ಭಕ್ತ ಮತ್ತು ಪರೀಕ್ಷೆ

ಭಕ್ತ ಮತ್ತು ಪರೀಕ್ಷೆ

 
 
                      ಬಹಳಷ್ಟು ಜನರ ಮನದಲ್ಲಿ ಒಂದು ರೀತಿಯ  ಆಲೋಚನೆಯಿರುತ್ತದೆ. 'ನಾವು ದೇವರನ್ನು ನಂಬಿದ್ದೇವೆ, ನಾವು ಶಿವನ ಪರಮ ಭಕ್ತರಾಗಿಬಿಟ್ಟಿದ್ದೇವೆ, ಅವನನ್ನೇ ನಾವು ನೆಚ್ಚಿಕೊ೦ಡಿದ್ದೇವೆ, ಅವನೇ ನಮ್ಮ ರಕ್ಷಣೆಗೆ ನಿಂತಿದ್ದಾನೆ.  ನಮಗೆ ದೇವರು ಎಲ್ಲ ರೀತಿಯ ಅನುಕೂಲ ಮಾಡಿಕೊಡುತ್ತಾನೆ. ಯಾವುದೇ ತರಹದ  ಕಷ್ಟ ನಷ್ಟಗಳನ್ನು ಕೊಡುವುದಿಲ್ಲ. 'ಇತ್ಯಾದಿಯಾಗಿ  ನಂಬುತ್ತಾರೆ. ಇದೆಲ್ಲಾ  ಅಪ್ಪಟ ಸತ್ಯ. ಆದರೆ ಇವೆಲ್ಲಾ ಆಗಬೇಕಾದರೆ ಅವನ ಪರೀಕ್ಷೆಯಲ್ಲಿ ನಾವು ಅತ್ಯುತ್ತಮ ಅಂಕ ತೆಗೆದು ಉತ್ತೀರ್ಣನಾಗಬೇಕು.  ಭಗವಂತ ಸುಮ್ಮನೆ ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಅವನನ್ನು ಒಲಿಸಿಕೊಳ್ಳಬೇಕಾದರೆ   ಅವನು ಒಡ್ಡುವ ಹಲವಾರು ಪರೀಕ್ಷೆಗಳನ್ನು ನಾವು ಗೆಲ್ಲಬೇಕಾಗುತ್ತದೆ. ಕೆಲವು ಸಮಯದಲ್ಲಿ ನಮಗೆ  ಒಂದು ಚಿಕ್ಕ ಕಷ್ಟ ಬಂದರು ಕೂಡಾ ನಾವು ಸಹಿಸಲಾರದೇ ಕೊರಗಿ ಸುಸ್ತಾಗಿ ಬಿಡುತ್ತೇವೆ.   ನಮ್ಮ ಜೀವನವೆಲ್ಲ ಭಗವಂತನೇ ನೋಡಿಕೊಳ್ಳುತ್ತಾನೆಂಬ ಭಾವನೆಯನ್ನು  ಆ ಕ್ಷಣದಲ್ಲಿ ಮರೆತು  ಬಿಡುತ್ತೇವೆ. ಆ ಕಷ್ಟದಿಂದ ಈಚೆಗೆ ಬರಲು ಹಲವಾರು ರೀತಿಯ ಕಸರತ್ತು ಮಾಡುತ್ತೇವೆ. ಇದು ಏಕೆ ಹೀಗೆ? 
 
                      ಏಕೆಂದರೆ, ದೇವರನ್ನು  ನಾವು ತಿಳಿದುಕೊಂಡಷ್ಟು  ಸುಲಭನಾಗಿಲ್ಲ, ಅವನು ತು೦ಬಾ ಕಠಿಣನಾಗಿದ್ದಾನೆ.  ಅವನ ಪರೀಕ್ಷಾ ವಿಧಾನಗಳು ಅನೇಕ. ಅವನು ಯಾವ ಯಾವ ರೀತಿಯಲ್ಲಿ  ನಮ್ಮನ್ನು ಪರೀಕ್ಷಿಸುತ್ತಾನೆಂದು ಯಾರಿಗೂ ತಿಳಿಯದು.  ದೇವರು ನಮ್ಮೊ೦ದಿಗೆ ತೆಗೆದುಕೊಳ್ಳುವ ಪರೀಕ್ಷಾ ರೀತಿ ಎಲ್ಲವೂ  ಪರೀಕ್ಷೆ ಪ್ರಾರಂಭವಾದಾಗಲೇ ತಿಳಿಯುವುದು.  ದೇವರು,   ನನ್ನನ್ನು ಈತ ಎಷ್ಟು ನೆಚ್ಚಿಕೊಂಡಿದ್ದಾನೆಂದು ಪರೀಕ್ಷಿಸಲು ತನ್ನನ್ನು ನಂಬಿಕೊಂಡಿರುವವರನ್ನೇ  ಹೆಚ್ಚು ಕಾಡುತ್ತಾನೆ.   ತನ್ನ ಆಪ್ತ ಭಕ್ತರೆಸಿಕೊಂಡವರನ್ನೇ  ಮೊದಲು ದೂರ ತಳ್ಳಿ ಬಿಡುತ್ತಾನೆ. ನಮ್ಮ ತನು ಮನ ಧನಗಳ ಸಮಸ್ಥಿತಿಯನ್ನು  ಅಲ್ಲೋಲಕಲ್ಲೋಲ ಮಾಡಿಬಿಡುತ್ತಾನೆ . 'ತನುವನಲ್ಲಾಡಿಸಿ'  ನಮ್ಮ ದೇಹಕ್ಕೆ ನಾನಾ ರೋಗಗಳನ್ನು ತಂದೊಡ್ದುತ್ತಾನೆ. 'ಮನವನಲ್ಲಾಡಿಸಿ' ಮನದೊಳಗೆ ದುರಾಸೆಗಳನ್ನು ಹುಟ್ಟಿಸಿ, ಮನಸ್ಸನ್ನು ಚಂಚಲಗೊಳಿಸಿ ಮಾಡಬಾರದ ಕೆಲಸಕ್ಕೆ ಮುಂದಾಗುವಂತಹ ಪರಿಸ್ಥಿತಿಯನ್ನು  ನಿರ್ಮಾಣ ಮಾಡುತ್ತಾನೆ. 'ಧನವನಲ್ಲಾಡಿಸಿ'  ನಮ್ಮಲ್ಲಿರುವ ಹಣವನ್ನೆಲ್ಲ ಖಾಲಿ ಮಾಡಿಬಿಡುತ್ತಾನೆ. ಬೇಡಬಾರದು ಎಂದುಕೊಂಡವರಲ್ಲಿ ಬೇಡುವ ಪರಿಸ್ಥಿತಿ ತಂದು ಒಡ್ಡಿ ಸಂಕಷ್ಟದ ಬೇಗೆಯಲ್ಲಿ ಬೇಯಿಸುತ್ತಾನೆ. ಇಂತಹ ಎಲ್ಲ ಪರಿಸ್ಥಿಗಳಲ್ಲಿ  ನಮ್ಮ ವಿವೇಕ ಹೇಗುಂಟು? ಎಂಬುದನ್ನು ಸತತವಾಗಿ ಪರೀಕ್ಷಿಸುತ್ತಾನೆ.   

                      ನಾವೇನೋ ದೇವರನ್ನು ನಂಬಿಕೊ೦ಡಿದ್ದೇವೆ ನಿಜ. ಹಾಗೆಂದು ದೇವರು ನಮ್ಮನ್ನು ಒಮ್ಮೆಲೇ ನಂಬುವುದಿಲ್ಲ! ಪರೀಕ್ಷಿಸದೆ ಅವನೆಂದೂ ನಮ್ಮನ್ನು ಸ್ವೀಕರಿಸಲಾರ."ನಾನು ದೇವರಿಗಾಗಿ ದಾನ ಧರ್ಮ ಮಾಡಿದ್ದೇನೆ, ಉಪವಾಸ ಮಾಡಿದ್ದೇನೆ, ಪೂಜೆ ಪುನಸ್ಕಾರ ನಡೆಸಿದ್ದೇನೆ "  ಎಂದು ನಾವು ಬೀಗಿದರೆ ಇಷ್ಟಕ್ಕೆ ನಮ್ಮನ್ನು ಪರೀಕ್ಷೆಗೆ ಗುರಿ ಮಾಡದೆ ಅವನು ಸ್ವೀಕರಿಸಲಾರ. ನಾವು ಭಗವಂತನನ್ನು ನಂಬಿ ಅವನ ಕೈ ಹಿಡಿದುಕೊಂಡು  ಬಿಟ್ಟರೆ  ಮುಗಿಯುವುದಿಲ್ಲ, ಭಗವಂತನೂ ನಮ್ಮ ಕೈಯನ್ನು ಗಟ್ಟಿ ಹಿಡಿದುಕೊಳ್ಳುವಂತಾಗಬೇಕು. 
 
                     ಭಗವಂತ ನೀಡುವ ಎಲ್ಲಾ  ಪರೀಕ್ಷೆಯಲ್ಲೂ  ತಾನು ಹಿಡಿದಿರುವ ಭಕ್ತಿ ಮಾರ್ಗವನ್ನು ಬಿಟ್ಟುಕೊಡದೇ ಅನನ್ಯವಾಗಿ ಭಗವಂತನಲ್ಲೇ ತನ್ನ ತನು ಮನ ಧನವನ್ನು ಸಮರ್ಪಣಾ ಭಾವದಲ್ಲಿ ಅರ್ಪಿಸಿ " ಎಲ್ಲವೂ ನೀನೇ, ನನ್ನದೇನೂ ಇಲ್ಲಿ ಇಲ್ಲ" ಎಂಬ  ನಿರ್ಲಿಪ್ತವಾದ ಭಾವ ಬಂದಂತಹ  ಭಕ್ತನಿಗೆ ದೇವರು ಖಂಡಿತಾ ಒಲಿಯುತ್ತಾನೆ. ಆಗ ಪರಮಾತ್ಮನು ಭಕ್ತನ ಹೃದಯ ವಾಸಿಯಾಗುತ್ತಾನೆ.  ಆಗಲೇ " ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ, ಕುಳಿತರೆ ನಿಲುವ, ನಿಂತರೆ ನಲಿವ, ನಲಿದರೆ ಒಲಿವ.ಸುಲಭನೋ ಹರಿ, ತನ್ನವರ ಅರೆಘಳಿಗೆ ಬಿಟ್ಟು ಅಗಲನೋ " 
                     ಒಮ್ಮೆ ಪರಮಾತ್ಮನ ಕೃಪೆಯಾಗಿಬಿಟ್ಟರೆ ಆಗ ಜಗವೆಲ್ಲ ಸುಂದರ, ಶಿವಮಯ.  ಇದೆ ಜೀವನದ ಪರಮ ಗುರಿ. 

 

Comments

Submitted by kavinagaraj Sun, 07/03/2016 - 18:02

ಸುವಿಚಾರಕ್ಕಾಗಿ ವಂದನೆಗಳು, ಪ್ರಕಾಶರೇ. ದೇವರನ್ನು ನಂಬುವ ಮೊದಲು ತಮ್ಮನ್ನು ತಾವು ಮೊದಲು ನಂಬಬೇಕು. 'ನೂರು ದೇವರನು ನಂಬಿದರೂ ಫಲವಿಲ್ಲ, ತನ್ನ ತಾ ನಂಬದಿರ್ದೊಡೆ' ಎಂಬುದು ವಿವೇಕಾನಂದರೂ ಸೇರಿದಂತೆ ಹಲವು ಅನುಭಾವಿಗಳ ನುಡಿ. ಇದನ್ನರಿಯಲು ನಿಮ್ಮ ಲೇಖನವೂ ಸಹಕಾರಿಯಾಗಿದೆ.