಗಂಡನ ಅಕಾಲಿಕ ಮರಣ ಮಗನೇ ಅವಳಿಗೆ ಸವ೯ಸ್ವ.
ದೂರದ ಆಸೆ ಹೊತ್ತು ಇರುವ ದುಡ್ಡು ಸುರಿದು ಒಂದು ಸೈಟು ತೆಗೆದಿದ್ದಾಯಿತು. ಮುಂದೆ ಮನೆ ಕಟ್ಟುವ ಯೋಚನೆ. ಆದರೆ ಮೋಸ ಹೋದೆ ಅನ್ನುವುದು ಗೊತ್ತಾಗಿದ್ದು ಬಿ.ಡಿ.ಎ.ಯವರು ವಕ್ಕರಿಕೊಂಡಾಗಲೆ. ಸೈಟು ಕೊಟ್ಟವನು ನಾಪತ್ತೆ. ಏನೊ ಓದಿ ಕೆಲಸ ಸೇರಿಕೊಂಡಿದ್ದರಿಂದ ಬಚಾವು. ಆದರೂ, ಜನ ಹಿಂದಿನಿಂದ ಮಾತಾಡಿಕೊಳ್ಳುವುದು ಮನಸ್ಸಿಗೆ ತುಂಬ ಹಚ್ಚಿಕೊಂಡಿದ್ದ ಮಗ. ಅಪ್ಪನ ಜಮೀನು ಮಾರಿದ ಹಣ ನಾನು ಕಳೆದುಬಿಟ್ಟೆ ಅನ್ನುವ ಪಾಪ ಪ್ರಜ್ಞೆ ಸದಾ ಖಿನ್ನನಾಗಿ ಇರುವಂತೆ ಮಾಡಿತು. ಯಾರೊಂದಿಗೂ ಮಾತಿಲ್ಲ ಕಥೆಯಿಲ್ಲ. ಸದಾ ಚಟುವಟಿಕೆಯಿಂದ ಇದ್ದ ಮಗ ಹೀಗಾದನಲ್ಲ ಅಂತ ತಾಯಿ ಕರುಳು ಚುರಕ್ ಅನ್ನುತ್ತದೆ.
ಇದೆ ಚಿಂತೆಯಲ್ಲಿ ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡಲು ಶುರುವಾಯಿತು. ಪೇಲವ ಕಣ್ಣಿನಿಂದ ಮಗನ ಮುಖವನ್ನು ನೋಡುತ್ತ ಕಣ್ಣೀರು ಸುರಿಸುವುದು, ಸಮಾಧಾನ ಮಾಡಿಕೊಳ್ಳುವುದು.
ಅಜ್ಜೀ, ಪಕ್ಕದ ಮನೆ ಸರಳಳ ಮಗಳು ಆಗಾಗ ಬಂದು ಇವರ ಮನೆಯಲ್ಲಿ ಠಿಖಾಣಿ. ಅವಳಿರುವಷ್ಟು ಹೊತ್ತು ಸ್ವಲ್ಪ ಮಗನ ಮುಖದಲ್ಲಿ ನಗು. ಅವಳಾಡುವ ಒಂದೊಂದು ಮಾತು, ತುಂಟತನ ಅವನಿಗೆ ತುಂಬಾ ಇಷ್ಟ. ಎತ್ತಿ ಕಾಲ ಮೇಲೆ ಕೂಡಿಸಿಕೊಂಡು ಮುದ್ದು ಮಾಡಿ ಚಾಕಲೇಟ ಕೊಟ್ಟಾಗಲೆ ಅವಳು ಹೋಗೋದು.
ಪಾಪ ತಂದೆ ಇಲ್ಲ. ತಾಯಿ ಯಾವುದೊ ಪ್ರೈವೇಟ್ ಶಾಲೆಯಲ್ಲಿ ಟೀಚರ. ಬರುವ ಸಂಬಳದಲ್ಲಿ ಅಚ್ಚುಕಟ್ಟಾಗಿ ಜೀವನ ನಡೆಯುತ್ತಿದೆ. ಇವರಂತೆ ಅವಳದು ಒಂದು ಸಂಸಾರ.
ಈ ಒಡನಾಟ ದಿನೆ ದಿನೆ ಆ ಮಗು ಎಷ್ಟು ಹಚ್ಚಿಕೊಂಡಿತೆಂದರೆ ಸದಾ ಇವರ ಮನೆಯಲ್ಲಿಯೆ ಇರೋದು. ಅವರಮ್ಮ ಸದಾ ಇವರ ಮನೆಗೆ ಬಂದು ಮಾತಾಡಿ ಮಗಳನ್ನು ಸಮಜಾಯಿಸಿ ಮಾಡಿ ಕರೆದುಕೊಂಡು ಹೋಗುವುದು. ಹೀಗೆ ಸುಮಾರು ತಿಂಗಳು ಕಳೆಯುವುದರಲ್ಲಿ ಮಗನ ನಡೆಯಲ್ಲಿ ಏನೊ ಬದಲಾವಣೆ ಆ ತಾಯಿ ಗುರುತಿಸುತ್ತಾಳೆ. ಆದರೆ
ಮಗನಲ್ಲಿ ಕೇಳಲು ಭಯ. ತನ್ನ ಊಹೆ ತಪ್ಪಾಗಿದ್ದರೆ. ಸದ್ಯ ಮಗನಲ್ಲಿ ಬದಲಾವಣೆ ಆಗುತ್ತಿದೆಯಲ್ಲ. ಮೊದಲಿನಂತಾದರೆ ಸಾಕಪ್ಪ. ನನ್ನಲ್ಲೂ ಆರೋಗ್ಯ ಸುಧಾರಿಸುತ್ತಿದೆ. ನಾಲ್ಕು ದಿನ ಮಗಳ ಮನೆಗೆ ಹೋಗಿ ಬರೋಣ ಅನ್ನೊ ತೀಮಾ೯ನಕ್ಕೆ ಬರುತ್ತಾಳೆ.
“ಸಾಗರ ಬಾರೊ ಇಲ್ಲಿ. ನಾನು ಮಗಳ ಮನೆಗೆ ಹೋಗಬೇಕು. ಕಳಿಸಿಕೊಡು. ನಾಳೆ ಶನಿವಾರ ಅಲ್ವಾ, ರಜೆ ಇದೆಯಲ್ಲ.” “ಆಗಲ್ಲ ನನಗೆ ಯಾವುದೊ ಇಂಟವ್ಯೂ ಇದೆ. ಹೋಗಬೇಕು.” “ಸರಿ ಬಿಡು, ಪಕ್ಕದ ಮನೆ ಸರಳನ್ನ ಕರೆದುಕೊಂಡು ಹೋಗ್ತೀನಿ. ಆ ದಿನ ಬರ್ತೀಯ ನನ್ನ ಮಗಳ ಮನೆಗೆ ಹೋಗಿಬರೋಣ ಅಂತ ಕೇಳಿದ್ದೆ, ಹೂ ಅಂದಿದ್ಲು. ನನ್ನ ಬಿಟ್ಟು ಬರ್ತಾಳೆ. ನಾನು ನಾಲ್ಕು ದಿನ ಬರೋಲ್ಲ ಕಣೊ.” ” ಆಯ್ತಮ್ಮ.” ಮಗ ಯಾಕೊ ನಗುತ್ತಿದ್ದಾನಲ್ಲ! ಹಳೆ ಜೀವ ಆದರೂ, ಬಲು ಸೂಕ್ಷ್ಮ.
“ಅಮ್ಮ, ಏನಮ್ಮ ಇದ್ದಕ್ಕಿದ್ದಂತೆ ಬಂದೆ. ಫೋನ್ ಕೂಡ ಮಾಡಿಲ್ಲ. ಅಣ್ಣ ಎಲ್ಲಿ? ಇವರು ಪಕ್ಕದ ಮನೆ ಸರಳ ಅಲ್ಲವಾ? ಗುರುತೆ ಸಿಗುತ್ತಿಲ್ಲ. ಸ್ವಲ್ಪ ದಪ್ಪ ಆಗಿದಿರಾ. ಎಷ್ಟು ಚೆನ್ನಾಗಿ ಕಾಣುತ್ತೀರಾ ಈಗ. ” ಮಗಳ ಮಾತು ಅಮ್ಮನಲ್ಲಿ ಏನೊ ಲೆಕ್ಕಾಚಾರ ಶುರುವಾಯಿತು.
ಮಧ್ಯಾಹ್ನದ ಊಟದ ನಂತರ ಸರಳ ಹೊರಟಳು ಮಗಳ ಕರೆದುಕೊಂಡು. ಟಾ ಟಾ ಅಜ್ಜಿ. ಬೇಗ ಬನ್ನಿ. ಆಂಟಿ ಬೈ.
ರಾತ್ರಿ ಮಗಳ ಜೊತೆ ಸಾಕಮ್ಮನ ಮಾತು ಶುರುವಾಯಿತು. ” ಅಮ್ಮ ನಿಜನ ನೀ ಹೇಳುತ್ತಿರುವುದು.” ” ಹೂ ಕಣೆ ಸಾಗರ ಇವಳಿಂದಾಗಿ ತುಂಬಾ ಬದಲಾಗಿದಾನೆ. ಪಾಪ ಜೀವನದಲ್ಲಿ ಏನೊ ನಡೆದು ಹೋಯಿತು. ಒಳ್ಳೆ ಹುಡುಗಿ. ನಾವ್ಯಾಕೆ ಅವರಿಬ್ಬರಿಗೂ ಮದುವೆ ಮಾಡಬಾರದು? ” “ಏನಮ್ಮ, ನೀನು ಈ ಮಾತು ಹೇಳುತ್ತಿದ್ದೀಯಾ! ನನಗೆ ನಂಬೋಕೆ ಆಗುತ್ತಿಲ್ಲ. ” “ಹೌದು ಕಣಮ್ಮ. ನಾನು ತಪ್ಪು ಮಾಡಿಬಿಟ್ಟೆ ಅವನಿಗೆ ಹುಡುಗಿ ನೋಡುವ ವಿಷಯದಲ್ಲಿ. ಮನೆತನ, ಜಾತಕ ಹಾಗೆ ಹೀಗೆ ಅಂತ ಸಬೂಬು ತೆಗಿಬಾರದಿತ್ತು. ಅನುಭವಿಸಿದ ನೋವು ಎಲ್ಲವನ್ನೂ ಬದಲಾಯಿಸುತ್ತದೆ. ಹಾಗೆ ನಾನೂ.” ಆದರೆ ವಯಸ್ಸಿನ ಅಂತರ ಇದೆಯಲ್ಲಮ್ಮ. ಈ ಸಮಾಜ ಒಪ್ಪುತ್ತ. ” “ಹೌದಲ್ಲ, ನನಗೆ ಇದರ ಬಗ್ಗೆ ಹೊಳಿಲೆ ಇಲ್ಲ. ”
ಮತ್ತೆ ಮಗನ ಯೋಚನೆ ಸುತ್ತಿಕೊಂಡಿತು. “ಇರಮ್ಮ ಸುಮ್ಮನೆ ಏನೇನೊ ಹೇಳಿ ನನ್ನ ತಲೆ ಕೆಡಿಸಬೇಡ. ಅಣ್ಣನನ್ನು ಸರಿಯಾಗಿ ವಿಚಾರಿಸದೆ ನಿನ್ನಷ್ಟಕ್ಕೆ ಮನಸ್ಸಿನಲ್ಲಿ ಮಂಡಿಗೆ ತಿನ್ನ್ತಾ ಇದಿಯಾ. ಬಾ ಮಲಗು. ಬೆಳಿಗ್ಗೆ ಅಣ್ಣನ ಹತ್ತಿರ ನಾನೆ ಮಾತಾಡುತ್ತೀನಿ.”
ಆದರೆ ಸಾಕಮ್ಮನ ತಲೆಯಲ್ಲಿ ಹುಳ ಹರಿದಾಡುತ್ತಿತ್ತು. ನಿದ್ದೆಯಿಲ್ಲದೆ ಹೊರಳಾಡಿ ಬೆಳಗಾಗುವುದನ್ನೆ ಕಾಯುತ್ತಿದ್ದರು.
“ಹಲೊ ಅಣ್ಣ ಹೇಗಿದ್ದಿಯಾ? ಅಮ್ಮನ ಜೊತೆ ನೀನು ಬಂದಿಲ್ಲ. ಬೇಜಾರಾಯಿತು. ಸರಿ ಏನಾಯಿತು ಇಂಟರವ್ಯೂ.” “ಸೆಲೆಕ್ಟ ಆದೆ ಕಣೆ. But ಸಿಂಗಪುರಗೆ ಹೋಗಬೇಕಂತೆ. ನಾನು ಏನು ಹೇಳಲಿಲ್ಲ. ಅಮ್ಮ ಬರಲಿ ಮಾತಾಡೋಣ ಅಂತ.”
“ಅಮ್ಮ ನಾಳೆನೆ ಅಲ್ಲಿಗೆ ಬರ್ತಿದಾರೆ. ಅವರಿಗೆ ನನಗಿಂತ ನಿನ್ಮೇಲೆ ಪ್ರೀತಿ ಜಾಸ್ತಿ.” “ಸರಿ, ಜೊತೆಗೆ ನೀನು ಬರ್ತೀಯಲ್ಲ. ಬಾ ಮಾತಾಡೋಣ.”
“ಏನೆ, ಏನಂತ ಹೇಳಿದ? ” ” ಇಲ್ಲಮ್ಮ, ನಾ ಏನು ಕೇಳಲಿಲ್ಲ. ನಾಳೆ ನಿನ್ನ ಜೊತೆ ಬರ್ತೀನಲ್ಲ, ಆಗಲೆ ಮಾತಾಡಿದರೆ ಆಯಿತು.” “ಸರಿ ಬಿಡು.”
ಮಾರನೆ ದಿನ ಬೆಳಗ್ಗೆ ಬೇಗ ಎದ್ದು ಹೊರಡೋದಕ್ಕೆ ರೆಡಿಯಾಗಿ ಕುಳಿತರು ಸಾಕಮ್ಮ. ಮುಖದಲ್ಲಿ ಮೊದಲಿನ ದಿನದ ಉತ್ಸಾಹ ಇರಲಿಲ್ಲ. ಯಾಕೊ ಮನಸಿನಲ್ಲಿ ತಳಮಳ. ದೇವರಲ್ಲಿ ಆಗಾಗ ಅದೇನೊ ಹೇಳಿ ಮೊರೆ ಇಡುತ್ತಿದ್ದರು.
“ಯಾಕೊ ಇವತ್ತು ಕೆಲಸಕ್ಕೆ ಹೋಗಲಿಲ್ವಾ” ಮನೆಗೆ ಬಂದ ಹಾಗೆ ಮಗನ ಮುಖ ಸೂಕ್ಷ್ಮವಾಗಿ ದೃಷ್ಟಿಸಿ ನೋಡಿ ಕೇಳಿದರು. “ಇಲ್ಲಮ್ಮ, ನೀವೆಲ್ಲ ಬರ್ತೀದಿರಲ್ಲ ಅಂತ ರಜೆ ಹಾಕಿದೆ. ” ಆದರೆ ಒಂದು ರೀತಿ ನಿರಾಸೆ ಮನೆ ಮಾಡಿತ್ತು ಮಗನ ಮುಖದಲ್ಲಿ. Face is the index of mind.
“ಯಾಕೊ, ಅಣ್ಣ ಏನಾಯಿತು. ಅಮ್ಮ ಹೇಳುತ್ತಿದ್ದಳು, ನೀನು ಇತ್ತೀಚೆಗೆ ಲವಲವಿಕೆಯಿಂದ ಖುಷಿಯಾಗಿದಿಯಾ ಅಂತ. ಯಾಕೆ ಹೀಗಿದಿಯಾ”. ಏನಿಲ್ಲ, ಸ್ವಲ್ಪ ಹೊರಗಡೆ ಹೋಗಿ ಬರೋಣ ಬರ್ತೀಯಾ?” “ಆಯಿತು, ನಡಿ ಹೋಗೋಣ. ಅಮ್ಮ ಇಲ್ಲೆ ಹೋಗಿ ಬರ್ತೀವಿ.”
ಅಲ್ಲೊಂದು ಪಾಳು ಬಿದ್ದ ಮಂಟಪ. ಅದೆಷ್ಟು ಜನ ಈ ಕಲ್ಲು ಬೇಂಚಿನ ಮೇಲೆ ಕುಳಿತು ಕಷ್ಟ ಸುಃಖ ಹಂಚಿಕೊಂಡಿದ್ದಾರೊ! ಆದರೆ ಯಾರ ಸಮಸ್ಯೆಯನ್ನೂ ಕೇಳಿಸಿಕೊಳ್ಳಲಾಗದ ಕಲ್ಲು ಮಳೆ ಬಿಸಿಲಿಗೆ ಮೈ ಒಡ್ಡಿ ತಟಸ್ಥವಾಗಿ ಇದ್ದಲ್ಲೆ ಇದ್ದಿತ್ತು ಅದೆಷ್ಟೋ ವಷ೯ಗಳಿಂದ.
ಕಲ್ಲಿನ ಬೇಂಚಿನ ಮೇಲೆ ಕುಳಿತು ಮಾತು ಮುಂದುವರೆಯಿತು. “ಶಾರದಾ, ನಾನು ನಿನ್ನ ಹತ್ತಿರ ನನ್ನ ಮನದೊಳಗಿನ ಮಾತು ಹೇಳಬೇಕು. ನಾನು ತೆಗೆದುಕೊಂಡ ನಿದಾ೯ರ ಅದೆಷ್ಟು ಸರಿಯೊ ಗೊತ್ತಿಲ್ಲ; ಆದರೂ ನೀನು ಅಮ್ಮನ ಜೊತೆ ಮಾತಾಡಿ ಅವರನ್ನು ಒಪ್ಪಿಸುವ ಜವಾಬ್ದಾರಿ ನಿನ್ನದು.”
“ಆಯಿತು ಅದೇನು ಅಂತ ಹೇಳು.”
” ನಾನು ಸಿಂಗಪೂರಗೆ ಹೋಗಬೇಕು ಅಂತ ನಿದಾ೯ರ ಮಾಡಿದಿನಿ. Mostly ಅಲ್ಲೆ ಇರ್ತೀನಿ. ಮತ್ತೆ ಬರೊ ಯೋಚನೆ ಇಲ್ಲ. ನನಗೆ ಈ ಜನರಿಂದ ದೂರ ಹೋಗಬೇಕು ಅನಿಸುತ್ತದೆ. ಅಮ್ಮನ ಜವಾಬ್ದಾರಿ ನೀನು ತೆಗೆದುಕೊಳ್ಳಲು ಸಾಧ್ಯನಾ? ನಾನು ಆಗಾಗ ಬಂದು ಹೋಗುತ್ತೇನೆ.”
“ಏಯ್, ಏನೊ ನೀನು, ಹೀಗೆ ಹೇಳುತ್ತಿದ್ದೀಯಾ? ಅಮ್ಮ ನೋಡಿದರೆ ಬೇರೆ ಏನೊ ಹೇಳಿದರು.” ಅದಾ ಅದೆಲ್ಲ ಮುಗಿದ ಕಥೆ. ” “ಬಾ ಹೋಗೋಣ”.
ಶಾರದಾ ಮನಸ್ಸಿನಲ್ಲಿ ಒಂದು ತೀಮಾ೯ನಕ್ಕೆ ಬರುತ್ತಾಳೆ. ಸಂಜೆ ಸರಳ ಬರೋದನ್ನೆ ಕಾಯುತ್ತಿದ್ದು, ಅವರ ಮನೆಗೆ ಹೋಗುತ್ತಾಳೆ. “ರೀ ಸರಳಾ ನಾನು ನಿಮ್ಮ ಹತ್ತಿರ ಸ್ವಲ್ಪ personal ಆಗಿ ಮಾತಾಡಬೇಕು.” ” ಸರಿ ಬನ್ನಿ ಕಾಫಿ ಕುಡಿತಾ ಮಾತಾಡೋಣ.”
“ಶಾರದಾ ಇದೆಲ್ಲ ನಡೆಯೋಕೆ ಸಾಧ್ಯ ಇಲ್ಲ. ಈಗಾಗಲೆ ಈ ಜೀವನಕ್ಕೆ ಒಗ್ಗಿಕೊಂಡುಬಿಟ್ಟಿದೀನಿ. ನಿಮ್ಮಣ್ಣನ ಮದುವೆ ಆದರೆ ನಾನು, ಮಗಳು ಸುಃಖವಾಗಿ ಇರುತ್ತೇವೆ ನಿಜ. ಆದರೆ ಈ ಸಮಾಜ ಹೇಗೆ ಎದುರಿಸುವುದು? ಈಗಾಗಲೆ ನಾನೂ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೀನಿ. ವಯಸ್ಸಿನಲ್ಲಿ ನಾನು ಅವನಿಗಿಂತ ಐದು ವಷ೯ ದೊಡ್ಡವಳು. ಅವನ ಜೀವನ ಹಾಳಾಗುತ್ತದೆ ನನ್ನ ಮದುವೆ ಆದರೆ. ಬೇರೆ ಕಡೆ ಹುಡುಗಿ ನೋಡಿ ಮದುವೆ ಮಾಡಿ. ನಾನು ನಿಮ್ಮಣ್ಣನಿಗೆ ಆಗಲೆ ಹೇಳಿದಿನಿ.”
“ಹಾಗಲ್ಲ ಸರಳ. ನಮ್ಮಮ್ಮ ಹಳೆ ಕಾಲದವರು. ಅವರೆ ಒಪ್ಪಿದಾರೆ. ಸಮಾಜಕ್ಕೇನು, ಹೇಗಿದ್ದರು ಸಬೂಬು ತೆಗೆದು ಆಡಿಕೊಳ್ಳುತ್ತಾರೆ. ಆದರೆ ನಮ್ಮ ಕಷ್ಟಕ್ಕೆ ಯಾರೂ ಆಗೊಲ್ಲ. ನೀನು ಹೂ ಅನ್ನು. ಅಮ್ಮನ ಜವಾಬ್ದಾರಿ ನನಗಿರಲಿ. ನೀನು ಮದುವೆ ಆಗಿ ಅಣ್ಣನ ಜೊತೆ ಸಿಂಗಪೂರಲ್ಲಿ settle ಆಗು. ನಿನ್ನ ಮಗಳನ್ನು ಯಾವುದಾದರೂ ಬೋರಡಿಂಗ ಸ್ಕೂಲಿಗೆ ಸಧ್ಯಕ್ಕೆ ಸೇರಿಸೋಣ. ಒಪ್ಪಿಕೊ ಸರಳ.”
ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ಸಾಕಮ್ಮ ಕುಸಿದು ಬಿದ್ದರು. ಶಬ್ದ ಕೇಳಿ ಗಾಬರಿಯಿಂದ “ಅಮ್ಮ ಏನಾಯಿತಮ್ಮ.” ಎಚ್ಚರ ಇಲ್ಲ.
ಡಾಕ್ಟರ್,” ನೋಡಿ ಮೇಡಮ್ ಇವರಿಗೆ ಹೃದಯಾಘಾತ ವಾಗಿದೆ. ಪ್ರಜ್ಞೆ ಬಂದ ಮೇಲೆ ಏನಾಗುತ್ತೊ ನಾ ಹೇಳಲಾರೆ. ಪುನಃ ಹೀಗೆ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ”
ನೋಡಿ ಸರಳ ಅಮ್ಮನ ಜೀವ ನಿಮ್ಮ ನಿಧಾ೯ರ ಬದಲಾಯಿಸೋದರಲ್ಲಿದೆ. ಬೇಗ ತೀಮಾ೯ನಕ್ಕೆ ಬನ್ನಿ.” ಇದುವರೆಗೂ ಅದುಮಿಟ್ಟಿಕೊಂಡಿರುವ ಅವನ ಮೇಲಿನ ಪ್ರೀತಿ, ಇವರೆಲ್ಲರ ಆತ್ಮೀಯತೆ ಅವಳ ಕಣ್ಣು ಮಂಜಾಯಿತು. ಎದುರಿಗೆ ಬಂದ ಸಾಗರನ ಮುಖ ಅವಳಲ್ಲಿ ಮಂದಹಾಸ ಮೂಡಿಸಿತು.
ಹಳೆಯ ಜೀವ ಕಣ್ಣು ಬಿಟ್ಟಾಗ ಅವಳಿಗೆ ಕಂಡಿದ್ದು ನಗುಮುಖದ ಸಾಗರ, ಸರಳರ ಜೋಡಿ. ಕಾಲ ಬುಡದಲ್ಲಿ ಶಾರದ, ಸರಳಳ ಮಗಳು.
ಎಲ್ಲರ ಮುಖದಲ್ಲಿ ಸಂತೃಪ್ತಿಯ ನಗೆ.
Comments
ಉ: ಸಂತೃಪ್ತಿ
ಒಳ್ಳೆಯ ಮುಕ್ತಾಯ! ಸಂತೃಪ್ತಿ ಕೊನೆ ತನಕ ಇರಲೆಂದು ಹಾರೈಸುವೆ.
ಉ: ಸಂತೃಪ್ತಿ
ತಮ್ಮ ಹಾರೈಕೆಗೆ ಧನ್ಯವಾದಗಳು ಸರ್.