ಅವಳು (ಸಣ್ಣ ಕಥೆ)
ಧೋ ಎಂದು ದುಮ್ಮಿಕ್ಕುತ್ತಿರುವ ಮಳೆ. ನೆನೆದು ಕೊಂಡೇ ಮುಂದೆ ಮುಂದೆ ಹೋಗುತ್ತಿದ್ದಾಳೆ. ರಸ್ತೆಯಲ್ಲಿ ನೀರು ಒಳಚರಂಡಿ ಸೇರದೆ ಸಾಗರವಾಗಿದೆ. ಎಲ್ಲಿ ಕಾಲು ಇಟ್ಟರೆ ಏನಾಗಬಹುದೆಂಬ ಆತಂಕವೂ ಇಲ್ಲದೆ. ಮನಸ್ಸೆಲ್ಲ ದುಗುಡದಿಂದ ತುಂಬಿ ಹೋಗಿದೆ. ದುಃಖ ಉಮ್ಮಳಿಸಿ ಹರಿಯುವ ಕಣ್ಣೀರು ಮಳೆಯ ಹನಿಗಳೊಡನೆ ಬೆರೆತು ಉಪ್ಪಿನ ರುಚಿ ಕಳೆದುಕೊಂಡು ನೀರಲ್ಲಿ ನೀರಾಗಿದೆ, ಯಾರೂ ಗುರುತಿಸಲಾಗದಷ್ಟು.
ಏನ್ರೀ ಈ ಮಳೆ ಅಷ್ಟೊಂದು ಪ್ರೀತಿನಾ? ಪಕ್ಕದಲ್ಲಿ ಮಳೆಗೆ ಮರೆಯಾಗಿ ನಿಂತವನ ವ್ಯಂಗದ ನಗೆ. ಕಿವಿಗೆ ಬಿದ್ದ ಕ್ಷಣ ದುರುಗುಟ್ಟಿ ನೋಡಿ ಹಾಗೆ ನಡೆದಿದೆ ನಡುಗೆ ಸಂಜೆ ಕತ್ತಲಲ್ಲಿ ಒಂಟಿ ಪಿಶಾಚಿಯಂತೆ!
ಒಳಗೊಳಗೆ ವಿಶಾದದ ನಗೆ, ಅಲ್ಲಾ ಇಷ್ಟೊಂದು ಗಡಿಬಿಡಿ ಯಾಕೆ ನನಗೆ? ಯಾರಿದಾರೆ ಮನೆಯಲ್ಲಿ? ಮನೆಯೊಂದು ಹಕ್ಕಿಯ ಗೂಡು. ನಾನು, ಕಾಣದ ನನ್ನವನು. ಮನದೊಳಗಿನ ಮಾತು ಯಾರಿಗೂ ಹೇಳದೆ ಅಂಜಿಕೊಂಡೇ ಅದ೯ ಜೀವನ ಕಳೆದೆ ಹೋಯಿತಲ್ಲ, ಹೀಗೆ ತನ್ನೊಳಗೆ ಮಾತಾಡಿಕೊಂಡು ಹೋಗುವಾಗ ದಾರಿ ಸವೆದಿದ್ದೇ ಗೊತ್ತಾಗಲಿಲ್ಲ. ಸುರಿವ ನೀರು ಮುಖ ಕೈಯಲ್ಲಿ ಒರೆಸುತ್ತ ಕತ್ತೆತ್ತಿ ನೋಡಿದರೆ ಮನೆಯ ಬಾಗಿಲಲ್ಲೇ ನಿಂತಿರೋದು ಗಮನಕ್ಕೆ ಬಂದು ತೊಪ್ಪೆಯಾದ ವ್ಯಾನಿಟಿ ಬ್ಯಾಗು ತಡಕಾಡಿ ನಡುಗುವ ಕೈಗಳಿಂದ ಬಾಗಿಲ ಬೀಗ ತೆಗೆದಾಗಲೇ ಗೊತ್ತಾಗಿದ್ದು ಮೈಯ್ಯೆಲ್ಲ ಸುಡುತ್ತಿದೆ. ಚಳಿಯ ಹೊದಿಕೆ ಹೊದ್ದ ಮೈ ಇಳಿಯುವ ನೀರನ್ನೂ ಲೆಕ್ಕಿಸದೆ ದೊಪ್ಪನೆ ಹಾಸಿಗೆಯಲ್ಲಿ ಬಿದ್ದಿರುವುದಷ್ಟೆ ನೆನಪು.
ಅದೊಂದು ಸುಂದರ ದಟ್ಟ ಕಾಡು. ಹಕ್ಕಿಗಳ ಕಲರವದ ಮದ್ಯೆ ಅಲ್ಲೇಲ್ಲೊ ನೀರಿನ ತೊರೆ ಹರಿಯುವ ಸದ್ದು. ಉದಯಿಸುವ ಸೂಯ೯ ಕಾನನದ ತುಂಬ ಬ್ಯಾಟರಿ ಬಿಟ್ಟಂತೆ ಕಾಣುವ ದೃಷ್ಯ. ಮರಗಳ ಸಂದಿಯಿಂದ ಸೀಳಿಕೊಂಡು ಬರುವ ಕಿರಣ ಕಂಡು ಮೂಕ ವಿಸ್ಮಿತಳಾಗಿ ನೋಡುತ್ತಲೆ ಇದ್ದಾಳೆ ಅದೆಷ್ಟೋ ಹೊತ್ತು.
ಏನೊ ಸರಪರ ಸದ್ದು, ಯಾರೊ ಬರುತ್ತಿರುವ ಹಾಗಿದೆ. ಏನದು ಈ ಕಾಡಲ್ಲಿ? ಯಾವುದಾದರೂ ಕ್ರೂರ ಪ್ರಾಣಿ ಬರುತ್ತಿರಬಹುದೆ, ಹೆದರಿಕೆಯಿಂದ ಮೈ ಬೆವರಲು ಶುರುವಾಗಿದೆ, ಮೈ ಮುದುಡಿಕೊಂಡು ಅಡಗಿಕೊಳ್ಳುವ ಆತುರ. ಅಷ್ಟರಲ್ಲಿ ಯಾರೊ ಹೆಗಲ ಮೇಲೆ ಕೈ ಇಟ್ಟ ಅನುಭವ. ತಿರುಗಿ ನೋಡುತ್ತಾಳೆ. ಅವನೊ ಅವಳ ಸೌಂದರ್ಯ ಹೀರಿಕೊಳ್ಳುತ್ತಿದ್ದಾನೆ ಕಣ್ಣು ಮಿಟುಕಿಸದೆ ನಖಶಿಖಾಂತ!
ಒಂದು ಕ್ಷಣ ಅಧೀರಳಾಗುತ್ತಾಳೆ. ಇದು ಕನಸೊ ನನಸೊ! ಬಾವನೆಗಳ ಮಹಾಪೂರ ಖುಷಿ, ನಗು,ಆಶ್ಚಯ೯ ಒಮ್ಮೆಲೇ ಸಮರೋಪಾದಿಯಲ್ಲಿ ಮುನ್ನುಗ್ಗಿ ಮೂಕ ವಿಸ್ಮಿತಳಾಗುತ್ತಾಳೆ. ಮುಂದೆ ನಿಂತಿರುವ ತನ್ನವನ ಕಂಡು. ಅವಳಿಗೆ ಗೊಂದಲ ನಾ ಹೇಗೆ ಗುರುತು ಹಿಡಿದೆ ಇವನು ನನ್ನವನು. ಇದುವರೆಗು ನೋಡೇ ಇಲ್ಲ. ಮನಸ್ಸಿನ ಮಾತು, ಮನದೊಳಗಿನ ರೂಪ ,ಚಿತ್ತದಲ್ಲಿಯ ಯೋಚನೆಗೆ ಕಡಿವಾಣ ಹಾಕಿತ್ತು ಅವನ ಮಾತು.
ಹೇಗಿದ್ದಿಯಾ, ಯಾವಾಗ ಬಂದೆ, ಒಬ್ಬಳೆ ಏನು ಮಾಡ್ತಿದಿಯಾ ಬಾ ನಮ್ಮನೆಗೆ ಹೋಗೋಣ ಇಲ್ಲೆ ಹತ್ತಿರದಲ್ಲಿದೆ ನಡಿ ಅಂದಾಗಲೆ ಅವಳು ಬಾವನೆಗಳಿಂದ ಹೊರಗೆ ಬರುತ್ತಾಳೆ.
ಏನೂ ಮಾತಾಡದೆ ಅವನನ್ನು ಹಿಂಬಾಲಿಸುತ್ತಾಳೆ, ಅವನ ಮನೆ ಹೊಸಿಲು ತುಳಿಯುವಾಗ ಬಲಗಾಲು ಇಟ್ಟು ಒಳಗೆ ಹೋಗಬೇಕು, ಇದೇ ನನ್ನ ಮನೆ, ಇಲ್ಲೆ ನನ್ನ ಬದುಕು ಮುಂದುವರಿಯೋದು ಅನ್ನುವ ತನ್ನ ಯೋಚನೆಯಲ್ಲಿ ಮುಳುಗಿ.
ಅಮ್ಮ ನೋಡಿಲ್ಲಿ ಯಾರು ಬಂದಿದಾರೆ? ಬಿಸಿ ಬಿಸಿ ಎರಡು ಕಪ್ ಟೀ ಕೊಡಮ್ಮ, ಯಾಕೊ ಇವತ್ತು ಸ್ವಲ್ಪ ಚಳಿ ಜಾಸ್ತಿ ಇದೆ.
ಹೂ ಕಣೊ ತಂದೆ. ಇವಳೆಲ್ಲಿ ಸಿಕ್ಕಿದಳು ನಿನಗೆ? ಎಷ್ಟು ಚೆನ್ನಾಗಿ ಆಗಿದಾಳೊ, ನಾನು ನೋಡಿ ಸುಮಾರು ವಷ೯ ಆಯಿತು. ಕುಡಿಯಮ್ಮ ಟೀ. ಹಾಗೆ ಕೈ ಕಾಲು ತೊಳೆದು ತಿಂಡಿಗೆ ಬನ್ನಿ, ದೋಸೆ ಮಾಡಿದಿನಿ.
ಮನಸ್ಸು ಮಂಡಿಗೆ ತಿನ್ನುತ್ತಿತ್ತು ಆಗಲೆ. ಈ ಮನೆ ಸೇರಿ ನಾನು ಹೀಗೆ ಬಂದವರಿಗೆ ಉಪಚಾರ ಮಾಡುತ್ತೀನಿ ಅಲ್ವಾ? ಎರಡು ಮೂರು ದಿನ ರಜೆ ಇದೆ ಇಲ್ಲೆ ಇದ್ದು ಹೋಗು ಅನ್ನುವ ಅಮ್ಮನ ಕಟ್ಟಪ್ಪಣೆಯಲ್ಲಿ ಮೂರು ದಿನ ಕಳೆದಿದ್ದೆ ಗೊತ್ತಾಗಲಿಲ್ಲ. ಅವನೊಂದಿಗೆ ಕೂತು ಮಾತಾಡಬೇಕೆನ್ನುವ ಹಂಬಲ ಚಿತ್ತದಲ್ಲಿ ಎಡತಾಕುತ್ತಲೇ ಇತ್ತು. ಇನ್ನೂ ಏನೇನೊ ಹೇಳಬೇಕೆನ್ನುವ ಮಾತುಗಳು ಮನಸ್ಸು ಸಮಯಕ್ಕಾಗಿ ಕಾಯುತ್ತಿತ್ತು. ಒಬ್ಬನೆ ಕುಳಿತಿರುವ ಸಮಯ ನೋಡಿ ಹತ್ತಿರ ಹೋದಾಗ ಏನು? ಏನೊ ಹೇಳಬೇಕು ಅಂತ ಬಂದ ಹಾಗಿದೆ? ಏನು ಹೇಳು. ನೀ ಏನೂ ಹೇಳದಿದ್ದರೂ ನನಗೆಲ್ಲ ಅಥ೯ಆಗುತ್ತಿದೆ. ಆ ಟೈಮು ಬರಲಿ, ನಾ ಬಾ ಅಂದ ತಕ್ಷಣ ನನ್ನ ಜೊತೆ ಬರಲು ರೆಡಿ ಇರಬೇಕು, ನಿಮ್ಮನೆಯವರು ಒಪ್ಪಲಿ, ಬಿಡಲಿ. ಹೇಳಿದ್ದು ಅಥ೯ ಆಯಿತಾ? ಮನಸ್ಸು ಜಿಂಕೆ ಮರಿ ಆಗಿತ್ತು, ಇನ್ನೇನು ಬೇಕು ನನಗೆ ಅನ್ನೊ ಖುಷಿಯಿಂದ.
ಹೊರಡುವ ಕ್ಷಣ ಹತ್ತಿರ ಬಂತು ಮನೆಯ ಮುಂದೆ ಅಟೊ ನಿಂತ ಶಬ್ದ. ಪುಟ್ಟ ಮಗು ಅಪ್ಪ ಎಂದು ಓಡಿ ಬಂದು ತಬ್ಬಿಕೊಂಡಾಗ, ಬಳಿಯಲ್ಲಿ ಅವನನ್ನು ರೀ ಸ್ವಲ್ಪ ಬರ್ತೀರಾ ಲಗೇಜು ಇಳಿಸೋಕೆ ಆಗುತ್ತಿಲ್ಲ ಎಂಬ ದ್ವನಿ. ದಿಗಭ್ರಮೆಯಿಂದ ನೋಡುತ್ತಿದ್ದಾಳೆ!
ಒಂದರೆ ಕ್ಷಣ ಪಕ್ಕದ ಮನೆ ನಾಯಿ ಜೋರಾಗಿ ಕೂಗಿದ ಸದ್ದು, ಎಚ್ಚರ. ಕಣ್ಣು ಬಿಟ್ಟು ನೋಡುತ್ತಾಳೆ. ಅರೆ ನಾ ನನ್ನ ಮನೆಯಲ್ಲೇ ಇದ್ದೇನೆ. ಮೈಯ್ಯೆಲ್ಲ ಒಂದು ಸಾರಿ ಜಾಡಿಸಿ,ಲಟ್ಟಿಗೆ ಮುರಿದು ಓ! ನಾ ಇದೂವರೆಗೂ ಕಂಡಿದ್ದು ಕನಸು. ಮುಖ ಪೆಚ್ಚಾಗುತ್ತದೆ. ಆದರೆ ಅಳು ಬರುತ್ತಿಲ್ಲ. ಮಳೆಯಲ್ಲಿ ಮಳೆಯಾಗಿ ಖಾಲಿ ಆಗಿರಬೇಕು. ಹೃದಯದಲ್ಲಿಯ ನೋವಿನ ಕಿಡಿ ಆರಿಸಲಾಗದೆ.
ಮನಸ್ಸಿಗೆ ನಿರಾಸೆ, ಆದರೆ ಕನಸಲ್ಲಾದರೂ ತನ್ನವನ ಕಂಡೆನಲ್ಲ ಅನ್ನುವ ಏನೊ ಒಂದು ರೀತಿ ಸಮಾಧಾನ. ತನಗೆ ಸಿಗದ ಸಂಸಾರ ಅವನಾದರೂ ಅನುಭವಿಸುತ್ತಿರುವನಲ್ಲ, ಸಾಕು. ಈ ನೆನಪುಗಳೆ ತಾನು ಒಂಟಿ ಅಲ್ಲ, ಮರೆಯಲ್ಲಿ ಅವನ ಹಾಜರಾತಿ ಅವಳ ಬದುಕಿಗೆ ನೆಮ್ಮದಿ.
ಮತ್ತದೆ ಕೆಲಸ, ಅದೆ ಆಫೀಸು ಫೈಲುಗಳ ನಡುವೆ. ಆದರೆ ಮನಸ್ಸು ಖುಷಿಯಾಗಿದೆ. ಮೊದಲಿನ ಬೇಸರ ಇಲ್ಲ, ಅಳು ಇಲ್ಲ. ಸಾಗಿಸುತ್ತಿದ್ದಾಳೆ ಜೀವನ ಮನಸ್ಸಿನ ಜೊತೆ ಮಾತಾಡಿಕೊಂಡು, ಕನಸನ್ನು ನೆನಪಿಸಿಕೊಂಡು, ಕಾಡಲ್ಲಿ ಕಂಡವನ ರೂಪ ನೆನಪಿಸಿಕೊಂಡು. ಪಾಪ! ಇದ್ದುದರಲ್ಲೆ ಸಂತೃಪ್ತಿ ಪಡುವ ನಡೆ ಅವಳದು.
Comments
ಉ: ಅವಳು (ಸಣ್ಣ ಕಥೆ)
>>>ಆದರೆ ಕನಸಲ್ಲಾದರೂ ತನ್ನವನ ಕಂಡೆನಲ್ಲ ಅನ್ನುವ ಏನೊ ಒಂದು ರೀತಿ ಸಮಾಧಾನ. ತನಗೆ ಸಿಗದ ಸಂಸಾರ ಅವನಾದರೂ ಅನುಭವಿಸುತ್ತಿರುವನಲ್ಲ, ಸಾಕು. ಈ ನೆನಪುಗಳೆ ತಾನು ಒಂಟಿ ಅಲ್ಲ, ಮರೆಯಲ್ಲಿ ಅವನ ಹಾಜರಾತಿ ಅವಳ ಬದುಕಿಗೆ ನೆಮ್ಮದಿ.
ಮತ್ತದೆ ಕೆಲಸ, ಅದೆ ಆಫೀಸು ಫೈಲುಗಳ ನಡುವೆ. ಆದರೆ ಮನಸ್ಸು ಖುಷಿಯಾಗಿದೆ. ಮೊದಲಿನ ಬೇಸರ ಇಲ್ಲ, ಅಳು ಇಲ್ಲ.
-ನನಗೂ ಸಮಾಧಾನವಾಯಿತು... ಕತೆ ಚೆನ್ನಾಗಿದೆ.
In reply to ಉ: ಅವಳು (ಸಣ್ಣ ಕಥೆ) by ಗಣೇಶ
ಉ: ಅವಳು (ಸಣ್ಣ ಕಥೆ)
ಸರ್
ನಾನು ಬರೆದ ಮೊದಲ ಕಥೆಗೆ ನಿಮ್ಮಿಂದ ಇಷ್ಟು ಒಳ್ಳೆಯ ಅಭಿಪ್ರಾಯ ಬಂದಿರೋದು ತುಂಬಾ ಸಂತೋಷವಾಗಿದೆ. ಧನ್ಯವಾದಗಳು.
ಉ: ಅವಳು (ಸಣ್ಣ ಕಥೆ)
ನನಸಾಗದ ಕನಸು! ಕಾಡುವ ಕನಸಿನ ಚಿತ್ರಣ ಚೆನ್ನಾಗಿದೆ. ಮೊದಲ ಕಥೆಯೆಂದಿರಿ, ಶುಭವಾಗಲಿ, ಮುನ್ನಡೆಯಿರಿ.
In reply to ಉ: ಅವಳು (ಸಣ್ಣ ಕಥೆ) by kavinagaraj
ಉ: ಅವಳು (ಸಣ್ಣ ಕಥೆ)
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್. ಮತ್ತೆರಡು ಕಥೆ ಈಗಾಗಲೇ ಬರೆದಿದ್ದೇನೆ. ಸಧ್ಯದಲ್ಲೇ ಸಂಪದದಲ್ಲಿ ಓದಬಹುದು. ತಮ್ಮಗಳ ಪ್ರೋತ್ಸಾಹವೆ ಬರೆಯುವ ಕೈಗಳಿಗೆ ಉತ್ತೇಜನ ಸರ್. ನಮಸ್ಕಾರ.
ಉ: ಅವಳು (ಸಣ್ಣ ಕಥೆ)
ಇದು ನಿಮ್ಮ ಮೊದಲ ಕತೆಯೆಂದರೆ ಖಂಡಿತವಾಗಿಯೂ ಪ್ರಶಂಸನೀಯವೇ? ನಿಮ್ಮ ಬರವಣಿಗೆ ಮುಂದುವರೆಸಿ!
ಉ: ಅವಳು (ಸಣ್ಣ ಕಥೆ)
ಇದು ನಿಮ್ಮ ಮೊದಲ ಕತೆಯೆಂದರೆ ಖಂಡಿತವಾಗಿಯೂ ಪ್ರಶಂಸನೀಯವೇ! ನಿಮ್ಮ ಬರವಣಿಗೆ ಮುಂದುವರೆಸಿ!
In reply to ಉ: ಅವಳು (ಸಣ್ಣ ಕಥೆ) by karababu
ಉ: ಅವಳು (ಸಣ್ಣ ಕಥೆ)
Sure. Thank you Sir.
ಉ: ಅವಳು (ಸಣ್ಣ ಕಥೆ)
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸೆಳೆವುದೇ ಜೀವನ..ಕಥೆ ಚೆನ್ನಾಗಿದೆ ....
In reply to ಉ: ಅವಳು (ಸಣ್ಣ ಕಥೆ) by sriprasad82
ಉ: ಅವಳು (ಸಣ್ಣ ಕಥೆ)
ಧನ್ಯವಾದಗಳು ಸರ್. ಈ ಕಥೆಗೆ ದೊರೆತ ಓದುಗರ ಪ್ರೋತ್ಸಾಹದಿಂದ ಇದುವರೆಗೆ ಹತ್ತು ಕಥೆಗಳನ್ನು ಬರೆದೆ. ಇನ್ನೂ ಬರೆಯುತ್ತಿದ್ದೇನೆ. ನನ್ನ ಬ್ಲಾಗ್ ವೀಕ್ಷಿಸಿ. ಈ ಎಲ್ಲ credit ಸಂಪದಕ್ಕೆ ಸೇರಬೇಕು.