ಭಾಗ - ೪ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: "ವೇದಕಾಲ"ವೆನ್ನುವ ಶಬ್ದ ಸಮುಚಿತವಾದುದೇ?

ಭಾಗ - ೪ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: "ವೇದಕಾಲ"ವೆನ್ನುವ ಶಬ್ದ ಸಮುಚಿತವಾದುದೇ?

ಚಿತ್ರ

ಛಾಯಾಚಿತ್ರ : ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್‌ ರಾವ್, ಉಪಸಂಪಾದಕರು, ಆಂಧ್ರಜ್ಯೋತಿ              
             ಜಾನ್‌ಮಿಲ್ಟನ್ ರಚಿಸಿದ ’ಪ್ಯಾರಡೈಸ್ ಲಾಸ್ಟ್’ (ಕಳೆದುಕೊಂಡ ಸ್ವರ್ಗ) ಮತ್ತು ಪ್ಯಾರಡೈಸ್ ರೀಗೇನ್ಡ್(ಮರಳಿ ಪಡೆದ ಸ್ವರ್ಗ) ಕೃತಿಗಳೇನಾದರೂ ಯಾವುದಾದರೂ ಕಾರಣಕ್ಕೆ ನಾಶವಾದರೆ ಅವನ್ನು ಯಥಾವತ್ತಾಗಿ ಪುನಃ ಬರೆಯಬಲ್ಲೆ ಎಂದು ಜಂಬಕೊಚ್ಚಿಕೊಂಡಿದ್ದಾನೆ ಥಾಮಸ್ ಬಾಬಿಂಗ್ಟನ್ ಮೆಕಾಲೆ. ಅದು ಅವನ ಹೆಚ್ಚುಗಾರಿಕೆಯಂತೆ, ಏಕೆಂದರೆ ಅವನು ಅವರೆಡನ್ನೂ ಕಂಠಸ್ಥವಾಗಿಸಿಕೊಂಡಿದ್ದಾನಂತೆ! ಭಾರತ ದೇಶದಲ್ಲಿನ ಸಮಗ್ರ ಗ್ರಂಥಗಳನ್ನು ಲಂಡನಿನ್ನ ಒಂದು ಚಿಕ್ಕ ಕಪಾಟಿನಲ್ಲಿ ಜೋಡಿಸಿಡಬಹುದಂತೆ, ಹೀಗೆಂದು ಹೇಳಿಕೊಂಡು ತಿರುಗಿದ ಆ ಮೆಕಾಲೆ! (ಭಾರತದಲ್ಲಿ ಸಾವಿರಾರು ಶ್ರುತಿ-ಸ್ಮೃತಿಗಳಿವೆ ಮತ್ತು ಅವುಗಳನ್ನು ಕಂಠಸ್ಥ ಮಾಡಿಕೊಂಡ ಸಾವಿರಾರು ಭಾರತೀಯರೂ ಇದ್ದರು(ಇದ್ದಾರೆ), ಅವರ ಮುಂದೆ ಅವನೆಲ್ಲಿ?) ಇದು ಅವನ ಅಜ್ಞಾನಕ್ಕೆ, ಅಹಂಕಾರಕ್ಕೆ ಮತ್ತು ಕೂಪಮಂಡೂಕ ಸ್ವಭಾವಕ್ಕೆ ಹಿಡಿದ ಕೈಗನ್ನಡಿ. ಕಡಲ್ಗಳ್ಳನಾಗಿದ್ದ ರಾಬರ್ಟ್ ಕ್ಲೈವ್‌ನನ್ನು  ತಮ್ಮ ರಾಷ್ಟ್ರೀಯ ವೀರನೆಂದು ಕೊಂಡಾಡಿದ ಬ್ರಿಟನ್ನಿನ ದೇಶಭಕ್ತ ಮೆಕಾಲೆ! ಏಕೆಂದರೆ ಕ್ಲೈವನು ಬ್ರಿಟೀಷ್ ಸಾಮ್ರಾಜ್ಯವು ಭಾರತದಲ್ಲಿ ನೆಲಗೊಳ್ಳುವುದಕ್ಕೆ ಕಾರಣೀಭೂತನಾದ್ದರಿಂದ! ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಪಣತೊಟ್ಟ ಬೀಭತ್ಸ್ಯಕಾರ ಮೆಕಾಲೆ.... ಆ ಬಾವಿಯೊಳಗಿನ ಕಪ್ಪೆ ಎರಡು ಬಾರಿ ಆ ಈ ಕಡೆಯಿಂದ ಆ ಕಡೆಗೆ ಹಾರಿ ಅದನ್ನೇ ಸಮುದ್ರಕ್ಕಿಂತಲೂ ದೊಡ್ಡದಾದ ಬ್ರಹ್ಮಾಂಡವೆಂದು ಪ್ರಚಾರ ಮಾಡಿತು. ಆ ಪ್ರಚಾರದ ಮಂಜು ಎಷ್ಟು ದಟ್ಟವಾಗಿ ಕವಿದಿದೆ ಎಂದರೆ ಇಂದಿಗೂ ನಮ್ಮಲ್ಲನೇಕರು ಆ ಕಗ್ಗತ್ತಲೆಯ ಮಂಕಿನಿಂದ ಹೊರಗೆ ಬರಲಾಗದೇ ಅದನ್ನೇ ನಂಬಿಕೊಂಡು ಅವನು ಹೇಳಿದ್ದನ್ನೇ ವೇದವಾಕ್ಯವೆಂದು ನಂಬಿಕೊಂಡು ಅದನ್ನೇ ಪ್ರಚಾರ ಮಾಡುತ್ತಲೇ ಇದ್ದಾರೆ....!
  
"ವೇದಕಾಲ"ವೆನ್ನುವ ಶಬ್ದ ಸಮುಚಿತವಾದುದೇ?
ಸುಳ್ಳಿನ ಮುಖವಾಡ ಧರಿಸಿಹ
ಪರಂಗಿಮುಖದ ವಿಷಪಿಶಾಚಿ
’ಐಕ್ಯಭಾವರಾಹಿತ್ಯತೆಯನು
ಆವಾಹಿಸಿದ ಸಾಧಕನವನು!
ನಿನ್ನೆಯ ಕಥೆಗಳನು ಮರೆಯಿಸಿ,
ತಾ ಹೇಳಿದ್ದೇ ದಿಟವೆಂದು ಸಾಧಿಸಿ
ಅಪಶ್ರುತಿಗಳನು ಹುಟ್ಟುಹಾಕಿ
ಶ್ರುತಿಗಳಾಗಿ ಪಾಡುವಂತೆ ಮಾಡಿದ!
            "ಇದು ಸತ್ಯಕಾಲವಲ್ಲ ಇದು ಕಲಿಕಾಲ....." ಎಂದು ಜನಸಾಮಾನ್ಯರು ಆಗಾಗ ಹೇಳುವ ಮಾತುಗಳು ನಮ್ಮ ಕಿವಿಗೆ ಬೀಳುತ್ತಿರುತ್ತವೆ! ಆ ಜನಸಾಮಾನ್ಯ ಭಾರತದ ಹಳ್ಳಿಗಾಡುಗಳಲ್ಲಿ ವಾಸಿಸುವವನು, ಅವನು ಈ ಮಣ್ಣಿನ ವಾಸನೆ ಹಾಳಗದ ಸ್ಥಳದಲ್ಲಿ ಜೀವಿಸುವವನು, ಈ ನೆಲದ ಸೊಗಡು ಪರಿಮಳಿಸುವ ಪರಿಸರದಲ್ಲಿ ಅದನ್ನು ಆಘ್ರಾಣಿಸಿ ತಿರುಗುವವನು! ಅಕ್ಷರಗಳೊಂದಿಗೆ ಸಂಬಂಧವಿಲ್ಲದ ಸಹಜ ವಿದ್ಯಾವಂತ ಈ ಸಾಮಾನ್ಯ ಭಾರತೀಯ! ಅಕ್ಷರಗಳನ್ನು ಕಲಿತುಕೊಂಡು ಅದೇ ಪರಿಸರದಲ್ಲಿರುವವರೂ ಇದ್ದಾರೆ. ಈ ಸಾಕ್ಷರರು ಮಾತ್ರ ಮಾತು ಮಾತಿಗೆ, "ವೇದಕಾಲದಲ್ಲಿ ಹಾಗಿತ್ತಂತೆ, ಹೀಗಿತ್ತಂತೆ......." ಎಂದು ಆಂಗಿಕವಾಗಿ ಅಭಿನಯಿಸುತ್ತಾ ತಮ್ಮ ಮಾತುಗಳ ಗಾರಡಿಯನ್ನು ಪ್ರದರ್ಶಿಸುತ್ತಿರುತ್ತಾರೆ. ಇವರು ಬ್ರಿಟೀಷರ ಭಟ್ಟಿಯಲ್ಲಿ ತಯಾರಾದ ಮದ್ಯದ ಮತ್ತಿನಲ್ಲಿ ಇರುವವರು, "ವೇದಿಕ್ ಏಜ್" ಎಂದು ಅವರು ತಮ್ಮ ವಾಗ್ವೈಖರಿಯನ್ನು ತೋರಿಸುತ್ತಿರುತ್ತಾರೆ.........!
          ಸತ್ಯಕಾಲದ ಮಾತು ಎಂದರೆ ಅದು ಸತ್ಯಯುಗ ಅಥವಾ ಕೃತಯುಗದ ಮಾತು. ಇದು ಭಾರತೀಯರ ಕಾಲಗಣನೆಗೆ ಸಂಬಂಧಿಸಿದ ಮಾತು. ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಳು ಕಲಿಸಿ ಒಂದು ಮಹಾಯುಗವಾಗುತ್ತದೆ. ಕೃತಯುಗದಲ್ಲಿ ಜನರೆಲ್ಲಾ ಸಂಪೂರ್ಣ ಧರ್ಮನಿಷ್ಟರಾಗಿದ್ದರು ಮತ್ತು ಆಗ ಧರ್ಮವು ನಾಲ್ಕು ಪಾದಗಳಲ್ಲಿ ನಡೆಯುತ್ತಿತ್ತು ಎನ್ನುವುದು ಭಾರತೀಯರ ನಂಬಿಕೆ, ಇದು ಬಹುಹಿಂದಿನಿಂದಲೂ ನಮಗೆ ಪರಂಪರಾಗತವಾಗಿ ಬಂದ ನಂಬಿಕೆ. ಪರಂಗಿಗಳ ಪಾಠಶಾಲೆಗೆ ಹೋಗದ ಭಾರತೀಯರು ಮತ್ತು ಬ್ರಿಟಿಷ್ ವಿದ್ಯಾವಿಧಾನದಿಂದ ಪ್ರಭಾವಿತರಾಗದವರೂ ಸಹ "ಸತ್ಯಕಾಲ" ಎನ್ನುವ ಶಬ್ದವನ್ನು ತಮ್ಮ ಮಾತುಕತೆಗಳಲ್ಲಿ ಬಳಸುತ್ತಿರುತ್ತಾರೆ. ತ್ರೇತಾಯುಗದಲ್ಲಿ ಧರ್ಮವು ಮೂರು ಪಾದಗಳಷ್ಟಿದ್ದರೆ, ದ್ವಾಪರ ಯುಗದಲ್ಲಿ ಧರ್ಮ ಹಾಗು ಅಧರ್ಮಗಳೆರೆಡೂ ಸಮನಾಗಿ ಎರಡೆರಡು ಪಾದಗಳಷ್ಟು ಇತ್ತು ಮತ್ತು ನಾಲ್ಕನೆಯದಾದ ಈ ಕಲಿಯುಗದಲ್ಲಿ ಧರ್ಮವು ಕೇವಲ ಒಂದೇ ಒಂದು ಪಾದದಷ್ಟಿದ್ದರೆ ಅಧರ್ಮವು ಮೂರು ಪಾದಗಳಷ್ಟಿದ್ದು ಅದು ಜನರ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಭಾರತೀಯರ ನಂಬಿಕೆ.
          ಅಧರ್ಮದ ಪ್ರಭಾವದಿಂದ ಹೊರಗುಳಿಯಲು ಕಲಿಗಾಲದಲ್ಲಿ ನಿರಂತರವಾದ ಹೋರಾಟ ನಡೆಯುತ್ತದೆ. ಈ ಹೋರಾಟದ ಗುರಿಯು ಅಂತಿಮವಾಗಿ ಕೃತಯುಗದೆಡೆಗೆ ಸಾಗುವುದಾಗಿದೆ ಅಂದರೆ ಧರ್ಮವನ್ನು ಪೂರ್ಣವಾಗಿ ಸ್ಥಾಪಿಸುವುದಾಗಿದೆ! ಈ ನಂಬಿಕೆಯ ಕುರಿತೂ ಸಹ ಮೆಕಾಲೆಯ ಮಾನಸಪುತ್ರರು ಅಪಹಾಸ್ಯ ಮಾಡುತ್ತಿರುತ್ತಾರೆ. ಧರ್ಮವೆಂದರೆ ಮತ ಪಂಥಗಳೆಂದು ಕೆಲವರು, ಮೂಡ ನಂಬಿಕೆ ಅಥವಾ ಕಂದಾಚಾರಗಳೆಂದು ಕೆಲವರು, ಇನ್ನೂ ಕೆಲವರು ಧರ್ಮವೆಂದರೆ ಕಿತ್ತುಹೋಗಿರುವ ಸಿದ್ಧಾಂತವೆಂದೂ ವ್ಯಾಖ್ಯಾನಿಸುತ್ತಿರುತ್ತಾರೆ. ’ನಾಗರಿಕತೆ’ ಮತ್ತು ’ಅನಾಗರಿಕತೆ’ ಎನ್ನುವ ಶಬ್ದಗಳು ಅವರ ದೃಷ್ಟಿಯಲ್ಲಿ ಆಧುನಿಕತೆ! ಧರ್ಮ, ಅಧರ್ಮ, ಸುಧರ್ಮ, ಸ್ವಧರ್ಮ ಮೊದಲಾದ ಪದಗಳನ್ನು ಬಳಸುವುದೇ ಅವರ ದೃಷ್ಟಿಯಲ್ಲಿ ಅನಾಗರಿಕತೆ ಮತ್ತು ಈ ಶಬ್ದಗಳು ಧಾರ್ಮಿಕ ಮೂಡನಂಬಿಕೆಗಳಾಗಿವೆ. ಸಭೆಗಳಲ್ಲಾಗಲಿ, ಬಸ್ಸುಗಳಲ್ಲಾಗಲಿ ಅಥವಾ ದಿನನಿತ್ಯದ ವ್ಯವಹಾರಗಳಲ್ಲಾಗಲಿ ಯಾರಾದರೂ ಸಾಂದರ್ಭಿಕವಾಗಿ, "ಇದು ನ್ಯಾಯವೇ, ಇದು ಧರ್ಮವೇ?" ಅಥವಾ "ನಿನಗಿದು ನ್ಯಾಯವೆನಿಸುತ್ತಿದೆಯೇ ಅಥವಾ ಧರ್ಮವೆನಿಸುತ್ತಿದೆಯೇ?" ಎಂದು ಕೇಳಿದರೆ ಈ ಮೆಕಾಲೆ ವಂಶಸ್ಥರು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಮುಸಿ ಮುಸಿ ನಗುತ್ತಾರೆ. "ಪ್ರಜೆಗಳನ್ನು ಅದು ಭರಿಸುತ್ತದೆಯಾದ್ದರಿಂದ ಅದು ಧರ್ಮವೆನಿಸಿದೆ - ಧಾರಣಾತ್ ಧರ್ಮಂ ಇತ್ಯಾಹುಃ" ಎನ್ನುವ ಸನಾತನ ವ್ಯಾಖ್ಯಾನವು ಈ ಮೆಕಾಲೆ ಪಂಡಿತರ ಅವಗಾಹನೆಗೆ ಬಾರದು.
            "ಒಂದಾನೊಂದು ಕಾಲದಲ್ಲಿ" ಎನ್ನುವ ಮಾತಿನಲ್ಲೇ "ಓಂ ನಮಃ ಶಿವಾಯ", ಓ, ನ, ಮಃ ಎನ್ನುವ ಅಕ್ಷರಗಳನ್ನು ಕಲಿತುಕೊಳ್ಳುವ ಭಾರತೀಯ ಸಂಪ್ರದಾಯವು ಧ್ವನಿಸುತ್ತದೆ. (ತೆಲುಗಿನಲ್ಲಿ ಓನಾಮವನ್ನು ತಿದ್ದಿಸುವುದು ಎಂದು ಅಕ್ಷರಾಭ್ಯಾಸ ಮಾಡಿಸುವುದು ಎನ್ನುವುದನ್ನು ಅನ್ವರ್ಥವಾಗಿ ಹೇಳಲಾಗುತ್ತದೆ). ಮೊದಲಿನದು ಎನ್ನುವ ಮಾತು ಹಾಗು ಭಾವನೆಗೆ "ಓಂ" ಎನ್ನುವುದು ಪ್ರತೀಕವಾಗಿದೆ. ಹೀಗೆ, "ಒಂದಾನೊಂದು ಕಾಲದಲ್ಲಿ" ಎಂದು ಹೇಳುವ ಗ್ರಾಮೀಣರು ಮೊದಲನೇ ಯುಗವನ್ನೇ ಧ್ವನಿಸುತ್ತಿದ್ದಾರೆ! ಅಕ್ಷರಗಳನ್ನು ಕಲಿತುಕೊಂಡು ಉನ್ನತ ವ್ಯಾಸಂಗ ಮಾಡಿದ ಮೇಲೂ ಸಹ ಆಂಗ್ಲ ವಿದ್ಯಾವಿಧಾನದಿಂದ ಪ್ರಭಾವಿತರಾಗದವರೂ ಸಹ "ಒಂದಾನೊಂದು ಕಾಲದಲ್ಲಿ" ಎನ್ನುವ ನುಡಿಗಟ್ಟನ್ನು ಬಳಸುತ್ತಾರೆ. "ಒಂದಾನೊಂದು ಕಾಲದಲ್ಲಿ" ಎನ್ನುವ ಮಾತನ್ನೂ ಸಹ ಅನಾಗರೀಕರು ಮಾತ್ರವೇ ಮಾತನಾಡುತ್ತಾರೆ ಎಂದು ಆಂಗ್ಲ ಸಂಸ್ಕೃತಿಯ ಮದ್ಯದಲ್ಲಿ ಮುಳುಗಿ ತೇಲುತ್ತಿರುವವರು ಅಪಹಾಸ್ಯ ಮಾಡುತ್ತಿರುತ್ತಾರೆ, ಏಕೆಂದರೆ ಅವರು ಆ ಪದಜಾಲವನ್ನು ಬಳಸುವುದಿಲ್ಲ!
             "ವೇದ ಕಾಲ" ಎಂದು ಬ್ರಿಟೀಷರು ಹುಟ್ಟುಹಾಕಿದ ನುಡಿಗಟ್ಟನ್ನು ವಿದ್ಯಾವಂತರನೇಕರು ದಿನನಿತ್ಯ ಬಳಸುತ್ತಿರುತ್ತಾರೆ. "ವೇದಿಕ್ ಏಜ್" ಎನ್ನುವ ಆಂಗ್ಲ ಪದಕ್ಕೆ ಸಂವಾದಿಯಾಗಿ ಭಾರತೀಯ ಭಾಷೆಗಳಲ್ಲಿ "ವೇದಕಾಲ"ವೆನ್ನುವ ಶಬ್ದದ ಬಳಕೆಯಾಗುತ್ತಿರುತ್ತದೆ. ಈ ಮಾತುಗಳನ್ನು ಕೇಳುತ್ತಿದ್ದರೆ, "ವೇದಕಾಲವೆನ್ನುವುದು ಅದ್ಯಾವಾಗಲೋ ಪ್ರಾಚೀನ ಕಾಲದಲ್ಲಿ ಇತ್ತೆಂದೂ ಆದರೆ ಈಗದು ನಶಿಸಿ ಹೋಗಿದೆ ಎಂಬ ಭಾವವನ್ನೂ ಸ್ಫುರಿಸುತ್ತದೆ. ಒಂದು ಕಾಲದಲ್ಲಿ ಇದ್ದು ಈಗ ಇಲ್ಲದುದರ ಕುರಿತು ಹೇಳುವಂತೆ, "ವೇದಕಾಲ" ಎನ್ನುವ ಪದವನ್ನು ಪಾಶ್ಚಾತ್ಯ ಇತಿಹಾಸಕಾರರು ಹುಟ್ಟುಹಾಕಿದ್ದಾರೆ. "ರಘುರಾಮನ ಪಾಲನೆಯ ಕಾಲದಲ್ಲಿ....." ಎಂದು ಹೇಳಬಹುದು, "ಮಹಾಭಾರತ ಯುದ್ಧದ ಸಮಯದಲ್ಲಿ... " ಎಂದು ಬಳಸಬಹುದು. "ಆದಿ ಶಂಕರಾಚಾರ್ಯರ ದಿಗ್ವಿಜಯ ಕಾಲದಲ್ಲಿ....." ಎಂದು ಗತಕಾಲದ ಕುರಿತು ಹೇಳಬಹುದು. "ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ......." ಎಂದು ವಿವರಿಸಬಹುದು. ಏಕೆಂದರೆ ಅವೆಲ್ಲಾ ಈಗ ಇಲ್ಲದೇ ಇರುವುದರಿಂದ! ಆದರೆ ವೇದಪ್ರಾಮಾಣ್ಯವು ಭೂತಕಾಲದಲ್ಲಿ ಇತ್ತು, ವರ್ತಮಾನಕಾಲದಲ್ಲಿ ಇದೆ ಮತ್ತು ಭವಿಷ್ಯತ್ಕಾಲದಲ್ಲಿಯೂ ಇರುತ್ತದೆ. ಅನಾದಿಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯ ಕುಸುಮವು ವಿಕಸಿಸುವುದಕ್ಕೆ ಕಾರಣೀಭೂತವಾಗಿರುವುದು ಈ ವೇದಗಳು. ಹಾಗಾದರೆ ಈಗ ಪ್ರಚಲಿತವಿರುವುದು ವೇದಕಾಲವಲ್ಲವೆಂದೂ, ವೇದಕಾಲವು ಗತಿಸಿಹೋದ ಚರಿತ್ರೆಯ ಭಾಗವೆಂದೂ ಅರ್ಥ ಹೊಮ್ಮಿಸುವ "ವೇದಕಾಲ" ಎನ್ನುವ ನುಡಿಗಟ್ಟನ್ನು ಬಳಸಿ, ವೇದಕಾಲದಲ್ಲಿ ಹಾಗಿತ್ತಂತೆ, ಹೀಗಿತ್ತಂತೆ, ಮಹಿಳೆಯರು ಬಂಗಾರದ ಆಭರಣಗಳನ್ನು ಧರಿಸುತ್ತಿದ್ದರಂತೆ, ಗೋಧಿ ಮತ್ತು ಅಕ್ಕಿಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಜನರು ತಿನ್ನುತ್ತಿದ್ದರಂತೆ...." ಎಂದು ವಿಲಿಯಮ್ ಜೋನ್ಸ್‌ನಿಂದ ಹಿಡಿದು ವಿನ್ಸೆಂಟ್ ಸ್ಮಿತ್‌ನವರೆಗೆ ಎಲ್ಲಾ ಚರಿತ್ರಕಾರರೂ ನಮಗೆ ಪಾಠಗಳನ್ನು ಬೋಧಿಸಿದ್ದಾರೆ, ಅವುಗಳನ್ನು ಕೇಳಿ ನಾವು ಪರವಶರಾಗುತ್ತಿದ್ದೇವೆ!
          "ಸಂವಿಧಾನ ಕಾಲದಲ್ಲಿ" ಅಥವಾ "ಪ್ರಜಾಪ್ರಭುತ್ವಕಾಲ"ದಲ್ಲಿ ಎನ್ನುವ ಮಾತನ್ನು ಯಾರೂ ಬಳಸುವುದಿಲ್ಲ, ಏಕೆಂದರೆ ಈಗ ನಡೆಯುತ್ತಿರುವುದು ಸಂವಿಧಾನ ಕಾಲವೇ ಆಗಿರುವುದರಿಂದ. ಸಂವಿಧಾನ ಅಥವಾ ರಾಜ್ಯಾಂಗ ರಚನಾ ಕಾಲದಲ್ಲಿ ಅಥವಾ ಪ್ರಜಾಪ್ರಭುತ್ವ ಸ್ಥಾಪನೆಯಾಗುವ ಕಾಲದಲ್ಲಿ ಎಂದು ಬೇಕಾದರೆ ಬಳಸಬಹುದು. ಇದೇ ವಿಧವಾಗಿ ಕೋಟ್ಯಂತರ ವರ್ಷಗಳ ಹಿಂದೆ, ಹೊಸದಾದ ಕಲ್ಪವೊಂದರ ಉದಯಕಾಲದಲ್ಲಿ ವೇದ ವಿಜ್ಞಾನವು ಮಹರ್ಷಿಗಳ ಮನಸ್ಸಿನಲ್ಲಿ ಆವಿರ್ಭವಿಸಿತು, ಆ ಋಷಿಗಳು ಆ ವೇದಗಳನ್ನು ಕೇಳಿದ್ದಾರೆ ಅಥವಾ ದರ್ಶಸಿದ್ದಾರೆ. ಆದ್ದರಿಂದ ವೇದಗಳ ಉದ್ಭವ ಕಾಲವನ್ನು ಸೂಚಿಸ ಬೇಕಾದಾಗ ವೇದೋದ್ಭವ ಕಾಲದಲ್ಲಿ..... ಅಥವಾ ವೇದಗಳ ದರ್ಶನ ಕಾಲದಲ್ಲಿ ಎಂದು ಹೇಳಬಹುದು. ವೇದಗಳನ್ನು ಯಾರೂ ರಚಿಸಲಿಲ್ಲ (ನ ಕಶ್ಚಿತ್ ವೇದಕರ್ತಾ....) ಹಾಗಾಗಿ ವೇದರಚನಾ ಕಾಲದಲ್ಲಿ ಎಂದು ಹೇಳುವುದು ಉಚಿತವೆನಿಸದು. ಆದರೆ ಋಷಿಗಳು ವೇದಗಳನ್ನು ದರ್ಶಿಸಿದ್ದನ್ನು ಸಹ ಒಂದು ರಚನೆಯಾಗಿ ಪರಿಭಾವಿಸುವುದಾದರೆ ’ವೇದರಚನಾ ಕಾಲದಲ್ಲಿ ಹೀಗಿತ್ತು, ಹಾಗಿತ್ತು....." ಎಂದು ಹೇಳಬಹುದು. ಇದು ನಮ್ಮ ಭಾರತೀಯ ಸಂಪ್ರದಾಯ. ಈ ಸಂಪ್ರದಾಯವನ್ನು ಬ್ರಿಟಿಷರ ವಿದ್ಯಾಪದ್ಧತಿ ನುಂಗಿ ಹಾಕಿತು! ಏಸುಕ್ರಿಸ್ತನ ಜನನ ಕಾಲಕ್ಕೆ ಮೊದಲು ನಾಲ್ಕು ಸಾವಿರ ವರ್ಷಗಳ ಫೆಬ್ರವರಿ ತಿಂಗಳಿನ ಒಂದು ದಿನ ಬೆಳಿಗ್ಗೆ ಒಂಬತ್ತು ಘಂಟೆಗೆ ದೇವರು ಪ್ರಪಂಚವನ್ನು ಸೃಷ್ಟಿಸಿದ ಎನ್ನುವ ಪಾಶ್ಚಾತ್ಯರ ನಂಬಿಕೆಯು ಭಾರತೀಯ ಕಾಲಗಣನೆಯ ಸೂರ್ಯನನ್ನು ಕೇತುವು ನುಂಗಿದ ಹಾಗೆ ಕಬಳಿಸಿ ಬಿಟ್ಟಿತು. "ಸರಿ ಹಾಗಾದರೆ ಒಂಬತ್ತು ಘಂಟೆಗೂ ಮುಂಚೆ ಏನಿತ್ತು?" ಎಂದು ಕೇಳಿದರೆ ಪಾಶ್ಚಾತ್ಯರ ಬಳಿ ಅದಕ್ಕೆ ಉತ್ತರವಿಲ್ಲ!
          ಇದಕ್ಕೆ ಉತ್ತರವು ಭಾರತೀಯರಿಗೆ ಅನಾದಿಕಾಲದಿಂದಲೂ ತಿಳಿದಿದೆ. "ರಾತ್ರಿಯ ಪೂರ್ವದಲ್ಲಿ ಏನಿತ್ತು? ಹಗಲಿನ ಪೂರ್ವದಲ್ಲಿ ಏನಿತ್ತು?" ಎನ್ನುವ ಪ್ರಶ್ನೆಗೆ ಉತ್ತರವೇ ಅನಾದಿ ಮತ್ತು ಅನಂತಗಳು! ಹೀಗೆ ಅನಾದಿಯಾಗಿ ಅನಂತವಾಗಿ ಇರುವ ಸೃಷ್ಟಿಕ್ರಮವನ್ನೇ ಪಾಶ್ಚಾತ್ಯ ಧಾರ್ಮಿಕ ಪ್ರವರ್ತಕರು ಪರಿಮಿತಕಾಲಕ್ಕೆ ಸಂಕುಚಿತಗೊಳಿಸಿ ಅದನ್ನು ತುಂಡಾಗಿಸಿದ್ದಾರೆ. ಅಜ್ಞಾನಜನಿತವಾದ ಪಾಶ್ಚಾತ್ಯರ ನಂಬಿಕೆಗಳು ಬ್ರಿಟಿಷ್ ಸಾಮ್ರಾಜ್ಯವಾದಿಗಳಿಗೆ ಮತ್ತು ಅವರ ಚಿತ್ರವಿಚಿತ್ರವಾದ ಸಂಶೋಧನೆಗಳಿಗೆ ಪರಮಪ್ರಮಾಣವಾಯಿತು. ಅವರು ಗುಡ್ಡವನ್ನು ಕನ್ನಡಿಯಲ್ಲಿ ಹಿಡಿದಿಟ್ಟರು! ಬ್ರಿಟಿಷರು ನಮ್ಮ ದೇಶಕ್ಕೆ ಕಾಲಿಡುವುದಕ್ಕೆ ಮೊದಲು ಈ ದುಃಸ್ಥಿತಿ ಇರಲಿಲ್ಲ, ಅವರು ಹೋದ ನಂತರವೂ ಆ ದುಃಸ್ಥಿತಿ ತೊಲಗಲಿಲ್ಲ. ಮೆಕಾಲೆ ವಿದ್ಯಾವಿಧಾನವೆನ್ನುವ ಮದ್ಯದ ಅಮಲಿನಲ್ಲಿ ಮುಳುಗಿ ತೇಲುತ್ತಿರುವ ಭರತನ ವಂಶಸ್ಥರಿಗೆ ತನ್ನ ದೇಶದ ಭವ್ಯ ಚರಿತ್ರೆಯ ಕುರಿತ ಪ್ರಜ್ಞೆಯೇ ಇಲ್ಲ!
          ಆ ಭವ್ಯ ಚರಿತ್ರೆಯ ಕಥೆ ಏನು? ಕೃತ, ತ್ರೇತಾ, ದ್ವಾಪರ ಹಾಗು ಕಲಿಯುಗಗಳು ಸೇರಿ ಒಂದು ’ಮಹಾಯುಗ’ ಎಂದು ನಮ್ಮ ಇತಿಹಾಸಕಾರರು ದಾಖಲಿಸಿದ್ದಾರೆ.
          ಒಂದು ಮಹಾಯುಗವು ಮುಗಿದ ನಂತರ ಮತ್ತೊಂದು ಮಹಾಯುಗವು ಆರಂಭವಾಗುತ್ತದೆ. ಒಂದು ಮಹಾಯುಗದ ಪ್ರಮಾಣವು ನಲವತ್ತಮೂರು ಲಕ್ಷ ಇಪ್ಪತ್ತು ಸಾವಿರ ಸಂವತ್ಸರಗಳು (೪೩, ೨೦, ೦೦೦ ವರ್ಷಗಳು)! ಸಾವಿರ ಮಹಾಯುಗಗಳು ಮುಗಿದರೆ ಒಂದು ಕಲ್ಪಕಾಲವು ಮುಗಿಯುತ್ತದೆ. ಆ ಲೆಕ್ಕದಲ್ಲಿ ಒಂದು ಕಲ್ಪಕಾಲವೆಂದರೆ ನಾಲ್ಕುನೂರಾ ಮೂವತ್ತೆರಡು ಕೋಟಿ ಸಂವತ್ಸರಗಳು! ಸೃಷ್ಟಿಕ್ರಮವು ಮೊದಲಾದ ಮೇಲೆ ೪೩೨,೦೦,೦೦,೦೦೦ ವರ್ಷಗಳವರೆಗೂ ಈ ಕಲ್ಪವು ಇರುತ್ತದೆ. ಇದನ್ನೇ ’ಉದಯಕಲ್ಪ’ವೆಂದು ಕರೆಯಲಾಗುತ್ತದೆ. ಉದಯಕಲ್ಪವು ಮುಗಿದ ನಂತರ ಸೃಷ್ಟಿಯು ಲಯವಾಗಿ ಸಹಜಶೂನ್ಯಸ್ಥಿತಿಯು ಏರ್ಪಡುತ್ತದೆ. ಈ ಸಹಜ ಶೂನ್ಯಸ್ಥಿತಿಯೂ ಸಹ ನಾಲ್ಕುನೂರಾ ಮೂವತ್ತೆರಡು ಕೋಟಿ ಸಂವತ್ಸರಗಳ ಪರ್ಯಂತರವಿರುತ್ತದೆ. ಇದನ್ನೇ ’ಕ್ಷಯಕಲ್ಪ’ವೆಂದು ಕರೆಯಲಾಗುತ್ತದೆ. ರಾತ್ರಿ, ಹಗಲುಗಳಂತೆಯೇ ಈ ಕ್ಷಯ ಮತ್ತು ಉದಯ ಕಲ್ಪಗಳೆರಡೂ ಒಂದರ ನಂತರ ಒಂದು ನಿರಂತರವಾಗಿ ಅಂದರೆ ಅನಾದಿಯಾಗಿ, ಅನಂತವಾಗಿ ಮುಂದುವರೆಯುವುದೇ ವಿಶ್ವ ವ್ಯವಸ್ಥೆ ಅಥವಾ ಋತ. ತಿಂಗಳೊಂದರಲ್ಲಿ ಇರುವ ೩೦ ದಿವಸಗಳಂತೆಯೇ ಒಂದು ಸೃಷ್ಟಿಗತ ಮಾಸವು ೩೦ ಕಲ್ಪಗಳಿಗೆ ಏರ್ಪಡುತ್ತದೆ. ಇದನ್ನು ಗುರುತಿಸಿದ ನಮ್ಮ ಪೂರ್ವಿಕರು ಒಂದೊಂದು ಕಲ್ಪಕ್ಕೆ ಒಂದೊಂದು ಹೆಸರನ್ನು ಕೊಟ್ಟಿದ್ದಾರೆ. ಒಂದೊಂದು ಕಲ್ಪವನ್ನೂ ಸಹ ಸುಲಭವಾಗಿ ಲೆಕ್ಕ ಹಾಕಲು ಅನುಗುಣವಾಗುವಂತೆ ಅವನ್ನು ೧೪ ಮನ್ವಂತರಗಳಾಗಿ ವಿಭಜಿಸಿದ್ದಾರೆ. ಮನ್ವಂತರಗಳಿಗೂ ಸಹ ಹೆಸರುಗಳನ್ನು ಕೊಟ್ಟಿದ್ದಾರೆ. ಎಪ್ಪತ್ತೊಂದು ಮಹಾಯುಗಗಳ ಕಾಲವನ್ನು ಒಂದು ಮನ್ವಂತರವಾಗಿ ಪರಿಗಣಿಸಲಾಗಿದೆ. ಈಗ ಸಧ್ಯ ನಡೆಯುತ್ತಿರುವ ಉದಯಕಲ್ಪದ ಹೆಸರು ಶ್ವೇತವರಾಹಕಲ್ಪ. ಈ ಕಲ್ಪವು ಆರಂಭವಾಗಿ ಇಂದಿಗೆ ಸುಮಾರು ೧೯೬ ಕೋಟಿ ಸಂವತ್ಸರಗಳಾಗಿವೆ. ಈ ಕಲ್ಪವು ಇನ್ನೂ ೨೩೬ ಕೋಟಿ ವರ್ಷಗಳ ಕಾಲ ಇರುತ್ತದೆ. ಈ ಕಲ್ಪದಲ್ಲಿ ಈಗಾಗಲೇ ಆರು ಮನ್ವಂತರಗಳ ಕಾಲವು ಮುಗಿದಿದ್ದು ಈಗ ಏಳನೆಯದಾದ ವೈವಸ್ವತ ಮನ್ವಂತರವು ನಡೆಯುತ್ತಿದೆ. ಇದರಲ್ಲಿ ಇಪ್ಪತ್ತೇಳು ಮಹಾಯುಗಗಳು ಮುಗಿದಿದ್ದು, ಇಪ್ಪತ್ತೆಂಟನೆಯ ಮಹಾಯುಗಲ್ಲಿ ಕೃತ, ತ್ರೇತ, ದ್ವಾಪರಗಳು ಮುಗಿದಿವೆ ಮತ್ತು ಕಲಿಯುಗದಲ್ಲಿ ೫೧೧೨ನೇ (ಕ್ರಿ.ಶ. ೨೦೧೬ನೇ ಇಸವಿಗೆ) ವರ್ಷವು ನಡೆಯುತ್ತಿದೆ.....
          ಪುರಾಣಗಳಲ್ಲಿಯೂ, ಮಹಾಭಾರತದಲ್ಲಿಯೂ ಈ ವಿಷಯವನ್ನು ಹೇಳಿರುವುದನ್ನು ನಮ್ಮ ಭಾರತೀಯ ಸಂಶೋಧಕರು ಗುರುತಿಸಿದ್ದಾರೆ. ಇದನ್ನೇ ನಮ್ಮ ಜನಸಾಮಾನ್ಯರು ಮತ್ತು ಗ್ರಾಮೀಣ ಭಾರತದ ಜನತೆ ನಂಬುತ್ತಿದ್ದಾರೆ. ಈ ನಂಬಿಕೆಯು ನಮ್ಮ ಭಾರತೀಯ ಸಂಸ್ಕೃತಿಯ ಸ್ರೋತಸ್ಸನ್ನು ಮೇಘದಿಂದ ಸಾಗರದವರೆಗೆ, ಸಾಗರದಿಂದ ಮೇಘಗಳವರೆಗೆ ಈ ಸನಾತನವಾದ ವಿಶ್ವಾಸದ ಪ್ರವಾಹವು ಸಾಗುತ್ತಿದೆ. ಆದರೆ ಮೆಕಾಲೆ ವಿದ್ಯೆಯು ಭಾರತೀಯರನ್ನು ನಾಲ್ಕು ಒಡ್ಡುಗಳ ಮಧ್ಯದಲ್ಲಿರುವ ಚಿಕ್ಕದಾದ ನೀರಿನ ಕುಂಟೆಯೊಳಗೆ ಬಂಧಿಸಿಟ್ಟಿದೆ. ಕೆಲವರು ಈಜೆ ದಡ ಸೇರಿದ್ದಾರೆ, ಕೆಲವರು ದಡದತ್ತ ಈಜುತ್ತಿದ್ದಾರೆ ಹಾಗೆ ಮೇಲೆ ಬಂದವರು ಸನಾತನ ವಿಶ್ವಾಸ ಪ್ರವಾಹದಲ್ಲಿ ಜಲಕವಾಡುತ್ತಿದ್ದಾರೆ. ಆದರೆ ಅತ್ಯಧಿಕರು ಇನ್ನೂ ಮೆಕಾಲೆ ವಿದ್ಯಾಕೂಪದಲ್ಲಿಯೇ ಕೈಕಾಲು ಬಡಿಯುತ್ತಿದ್ದಾರೆ........
ಶಿಲಾಯುಗ ವಾನರ ಯುಗಗಳು
ಅಜ್ಞಾನಕೆ ಸಂಕೇತಗಳಾಗಿಹವು
ಬಿಳಿಚರ್ಮವ ಹೊದ್ದ ಬುದ್ದಿಗೆ
ತಿಳಿದದ್ದೇ ಕಾಲಮಾನ!
ಕಾಲನ ಬಂಧನಕ್ಕೆ ಸಿಲುಕದ
ಶಾಶ್ವತ ಸತ್ಯಗಳೇ ವೇದಗಳು
ವೇದಕಾಲವೆನ್ನುವ ಮಾತುಗಳು
ಭಾವದಾಸ್ಯದ ಸಂಕೋಲೆಗಳು!!
                                    *****
            ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ನಾಲ್ಕನೆಯ ಕಂತು, "ವೇದಕಾಲಂ ಅನ್ನಮಾಟ ಎಲಾ ಪುಟ್ಟುಕೊಚ್ಚಿಂದಿ? - "ವೇದಕಾಲ"ವೆನ್ನುವ ಶಬ್ದ ಸಮುಚಿತವಾದುದೇ?
            ಈ ಸರಣಿಯ ಮೂರನೇ ಲೇಖನಕ್ಕೆ ತಪ್ಪುಗಳ ತಡಿಕೆ ಈಗ ಒಪ್ಪುಗಳ ಕುಡಿಕೆ...! - ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%AE...
 
 
 
 

Rating
No votes yet

Comments

Submitted by makara Thu, 10/13/2016 - 22:23

https://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%AE...
ನನ್ನ ಸರಣಿಯ ಈ ನಾಲ್ಕನೇ ಭಾಗವನ್ನೂ ಸಹ (ನಾಲ್ಕರಲ್ಲಿ ಮೂರನ್ನು) ವಾರದ ವಿಶೇಷ ಲೇಖನಗಳಲ್ಲೊಂದನ್ನಾಗಿ ಆಯ್ಕೆ ಮಾಡಿದ ಶ್ರೀ ಹರಿಪ್ರಸಾದ್ ನಾಡಿಗ್ ಅವರ ನೇತೃತ್ವದ ಸಂಪದ ನಿರ್ವಾಹಕ ಮಂಡಳಿಗೆ ಹಾಗು ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸರಣಿಯನ್ನು ಆಸಕ್ತಿಯಿಂದ ಓದಿ ನನ್ನ ಬರವಣಿಗೆ ಸಾರ್ಥಕತೆಯನ್ನು ಒದಗಿಸುತ್ತಿರುವ ಸಂಪದದ ವಾಚಕ ಬಂಧುಗಳಿಗೂ ಸಹ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನವನ್ನು ಓದಲಿಚ್ಛಿಸುವವರು ಈ ಕೆಳಗಿನ ಕೊಂಡಿಯನ್ನು ನೋಡಿ. %E0%B2%B6%E0%B3%8D%E0%B2%B5%E0%B3%87%E0%B2%A4-%E0%B2%95%E0%B2%A4%E0%B3%8D%E0%B2%A4%E0%B2%B2%E0%B3%86-%E0%B2%A8%E0%B2%AE%E0%B3%8D%E0%B2%AE-%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AE%E0%B2%B8%E0%B2%95%E0%B3%81-%E0%B2%97%E0%B3%8A%E0%B2%B3%E0%B2%BF%E0%B2%B8%E0%B2%BF%E0%B2%A4%E0%B3%81/13-10-2016/47189 ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನನ್ನ ಸರಣಿಯ ಈ ನಾಲ್ಕನೇ ಭಾಗವನ್ನೂ ಸಹ (ನಾಲ್ಕರಲ್ಲಿ ಮೂರನ್ನು) ವಾರದ ವಿಶೇಷ ಲೇಖನಗಳಲ್ಲೊಂದನ್ನಾಗಿ ಆಯ್ಕೆ ಮಾಡಿದ ಶ್ರೀ ಹರಿಪ್ರಸಾದ್ ನಾಡಿಗ್ ಅವರ ನೇತೃತ್ವದ ಸಂಪದ ನಿರ್ವಾಹಕ ಮಂಡಳಿಗೆ ಹಾಗು ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸರಣಿಯನ್ನು ಆಸಕ್ತಿಯಿಂದ ಓದಿ ನನ್ನ ಬರವಣಿಗೆ ಸಾರ್ಥಕತೆಯನ್ನು ಒದಗಿಸುತ್ತಿರುವ ಸಂಪದದ ವಾಚಕ ಬಂಧುಗಳಿಗೂ ಸಹ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನವನ್ನು ಓದಲಿಚ್ಛಿಸುವವರು ಈ ಕೆಳಗಿನ ಕೊಂಡಿಯನ್ನು ನೋಡಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿhttps://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%AE...