ಅಹಲ್ಯಾ ಸಂಹಿತೆ - ೧೯ (ಊರ್ವಶಿ - ದೇವೇಂದ್ರ ಚರ್ಚೆ)

ಅಹಲ್ಯಾ ಸಂಹಿತೆ - ೧೯ (ಊರ್ವಶಿ - ದೇವೇಂದ್ರ ಚರ್ಚೆ)

ಅಂದು ಎಂದಿನಂತೆ ತನ್ನ ಸಂಶೋಧನಾ ಪ್ರಯೋಗದಲ್ಲಿ ನಿರತನಾಗಿದ್ದ ಚತುರ್ಮುಖ ಬ್ರಹ್ಮನ ಎದುರು ಬದಿಯ ಆಸನವೊಂದರಲ್ಲಿ ಆರಾಮವಾಗಿ ಒರಗಿ ಕೂತಿದ್ದಳು ಊರ್ವಶಿ, ತನ್ನ ಮುಂದಿನ ಅಣತಿಯೇನಿರಬಹುದೆಂಬ ನಿರೀಕ್ಷೆಯಲ್ಲಿ...

ಅದಾಗ ತಾನೆ ಬಂದವಳಿಗೆ ಮುಕ್ಕಾಲು ಪಾಲು ಬ್ರಹ್ಮದೇವ ಹೇಳಿದಂತೆ ಪರೀಕ್ಷಾ ಕೊಠಡಿಯ ಆಸನದಲ್ಲೊ ಅಥವ ವಿಶ್ರಮಿಸುವ ಅಂಗಳದಲ್ಲೊ ಕಾದು ಕೂರುವುದು ಬಿಟ್ಟರೆ ಹೆಚ್ಚು ಕೆಲಸವಿರುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ ಬಾಯಿಂದ ಜೊಲ್ಲುರಸದ ಮಾದರಿ ತುಂಬಿಸಿ ಕೊಡುವುದೊ, ಪಟಪಟನೆ ಕೈಯಾಡಿಸಿ ಹಸ್ತಗಳನ್ನು ತಾಕಲಾಡಿಸಿ ಸೂಕ್ಷ್ಮರೂಪದ ಜೀವಕೋಶ ಕಣಗಳನ್ನು ಪರೀಕ್ಷಾ ಯಂತ್ರ ಫಲಕದ ಮೇಲೆ ಉದುರಿಸುವುದೊ ಬಿಟ್ಟರೆ ಮಿಕ್ಕ ಸಮಯವೆಲ್ಲ ಬರಬಹುದಾದ ಕರೆಗಾಗಿ ಕಾದು ಕೂತಿರಬೇಕಿತ್ತು.

ಎಷ್ಟೊ ಬಾರಿ ಭೇಟಿಯಲ್ಲಿರುತ್ತಿದ್ದುದು ಒಂದು ಕರೆ ಮಾತ್ರ; ಮಿಕ್ಕ ಸಮಯದಲ್ಲಿ ಮಾಡಲೇನೂ ಇರದೆ ಅಲ್ಲಿರುತ್ತಿದ್ದ ಗ್ರಂಥಗಳ, ಪುಸ್ತಕಗಳ ಮೇಲೆ ಕಣ್ಣಾಡಿಸಿಕೊಂಡು ಕಾಲ ಕಳೆಯುತ್ತಿದ್ದಳು ಊರ್ವಶಿ. ಮೊದಮೊದಲು ನಿರಾಸಕ್ತಿಯಿಂದ ಪುಟ ತಿರುವುತ್ತಿದ್ದವಳು, ದಿನ ಕ್ರಮೇಣ ಸುಮ್ಮನೆ ಕಾಲಾಯಾಪನೆಗೆಂದು ಓದ ಹತ್ತಿದಳು.

ಕಾಲ ಕಳೆದಂತೆ ಆ ಅಭ್ಯಾಸವೆ ಹವ್ಯಾಸದಂತಾಗಿ ಇದ್ದಕ್ಕಿದ್ದಂತೆ ಆ ವಸ್ತು ವಿಷಯದ ಮೇಲೆ ಆಸಕ್ತಿಯೂ ಹುಟ್ಟಿಬಿಟ್ಟಿತು. ವಿಷಯದ ಕುರಿತಾದ ಆಸಕ್ತಿಯ ಕುತೂಹಲ, ಮತ್ತಷ್ಟು ಗ್ರಹಿಕೆಗೆ ಪ್ರೇರೇಪಣೆ ನೀಡಿ ಕೊಂಚ ಆಳವಾದ ಅಭ್ಯಾಸಕ್ಕೆ ಇಳಿಸಿಬಿಟ್ಟಿತು ಊರ್ವಶಿಯನ್ನು ; ಆಳಕ್ಕಿಳಿದಂತೆಲ್ಲ ಬ್ರಹ್ಮದೇವ ಮಾಡುತ್ತಿರುವ ಸಂಶೋಧನೆಯ ಸ್ಥೂಲ ಚಿತ್ರಣ ಸಿಕ್ಕಂತಾಗಿ ಅದರ ಹಿನ್ನಲೆಯೂ ಅರ್ಥವಾಗತೊಡಗಿತ್ತು.

ಆದರೆ ಆ ದಿನ ಮಾತ್ರ ಯಾಕೊ ಎಂದಿನಂತಿರಲಿಲ್ಲ.. ಅವಸರಾವಸರವಾಗಿ ಬಂದ ಬ್ರಹ್ಮದೇವ ತನ್ನ ಪ್ರಯೋಗದತ್ತ ಗಮನ ಹರಿಸಿ ಕೆಲವು ನಿಮಿಷಗಳೂ ಕಳೆದಿಲ್ಲ, ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ದೂತನೊಬ್ಬ ಅವಸರದ ವಿಷಯವೊಂದನ್ನು ಕಿವಿಯಲ್ಲಿ ಬಿತ್ತರಿಸಿ ಹೋಗಿಬಿಟ್ಟ. ಅದನ್ನು ಕೇಳಿದವನೆ ತಾನು ಮಾಡುತ್ತಿದ್ದ ಪ್ರಯೋಗವನ್ನು ಅಷ್ಟಕ್ಕೆ ನಿಲ್ಲಿಸಿ ನಡೆದುಬಿಟ್ಟಿದ್ದ ಬ್ರಹ್ಮ.. ಹೋಗುವಾಗ ಊರ್ವಶಿಗು ಆ ದಿನದ ಕೆಲಸ ಮುಗಿಯಿತೆಂದು ಸಂಜ್ಞೆಯಲ್ಲಿಯೆ ತಿಳಿಸಿ ನಡೆದ ಕಾರಣ, ಊರ್ವಶಿ ಮತ್ತೇನು ಮಾಡಲು ಕೆಲಸವಿಲ್ಲದೆ ಅಲ್ಲೆ ಇದ್ದ ಮತ್ತಷ್ಟು ಗ್ರಂಥ, ಬರಹ, ವರದಿಗಳನ್ನು ಓದತೊಡಗಿದಳು...

ಆಗಲೆ ಮೊದಲ ಬಾರಿಗೆ ಅವಳ ಕಣ್ಣಿಗೆ ಬಿದ್ದದ್ದು ಗೌತಮನೆಂಬ ಹೆಸರಿನ ಯುವವಿಜ್ಞಾನಿಯೊಬ್ಬ ಬರೆದ ಕೆಲವು ಸಂಶೋಧನಾತ್ಮಕ ಲೇಖನ, ಬರಹಗಳು...

ಒಂದು ಬರಹದಲ್ಲಿ ಅದರೊಡನೆ ಇದ್ದ ಚಿತ್ರವನ್ನು ನೋಡುತ್ತಿದ್ದ ಹಾಗೆ ಅಚ್ಚರಿಯೂ ಆಗಿತ್ತು - ಅಷ್ಟು ಚಿಕ್ಕ ವಯಸಿನ ವ್ಯಕ್ತಿಯ ಚಿತ್ರವನ್ನು ನೋಡಿ. ಆ ವಯಸಿನಲ್ಲೆ ಜಪತಪದ ಹಾದಿ ಹಿಡಿದ ಕಾರಣಕ್ಕೊ ಏನೊ, ಋಷಿಮುನಿಗಳಿಗಿರುವ ಹಾಗೆ ಗಡ್ಡ ಮೀಸೆಗಳಿದ್ದರು ಆ ಯುವ ತೇಜಸ್ಸನ್ನು ಮುಚ್ಚಿ ಹಿಡಿಯಲಾಗದೆ ಎತ್ತಿ ತೋರಿಸುವ ಅನಿವಾರ್ಯಕ್ಕೆ ಶರಣಾದಂತಿತ್ತು...

ಆ ಮುಖ ನೋಡುತ್ತಿದ್ದಂತೆ ಯಾಕೊ ಏನೊ ತೀರ ಪರಿಚಿತ ಭಾವವೊಂದು ಮೂಡಿದಂತೆನಿಸಿದಾಗ ಏನು ಕಾರಣವಿರಬಹುದೆಂದು ಆ ಚಿತ್ರವನ್ನೆ ಮತ್ತೆ ಆಳವಾಗಿ ದಿಟ್ಟಿಸಿದ್ದಳು ಊರ್ವಶಿ...

ಸುಮಾರು ಹೊತ್ತಿನ ಕಾಲ ತದೇಕಚಿತ್ತಳಾಗಿ ನೋಡಿದ ಮೇಲೆ ಆ ಪರಿಚಿತ ಭಾವನೆಗೆ ಕಾರಣವೇನೆಂದು ತಟ್ಟನೆ ಹೊಳೆದಿತ್ತು ಊರ್ವಶಿಗೆ - ಆ ಮುಖದ ಗಡ್ಡ ಮೀಸೆಗಳನ್ನೆಲ್ಲ ತೆಗೆದು ಕೊಂಚ ದೇವತೆಗಳ ವಸ್ತ್ರಾದಿ ಆಭರಣಗಳನ್ನು ಹಾಕಿಬಿಟ್ಟರೆ ಆ ವ್ಯಕ್ತಿ ಸಾಕ್ಷತ್ ದೇವೇಂದ್ರನನ್ನೆ ಹೋಲುವಷ್ಟು ತದ್ರೂಪಿಯಾಗಿದ್ದ !

ಋಷಿಮುನಿಯ ವೇಷ ಭೂಷಣಗಳ ನಡುವೆಯೂ ಪರಿಚಿತತೆ ಕಂಡ ಆ ಬಗೆಯನ್ನು ಪರಿಗಣಿಸಿದರೆ, ಹೋಲಿಕೆ ಬಹಳ ಹತ್ತಿರದ್ದೆ ಇರಬೇಕೆನಿಸಿತ್ತು ಊರ್ವಶಿಗೆ. ಅದನ್ನು ದೇವರಾಜನಿಗೆ ತಿಳಿಸಿ ಕೊಂಚ ಹಾಸ್ಯ, ಕೀಟಲೆ ಮಾಡಿದರೆ ಹೇಗೆ ಎನ್ನುವ ತುಂಟತನದ ಆಲೋಚನೆಯೂ ಮೂಡಿಬಂದಿತ್ತು... !

ಗೌತಮನೆಂದರೆ ಅಷ್ಟೇನು ಆಸ್ಥೆ, ಕುತೂಹಲವಿರದಿದ್ದವಳಿಗೂ ಈ ತದ್ರೂಪಿನ ಸಾಮ್ಯತೆಯಿಂದಾಗಿ ಒಂದು ಬಗೆಯ ವಿಚಿತ್ರ ಕುತೂಹಲ ಮೂಡಿ ಅವನ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕತೊಡಗಿದ್ದಳು, ಅಲ್ಲಿದ್ದ ಗ್ರಂಥ ಭಂಢಾರದ ಹೊತ್ತಗೆಗಳ ಮೂಲಕ...

ಅವಳೇನು ಮಾಡುತ್ತಿರಬಹುದೆಂಬ ಅರಿವಿರದಿದ್ದರು, ಹಿಂದೊಮ್ಮೆ ಅವಳು ಆಸ್ಥೆಯಿಂದ ಓದುತ್ತಿರುವ ಸಂಗತಿಯನ್ನು ಗಮನಿಸಿ, ಅವಳಿಗೆ ಬೇಕಾದ ಗ್ರಂಥವನ್ನು ಬೇಕಾದರೆ ಜತೆಗೊಯ್ದು ಓದಿದ ನಂತರ ಹಿಂತಿರುಗಿಸಬಹುದೆಂದು ಪರವಾನಗಿಯಿತ್ತಿದ್ದ ಬ್ರಹ್ಮದೇವ.. ಆ ನಂತರ ಕೆಲಸವಿಲ್ಲದ ಹೊತ್ತಿನಲ್ಲಿ ತನಗೆ ಬೇಕಾದ ಗ್ರಂಥವನ್ನು ಹೊತ್ತುಕೊಂಡು ಮನೆಗೆ ಹಿಂದಿರುಗಿ ಅಲ್ಲೆ ಓದು ಮುಂದುವರೆಸುವ ಪರಿಪಾಠವೂ ಆರಂಭವಾಗಿತ್ತು..

ಅದು ನಡೆದ ಮರುದಿನವೂ ಮತ್ತದೆ ಪ್ರಕ್ರಿಯೆ ಮರುಕಳಿಸಿ, ಮತ್ತೆ ಅವಸರದಲ್ಲಿ ಹೋಗಬೇಕಾಗಿ ಬಂತು ಬ್ರಹ್ಮದೇವನಿಗೆ...

ಇದೇ ಪ್ರಕ್ರಿಯೆ ಮತ್ತೆ ಮತ್ತೆ ಮರುಕಳಿಸತೊಡಗಿದಾಗ ಯಾಕೊ ಅಲ್ಲೆ ಕೂತಿರಲು ಬೇಸರವಾಗಿ, ತನಗೆ ಬೇಕಿದ್ದ ಹೊತ್ತಗೆಯನ್ನು ಕೈಗೆತ್ತಿಕೊಂಡು ಅಲ್ಲಿಂದ ತನ್ನ ತಾಣಕ್ಕೆ ಹಿಂತಿರುಗಿ ಅಲ್ಲೆ ಅಧ್ಯಯನ ಕೊಠಡಿಯಲ್ಲಿ ಕೂತು ಓದುವ ಅಭ್ಯಾಸ ಮಾಡಿಕೊಂಡಳು ಊರ್ವಶಿ.

ಆ ಒಂದು ದಿನ ಯಾವುದೊ ಕಾರಣಕ್ಕೆ ಅಲ್ಲಿಗೆ ಬಂದ ದೇವರಾಜನು ಬ್ರಹ್ಮದೇವನ ಪ್ರಯೋಗಶಾಲೆಯಲ್ಲಿರಬೇಕಿದ್ದ ಊರ್ವಶಿ, ಅಲ್ಲಿ ಕೂತು ಗ್ರಂಥಾದ್ಯಯನ ಮಾಡುತ್ತಿರುವುದನ್ನು ಕಂಡು ವಿಸ್ಮಿತನಾಗಿ ವಿಚಾರಿಸಿಕೊಂಡಿದ್ದ..

" ಯಾಕೆ ಊರ್ವಶಿ ? ಇಷ್ಟು ಬೇಗನೆ ಕೆಲಸ ಮುಗಿದು ಹೋಯ್ತೇನು.. ?"

" ಮುಗಿಯಿತೆಂದರೆ ಮುಗಿಯಿತು, ಇಲ್ಲವೆಂದರೆ ಇಲ್ಲ ದೇವರಾಜ..." ಅಷ್ಟೆ ಚತುರತೆಯಿಂದ ಓದಿನಿಂದ ತಲೆಯೆತ್ತದೆ ಮಾರುತ್ತರ ನೀಡಿದ್ದಳು ಊರ್ವಶಿ..

" ಅಂದರೆ..?"

ಓದುವುದನ್ನು ನಿಲ್ಲಿಸಿ ತಲೆಯೆತ್ತಿದ ಊರ್ವಶಿ, " ಯಾಕೊ ಅರಿಯೆ ದೇವರಾಜ.. ಈಚೆಗೆ ಬ್ರಹ್ಮದೇವನಿಗೆ ಬಿಡುವಿರುವಂತೆ ಕಾಣುತ್ತಿಲ್ಲ.. ನಿತ್ಯವು ಬಂದ ತುಸು ಹೊತ್ತಿಗೆಲ್ಲ ಯಾವುದಾದರು ತುರ್ತುಕರೆಯ ನೆಪದಲ್ಲಿ ಅರ್ಧಕ್ಕೆ ಹೊರಟು ಹೋಗಬೇಕಾಗಿ ಬರುತ್ತಿದೆ.."

"ಓಹ್..! ಅರ್ಥವಾಯಿತು ಬಿಡು..ಹಾಗಾದಾಗೆಲ್ಲ ನೀನು ಅನಿವಾರ್ಯ ರಜೆ ತೆಗೆದುಕೊಂಡು ವಾಪಸ್ಸು ಬರಬೇಕಾಗುತ್ತಿದೆಯೇನು ?"

"ಹೌದು.. ಮೊದಲೆ ಗೊತ್ತಿದ್ದರೆ ಹೋಗುವ ಅಗತ್ಯವೆ ಇರುವುದಿಲ್ಲ... ಆದರೆ ನಾನು ಹೋದಾಗ ಪಿತಾಮಹ ಬ್ರಹ್ಮನೂ ಅಲ್ಲಿಗೆ ಬಂದಿರುತ್ತಾನೆ..ಅಂದರೆ ಅವನಿಗು ಈ ಮೊದಲೆ ಸುಳಿವಿರದ ಕಾರ್ಯಕ್ರಮಗಳೊ, ಅನಿವಾರ್ಯಗಳೊ ಅಕಸ್ಮಾತಾಗಿ ಬಂದು ಕಾಡುತ್ತಿರಬೇಕು.. ಪ್ರತಿ ಬಾರಿಯೂ ಕೆಲಸ ಮುಂದುವರೆಸಲಾಗುತ್ತಿಲ್ಲವಲ್ಲ, ಅಲ್ಲಿಗೆ ನಿಲ್ಲಿಸಬೇಕಲ್ಲಾ ಎನ್ನುವ ವ್ಯಾಕುಲತೆ, ಬೇಸರ ಅವನ ಮುಖದಲ್ಲು ಎದ್ದು ಕಾಣುತ್ತಿರುವುದನ್ನು ನಾನೆ ಗಮನಿಸುತ್ತಿದ್ದೇನೆ.. ಆದರಲ್ಲು ಈಚಿನ ಕೆಲವು ದಿನಗಳಿಂದ ಇದು ನಿತ್ಯದ ಪ್ರಕ್ರಿಯೆಯಾಗಿಬಿಟ್ಟಿದೆ.."

ಅವಳ ಮಾತನ್ನು ಆಲಿಸುತ್ತಲೆ ಅವಳ ಆಸನದ ಹತ್ತಿರಕ್ಕೆ ಬಂದ ದೇವರಾಜನ ಕಣ್ಣಿಗೆ ಅವಳು ಓದುತ್ತಿದ್ದ ಗ್ರಂಥದ ಮೇಲೂ ಕಣ್ಣು ಬಿತ್ತು...

" ಅದಿರಲಿ..ಇದೇನಿದು ? ಏನೊ ಗಹನವಾದ ಅಧ್ಯಯನದಲ್ಲಿ ತೊಡಗಿರುವಂತಿದೆಯಲ್ಲ ?" ಎಂದವನೆ ಆ ಗ್ರಂಥದ ತಾಳೆಗರಿಯ ಸಂಪುಟವನ್ನು ಕೈಗೆತ್ತಿಕೊಂಡ. ಅದೆಲ್ಲವೂ ಗೌತಮಮುನಿಯ ವೈಜ್ಞಾನಿಕ ಅಧ್ಯಯನದ ಕುರಿತಾದ ಲೇಖನ, ಬರಹಗಳ ಸಂಗ್ರಹ.. ಬಹುತೇಕ ಎಲ್ಲಾ ಬರಹಗಳು ಒಂದಲ್ಲ ಒಂದು ರೀತಿಯಲ್ಲಿ ತಳಿ ಶಾಸ್ತ್ರ, ಸಂತತಿಯ ಸೃಷ್ಟಿ ವಿಧಾನ ಇತ್ಯಾದಿಗಳಿಗೆ ಸಂಬಂಧಪಟ್ಟ ಬರಹಗಳೆ...

ಅದನ್ನೆಲ್ಲ ನೋಡುತ್ತಿದ್ದಂತೆ ಅದುವರೆವಿಗು ಬ್ರಹ್ಮದೇವನ ಪ್ರಯೋಗವೇನೆಂಬುದರ ಅರಿವಿಲ್ಲದ ದೇವರಾಜನಿಗು, ಅದೇನೊ ತಳಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗವಿರಬಹುದೆಂದು ಹೊಳೆದುಹೋಗಿತ್ತು.. ಅಲ್ಲದೆ ಊರ್ವಶಿಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಪ್ರಯೋಗವೆಂದರೆ ಬಹುಶಃ ಏನೊ ಅದ್ಭುತವಾದ ಸೃಷ್ಟಿಯ ಸಲುವಾಗಿಯೆ ನಡೆಯುತ್ತಿರುವ ಪ್ರಯೋಗವಿರಬಹುದೆ?

ಗೌತಮನ ಹೆಸರೇನು ದೇವರಾಜನಿಗೆ ಅಪರಿಚಿತವಾದುದ್ದಾಗಿರಲಿಲ್ಲ.. ಈಗಾಗಲೆ ಸುಮಾರು ಬಾರಿ ಆತನ ಮುಖಾಮುಖಿಯಾಗಿದೆ, ವೈಜ್ಞಾನಿಕ ಕಮ್ಮಟಗಳಲ್ಲಿ ಪಾಲ್ಗೊಳ್ಳುವ ಪ್ರಮೇಯದಿಂದಾಗಿ. ಅಲ್ಲದೆ ಹಿಂದೊಮ್ಮೆ ದೇವಗುರು ಬೃಹಸ್ಪತಿಯ ವಿದ್ಯಾಲಯಾಶ್ರಯದಲ್ಲಿ ರಾಜನೀತಿಯ ಕುರಿತು ಅಧ್ಯಯನಕ್ಕೆಂದು ತಿಂಗಳುಗಟ್ಟಲೆ ತಂಗಿದ್ದ ಹೊತ್ತಲ್ಲಿ ಅದೇ ಆಶ್ರಮದಲ್ಲಿ ತಳಿಶಾಸ್ತ್ರದ ಪರಿಣಿತಿ ಪಡೆಯುವ ಸಲುವಾಗಿ ಬಂದು ತಂಗಿದ್ದ ಗೌತಮನ ಪರಿಚಯವಾಗಿತ್ತು..

ಆ ಪರಿಚಯ ತನ್ನ ಹಾಗೆಯೆ ಇರುವನಲ್ಲ ಎಂಬ ಕಾರಣಕ್ಕೊ ಏನೊ ಸಲಿಗೆಯ ಸ್ನೇಹವಾಗಿ ಬದಲಾಗಿ ಹೆಚ್ಚಿನ ಒಡನಾಟಕ್ಕೂ ಕಾರಣವಾಗಿತ್ತು...

" ಈ ಗೌತಮನು ಬ್ರಹ್ಮದೇವನ ಪ್ರಯೋಗದಲ್ಲಿ ಸಹಾಯಕನಾಗಿ ದುಡಿಯುತ್ತಿರುವನೇನು ?" ಎಂದು ಕೇಳಿದ ದೇವೇಂದ್ರ..

" ಇಲ್ಲಾ ... ಇದುವರೆವಿಗು ಯಾವ ಸಹಾಯಕರು ನನ್ನ ಕಣ್ಣಿಗೆ ಬಿದ್ದಿಲ್ಲ.. ಬಹುಶಃ ಬಹಳ ರಹಸ್ಯದ ಪ್ರಯೋಗವೆಂದೊ ಏನೊ, ಯಾರಿಗು ಜತೆ ಸೇರಗೊಡದೆ ತಾನೆ ನಡೆಸಿರಬೇಕು ಪಿತಾಮಹ ಬ್ರಹ್ಮ.." ಎಂದಳು ಊರ್ವಶಿ ತನ್ನ ಊಹೆಯನ್ನು ಮಂಡಿಸುತ್ತ..

ಯಾರೂ ಸಹಾಯಕರಿಲ್ಲವೆಂದಾಗ ಅಚ್ಚರಿಗೊಂಡ ದೇವರಾಜ ಅದೇ ಚಕಿತ ದನಿಯಲ್ಲೆ, " ಮತ್ತೆ ಈ ಗ್ರಂಥ, ಬರಹ, ಲೇಖನಗಳು..?" ಎಂದು ಕೇಳಿದ..

(ಇನ್ನೂ ಇದೆ)
 

Comments

Submitted by Palahalli Vishwanath Fri, 03/25/2016 - 17:25

In reply to by kavinagaraj

ಇ೦ದ್ರ ಗೌತಮರಿಗೆ ಒ೦ದೇ ರೂಪ ಕೊಟ್ಟು ಮು೦ದೆ ಇ೦ದ್ರನ ದಾರಿಯನ್ನು ಸುಗಮ ಮಾಡಿದ್ದೀರಿ ! ಕುತೂಹಲಕರವಾಗಿದೆ

Submitted by nageshamysore Fri, 03/25/2016 - 18:23

In reply to by Palahalli Vishwanath

ನಮಸ್ಕಾರ ವಿಶ್ವನಾಥರೆ.. ಇಂದ್ರ ಕಾಮರೂಪಿಯಾಗಿ ಬಂದು ಮೋಸಮಾಡಿದ ಅನ್ನುವುದಕ್ಕಿಂತ ಇದು ಹೆಚ್ಚು ತರ್ಕಬದ್ಧವಾಗುತ್ತದೆಯಲ್ಲವೇ ಅನಿಸಿ ಹೀಗೆ ಮಾಡಿದೆ. ಅಲ್ಲದೆ ಅವರಿಬ್ಬರೂ ಚೆನ್ನಾಗಿ ಪರಿಚಯ ಇರುವವರು ಎಂಬಂತೆ ಚಿತ್ರಿಸಿದ್ದೇನೆ. ಅಹಲ್ಯೆಯ ಪ್ರಯೋಗದಲ್ಲಿ ದೇವೇಂದ್ರನೂ ಒಂದು ದೊಡ್ಡ ಪಾತ್ರ ವಹಿಸುತ್ತಾನೆ ಕೂಡ ! :-)

Submitted by nageshamysore Fri, 03/25/2016 - 18:17

In reply to by kavinagaraj

ಕವಿಗಳೇ ಪ್ರಯೋಗದ ವಿವರದ ನಡುವೆ ಕಥೆ ಕಂಗೆಟ್ಟಂತಿದೆ ಅಲ್ಲವೇ ? ಈ ಪ್ರಯೋಗವೇ ಕಥೆಯ ಜೀವಾಳ - ಈಗ ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿ ವಿವರದಂತೆ ಕಂಡರೂ, ಮುಂದೆ ಅದೇ ಕಥೆಯ ತರ್ಕಕ್ಕೆ ಕೊಂಡಿಯಾಗುವುದರಿಂದ ಮತ್ತು ಕಥೆಯ ಆಗುಹೋಗುಗಳಿಗೆ ಕಾರಣವಾಗುವುದರಿಂದ ಸ್ವಲ್ಪ ಹೆಚ್ಚೇ ಆಗಿಬಿಟ್ಟಿದೆ.. ಜತೆಗೆ ವೈಜ್ಞಾನಿಕವಾಗಿಯೂ ನಂಬುವ ತರ್ಕವಾಗಬೇಕೆಂಬ ಆಶಯದಲ್ಲಿ ವಿವರದ ಹೆಚ್ಚು ಆಳಕ್ಕಿಳಿಯುತ್ತಿದೆ. ನಿಮ್ಮ ಸೂಚನೆಯನ್ನು ಮುಂದಿನ ಕಂತುಗಳಲ್ಲಿ (೩೬ ರಿಂದ - ಸದ್ಯಕ್ಕೆ ೩೫ ಕಂತು ಬರೆದಾಗಿರುವ ಕಾರಣ) ಹೆಚ್ಚು ಗಮನದಲ್ಲಿರಿಸಿಕೊಳ್ಳುತ್ತೇನೆ - :-)