ಅಹಲ್ಯಾ ಸಂಹಿತೆ - ೧೮ (ಕುಂಠಿತ ವೇಗದ ಪ್ರಗತಿ)

0

ಆದರೆ ಈ ಪ್ರಯೋಗವೇನು ಅಷ್ಟು ಸುಲಭದ್ದಲ್ಲವೆಂದು ಚತುರ್ಮುಖ ಬ್ರಹ್ಮನಿಗು ಚೆನ್ನಾಗಿ ಅರಿವಿತ್ತು...
 
ಅದರ ಕಾರಣವೇನೆಂದು ಅರಿಯಲು ತೀರಾ ತಡಕಾಡಬೇಕಾದ ಅಗತ್ಯವೇನಿರಲಿಲ್ಲ; ಇದುವರೆವಿಗು ಪ್ರಕೃತಿ-ಪುರುಷ ಅಂಶಗಳ ಸೂಕ್ತ ಸಂಯೋಗದ ಫಲಿತವಾಗಿ ಜೀವಸೃಷ್ಟಿಯಾಗುವ ವಿಜ್ಞಾನದಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ಅವನ ಪ್ರಯೋಗಾಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಯೋನಿಜ ಸೃಷ್ಟಿಯ ಪ್ರಯತ್ನ ಮಾಡಹೊರಟಿದ್ದ ಬ್ರಹ್ಮದೇವ - ಅದೂ ಊರ್ವಶಿಯನ್ನು ಕಂಡ ಮೇಲೆ...!
 
ಸಾಮಾನ್ಯ, ನಿಸರ್ಗಸಹಜ ಸೃಷ್ಟಿಯ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದವನಿಗೆ, ಪರಿಪೂರ್ಣತೆಯ ಮತ್ತೊಂದು ಹೆಸರೆ ತಾನೇನೊ? ಎನ್ನುವಂತಿದ್ದ ಊರ್ವಶಿಯನ್ನು ನೋಡುತ್ತಿದ್ದಂತೆ ಅರಿವಾಗಿಹೋಗಿತ್ತು - ಅವಳು ಅಯೋನಿಜ ಸೃಷ್ಟಿಯೆಂದು...
 
ಅವಳು ಸೃಜಿಸಲ್ಪಟ್ಟ ಕಥೆಯನ್ನು ಕೇಳಿದಾಗಲೆ ಅನುಮಾನವಾಗಿತ್ತು - ಅದೇನೊ ಹೊಸರೀತಿಯ ಪ್ರಕ್ರಿಯೆ ಇರಬಹುದೆಂದು... ಹೇಳಿ ಕೇಳಿ, ಗಂಡು ಹೆಣ್ಣಿನ ಸಂಗಮವಿರದೆ ಜೀವಸೃಷ್ಟಿಯೆ ಸಾಧ್ಯವಿಲ್ಲ ಎಂದು ದೃಢವಾಗಿ ನಂಬಿದ್ದ ಕಾಲವದು.
 
ಆದರೆ ಆ ರೀತಿಯ ಯೋನಿಜ ಸೃಷ್ಟಿಯನ್ನೆ ಲಕ್ಷಾಂತರ ವರ್ಷಗಳಿಂದ ಮಾಡಿಕೊಂಡು ಬಂದಿದ್ದರು, ಯಾಕೊ ಪರಿಪೂರ್ಣವೆನ್ನುವ ತಳಿಯ ಉದ್ಭವವೆ ಆಗಿರಲಿಲ್ಲ. ಪ್ರತಿ ಸಂತತಿಯಲ್ಲಿಯೂ ಏನಾದರೂ ಆಶ್ಚರ್ಯಪೂರ್ವಕವೆನ್ನುವ ಅಂಶಗಳು ಕಾಣಿಸಿಕೊಂಡಷ್ಟೆ ಸಹಜವಾಗಿ, ಎದ್ದು ಕಾಣಬಲ್ಲ ಲೋಪದೋಷಗಳು ಹುಟ್ಟಿಕೊಂಡು ಬರುತ್ತಿದ್ದವು, ಜತೆಜತೆಯಾಗಿ...
 
ಅದನ್ನೆಲ್ಲ ನೋಡುತ್ತ ಇದ್ದಂತೆ ಎಷ್ಟೊ ಬಾರಿ ಬ್ರಹ್ಮದೇವನಿಗೂ ಅನಿಸಿದ್ದುಂಟು - ಯೋನಿಜನ್ಯ ಸೃಷ್ಟಿಯಲ್ಲಿ ಪರಿಪೂರ್ಣ ಸೃಷ್ಟಿಯೆನ್ನುವುದು ಬಹುಶಃ ಮರೀಚಿಕೆಯೇನೊ ? ಎಂದು...
 
ಆದರೆ ಅವನಿಗೆ ವಹಿಸಿದ್ದ ಪ್ರಯೋಗದ ಮುಖ್ಯ ಗಮ್ಯವೆ ನಿರಂತರವಾಗಿ ತಳಿಯನ್ನು ಉತ್ತಮಪಡಿಸುತ್ತ ಅದರ ಪರಿಪೂರ್ಣ ಹಂತಕ್ಕೆ ಕೊಂಡೊಯ್ಯುವುದು. ಹೀಗಾಗಿ ನಿಲ್ಲದ ನಿರಂತರ ಪ್ರಯತ್ನ ಸಾಗಿಯೆ ಇದೆ ಸಹಸ್ರಾರು-ಲಕ್ಷಾಂತರ ವರ್ಷಗಳಿಂದ...
 
ಕೊನೆಗೆ ಇನ್ನೇನು ಈ ಗಮ್ಯ ಸಾಧಿಸಲಸಾಧ್ಯವಾದ ಗುರಿ ಎನ್ನುವ ನಿರಾಶದಾಯಕ ತೀರ್ಮಾನಕ್ಕೆ ಬರುವ ಹೊತ್ತಿಗೆ ಸರಿಯಾಗಿ ಊರ್ವಶಿಯ ಕಥಾನಕ ಬೆಳಕಿಗೆ ಬಂದಿತ್ತು.. ಅದರೊಂದಿಗೆ ಬ್ರಹ್ಮದೇವನೆ ಆಶೆಯೂ ಮತ್ತೆ ಚಿಗುರಿತ್ತು - ಕ್ಷಿತಿಜದಲ್ಲೊಂದು ಕ್ಷೀಣ ಬೆಳಕು ಕಂಡಂತಾಗಿ.
 
ಸೃಷ್ಟಿಕರ್ತನೆಂದೆ ಬಿರುದಾಂಕಿತನಾಗಿ, ಸೃಷ್ಟಿಪ್ರಕ್ರಿಯೆಯ ಪಿತಾಮಹನೆಂದೆ ಹೆಸರಾದ ಮಹಾನ್ ವಿಜ್ಞಾನಿ ಬ್ರಹ್ಮದೇವನಿಗೆ ಆ ಅನುಭವದ ಕಾರಣದಿಂದಲೆ ಊರ್ವಶಿಯ ಸೃಷ್ಟಿಯ ವಿಭಿನ್ನ ಹಿನ್ನಲೆ ತಟ್ಟನೆ ಗೋಚರಿಸಿಬಿಟ್ಟಿದ್ದು..!
 
ಎಲ್ಲವು, ಸರ್ವತರದಲ್ಲಿಯೂ ಪರಿಪಕ್ವವಿದ್ದ ಅಂದಚೆಂದದ ಅಂಗಗಳ ಲಾವಣ್ಯವತಿಯನ್ನು ಕಾಣುತ್ತಿದ್ದ ಹಾಗೆಯೆ ಅದರಲ್ಲೇನೊ ವಿಶೇಷತೆಯಿದೆಯೆಂದರಿತು ಆ ವಿವರಗಳನ್ನು ಕೆದಕತೊಡಗಿದಂತೆ, ಚಾಣಕ್ಷಮತಿ ಬ್ರಹ್ಮದೇವನಿಗೆ ಅದರ ಸುಳಿವು ಸಿಕ್ಕಿಹೋಗಿತ್ತು...
 
ಆದರೆ ಆ ಅಯೋನಿಜ ಸೃಷ್ಟಿಯನ್ನು ಸಾಧ್ಯವಾಗಿಸಿದ ರಹಸ್ಯ ಪ್ರಕ್ರಿಯೆ ಯಾವುದು ಎಂದು ಮಾತ್ರ ಗೊತ್ತಾಗಿರಲಿಲ್ಲ...!ಜೀವಕೋಶದ ಕಣಮೂಲಗಳ ಮಟ್ಟದಲ್ಲೆ ಏನೊ ಕೈ ಚಳಕ ನಡೆದಿರಬೇಕೆಂದು ಮಾತ್ರವೆ ಊಹಿಸಬಲ್ಲವನಾಗಿದ್ದ ಬ್ರಹ್ಮದೇವ, ಆ ಕೋಶಗಳಿಂದ ಅದರ ತದ್ರೂಪಿಯನ್ನೆ ಸೃಜಿಸಿ ಮೂಲಕೋಶವನ್ನೆ ದ್ವಿಗುಣಗೊಳಿಸುವ ಸಾಧ್ಯತೆಯನ್ನು ಕುರಿತು ಕೇಳಿದ್ದ...
 
ಇಲ್ಲಿಯೂ ಅಂತದ್ದೆ ಚಳಕ ನಡೆದಿದೆಯೆಂದು ಧಾರಾಳವಾಗಿ ಊಹಿಸಬಲ್ಲವನಾದರು, ಅದರ ವಿಸ್ತೃತ ವಿವರವೆಲ್ಲ ಗೊತ್ತಿರಲಿಲ್ಲ. ಆದರೆ ಆ ರೀತಿಯ ಸೂಕ್ಷ್ಮಸುಳಿವು ಸಿಕ್ಕಿದ ಮೇಲೆ ಅವನಂತಹ ಮಹಾನ್ ವಿಜ್ಞಾನಿ ಸುಮ್ಮನಿರುವನೆ ?
 
ಊರ್ವಶಿಯು ಹೇಗೂ ಕಣ್ಮುಂದೆಯೆ ಇರುವಳು... ಪ್ರಯೋಗದ ನಿರಂತರ ಬಳಕೆಗೆ ಅವಳೆ ಜೀವಂತ ಸಿಗುವುದರಿಂದ ತನ್ನೆಲ್ಲ ಪ್ರಯತ್ನಗಳಿಗು ತಾಳೆ ಹಾಕಿ ನೋಡಲು ಮತ್ತು ನಿರಂತರ ಪರಿಶೋಧಿಸುತ್ತ ತನ್ನ ಸಂಶೋಧನೆಯನ್ನು ಉತ್ತಮಪಡಿಸುತ್ತ ಹೋಗಲಿಕ್ಕೆ, ಅವಳ ಈ ಇರುವಿಕೆಯೆ ಆಯಾಚಿತ ವರದ ಹಾಗೆ...
 
ಅವಳು ಸಹಕರಿಸುತ್ತ ಹೋದರೆ, ತಾನು ತನ್ನ ಗಮ್ಯ ಮುಟ್ಟುವುದರಲ್ಲಿ ಸಂದೇಹವೇನೂ ಇಲ್ಲವೆಂದು ಅರಿವಾಗಿದ್ದ ಕಾರಣಕ್ಕೋ ಏನೊ ಕೊಂಚವೂ ಬಿಡುವು ನೀಡದೆ ತಕ್ಷಣವೆ ತನ್ನ ಸಂಶೋಧನೆಯನ್ನು ಆರಂಭಿಸಿಬಿಟ್ಟಿದ್ದ 'ಹಿಮ್ಮುಖ ತಂತ್ರಜ್ಞತೆ'ಯ ನೀತಿಸೂತ್ರವನ್ನು ಅನುಕರಿಸುತ್ತ..
 
ಆದರೆ ಈ ವಿಧಾನದಲ್ಲಿನ ಪ್ರಮುಖ ಇತಿಮಿತಿಯೆಂದರೆ, ಊರ್ವಶಿಯೆನ್ನುವ ಫಲಿತ ಕಣ್ಣ ಮುಂದಿದ್ದರು ಅವಳನ್ನು ಕೇವಲ ಬಾಹ್ಯ ರೀತಿಯ ತಪಾಸಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಬಹುದಿತ್ತೆ ವಿನಃ, ಯಾವುದೆ ಅಂಗಛೇಧನದಂತಹ ಶಸ್ತ್ರಚಿಕಿತ್ಸೆಗೊಳಪಡಿಸಲು ಸಾಧ್ಯವಿರಲಿಲ್ಲ...
 
ಆಂತರಿಕ ಮತ್ತು ಬಾಹ್ಯದೆಲ್ಲ ವಿವರಗಳಿಗು ಕೇವಲ ಬಾಹ್ಯರೀತಿಯ ಚಿಕಿತ್ಸೆ, ಪರೀಕ್ಷೆಗಳ ಮೂಲಕ ಮಾಹಿತಿ ಸಂಗ್ರಹಿಸುವಾಗ ಕೆಲವು ಮಾತ್ರವೆ ನೇರವಾದ ಉತ್ತರ ನೀಡುವಂತದಾಗಿದ್ದರೆ, ಮಿಕ್ಕ ಬಹುತೇಕ ಇಂಗಿತಗಳು ಕೇವಲ ಪರೋಕ್ಷ ಮಾತ್ರವಾಗಿ ಸೂಕ್ತ ಊಹೆಗಳನ್ನು ಮಂಡಿಸಲು ಮಾತ್ರವೆ ಸಹಕಾರಿಯಾಗುವಂತದ್ದು...
 
ಹೀಗಾಗಿ ಸಾಧ್ಯವಿರುವ ಪ್ರತಿ ಊಹೆಯನ್ನು ಪರಿಗಣಿಸುತ್ತ ಒಂದೊಂದಾಗಿ ಅದು ಸರಿಯೆ, ತಪ್ಪೆ ಎನ್ನುವ ಪರೀಕ್ಷೆಗೆ ಒಳಪಡಿಸಿ ಎಳ್ಳು ಜೊಳ್ಳನ್ನು ಬೇರ್ಪಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿತ್ತು. ಸಹನೆ ಕಳೆದುಕೊಳ್ಳದೆ ಅದನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುವುದೇನು ಸಾಮಾನ್ಯದ ಕೆಲಸವೆ ? ಅದರಲ್ಲು ಈ ಮಹತ್ವದ ಪ್ರಯೋಗ ಹಿಂದಿನ ಅನುಭವವಿಲ್ಲದೆ ಬರಿಯ ಸಿದ್ದಾಂತದ ಆಸರೆಯಲ್ಲಿ ನಡೆಯಬೇಕಾದ ಕಾರಣ ಯಾರನ್ನೊ ಸೂಕ್ತರಾದವರೊಬ್ಬರನ್ನು ನಿಯಮಿಸಿ ಯಾಂತ್ರಿಕವಾಗಿ ನಡೆಸಿಕೊಂಡು ಹೋಗುವಂತದ್ದಲ್ಲ...
 
ಮೂಲತಃ ತಳಿಶಾಸ್ತ್ರದ ಮಹಾನ್ ವಿಜ್ಞಾನಿಯಾದ ಬ್ರಹ್ಮದೇವನಿಗೆ ಸಹನೆಯಿಂದ ನಿರಂತರ ಪ್ರಯೋಗ ನಡೆಸುವುದೇನು ದೊಡ್ಡ ವಿಷಯವಾಗಿರಲಿಲ್ಲ - ಅದರಲ್ಲೂ ಆ ಪ್ರಯೋಗ ಮತ್ತದರ ಫಲಿತಾಂಶ ಅವನ ಮನಸಿಗೆ ತೀರಾ ಹತ್ತಿರವಾದ ವಸ್ತುವಿಗೆ ಸಂಬಂಧಪಟ್ಟಿದ್ದು...
 
ಆದರೆ ಬರಿಯ ಪ್ರಯೋಗ ಮಾಡಿಕೊಂಡು ಕೂತಿರಲು ಅವನ ಮಿಕ್ಕ ಜವಾಬ್ದಾರಿ ಬಿಡಬೇಕಲ್ಲಾ ? ನಿರಂತರ ಸೃಷ್ಟಿಯ ಪ್ರಸಕ್ತ ಕಾರ್ಯವೂ ಅಡಚಣೆಯಿರದೆ ಸಾಗಿಕೊಂಡಿರಬೇಕು ತಾನೆ ? ಹೆಣ್ಣು ಗಂಡುಗಳೆಂಬ ಪ್ರಕೃತಿ ಪುರುಷ ಅಂಶಗಳನ್ನು ಸೃಜಿಸಿ ಬಿಟ್ಟ ಮೇಲೆ ಸೃಷ್ಟಿಕಾರ್ಯವೇನೊ ತಂತಾನೆ ನಡೆದುಕೊಂಡು ಹೋಗುತ್ತಿದೆ ನಿಜ ; ಆದರೆ ಅದರ ಗುಣಮಟ್ಟ, ಫಲಿತವಿನ್ನು ಮೊದಲು ಸಾಧಿಸಲುಬಯಸಿದ್ದ ನಿರೀಕ್ಷಿತ ಮಟ್ಟವನ್ನಿನ್ನು ಮುಟ್ಟಿಲ್ಲ...
 
ಅಲ್ಲುಂಟಾಗುವ ಕನಿಷ್ಠ ಸ್ತರದ ಪ್ರಗತಿಗು ಅದರ ನಿರಂತರ ಮೇಲುಸ್ತುವಾರಿಕೆ ತಪ್ಪಿದ್ದಲ್ಲ. ಅಲ್ಲದೆ ಅದನ್ನು ಹತೋಟಿಯಲ್ಲಿಡುವ ಸ್ಥಿತಿಕಾರಕ ವಿಷ್ಣು ಮತ್ತು ಲಯಕರ್ತ ಶಿವನ ಜತೆಗಿನ ಹೊಂದಾಣಿತ ಜತೆಗಾರಿಕೆ ಸಹ ನಿತ್ಯದ ಕೆಲಸದ ಪ್ರಮುಖ ಪಾಲು... ಯಾವುದೇ ಸಮತೋಲನಕ್ಕೆ ಕುಂದು ಬರದಂತೆ ನಿಭಾಯಿಸಿಕೊಂಡು ಹೋಗಲಿಕ್ಕೆ ಮೂವ್ವರಲ್ಲೊಬ್ಬರು ಸದಾ ಜಾಗೃತ ಸ್ಥಿತಿಯಲ್ಲಿ ಕಾಯುತ್ತಿರಬೇಕು.. ಸಂದರ್ಭಾನುಸಾರ ತಂತಮ್ಮ ಕ್ರಿಯೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಒಟ್ಟಾರೆ ಸಂತುಲಿತ ಸ್ಥಿತಿ ನಷ್ಟವಾಗದಂತೆ ನೋಡಿಕೊಳ್ಳಬೇಕು.
 
ಇದೆಲ್ಲ ಕಾರಣದಿಂದ ಬ್ರಹ್ಮದೇವ ಊರ್ವಶಿಯ ಪ್ರಯೋಗದಲ್ಲಿ ಹೆಚ್ಚು ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಸಿಗುವ ಅಲ್ಪಸ್ವಲ್ಪ ಸಮಯದಲ್ಲಿಯೆ ಸಾಧ್ಯವಾದಷ್ಟನ್ನು ಮಾಡಿ ಮುಗಿಸಿ ಮತ್ತೆ ದೈನಂದಿನ ಜಂಜಾಟಕ್ಕೆ ಓಡಿಹೋಗಬೇಕಾಗುತ್ತಿತ್ತು...
 
ಎಷ್ಟೊ ಬಾರಿ, ಯಾರಾದರೊಬ್ಬರನ್ನು ಆಪ್ತ ಸಹಾಯಕ್ಕೆ ನೇಮಿಸಿಕೊಂಡರೆ ತಾನಿಲ್ಲದ ಹೊತ್ತಿನಲ್ಲು ಕೆಲಸ ನಡೆಸಬಹುದಲ್ಲ ?ಎನಿಸುತ್ತಿತ್ತು...
 
ಆದರೆ ತನ್ನಷ್ಟೆ ಅರಿವು ಮತ್ತು ಸಾಮರ್ಥ್ಯವಿರುವ ಸರಿಯಾದ ಜತೆಗಾರರನ್ನೆಲ್ಲಿ ಹುಡುಕುವುದು ? ಅಲ್ಲದೆ ಇದು ಸದ್ಯಕ್ಕೆ ಬಲು ರಹಸ್ಯದಿಂದ ನಡೆಸಬೇಕಾದ ಕಾರ್ಯ; ಯಾರು ಯಾರನ್ನೊ ನೇಮಿಸಿಕೊಳ್ಳುವ ಹಾಗೂ ಇಲ್ಲ. ಬಹುಶಃ ಯಾರದರೊಬ್ಬ ಯುವ ವಯಸಿನ ಎಳೆಯ ವಿಜ್ಞಾನಿಯೊಬ್ಬನನ್ನು ಸಹಾಯಕ್ಕೆ ನೇಮಿಸಿಕೊಂಡರೆ ಹೇಗೆ ?
 
ಏನಿಲ್ಲವೆಂದರು ದಿನಂಪ್ರತಿ ತಾನು ಆರಂಭಿಸಿದ ಕಾರ್ಯಗಳನ್ನು ನೋಡಿಕೊಳ್ಳುತ್ತ ಅದರ ಸ್ಥಿತಿಗತಿ, ಪ್ರಗತಿಗಳನ್ನು ದಾಖಲಿಸಿ ವರದಿಯೊಪ್ಪಿಸಲಾದರು ಸಹಾಯವಾದೀತಲ್ಲ ?
 
ನಡುವೆ ತೀರ ತುರ್ತಾದ ಹೊತ್ತಲ್ಲಿ ತನಗೆ ಅದರ ಸುದ್ಧಿ ಕೊಟ್ಟು, ತಾನಲ್ಲಿಗೆ ಬರುವವರೆಗೆ ನಿಭಾಯಿಸಲೊಬ್ಬರಿದ್ದರೆ ಪ್ರಯೋಗದ ಆರೋಗ್ಯಕ್ಕು ಒಳ್ಳೆಯದಲ್ಲವೆ ? ಯಾರಿಗೆ ಗೊತ್ತು - ಸರಿ ಸೂಕ್ತನಾದ ಕಿರಿಯ ವಿಜ್ಞಾನಿ ಸಿಕ್ಕಿದನೆಂದರೆ ಅವನಿಗೆ ಜತೆಜತೆಗೆ ತರಬೇತು ನೀಡುತ್ತ ತನ್ನ ಸಹಾಯಕ ವಿಜ್ಞಾನಿಯ ಮಟ್ಟಕ್ಕೂ ಏರಿಸಬಹುದು...
 
ಆಗ ತಾನಿಲ್ಲದ ಹೊತ್ತಲು ಪ್ರಯೋಗ ಕೊಂಚಮಟ್ಟಿಗೆ ಮುಂದುವರೆಯುವುದು ಸಾಧ್ಯವಾಗುವುದು ಮಾತ್ರವಲ್ಲದೆ, ಸೂಕ್ತ ಹಿನ್ನಲೆಯ ವ್ಯಕ್ತಿಯಾದರೆ, ಸ್ವಲ್ಪ ಅನುಭವವಾದ ಮೇಲೆ ಕೆಲವು ಪ್ರಯೋಗದ ಭಾಗಾಂಶಗಳನ್ನು ಅವನ ಜವಾಬ್ದಾರಿಗೆ ಒಪ್ಪಿಸಿಬಿಡಬಹುದು. ಸ್ವಲ್ಪ ಪ್ರಯೋಗಕ್ಕು ವೇಗ ಸಿಕ್ಕಂತಾಗುತ್ತದೆ ಜತೆಗೆ ತನಗು ನಿರಾಳವಾದಂತಾಗುತ್ತದೆ.
 
ಆದರೆ ಅಂತಹ ವ್ಯಕ್ತಿಯಾದರೂ ಯಾರಿದ್ದಾರೆ ?
 
ಪ್ರಯೋಗದಲ್ಲಿ ತಲ್ಲೀನನಾಗಿ ತನ್ನದೇ ಆದ ಚಿಂತನಾಲೋಕದಲ್ಲಿ ಮುಳುಗಿದ್ದ ಬ್ರಹ್ಮದೇವನನ್ನು ಮತ್ತೆ ವಾಸ್ತವಕ್ಕೆ ತರಿಸಿತ್ತು ಊರ್ವಶಿಯ ದನಿ, " ಪಿತಾಮಹ.. ನಾನಿನ್ನು ಹೊರಡಲೆ ? ಈವತ್ತಿನ ಕೆಲಸ ಮುಗಿಯಿತಲ್ಲವೆ ?"
 
ಆಗಲೆಂಬಂತೆ ಸಂಜ್ಞೆಮಾಡಿ ಮೆಚ್ಚುಗೆಯ ಕಿರುನಗೆಯೊಂದನ್ನು ದಯಪಾಲಿಸಿ ಹೊರಡಲನುಮತಿಯಿತ್ತ ಬ್ರಹ್ಮದೇವನಿಗೆ, ಕ್ರಮಬದ್ಧವಾದ ರೀತಿಯಲ್ಲಿ ಶಿರಬಾಗಿಸಿ ವಂದಿಸುತ್ತ ಹೊರನಡೆದಿದ್ದಳು ಊರ್ವಶಿ.
 
ಬ್ರಹ್ಮದೇವನ ಮನಸು ಮಾತ್ರ ಇನ್ನೂ ಅದನ್ನೆ ಚಿಂತಿಸುತ್ತಿತ್ತು, 'ಆಪ್ತ ಸಹಾಯಕರಾಗಿ ಯಾರನ್ನು ನೇಮಿಸಿಕೊಳ್ಳಲಿ' ಎಂದು....
 
(ಇನ್ನೂ ಇದೆ)
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಿಯ ನಾಗೇಶರೇ, ನಮಸ್ತೆ. ಜೀವಾತ್ಮ, ಸೃಷ್ಟಿ, ಸುಂದರತೆ, ಅಯೋನಿಜ ಸೃಷ್ಟಿ, ಯೋನಿಜ ಸೃಷ್ಟಿ ಇತ್ಯಾದಿಗಳೆಲ್ಲವೂ ಸುದೀರ್ಘ ಚರ್ಚೆಗೊಳಪಡಬಹುದಾದ ವಿಷಯಗಳು. ನೀವು ಆರಿಸಿಕೊಂಡಿರುವ ಕಥೆ ಹೊಸದಲ್ಲವಾದುದರಿಂದ ಮತ್ತು ನಿಮ್ಮ ಕೈಚಳಕ ಸೇರಿಸಿ ರಸವತ್ತಾಗಿಸುವ ಪ್ರಯತ್ನವಾದುದರಿಂದ ಈ ಕುರಿತು ಚರ್ಚೆ/ಪ್ರತಿಕ್ರಿಯೆ ಅಪ್ರಸ್ತುತವಾಗುತ್ತದೆ ಎಂಬ ಅರಿವು ಇರುವುದರಿಂದ ಮುಂದುವರೆಸಿರಿ, ಕುತೂಹಲಕರವಾಗಿದೆ ಎಂದಷ್ಟೆ ಪ್ರತಿಕ್ರಿಯಿಸುವೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೇ ನಮಸ್ಕಾರ ಮತ್ತು ಧನ್ಯವಾದಗಳು :-)

ಇಲ್ಲಿ ಗೊತ್ತಿರುವ ಕಥೆಯ ಮೂಲ ಹಂದರವೆ ಇದ್ದರು ಮಿಕ್ಕೆಲ್ಲ ಊಹೆ, ತರ್ಕ, ಫ್ಯಾಂಟಸಿಗಳ ಮಿಶ್ರಣ. ಹೀಗಾಗಿ ಸರಿಯೋ ಅಲ್ಲವೋ ಎನ್ನುವ ಚರ್ಚೆಗಿಂತ ತಾರ್ಕಿಕವಾಗಿ ಸಾಧ್ಯವೇ ? ಎನ್ನುವುದು ಹೆಚ್ಚು ಸಂಗತವೇನೊ.. ಆದಕಾರಣ ಅಂದುಕೊಂಡ ರೂಪುರೇಷೆಯಲ್ಲೆ ಮುಂದುವರೆಸುತ್ತೇನೆ.. !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.