ಅಹಲ್ಯಾ ಸಂಹಿತೆ - ೧೭ (ಮಹಾಪ್ರಯೋಗ - ಸಂಶೋಧನೆಗೆ ನಾಂದಿ)

ಅಹಲ್ಯಾ ಸಂಹಿತೆ - ೧೭ (ಮಹಾಪ್ರಯೋಗ - ಸಂಶೋಧನೆಗೆ ನಾಂದಿ)

" ಬ್ರಹ್ಮದೇವಾ.."

"ಏನಾದರೂ ಉಪಾಯ ಹೊಳೆಯಿತೆ ಸೂರ್ಯ..?"

" ಒಂದು ಹಾದಿ ಕಾಣಿಸುತ್ತಿದೆ, ಸೂಕ್ತವೊ ಅಲ್ಲವೊ ನಾನೀಗಲೆ ಹೇಳಲಾರೆ..."

"ಏನಾ ದಾರಿ?"

" ಮತ್ತೇನಿಲ್ಲ.. ನಾನೀಗ ನಡೆಸ ಹೊರಟಿರುವ ಹೊಸ ಪ್ರಯೋಗ ತಾಮಸಿ ಪ್ರವೃತ್ತಿಯ ಗುಣಧರ್ಮವನ್ನು ಬದಲಿಸಿ ಸಾತ್ವಿಕವನ್ನಾಗಿಸಬಹುದೆ? ಎಂದು "

" ಅರ್ಥವಾಯಿತು ಸೂರ್ಯ.. ಅದನ್ನೆ ಬಳಸಿಕೊಂಡು ಸಹಸ್ರಕವಚನ ಶಕ್ತಿತೇಜವನ್ನು ಸಾತ್ವಿಕವಾಗಿಸಿ ನಂತರ ಮುಂದಿನ ಯುಗಕ್ಕೆ ರವಾನಿಸಿಬಿಡುವುದು ಎಂದಲ್ಲವೆ ?" ಕಾತುರದಲ್ಲಿ ನುಡಿದ ಬ್ರಹ್ಮದೇವ..

"ಸೈದ್ದಾಂತಿಕವಾಗಿ ಹೌದು.. ಆದರೆ ಇದೀಗ ಆರಂಭಿಸಬೇಕಾದ ಪ್ರಯೋಗ ಯಶಸ್ಸಾಗುವುದೊ ಇಲ್ಲವೊ ಗೊತ್ತಿಲ್ಲ.. ಅಲ್ಲದೆ ಮತ್ತಷ್ಟು ತೊಡಕುಗಳನ್ನು ಪರಿಹರಿಸಿಕೊಂಡು ಮುನ್ನಡೆಯಬೇಕು.."

" ಮತ್ತಾವ ತೊಡಕು ?"

" ಮೊದಲಿಗೆ ಸಹಸ್ರಕವಚನ ಜತೆಗಿನ ಯುದ್ಧ ನಡೆದೆ ಇರುತ್ತದೆ ಯುಗಾಂತ್ಯದವರೆಗೆ.. ಹೀಗಾಗಿ ಅಲ್ಲಿಯವರೆಗು ಅವನನ್ನು ಪ್ರಯೋಗಕ್ಕೆ ಬಳಸಲು ಸಾಧ್ಯವಿಲ್ಲ.."

" ಮೊದಲೆ ಯಾಕೆ ಸಾಧ್ಯವಿಲ್ಲ ಸೂರ್ಯ?" ಅರ್ಥವಾಗದ ದನಿಯಲ್ಲಿ ಕೇಳಿದ ದೇವೇಂದ್ರ.

" ದೇವರಾಜ.. ಸಹಸ್ರಕವಚನಲ್ಲಿರುವ ಶಕ್ತಿಯ ಬಲ ಅಸೀಮ ಸಾಮರ್ಥ್ಯದ್ದು.. ಅದನ್ನು ಎಷ್ಟು ಕುಗ್ಗಿಸಲು ಸಾಧ್ಯವೊ ಅಷ್ಟು ಕುಗ್ಗಿಸುವುದು ಒಳಿತು.. ಅದು ಮೆದುವಾದಷ್ಟು ಪ್ರಯೋಗಕ್ಕೆ ಅನುಕೂಲ.."

ಅರ್ಥವಾದವನಂತೆ ತಲೆಯಾಡಿಸಿದ ಇಂದ್ರ.

" ನನ್ನ ಪ್ರಯೋಗ ಸಿದ್ಧಾಂತದನುಸಾರ ತತ್ವದ ಮೂಲಾಂಶಗಳನ್ನು ನಾಶಮಾಡಲು ಆಗುವುದಿಲ್ಲ.. ಬದಲಿಗೆ ಬೇಡದ್ದನ್ನು (ಉದಾಹರಣೆಗೆ ತಾಮಸತ್ವ) ಹತ್ತಿಕ್ಕುವ ಹಾಗೆ ಬೇಕಿದ್ದನ್ನು (ಉದಾಹರಣೆಗೆ ಸಾತ್ವಿಕತೆ) ಬಲವಾಗಿಸಿ ಪ್ರಮುಖ ಪಾತ್ರ ವಹಿಸುವಂತೆ ಮಾಡುವುದು.. ಹೀಗಾಗಿ ಬೇಡದ್ದರ ತುಣುಕು ಅಷ್ಟಿಷ್ಟು ಉಳಿದೆ ಇರುವುದಾದರು ಪ್ರಕಟವಾಗಿ ಕಾಣಿಸಿಕೊಳ್ಳದೆ ಅಂತರ್ಮುಖಿಯಾಗಿ ಉಳಿದುಬಿಡಬಹುದು.. ಅದೇನೆ ಇರಲಿ, ನಾನು ಪ್ರಯೋಗ ಆರಂಭಿಸಲು ಸಾಧ್ಯವಾಗುವುದು ಯುಗದ ಕೊನೆಯಾದ ಮೇಲಷ್ಟೆ.."

"ಅರ್ಥಾತ್ ಅವನ ಕಾಟವನ್ನು ಮುಂದಿನ ಯುಗಕ್ಕೆ ರವಾನಿಸುವುದನ್ನು ತಪ್ಪಿಸಲಾಗದು ಎಂದರ್ಥವೆ?" ಆತಂಕದಲ್ಲಿ ಕೇಳಿದ ಬ್ರಹ್ಮ..

" ಹಾಗಲ್ಲ ನನ್ನ ಮಾತಿನರ್ಥ... ಯುಗಾಂತ್ಯದಲ್ಲಿ ಅವನ ಶಕ್ತಿಯನ್ನು ಸ್ಥೂಲೀಕರಿಸಿ ನನ್ನ ಪ್ರಯೋಗಾಲಯಕ್ಕೊಯ್ದರು ಮುಂದಿನ ಯುಗಕ್ಕೆ ಸಿದ್ದನಾಗಿಸಲು ಬೇಕಾದ ಸಮಯ ಇರುವುದಿಲ್ಲ.. ಅವನ ಶಕ್ತಿಯನ್ನು ಹಾಗೆ ಕಾದರಿಸಿ, ಮತ್ತೊಂದು ಯುಗದವರೆಗು ನಿಶ್ಚೇಶ್ಟಿತವಾಗಿಸಿ ಅದು ಸಾಕಷ್ಟು ಸೊರಗಿದ ಮೇಲಷ್ಟೆ ಪರಿವರ್ತನೆಯ ಕಾರ್ಯ ಆರಂಭಿಸಬೇಕು.."

"ಅರ್ಥಾತ್ ಅವನ ಪುನರವತರಣಿಕೆ ಮತ್ತೊಂದು ಯುಗದ ನಂತರ ಮಾತ್ರ ಸಾಧ್ಯವೆಂದಲ್ಲವೆ ?"

"ಹೌದು ... ಈಗ ಸತ್ಯಯುಗ.. ಮುಂದಿನ ತೇತ್ರಾಯುಗದಲ್ಲಿ ಅವನನ್ನು ಪರಿವರ್ತನೆಯ ಪ್ರಯೋಗಕೊಡ್ಡಿದರೆ, ದ್ವಾಪರದಲ್ಲಿ ಅವನ ಜನ್ಮವಾಗುವಂತೆ ಆಯೋಜಿಸಬೇಕು..."

" ಅಂದರೆ ಅವನ ಅಂತಿಮ ದಮನ ಕಾರ್ಯಕ್ಕೆ ನರನಾರಾಯಣರೂ ಸಹ ದ್ವಾಪರದತನಕ ಕಾಯಬೇಕೆಂದಾಯ್ತಲ್ಲವೆ?" ಎಂದ ಬ್ರಹ್ಮ.

ಈಗ ಅಚ್ಚರಿಯಾಗುವ ಸರದಿ ಸೂರ್ಯನದಾಗಿತ್ತು.." ಅಂದರೆ ತಾಮಸದಿಂದ ಸಾತ್ವಿಕಕ್ಕೆ ಬದಲಾದರೂ ಸಹಸ್ರಕವಚನನ್ನು ವಧಿಸದೆ ಬಿಡುವುದಿಲ್ಲವೆ ? ಇದು ಮೋಸವಲ್ಲವೆ " ಎಂದ.

" ಸೂರ್ಯ ನಿನ್ನ ಕಾಳಜಿಯನ್ನು ನಾನು ಬಲ್ಲೆ.. ಆದರೆ ಇದು ಋಣಧರ್ಮ, ಪ್ರತಿಫಲದ ವಿಷಯ.. ಜನ್ಮಾಂತರವಾಗಲಿ, ಯುಗಾಂತರವಾಗಲಿ ಅನುಭವಿಸದೆ ವಿಧಿಯಿಲ್ಲ.."

ಅದನ್ನು ಕೇಳುತ್ತಿದ್ದಂತೆ ಮ್ಲಾನವದನನಾಗಿ ತಲೆ ತಗ್ಗಿಸಿಕೊಂಡು ಕೂತ ಸೂರ್ಯ.. ಅವನ್ನನ್ನು ಸಮಾಧಾನಿಸುವಂತೆ ನುಡಿದ ಬ್ರಹ್ಮದೇವ..

" ಸೂರ್ಯ ನನಗೆ ನಿನ್ನ ಯೋಜನೆಯೆ ಸಮಯೋಚಿತವೆನಿಸುತ್ತಿದೆ.. ನೀನು ಅದನ್ನೆ ಕಾರ್ಯಗತಗೊಳಿಸು.. ಇನ್ನು ಸಹಸ್ರಕವಚ ಸಾತ್ವಿಕನಾಗುವಲ್ಲಿ ಸಫಲನಾದರೆ ಅವನ ದಾನವ ವ್ಯಕ್ತಿತ್ವವನ್ನು ಪ್ರತ್ಞೇಕಿಸಿ ಅವನನ್ನು ಹೇಗೆ ಸದ್ಗುಣವಂತನ ಸ್ವರೂಪದಲ್ಲಿ ಪ್ರಕ್ಷೇಪಿಸಬಹುದೆಂದು ನಂತರ ಆಲೋಚಿಸೋಣ... ಒಟ್ಟಾರೆ ಎಲ್ಲರಿಗು ಸಲ್ಲುವ ಉಪಾಯ ಹುಡುಕೋಣ "

ತಲೆಯಾಡಿಸಿದ ಸೂರ್ಯ ಆಗಲೆಂದು ಸಮ್ಮತಿ ಸೂಚಿಸಿದ.

ಅದುವರೆವಿಗೂ ಅವರಿಬ್ಬರ ಮಾತನ್ನು ಆಲಿಸುತ್ತಿದ್ದ ಇಂದ್ರ, " ಇದೆಲ್ಲ ಆಗಿದ್ದು ನನ್ನಿಂದಲೆ.. ನಾನು ನರನಿಗೆ ಮಾಡಿದ ತೊಂದರೆಗೆ ಬದಲಾಗಿ ಅವನಿಗೇನಾದರೂ ರೀತಿಯಲ್ಲಿ ಸಹಾಯವಾಗುವ ಹಾಗೆ ಮಾಡಬೇಕು - ಬಹುಶಃ ಕೊನೆಯ ವಧೆಯ ಅವತಾರವೆತ್ತಿದಾಗ ನರನ ಕಾರ್ಯ ಪೂರ್ಣಗೊಳ್ಳುವಂತೆ ನಾನು ಸಹಕರಿಸುತ್ತೇನೆ.. ಅದೇ ಹೊತ್ತಿನಲ್ಲಿ ಸಹಸ್ರಕವಚನ ಕೀರ್ತಿ ಪ್ರತಿಷ್ಠೆಗೂ ಭಂಗ ಬರದ ಹಾಗೆ ನೋಡಿಕೊಳ್ಳುವ ಯತ್ನಮಾಡುತ್ತೇನೆ " ಎಂದ..

ಮೂವರೂ ಮಾತು ಮುಗಿಸಿ ಮೇಲೆದ್ದಾಗ ಏನೊ ಒಂದು ತರದ ಸಮಾಧಾನದ ಭಾವ ನೆಲೆಸಿತ್ತು ಆ ಮೂವ್ವರಲ್ಲು..

ಆ ಮಹತ್ವದ ಸಭೆಯಲ್ಲಿ ಸೂರ್ಯಪುತ್ರನೆಂಬ ಹಣೆಪಟ್ಟಿಯಲ್ಲಿ ಕವಚಕುಂಡಲಧಾರಿಯಾಗಿ ತನ್ನ ಕಡೆಯ ಕವಚದೊಂದಿಗೆ ಕರ್ಣನೆಂಬ ಹೆಸರಿನಲ್ಲಿ ಜನಿಸಲು ಮೂಲ ಬೀಜಾಂಕುರವಾಯ್ತೆಂದು ಆ ಹೊತ್ತಿನಲ್ಲಿ ಅವರಿಗು ಅರಿವಿರಲಿಲ್ಲ...

ಅದೇ ತೆರದಲ್ಲಿ ನರನಾರಾಯಣರ ಅರ್ಜುನ ಕೃಷ್ಣಾವತಾರದ ರೂಪಧಾರಣೆಗು ಅದೇ ಮೂಲ ಕಾರಣವಾಯ್ತೆಂಬ ಸ್ಪಷ್ಟನೆ ಸಹ..

ಆದರೆ ಬ್ರಹ್ಮದೇವ ಮಾತ್ರ ಇನ್ನು ಚಡಪಡಿಸುತ್ತಲೆ ಇದ್ದ - ಊರ್ವಶಿಯ ಜನ್ಮರಹಸ್ಯದ ಅದ್ಭುತಾಮೋಘ ವೈಜ್ಞಾನಿಕ ಹಿನ್ನಲೆಯನ್ನು ಅರಿಯಲಾಗದೆ. ಅವನಾಗಲೆ ನಿಶ್ಚಯಿಸಿಯಾಗಿತ್ತು - ಆದಷ್ಟು ಬೇಗನೆ ನರನಾರಾಯಣರನ್ನು ಭೇಟಿ ಮಾಡಿ ಅದರ ರಹಸ್ಯವನ್ನು ಕೇಳಬೇಕೆಂದು..

ಆದರೆ ಅದಕ್ಕೆ ಈ ಬಾರಿಯ ಕದನ ಮುಗಿದು ನಾರಾಯಣ ವಾಪಸಾಗುವ ಮತ್ತು ನರ ಮುಂದಿನ ಕದನಕ್ಕೆ ಹೋಗುವ ಸಂಧಿ ಕಾಲದವರೆಗೆ ಕಾಯದೆ ವಿಧಿಯಿರಲಿಲ್ಲ. ಆಗ ಮಾತ್ರವೆ ಅವರಿಬ್ಬರನ್ನು ಒಟ್ಟಾಗಿ ಕಾಣಲು ಸಾಧ್ಯವಿದ್ದುದ್ದು..

ಅಂದರೆ ಇನ್ನು ನೂರಾರು ಮಾನವ ವರ್ಷಗಳವರೆಗೆ ಕಾಯದೆ ವಿಧಿಯಿಲ್ಲ - ತನ್ನ ಕುತೂಹಲವನ್ನು ತಣಿಸಲು..

ಅಲ್ಲಿಯವರೆಗು ತನ್ನ ಪ್ರಯೋಗಗಳನ್ನಂತು ಮುಂದುವರೆಸಿರಬಹುದು ತನ್ನ ಪ್ರಯೋಗಾಲಯದಲ್ಲಿ.. ಹೇಗೂ ಊರ್ವಶಿಯೆ ಎದುರಿರುವಳಲ್ಲ? ಅವಳನ್ನೆ ಬಳಸಿಕೊಂಡು ಅವಳ ಸೃಷ್ಟಿ ಹೇಗಾಯ್ತೆನ್ನುವುದರ ಮೂಲವನ್ನು ಹಿಮ್ಮುಖ ಪ್ರಯೋಗ ತಂತ್ರದ ಮೂಲಕ ಕಂಡು ಹಿಡಿಯಲು ಯತ್ನಿಸಬೇಕು..

ಆ ಆಲೋಚನೆಯಲ್ಲೆ ಆಯಾಸದಿಂದ ಆಸನಕ್ಕೆ ತಲೆಯೊರಗಿಸಿ ವಿಶ್ರಮಿಸುವ ಹವಣಿಕೆಯಲ್ಲಿ ಕಣ್ಮುಚ್ಚಿ ಕುಳಿತ ಬ್ರಹ್ಮದೇವ..

******************

ಅಧ್ಯಾಯ - 07

ಬ್ರಹ್ಮದೇವನ ಅಣತಿಯಂತೆ ದೇವರಾಜ ಊರ್ವಶಿಗೊಂದು ದೈನಂದಿನ ವೇಳಾಪಟ್ಟಿ ಹಾಕಿಕೊಟ್ಟು ಬಿಟ್ಟಿದ್ದ. ಅಮರಾಮತಿಯ ಸಭಾಕಲಾಪಗಳಿರಲಿ ಬಿಡಲಿ ಅವಳು ಮಾತ್ರ ಪ್ರತಿದಿನ ಬೆಳಗಿನ ನಿಯಮಿತ ವೇಳೆಯಲ್ಲಿ ಬ್ರಹ್ಮದೇವನ ಪ್ರಯೋಗಾಲಯದಲ್ಲಿ ಅವಳು ಹಾಜರಿರಬೇಕೆಂದು.

ಇರಬೇಕೇನು ಬಂತು ? ಅವಳು ಹೊರಡಬೇಕಿದ್ದ ಹೊತ್ತಿಗೆ ಸರಿಯಾಗಿ ಅಲ್ಲೊಂದು ಮೇನೆ ಕಾದಿರುತ್ತಿತ್ತು ಅವಳ ಸಲುವಾಗಿ. ಉದ್ದಕ್ಕು ರಾಜೋಪಚಾರ ಮಾಡಿಸಿಕೊಂಡೆ ಸಾಗುತ್ತಿದ್ದ ಅವಳ ಹಾದಿಯುದ್ದಕ್ಕು ಅವಳು 'ಹೂಂ'ಗುಟ್ಟಿದರು ಸಾಕು ಅವಳಣತಿಗೆ ಕಾಯುವ ಸೇವಕರು ಹಾಜರು...

ಪ್ರಯೋಗಾಲಯ ತಾಣ ತಲುಪಿದ ಮೇಲು ಅಷ್ಟೆ - ಮಹಾರಾಣಿಯ ರೀತಿಯ ವೈಭೋಗದ ಸತ್ಕಾರ. ಎಲ್ಲಕ್ಕು ಮೀರಿದ ವೈಶಿಷ್ಠ್ಯವೆಂದರೆ ಸ್ವತಃ ಬ್ರಹ್ಮದೇವನೆ ಅವಳ ಜತೆಗಿರುತ್ತಿದ್ದುದು...

ಕೈ ಕೆಳಗಿನವರಾರ ಅಧೀನಕ್ಕು ಬಿಡದೆ ಸ್ವತಃ ತಾನೇ ಗಮನಿಸುತ್ತಿದ್ದಾನೆಂದ ಮೇಲೆ ಅದು ತುಂಬಾ ಮಹತ್ವದ ವಿಚಾರವೆ ಇರಬೇಕೆಂದು ಅಲ್ಲಿದ್ದ ಮಿಕ್ಕವರು ಅಷ್ಟೆ ಗೌರವ, ಭೀತಿಯಿಂದ ನೋಡಿಕೊಳ್ಳುತ್ತಿದ್ದರು ಉಪಚಾರದ ವಿಷಯದಲ್ಲಿ ಅವಳಿಗೇನು ಕುಂದು ಕೊರತೆಯಾಗದಂತೆ...

ಬ್ರಹ್ಮದೇವನ ಅಷ್ಟೊಂದು ಕಾಳಜಿಗೆ ಕಾರಣವಿರದಿರಲಿಲ್ಲ. ಅವಳನ್ನು ಹತ್ತಿರದಿಂದ ಅಭ್ಯಸಿಸಿ ನೋಡುವುದರಿಂದಾಗಿ ಅವಳ ಆ ಅದ್ಭುತ ಸೌಂದರ್ಯದ ಮೂಲಸ್ವರೂಪದ ರಚನೆಯನ್ನು ಅರಿಯುವ ಅದಮ್ಯ ಬಯಕೆ...

ಆ ರೀತಿ ಮಾಡುವುದರಿಂದ ತನ್ನ ಈಗಿನ ಸೃಷ್ಟಿಯ ಮೂಲಸರಕಿಗು, ಊರ್ವಶಿಯಲ್ಲಿರುವ ವಸ್ತು ಅಸ್ತಿತ್ವಕ್ಕು ಇರುವ ವ್ಯತ್ಯಾಸ ಅರಿಯುವ ಸಾಧ್ಯತೆ ಹೆಚ್ಚು. ಪ್ರಸ್ತುತ ಅರಿವಿನ ಜತೆ ಈ ಅರಿವನ್ನು ತಾಳೆಯಾಗಿಸಿ ಹೊಂದಾಣಿಸಿದರೆ ತನ್ನ ಸೃಷ್ಟಿಯಲ್ಲಿರುವ ಇತಿಮಿತಿಯನ್ನು ಅಧಿಗಮಿಸಲು ಬೇಕಾದ ಸುಳಿವು ಸಿಕ್ಕಿಬಿಡುತ್ತದೆ.

ಆ ಸುಳಿವಿನ ಆಧಾರದಲ್ಲಿ ಮುನ್ನಡೆದರೆ ತಾನೂ ಕೂಡ ಊರ್ವಶಿಯಂತಹದ್ದೆ ಉತ್ಕೃಷ್ಟ ಮಟ್ಟದ ತಳಿ ಸೃಷ್ಟಿಸಲು ಸಾಧ್ಯವಾಗಬಹುದು...

ಅದು ಸಾಧ್ಯವಾದರೆ, ಅದನ್ನು ಮತ್ತೆ ಪರಿಷ್ಕರಿಸಿ ಸಹಜ ಸೃಷ್ಟಿಯ ಮಾಮೂಲಿ ಪ್ರಕ್ರಿಯೆಯನ್ನು ಅದೇ ಮಟ್ಟಕ್ಕೆ ಏರಿಸಲು ಯತ್ನಿಸಬಹುದು...

ಆದರಿದು ಸಾಧ್ಯವಾಗಲಿಕ್ಕೆ ಅದೆಷ್ಟು ದಿನಗಳು ಹಿಡಿಯುವುದೊ ಹೇಳಲಾಗದು. ಅದೆಷ್ಟು ಬಾರಿ ಪ್ರಯತ್ನಿಸಿ ನೋಡಬೇಕೊ ಎಂದು ಹೇಳಬರುವುದಿಲ್ಲ.. ಅದೆಷ್ಟು ತಳಿ ವಂಶಾವಳಿಗಳ ರೂಪಾಂತರವಾಗಬೇಕೊ, ಇನ್ನೆಷ್ಟು ಪೀಳಿಗೆಗಳ ಮೂಲಕ ಸಾಗಿ ಆ ಪರಿಪಕ್ವ ಹಂತ ತಲುಪಬೇಕೊ ಎನ್ನುವುದು ಅನಿಶ್ಚಿತ ವಿಷಯವೆ....

ಆ ಕಾರಣದಿಂದಾಗಿಯೆ ಊರ್ವಶಿಯನ್ನು ನಿತ್ಯವೂ ಬಂದಿರಲು ಹೇಳಿದ್ದು... ಎಂತಾದರೂ ಕೊನೆಯಲ್ಲಿ ಊರ್ವಶಿಯನ್ನೆ ಮೀರಿಸುವಂತಹ ಅಥವಾ ಕನಿಷ್ಠ ಅವಳ ಮಟ್ಟಕ್ಕಾದರು ಸರಿಗಟ್ಟುವಂತವ ಸೃಷ್ಟಿ ಸಾಧ್ಯವಾದರೆ ತನ್ನ ಗುರಿ ಮುಟ್ಟಿದ ಹಾಗೆಯೆ ಲೆಕ್ಕ..

ಹೀಗೆಲ್ಲ ಲೆಕ್ಕಚಾರ ಹಾಕಿಯೆ ತನ್ನ ಪ್ರಯೋಗಕ್ಕೆ ಚಾಲನೆ ಕೊಟ್ಟಿದ್ದ ಬ್ರಹ್ಮದೇವ...!

(ಇನ್ನೂ ಇದೆ)
 

Comments

ಕವಿಗಳೇ ನಮಸ್ಕಾರ.. ಇವರೆಲ್ಲ ಪಾಡು ಪಡುತ್ತಿರುವ ಮಹದುದ್ದೇಶವೆ ಬೇರೊಂದಿದೆ - ಅದು ಸದ್ಯಕ್ಕೆ ಗೊತ್ತಾಗುವುದಿಲ್ಲ ! ಇಷ್ಟೆಲ್ಲ ಪಾಡು ಪಡುತ್ತಿರುವುದು ಭಗವಂತನ ಉದ್ದೇಶವಾದ ಸೃಷ್ಟಿಯ ನಿರಂತರತೆಗಾಗಿಯೆ ನೋಡಿ. ಊರ್ವಶಿಯಂತ ಬೆಂಚ್ಮಾರ್ಕ್ ಇದ್ದಿದ್ದಕ್ಕೆ ಅಹಲ್ಯೆ ಸೃಷ್ಟಿಯಾಗಿದ್ದು! :-)