ಈ ಚಾಳಿನಿಂದ .......ಆ ಚಾಳಿಗೆ................

ಈ ಚಾಳಿನಿಂದ .......ಆ ಚಾಳಿಗೆ................

ಈ ಚಾಳಿನಿಂದ ………  ಆ ಚಾಳಿಗೆ …………
                    ಈ ಮಗ್ಗಿನಿಂದ …  ಆ ಮಗ್ಗಿಗೆ …. ಆ ಮಗ್ಗಿನಿಂದ …..  ಈ ಮಗ್ಗಿಗೆ …….ಕಾಫಿ ಬೆರೆಸುವ ರೀತಿ ಹೇಳುತ್ತಲೇ ಹಾಲು, ಸಕ್ಕರೆ ,ಕಾಫಿಪುಡಿ ತಮ್ಮ ಮೂಲ ಸತ್ವ ಬಿಟ್ಟು ಮಧುರ ಸ್ವಾದವನ್ನು ಉಂಟು ಮಾಡುವ ಈ ಕಾಫಿ ಜಾಹಿರಾತನ್ನು ರೂಪಕವಾಗಿಟ್ಟುಕೊಂಡು ನಮ್ಮ ಜೀವನ ಮನೆಯಿಂದ ಮನೆ ಬದಲಾಯಿಸುತ್ತ ತನ್ನ ಮೂಲ ಸತ್ವ ಕಳೆದುಕೊಂಡು ಬಹುತ್ವವನ್ನು ಹೀರಿಕೊಂಡು ಹೇಗೆ ಬೆಳೆಯುತ್ತದೆ ಎಂಬ ಪರಿಯನ್ನು ನೋಡಿ.
                  ಹಳ್ಳಿ ಶಾಲೆ, ಓದು ಮುಗಿಯಿತು, ಇನ್ನು ಮುಂದಿನ ಓದು ಶಹರದ ಶಾಲೆಯಲ್ಲಿ. ಶಹರ ಸೇರುವುದು ಅನಿವಾರ್ಯ  ಎಂದಾದ ಮೇಲೆ ಬರಗಾಲದ ಆ ಹಳ್ಳಿ ಮನೆಯೇ ಎದ್ದು ಶಹರಕ್ಕೆ ಬಂತು. ನಾವು ಮೊದಲು ಗದಗಿಗೆ ಬಂದಿದ್ದು ವಕೀಲ ಚಾಳ ಏರಿಯಾಕ್ಕೆ. ಇಲ್ಲಿಯೇ ನಾವು ನಗರದ ನಾಜೂಕಿನ ರೀತಿ – ನೀತಿ ಗಳನ್ನು ಕಲಿತಿದ್ದು. ಸಾಮಾನ್ಯವಾಗಿ ಚಾಳ ಅಂದರೆ ನಾಲ್ಕರಿಂದ ಏಳೆಂಟು ಮನೆಗಳು ಇರುತ್ತವೆ. ಒಂದೋ ಎರಡು ನಳ ಮತ್ತು ಸಂಡಾಸ  ಇರುತ್ತವೆ. ಆದರೆ ಈ ವಕೀಲ ಚಾಳ  ಅನ್ನುವುದು ಒಂದು ದೊಡ್ಡ ಪ್ರದೇಶವಾಗಿದ್ದು  ಇದರೊಳಗೆ ಒಂದಿಷ್ಟು ಚಾಳಗಳು ಇವೆ. ಬಾಡಿಗೆಗೆ ಸಿಕ್ಕಿದ್ದು ಸಣ್ಣ ಮನೆ, ಮನೆ ಅಂದರೆ ಅದೊಂದು ಖೋಲಿ ಮಾತ್ರ. ಚಿಕ್ಕ ಕೈ ಬಚ್ಚಲು ಹೊರಗೆ ಒಂದು ಸಂಡಾಸು ಮಾತ್ರ. ಶಾಲೆ ಸೂಟಿ ಬಿಟ್ಟಿತೆಂದರೆ ನಾವೆಲ್ಲ ಸೇರುತ್ತಿದ್ದುದು ವಕೀಲ ಚಾಳಿನ ಜೋಡ ಕಳಸದ ಬಂಗಲೆಯ ಮುಂದಿನ ಚಿಕ್ಕ ಬಯಲಿನಲ್ಲಿ. ಅಲ್ಲಿಗೆ ನಮ್ಮೆಲ್ಲರಗಿಂತಾ ಮೊದಲೇ ಹಾಜರಿರುತ್ತಿದ್ದುದು ಖ್ಯಾತ ಕ್ರಿಕೆಟಿಗ ಸುನಿಲ ಜೋಶಿ. ನಾವೆಲ್ಲ ಸೇರಿ ಗೋಲಿ,ಚಿಣಿ ಪಣಿ, ಕ್ರಿಕೆಟ್  ಆಡುತ್ತಿದ್ದೆವು. ಅದೊಂದು ಸುಂದರ ನೆನಪು.
                         ಆಮೇಲೆ ನಾವು ಮನೆ ಬದಲಾಯಿಸಬೇಕಾಯಿತು ಆಗ ಹೋಗಿದ್ದು ಗದಗಿನ ಮಸಾರಿ ಏರಿಯಾದಲ್ಲಿನ ಗಾಯಕವಾಡ ಚಾಳಿಗೆ. ಇದು ಹಿಂದಿನ ಮನೆಗಿಂತಲೂ ದೊಡ್ಡದು. ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಒಂದು ಹಾಲ್ ಕಂ ಬೆಡ್ ರೂಮ್ ಮತ್ತು ಇನ್ನೊಂದು ಕಿಚನ್ ಕಂ ಬಾತ್ರೂಮ್. ಟಾಯಲೆಟ್ ಇಲ್ಲ, ದೂರದಲ್ಲಿ ಒಂದು ಸರ್ಕಾರಿ ನಳದ ನೀರು. ಈ ಮನೆಯಲ್ಲಿ ನಾಲ್ಕು ಜನರ ಓದು, ಇಬ್ಬರ ಲಗ್ನ, ಒಂದು ಬಾಣಂತನ  ಅಪ್ಪನ ಗುರುಚರಿತ್ರ ಪಾರಾಯಣ, ಅವ್ವನ ಸೋಳಾ ಸೋಮವಾರ ವ್ರತ ಎಲ್ಲ ಒಂದು ರೀತಿ ಸಂತಸ ಕ್ಷಣಗಳು.   “ಸುಖವಾಗಿರಲು ಹಣ ಬೇಕು, ಸಂತೋಷವಾಗಿರಲು ಹಣ ಬೇಕಿಲ್ಲ” ಎಂಬ ತತ್ವಜ್ಞಾನವನ್ನು ಈ ಚಾಳ ಕಲಿಸಿತೆನ್ನಬಹುದು.ಮುಂದೆ ಗಾಯಕವಾಡ ಚಾಳದಿಂದ ಎಲ್ಲ ಹಕ್ಕಿಗಳೂ ಬುರ್ರ್ !
                ಹೀಗೆ ಬುರ್ರ ಎಂದು ಹಾರಿ ಬಂದು ಕುಳಿತ ಊರು ಧಾರವಾಡ. ಧಾರವಾಡದ ಪ್ರಸಿದ್ಧ ಪೇಢೆ ಸಿಗುವ ಸ್ಥಳ ಲ್ಯೆನ್ ಬಜಾರ. ಇದೇ ಏರಿಯಾದಲ್ಲಿನ ಜಕಾತಿ ಚಾಳ ಎಂಬ ಮರದ  ಒಂದು ಕೊಂಬೆಯಲ್ಲಿ  ನಮ್ಮ ಹೊಸ ಸಂಸಾರ ಶುರು. ಇಂದಿಗೂ ನಂಟು ಉಳಿದಿರುವ ಈ ಚಾಳನಲ್ಲಿ ನನ್ನ ಏಕ್ಯೆಕ ಮಗಳ ಒಬ್ಬ ತಮ್ಮ ಅಲ್ಲಿದ್ದಾನೆ.  ಅವನ ಹೆಸರು ಸಂಜೀತ.ಜಕಾತಿ. ಚಾಳಿನಲ್ಲಿ ಎಲ್ಲರೂ ಕೂಡಿ ದೀಪಾವಳಿ, ತುಳಸಿ ಲಗ್ನ, ಸಂಕ್ರಮಣ, ಬನ್ನಿಹಬ್ಬ, ಶನಿವಾರದ ಭಜನೆ, ಇತ್ಯಾದಿ. ಮಕ್ಕಳಿಗೆ ಸೇಫ್ ಅನ್ನುವಂತಹ ವಾತಾವರಣ. ಆಡಲು ಚಿಕ್ಕದಾದ ಸ್ಥಳ, ಹತ್ತಿರವೇ ಪೇಟೆ ಹೀಗಿತ್ತು. ಇಲ್ಲಿನ ವಿಶೇಷತೆ ಅಂದರೆ ಖ್ಯಾತ ನಟ ನಿರ್ಮಾಪಕ ಸುನಿಲ.ಪುರಾಣಿಕ ನನ್ನ ನೇಬರ. ಅಂದರೆ ಸುನಿಲ ಅವರ ತಂದೆ ತಾಯಿ ಅವರ  ಅಣ್ಣನವರ ಪಕ್ಕದ ಮನೆ ನಮ್ಮದು. ಆಗಲೇ ಹೆಸರು ಮಾಡಿದ್ದ ಸುನಿಲ ಅವರು ಆಗಾಗ ಬೆಂಗಳೂರಿಂದ ಬರುತ್ತಿದ್ದರು. ಅವರೆಲ್ಲರೊಂದಿಗೆ ಹೊರಗಿನ ಕಟ್ಟೆ ಹಂಚಿಕೊಂಡು ಹರಟೆ. ಕೆಲ ವರುಷಗಳು ಹೇಗೆ ಕಳೆದವೋ ತಿಳಿಯದು.
                 ಆಮೇಲೆ ದೇವರಿಗೆ ಅದೇನು ಕರುಣೆ ಬಂದಿತೋ ಧಾರವಾಡದ ಸಾಧನಕೇರಿಯಲ್ಲೊಂದು ಮನೆ ಕರುಣಿಸಿದ. ಈ ದೊಡ್ಡ ಮನೆ ಕೆಡುಹಿ ಒಂದು ಚಾಳ ಕಟ್ಟಿಸು ಎಂದು ತುಂಟ ಮನ ಹೇಳಿದರೆ, ದಡ್ಡ! ಒಂದು ಅಪಾರ್ಟಮೆಂಟ ಕಟ್ಟಿಸು ಎಂದು ನನ್ನ ತಲೆಯಲ್ಲಿನ ಶ್ಯಾಣ್ಯಾ ಹೇಳುತ್ತಾನೆ. ಏನು ಮಾಡುವುದು,? ಅಥವಾ ಏನೂ ಮಾಡದೇ ಸುಮ್ಮನಿರುವುದೇ? ಎಂಬ ಗೊಂದಲದಲ್ಲಿದ್ದೇನೆ.
                                                                                                                                                                      ಶ್ರೀನಿವಾಸ.ಹುದ್ದಾರ
                                                                                                                                                                            ಧಾರವಾಡ.

Comments

Submitted by Lakshmikanth Itnal 1 Mon, 04/25/2016 - 07:53

ಆತ್ಮೀಯ ಶ್ರೀನಿವಾಸ ರವರೇ, ತಮ್ಮ ಬದುಕಿನ ಲಹರಿ ಬಲು ಹದವಾಗಿ, ಮದುವಾಗಿ ಬಿಚ್ಚಿಕೊಂಡಿದೆ. ಬಲು ಆಪ್ತಕೂಡ. ಮೆಚ್ಚುಗೆಯಾಯಿತು. ಶಾಣ್ಯಾ ನ ಮಾತೇ ಸರಿ ಏನೋ!

Submitted by Huddar Shriniv… Tue, 04/26/2016 - 13:29

In reply to by Lakshmikanth Itnal 1

ಸರ್, ನಿಮ್ಮ ಪ್ರತಿಕ್ರಿಯೆ ನನ್ನನ್ನು ಹುರಿದುಂಬಿಸಿದೆ.ನಿಮ್ಮ ಸಲಹೆ ಚೆನ್ನಾಗಿದೆ.ಆದರೆ ಒಂದು ಸಣ್ಣ ತೊಂದರೆ ಇದೆ. ಶ್ಯಾಣ್ಯಾನ ಮಾತು ಕೇಳಿದರೆ ದಡ್ಡ ಅಂತ ಅನ್ನಿಸಿಕೊಂಡತಾಗುವುದಿಲ್ಲವೇ?