ಸಂಪದಿಗ ಸುರೇಶ್ ನಾಡಿಗ್ (ಕೋಮಲ್ ಕುಮಾರ್) ಅಕಾಲಿಕ ನಿಧನ

ಸಂಪದಿಗ ಸುರೇಶ್ ನಾಡಿಗ್ (ಕೋಮಲ್ ಕುಮಾರ್) ಅಕಾಲಿಕ ನಿಧನ

      ಮಿತ್ರ ಪಾರ್ಥಸಾರಥಿಯವರ ಫೇಸ್ ಬುಕ್ ಪೋಸ್ಟಿನಿಂದ ಶಿಕಾರಿಪುರದ ಮಿತ್ರ ಸುರೇಶ ನಾಡಿಗ್ (ಕೋಮಲ್ ಕುಮಾರ್) ನಿಧನದ ಸುದ್ದಿ ತಿಳಿದು ಬೇಸರವಾಯಿತು. ಯುವ ಪತ್ರಕರ್ತರಾಗಿ, ಬರಹಗಾರರಾಗಿ, ರಾಜಕೀಯ ವಿಶ್ಲೇಷಕರಾಗಿ ಮತ್ತು ಹೆಚ್ಚಾಗಿ ಹಾಸ್ಯ ಲೇಖನಗಳಿಂದ ರಂಜಿಸುತ್ತಿದ್ದ ಅವರ ಅಕಾಲಿಕ ನಿಧನವಾಗಬಾರದಿತ್ತು. ಸಂಪದದಲ್ಲೂ ಅವರ ಅನೇಕ ಬರಹಗಳು ಜನಪ್ರಿಯವಾಗಿವೆ. ಕೋಮಲ್ ಕುಮಾರ್ ಎಂಬ ಹೆಸರಿನಲ್ಲಿ ಅವರು ಹಾಸ್ಯ ಬರಹಗಳನ್ನು ಬರೆಯುತ್ತಿದ್ದರು. ರಾಜೇಶ್ವರಿ ಎಂಬ ಹೆಸರಿನಲ್ಲಿ ಬರುತ್ತಿದ್ದ ರಾಜಕೀಯ ವಿಶ್ಲೇಷಣಾತ್ಮಕ ಬರಹಗಳು ಇವರವೇ ಎಂದು ಅವರನ್ನು ಹತ್ತಿರದಿಂದ ಕಂಡಿದ್ದ ನಾನು ಹೇಳಬಲ್ಲೆ. ನಾನು ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದಾಗ ನನ್ನೊಡನೆ ವಿಷಯ ಸಂಗ್ರಹಣೆ, ಚರ್ಚೆ ಇತ್ಯಾದಿಗಳಿಗಾಗಿ ಅವರು ಭೇಟಿ ಮಾಡುತ್ತಿದ್ದ ಘಳಿಗೆಗಳು ನೆನಪಾದವು. ಒಂದೆರಡು ಸಲ ಅವರ ಆಹ್ವಾನದ ಮೇಲೆ ಅವರ ಮನೆಗೂ ಹೋಗಿ ಚಹಾ ಸ್ವೀಕರಿಸಿದ್ದುಂಟು. ಕಾಶಿ ವಿಶ್ವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಪುನರ್ ರಚನೆಯಾದಾಗ ಮುಜರಾಯಿ ಅಧಿಕಾರಿಯಾಗಿ ಅವರನ್ನು ಅಲ್ಲಿನ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅವರು ಶ್ರಮಿಸಿದ್ದರು. ನಾನು ನಿವೃತ್ತಿಯಾಗಿ ಹಾಸನದಲ್ಲಿ ನೆಲೆಸಿದ್ದ ನಂತರದಲ್ಲೂ ಅವರು ದೂರವಾಣಿ ಮೂಲಕ ನನ್ನ ಸಂಪರ್ಕದಲ್ಲಿದ್ದರು. ನನ್ನ ಲೇಖನಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು. ನಂತರದಲ್ಲಿ ಅವರು ಬೆಂಗಳೂರಿಗೆ ವಾಸ ಹೋದರೆಂದು ತಿಳಿದಿತ್ತು. ಇದೀಗ ಅವರ ಮರಣದ ಸುದ್ದಿ!! ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ.
     ಶಿಕಾರಿಪುರದಲ್ಲಿದ್ದಾಗ ಅವರೊಡನೆ ಇದ್ದ ಸಂದರ್ಭದ ಯಾವುದಾದರೂ ಫೋಟೋಗಳು ಇವೆಯೇ ಎಂದು ಹುಡುಕಿದಾಗ ಈ ಎರಡು ಪತ್ರಿಕಾ ವರದಿಯ ತುಣುಕುಗಳು ಕಂಡವು. ನೆನಪಿಗಾಗಿ ಪ್ರಕಟಿಸಿರುವೆ. [ಮೊದಲ ಚಿತ್ರದಲ್ಲಿ ಮೊದಲಿನವರು, ಎರಡನೆಯ ಚಿತ್ರದಲ್ಲಿ ಬಲದಿಂದ ಎರಡನೆಯವರು ಸುರೇಶ್.]
-ಕ.ವೆಂ.ನಾಗರಾಜ್.

Comments

Submitted by kavinagaraj Mon, 09/05/2016 - 11:57

ಫೋಟೋಗಳ ಸ್ಥಾನ ಅದಲು ಬದಲಾದ್ದರಿಂದ ಈ ವಿವರಣೆ: ಮೊದಲನೆಯ ಚಿತ್ರದಲ್ಲಿ ಬಲದಿಂದ ಎರಡನೆಯವರು, ಎರಡನೆಯ ಚಿತ್ರದಲ್ಲಿ ಮೊದಲಿನವರು ಸುರೇಶ್!

Submitted by partha1059 Thu, 09/08/2016 - 11:43

ಹೌದು ಬೇಸರದ‌ ವಿಷಯ‌ ಸಂಪದದಲ್ಲಿ ನಾನು ಬರುವ‌ ಮೊದಲೆ ಅವರಿದ್ದರು, ಮಂಡ್ಯ‌ ಗ್ರಾಮೀಣ‌ ಬಾಷೆಯಲ್ಲಿ ಹಾಸ್ಯ‌ ಬರಹಗಳನ್ನು ಬರೆಯುತ್ತಿದ್ದರು. ಒಮ್ಮೆ ಮಾತ್ರ‌ ಅವರನ್ನು ಸಾಹಿತ್ಯ‌ ಪರಿಷತ್ತಿನಲ್ಲಿ , ಪುಸ್ತಕ‌ ಬಿಡುಗಡೆಯ‌ ಸಮಯದಲ್ಲಿ ಸಿಕ್ಕಿದ್ದರು, ಆಗಲು ಅದೇ ಬಾಷೆ, ಬನ್ನಿ ಸಾರ್ ಉಪ್ಪಿಟ್ಟು ಪೋಚ್ಕಳಾಣ‌ ಎಂದೊ ಏನೋ ಹೇಳಿದ್ದರು .
ಮತ್ತೇನು ಹೇಳಲಿ
ಅವರ‌ ಆತ್ಮಕ್ಕೆ ಶಾಂತಿ ಸಿಗಲಿ ಎನ್ನಲೇ ?