ಊರು ದೊಡ್ಡದಾದಂತೆ,ಮನಸುಗಳು ಸಂಕುಚಿತವಾಗುತ್ತವಾ...??
’ಹ್ಯಾಪಿ ಜರ್ನಿ ಸರ್,ಹೋಗಿ ಬನ್ನಿ’ ಎನ್ನುತ್ತ ಸಂಜೆಯ ಮಬ್ಬುಗತ್ತಲಲ್ಲಿ ಕೈಬೀಸಿದವನು ನನ್ನನ್ನು ಯಲ್ಲಾಪುರದಿಂದ ಹುಬ್ಬಳ್ಳಿಯವರೆಗೆ ಕಾರಿನಲ್ಲಿ ಬಿಟ್ಟು ಹೋದ ಕಾರು ಡ್ರೈವರ್.ಆತ ಕಾರಿನ ಚಾಲಕನೂ ಹೌದು,ಅದರ ಮಾಲೀಕನೂ ಹೌದು.ಸಣ್ಣದಾಗಿ ನನ್ನೂರಿನಲ್ಲೊಂದು ಖಾಸಗಿ ಟ್ರಾವೆಲ್ಸ್ ನಡೆಸುವ ಆತ ಸರಿಸುಮಾರು ಹತ್ತು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ದುಡಿದು ಬಂದವನು.ಸಾಮಾನ್ಯವಾಗಿ ನಾನು ರೈಲಿನಲ್ಲಿಯೇ ಊರಿಗೆ ತೆರಳುವುದು.ನನ್ನೂರು ಯಲ್ಲಾಪುರಕ್ಕೆ ರೈಲು ತೆರಳದಿರುವ ಕಾರಣ ಸಮೀಪದ ಹುಬ್ಬಳ್ಳಿಯವರೆಗೆ ರೈಲಿನಲ್ಲಿ ತೆರಳಿ ಅಲ್ಲಿಂದ ಬಸ್ಸನ್ನಾಶ್ರಯಿಸುವುದು ನಮಗೆ ಅನಿವಾರ್ಯ.ಊರಿಗೆ ಹೋಗುವಾಗ ನಾನು ಬಸ್ಸಿನಲ್ಲಿಯೇ ನನ್ನೂರಿಗೆ ತೆರಳಿದೆನಾದರೂ ,ಮರಳಿ ಬೆಂಗಳೂರಿಗೆ ಬರುವಾಗ ನನ್ನಪ್ಪ ಹುಬ್ಬಳ್ಳಿಯವರೆಗೆ ಕಾರಿನ ವ್ಯವಸ್ಥೆ ಮಾಡಿಕೊಟ್ಟಿದ್ದರು.ನನ್ನನ್ನು ಹುಬ್ಬಳ್ಳಿಯವರೆಗೆ ಬಿಡಲು ಬಂದಿದ್ದವನು ನನ್ನ ತಂದೆಯ ಆತ್ಮೀಯ ಸ್ನೇಹಿತ.ಹಾಗಾಗಿ ನಾವು ಎಲ್ಲಿಯೇ ಪ್ರವಾಸಕ್ಕೆ ಹೋಗುವುದಾದರೂ ಆತನ ವಾಹನವೇ ನಮಗೆ ಖಾಯಂ.ಹಾಗೆ ಆತನೊಂದಿಗೆ ಹುಬ್ಬಳ್ಳಿಗೆ ಪ್ರಯಾಣಿಸುವಾಗ ಸರಿಸುಮಾರು ಒಂದೂವರೆ ಗಂಟೆಗಳ ಪ್ರಯಾಣದ ಬೇಸರವನ್ನು ಕಳೆಯಲು ನಾನು ಆತನನ್ನು ಮಾತಿಗೆಳೆದೆ.ಆತ ಬಡವನೇನಲ್ಲ.ಕಷ್ಟಜೀವಿಯಾಗಿರುವ ಆತ ಕಾರನ್ನೋಡಿಸಿಕೊಂಡು ದೇಶದ ಉದ್ದಗಲಕ್ಕೂ ಸಂಚರಿಸಿದ್ದಾನೆ.ಮೊನ್ನೆಯಷ್ಟೇ ಆತನ ಮಗ ರಸ್ತೆ ಅಪಘಾತವೊಂದರಲ್ಲಿ ಯಾರಿಗೋ ಗುದ್ದಿ ರಾದ್ದಾಂತ ಮಾಡಿಕೊಂಡು ,ಕೋರ್ಟು ಕಚೇರಿಗೆಂದು ಆರವತ್ತು ಸಾವಿರ ರೂಪಾಯಿಗಳನ್ನು ಆತ ಕಳೆದುಕೊಂದಿದ್ದಾನೆ ಎನ್ನುವುದು ನನಗೆ ಗೊತ್ತಾಯಿತು.ಕಾಕತಾಳಿಯವೆನ್ನುವಂತೆ ಆತ ಅದೇ ದಿನ ಬೆಳಿಗ್ಗೆ ನಮ್ಮೊಂದಿಗೆ ಸಿರಸಿಯ ದೇವಸ್ಥಾನಕ್ಕೂ ಬಂದಿದ್ದ.ಅಲ್ಲಿ ನಮ್ಮೊಟ್ಟಿಗೆ ಕುಳಿತು ಪ್ರಸಾದವನ್ನುಂಡ ಆತನಿಗೇನೋ ಅಸಮಾಧಾನ.’ಸಿರಸಿಯಲ್ಲಿ ಪ್ರಸಾದದ ಊಟ ಆಷ್ಟೇನೂ ಚೆನ್ನಾಗಿಲ್ಲ ಸರ್,ಅನ್ನ,ಸಾರು ಎಲ್ಲವನ್ನು ಎತ್ತಿ ಎತ್ತಿ ಎಸೆಯುತ್ತಾರೆ,ಕಾಟಾಚಾರಕ್ಕೆ ಬಡಿಸಿದಂತೆ ಬಡಿಸುತ್ತಾರೆ.ಹಾಗೆಲ್ಲ ಆಹಾರಕ್ಕೆ ಅವಮಾನ ಮಾಡುತ್ತಾರಾ ಸರ್..?? ಹಾಗೆಲ್ಲ ಮಾಡಿದರೆ ದೇವಿ ಶಾಪ ಕೊಡುತ್ತಾಳೆ ಅಷ್ಟೇ’ಎಂದ.ಮಾತು ಮುಂದುವರೆಸುತ್ತ "ರಾಜ್ಯದ ಎಲ್ಲ ಮುಖ್ಯ ದೇವಸ್ಥಾನಗಳಲ್ಲಿಯೂ ಊಟ ಮಾಡಿದ್ದೇನೆ ಸರ್,ಊಟ ಎಲ್ಲ ಕಡೆಯೂ ಚೆನ್ನಾಗಿರುವುದಿಲ್ಲ.ಆದರೆ ಕುಕ್ಕೆ ಸುಬ್ರಮಣ್ಯಕ್ಕೆ ಹೋದಾಗ ಮಾತ್ರ ಊಟ ತಪ್ಪಿಸಿಕೊಳ್ಳಬೇಡಿ.ಅಲ್ಲಿಯ ಊಟದ ರುಚಿಯೇ ರುಚಿ’ಎಂದವನ ಮಾತುಗಳನ್ನು ಕೇಳಿ ನನಗೆ ನಿಜಕ್ಕೂ ಅಚ್ಚರಿಯಾಯಿತು.ಆದರೂ ನನ್ನ ಭಾವನೆಗಳನ್ನು ಆತನಿಗೆ ತೋರ್ಪಡಿಸದೇ ,ಅವನ ಮಾತುಗಳನ್ನು ಸುಮ್ಮನೇ ಕೇಳತೊಡಗಿದೆ.ಕೆಲಕಾಲ ಸುಮ್ಮನೇ ಕಾರು ಓಡಿಸತೊಡಗಿದ ಆತ ಮತ್ತೇ,’ನಿಜಕ್ಕೂ ಸಾಧು ಸನ್ಯಾಸಿಗಳಲ್ಲೊಂದು ಅದ್ಭುತ ಶಕ್ತಿಯಿರುತ್ತದೆ ಸರ್.ಮೊನ್ನೆಯಷ್ಟೇ ಯಲ್ಲಾಪುರದಲ್ಲಿ ಐನೂರ ಜನ ನಾಗಾ ಸಾಧುಗಳು ನಡೆದು ಹೋದರು ನೋಡಿ,ಅವರು ನನ್ನ ಮನೆಯ ಬೀದಿಯನ್ನು ದಾಟಿಯೇ ಹೋದರು’ಎಂದ.ಕೆಲವು ದಿನಗಳ ಹಿಂದೆ ಉತ್ತರ ಭಾರತದ ಸನ್ಯಾಸಿಗಳ ದಂಡೊಂದು ಯಲ್ಲಾಪುರದಿಂದ ಹಾದುಹೋಗಿರುವ ಸುದ್ದಿಯನ್ನು ನೀವು ಕೇಳಿರಲಿಕ್ಕೂ ಸಾಕು.ಆತ ಅದರ ಬಗ್ಗೆ ವಿವರಿಸುತ್ತಿದ್ದ.’ಅವರು ಹಾಗೆ ಹೋಗಿದ್ದೇ ಹೋಗಿದ್ದು ಸರ್,ನನ್ನ ಬೀದಿಗೊಂದು ವಿಚಿತ್ರ ಕಳೆ ಬಂದಿದೆ.ಅದಕ್ಕೂ ಮೊದಲು ನನ್ನ ಕಾರಿಗೆ ಬಾಡಿಗೆಯೇ ಸಿಗುತ್ತಿರಲಿಲ್ಲ.ಈಗ ನಾನು ಫುಲ್ ಬಿಜಿ’ಎಂದು ಖುಷಿಯಾಗಿ ನುಡಿದ.ಆತ ಹಾಗೆ ಮಾತನಾಡುತ್ತಿದ್ದರೆ ನನಗೆ ನಿಜಕ್ಕೂ ಸಂತೋಷವಾಗುತ್ತಿತ್ತು.ಇದರಲ್ಲಿ ಸಂತೋಷ ಪಡುವಂಥದ್ದೇನಿದೆ ಎಂದು ನಿಮಗೆ ಅನ್ನಿಸಿದರೆ ಒಂದು ನಿಮಿಷ ತಾಳಿ.ನಾನು ನಿಮಗಾತನ ಹೆಸರು ಹೇಳಿಲ್ಲ. ಅಂದಹಾಗೆ ಆತನ ಹೆಸರು ಮಹ್ಮದ್ ಇಮ್ತಿಯಾಜ್..!! ಆತ ಮುಸ್ಲಿಂ ಸಮಾಜಕ್ಕೆ ಸೇರಿದ ಐವತ್ತರ ಹರೆಯದ ವ್ಯಕ್ತಿ.ಹುಟ್ಟಾ ಮುಸ್ಲಿಮನಾದರೂ ಹಿಂದೂ ದೇವಸ್ಥಾನಗಳೆಡೆಗೆ ಆತನಿಗೆ ಗೌರವವಿದೆ,ಹಿಂದೂ ಧರ್ಮೀಯ ಆಚರಣೆಗಳಲ್ಲಿ ಆತನಿಗೆ ಅಪಾರವಾದ ನಂಬಿಕೆಯೂ ಇದೆ.ನೀವು ನಂಬಲಿಕ್ಕಿಲ್ಲ.ವೈಯಕ್ತಿಕವಾಗಿ ಆತನಿಗೇನಾದರೂ ಸಮಸ್ಯೆ ಎದುರಾದರೆ ಆತ ಆಗಾಗ ಊರಿನ ಗ್ರಾಮದೇವಿಯ ದೇವಸ್ಥಾನಕ್ಕೆ ಹೋಗುವುದುಂಟು.ರಮ್ಜಾನಿನ ಉಪವಾಸಗಳನ್ನು ಆಚರಿಸುವ ಆತ ಕುಟುಂಬದ ಒಳಿತಿಗಾಗಿ ಗಣಪತಿಯ ಹೋಮವನ್ನೂ ಹಾಕಿಸುತ್ತಾನೆ ಎನ್ನುವುದನ್ನು ನಾನು ಕೇಳಿಬಲ್ಲೆ.ಒಟ್ಟಾರೆಯಾಗಿ ತೀರ ವಿದ್ಯಾವಂತನಲ್ಲದಿದ್ದರೂ ,ಧಾರ್ಮಿಕ ಪ್ರಬುದ್ಧತೆಯ ಪ್ರತೀಕನಾತ ಎಂದರೆ ತಪ್ಪಾಗಲಾರದು.
ಇದು ನಾನು ಬಲ್ಲ ಒಬ್ಬ ಇಮ್ತಿಯಾಜನ ಉದಾಹರಣೆಯಷ್ಟೇ.ನನ್ನೂರಿನಲ್ಲಿ ಇಂಥಹ ಹತ್ತು ಹಲವು ಧಾರ್ಮಿಕ ಸಹಿಷ್ಣು ಮುಸ್ಲಿಮರಿದ್ದಾರೆನ್ನುವುದು ನನಗೆ ಹೆಮ್ಮೆಯ ವಿಷಯ.ಅಸಲಿಗೆ ನನ್ನೂರಿನಲ್ಲಿ ಧಾರ್ಮಿಕ ಸಂಘರ್ಷಗಳೇ ಇಲ್ಲವೆಂದರೆ ಅತಿಶಯೋಕ್ತಿಯೇನಿಲ್ಲ.ನಿಮಗೆ ಗೊತ್ತಿರಲಿಕ್ಕಿಲ್ಲ.ಯಲ್ಲಾಪುರದ ಗ್ರಾಮದೇವಿಯ ಜಾತ್ರೆ ಕರ್ನಾಟಕದ ಬಹುದೊಡ್ಡ ಜಾತ್ರೆಗಳ ಪೈಕಿ ಒಂದು.ಸುಮಾರು ಒಂಭತ್ತು ದಿನಗಳ ಕಾಲ ನಡೆಯುವ ಈ ಜಾತ್ರಾ ಕಾಲಾವಧಿಯಲ್ಲಿ ಗ್ರಾಮದ ’ಅಮ್ಮ’ನಿಗೆ ಹಲವಾರು ಮುಸ್ಲಿಂ ಕುಟುಂಬಗಳು ಸೀರೆ ಉಡಿ,ಕಾಣಿಕೆಗಳನ್ನು ಅರ್ಪಿಸುತ್ತಾರೆಂದರೆ ನೀವು ನಂಬಲೇಬೇಕು. ಮನೆಯಲ್ಲಿದ್ದ ಆಕಳೋ,ಕುರಿಯೋ ಕಳೆದು ಹೋದರೆ ಕವಡೆ ಹಾಕಿಸಿ ಶಾಸ್ತ್ರ ಕೇಳಲೆಂದು ಆಂಜನೇಯನ ದೇಗುಲಕ್ಕೆ ಬರುತ್ತಿದ್ದ ಅನೇಕ ಮುಸ್ಲಿಂ ಯುವಕರನ್ನು ನಾನು ವೈಯಕ್ತಿಕವಾಗಿ ಬಲ್ಲೆ.ಕೇವಲ ಮುಸ್ಲಿಮರು ಮಾತ್ರ ಧರ್ಮ ಸಹಿಷ್ಣುಗಳೇ ಎಂಬ ಪ್ರಶ್ನೆ ಓದುಗರ ಮನದಲ್ಲೇಳುವುದಕ್ಕೂ ಮುನ್ನ ನಾನೋದಿದ ಪ್ರೌಢಶಾಲೆಯ ಕತೆಯನ್ನು ಹೇಳಿಬಿಡುತ್ತೇನೆ ಕೇಳಿ.ಹೋಲಿ ರೋಜರಿ ಪ್ರೌಢಶಾಲೆ ಎನ್ನುವುದು ನನ್ನ ಹೈಸ್ಕೂಲಿನ ನಾಮಧೇಯ.ಪ್ರತಿವರ್ಷವೂ ಸರಾಸರಿ ನೂರಿಪ್ಪತ್ತರಿಂದ ನೂರಾಮೂವತ್ತು ವಿದ್ಯಾರ್ಥಿಗಳು ಓದುವ ಜ್ನಾನಮಂದಿರವದು.ಇದೇ ಹೆಸರಿನ ಪ್ರಾಥಮಿಕ ಶಾಲೆಯೂ ಸೇರಿದಂತೆ ರೋಜರಿ ಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುವ ಆಡಳಿತ ಮಂಡಳಿ ಕ್ರೈಸ್ತ ಸಮುದಾಯಕ್ಕೆ ಸೇರಿದ್ದು. ನಾನು ಓದುವಾಗ ಶಾಲೆಯ ಮುಖ್ಯೋಧ್ಯಾಪಕರಾಗಿದ್ದವರ ಹೆಸರು ಫಾದರ್ ರೇಮಂಡ್ ಫರ್ನಾಂಡಿಸ್.ಬಹುಶ: ಈಗಲೂ ಅವರೇ ಅಲ್ಲಿನ ಮುಖ್ಯೋಧ್ಯಾಪಕರಾಗಿರುವರೋ,ಇಲ್ಲವೋ ನನಗೆ ತಿಳಿಯದು.ಕ್ರೈಸ್ತ ಸನ್ಯಾಸಿಗಳ ಶಾಸ್ತ್ರೀಯ ಉಡುಗೆಯಾಗಿದ್ದ ಬಿಳಿಯ ನಿಲುವಂಗಿಯನ್ನು ಧರಿಸಿ ಹೈಸ್ಕೂಲಿನ ಆವರಣದುದ್ದಕ್ಕೂ ಅವರು ನಡೆಯುತ್ತಿದ್ದರೆ,ಪೂರ್ವಾಗ್ರಹ ಪೀಡಿತ ಮನಸುಗಳಿಗೆ ಅವರಲ್ಲೊಬ್ಬ ಕಟ್ಟಾ ಕ್ರೈಸ್ತ ಮತ ಪ್ರಚಾರಕ ಗೋಚರಿಸಲಿಕ್ಕೂ ಸಾಕು.ಆದರೆ ಕೊಂಚ ರೇಮಂಡ್ ಫರ್ನಾಂಡಿಸರ ವ್ಯಕ್ತಿತ್ವವನ್ನು ಅರಿತುಕೊಂಡರೆ ನೀವು ಕಾಣದ ಆ ವ್ಯಕ್ತಿಯ ಬಗ್ಗೆ ನಿಮ್ಮಲ್ಲೊಂದು ಅವ್ಯಕ್ತ ಗೌರವ ಖಂಡಿತವಾಗಿಯೂ ಮೂಡುತ್ತದೆ.ಫಾದರ್ ರೇಮಂಡ್ ಅದ್ಭುತವಾಗಿ ಹಾಡುತ್ತಾರೆ. ದೇವಸುತ ಏಸು ಕ್ರಿಸ್ತನ ಬಹುತೇಕ ಕತೆಗಳು ನಮಗೆ ಪರಿಚಿತವಾಗಿದ್ದು ಅವರಿಂದಲೇ.ವಿದ್ಯಾರ್ಥಿಗಳು ಆಗೊಮ್ಮೆ ಈಗೊಮ್ಮೆ ಸಮೀಪದ ಚರ್ಚಿಗೆ ತೆರಳುತ್ತಿದ್ದೇವಾದರೂ ಅದು ಯಾರಿಗೂ ಖಡ್ಡಾಯವಾಗಿರಲಿಲ್ಲ.ಏಸುವಿನ ಕತೆಗಳನ್ನು ಅರ್ಥೈಸುವ ಭರದಲ್ಲಿ ಬಾಯಿತಪ್ಪಿಯೂ ಅನ್ಯಧರ್ಮೀಯರ ಅವಹೇಳನ ಅಲ್ಲಿ ನಡೆಯುತ್ತಿರಲಿಲ್ಲ.ಶಾಲಾ ಮಟ್ಟದ ಸಂಗೀತ ಸ್ಪರ್ಧೆಯೊಂದರಲ್ಲಿ ಕೆಲವು ಕ್ರೈಸ್ತ ಹುಡುಗರು ಕ್ರಿಸ್ತನ ಮಹಿಮೆಯನ್ನು ಸಾರುವ ಹಾಡುಗಳನ್ನು ಹಾಡಿಯೂ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ವಿಫಲರಾಗಿದ್ದರು.ಅಂಥದ್ದೊಂದು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ ಹುಡುಗ ’ಭಾಗ್ಯದ ಲಕ್ಷ್ಮೀ ಬಾರಮ್ಮ’ಎನ್ನುವ ಭೀಮ್ ಸೇನ್ ಜೋಶಿಯವರ ಹಾಡನ್ನು ಹಾಡಿದ್ದ ಎಂಬುದಾಗಿ ನನ್ನ ನೆನಪು.ಶಾಲೆಯ ವಾರ್ಷಿಕ ಸಮ್ಮೇಳನಗಳಲ್ಲಿ ನಡೆಯುತ್ತಿದ್ದ ನಾಟಕಗಳ ಪೈಕಿ ಭೂಕೈಲಾಸ್,ಬೇಡ ವಾಲ್ಮೀಕಿಯಾದ ಕತೆಯಂಥಹ ಸನ್ನಿವೇಶಗಳದ್ದೇ ಸಿಂಹಪಾಲು. ಎಷ್ಟು ಚಂದದ ವಾತಾವರಣವಿದೆ ಗೊತ್ತೆ ನನ್ನ ಪ್ರೌಢಶಾಲೆಯಲ್ಲಿ?ನನ್ನ ಹೈಸ್ಕೂಲಿನ ಗೆಳತಿಯರು ಮುಡಿಯ ತುಂಬ ಹೂವು ಮುಡಿಯುತ್ತಿದ್ದರು.ಕೈತುಂಬ ಬಳೆ ತೊಟ್ಟು,ಹಣೆಗೆ ಕೆಂಪನೆಯ ಕುಂಕುಮವಿಟ್ಟುಕೊಂಡೇ ಶಾಲೆಗೆ ಬರುತ್ತಿದ್ದರು.ಯಾವುದಕ್ಕೂ ಅಲ್ಲಿ ಪ್ರತಿಬಂಧವಿರಲಿಲ್ಲ. ಸಂಕ್ರಾತಿಯ ಹಬ್ಬದ ಮರುದಿನ ಎಳ್ಳು ಬೀರಲೆಂದೇ ಒಂದು ಘಂಟೆಯಷ್ಟು ಬಿಡುವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು.ಅಪ್ಪಟ ಹಿಂದೂ ಪದ್ದತಿಯಲ್ಲಿ ಎಳ್ಳುಬೆಲ್ಲವನ್ನು ಶಿಕ್ಷಕರಿಗೆ ಕೊಟ್ಟು ಕಾಲಿಗೆ ನಮಸ್ಕರಿಸಿದರೇ ಕೊಂಚವೂ ಬೇಸರವಿಲ್ಲದೆ ಮನತುಂಬಿ ಹಾರೈಸುತ್ತಿದ್ದರು ಕ್ರೈಸ್ತ ಪಾದ್ರಿ.ಪ್ರತಿವರ್ಷವೂ ಹತ್ತನೆಯ ತರಗತಿಗಳ ಫಲಿತಾಂಶಗಳಲ್ಲಿ ತೊಂಭತ್ತಕ್ಕಿಂತಲೂ ಹೆಚ್ಚಿನ ಪ್ರತಿಶತ ವಿದ್ಯಾರ್ಥಿಗಳ ತೇರ್ಗಡೆಯ ಫಲಿತಾಂಶವನ್ನು ನೀಡುವ ನನ್ನ ಶಾಲೆ ನಿಜಕ್ಕೂ ಒಂದು ಆದರ್ಶ ಶಿಕ್ಷಣಸಂಸ್ಥೆ.ನನ್ನೂರಿನಲ್ಲಿ ಕಾಯಿಲೆಗಾಗಿ ಮೌಲ್ವಿಗಳ ತಾಯತವನ್ನು ಕಟ್ಟಿಸಿಕೊಳ್ಳುವ ಹಿಂದೂಧರ್ಮೀಯರಿದ್ದಾರೆ.ಭೂತ ಪ್ರೇತದ ಬಾಧೆಯಿಂದ ತಪ್ಪಿಸಿಕೊಳ್ಳಲು ಆಂಜನೇಯನ ಮೊರೆ ಹೋಗುವ ಮುಸ್ಲಿಂ ಬಾಂಧವರಿದ್ದಾರೆ. ಎಲ್ಲ ಚಿಕ್ಕ ಪಟ್ಟಣಗಳಲ್ಲಿರುವಂತೆ.ಅರ್ಥಹೀನ ಮತ್ಸರ,ಕಾರಣವಿಲ್ಲದ ಕೋಳಿ ಜಗಳ,ಅಲ್ಲೊಂದು ಇಲ್ಲೊಂದು ಹಾದರ,ಸಣ್ಣಸಣ್ಣ ಪ್ರೇಮಕತೆಗಳು,ಅನಗತ್ಯ ಸಣ್ಣತನಗಳಂಥಹ ರಗಳೆಗಳು ನನ್ನೂರಿನಲ್ಲಿಯೂ ಇದೆಯಾದರೂ,ಧಾರ್ಮಿಕತೆಯ ವಿಷಯದಲ್ಲಿ ಯಲ್ಲಾಪುರವೆನ್ನುವುದು ಪರಿಪಕ್ವತೆಯ ನಾಡು.ಇದು ನನ್ನೊಬ್ಬನ ಊರಿನ ಕತೆ ಮಾತ್ರವಲ್ಲ.ಚಿಕ್ಕಚಿಕ್ಕ ಪಟ್ಟಣದ ವಾಸಿಗಳು ತಮ್ಮ ಊರಿನ ಬೀದಿಗಳನ್ನೊಮ್ಮೆ ಹೊಕ್ಕಿ ನೋಡಿದರೆ ಪ್ರತಿಯೊಬ್ಬರಿಗೂ ಹೆಚ್ಚುಕಡಿಮೆ ಇವೇ ಕತೆಗಳು ಕಾಣಸಿಗುತ್ತವೆ.
ಮೊನ್ನೆಯಷ್ಟೇ ಬೆಂಗಳೂರು ನಗರ ಸಾರಿಗೆಯ ಬಸ್ಸಿನಲ್ಲಿ ತೆರಳುತ್ತಿದ್ದಾಗ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಕಂಡೆ.ಬೋಳು ಹಣೆಯ ಹುಡುಗಿಯೊಬ್ಬಳು ’ನಮ್ಮ ಸ್ಕೂಲಲ್ಲಿ ಬಳೆ ಹಾಕ್ಕೊಳೋಕೆ ಬಿಡಲ್ಲಾ ಕಣೆ,ಕುಂಕುಮ ಇಟ್ರೇ ಫೈನ್ ಹಾಕ್ತಾರೆ,ನಮ್ದು ಕ್ರೈಸ್ಟ್ ಸ್ಕೂಲ್ ಅಲ್ವಾ ಅದಕ್ಕೆ’ಎನ್ನುತ್ತ ಗೆಳತಿಗೆ ವಿವರಿಸುತ್ತಿದ್ದರೆ ನನಗೆ ನನ್ನೂರಿನ ಕತೆ ನೆನಪಾಯಿತು.ಬೆಂಗಳೂರಿಗೆ ಬಂದು ಹತ್ತು ವರ್ಷಗಳಲ್ಲಿ ಇಂಥಹ ಹತ್ತು ಹಲವು ಅಪಸವ್ಯಗಳನ್ನು ಕಂಡಿದ್ದೇನೆ. ಇಲ್ಲಿ ತಂತ್ರಜ್ನಾನವಿದೆ. ಭಯಂಕರ ಶಿಕ್ಷಣವಿದೆ.ಉದ್ಯೋಗವನ್ನರಸಿ ಬಂದವರಿಗೆ ಉದ್ಯೊಗವಿದೆ.ಆಧುನಿಕತೆ ಮರ ವಿಶಾಲವಾಗಿ ಚಾಚಿಕೊಂಡಿದೆ.ಆದರೆ ಜಾತಿಯತೆಯ ಬೇರುಗಳು ಅಷ್ಟೇ ಆಳಕ್ಕಿಳಿದಿವೆ.ಇಲ್ಲಿ ಬಾಡಿಗೆ ಮನೆಗಳ ಮುಂದೆ’ವೆಜ್ ಓನ್ಲಿ ಎನ್ನುವನಾಮಫಲಕಗಳು ಸಸ್ಯಾಹಾರ ಶ್ರೇಷ್ಠತೆಯ ವ್ಯಸನಿಗಳ ದುರಂಹಕಾರದ ಪ್ರತೀಕವೆನ್ನುವಂತೆ ನೇತಾಡುತ್ತಿರುತ್ತವೆ.’ನಾವು ಬ್ರಾಹ್ಮಣರು ಸರ್,ಬೇರೆ ಜಾತಿಯವರ ಮನೆಯ ಕಾರ್ಯಕ್ರಮಗಳಿಗೆಲ್ಲ ಹೋಗುವುದಿಲ್ಲ’ಎನ್ನುವ ಜಾತಿರಕ್ಕಸರ ಮಾತುಗಳಿವೆ.ಬೆಂಗಳೂರು ಮಹಾನಗರದ ಕತೆ ಹೀಗಾದರೆ,ನಾಡಿನ ಅತ್ಯಂತ ಬುದ್ದಿವಂತರ ನಗರವಾದ ಮಂಗಳೂರಿನದ್ದು ಇನ್ನೊಂದು ಕತೆ.ಅಲ್ಲಿ ’ಮುಸ್ಲಿಮರನ್ನೆಲ್ಲ ಕೊಚ್ಚಿ ಹಾಕಿ’ಎನ್ನುವ ಹಿಂದೂ ಅತಿರೇಕಿಗಳು ಒಂದೆಡೆ ಗುಟುರು ಹಾಕುತ್ತಿದ್ದರೆ,’ಹಿಂದೂ ಹುಡುಗಿಯರನ್ನೆಲ್ಲ ರೇಪ್ ಮಾಡಬೇಕು’ಎನ್ನುವ ಮುಸ್ಲಿಂ ಧರ್ಮಾಂಧರು ಬೊಬ್ಬಿರಿಯುತ್ತಾರೆ.ನನ್ನೂರಿಗೆ ಹೋಲಿಸಿದರೆ ಮಂಗಳೂರು ಸಾಕಷ್ಟು ದೊಡ್ಡದು.ಬೆಂಗಳೂರಂತೂ ಬಿಡಿ,ಬಹುಶ: ಜಯನಗರದಒಂದು ಪ್ರದೇಶವೇ ಇಡೀ ಯಲ್ಲಾಪುರದಷ್ಟಾಗಬಹುದು.ಇಷ್ಟಾಗಿಯೂ ನಗರಗಳಲ್ಲಿಯೇ ಹೆಚ್ಚು ಕಾಣಸಿಗುವ ಧರ್ಮವ್ಯಸನದ ಕಾರಣ ನನ್ನ ತರ್ಕಕ್ಕೆ ನಿಲುಕದ ವಿಷಯ.ಬಹುಶ: ಊರು ಹೆಚ್ಚು ಹೆಚ್ಚು ವಿಶಾಲವಾಗುತ್ತ ಹೋದಂತೆ ,ಊರ ಜನರ ಮನಸ್ಸು ಜಾಸ್ತಿ ಜಾಸ್ತಿ ಸಂಕುಚಿತವಾಗುತ್ತ ಸಾಗುತ್ತದೇನೋ ಅಲ್ಲವೇ..??
Comments
ಉ: ಊರು ದೊಡ್ಡದಾದಂತೆ,ಮನಸುಗಳು ಸಂಕುಚಿತವಾಗುತ್ತವಾ...??
ನಿಜ ಸರ್. ದೊಡ್ಡ ನಗರಗಳಲ್ಲಿ ಈಗ 'ಮಾನವೀಯತೆ' oasis ನಂತಾಗಿದೆ. ನಾವೆಲ್ಲರೂ ಜಾತಿ ಮತದ ಗೋಡೆಗಳೊಳು ಬಂಧಿತರು.
ಉ: ಊರು ದೊಡ್ಡದಾದಂತೆ,ಮನಸುಗಳು ಸಂಕುಚಿತವಾಗುತ್ತವಾ...??
ವಿಚಾರಪೂರಿತವಾಗಿದೆ. ಈಗ ಸಣ್ಣಮನಸ್ಸುಗಳು ಹಳ್ಳಿಗಳಲ್ಲೂ ತುಂಬಿವೆ. ಅವಕಾಶ, ಸಂದರ್ಭಗಳು ಕಡಿಮೆಯಾದ್ದರಿಂದ ಹೊರಹೊಮ್ಮಿಲ್ಲ ಅಷ್ಟೆ! ನೈತಿಕತೆ ಬೋದಿಸದ ಶಿಕ್ಷಣ ಪದ್ಧತಿ ಇದಕ್ಕೆ ಮೂಲಕಾರಣವಾಗಿದೆ.