ದಶಾವತಾರ ನಮನ !

ದಶಾವತಾರ ನಮನ !

ಇದೊಂದು ಹೊಚ್ಚ ಹೊಸ ಪ್ರಯತ್ನ. ಕಳೆದ ವಾರದಲ್ಲಿ ಮೊಳಕೆಯೊಡೆದ ಒಂದು ಆಲೋಚನೆ, ರಾಮ ನವಮಿ’ಯ ದಿನ, ಇಂದು ಸಸಿಯಾಯ್ತು. 
ಈವರೆಗೆ ಹಲವಾರು ವಿಚಾರಗಳ ಕುರಿತು ನಾಲ್ಕು ಸಾಲು (ಕವನ ಎನ್ನಬಹುದು) ಬರೆದಿದ್ದೇನೆ ... ಇದು ಅವುಗಳಿಗಿಂತ ಭಿನ್ನ !
 
ಭಗವಂತನ ದಶಾವತಾರಗಳನ್ನು ನೆನೆವ ನಾಲ್ಕು ಸಾಲುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. 
ಶ್ರೀರಾಮ ನವಮಿಯ ಈ ಶುಭದಿನದಂದು ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಶುಭಮಸ್ತು ! 
 
ಸಂಸಾರವೆಂಬೋ ಭವಸಾಗರದಲ್ಲಿ
ದಿಕ್ಕೆಟ್ಟು ಅಲೆಯುತ್ತಿರುವ ಮೀನು ನಾ
ಮದಮತ್ಸರದ ಕೂಪಕ್ಕೆ ಕೂಳಾಗದಂತೆ
ಕೈ ಹಿಡಿದೆನ್ನ ಕಾಯೋ ಮತ್ಸ್ಯರೂಪನೇ
 
ಭವದ ಚಿಂತೆಗಳ  ಬೆಟ್ಟ ಹೊತ್ತು
ಕುಸಿದು ಕುಳಿತೆಹೆನು ನಾನೀ ಹೊತ್ತು
ಬೆನ್ನ ಹತ್ತಿರುವ ಚಿಂತೆಗಳ ನೀ ಕಿತ್ತು 
ಚಿಂತನೆಯಲ್ಲಿ ತೇಲಿಸೆನ್ನ ಕೂರ್ಮದೇವನೇ
 
ಇಹಲೋಕದ ಸುಖಗಳಿಗೆ ಸಿಲುಕಿಹ ಪಾಪಿ ನಾನು
ಭೂಭಾರವನ್ನು ಹೊತ್ತು ಸಲುಹಿದ ದೇವ ನೀನು
ಭವವೆಂಬ ಅಬ್ಬಿಯೊಳು ಮುಳುಗಿಹ ಎನ್ನ ಸಲಹೋ
ಭೂದೇವಿಯ ರಕ್ಷಿದಾತನಾದ ಭೂ ವರಾಹನೇ
 
ಕೋಪದಿಂದ ಖೂಳನಾಗಿ  ನರಮೃಗನೇ ಆಗಿಹೆನು
ಕೋಪ ತಾಪವೆಂಬ ಭವದ ಅಗ್ನಿಯಲ್ಲಿ ಬೆಂದಿಹೆನು
ತಾಪವೆಂಬ ಮನದ ಬೆಂಕಿಗೆ ತಂಪನೆರೆ ತಂದೆಯೇ
ಕೋಪವೆಂಬ ಅರಿಯ ತರಿದು ಪೊರೆಯೋ ನಾರಸಿಂಹನೇ
 
ನಾನು ನನ್ನದೆಂಬ ಅಹಂಭಾವಕ್ಕೆ ಬಲಿಯಾಗಿಹೆನು
ಚಾಚಿ ಬೇಡುವುದರಲ್ಲೇ ಇದ್ದೂ ಇಲ್ಲದೆ ಬಡವನಾಗಿಹೆನು
ಎನ್ನ ದೇಹವನ್ನಾಳುತ್ತಿರುವ ಅಹಂಭಾವವನ್ನು ತುಳಿದು
ಎನ್ನ ಮನದ ಆಲಯವನ್ನು ನೀನಾಳೋ ವಾಮನದೇವನೇ
 
ಎನ್ನಲ್ಲಿನ ಅರಿಷಡ್ವರ್ಗಗಳು ಎನ್ನುದ್ದಕ್ಕೂ ಬೆಳೆದು ನಿಂತಿದೆ
ಅಧಿಕಾರ, ರೂಪ, ಯೌವ್ವನಮದಾದಿ ಕ್ಷತ್ರಿಯ ಗುಣಗಳೇ ಹರಡಿದೆ
ಇಹಲೋಕದ ಸುಖ ಉಣಲು ಸಹಸ್ರಬಾಹುಗಳೂ ಸಾಲದಾಗಿದೆ
ಎನ್ನಲ್ಲಿನ ಅರಿಗಳನ್ನು ತರಿದು ಕಾಪಾಡೆನ್ನ ಪರಶುರಾಮನೇ
 
ಸೆಟೆದು ನಿಂತಿಹಾ ಅಹಂಕಾರವನ್ನು ಮುರಿದೆನ್ನ ಸಲಹೋ
ಎನ್ನಲ್ಲಿನ ಸುಪ್ತಶಕ್ತಿ ನೀನಾಗಿ ಹೃದಯದಲ್ಲೇ ನೆಲೆಸೋ
ದಶದಿಕ್ಕುಗಳ ಚಿಂತೆಗಳಿಂದ ಇಂದೇ ಎನ್ನ ಮುಕ್ತಗೊಳಿಸೋ
ದಂಡಿತ ಅಹಲ್ಯೆಯನ್ನು ಸ್ಪರ್ಶಿಸಿ ಪೊರೆದ ಕೋಡಂಡರಾಮನೇ
 
ಲೋಕದ ಅನ್ಯಾಯ ಅಕ್ರಮಕ್ಕೆ ಮೈ ಒಡ್ಡಿ ಬಾಗಿ ಬಾಗಿ ಗೂನಾಗಿರುವೆ
ವಕ್ರಬುದ್ದಿಗಳ ಮೈದಡವಿ ತಿದ್ದಲು ಹೋಗಿ ಅವರಿಂದಲೇ ನಿಂದಿತನಾಗಿರುವೆ
ಎಲ್ಲೆಲ್ಲೂ ಸುತ್ತುವರೆದಿರುವ ರಾಜಕೀಯ ಶಕುನಿಯರಿಂದ ಜರ್ಝರಿತನಾಗಿರುವೆ
ಹೋರಾಡಲಾರದೆ ಸೋತ ಮನಕೆ ಗೀತೆಯ ಕೊಳಲ ಕೇಳಿಸೋ ಶ್ರೀಕೃಷ್ಣನೇ
 
ಚಿಂತೆ ಮುತ್ತಾಗಿ ಚಿಂತನೆ ಮುಕ್ಕಾಗಿ ಮನ ಬರಿದಾಗಿ ದಿಗಂಬರವಾಗಿದೆ
ದಿಟ್ಟಿ ನಿನ್ನಲಿ ನೆಲೆಯಾಗದೆ ಹೃದಯ ಅಯೋಮಯವಾದ ಹಯವಾಗಿದೆ
ತಪ್ಪುಗಳೆಲ್ಲವ ಒಪ್ಪುಗಳಾಗಿಸಿ ಕಾಯೊ ಎನ್ನನು ಕರುಣಾಸಾಗರನೇ
ಎನ್ನದೇನಿದೆ ನಿನ್ನದೇ ಎಲ್ಲವೆನ್ನುತ ತುಳಸೀದಳವನ್ನರ್ಪಿಸುವೆನೈ ಅಚ್ಯುತನೇ !
 

Comments

Submitted by RAMAMOHANA Fri, 04/22/2016 - 15:21

ಓಯ್ ಭಲ್ಲೆ...ಭಲ್ಲೆ.. ಶ್ರೀನಾಥ್ ಭಲ್ಲೇಜಿ, ಸದಾ ಹಾಸ್ಯದ‌ ಹೊನಲ‌ ಹರಿಸುತ್ತಿದ್ದ‌ ನೀವು ಇಂದು ದಶಾವಾತಾರದ‌ ರಸ‌ ಕಾವ್ಯವನ್ನೆ ಸ್ಪುರಿಸಿದ್ದೀರ‌,.. ಚೆನ್ನಾಗಿದೆ.
ರಾಮೋ

Submitted by bhalle Thu, 04/28/2016 - 16:13

ನಮಸ್ಕಾರ ರಾಮೋ ಅವರೇ .... ಹೊಸ ಪ್ರಯತ್ನ ಮಾಡುವ ಉದ್ದೇಶ ಇತ್ತು ... ಪ್ರಯತ್ನ ಮಾಡೇ ಬಿಡುವ ಅಂತ ಮಾಡಿದೆ. ನಿಮಗೆಲ್ಲ ಇಷ್ಟವಾಗಿದ್ದು ನನ್ನಲ್ಲಿ ಇನ್ನಷ್ಟು ಸ್ಪೂರ್ತಿ ತುಂಬಿದೆ. ಅನಂತ ಧನ್ಯವಾದಗಳು !!!

Submitted by sathishnasa Thu, 06/02/2016 - 14:06

ಮನದ ತಳಮಳಕ್ಕೆ ನೆಮ್ಮದಿಗಾಗಿ ದಶಾವತಾರದ ಶ್ರೀ ಹರಿಗೆ ನಿಮ್ಮ ಮೊರೆಯ ಸಾಲುಗಳು ತುಂಬಾ ಸೊಗಸಾಗಿದೆ ಭಲ್ಲೆಯವರೆ.
.................ಸತೀಶ್

Submitted by kavinagaraj Tue, 07/05/2016 - 15:46

ಭಗವಂತನನ್ನು ಹಾಡಿ ಹೊಗಳಿದ್ದೀರಿ. ದಶದಿಕ್ಕುಗಳಿಂದಲೂ ಶುಭವಾಗಲಿ, ಭಲ್ಲೆಯವರೇ.