ದೇವರೊಡನೆ ಸಂದರ್ಶನ - 15

ದೇವರೊಡನೆ ಸಂದರ್ಶನ - 15

 

ಗಣೇಶ: ನಿನ್ನ ಸಹವಾಸವೇ ಬೇಡ ಅಂತ ಇಷ್ಟು ದಿನ ಸುಮ್ಮನಿದ್ದೆ. ಆದರೆ ಏನು ಮಾಡೋದು, ಯಾಕೋ ಏನೋ, ಮನಸ್ಸು ತಡೆಯಲಿಲ್ಲ. ಬದುಕುವ ಆಸೆ ದೊಡ್ಡದು ಅಂತ ನೀನೇ ಹೇಳಿದ್ದೆ. ಅದೇ ಆಸೆ ಇರಬೇಕು, ಮತ್ತೆ ನಿನ್ನ ಜೊತೆ ಮಾತು ಮುಂದುವರೆಸುವಂತೆ ಮಾಡಿದ್ದು! ಚೆನ್ನಾಗಿದ್ದೀಯಾ ದೇವರೇ?
ದೇವರು: (ನಗುತ್ತಾ) ಹಾಗಾದರೆ ನಿನ್ನ ಮಾತು ಮಂದುವರೆಸು.
ಗಣೇಶ: ಸೌಜನ್ಯಕ್ಕೆ ಚೆನ್ನಾಗಿದ್ದೀಯಾ ಅಂತ ಕೇಳಿದ್ದಕ್ಕೆ ಚೆನ್ನಾಗಿದ್ದೀನಿ ಅಂತಲಾದರೂ ಉತ್ತರಿಸಬಾರದಾ? ಹೋಗಲಿ ಬಿಡು, ನಿನ್ನ ಚೆಂದ-ಚಾರ ನನಗೇಕೆ? ನಮ್ಮನ್ನು ಚೆನ್ನಾಗಿರುವಂತೆ ನೀನು ನೋಡಿಕೊಂಡರೆ ಸಾಕು. ನೇರವಾಗಿ ವಿಷಯಕ್ಕೆ ಬಂದುಬಿಡುತ್ತೇನೆ. ಬದುಕೋ ಆಸೆ ದೊಡ್ಡದು ಅಂತ ನೀನೇನೋ ಹೇಳಿಬಿಟ್ಟೆ. ಈ ಬದುಕೋದಕ್ಕೆ ನಮಗೆ ಜೀವ ಇರಬೇಕಲ್ವಾ ಅಂತ ಯೋಚಿಸಿ ಈ ಜೀವ ಅನ್ನೋ ವಿಷಯದ ಬಗ್ಗೆ ತಿಳಕೋಬೇಕು ಅಂತ ಬಂದಿದ್ದೇನೆ. ಈ ಜೀವ ಅಂದರೆ ಏನು ಅಂತ ಹೇಳ್ತೀಯಾ?
ದೇವರು: ಮೊದಲು ನೀನು ಜೀವ ಅಂದರೆ ಏನು ಅಂತ ತಿಳಿದುಕೊಂಡಿದ್ದೀಯಾ ಹೇಳು. ಆಮೇಲೆ ನಿನಗೆ ಯಾವ ರೀತಿ ಹೇಳಬೇಕೆಂಬುದು ನನಗೆ ಸುಲಭವಾಗುತ್ತದೆ.
ಗಣೇಶ: ನನಗೆ ಗೊತ್ತಿದ್ದರೆ ನಿನ್ನನ್ನೇಕೆ ಕೇಳುತ್ತಿದ್ದೆ? ಅದು ಏನು, ಹೇಗಿದೆ ಅನ್ನೋದು ಅರ್ಥ ಮಾಡಿಕೊಳ್ಳೋದು ಕಷ್ಟವಾದ್ದರಿಂದಲೇ ನಿನ್ನನ್ನು ಕೇಳಿದ್ದು. ಜೀವ ಅಂದರೆ ಪ್ರಾಣ ಅಂತ ಅಷ್ಟೇ ನನಗೆ ಗೊತ್ತಿರೋದು.
ದೇವರು: ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ನೀನು ಅಂದರೆ ನಿನ್ನ ಜೀವ ಅಥವ ಪ್ರಾಣ! ಬೇರೆ ಏನೂ ನೀನಲ್ಲ. 
ಗಣೇಶ: ಹಾಂ??
ದೇವರು: ಹೌದು. ಜೀವ ಅಂದರೆ ನೀನು ಮಾಡುವ ಚಟುವಟಿಕೆಗಳಲ್ಲ. ಓಡಾಡೋದು, ಉಸಿರಾಡೋದು ಅದು ಯಾವುದೂ ಅಲ್ಲ. ಅದೆಲ್ಲಾ ಮಾಡೋದಕ್ಕೆ ಕಾರಣವಾಗಿರೋದೇ ಜೀವ ಅಥವ ಪ್ರಾಣ. ಅದೇ ನಿಜವಾದ ನೀನು! ಅದೇ ನಿಜವಾದ ತತ್ವ. ಅದಿಲ್ಲದಿದ್ದರೆ ನಿನಗೆ ಸ್ವಪ್ರಜ್ಞೆಯಾಗಲೀ, ಯಾವುದೇ ಚಟುವಟಿಕೆಯಾಗಲೀ ಸಾಧ್ಯವಿಲ್ಲ. ತಮಾಷೆ ಅಂದರೆ ಈ ಜೀವಕ್ಕೆ ಅಂತ್ಯವಿರುವಂತೆ ತೋರುತ್ತದೆ. ಆದರೆ ಅದು ಅಂತ್ಯವಾಗಿರುವುದಿಲ್ಲ. ಅಂತ್ಯವಿರುವುದು ಜೀವ ಇರುವ ಶರೀರಕ್ಕೆ ಅಷ್ಟೆ! ಜೀವದ ಪ್ರಯಾಣ ನಿರಂತರವಾಗಿರುತ್ತದೆ. ಆದ್ದರಿಂದ ನೀನು ಅಮರ!
ಗಣೇಶ: ಅಯ್ಯಪ್ಪಾ! ನನ್ನ ತಲೆ ಕೆಡಿಸಬೇಡ, ಗೊಜ್ಜು ಮಾಡಬೇಡ. ಅಮರ ಅಂದರೆ ಖುಷಿ ಆಗುತ್ತೆ. ಆದರೆ ಈ ಶರೀರ ಇದ್ದಾಗ ಈಗ ಗಣೇಶ ಆಗಿದ್ದೋನು ಹಿಂದೇನೂ ಗಣೇಶ ಆಗಿದ್ದರೆ ಮತ್ತು ಮುಂದೇನೂ ಗಣೇಶ ಆಗುವುದಿದ್ದರೆ ನಾನು ಅಮರ ಅಂತ ಒಪ್ಪಿಕೊಳ್ಳುತ್ತಿದ್ದೆ. ನಿನ್ನ ಮಾತನ್ನು ಯಾರು ಒಪ್ಪುತ್ತಾರೆ?
ದೇವರು: ನೋಡು, ಅವರು ನಮ್ಮ ತಂದೆ, ಇವರು ನಮ್ಮ ತಾಯಿ, ಇವನು ನನ್ನ ಅಣ್ಣ/ತಮ ಇವಳು ನನ್ನ ಅಕ್ಕ/ತಂಗಿ ಎಂದೆಲ್ಲಾ ಹೇಳುತ್ತೀರಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೀರಾ? ಅವರುಗಳಲ್ಲಿ ಇರುವ ಏನೋ ಒಂದನ್ನು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೀರಿ. ಹೌದೋ, ಅಲ್ಲವೋ? ಆ ಏನೋ ಒಂದು ಇದೆಯಲ್ಲಾ, ಅದೇ ಜೀವ! 
ಗಣೇಶ: ನನ್ನ ಮಿತ್ರರು ನಾಗರಾಜ, ಶ್ರೀಧರರು ಹೇಳುತ್ತಿದ್ದರು: ಉಪನಿಷತ್ತಿನಲ್ಲಿ "ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ!" ಅಂತ ಹೇಳಿದೆಯಂತೆ. ತಲೆ ತಿನ್ನಬೇಡಿ ಅಂತ ಸುಮ್ಮನಿರಿಸಿದ್ದೆ. ನೀನು ನೋಡಿದರೆ ಅದನ್ನೇ ಹೇಳಿ ತಲೆ ಕೆಡಿಸುತ್ತಿದ್ದೀಯ. ಅರ್ಥವಾಗುವಂತೆ ಹೇಳು ಮಾರಾಯ. 
ದೇವರು: ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಈ ಪ್ರಪಂಚದಲ್ಲಿ ಯಾವುದೇ ಮೌಲ್ಯವಿರುವ, ಅರ್ಥವಿರುವ ಸಂಗತಿ ಅನ್ನುವುದು ಇದ್ದರೆ ಅದು ಪ್ರಾಣ ಹೊರತುಪಡಿಸಿ ಮತ್ತಾವುದೂ ಅಲ್ಲ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ನಿಮ್ಮ ಪ್ರಾಮುಖ್ಯತೆ ನೀವು ಬದುಕಿರುವವರೆಗೆ ಮಾತ್ರ. ನಿಮ್ಮಲ್ಲಿ ಪ್ರಾಣವಿರದಾಗ ನೀವು ಯಾರು? ನೀವು ಏನೂ ಅಲ್ಲ. ನೀವು ಬದುಕಿದ್ದಾಗ ನಿಮ್ಮ ಶರೀರವನ್ನು ನೀವು ಎಂದು ಅಂದುಕೊಂಡಿರುತ್ತೀರಲ್ಲಾ ಅದು ವಾಸ್ತವವಾಗಿ ನೀವು ಆಗಿರುವುದಿಲ್ಲ. ಆ ನೀವು ಅನ್ನುವುದು ವಾಸ್ತವವಾಗಿ ಪ್ರಾಣವೇ ಆಗಿದೆ.
ಗಣೇಶ: ನಾವು ಅಂದರೆ ನಾವಲ್ಲ, ನಮ್ಮ ಪ್ರಾಣ ಅಂತ ಹೇಳ್ತೀಯಲ್ಲಾ, ಹಂಗಂದರೆ ಏನು ಅಂತ ಬಿಡಿಸಿ ಹೇಳಪ್ಪಾ ದೇವರೇ!
ದೇವರು: ನೋಡು, ತಂದೆ-ತಾಯಿಗೆ, ದೊಡ್ಡವರಿಗೆ ಗೌರವ ತೋರಿಸು, ಜನರನ್ನು ನೋಯಿಸಬೇಡ ಅಂತ ಹೇಳುವುದನ್ನು ಕೇಳಿದ್ದೀಯಲ್ಲಾ? ಈ ಜನರು ಅಂದರೆ ಯಾರು? ನೋಯಿಸುವುದು ಅಂದರೆ ಏನು? ಜನರು ಅಂದರೆ ಖಂಡಿತ ಶರೀರಗಳಂತೂ ಅಲ್ಲ! ಯಾರಿಗಾದರೂ ನೋವಾಗುತ್ತದೆ ಎಂದರೆ ಅವನ ಪ್ರಾಣತತ್ತ್ವಕ್ಕೆ ಘಾಸಿಯಾಗಿದೆ ಎಂದರ್ಥ. ಬಿಡಿಸಿ ಹೇಳಬೇಕೆಂದರೆ ವ್ಯಕ್ತಿಯೆಂದರೆ ಅವನು ಹೊಂದಿರುವ ಸುಂದರ ಶರೀರವಲ್ಲ, ಅವನಲ್ಲಿರುವ ಪ್ರಾಣವೇ ಹೊರತು ಬೇರೆ ಅಲ್ಲ. ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅವರುಗಳು ಹೊಂದಿರುವ ಶರೀರವನ್ನು ಅಗೌರವಿಸಿದಂತೆ ಅಲ್ಲ, ಅವರಲ್ಲಿರುವ ಪ್ರಾಣತತ್ತ್ವವನ್ನು ಅಗೌರವಿಸಿದಂತೆ!
ಗಣೇಶ: ಹೌದಲ್ವಾ?
ದೇವರು: ಶರೀರಗಳಲ್ಲಿರುವ ಪ್ರಾಣತತ್ವ ಹೊರಟುಹೋದಾಗ ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಮಗ ಅವನ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರಾದರೂ, ಅವನು ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ ಎಂದು ಆಕ್ಷೇಪಿಸುತ್ತಾರೇನು? ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತಾರೆ. ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ವ್ಯತ್ಯಾಸ ಗೊತ್ತಾಯಿತಲವಾ? ಗೌರವಿಸುವುದು, ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು! ಈ ಅರಿವು ಮೂಡಿದಾಗ ಚಿಂತನಾಧಾಟಿಯೇ, ಜೀವನವನ್ನು ನೋಡುವ ರೀತಿಯೇ ಬದಲಾಗಿಬಿಡುತ್ತದೆ. ಮನಸ್ಸು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಸಾಧಕರಿಗೆ ಇದು ಅರ್ಥವಾಗುತ್ತದೆ. ಅವರ ಮಾತುಗಳು ಸಾಮಾನ್ಯರಿಗೆ ಅರಗಿಸಿಕೊಳ್ಳುವುದು ಕಷ್ಟ. ಆದರೆ ಸತ್ಯವನ್ನರಿತಾಗ ಬೆಳಕು ಮೂಡುತ್ತದೆ.
ಗಣೇಶ: ನನಗೂ ಇಂತಹ ಮಾತುಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಒಣವೇದಾಂತದ ಮಾತು ಕೇಳಿ ಇರೋ ಸುಖ ಏಕೆ ಹಾಳುಮಾಡಿಕೋಬೇಕು ಅನ್ನುವ ಗುಂಪಿಗೆ ಸೇರಿದವನು ನಾನು. ಆದರೂ ತಿಳಿದುಕೊಳ್ಳುವ ಕುತೂಹಲವೂ ಬರುತ್ತಿರುವುದಕ್ಕೆ ನಿನ್ನ ಕಿತಾಪತಿಯೇ ಕಾರಣವಿರಬೇಕು. ನನಗೆ ಅರ್ಥವಾಗಿರೋದು ಇಷ್ಟೇ. ಶರೀರದೊಳಗಿನ ಜೀವದಿಂದಾಗಿ ಶರೀರಕ್ಕೆ ಬೆಲೆ ಅನ್ನೋದೊಂದೇ!
ದೇವರು: ಇಷ್ಟು ತಿಳಿದುಕೊಂಡರೆ ಸಾಕೇ ಸಾಕು. ಮುಂದೆ ಇನ್ನೂ ತಿಳಿಯಬೇಕೆಂದು ನಿನಗೆ ಮನಸ್ಸು ಬಂದರೆ ನಿನಗೇ ತಿಳಿಯುತ್ತಾಹೋಗುತ್ತದೆ. 
ಗಣೇಶ: ಇವತ್ತಿಗೆ ಇಷ್ಟು ಸಾಕೋ ಸಾಕು, ದೇವರೇ. ನಿನಗೊಂದು ದೊಡ್ಡ ನಮಸ್ಕಾರ, ಬರಲಾ?
     "ಏನ್ರೀ ಇದು? ಕೂತಲ್ಲೇ ನಿದ್ದೆ ಮಾಡೋ ಅಭ್ಯಾಸ ಮತ್ತೆ ಶುರು ಆಯಿತಾ? ಮುಂದಿಟ್ಟಿದ್ದ ಚಾ ಆರಿ ತಣ್ಣಗಾಗಿಹೋಗಿದೆ. ಏನಾಗಿದೆ ನಿಮಗೆ?" ಅನ್ನುತ್ತಾ ಗಣೇಶರ ಪತ್ನಿ ಮತ್ತೆ ಬಿಸಿ ಮಾಡಿಕೊಂಡು ಬರಲು ತಣ್ಣನೆಯ ಚಹಾದ ಲೋಟವನ್ನು ತೆಗೆದುಕೊಂಡು ಹೋದರು. ಗಣೇಶರು, ತಾವು ಚಹಾ ಕುಡಿಯದೇ ವಾಕಿಂಗ್ ಹೋಗಿದ್ದು, ಈಗತಾನೇ ಬಂದು ಕುಳಿತಿರುವುದಾಗಿ ಹೇಳಿದರೆ ಜಗಳಕ್ಕೇ ಬರಬಹುದೇನೋ ಅನ್ನಿಸಿ ಸುಮ್ಮನಾಗಿಬಿಟ್ಟರು. ಟಿವಿಯಲ್ಲಿ ಮೂಢ ಉವಾಚ ಬರುತ್ತಿತ್ತು: "ತನ್ನಿಷ್ಟ ಬಂದಂತೆ ನಯನ ನೋಡುವುದೆ? ತಮ್ಮಿಚ್ಛೆಯಂತೆ ಕೈಕಾಲು ಆಡುವುವೆ? | ತನುವಿನೊಳಗಿಹ ಅವನಿಚ್ಛೆಯೇ ಪರಮ | ಅವನಿರುವವರೆಗೆ ಆಟವೋ ಮೂಢ ||" ಅಚಾನಕವಾಗಿ ಗಣೇಶರ ಕೈ ರಿಮೋಟಿನ ಗುಂಡಿ ಒತ್ತಿ ಟಿವಿಯನ್ನು ಆರಿಸಿತು. 
-ಕ.ವೆಂ.ನಾಗರಾಜ್.
[ಹಿಂದಿನ ಸಂದರ್ಶನಕ್ಕೂ ಈ ಸಂದರ್ಶನಕ್ಕೂ ಬಹಳ ಅಂತರದ ಕಾಲಾವಧಿಯಿರುವುದರಿಂದ ಆಸಕ್ತರ ಮಾಹಿತಿಗೆ ಹಿಂದಿನ ಲೇಖನದ ಲಿಂಕ್ ಇದು: https://sampada.net/%E0%B2%A6%E0%B3%87%E0%B2%B5%E0%B2%B0%E0%B3%8A%E0%B2%...

Comments

Submitted by H A Patil Mon, 07/25/2016 - 12:06

ಕವಿ ನಾಗರಾಜರವರಿಗೆ ವಂದನೆಗಳು
ದೇವರೊಡನೆ ಸಂದರ್ಶನ ಲೇಖನ ಚೆನ್ನಾಗಿದೆ ವಿಷಯ ಗ್ರಹಿಕೆ ಅದನ್ನು ಮನ ಮುಟ್ಟುವಂತೆ ದಾಖಲಿಸಿ ನಿರೂಪಿಸಿದ್ದೀರಿ ಒಂದೊಳ್ಳೆಯ ಬರಹ ಓದಿದ ಅನುಭವದ ಜೊತೆಗೆ ಸಂತಸವಾಯಿತು, ನಿಮ್ಮ ಬರವಣಿಗೆಯ ಶಕ್ತಿ ಅಂತಹದು ಧನ್ಯವಾದಗಳು.