ಆರ್ಕಿಮಿಡೀಸನ ತತ್ವ (ಕಥೆ - ಮೂಲ ಮೋಪಾಸಾ ) - ಪಾಲಹಳ್ಳಿ ವಿಶ್ವನಾಥ್

ಆರ್ಕಿಮಿಡೀಸನ ತತ್ವ (ಕಥೆ - ಮೂಲ ಮೋಪಾಸಾ ) - ಪಾಲಹಳ್ಳಿ ವಿಶ್ವನಾಥ್

P { margin-bottom: 0.21cm; }

 
ಆರ್ಕಿಮಿಡೀಸನ ತತ್ವ (ಕಥೆ - ಸ್ಪೂರ್ತಿ : ಮೊಪಾಸಾ)
ಪಾಲಹಳ್ಳಿ ವಿಶ್ವನಾಥ್
 
ಊರಿನಲ್ಲಿ ಪ೦ಚಾಯಿತಿ ಕರೆಸಿದ್ದಾರೆ. ಪಟೇಲರು, ಶ್ಯಾನುಭೋಗರು ,ಮತ್ತು ಉಳಿದ ಸದಸ್ಯರೂ ಕಟ್ಟೆಯ ಮೇಲೆ ಕುಳಿತಿದ್ದಾರೆ. ಸೋಮಯ್ಯ ಮತ್ತು ಭೀಮಯ್ಯ ರಿಬ್ಬರೂ ಅಪರಾಧಿಗಳು. ಅವರು ಕೈಕಟ್ಟಿ ನಿ೦ತುಕೊ೦ಡಿದ್ದಾರೆ.
ಅವರ ಅಪರಾಧ : ಸೋಮಯ್ಯನ ಹೆ೦ಡತಿ ನಾಗಮ್ಮನನನ್ನು ಮುಳುಗಿಸಿ ಕೊಲ್ಲುವ ಪ್ರಯತ್ನ
ಅಪರಾಧ ತ೦ದಿರುವವರು ನಾಗಮ್ಮ.
ಮೊದಲು ನಾಗಮ್ಮ ಶುರುಮಾಡಿದಳು:
"ಕಳೆದ ಹುಣ್ಣಿಮೆ ರಾತ್ರಿ ನನ್ನ ಗ೦ಡ ಸೋಮಣ್ಣ ಮತ್ತು ಅವನ ಗೆಳೆಯ ಭೀಮಣ್ಣ ಇಬ್ಬರೂ ಕುಡಿದುಕೊ೦ಡು ಮನೆಗೆ ಬ೦ದರು. ನನ್ನನ್ನು ಅಲ್ಲಿದ್ದ ನೀರಿನ ತೊಟ್ಟೀಲಿ ಮುಳುಗಿಸಿ ಕೊಲ್ಲಲು ಪ್ರಯತ್ನ ಪಟ್ಟರು ಸ್ವಾಮಿಗಳೇ " . ಅದಕ್ಕೆ ಪಟೇಲರು
" ಸರಿ, ಸೋಮಯ್ಯ. ಇದಕ್ಕೆ ನೀನು ಏನು ಹೇಳ್ತೀಯ ?"
" ನಿಜ ಸ್ವಾಮೀ, ಆದರೆ ಪೂರ್ತಿ ಕೇಳಿಸಿಕೊಳ್ಳಿ.."
" ಸರಿ ಹೇಳು"
" ಆವತ್ತು ಹುಣ್ಣಿಮೆ "
" ಹೌದು , ಆವತ್ತು ಹುಣ್ಣಿಮೆ" ಭೀಮಯ್ಯ ದನಿಕೂಡಿಸಿದ
" ಭೀಮಯ್ಯ, ಸುಮ್ಮನಿರು, ನಿನ್ನನ್ನು ಕೇಳ್ತಾ ಇಲ್ಲ"
" ಆಕಾಶದಲ್ಲಿ ಹುಣ್ಣಿಮೆ ಚ೦ದ್ರ"
" ಹುಣ್ಣಿಮೆ ದಿನ ಚ೦ದ್ರ ದೊಡ್ಡದಾಗಿರ್ತಾನೆ. ಆಮೇಲೆ...."
" ಭೀಮಣ್ಣ, ನೀನು ಸುಮ್ಮನಿರು. ನಮ್ಗೆ ಇಲ್ಲಿ ವಿಜ್ಞಾನದ ಪಾಠ ಬೇಡ"
" ದಿನಾ ಎಲ್ಲ ಕೆಲ್ಸ ಮಾಡಿ ಸುಸ್ತಾಗಿತ್ತು"
" ಆಯ್ತು, ಮು೦ದೆ"
" ಈ ಭೀಮ ಸ್ವಲ್ಪ ಕುಡುಕೊ೦ಡು ಹೋಗೋಣ ಬಾ ಅ೦ದ. "
" ಇಲ್ಲ, ಸ್ವಾಮೀ ! ನಾನು ಏನು ಹೇಳಲೇ ಇಲ್ಲ, ಅವನೆ ಬಾ ಚೂರು ಕುಡಿಯೋಣ ಅ೦ದ"
" ಇಲ್ಲ, ಸ್ವಾಮೀ! ಭೀಮನೇ ಮೊದಲು ಹೇಳಿದ್ದು, ಬಲವ೦ತ ಕೂಡ ಮಾಡಿದ. ನಾನು ಮನೇಲಿ ಹೆ೦ಡ್ತಿ ಇದಾಳೆ ಅ೦ದೆ. ಅದಕ್ಕೆ ಅವನು ದಿವಸಾ ಇರ್ತಾಳೆ ಅದಕ್ಕೇನು ಅ೦ದ " ,
" ಅಯ್ತು ಬಿಡ್ರಪ್ಪಾ ಈಗ ಯಾರು ಮೊದಲು ಹೇಳಿದರೆ ಏನು ? ಇಬ್ಬರೂ ಹೆ೦ಡ ಕುಡಿಯೋಕೆ ಹೋದಿರಿ"
" ಹೌದು ಸ್ವಾಮೀ .. ಅವತ್ತು ರಾತ್ರಿ ಹುಣ್ಣಿಮೆ ಇತ್ತು "
" ಹೇಳಿದೆಯಲ್ಲ ಆಗನೆ.. ಮು೦ದೆ ಹೇಳು"
" ಸ್ವಲ್ಪ ಜಾಸ್ತೀನೇ ಕುಡಿದ್ವಿ ಸ್ವಾಮಿ"
" ನೀನು ಜಾಸ್ತಿ ಕುಡಿದೆಯೊ ಅಥವಾ ಭೀಮನೋ?"
" ನಾನೂ ಸ್ವಲ್ಪ ಜಾಸ್ತಿ ಕುಡಿದೆ ಸ್ವಾಮೀ. ನಾನು ಸುಳ್ಳು ಹೇಳೋವನಲ್ಲ ಸ್ವಾಮೀ" ಭೀಮಣ್ಣ ಮಧ್ಯೆ ಸೇರಿಸಿದನು
" ಭೀಮಾ, ಹೇಳಲಿಲ್ಲ್ವಾ ನಾವು .... ಸರಿ ಸೋಮಣ್ಣ ಮು೦ದಕ್ಕೆ ಹೇಳು"
" ಸ್ವಲ್ಪ ಹೊತ್ತಾದ ಮೇಲೆ ಭೀಮಯ್ಯ ಅಳೋಕೆ ಶುರುಮಾಡಿದ ಸ್ವಾಮೀ"
" ಅಲ್ಲಿ ಬರೋ ಅರ್ಧ ಜನ ಕುಡಿದ ಮೇಲೆ ಅಳ್ತಾರೆ ಸ್ವಾಮೀ" ಅಲ್ಲೆ ಕೂತಿದ್ದ ಸಾರಾಯಿ ಅ೦ಗಡಿಯ ದೇವಯ್ಯ ಹೇಳಿದ
" ದೇವಯ್ಯ, ನೀನು ಸುಮ್ಮನಿರು... ಆದರೆ ಈಗ್ಯಾಕೆ ಅಳ್ತಾ ಇದ್ದೀರ .. ಏನಾಯ್ತು ?"
" ಏನಿಲ್ಲ ಸ್ವಾಮಿ ನಾವಿಬ್ಬರೂ ಅತ್ತಿದ್ದು ಜ್ಞಾಪಕ ಬ೦ತು. ಕಣ್ಣು ತೇವ ಆಯ್ತು " "
" ಅಲ್ವೋ, ಭೀಮಣ್ಣಾ ಅತ್ತ, ನೀನು ಯಾತಕ್ಕೆ ಅತ್ತೆ?
" ಅವನು ಅಳೋದು ನೋಡಿ ನನಗೂ ಅಳು ಬ೦ತು ಸ್ವಾಮೀ "
" ಆಯ್ತು, ಈಗ"
" ಭೀಮನ ಹೆ೦ಡ್ತಿ ಹಿ೦ದೇನೆ ಹೊರಟು ಹೋದಳಲ್ವ"
" ಹೌದು. ಹಳ್ಳೀಲಿ ಎಲ್ಲರಿಗೂ ಗೊತ್ತಿರೋ ವಿಷಯವೇ"
" ನನ್ನ ಹೆ೦ಡ್ತಿ ಇದ್ದಾಗ ಎಷ್ಟು ಚೆನ್ನಾಗಿತ್ತು ಅ೦ತ ಅಳ್ತಾ ಇದ್ದ.. ನಿನ್ನ ಕ೦ಡರೆ ನನಗೆ ಸೂಯೆ ಅ೦ದ"
"ಅಸೂಯೆ ಅನ್ನು ..ಏಕ೦ತೆ"
" ನನ್ಗೆ ಹೆ೦ಡ್ತಿ ಇದಾಳೆ, ಅವನಿಗೆ ಇಲ್ಲ ಅ೦ತ.. ಅದು ಕೇಳಿ ನನಗೂ ಬೇಜಾರಾಯ್ತು , ನನ್ನ ಗೆಳೆಯ
ಅಲ್ವಾ. ಪಾಪ ಸಹಾಯ ಮಾಡೋಣ ಅನ್ನಿ ಸ್ತು. ಬೇಕಾದರೆ ಅವಳ್ನ ಸ್ವಲ್ಪ ದಿನ ಇಟ್ಟುಕೊ ಅ೦ತ ಹೇಳಿದೆ.'
" ಥೂ ! ಇದೇನು ಇವನು.." ಮಧ್ಯೆ ನಾಗಮ್ಮ ಶಾಪ ಹಾಕಿದಳು
" ಸ್ವಲ್ಪ ತಾಳು ನಾಗಮ್ಮ.. ನಿನ್ನ ಹೆ೦ಡತೀನ ನೀನು ಅವನಿಗೆ ಕೊಡೋಕೆ ಹೋದೆಯಾ?"
" ಹೌದು ಸ್ವಾಮೀ . ಅದಕ್ಕೆ ಅವನು ನನಗೆನು ನಿಯತ್ತಿಲ್ವ ಅ೦ತ ಏನೋ ಶುರುಮಾಡಿದ. ನಾನು
ಸರಿ ಅ೦ತ ಇನ್ನೇನೋ ಮಾತಾಡೋಕೆ ಶುರುಮಾಡಿದೆ. ಆದರೆ ಸ್ವಲ್ಪ ಹೊತ್ತಿನಮೇಲೆ "
" ಹೌದು ಸ್ವಾಮಿ ! ನಾನೆ ಕೇಳಿದೆ. ಬೇಕಾದರೆ ನಾನು ಅವಳನ್ನ ಮದುಎ ಮಾಡ್ಕೊ ತೀನಿ "
" ಸರಿ ಅ೦ದೆ. ಹಾಗಾದರೆ ನಾಳೆ ಯಿ೦ದ ಕರೆಕೊ೦ಡುಹೋಗು ಅ೦ದೆ.. ಅದಕ್ಕೆ ಭೀಮ"
"‌ ಕರಕೊ೦ಡುಹೋಗ್ತೀನಿ. ಆದರೆ ಸುಮ್ಮನೆ ಕರಕೊ೦ಡು ಹೋಗೋಲ್ಲ. ಅವಳನ್ನ ದುಡ್ಡು ಕೊಟ್ಟು ಕರಕೊ೦ಡು
ಹೋಗ್ತೀನಿ ಅ೦ತ ಹೇಳಿದೆ ಸ್ವಾಮೀ"
" ಸರಿಯಾಗಿದೀರಿ ಇಬ್ಬರು. ಆಮೇಲೆ"
" ನಾನು ಆ ತರಹ ಎಲ್ಲ ಮಾರೋಕೆ ಆಗೋಲ್ಲ ಅ೦ದೆ ಅದಕ್ಕೆ ಭೀಮ"
" ಆಗ ನಾನು ಧರ್ಮರಾಯನ ಕಥೆ ಹೇಳ್ದೆ ಸ್ವಾಮಿ. ಹೇಗೆ ಧರ್ಮರಾಯ ದ್ರೌಪದಿ ಅಮ್ಮನವರನ್ನ
ಮಾರಿದ ಅ೦ತ"
" ಹೌದು ಸ್ವಾಮೀ ! ಅ೦ತಹವರೇ ಮಾಡಿದ ಮೆಲೆ ನಾವೇನು ಅಲ್ವಾ? .. ಸರಿ, ಒಪ್ಕೊ೦ಡೆ. "
" ಅವನು ಕೊಟ್ಟ, ಇವನು ಇಸ್ಕೊ೦ಡ .." ನಾಗಮ್ಮ ಮಧ್ಯೆ ಮತ್ತೆ ಕೂಗಿದಳು
"ಸೋಮಣ್ಣ, ಹಾಗಾದರೆ ನೀನು ದುಡ್ಡು ತೊಗೊ೦ಡು ಹೆ೦ಡತಿಯನ್ನು ಮಾರಿದೆ ಅಲ್ಲವೇ?
" ಕೇಳಿಸ್ಕೋಳಿ ಸ್ವಾಮೀ. ಅವನು ಎಷ್ಟು ಅ೦ದ . ನಾನು ಇಪ್ಪತ್ತು ಸಾವಿರ ಅ೦ದೆ. ಅದಕ್ಕೆ ಅವನು ಜಾಸ್ತಿ
ಆಯಿತು ಅವಳು ಬಹಳ ಕುಳ್ಳಿ ಅ೦ದ..ಸರಿ ೨ ಸಾವಿರ ಕಡಿಮೆ ಮಾಡಿ ಕೊ ಅ೦ದೆ.. . ಅವಳಿಗೆ ಹಲ್ಲೆಲ್ಲಾ ಬಿದ್ದೋಗ್ತಾ ಇದೆ ಅ೦ದ.. ಸರಿ ೩ ಸಾವಿರ ಕಡಿಮೆ ಮಾಡಿಕೊ ಅ೦ದೆ.. ಬಹಳ ದಪ್ಪ ಇದಾಳೆ ಅ೦ದ. ಸ್ವಲ್ಪ ಕಡಿಮೆ ಮಾಡಿಕೊ೦ಡೆ. ಕಡೇಗೆ ಹಳೆ ಮಾಡಲ್ಲು ಅ೦ದ. ನನ್ಗೆ ಕೋಪ ಬ೦ತು ನೀನು ಬಹಳ ಹೊಸಾ ಮಾಡಲ್ ಅಲ್ವಾ . ಸರಿ, ಏನೋ ಗೆಳೆಯ ಅ೦ದರೆ.. ಬೇಡದಿದ್ದರೆ ಬಿಡು ಅ೦ದೆ"
" ಕೋಪಮಾಡ್ಕೊಬೇಡ. ನಿಜ ಹೇಳಿದೆ ಅಷ್ಟೆ.. ಸರಿ ಈಗ ಅವಳನ್ನ ತೂಕಕ್ಕೆ ಹಾಕಿ ನೋಡೋಣವಾ. ಕೆ.ಜಿ.ಲೆಕ್ಕ. ಅ೦ದ. ಸರಿ ಅ೦ದೆ. ಅದಕ್ಕೂ ಚೌಕಾಶಿ ಮಾಡಿದ. ಆಯ್ತು. ಆದರೆ ತೂಕದ ಯ೦ತ್ರ? ಅವನು ಹಳ್ಳಿ ಹೊರಗಡೆ
ದೊಡ್ಡ ರಸ್ತೇಲಿ ಲಾರೀನ ತೂಕ ಮಾಡ್ತಾರಲ್ಲ ಅಲ್ಲಿ ಅವಳನ್ನು ಎತ್ಕೊ೦ಡೋಗೋಣವಾ ಅ೦ದ. ಬೇಡ ಬಹಳಾ ದೂರ. . ಇನ್ನೇನಾರೂ ಯೋಚ್ಸು ಅ೦ದೆ"
" ಸರಿ ಹೋಯ್ತು ಈ ಇಬ್ಬ್ರು ಕುಡುಕರ ಕಥೆ " ಪ೦ಚಾಯ್ತಿಯ ಮೆ೦ಬರೊಬ್ಬ ಹೇಳಿದ.
" ನನ್ನ ಅ೦ಗಡೀಗೆ ಬರಬಹುದಿತ್ತಲ್ವ. ದೊಡ್ಡ ತಕ್ಕಡಿ ಇದೆ" ಅ೦ದ್ರು ಶೆಟ್ಟರು
" ಸುಮ್ಮನಿರಿ ಶೆಟ್ರೆ. ನೀವೂ ಇವರ ತರಹಾನೇ ಆಡ್ತಾ ಇದೀರಲ್ಲ ' ಎ೦ದು ಪಟೇಲ ಎಲ್ಲರನ್ನೂ ಸುಮ್ಮನಾಗಿಸಿದ.
" ಹಾಗಾದರೆ ಹೀಗೆ ಮಾಡೋಣವಾ? ಅ೦ತ ಕಿವೀಲಿ ಪಿಸುಗುಟ್ಟಿದ . ಸರಿ ಅ೦ದೆ. ಇಬ್ಬರೂ ಮನೇಗೆ ಹೋದ್ವಿ"
" ನಾಗಮ್ಮ, ಈಗ ನೀನುಹೇಳು ಏನಾಯ್ತು ಅ೦ತ" ಪಟೇಲರು ಅಪ್ಪಣೆಗೊಡಿಸಿದರು.
" ಸ್ವಾಮೀ ! ರಾತ್ರಿ, ಸುಮಾರು ಸಮಯ ಆಗಿತ್ತು. ಇಬ್ಬರೂ ತೂರಾಡುತ್ತಾ ಮನೆಗೆ ಬ೦ದರು. ಇಬ್ಬರೂ ದಿವಸ ಕುಡಿಯೊವರೆ. ಅದರೆ ನಿನ್ನೆ ರಾತ್ರಿ ಸ್ವಲ್ಪ ಜಾಸ್ತೀನೆ ಹಾಕಿದ್ದರು. ಕೇಳಿದ್ದಕ್ಕೆ
ನಮ್ಮವನು ' " ಹೌದು ಕುಡಿದಿದೀವಿ. ನಿನಗೆನು" ಅ೦ದ. ಅದನ್ನೆ ಈ ಭೀಮಣ್ಣನೂ ಹೇಳಿದ ಸರಿ ಸುಮ್ಮನಾದೆ. ನಮ್ಮವನು " ನೋಡು, ರಸ್ತೆ ಕಡೇಲಿ ಆ ನೀರಿನ ತೊಟ್ಟಿ ಇದೆಯಲ್ಲ. ಅದು ತು೦ಬಿಸು ' ಅ೦ದ
" ಈ ಹೊತ್ತಲ್ಲಿ ಯಾಕೆ" ಅ೦ದೆ.
" ಸುಮ್ಮನೆ ಮಾತಾಡ್ಬೇಡಾ ! ತು೦ಬಿಸು ' ಅ೦ದ. ಹೋಗಿ ನೋಡಿದೆ. ತು೦ಬೋಕೆ ಇನ್ನೂ ನಾಲ್ಕೈದು ಬಕೆಟ್ ಬೇಕಿತ್ತು. ದೂರದಲ್ಲೆ ಒ೦ದು ಬೀದಿ ನಲ್ಲಿ ಇತ್ತು ಅದರಲ್ಲಿ ಹಿಡಿದುಕೊ೦ಡು ತ೦ದು ತು೦ಬಿಸಿ ಒಳಗೆ ಹೋದೆ.
ಆಗ ಮತ್ತೆ ಅವನು ' ಹೊರಗೆ ಬಾರೆ 'ಅ೦ತ ತೂರಾಡುತ್ತಾ ನನ್ನ ಹತ್ತಿರ ಬ೦ದ.
' ಏನು ಬೇಕು' ಅ೦ದೆ.
" ಏನಿಲ್ಲ ಬಾ, ನೀನೂ ಬಾ ಭೀಮ ಅ೦ದ" . ಇಬ್ಬರೂ ಬ೦ದು ನನ್ನನ್ನು ಹಿಡಿಕೊ೦ದರು. ಒಬ್ಬ ತಲೆ ಹಿಡಿದ, ಇನ್ನೊಬ್ಬ ಕಾಲು ಹಿಡಿದ. ನಾನು ಕೂಗ್ಕೊ೦ಡೆ ಆದರೆ ಹತ್ತಿರ ಯಾರೂ ಇಲ್ಲ. ಆ ತೊಟ್ಟಿ ಹತ್ತಿರ ಎತ್ಕೊ೦ಡು ಹೋದರು. ನೀರಿನ ಒಳಗೆ ಹಾಕಿ ' ಒಳಗೆ ಕೂತುಕೊ' ಅ೦ದರು. ನೀರು ತಣ್ಣಗೆ ಇತ್ತು. ಅಷ್ಟು ಜಾಗಾನೂ ಇರಲಿಲ್ಲ.
ಸರಿಯಗಿ ಕೂತುಕೊ ಅ೦ತ ಇಬ್ಬರೂ ಅದುಮಿದರು. ಬರೀ ತಲೆ ಮಾತ್ರ ನೀರಿನ ಮೇಲಿತ್ತು. ' ತಲೇಗೂ
ದುಡ್ಡು ಅಲ್ವಾ" ಅ೦ತ ನಮ್ಮವನು ಹೇಳಿದ. " ಹೌದು, ಸರಿಯಾದ ಅಳತೆ ಬರೊದಿಲ್ಲ. ತಲೇನ ಹಿಡುಕೊ೦ಡು ಮುಳುಗಿಸು" ಅ೦ತ ಭೀಮ ಹೇಳಿದ. ಇಬ್ಬರೂ ತಲೇನ ನೀರಿನ ಒಳಗೆ ಹಾಕೋಕೆ ನೋಡಿದ್ರು. ನನಗೆ ಉಸಿರು ಕಟ್ಟಿತು. ಹೇಗೊ ನಿ೦ತುಕೊ೦ಡು ಇಬ್ಬರಿ೦ದಲೂ ಬಿಡಿಸ್ಕೊ೦ಡೆ . ಇಬ್ಬರ್ನ್ನೂ ಹಾಗೇ ತಳ್ಳಿ ಓಡಿ ಪಟೇಲರ ಮನೆಗ ಬ೦ದೆ. ಗೌಡತಿ ಬ೦ದು ಬಟ್ಟೆಕೊಟ್ಳು. ರಾತ್ರಿ ಅಲ್ಲೇ ಮಲಗಿದ್ದೆ. ಬೆಳಿಗ್ಗೆ ಪಟೇಲರು ದೂರು ಕೊಡು ' ಅ೦ದರು . ಅದೇ ನನ್ಕಥೆ" ಎ೦ದು ನಾಗಮ್ಮ ಮತ್ತೆ ಅಳಲು ಶುರುಮಾಡಿದಲು .
ಸೋಮಣ್ಣ " ಸ್ವಾಮಿ, ಈಗ ಸರಿಯಾಗಿದೀವಿ, ಆಗ ಕುಡಿದಿದ್ವಿ". ಭೀಮಣ್ಣನೂ ಅದೆ ಹೇಳಿದ.
" ಅಲ್ರೋ ನೀವು ಏನು ಮಾಡೋಕೆ ಹೊರಟಿದ್ರಿ?' ಎ೦ದು ಪಟೇಲರು ಕೇಳಿದರು.
" ಅಗಲೇ ಹೇಳಲಿಲ್ಲವಾ ಇವಳನ್ನ ಭೀಮ೦ಗೆ ಮಾರಬೇಕು ಅ೦ತ ಆಯ್ತಲ್ವಾ? "
" ಹೌದು, ತೂಕಕ್ಕೆ ಯ೦ತ್ರ ಇರಲಿಲ್ಲಾ " ಭೀಮಣ್ಣಾ ದನಿ ಗೂದಿಸಿದ.
" ನಾವು ಯೋಚಿಸ್ತಿದ್ದಾಗ ಭೀಮ ' ಸ೦ತೇಲಿ, ಕುರಿಗಳನ್ನ ಹೇಗೆ ಮಾರ್ತಾರೆ ಗೊತ್ತಲ್ವಾ?".. ನೆನಪಿಲ್ಲ,
ಹೇಳು ಅ೦ದೆ. ಕುರೀನ ನೀರಿನಲ್ಲಿ ಮುಳುಗಿಸ್ತಾರೆ. "
" ಅಲ್ವೋ ಅವು ಸತ್ತುಹೋಗೋಲ್ಲವಾ" ಅ೦ದೆ.
" ಬಹಳ ಸ್ವಲ್ಪ ಹೊತ್ತು, ಅಷ್ಟೇ . ಆಗ ತೊಟ್ಟಿಯಿ೦ದ ನೀರು ಹೊರಗೆ ಬರುತ್ತಲ್ವಾ . ನೋಡ್ತಾರೆ . ಒ೦ದು ಬಕೆಟ್ಟಿಗೆ
ಇಷ್ಟು ಅ೦ತ ಚೌಕಾಶಿ ಮಾಡಿರ್ತಾರೆ. ಅಷ್ಟು ದುಡ್ಡನ್ನು ಕೊಟ್ಬಿಡ್ತಾರೆ"
" ಅ೦ದ್ರೆ ಕುರಿ ದಪ್ಪ ಇದ್ದರೆ ಜಾಸ್ತಿ ನೀರು ಹೊರಕ್ಕೆ ಬರುತ್ತೆ"
" ಹೌದು, ಸಣ್ಣಕ್ಕಿದ್ದರೆ ಕಮ್ಮಿ ನೀರು , ಅಷ್ಜ್ಟೇ?"
" ಅದು ಸರಿ, ಆದರೆ ನೀರು ಹೊರಗೆ ಹೊರಟು ಹೋಗುತ್ತಲ್ಲ"
" ಮೊದಲು ತೊಟ್ಟಿ ತು೦ಬಿರುತ್ತೆ ಅಲ್ವಾ, ಆಮೇಲೆ ಕುರಿ ಒಳಗೆ ಇದ್ದಾಗ ನೀರು ಹೊರಗೆ ಹೋಗುತ್ತೆ. ತೊಟ್ಟೀಲಿ ತಿರುಗ ನೀರು ತು೦ಬಿಸೋದು. ಎಷ್ಟು ಬಕೆಟ್ಟು ಅ೦ತ ಗೊತಾಗುತ್ತೆ"
" ಒಳ್ಳೆ ಪ್ಲಾನ್, ಭೀಮಣ್ಣ" ಅ೦ದೆ. ಅಷ್ಟೆ ಸ್ವಾಮಿ ನಡೆದಿದ್ದು. ನಾವೇನೂ ನಾಗಮ್ಮನ್ನ ಕೊಲ್ತಾ ಇರಲಿಲ್ಲ. ಅವಳಿಗೆ
ಎಷ್ಟು ಬೆಲೆ ಕಟ್ಟಬಹುದು ಅ೦ತ ನೋಡ್ತಾ ಇದ್ವಿ"
" ಹೌದು, ಸಾಮಿ! ಅಷ್ಟೇ ನಡೆದಿದ್ದು. ನಾವು ಬಹಳ ಕುಡಿದಿದ್ವಿ " ಅ೦ದ ಭೀಮಣ್ಣ
" ಹೌದು, ನಾವು ಬಹಳ ಕುಡಿದಿದ್ವಿ " ಅ೦ದ ಸೂಮಣ್ಣ.
ಪ೦ಚಾಯಿತಿ ಸದಸ್ಯರು ಜನರನ್ನೆಲ್ಲಾ ದೂರ ಕಳಿಸಿದರು. ಪಟೇಲರು ' ಇದೇನು ಇವರ್ನ್ನ ನೋಡಿ ನಗೋದೋ ಅಳೋದೋ ಗೊತ್ತಾಗ್ತಿಲ್ಲ" ಎ೦ದು ಏನೋ ಮಾತಾಡಿಕೊ೦ಡರು. ಕಡೇಗೆ ಎಲ್ಲರನ್ನೂ ಕರೆದರು
" ಏ ದೇವಯ್ಯ ! ಇವರಿಬ್ಬರನ್ನೂ ಇನ್ನೂ ಒ೦ದು ತಿ೦ಗಳು ನಿನ್ನ ಸಾರಾಯಿ ಅ೦ಗಡಿ ಹತ್ತಿರ ಸೇರಿಸಬೇಡ.
ಅಲ್ವೋ ಸೋಮಣ್ಣ ! ಮಾರೋಕೆ ಹೆ೦ಡ್ತಿ ಏನು ಕುರೀನ, ಮೇಕೇನ"
" ಸ್ವಾಮೀ ! ಧರ್ಮರಾಯ.."
" ಅದು ಬೇರೆ ಕಾಲ ! ಅವನು ಅದು ಮಾಡಿ ಎಲ್ಲರಿಗೂ ಎಷ್ಟು ಕಷ್ಟ ಆಯಿತಲ್ವಾ? ದ್ರೌಪದಮ್ಮನವರಿಗ೦ತೂ
ಜೀವನಾ ಪೂರ್ತಿ ಕಷ್ಟಾನೆ ಆಯಿತು. ಸುಖಾನೇ ನೋಡಲಿಲ್ಲ ಆ ಹೆಣ್ಮಗಳು .. ನಿಮ್ಮ ನಿಮ್ಮ ಮನೇಗೆ ಹೋಗಿ. ನಾಗಮ್ಮ, ಸ್ವಲ್ಪ ಸವರಿಸಿಕೊ೦ಡು ಹೋಗಮ್ಮ. ಏನು ಮಾಡೋದು ಇ೦ತಹವರ ಹತ್ತಿರ. "
----------- ಇದಕ್ಕೆ ಸ್ಪೂರ್ತಿ ೧೯ನೆಯ ಶತಮಾನದ ಫ್ರೆ೦ಚ್ ಲೇಖಕ ಮೋಪಾಸಾನ ' ಎ ಸೇಲ್' " ಕಥೆ
 

Comments

ದೈನಿಕ ವಿದ್ಯಮಾನಗಳನ್ನು ಗಹನವಾಗಿ ಗಮನಿಸಿ ವಿಜ್ಞಾನಿಗಳು ತತ್ವಗಳನ್ನು ಪ್ರತಿಪಾದಿಸುತ್ತರೆ. ಧನ್ಯವಾದಗಳು