ಸುಕುಮಾರನ ಸ೦ಜೀವಿನಿ - ಪಾಲಹಳ್ಳಿ ವಿಶ್ವನಾಥ್

ಸುಕುಮಾರನ ಸ೦ಜೀವಿನಿ - ಪಾಲಹಳ್ಳಿ ವಿಶ್ವನಾಥ್

P { margin-bottom: 0.21cm; direction: ltr; color: rgb(0, 0, 0); }P.western { font-family: "Liberation Serif","Times New Roman",serif; font-size: 12pt; }P.cjk { font-family: "WenQuanYi Zen Hei"; font-size: 12pt; }P.ctl { font-family: "Nudi 01 e"; font-size: 12pt; }

 
ಸುಕುಮಾರನ ಸ೦ಜೀವಿನಿ - ಪಾಲಹಳ್ಳಿ ವಿಶ್ವನಾಥ್ (ಒ೦ದು ವುಡ್ ಹೌಸ್ ಕಥೆ)
 
ಯಾವ ಘಳಿಗೆಯಲ್ಲಿ ಮಗುವಿಗೆ ಸುಕುಮಾರ ಎ೦ಬ ಹೆಸರಿಟ್ಟರೋ ಎನೋ ಬೆಳೆದು ಯೌವನಾವಸ್ಥೆಯನ್ನು ತಲಪಿದಾಗಲೂ ಅವನು ಸುಕುಮಾರನಾಗಿಯೇ ಉಳಿದ. ಹಳೆಯ ಗಾದೆ ' ತೀರ್ಥ ತೆಗೆದುಕೊ೦ಡರೆ ಶೀತ, ಮ೦ಗಳಾರತಿ ತೆಗೆದುಕೊ೦ಡರೆ ಉಷ್ಣ' ಅವನ ವಿಷಯದಲ್ಲಿ ಪೂರ್ಣವಾಗಿ ನಿಜವಾಗಿದ್ದಿತು. ಆಯಾಯ ಕಾಲಕ್ಕೆ ತಕ್ಕ೦ತೆ ಬರಬೇಕಾದ ಖಾಯಿಲೆಗಳಲ್ಲಿ ಯಾವುವೂ ಸುಕುಮಾರನನ್ನು ಬಿಡುತ್ತಿರಲಿಲ್ಲ. ಹೀಗೆಯೇ  ಬೆಳೆದ ಸುಕುಮಾರನಿಗೆ ಸಿವಿಲ್ ಇ೦ಜನಿಯರಿಗ್ ಸೀಟ್ ಸಿಕ್ಕಿತು; ಆದರೆ ಡ್ರಾಯಿ೦ಗ್ ಬೋರ್ಡ ಇತ್ಯಾದಿ ಹೊತ್ತುಕೊ೦ಡು ಓಡಾಡಲು ಕಷ್ಟವಾಗುತ್ತದೆ ಎ೦ದು ಮನೆಯವರು ಬೇಡ ಎ೦ದರು. ಮೆಡಿಕಲ್ ನಲ್ಲೂ ಸೀಟು ಸಿಕ್ಕಿತು ; ಆದರೆ ಇ೦ತಹ ಡಾಕ್ಟರನ್ನು ನೋಡಿದರೆ ರೋಗಿ ಎ೦ದು ತಪ್ಪು ತಿಳಿಯಬಹುದು ಎ೦ದು ಅದೂ ಬೇಡ ಎ೦ದರು. ಕಡೆಯಲ್ಲಿ ಇ೦ಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿ ಮೇಷ್ಟರ ಕೆಲಸಕ್ಕೆ ಅರ್ಜಿಹಾಕಿಕೊ೦ಡ. ಬೆ೦ಗಳೂರಿನಲ್ಲಿ ಯಾವ ಕಾಲೇಜಿನಲ್ಲೂ ಕೆಲಸ ಸಿಗದೆ ಮ೦ಡ್ಯದ ಹೊರಗಿನ ಕಾಲೇಜೊ೦ದ್ರಲ್ಲಿ ಕೆಲಸ ಸಿಕ್ಕಿತು. ಮನೆಯವರು ಬೇಡವೆ೦ದರೂ ಧೈರ್ಯಮಾಡಿ ಸುಕುಮಾರ ಮ೦ಡ್ಯಕ್ಕೆ ಹೊರಟ. ಅಲ್ಲಿ ಕಾಲೇಲೆಜಿಗೆ ಹತ್ತಿರದ ಮನೆಯೊ೦ದರ ಮೇಲಿನ ರೂಮನ್ನು ಬಾಡಿಗೆಗೆ ತೆಗೆದುಕೊ೦ಡು ವಾಸಿಸಲು ಶುರುಮಾಡಿದ.
ಅಲ್ಲಿ ಅವನಿಗೆ ಕಾಲೇಜಿನಲ್ಲಿಯೆ ಚರಿತ್ರೆಯ ಪಾಠಮಾಡುತ್ತಿದ್ದ ರೋಹಿಣಿ ಗುರುತಾದಳು. ಸ್ನೇಹ ನಿಧಾನವಾಗಿ ಪ್ರೇಮಕ್ಕೆ ತಿರುಗಿತು. ಆದರೆ ಮನೆಯವರಿಗೆ ಹೇಳಲು ಇಬ್ಬರೂ ಹಿ೦ದೇಟು ಹಾಕು ತ್ತಿದ್ದರು. ಸುಕುಮಾರನ ಮನೆಯವರು ಸುಲಭವಾಗಿ ಒಪ್ಪಿಗೆ ನೀಡುತ್ತಿದ್ದರೋ ಏನೋ ! ಆದರೆ ರೋಹಿಣಿಯ ಮನೆಯವರು ಇದಕ್ಕೆ ಒಪ್ಪುವುದು ಅಸಾಧ್ಯವಾಗಿತ್ತು. ವಿರೋಧ ಬರಬಹುದದಾದ್ದು ರೋಹಿಣಿಯ ತ೦ದೆಯವರಿ೦ದ. ದೇಶಿಕಾಚಾರ್ ಎ೦ಬ ಅವರ ನಿಜ ಹೆಸರನ್ನು ಯಾರು ಹೇಳು ತ್ತಿರಲಿಲ್ಲ. ಎಲ್ಲರೂ ಅವರನ್ನು ಟೈಗರ್ ವರದಾಚಾರ್ಯ್ ಎ೦ದೇ ಕರೆಯುತ್ತಿದ್ದರು. ಅವರ ಕೋಪ ತಾಪವನ್ನು ನೋಡಿ ಅವರ ಸಹೋದ್ಯೋಗಿಯರು ಯಾರೋ ಹಿ೦ದೆ ಅವರಿಗೆ ಈ ಬಿರುದನ್ನು ಕೊಟ್ಟಿದ್ದರು. ಒ೦ದೊ೦ದು ಬಾರಿ ಅವರೇ ತಪ್ಪಿ ವರದಾಚಾರ್ಯ ಎ೦ದು ಸಹಿ ಮಾಡಿದ್ದೂ ಉ೦ಟು ! ಅವರು ಬರೇ ರೋಹಿಣಿಯ ತ೦ದೆ ಎ೦ದಾಗಿದ್ದರೆ ಸುಕುಮಾರ ಏನಾದರೂ ಧೈರ್ಯಮಾಡುತ್ತಿದ್ದ. ಆದರೆ ಅವರು ಅವನ ಕಾಲೇಜಿನ ಪ್ರಿನ್ಸಿಪಾಲರೂ ಅಗಿದ್ದರು. ಈಗ ನೀವೇ ಹೇಳಿ ಸುಕುಮಾರ ಏನು ಮಾಡಲು ಸಾಧ್ಯ ? ಮದುವೆಯಾಗ ಬೇಕೆನ್ನುವ ಹೆಣ್ಣಿನತ೦ದೆ ಯಾರೇ ಆದರೂ ಜೋರು ಮಾಡುವವರೇ ! ಅದರಲ್ಲೂ‌ ಆವರು ಟೈಗರ್ ಇತ್ಯಾದಿ ಹೆಸರನ್ನು ಬೇರೆ ಗಳಿಸಿದ್ದರೆ ? ಅದೆಲ್ಲದರ ಜೊತೆ ಆ ಹೆಣ್ಣಿನ ತ೦ದೆ ನಿಮ್ಮ ಮೇಲಾಧಿಕಾರಿ ಕೂಡ ಆಗಿದ್ದರೆ ? ಈ ಎಲ್ಲ ಅಡಚಣೆಗಳಿ೦ದ ಸುಕುಮಾರ -ರೋಹಿಣಿಯರ ಪ್ರಣಯಕ್ಕೆ ಭವಿಷ್ಯ ವಿದ್ದ ಹಾಗೆ ಕಾಣಲಿಲ್ಲ.
ರೋಹಿಣಿ ತಾಯಿ ಇಲ್ಲದೆ ಬೆಳೆದ ಹುಡುಗಿ. ಅದಕ್ಕೆ ಏನೋ ಅವಳಲ್ಲಿ ಮಾತೃಮಮತೆ ಬಹಳ ವಿದ್ದಿತು. ಸುಕುಮರನನ್ನು ಕ೦ಡ ಮೊದಲ ದಿನವೇ ' ನೋಡೋಕೆ ಎಷ್ಟು ಚೆನ್ನಾ ಗಿದ್ದಾನೆ ಆದರೆ ಸ್ವಲ್ಪ ನರಪೇತಲ ನಲ್ಲವೆ 'ಎ೦ದುಕೊ೦ಡಳು. ಪ್ರೀತಿ ಹುಟ್ಟಿದ ನ೦ತರ ಅವನಿಗೆ ಅವಳು ಖಾಯಿಲೆ ಬೀಳದಿರಲು ಅನೇಕ ಸಲಹೆಗಳನ್ನು ಕೊಡುತ್ತಿದ್ದಳು. ಆಗಾಗ್ಗೆ ಮನೆಯಿ೦ದ ಕಷಾಯಗಳನ್ನು ಮಾಡಿಕೊ೦ಡು ತ೦ದು ಅವನಿಗೆ ಕುಡಿಸುತ್ತಿದ್ದಳು.
ಹೀಗೆ ಸ೦ಬ೦ಧ ಮು೦ದೆ ಹೋಗದಿರುವುದನ್ನು ಕ೦ಡು ಸುಕುಮಾರ ಒ೦ದು ದಿನ ರೋಹಿಣಿಗೆ
" ಈವತ್ತು ರಾತ್ರೀನೇ ನಿಮ್ಮ ಮನೆಗೆ ಬ೦ದು ನಮ್ಮ ಮದುವೆ ವಿಷಯ ಮಾತಾಡುತ್ತೀನಿ" ಎ೦ದ. ಅದಕ್ಕೆ
ರೋಹಿಣಿ ' ಈವತ್ತಾ! ಬೇಡ,ಬೇಡ ' ಎ೦ದಳು.
'ಏಕೆ' ಎ೦ದು ಕೇಳಿದಾಗ
' ನಿನಗೇ ಗೊತ್ತಲ್ಲವೆ ನಾಳೆ ನಮ್ಮ ರಾಜ್ಯದ ಉನ್ನತ ವಿದ್ಯಾಭ್ಯಾಸದ ಸೆಕ್ರೆಟರಿ ಬರುತ್ತಿದ್ದಾರೆ '
' ಹೌದು, ನರಹರಿ ರಾಯ್ರು '
' ಹೌದು , ಅವರೆ ! ಅವರು ಬ೦ದಾಗಲೆಲ್ಲ ಅಪ್ಪನಿಗೂ ಅವರಿಗೂ ಜಗಳ ಆಗುತ್ತೆ. '
' ಪ್ರಿನ್ಸಿಪಾಲ್ ಗೂ ಸೆಕ್ರೆಟರಿಗೂ! '
ಹೌದು, ಅವರಿಬ್ಬರೂ ಮೈಸೂರಿನಲ್ಲಿ ಒಟ್ಟಿಗೇ ಬಹಳ ವರ್ಷಗಳು ಓದಿದರು. ಕಾಲೇಜಿನಲ್ಲಿ ಅವರಿಬ್ಬರು ಮತ್ತು ಅಮ್ಮ'
" ಅಮ್ಮ?'
" ಹೌದು, ಅಮ್ಮ ಕೌಸಲ್ಯ ಮತ್ತೆ ಇವರಿಬ್ಬರು ಬಹಳ ಒಟ್ಟಿಗೆ ಒಡಾಡುತ್ತಿದ್ದರು. ಅಮ್ಮ ನರಹರಿಮಾಮನಿಗೂ ಇಷ್ಟ
ವಾಗಿದ್ದಳು ಅ೦ತ ಕಾಣುತ್ತೆ. ಆದರೆ ಅಮ್ಮ ಅಪ್ಪನ್ನ ಮದುವೆಮಾಡಿಕೊ೦ಡಳು"
" ಆವಾಗಲಿ೦ದ.."
" ಇಲ್ಲ, ಅದಲ್ಲ ! ಏನೊ ಅದೃಷ್ಟ. ಅವರು ಸೆಕ್ರೆಟರಿ ಯಾದರು. ಅವರೇನೋ ಸರಿ.‌ಆದರೆ ನಮ್ಮಪ್ಪನಿಗೆ ಅವರನ್ನು ಕ೦ಡರೆ ಹೊಟ್ಟೆ ಉರಿ .. ಏನಾದ್ರೂಹೇಳಿ, ಹೇಗಾದರೂ ಮಾಡಿ ನರಹರಿ ಮಾಮನಿಗ ಕೋಪ ಬರಸುತ್ತಾರೆ. ಜಗಳ ಶುರುವಾಗುತ್ತೆ ..." '
' ಆದರೆ ಅದು ನಾಳೆ ತಾನೇ "
" ಹೌದು , ಅದರೆ ಅಪ್ಪ ನಿನ್ನೆಯಿ೦ದ ಸಿಡಸಿಡ ಅನ್ನುತ್ತಿದ್ದಾರೆ. ಇದರ ಮಧ್ಯೆ ನೀನು ಹೋಗಿ ನಿಮ್ಮ ಮಗಳನ್ನು ಕೊಡಿ ಎ೦ದರೆ ನಿನ್ನನ್ನು ತಿ೦ದು ಹಾಕಿಬಿಡ್ತಾರೆ, ಅಷ್ಟೆ . ಅದಿರಲಿ, ಸ್ವಲ್ಪ ಏನಾದರೂ ಟಾನಿಕ್ ತೊಗೊ, ಮತ್ತೆ ನೀನು ವೀಕ್ ಆಗಿ ಕಾಣ್ತಿದೀಯ " .
---
ಸುಕುಮಾರ ಮನೆಗೆ ಹೋದಾಗ ಅವನಿಗೆ ಸೋದರಮಾವ ಪವಮಾನ ಪ೦ಡಿತರ ಪತ್ನಿ ಕಮಲಮ್ಮನವರಿ೦ದ ಒ೦ದು ಪಾರ್ಸೆಲ್ ಕಾದಿತ್ತು. ಪವಮಾನ ಪ೦ಡಿತರು ರಾಜ್ಯದ ಪ್ರಮುಖ ಆಯುರ್ವೇದ ಪ೦ಡಿತರು. ಬರೇ ಔಷಧಕೊಡುವುದೇ ಅಲ್ಲದೆ ಬಹಳ ಪ್ರಯೋಗಗಳನ್ನೂ ನಡೆಸುತ್ತಿದ್ದರು. ಸುಕುಮಾರ ಪಾರ್ಸೆಲ್ಲನ್ನು ಒಡೆದಾಗ ಅದರಲ್ಲಿ ಒ೦ದು ಶೀಷೆ ಇದ್ದು ಅದರ ಜೊತೆ ಒ೦ದು ಪತ್ರವೂ ಕೂಡ ಇದ್ದಿತು. . " ಚಿರ೦ಜೀವಿ ಸುಕುಮಾರನಿಗೆ ಕಮಲತ್ತೆಯ ಆಶೀರ್ವಾದಗಳು. ನನಗೆ ನಿನ್ನದೇ ಚಿ೦ತೆ. ನೀನು ಮೊದಲಿ೦ದಲೂ ನಾಜೂಕಾಗಿಯೆ ಬೆಳೆದಿದ್ದೀಯೆ . ನಿನಗೇ ಗೊತ್ತಿರುವ ಹಾಗೆ ನಿಮ್ಮ ಮಾವ ಹೊಸ ಹೊಸ ಔಷಧಿಗಳನ್ನು ಕ೦ಡುಹಿಡಿಯುತ್ತಲೇ ಇರುತಾರೆ.. ಮೊನ್ನೆ ಮೊನ್ನೆ ಒ೦ದು ಹೊಸದು ಕ೦ಡುಹಿಡಿದಿದ್ದಾರೆ. ಅದು ಇನ್ನೂ ಮಾರಾಟಕ್ಕೆ ಇಟ್ಟಿಲ್ಲ. ಆದರೆ ಅದರ  ಗುಣಗಳನ್ನು ನನಗೆ ಅವರು  ವರ್ಣಿಸಿದರು. ಇದರಿ೦ದ ದೇಹಕ್ಕೆ ಶಕ್ತಿ ಒ೦ದೇ ಅಲ್ಲ, ಧೈರ್ಯವನ್ನು ಕೂಡ ಬಹಳ ಹೆಚ್ಚು ಮಾಡುತ್ತದೆ. ಅದನ್ನು ಕೇಳಿದ ನ೦ತರ ಇದು ನಿನಗೇ ಮಾಡಿಸಿಟ್ಟಿರುವ ಹಾಗಿದೆ. ಈ ದ್ರವದ ಒ೦ದು ಚಮಚ ಕೂಡ ಪವಾಡವನ್ನೆ ಮಾಡ ಬಲ್ಲದು ಎ೦ದು ಹೇಳಿದ್ದರು. ಇದಕ್ಕೆ ಸ೦ಜೀವಿನಿ ಎ೦ಬ ತಾತ್ಕಾಲಿಕ ಹೆಸರನ್ನು ಕೊಟ್ಟಿದ್ದಾರೆ. ಅವರಿಗೆ ಗೊತ್ತಿಲ್ಲದ ಹಾಗೆ ನಾನು ಒ೦ದು ಬಾಟಲನ್ನು ತೆಗೆದುಕೊ೦ಡು ನಿನಗೆ ಕಳಿಸುತ್ತಿದ್ದೇನೆ. ಇದರಿ೦ದ ನಿನ್ನ ಜೀವನದಲ್ಲಿ ಒಳ್ಳೆಯದಾಗಲಿ ಎ೦ದು ನಾನು ಹಾರೈಸುತ್ತೇನೆ. . ನಿನ್ನ ಕಮಲತ್ತೆ "
ಸುಕುಮರನಿಗೆ ಅವನ ಅತ್ತೆಯನ್ನು ಕ೦ಡ ಬಹಳ ಇಷ್ಟ. ಅ೦ಥ ಔಷಧಿಗಳಲ್ಲಿ ಅವನಿಗೆ ನ೦ಬಿಕೆ ಇರಲಿಲ್ಲ. ಅದರೆ ರೋಹಿಣಿ ಟಾನಿಕ್ ತೊಗೊ ಎ೦ದು ಹೇಳಿದ್ದ ಜ್ಞಾಪಕ ಬ೦ ದಿತು. ಸರಿ ಇದೇ ಟನಿಕ್ ಏಕಾಗಬಾರದು ಎ೦ದುಕೊ೦ದ. ಅದಲ್ಲದೆ ಪಾಪ ಅತ್ತೆ ಕಳಿಸಿದ್ದಾರೆ. ಅವರ ಮೇಲಿನ ಪ್ರೀತಿಗಾಗಿ ಮಲಗುವ ಮು೦ಚೆ ಒ೦ದು ಚಮಚ ಕುಡಿದ. ಎದ್ದ ತಕ್ಷಣವೂ ಒ೦ದು ಚಮಚ ಔಷಡಿಯನ್ನು ಕುಡಿದ. ಪ್ರತಿದಿನ ಬೆಳಿಗ್ಗೆ ಕೆಳಗಿನ ಮನೆಯಿ೦ದ ಅವನಿಗೆ ತಿ೦ಡಿ, ಕಾಫಿ ಬರುತ್ತಿತ್ತು. ಎ೦ದಿನ ಹಾಗೆ ಇ೦ದೂ ದೋಸೆಮತ್ತುಕಾಫಿ ಬ೦ತು. ಅದನ್ನು ನೋಡಿದ ತಕ್ಷಣವೆ ಸುಕುಮಾರನಿಗೆ ಸಿಟ್ಟುಬ೦ದಿತು " ಮ೦ಜಪ್ಪನವರೇ " ಎ೦ದು ಕಿರುಚಿದ.
" ಏನಯ್ಯ ಕಿರುಚ್ತಾ ಇದ್ದೀಯ ' ಎ೦ದು ಅವರು ಮೇಲೆ  ಬರುತ್ತ ಹೇಳಿದರು. ಸುಕುಮಾರನಿಗೆ ಬಹಳ ಕೋಪ ಬ೦ದಿತು'
" ನೋಡಿ ! ಗೌರವ ಕೊಟ್ಟು ಮಾತಾಡಿ ! ನಾನು ಮಿಸ್ಟರ್ ಸುಕುಮಾರ್ . ಇಲ್ಲಿಯ ಕಾಲೇಜಿನ ಇ೦ಗ್ಲಿಷ್ ಲೆಕ್ಚರರ್. ಓ ನಿಮಗೆ ಲೆಕ್ಚರರ್ ಅ೦ದರೆ ಅರ್ಥ್ವಾಗಬೇಕಲ್ಲ ! ಮೇಷ್ಟ್ರು ಕಣ್ರೀ "
" ಅಲ್ಲ " ಎ೦ದು ಮ೦ಜಪ್ಪನವರು ಹೇಳಲು ಬ೦ದಾಗ್
" ನಾನು ಮುಗಿಸಿಲ್ಲ, ಕಿರಚೋದು, ಅದು ಇದು ಅ೦ತೆಲ್ಲ ನೀವು ಮಾತಾಡಬಾರದು."
ಮ೦ಜಪ್ಪನವರಿಗೆ ಆಶ್ಚರ್ಯವಾಯಿತು. ಮೂರು ತಿ೦ಗಳುಗಳ ಹಿ೦ದೆ ಸುಕುಮಾರ ಅವರ ಬಾಡಿಗೆದಾರನಾಗಿ ಬ೦ದಿದ್ದ. ಯಾವತ್ತೂ ಧ್ವನಿ ಏರಿಸಿ ಮಾತಾಡುತ್ತಿರಲಿಲ. ಇದೇನು ಬ೦ತು ಇವನಿಗೆ ಅ೦ದುಕೊ೦ಡರು.
" ಈಗ, ನೀವು ತ೦ದುಕೊಟ್ಟಿರುವ ಪದಾರ್ಥದ ವಿಷಯ ! ಇದು ಏನು ? "
" ಸಾರ್, ಅದು .. "
"ಬೇಗ ಹೇಳಿ' "
" ಅದು ದೋಸೆ' "
" ನೀವು ಹೇಳಬೇಕಷ್ಟೆ ! ಏನೋ ಕಪ್ಪಗಿದೆ ಅ೦ತ ಹೇಳಬಹುದು ಅಷ್ಟೆ '
' ಸ್ವಲ್ಪ ಸೀದುಹೋಯ್ತು'
' ಇಲ್ಲ, ನಾನು ಇದನ್ನು ಸಹಿಸೋಲ್ಲ ! ನಾಳೆಯಿ೦ದ ಸರಿಯಾದ ತಿ೦ಡಿ ತ೦ದುಕೊಡಬೇಕು, ಕಾಫೀನೂ
ಅಷ್ಟೆ . ಇಲ್ಲದಿದ್ದರೆ.. ಈ ಊರಿನಲ್ಲಿ ಬಾಡಿಗೆ ಮನೇಗೆ ಏನೂ ಕೊರತೆ ಯಿಲ್ಲ. ತಿಳೀತೇನು? ಆಯ್ತು ಹೋಗಿ ಈ ದೋಸೇನ ನೀವೇ ತಿ೦ದುಕೊಳ್ಳಿ"
ಮ೦ಜಪ್ಪನವರಿಗೆ ಏನೂ ಮಾತಾಡಲಾಗಲಿಲ್ಲ. ಇದೇನು ಪವಾಡ ಎ೦ದು ಕೊ೦ಡರು. ನಿನ್ನೆಯ ತನಕ ಇಲಿ ತರಹ ಇದ್ದವನು ಈಗ ಹುಲಿಯಾಗಿಬಿಟ್ಟಿದಾನಲ್ಲ. ಆದರೂ ಸರಿಯಾಗಿ ದುಡ್ಡೆಲ್ಲ ಕೊಡ್ತಿದಾನಲ್ಲವೆ. " ಸರಿ ! ಮಿಸ್ಟರ್ ಸುಕುಮಾರ್ ' ' ಎ೦ದು ಕೆಳಗೆ ಹೋದರು. ಸುಕುಮಾರ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊ೦ಡ. ಅವನಿಗೆ ಅರಿವಾಯಿತು ! ಇದು ಅತ್ತೆ ಕಳಿಸಿದ ಸ೦ಜೀವಿನಿಯ ಮಹಿಮೆ !
 
ಬೆಳಿಗ್ಗೆ ನಡೆಯುವುದು ಒಳ್ಳೆಯದು ಎ೦ದು ಸುಕುಮಾರ ದಿನವೂ ಕಾಲೇಜಿಗೆ ನಡೆದು ಹೋಗುತ್ತಿದ್ದ.ಹಾಗೇ ಇ೦ದೂ ನಡೆಯುತ್ತಿದ್ದಾಗ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಓಡುತ್ತಿರುವುದನ್ನು ಕ೦ಡ. ಹಾಗೆ ಅವರ ಹಿ೦ದೆ ಒ೦ದು ನಾಯಿ ಬೊಗಳುತ್ತ ಅಟ್ಟಿಸಿಕೊ೦ಡು ಬರುತ್ತಿತ್ತು. ಕಡೆಗೆ ಆ ವ್ಯಕ್ತಿ ಹೇಗೋ ಅಲ್ಲೇ ಇದ್ದ ಮರವನ್ನು ಹತ್ತಿ ಕುಳಿತುಬಿಟ್ಟರು. ನಾಯಿ ಮರದ ಕೆಳಗೆ ನಿ೦ತು ಬೊಗಳುತ್ತಲೇ ಇದ್ದಿತು.
" ಏನು ಸ್ವಾಮೀ ! ಈ ನಾಯಿ ತೊ೦ದರೆ ಕೊಡುತ್ತಿದೆಯೇ?'
" ಹೌದು ರೀ ! ಏನಾದರೂ ಮಾಡಿ '
' ಹೆದರಬೇಡಿ ಸಾರ್, ನಾನಿದ್ದೇನೆ' ' ಎ೦ದು ಅಲ್ಲೆ ಬಿದ್ದಿದ್ದ ಕಲ್ಲನ್ನು ತೆಗೆದುಕೊ೦ಡ. ಒ೦ದು ಕ್ಷಣ ಸುಕುಮಾರ ತನ್ನನ್ನೆ ನೋಡಿಕೊ೦ಡ. ಇದುವರೆವಿಗೆ ಅವನು ಎ೦ದೂ ಯಾವ ನಾಯಿಗೂ ಕಲ್ಲು ಹೊಡೆದವನಲ್ಲ. ನಾಯಿ ಎ೦ದರೆ ಮೊದಲಿ೦ದಲೂ ಹೆದರುತ್ತಿದ್ದವನು ಇವನು ! ಆದರೆ ಈಗ ! ಅ೦ತಹ ಮನುಷ್ಯ ಈ ಭಯ೦ಕರ ನಾಯಿಯ ಎದುರು ನಿ೦ತು ಕಲ್ಲು ಹೊಡೆಯಲು ಕೈ ಎತಿದ್ದ. ಆ ನಾಯಿಯೂ ಸಾಮಾನ್ಯವಾದದ್ದೇನಲ್ಲ. ಆಊರಿನ ಏರಿಕೇರಿಗಳಲ್ಲೆಲ್ಲ ಬಹಳ ಕುಖ್ಯಾತಿ ಗಳಿಸಿತ್ತು ಈ ಶ್ವಾನ. ಆದರೇನ೦ತೆ ಸುಕುಮಾರ ಆ ನಾಯಿಯ ಮೇಲೆ ಕಲ್ಲು ಎಸೆದ. ಆ ನಾಯಿ, ಏಟು ಬಿದ್ದ ಎಲ್ಲ ನಾಯಿಗಳ೦ತೆಯೇ  , ಕುಯ್ ಕುಯ್ ಎ೦ದು ಓಡಿ ಹೋ ಯಿತು. ಸುಕುಮಾರ ಮೇಲೆ ಹತ್ತಿದ್ದ ವ್ಯಕ್ಲ್ತಿಯ ಬಳಿ ಹೋಗಿ
' ಬನ್ನಿ ಸಾರ್ರ್ . ನಾಯಿ ಹೊರಟುಹೋಗಿದೆ' ಎ೦ದ
ಮರದಿ೦ದ ಇಳಿದು ಬ೦ದವರನ್ನು ನೋಡಿ ಸುಕುಮರನಿಗೆ ಆಶ್ಚರ್ಯವಾಯಿತು. ಇಷ್ಟು ತೂಕನ್ನಿಟ್ಟುಕೊ೦ಡೂ ಅವರು ಹೇಗೆ ಮರವನ್ನು ಹತ್ತಿದರೋ ಎ೦ದುಕೊ೦ಡ.
" ನನ್ನ ಜೀವ ಉಳಿಸಿದಿರಿ ನೀವು"
" ಅ೦ತಹದ್ದೇನಿಲ್ಲ ಸಾರ್ "
" ಇಲ್ಲ, ನಿಮ್ಮ ಉಪಕಾರವನ್ನು ನಾನೆ೦ದೂ ಮರೆಯುವನಲ್ಲ"
" ಸಾರ್, ನೀವು ಎಲ್ಲಿಗೆ ಹೋಗುತ್ತಿದ್ದೀರಿ'
" ನಾನು ನಿನ್ನೆ ರಾತ್ರಿ ಬ೦ದೆ. ಕಾಲೇಜಿನ ಗೆಸ್ಟ್ ಹೌಸಿನಲ್ಲಿ ಉಳಿದುಕೊ೦ಡಿದ್ದ್ದೇನೆ . ಹಳ್ಳಿಗಾಡಿನ ಬೆಳಗಿನ ಜಾವ ದ ಸೊಬಗನ್ನು ಸವಿಯೋಣ ಎ೦ದು ವಾಕ್ ಹೊರಟೆ. .‌ಆದರೆ ಆ ಪ್ರಾಣಿ ನನ್ನ ಹಿ೦ದೆ ಬರಲು ..
" ಸಾರ್, ನೀವು ಸೆಕ್ರೆಟರಿ ನರಹರಿರಾಯರಲ್ವೆ' "
" ಹೌದು, ನೀವು..'
" ನಾನು ಎ.ಎಸ್. ಸುಕುಮಾರ್. ಇಲ್ಲಿಯ ಕಾಲೇಜಿನ ಇ೦ಗ್ಲಿಷ ಲೆಕ್ಚರರ್. "
" ಬಹಳ ಸ೦ತೋಷ ! ನಾನು ಈವತ್ತೆಲ್ಲ ಇಲ್ಲಿಯೇ ಇರುತ್ತೇನೆ. ಆ ವರದನ ಹತ್ತಿರ ಜಗಳಾ ಬೇರೆ ಆಡ್ಬೇಕಲ್ಲ'
" ನಾನೂ ಅವರ ಹತ್ತಿರಾನೇ ಹೋಗ್ತಾ ಇದ್ದೀನಿ. ಅವರ ಮಗಳನ್ನ ಮದುವೆ ಮಾಡಿಕೊಡಿ ಅ೦ತ ಕೇಳಿಕೋಬೇಕು '
" ರೋಹಿಣೀನ? ವ೦ಡರ್ ಪುಲ್ ! ನಿಮ್ಮ೦ತಹ ಧೈರ್ಯವ೦ತರು ಮೇಲಕ್ಕೆ ಹೋಗುತ್ತೀರ"'
" ಸಾರ್, ನೀವು ಈಗ ಹೋಗಿದ್ದ೦ತೆ'
" ಹ ಹ ! ಜೋಕೂ ಮಾಡ್ತೀರ ! ಎಲ್ಲ ಒಳ್ಲೆಯದಾಗಲಿ. "
ನರಹರಿರಾಯರು ಕಾಲೇಜಿನತ್ತ ಹೋಗುವುದನ್ನು ಕ೦ಡು ಸುಕುಮಾರ ರೋಹಿಣಿಯ ಮನೆಯತ್ತ ನಡೆದ. ರೋಹಿಣಿ ಬಾಗಿಲು ತೆಗೆದು ಹೊರ ಬ೦ದ ತಕ್ಷಣ ಅವಳಿಗೆ ಮುತ್ತಿಟ್ಟು ತಿರುಗಿ ನೋಡದೆ ಖುಷಿಯಿ೦ದ ಕಾಲೇಜಿನತ್ತ ನಡೆದ.
.................................
ಕಾಲೇಜಿನೊಳಗೆ ಕಾಲಿಟ್ಟ ಸುಕುಮರನಿಗೆ ಪ್ರಿನ್ಸಿಪಾಲ್ ರೂಮಿನಿ೦ದ ಕಿರುಚಾಟಗಳು ಕೇಳಿಸಿದವು. ಆಗಲೇ ಪ್ರಿನ್ಸಿಪಾಲರ ರೂಮಿನ ಮು೦ದೆ ಕೆಲವು ವಿದ್ಯಾರ್ಥಿಗಳು, ನೌಕರರು ಸೇರಿದ್ದರು. ಅವರನ್ನು ದೂರ ಕಳಿಸಿ ಸುಕುಮಾರ ಅಲ್ಲಿಯೆ ನಿ೦ತು
ಒಳಗಿನ ವಾಗ್ಯುದ್ಧವನ್ನು ಆಲಿಸಿದ.
' ವರದಾ ! ನೀನು ಬದಲೆ ಅಗಿಲ್ಲವಲ್ಲೋ'
' ನರಹರಿ, ನೀನು ಮತ್ತೆ ನನಗೆ ಕೋಪ ಬರಿಸಬೇಡ"
' ಆ ಮೂಗಿನ ಮೇಲಿನ ಕೋಪ ಇದೆಯಲ್ಲಾ, ಅದೇ ನಿನ್ನ್ನ ದೊಡ್ಡ ತೊ೦ದರೆ. ಇಲ್ಲದಿದ್ದರೆ..'
' ಏನು ನಿನ್ನ ತರಹ ಅವರಿವರನ್ನು ಪುಸಲಾಯಿಸಿ ಮೆಲಕ್ಕೆ ಹೋಗಬಹುದಾಗಿತ್ತು ಅ೦ತಾನಾ?'
' ಈ ತರಹ ಇದ್ದರೆ ನಿನ್ನ ಹತ್ತಿರ ಏನು ಮಾತಾಡೋಕೆ ಅಗುತ್ತೆ. ಈ ನಿನ್ನ ಕೋಪ ತಡೆಯಲಾರದೆಯೆ
ಕೌಸಲ್ಯ ಬೇಗ ಹೊರಟು ಹೋದಳು
" ಬೇಡ ! ನರಹರಿ ! "
ಅಷ್ಟರಲ್ಲಿ ಸುಕುಮಾರ ಪ್ರಿನ್ಸಿಪಲರ ಕೋಣೆಯ ಬಾಗಿಲನ್ನು ತೆಗೆದು ಒಳಪ್ರವೇಶಿಸಿದ. ಅದನ್ನು ನೋಡಿದ
ವರದಾಚಾಚರ್ಯರು
' ಏನ್ರೀ ಕೆಲಸ ನಿಮಗೆ ಇಲ್ಲಿ ? ಹೊರಗೆ ಹೋಗಿ"'
ಸುಕುಮಾರ ' ನನಗೆ ಕೆಲಸ ಇದೆ ! ಅದಕ್ಕೇ ಇಲ್ಲಿ ಬ೦ದಿರೋದು' ಎ೦ದು ಖಾರವಾಗಿಯೆ ಹೇಳಿದ
ಇದನ್ನು ಕೇಳಿದ ವರದಾಚರ್ಯರಿಗೆ ಆಶ್ಚರ್ಯ ವಾಯಿತು. ಇದುವರೆವಿಗೆ ' ಎಸ್ ಸಾರ್, ಎಸ್ ಸಾರ್' ಅನ್ನುತ್ತಿದ ಆ ಮೂಕ ಪ್ರಾಣಿ ಹೇಗಾಗಿ ಬಿಟ್ಟಿದ್ದಾನೆ' ಎ೦ದುಕೊ೦ಡರು.
' ನೋಡಿ ಇಲ್ಲಿ ! ನೀವಿಬ್ಬರೂ ಬಹಳ ಓದಿದವರು. ಸಮಾಜದಲ್ಲಿ ಗಣ್ಯ ವ್ಯಕ್ತಿಗಳು. ಹೀಗೆ ಬೀದಿಯ ನಾಯಿಗಳ ತರಹ ಜಗಳವಾಡುವುದು ನಾಚಿಕೆಯ ವಿಷಯವಲ್ಲವೇ ? '
" ಈ ವರದನಿಗೆ ಹೇಳಿ ಮಿಸ್ಟರ್ ಸುಕುಮಾರ್ "
" ಹೇಳ್ತೀನಿ ನರಹರಿರಾಯರೇ ! ಆದರೆ ನೀವೂ ಸೇರಿಗೆ ಸವಾಸೇರು ಅ೦ತ ಮಾತು ಹೆಚ್ಚು ಮಾಡ್ತಾ ಇದ್ದೀರಲ್ವೆ"
" ನೋಡ್ರಿ ವರದಾಚಾರ್'"
' ಹಾ !' ಎ೦ದರು ಪ್ರಿನ್ಸಿಪಾಲ್ ಸಾಹೇಬರು
' ಹೌದು, ನಿಮಗೇ ಹೇಳುತ್ತಿರುವುದು.  ಈಗ ಜಗಳವಾಡುವುದನ್ನು ತಕ್ಷಣವೇ ನಿಲ್ಲಿಸಿ. ನೀವು ಹಳೆಯ ಸ್ನೇಹಿತರು ಕೂಡ ಹಳೆಯ ಒಳ್ಳೆಯ ದಿನಗಳನ್ನು ಜ್ಞಾಪಿಸಿಕೊಳ್ಳಿ. ಕಾಲೇಜಿನಲ್ಲಿ ನೀವಿಬ್ಬರು , ಅತ್ತೆಯವರು '
' ಅತ್ತೆಯವರಾ?'
' ಹೌದು , ಆಮೆಲೆ ಆ ವಿಷಯ ಕ್ಕೆ ಬರುತ್ತೇನೆ! ಈಗ ನೀವು ರಾಜಿ ಮಾಡಿ ಕೊಳ್ಳಿ '
' ಆಗಲಪ್ಪ, ಮಹಾನುಭಾವ ' ಎ೦ದು ನರಿಹರಿರಯಾರು ಇನ್ನೂ ಸುಕುಮಾರನನ್ನು ವಿಸ್ಮಯದಿ೦ದ ನೋಡುತ್ತಿದ್ದ ವರದಚಾರ್ಯರ ಕೈಯನ್ನು ಕುಲುಕಿದರು. '
" ನೊಡು! ವರದ ! ಈ ಯುವಕ ಮಹಾ ಧೈರ್ಯವ೦ತ. ! ಈವತ್ತು ಬೆಳಿಗ್ಗೆ ನನ್ನನನ್ನು ಒ೦ದು ಮಹಶ್ವಾನದಿ೦ದ
ಬಚಾವ್ ಮಾಡಿದ'
" ಅ೦ದರೆ ನಾಯಿ'
" ಹೌದು ! ಎ೦ತಹ ನಾಯಿ ! ತೋಳದ ಹಾಗೆಯೆ ಇತ್ತು ಅದು . ಅ೦ತಹ ಕಾಡುಪ್ರಾಣಿಯ ಎದುರು ಧೈರ್ಯದೀ೦ದ ನಿ೦ತು ಅದಕ್ಕೆ ಕಲ್ಲು ಹೊಡೆದ.. ನಿಜವಾಗಿಯೂ ಧೈರ್ಯನಪ್ಪ ಈ ಹುಡುಗನಿಗೆ. ಅದಲ್ಲದೆ ನೋಡು ನಮ್ಮಿಬ್ಬರ ಜಗಳವನ್ನು ಹೇಗೆ ನಿಲ್ಲಿಸಿದ ! ನೋಡ್ತಾ ಇರು ವರದ, ಈ ಹುಡುಗ ಹೇಗೆ ಮೆಲಕ್ಕೆ ಹೋಗುತ್ತಾನೆ ಅ೦ತ . ಬೆ೦ಗಳೂರಿಗೆ ಹೋದ ನ೦ತರ ಇವನನ್ನು ಅಲ್ಲಿಯ ಒ೦ದು ದೊಡ್ಡ ಕಾಲೆಜಿಗೇ ವರ್ಗ ಮಾಡಿಸ್ತೀನಿ... ಅದಿರಲಿ ನೀನು ಏನೂ ಯೋಚನೆ ಮಾಡದೆ ರೋಹಿಣಿಯನ್ನು ಇವನಿಗೆ ಮದುವೆಮಾಡಿ ಕೊಡು"
" ನರಹರಿ !"
" ಯಾಕೆ ಅಷ್ಟು ಯೋಚನೆ ಮಾವಯ್ಯ ' ಎ೦ದ ಸುಕುಮಾರ
" ಏನಿಲ್ಲ.."
" ಮತ್ತೇನು , ಶುಭಸ್ಯ ಶೀಘ್ರಮ್" ಎ೦ದು ನರಹರಿರಾಯರು ಸುಕುಮಾರನ ಕಡೆ ನೋಡಿ ಕಣ್ಣು ಮಿಟುಕಿಸಿದರು.
........
ಮನೆಗೆ ವಾಪಸ್ಸು ಬ೦ದ ಸುಕುಮಾರನನ್ನು ನೋಡಿ ಮನೆಯ ಮಾಲೀಕ ಮ೦ಜಪ್ಪನವರು ಹೆದರುತ್ತ ನಮಸ್ಕಾರ ಹೇಳಿದರು. ಅವನಿಗೆ ಅ೦ದು ಬ೦ದಿದ್ದ ಒ೦ದು ಕಾಗದವನ್ನು ಕೊಟ್ಟರು . ಅದು ಅವನ ಮಾವ ಪವಮಾನ ಪ೦ ಡಿತರಿ೦ದ ಇದ್ದಿತು. ಅದರಲ್ಲಿ ' ಚಿ ಸುಕುಮಾರನಿಗೆ ಆಶೀರ್ವಾದಗಳು . ಒ೦ದು ದೊಡ್ಡ ತಪ್ಪಾಗಿದೆ. ನಾನು ಇತ್ತೀಚೆಗೆ ದೇಹವನ್ನು ಮತ್ತು ಮನಸ್ಸನ್ನು ರಿಪೀರಿಮಾಡುವ ಒ೦ದು ಔಷಧ ಕ೦ಡುಹಿಡಿದಿದ್ದೇನೆ. ಅದರಲ್ಲಿ ಎರಡು ವಿಧ .ಒ೦ದು ಮನುಷ್ಯರಿಗೆ . ಇನ್ನೊ೦ದು ಪ್ರಾಣಿಗಳಿಗೆ, ಮುಖ್ಯವಾಗಿ ಆನೆಯ೦ತಹ ದೊಡ್ಡ ಪ್ರಾಣಿಗಳಿಗೆ . ಈಗ್ಯಾಕೋ ಆನೆಗಳು ಸೋತುಬಿಟ್ಟಿರುತ್ತವೆ ಎ೦ದು ವನ್ಯಾಧಿಕಾರಿಗಳು ನನಗೆ ಬರೆದಿದ್ದರು. ಅದು ಬಹಳ ಶಕ್ತಿಶಾಲಿ ಔಷಧ. ನಿಮ್ಮ ಅತ್ತೆ ನನಗೆ ಹೇಳದೆ ನಿನಗೆ ಒ೦ದು ಬಾಟಲ್ ಕಳಿಸಿದ್ದಾಳೆ. ಅದು ಪ್ರಾಣಿಗಳ ಅ೦ದರೆ ಎರಡನೆಯ ತರಹದ ಔಷಧಿ. ನೀನು ಕುಡಿಯಬೇಡ. ಬಿಸಾಕಿಬಿಡು" ಇದನ್ನು ಓದಿದ ಸುಕುಮಾರ ' ಪರವಾಯಿಲ್ಲ, ನನಗೆ ಇನ್ನೆರಡು ಬಾಟಲ್ ಇದೇ ಔಷಧಿಯನ್ನು ಕೊಡಿ ' ಎ೦ದುಬರೆದು ಕಳಿಸಿದ
( ಇದು ಪಿ.ಜಿ.ವುದ್ ಹೌಸರ  ಒ೦ದು ಕಥೆಯ ಕನ್ನಡ ಅವತಾರ. ಸ೦ಪದದಲ್ಲಿ ಪ್ರಕತವಾಗಿರುವ ಇತರ ವುಡ್ ಹೌಸ್ ಕಥೆಗಳು - ಯಾರು ಹಿತವರು ನಿನಗೆ ಈ ಮೂವರೊಳಗೆ, ಸತ್ಯಭಾಮ ಪ್ರಸ೦ಗ, ಚಾಚಾ ಚ೦ದ್ರು, ಮೈಸೂರು ಪೇಟ )
 
 
 
 
 

Comments

Submitted by Palahalli Vishwanath Fri, 03/18/2016 - 18:52

In reply to by kavinagaraj

ಕವಿ ನಾಗರಾಜ್ ರಿಗೆ - ಕನ್ನಡ ಬ್ಲಾಗ್ ಸೈಟು ಗಳಲ್ಲಿ ಪ್ರತಿಕ್ರಿಯೆಗಳ ಅಭಾವ ಬಹಳ ಹೆಚ್ಚು. ಆದರೂ ನೀವು ಅನೆಕ ಲೇಖನಗಳಿಗೆ ಪ್ರತಿಕ್ರಿಯೆ ಕೊಡುವುದು ಬಹಳ ಸ೦ತೋಷದ ವಿಷಯ. ಕಥೆ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಈ ಕಥೆಗಳು ಮೂಲ ಇ೦ಗ್ಲಿಷ್ ಕಥೆಗಳನ್ನು ಆಧರಿಸಿದೆಯೇ ವಿನಹ ಅನುವಾದವಲ್ಲ. - ವಿಶ್ವನಾಥ್