ಕತೆ : ನನ್ನ ಬಾಲ್ಯದ ಗೆಳೆಯ

ಕತೆ : ನನ್ನ ಬಾಲ್ಯದ ಗೆಳೆಯ

                                                                    ನನ್ನ ಬಾಲ್ಯದ ಗೆಳೆಯ
                   ಪ್ರೀತಿ ಎನ್ನುವುದೊಂದು ಮನಸ್ಸಿನ ಅಂತರಾಳದ ಭಾವನೆ. ಈ ಪ್ರೀತಿಗೆ ಹುಟ್ಟಿದೆ ಆದರೆ ಸಾವಿಲ್ಲ. ಪ್ರೀತಿ ಸದಾ ಶಾಶ್ವತ. ನನ್ನ ಗೆಳೆಯನಿಗೂ ನನ್ನ ಮೇಲೆ ಬಾಲ್ಯದಿಂದಲೇ ಪ್ರೀತಿ. ನನ್ನನ್ನು ಬಾಲ್ಯದಿಂದಲೂ ಕಂಡ ಅವನು ನನ್ನ ಜೊತೆ ತುಂಬಾ ಹೊತ್ತು ಇರಲು ಬಯಸುತ್ತಿದ್ದ. ಅವನಿಗೆ ನನ್ನ ಕಂಡರೆ ತುಂಬಾ ಇಷ್ಟ. ಆದರೆ ಅವನಿಗೆ ಅಡ್ಡಗೋಡೆ ಆಗಿ ನಿಂತವರು ನನ್ನ ಪಾಲಕರು.                        ನನ್ನ ತಂದೆ ಎಷ್ಟೋ ಸಾರಿ ನೋಡಿದರು, ವಿಚಾರಿಸಿದರು, ಕೊನೆಗೆ ಕೋಪ ಬಂದು ಬೈದರು ಆದರೂ ನನ್ನ ತಂದೆಗೆ ಏನೂ ಪ್ರತಿಕ್ರಿಯಿಸಲು ಆಗಲಿಲ್ಲ ಏಕೆಂದರೆ ನನಗೂ ಅವನ ಮೇಲೆ ಪ್ರೀತಿ ಇತ್ತು. ನನ್ನ ತಂದೆ ಹೇಳುತ್ತಿದ್ದರು “ನಿನ್ನ ಜೀವನ ಗುರಿಯ ಬಗ್ಗೆ ನೀನು ಯೋಚಿಸು, ಏನಾದರು ಸಾಧಿಸುವ ಛಲ ಬೆಳೆಸಿಕೊ, ದೃಢವಾದ ಮನಸ್ಸು ನಿನ್ನಲ್ಲಿ ಇರಲಿ. ಈ ಸಮಯ ನಿನಗೆ ತುಂಬಾ ಮುಖ್ಯವಾದುದು.ಗೊತ್ತಿದ್ದು, ಗೊತ್ತಿಲ್ಲದೆಯೋ ಹಾಳಾಗಬೇಡ”ಎಂದು ತಿಳಿಸಿಹೇಳುತ್ತಿದರು.
                        ಆದರೆ ನಾನು ಏನು ಮಾಡಲಿ ?....... ನನಗೆ ಈ ಕಡೆ ನನ್ನ ತಂದೆಗೆ ಉತ್ತರಿಸಲು ಆಗದೆ, ನನ್ನ ಗೆಳೆಯನಿಗೆ ವಿದಾಯ ಹೇಳಲು ಆಗದೆ ಅಮ್ಮನ ಹತ್ತಿರ ಮಾತನಾಡಿದೆ. ಅಮ್ಮ “ಏನೂ ಯೋಚಿಸಬೇಡ, ನೀನೇ ಅವನಿಂದ ದೂರವಿರಲು ಪ್ರಯತ್ನಿಸು, ಸ್ವಲ್ಪ ದಿನ ಅಷ್ಟೇ ನಂತರ ತಾನಾಗೇ ಬಿಟ್ಟು ಹೋಗುತ್ತಾನೆ” ಎಂದು ಸಮಾಧಾನಪಡಿಸಿದರು.
              ಅಮ್ಮನ ಮಾತಿಗೆ ಒಪ್ಪಿದ ನನಗೆ ಏನು ಪ್ರಯೋಜನವಾಗಲ್ಲಿಲ್ಲ. ಒಂದೆರಡು ದಿನ ನಾನು ಅವನಿಂದ ದೂರವಿದ್ದರೂ, ಮತ್ತೆ ನನ್ನನ್ನು ಹಿಂಬಾಲಿಸಿದ. ನನ್ನ ಕಣ್ಣುಗಳನ್ನು ಕಂಡರೆ ಅವನಿಗೆ ತುಂಬಾ ಇಷ್ಟ. ಯಾವಾಗಲೂ ಅವನು ನನ್ನ ಕಣ್ಣಲ್ಲೇ ಇರಲು ಇಷ್ಟಪಡುತ್ತಾನೆ. ಎಷ್ಟೋ ಸಾರಿ ಕ್ಲಾಸ್ ನಡೆಯುತ್ತಿರುವಾಗಲೂ ನನ್ನ ಕಣ್ಣುಗಳಲ್ಲಿ ಹಾಯ್ದು ಹೋಗುವನು. ನನ್ನ ಗೆಳೆಯನಿಗೆ ಚಹಾ ಎಂದರೆ ಇಷ್ಟವಿಲ್ಲ. ಅವನಿಗೆ ಹಾಲು, ಮಜ್ಜಿಗೆ ಎಂದರೆ ಪ್ರೀತಿ. ಪುರಾಣ, ಕಥೆಗಳನ್ನು ಕೇಳಲೆಂದು ದೇವಸ್ಥಾನಕ್ಕೆ ಹೊರಟರೆ ನನ್ನ ಹಿಂದೆಯೇ ಓಡಿ ಬರುವನು. ನಾನು ಎಷ್ಟು ಹೇಳಿದರೂ ನನ್ನ ಮಾತು ಕೇಳಲಿಲ್ಲ ಅವನು. ಕೊನೆಗೆ ನಾನೇ ಅವನಿಂದ ದೂರ ಹೋಗಲು ನಿಶ್ಚಯಿಸಿ, ದೂರದೂರಿನ ಕಾಲೇಜೊಂದಕ್ಕೆ ಸೇರಿಕೊಂಡೆ. ನನ್ನನ್ನು ಬಿಡಲಾಗದೆ ನನ್ನ ಗೆಳೆಯನು ಅಲ್ಲಿಯೂ ಹಿಂಬಾಲಿಸಿದನು. ಎಷ್ಟೋ ಸಾರಿ ಅವನನ್ನು ನೆನೆಸಿಕೊಳ್ಳುತ್ತಿರುವಾಗ ವಾರ್ಡನ್ಸ್ ಹತ್ತಿರ ಬೈಸಿಕೊಂಡಿದ್ದೇನೆ. ಈಗ ದ್ವೀತಿಯ ಪಿಯುಸಿಯಲ್ಲಿ ಸ್ವಲ್ಪ ದೂರವಿದ್ದಾನೆ. ಅದಕ್ಕೆ ನಾನು ಹಾಯಾಗಿದ್ದೇನೆ. ಅವನು ಸ್ವಲ್ಪ ನನ್ನಿಂದ ದೂರವಿದ್ದರೆ ನನಗೆ ಲಾಭ ಎಂದು ನನಗೂ ಅನ್ನಿಸಿದೆ.
                   ಆ ಗೆಳೆಯ ಬೇರೆ ಯಾರೂ ಅಲ್ಲ ‘ನಿದ್ದೆರಾಯ’. ನನ್ನನ್ನು ಹಿಂಬಾಲಿಸಿದ ನನ್ನ ಬಾಲ್ಯದ ಗೆಳೆಯ.
 
                                                                                                                                                   - ಕುಮಾರಿ. ಚೇತನಾ ಚಿ. ಕೋಟ್ಯಾಳ
                                                                                                                                                                  ಅಥಣಿ
                                                                                                                                                               ಜಿ:ಬೆಳಗಾವಿ
 

Comments

Submitted by ravindra n angadi Mon, 06/20/2016 - 11:16

ಪುಟ್ಟ ಕಥೆ ತುಂಬಾ ಚೆನ್ನಾಗಿದೆ. ಓದುತ್ತಾ ಹೋದಂತೆ ಕಥೆ ಕರೆದುಕೊಂಡು ಹೋಗುವ ದಾರಿಯೇ ಬೇರೆ. ಕಥೆಯ ಕೊನೆಗೆ ಸಿಕ್ಕ ದಾರಿಯೇ ಬೇರೆ. ಒಟ್ಟಿನಲ್ಲಿ ಸ್ವಾರಸ್ಯಕರವಾದ ಲೇಖನ.
ನಿಮ್ಮ ಗೆಳೆಯನ ಸ್ನೇಹ ಇನ್ನೂ ಕಡಿಮೆಯಾಗುವಂತಾಗಲಿ.

ಶುಭವಾಗಲಿ.